ಪ್ಲೇಟೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ಲೇಟೊ
Plato: copy of portrait bust by Silanion
ಜನನ428/427 or 424/423 BCE
Athens
ಮರಣ348/347 BCE (aged c. 80)
Athens
ರಾಷ್ಟ್ರೀಯತೆಗ್ರೀಕ್
ಕಾಲಮಾನAncient philosophy
ಪ್ರದೇಶWestern philosophy
ಪರಂಪರೆPlatonism
ಮುಖ್ಯ  ಹವ್ಯಾಸಗಳುRhetoric, art, literature, epistemology, justice, virtue, politics, education, family, militarism
ಗಮನಾರ್ಹ ಚಿಂತನೆಗಳುTheory of Forms, Platonic idealism, Platonic realism, hyperuranion, metaxy, khôra
ಪ್ರಭಾವಕ್ಕೋಳಗಾಗು
ಪ್ರಭಾವ ಬೀರು

ಪ್ಲೇಟೊ (೪೨೭-೩೪೭ ಕ್ರಿ.ಪೂ) ಪಾಶ್ಚಿಮಾತ್ಯ ತತ್ವಜ್ಞಾನದ ಸ್ಥಾಪಕರಲ್ಲಿ ಒಬ್ಬ.ಗ್ರೀಸ್ ದೇಶದ ಈ ಚಿಂತಕ ಪ್ರಸಿದ್ಧ ಚಿಂತಕ ಸಾಕ್ರಟೀಸ್ ರ ಶಿಷ್ಯ ಹಾಗೂ ಇನ್ನೊಬ್ಬ ಸಮಕಾಲೀನ ಚಿಂತಕ ಅರಿಸ್ಟಾಟಲ್ ನ ಗುರು.

ಜೀವನ ಚರಿತ್ರೆ[ಬದಲಾಯಿಸಿ]

ಗ್ರೀಕ್ ತತ್ವಜ್ಞಾನಿ ಪ್ಲೇಟೋ ಅಥೆನ್ಸನ 'ಎಜಿನಾ ' ಎಂಬಲ್ಲಿ ಕ್ರಿ.ಪೂ ೪೨೭. ರಲ್ಲಿ ಜನಿಸಿದನು. ಅವನ ತಂದೆ ಅರಿಸ್ಟಾನ್ ತಾಯಿ ಪೆರಿಕ್ವಿಯೋನ. ಪ್ಲೇಟೋ ಶ್ರೀಮಂತ ಮತ್ತು ಪ್ರತಿಷ್ಠಿತ ಮನೆತನದಿಂದ ಬಂದವನಾಗಿದ್ದನು. ಅವನು ಸ್ಫುರದ್ರೂಪಿಯೂ, ದೃಡಕಾಯನೂ ಆದುದರಿಂದ ಅವನಿಗೆ 'ಪ್ಲೇಟೋ' ಎಂದು ಹೆಸರಾಯಿತು.

ವಿವರ[ಬದಲಾಯಿಸಿ]

ಪ್ಲೇಟೋನ ಬಗ್ಗೆ ಮಾಹಿತಿ ತಿಳಿದು ಬರುತ್ತದೆ.[ಬದಲಾಯಿಸಿ]

  • ಪ್ಲೇಟೋ ಕ್ರಿ.ಪೂ. 427-347. ಪ್ರಾಚೀನ ಗ್ರೀಸ್ ದೇಶದ ಮಹಾತತ್ತ್ವಜ್ಞಾನಿಗಳಲ್ಲಿ ಅಗ್ರಗಣ್ಯ, ಪಾಶ್ಚಾತ್ಯ ತತ್ತ್ವಶಾಸ್ತ್ರದ ಇತಿಹಾಸದಲ್ಲಿ ದೇದೀಪ್ಯ ಮಾನವಾದ ಸ್ಥಾನ ಇವನದು. ಹುಟ್ಟಿದ್ದು ಆತೆನ್ಸಿನ ಶ್ರೀಮಂತ ಕುಟುಂಬದಲ್ಲಿ. ತಂದೆ ಅರಿಸ್ಟಾನ್, ತಾಯಿ ಪೆರಿಕ್ಟಿಯೋನ್. ಗಂಡ ತೀರಿಕೊಂಡುದರಿಂದ ಪೈರಿಲಾಂಪಸ್ ಎಂಬಾತನನ್ನು ಮದುವೆಯಾದಳು. ಪೆರಿಕ್ಲೀಸ್‍ನ ನಾಯಕತ್ವದ ರಾಜ್ಯಾಡಳಿತದಲ್ಲಿ ಈತನಿಗೆ ಪ್ರಮುಖ ಸ್ಥಾನವಿತ್ತು.
  • ಪ್ಲೇಟೋನ ಜೀವನದಲ್ಲಿ ಕೆಲವೊಂದು ಸಣ್ಣ ಘಟನೆಗಳನ್ನು ಬಿಟ್ಟರೆ ಅಷ್ಟೇನೂ ಸಾಹಸಪೂರ್ಣವಾದ ಅಂಶಗಳಿಲ್ಲ. ಒಂದು ವಿಶ್ವವಿದ್ಯಾಲಯವನ್ನು ಈತ ಸಂಸ್ಥಾಪಿಸಿ ನಡೆಸಿದನಲ್ಲದೆ ಅಧ್ಯಯನ ಸಂಶೋಧನೆಗಳಲ್ಲಿಯೆ ಹೆಚ್ಚು ಕಾಲ ಕಳೆದ. ಆದರೆ ಬೌದ್ಧಿಕ ಚಿಂತನೆಯ ಸಾಹಸಗಳಲ್ಲಿ ಶೋಧನೆಗಳಲ್ಲಿ ಈತನನ್ನು ಸರಿಗಟ್ಟುವವರೆ ಇಲ್ಲವೆನ್ನಬಹುದು. ಇಂದ್ರಿಯ ಗೋಚರವಾದ ಜಗತ್ತಿನ ಆಚೆಗೆ ಒಂದು ಶಾಶ್ವತ ಮೂಲತತ್ತ್ವ ಆಧಾರವಾಗಿರುತ್ತ, ಎಳ್ಳಷ್ಟೂ ಏರುಪೇರಿಲ್ಲದಂಥ ಕರಾರುವಾಕ್ಕಾದ ನಿಯಮಗಳಿಗನುಸಾವಾಗಿ ಜಗತ್ತನ್ನು ನಡೆಸುವುದೆಂದೂ ಅದರ ಪರಸ್ವರೂಪವೇ ಗುಡ್ (ಶಿವ) ಎಂದೂ ಒಂದು ಆದರ್ಶವನ್ನು ಪ್ಲೇಟೋ ಒದಗಿಸಿದ್ದಾನೆ.

ಜೀವನ

  • ಮೊದಲು ರಾಜಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಬೇಕೆಂಬುದೇ ಇವನ ಗುರಿಯಾಗಿತ್ತು. ಪೆಲಪನೀಷನ್ ಯುದ್ಧದಲ್ಲಿ ಸ್ಪಾರ್ಟರನಿಂದ ಆತೆನ್ಸ್ ಪರಾಜಿತವಾದಾಗ ಇದಕ್ಕೆ ಒಂದು ಅವಕಾಶವೂ ದೊರೆಯಿತು. ಕ್ರಿ.ಪೂ. 404ರಲ್ಲಿ ಸ್ಪಾರ್ಟನರ ಬೆಂಬಲದಿಂದ ಅಧಿಕಾರಕ್ಕೆ ಬಂದ ಕೆಲವರು ಪ್ಲೇಟೋನ ಆಪ್ತರೂ ಬಂಧೂಗಳೂ ಆಗಿದ್ದರು. ಆದರೆ ಅವರ ದುರ್ವರ್ತನೆಗಳಿಗೆ ಹೇಸಿದ ಪ್ಲೇಟೋ ಅವರೊಡನೆ ಅಧಿಕಾರಕ್ಕೆ ಬಾರದೆ ಉಳಿದ. ಅವರನ್ನು ಗದ್ದುಗೆಯಿಂದಿಳಿಸಿ ಮುಂದೆ ಬಂದ ಪ್ರಜಾರಾಜ್ಯದಲ್ಲಿ ಸೇರಬೇಕೆನ್ನುವಷ್ಟರಲ್ಲಿಯೇ ತನ್ನ ಹಿರಿಯ ಮಿತ್ರ ಸಾಕ್ರಟೀಸನನ್ನು ಸರ್ಕಾರ ವಿಚಾರಣೆಗೆ ಗುರಿಪಡಿಸಿ ಅವನಿಗೆ ಮರಣ ದಂಡನೆಯನ್ನು ವಿಧಿಸಿತು. ಇದರಿಂದ ಮನನೊಂದು ತನ್ನ ಅಧಿಕಾರದ ಆಸೆಯನ್ನೇ ತೊರೆದು, ಅಥೆನ್ಸ್‍ನಗರವನ್ನು ಬಿಟ್ಟು, ಮೆಗಾರ ಎಂಬ ನಗರದಲ್ಲಿದ್ದ ತನ್ನ ಮಿತ್ರನೊಡನೆವಾಸ ಮಾಡುತ್ತ, ಸಾಕ್ರಟೀಸನ ಸಮರ್ಥನೆಗೆ ನೆರವಾಗುವಂಥ ರಚನೆಯನ್ನು ಆರಂಭಿಸಿದ. ಕ್ರಿ.ಪೂ. 388ರ ಸುಮಾರಿಗೆ ಪ್ಲೇಟೋ ಸೈರಕ್ಯೂಸ್ ಒಡೆಯನಾದ ಮೊದಲನೆಯ ಡೈಯನೀಷೀಯಸನ ಆಸ್ಥಾನವನ್ನು ಸಂದರ್ಶಿಸಿದ. ಅಲ್ಲಿ ಅನುಗ್ರಹಕ್ಕೆ. ಬದಲು ಆಗ್ರಹಕ್ಕೆ ಗುರಿಯಾಗಿ, ದ್ವೀಪಾಂತರದಲ್ಲಿ ಗುಲಾಮನಾಗಬೇಕಾಗಿದ್ದ ದುರ್ಗತಿ ಒದಗಿತು. ಹೇಗೊ ಸುದೈವದಿಂದ ಮಿತ್ರನೊಬ್ಬನ ಸಕಾಲಿಕದ್ರವ್ಯ ಸಹಾಯದಿಂದದು ದೂರವಾಯಿತು. ಇದೇ ಪ್ರವಾಸ ಕಾಲದಲ್ಲಿ ಪೈಥಾಗರಸ್ ಪಂಥದ ಗಣಿತಶಾಸ್ತ್ರಜ್ಞನಾದ ಆರ್ಕೈಟಸನ ಸಂಪರ್ಕ ದೊರೆಯಿತು. ಎಲ್ಲ ಶಾಸ್ತ್ರಗಳಿಗೂ ಪರಸ್ಪರ ಸಂಬಂಧವುಂಟು, ಮುಖ್ಯವಾಗಿ ಗಣಿತಶಾಸ್ತ್ರವಂತೂ ಎಲ್ಲ ಬಗೆಯ ಸಂಶೋಧನೆಗೂ ಉಪಕರಣವಾಗಬಲ್ಲದು ಎಂಬುದನ್ನು ಮನಗಂಡು ಅಥೆನ್ಸಿಗೆ ಮರಳಿ ತಾತ್ತ್ವಿಕ ಸಂಶೋಧನೆಗೆ ಮೀಸಲಾದ ಒಂದು ವಿದ್ಯಾಕೇಂದ್ರವನ್ನು ಸ್ಥಾಪಿಸಿದ (ಕ್ರಿ.ಪೂ. 387). ಇದನ್ನು ಜಗತ್ತಿನ ಮೊದಲ ವಿಶ್ವವಿದ್ಯಾಲಯವೆನ್ನಬಹುದು. ಇದರ ಹೆಸರು ಅಕೆಡಮಿ. ಕ್ರಿ.ಪೂ 367ರಲ್ಲಿ ಸಿಸಿಲಿಯ ಪ್ರಭು ಮೊದಲನೆಯ ಡೈಯನೀಷೀಯಸನ ನಿಧನಾ ನಂತರ ಪಟ್ಟಕ್ಕೆ ಬಂದ ಅವನ ಮಗ ಎರಡನೆಯ ಡೈಯನೀಷೀಯಸ್ ತನ್ನ ಚಿಕ್ಕಪ್ಪ ಡಯಾನ್‍ನ ಮೂಲಕ ಈತನನ್ನು ಮತ್ತೆ ಆಸ್ಥಾನಕ್ಕೆ ಕರೆಸಿದ. ರಾಜನಿಗೆ ತತ್ತ್ವಶಾಸ್ತ್ರವನ್ನು ಕಲಿಸುವ ಕೆಲಸವನ್ನು ಅಲ್ಲಿ ಈತ ಕೈಗೊಂಡ. ಗುರುಶಿಷ್ಯರಿಗೆ ತಾಳಮೇಳ ತಪ್ಪಿದ್ದರ ಫಲವಾಗಿ ಡಯಾನನೊಂದಿಗೆ ಸಿಸಿಲಿಯನ್ನು ತ್ಯಜಿಸಬೇಕಾಗಿ ಬಂತು. ಮತ್ತೆ ಕ್ರಿ.ಪೂ. 361ರಲ್ಲಿ ಡಯಾನನ ಕುಟುಂಬವನ್ನು ಶಿಕ್ಷೆಯಿಂದ ತಪ್ಪಿಸಲೆಂದು ಮೂರನೆಯ ಬಾರಿಗೆ ಸೈರಕ್ಯೂಸಿಗೆ ಬಂದರೂ ಪ್ರಯೋಜನವಾಗದೆ ಹಾಗೆಯೆ ಹಿಂತಿರುಗಿದ. ಮುಂದೆ ಕ್ರಿ.ಪೂ. 355ರಲ್ಲಿ ಡಯಾನ್ ಅಕೆಡಮಿಯ ಮಿತ್ರರ ಸಹಾಯದಿಂದ ಡೈಯನೀಷೀಯಸ್‍ನನ್ನು ರಾಜ್ಯಭ್ರಷ್ಟಗೊಳಿಸಿ ವಿಜಯಿಯಾದರೂ ಕ್ರಿ.ಪೂ. 354ರಲ್ಲಿಯೇ ಹತನಾದ. ಪ್ಲೇಟೋನ ಏಳನೆಯ ಮತ್ತು ಎಂಟನೆಯ ಪತ್ರಗಳು ಸಿಸಿಲಿಯಲ್ಲಿ ತಾನೆಸಗಿದ ಕಾರ್ಯಭಾರದ ಸಮರ್ಥನೆಗೆ ಮೀಸಲಾಗಿವೆ.

ಫ್ರತಿಭೆ[ಬದಲಾಯಿಸಿ]

  • ಈ ನಡುವೆ ಯೂಡಾಕ್ಸಸ್ ಎಂಬ ತತ್ತ್ವಜ್ಞ ಪ್ಲೇಟೋನ ಅಕೆಡಮಿ ಹಾಗೂ ತತ್ತ್ವಗಳನ್ನು ಖಂಡಿಸಿ ನೂತನ ವಿಚಾರಗಳನ್ನು ಮುಂದಿಡತೊಡಗಿದ್ದರಿಂದ ಆ ಹೊಸ ಅಭಿಪ್ರಾಯಗಳ ನಿರಾಸಕ್ಕಾಗಿ ಪಾರ್ಮೆನೈಡೀಸ್ ಮತ್ತು ಫಿಲಿಬಸ್ ಎಂಬ ಗ್ರಂಥಗಳ ರಚನೆಗೆ ಹೊರಡಬೇಕಾಯಿತು.
  • ಪ್ಲೇಟೊ ಅವಿವಾಹಿತನಾಗಿಯೆ ಉಳಿದಂತೆ ತೋರುತ್ತದೆ.
  • ಮತ್ತೊಮ್ಮೆ ಸಿಸಿಲಿಗೆ ಪ್ರವಾಸ ಮಾಡಿ ಬಂದ ಬಳಿಕ ತನ್ನ ಅಕೆಡಮಿಯನ್ನು ನಡೆಸಲು ಆದರ್ಶ ನಿಯಮಾವಳಿಗಳನ್ನು ರಚಿಸಲು ಶ್ರಮಿಸಿದ. ಪ್ಲೇಟೋ ನಿಧನ ಹೊಂದಿದ (ಕ್ರಿ.ಪೂ. 347). ಆದರೆ ಅಕಾಡೆಮಿ ಮಾತ್ರ ಕ್ರಿ.ಪೂ. 529ರವರೆಗೆ ಊರ್ಜಿತವಾಗಿತ್ತು.
  • ಪ್ಲೇಟೋ ಬರೆದನೆನ್ನುವ ಮಿಕ್ಕ 13 ಪತ್ರಗಳ ಬಗ್ಗೆ ಸಂಶಯವಿದೆ. ಎಷ್ಟೊ ದಂತಕಥೆಗಳನ್ನು ಇವನ ವಿಷಯಕ್ಕೆ ಮುಂದಿನವರೂ ಕಟ್ಟಿಸಿದ್ದಾರೆ. ನೇಪಲ್ಸ್ ನಗರದ ನ್ಯಾಷನಲ್ ಮ್ಯೂಸಿಯಮ್ಮಿನಲ್ಲಿ ಇವನ ಪ್ರತಿಮೆಯಿದೆ.
  • ಪ್ಲೇಟೋನಲ್ಲಿ ತಾರ್ಕಿಕನ ಸೂಕ್ಷ್ಮ ವೈಚಾರಿಕ ಪ್ರಖರತೆ, ಋಷಿಯ ಮತ್ತು ಮಹಾಕವಿಯ ದರ್ಶನ ಪ್ರತಿಭೆ, ಧರ್ಮಶಾಸ್ತ್ರಕಾರನ ನೀತಿನಿಷ್ಠೆ-ಈ ಮೂರರ
  • ಚಿತ್ರ ಇದೆ ಅಥೆನ್ಸಿನ ಸ್ಕೂಲ್ ಆಫ್ ಫಿಲಾಸಫಿಯ ಒಂದು ಭಾಗದಲ್ಲಿ ಪಾಶ್ಚಾತ್ಯ ತತ್ತ್ವ ಚಿಂತಕರು ಸಾಕ್ರಟೀಸ್ ಪ್ಲೇಟೋ ಮತ್ತು ಅರಿಸ್ಟಾಟಲ್. ಕಲಾವಿದ ಪೈವೀ ಡ ಷವಾನ್ ಎಂಬುವನ ಚಿತ್ರಕೃತಿ
  • ಅಪೂರ್ವ ತ್ರಿವೇಣಿಸಂಗಮವಿದೆ. ಇದೇ ಇವನ ವೈಶಿಷ್ಟ್ಯ. ಇವನ ಎಲ್ಲ ಗ್ರಂಥಗಳಲ್ಲೂ ಉನ್ನತ ಮಟ್ಟದಲ್ಲಿ ಈ ಗುಣಗಳು ಪ್ರತಿಬಿಂಬಿಸುವುದನ್ನು ನೋಡಬಹುದು. ಗ್ರೀಕರ ದೋಷಪೂರ್ಣ ಸಾಮಾಜಿಕ ಹಾಗೂ ರಾಜಕೀಯ ಜೀವನವನ್ನು ತಿದ್ದಿ ಉದಾತ್ತಗೊಳಿಸುವುದು ಇವನ ಮೂಲೋದ್ಧೇಶವಾಗಿತ್ತು. ಪ್ರಜಾಪ್ರಭುತ್ವಕ್ಕೆ ನೆಲೆಯಾಗಿದ್ದ ಅಥೆನ್ಸ್ ಸಮಾಜವನ್ನು ಆಳವಾಗಿಯೂ ವಿಶಾಲವಾಗಿಯೂ ಅಧ್ಯಯನ ಮಾಡುವುದು ಅಲ್ಲಿಯ ಲೋಪದೋಷಗಳನ್ನು ಅರಿತು, ಅವುಗಳ ಸುಧಾರಣೆಯ ಮಾರ್ಗಗಳನ್ನು ಸೂಚಿಸುವುದು-ಇವಕ್ಕಾಗಿ ಈತ ತುಂಬ ಶ್ರಮಿಸಿದ. ಈ ಸಮಕಾಲೀನ ಸಮಸ್ಯೆಯ ಪರಿಹಾರ ದೊರೆಯಲು ಮೂಲಭೂತ ತಾತ್ತ್ವಿಕ ಆಧಾರದ ಅಗತ್ಯವುಂಟೆಂದು ಇವನಿಗೆ ಮನವರಿಕೆಯಾಯಿತು. ಆದ್ದರಿಂದ ಮಾನವ ಜೀವನದ ಶಾಶ್ವತ ನೀತಿ ಮೌಲ್ಯಗಳ ಸಂಶೋಧನೆಗೆ ಹೊರಟ. ಈತನ ಚಿಂತನಧಾರೆಯ ಎಲ್ಲ ಮುಖಗಳಲ್ಲಿಯೂ ಆದರ್ಶವಾದ ಎದ್ದು ಕಾಣತ್ತದೆ. ಆದ್ದರಿಂದ ಇವನ ಚಿದಾಕಾರಗಳ (ಐಡಿಯ) ವಿವರಣೆಗೆ ಈ ಹಿನ್ನಲೆ ಅತ್ಯವಶ್ಯ.

ಜ್ಞಾನ ಮೀಮಾಂಸೆ:[ಬದಲಾಯಿಸಿ]

  • ಜ್ಞಾನ ಮೀಮಾಂಸೆ: ತಾರ್ಕಿಕ ಹಾಗೂ ತಾತ್ತ್ವಿಕ ಸಮಸ್ಯೆಗಳನ್ನು ಚರ್ಚಿಸುವಾಗ ಪ್ಲೇಟೋ ತನ್ನ ಪೂರ್ವಸೂರಿಗಳಾದ ಸಾಕ್ರಟೀಸ್ ಮುಂತಾದವರ ಕೆಲವೊಂದು ಅಭಿಪ್ರಾಯಗಳನ್ನು ಎತ್ತಿಕೊಳ್ಳುತ್ತಾನೆ. ಅಂದಿನ ಗ್ರೀಸಿನಲ್ಲಿ ಮುಖ್ಯ ಅಧ್ಯಾಪಕರೆಲ್ಲ ಸೋಫಿಸ್ಟ್‍ರಾಗಿದ್ದರು. ಒಂದರ್ಥದಲ್ಲಿ ಸಾಕ್ರಟೀಸನೂ ವಾದಿಯೆ ಎನ್ನಬಹುದು. ಈ ಪ್ರಖ್ಯಾತ ವಾದಿ-ವಾಗ್ಮಿಗಳು ನಾನಾ ಬಗೆಯ ಕುತರ್ಕಗಳನ್ನು ಕುಯುಕ್ತಿಗಳನ್ನೂ ಪ್ರಚಾರಕ್ಕೆ ತಂದಿದ್ದರು. ಅವನ್ನು ಸಾಧಾರಣವಾಗಿ ನಿರಾಕರಿಸುವುದೆ ಪ್ಲೇಟೋಗೆ ಮೊದಲ ಕರ್ತವ್ಯವಾಯಿತು. ಒಂದು ಉದಾಹರಣೆ-ಜಾರ್ಜಿಯಾಸ್ ಎಂಬ ನಾಸ್ತಿಕವಾದಿ ನಾಸ್ತಿಕತ್ವವನ್ನು ಸಿದ್ಧಾಂತ ಮಾಡಿ ಬರೆದ ಒಂದು ಶಾಸ್ತ್ರಗ್ರಂಥವೇ ಇತ್ತು. ಅವನ ವಾದದ ಪರಿ ಹೀಗೆ : ಯಾವುದಕ್ಕೂ ಅಸ್ತಿತ್ವ ಇಲ್ಲ. ಯಾವುದಕ್ಕಾದರೂ ಅಸ್ತಿತ್ವ ಜ್ಞೇಯತ್ವಗಳೆರಡೂ ಇದ್ದರೆ ಅದು ಮಾತಿನಿಂದ ಅನಿರ್ವಚನೀಯ. ಈ ನಾಸ್ತಿಕವಾದವನ್ನು ಖಂಡಿಸಲು ಪ್ಲೇಟೋ ಹೊಸದೊಂದು ಜ್ಞಾನಮೀಮಾಂಸೆಯನ್ನು ಸಂಶೊಧಿಸಬೇಕಾಯಿತು. ಮಾನವರು ಪೂರ್ಣವಾಗಿ ಅವಿಜ್ಞೇಯವಲ್ಲದ ವಿಶ್ವದಲ್ಲಿ ಅರಿವನ್ನು ಪಡೆಯುತ್ತಾರೆ, ಸರಿಯಾಗಿ ಊಹೆ ಮಾಡುತ್ತಾರೆ, ಬುದ್ಧಿಪೂರ್ವಕವಾಗಿ ಕಾರ್ಯ ಮಾಡುತ್ತಾರೆ ಎಂಬುದನ್ನು ಯುಕ್ತಿಯುಕ್ತವಾಗಿ ಸ್ಥಾಪಿಸಬೇಕಾಯಿತು.
  • ಪ್ಲೇಟೋನ ವಾದದಲ್ಲಿ ಕೆಲವೊಂದು ಮೂಲಭೂತ ಗ್ರಹಿಕೆಗಳಿವೆ. ಅವುಗಳಲ್ಲಿ ಮೂರನ್ನು ಕೂಡಿಸಿಕೊಂಡು ಒಂದು ಸಮಂಜಸ ತರ್ಕಯುಕ್ತಿಯ ರೂಪ ರೇಖೆಯನ್ನು ನಿರ್ದೇಶಿಸಬಹುದು. ಮೊದಲನೆಯದಾಗಿ, ಪರಸ್ಪರ ಎಷ್ಟೇ ಕ್ರಿಯೆ-ಪ್ರತಿಕ್ರಿಯೆಗಳಿದ್ದರೂ ಸ್ವತಂತ್ರ ಅಸ್ತಿತ್ವವನ್ನುಳ್ಳ ವಿಭಿನ್ನ ವಸ್ತುಗಳಿಗೆ ನಮ್ಮ ಭೌತಿಕ ಜಗತ್ತಿನಲ್ಲಿ ಆಸ್ಪದವಿದೆಯೆಂದು ಭಾವಿಸುವುದು ಶಕ್ಯವಿದೆ. ಅಷ್ಟೇ ಅಲ್ಲದೆ ಬಾಹ್ಯ ಜಗತ್ತಿನಲ್ಲಿಯ ವಸ್ತುಗಳು ಅವನ್ನು ಕುರಿತ ನಮ್ಮ ಅರಿವುಗಳ ಸಂಬಂಧವಿಲ್ಲದೆಯ ತಮ್ಮ ತಮ್ಮ ಸ್ವತಂತ್ರ ಅಸ್ತಿತ್ವವನ್ನು ಪಡೆದಿರುವಂತೆ ಭಾಸವಾಗುತ್ತದೆ. ತನ್ನ ಅನೇಕ ಸಂವಾದಗಳಲ್ಲಿ ಪ್ಲೇಟೋ ಈ ತೋರಿಕೆಗಳ ಹಿಂದಿನ ಮೂಲತತ್ತ್ವದ ಅಥವಾ ಸತ್ಯದ ಸ್ವರೂಪವನ್ನು ಎತ್ತಿ ತೋರಿಸುತ್ತಾನೆ. 1. ಪ್ರತಿಯೊಂದೂ ವಿಭಿನ್ನ ಹಾಗೂ ಸ್ವತಂತ್ರವೆನಿಸುವ ವಿಶ್ವದ ವಸ್ತುಸಂಘಾತದಲ್ಲೆಲ್ಲ ಗೂಢವಾಗಿ ಎಲ್ಲಕ್ಕೂ ಸಮಾನವಾದ ಒಂದು ಸ್ವರೂಪ ಇರುತ್ತದೆ. 2. ಪರಸ್ಪರ ವಿಭಿನ್ನವೆಂದು ತೋರಿಬರುವ ವಿಶಿಷ್ಟ ಜ್ಞಾನದಲ್ಲಿ ಕೂಡ ಎಲ್ಲಕ್ಕೂ ಸಮಾನವಾಗಿ ಅನ್ವಯಿಸುವಂಥ ಒಂದು ಅನುಗತಧರ್ಮ ಅಥವಾ ಜ್ಞಾನಾಂಶ ಇರುತ್ತದೆ. 3. ಬಾಹ್ಯವಿಶ್ವದ ವಸ್ತುಗಳು ಬುದ್ಧಿಯ ಜ್ಞಾನಗಳಿಗೆ ಸಂವಾದಿಯಾಗಿರುವುದು ಮಾತ್ರವಲ್ಲದೆ ಅವು ಜ್ಷೇಯವೂ ಹೌದು.
  • ವಿಶಿಷ್ಟ ವಸ್ತುಗಳು ಮತ್ತು ವಿಶಿಷ್ಟ ಜ್ಞಾನಗಳ ಸ್ವಸ್ವರೂಪದ ರಹಸ್ಯ ಅವುಗಳ ಈ ಸಾಮಾನ್ಯ (ಯೂನಿವರ್ಸಲ್) ಅಂಶದ ಗರ್ಭೀಕರಣದಲ್ಲಿ ಅಡಗಿದೆ. ಇದನ್ನೇ ಅಂತರಾಕಾರ (ಫಾರ್ಮ್) ಎನ್ನಲಾಗಿದೆ. ಅವೇ ಜಾತಿಗೆ ಸೇರುವ ಇನ್ನೊಂದು, ಮತ್ತೊಂದು, ಮಗದೊಂದು ಉದಾಹರಣೆಗಳನ್ನು ನೋಡುವುದು ಸುಲಭವಾದ್ದರಿಂದ ಇಂಥ ವಿಶಾಲಸಾಮಾನ್ಯವೊಂದು ಅವುಗಳಲ್ಲಿ ಅಡಗಿಯೆ ಇರಬೇಕೆಂದು ಊಹಿಸಲು ಸಾಧ್ಯವಾಗುತ್ತದೆ. ಒಂದೊಂದು ವಸ್ತುವಿಗೆ ಸಾಮಾನ್ಯವೂ ಒಂದೊಂದು ಎಂದ ಮೇಲೆ ವಿಶ್ವದಲ್ಲಿ ಅನೇಕ ವಸ್ತುಗಳಂತೆ ಅನೇಕ ಸಾಮಾನ್ಯಗಳೂ ಇರಲೇಬೇಕೆಂದಾಯಿತು. ಇದೇ ರೀತಿ ನಮ್ಮ ಅಂತರಂಗದ ಜಗತ್ತಿನಲ್ಲಿಯೂ ಜ್ಞಾನಸಾಮಾನ್ಯ ಎರಡೂ ಮೂಲತಃ ಒಂದೇ ಎಂಬ ಅಭೇದವಾದ ಪ್ಲೇಟೋಗೆ ಸಮ್ಮತವಾದರೂ, ಮುಂದಿನ ಅನೇಕ ತತ್ತ್ವಚಿಂತಕರು ಇದನ್ನೊಪ್ಪದೆ ಹೋದುದರಿಂದ, ವಸ್ತು-ವಿಜ್ಞಾನಗಳಲ್ಲಿ ಭೇದವೇ ಸತ್ಯವೆಂದು ಸಾಧಿಸತೊಡಗಿದ್ದರಿಂದ ತತ್ತ್ವಶಾಸ್ತ್ರದಲ್ಲಿ ವಿಷಯತಾವಾದ (ನಾಮಿನಲಿಸಮ್), ಪ್ರತ್ಯಕ್ಷತಾವಾದ (ಸೆನ್‍ಸೇಷನಲಿಸಮ್), ಭೌತಿಕತಾವಾದ (ಮೆಟೀರಿಯಲಿಸಮ್) ಮುಂತಾದ ವಾದಾಂತರಗಳು ಮೂಡಿದುವು.
  • ಜಾತಿ ಮತ್ತು ವ್ಯಕ್ತಿ: ಸಾಮಾನ್ಯ ಅಥವಾ ಜಾತಿ(ಸಮಷ್ಟಿ) ಮತ್ತು ವ್ಯಕ್ತಿಗಳ (ವೃಷ್ಟಿ) ವಾಸ್ತವ ಸಂಬಂಧವನ್ನು ನಿರ್ದೇಶಿಸಲೆಂದೆ ಪ್ಲೇಟೋ ತುಂಬ ಶ್ರಮಪಟ್ಟಿದ್ದಾನೆ. ನಮ್ಮ ಜ್ಞಾನಪ್ರಪಂಚದಲ್ಲಿ ಅತ್ಯಂತ ಕ್ರಿಯಾಶೀಲ ತತ್ತ್ವವೆಂದರೆ ಜ್ಞಾನವೇ ಎಂದು ಇವನು ತೀರ್ಮಾನಿಸಿದ. ನಮ್ಮ ವಿಚಾರಸರಣಿಯನ್ನು ಕಡೆಯ ನಿಲುಗಡೆಯವರೆಗೂ ಒಯ್ದರೆ. ಅನುಭವ ಗೋಚರವಾದ ಬಾಹ್ಯವಸ್ತುಗಳಿಗೆಲ್ಲ ಮೂಲಭೂತವಾದ ಘಟಕಗಳು ಐಡಿಯಾಸ್ ಅಥವಾ ಚಿದಾಕಾರಗಳೇ ಸರಿ. ಮೇಲ್ನೋಟಕ್ಕೆ ನೋಡುವಾಗ ಬಾಹ್ಯವಸ್ತುಗಳೆಲ್ಲ ಬರಿಯ ತೋರಿಕೆ ಮಾತ್ರ. ನಮ್ಮ ಬುದ್ದಿಯ ಚಿದಾಕರಗಳೇ ಪಾರಮಾರ್ಥಿಕ ಸತ್ಯ ಎಂದು ಭಾರತೀಯ ವೇದಾಂತಿಗಳಂತೆ ಪ್ಲೇಟೋ ಕೂಡ ಹೇಳಿರುವಹಾಗೆ ಭಾಸವಾಗುತ್ತದೆ. ಆದರೆ ಪ್ಲೇಟೋ ಸಿದ್ಧಾಂತ ಅಷ್ಟೊಂದು ಸ್ಥೂಲವಾಗಿಲ್ಲ. ಅವನು ಜಾತಿ-ವ್ಯಕ್ತಿಗಳಿಗೆ ಇರಬಹುದಾದ ಮೂಲಭೂತ ಸಂಬಂಧದ ಬಗ್ಗೆ ತುಂಬಾ ವಿಚಾರ ಮಾಡಿರುವುದನ್ನು ಕಡೆಗಣಿಸುವಂತಿಲ್ಲ. ಮೊದಲು ಅನುಕೃತಿ (ಇಮಿಟೇಷನ್) ಎಂದೂ, ಆಮೇಲೆ ಸಂಮಿಶ್ರಣ(ಕಮ್ಯಾನಿಯನ್) ಎಂದೂ, ಬಳಿಕ ಸಹಕ್ರಿಯೆ (ಪಾರ್ಟಿಸಿಪೇಷನ್) ಎಂದೂ ನಾನಾ ಬಗೆಯ ವಿವರಣೆಗಳನ್ನು ಪ್ಲೇಟೋ ಒದಗಿಸಿದ್ದಾನೆ. ಆದರೆ ಅವೆಲ್ಲ ಅಪೂರ್ಣ ವಿವರಣೆಗಳೆಂದು ಕೈಬಿಟ್ಟಿದ್ದಾನೆ. ಇಂದು ನಾವು ಭೇದಾಭೇದ (ಐಡೆಂಟಿಟಿ ಇನ್ ಡಿಫರನ್ಸ್) ಎನ್ನುವಂಥ ಸಂಬಂಧ ಕೂಡ ಪ್ಲೇಟೋ ಸಿದ್ಧಾಂತವನ್ನು ವಿವರಿಸಬಲ್ಲದು. ಪ್ಲೇಟೋ ಸಿದ್ದಾಂತವಿಷ್ಟೆ: ಯಾವುದು ಪೂರ್ಣಸತ್ತೆಯೆನಿಸುವುದೊ ಪಡೆದಿದೆಯೊ ಅದು ಪೂರ್ಣ ಜ್ಞೇಯತೆಯನ್ನೂ ಪಡೆದೆ ಇರುತ್ತದೆ. ಯಾವುದು ಪೂರ್ಣ ಅಸತ್ತೆಯೆನಿಸುವುದೊ ಅದು ಪೂರ್ಣ ಆಜ್ಞೀಯವಾಗಿಯೆ ಇರುತ್ತದೆ. ಇದನ್ನೇ ಇಂದಿನ ಭಾಷೆಯಲ್ಲಿ ಹೇಳುವುದಾದರೆ ಜ್ಞಾನ ಪ್ರಪಂಚಸ್ವರೂಪೈಕ್ಯದಂತೆ ಜ್ಞಾತೃವಿನ ಜ್ಞಾನೈಕ್ಯವನ್ನೂ ಒಳಗೊಂಡಿರುತ್ತದೆ.
  • ನೀತಿಮೀಮಾಂಸೆ : ನೀತಿ ಮತ್ತು ನಡತೆಯನ್ನು ನಿಯಮಿಸುವ ತತ್ತ್ವಗಳು ಯಾವುವೆಂಬುದರ ಕೂಲಂಕಷ ವಿಮರ್ಶೆಯನ್ನು ನೀತಿಶಾಸ್ತ್ರ. ರಾಜಶಾಸ್ತ್ರಗಳೆರಡಕ್ಕೂ ಅನ್ವಯಿಸುವಂತೆ ಮೊಟ್ಟಮೊದಲು ಮಾಡಿದ ಯಶಸ್ಸು ಪ್ಲೇಟೋಗೆ ಸೇರುತ್ತದೆ. ಸರಿ-ತಪ್ಪು ಸುಗುಣ ದುರ್ಗುಣ ಇವನ್ನು ಕುರಿತ ಅಶಾಸ್ತ್ರೀಯ ಹಾಗೂ ಅವ್ಯವಸ್ಥಿತ ಚಿಂತನೆಯನ್ನು ಮಾಡುತ್ತ ತನಗೆ ಸಿಕ್ಕವರೊಂದಿಗೆ ಚರ್ಚಿಸುತ್ತ ಸಾಕ್ರ್‍ಟೀಸ್ ಸಾಗಿದ್ದುದು ನಿಜ. ಈ ವಿಚಾರವಾಗಿ ಸಾಮಾನ್ಯ ಜನರಲ್ಲಿ ಪ್ರಚಲಿತವಾಗಿದ್ದ ಅಭಿಪ್ರಾಯಗಳು ಎಷ್ಟೊಂದು ವಿರೋಧಾಭಾಸಗಳನ್ನೂ ಅಸಾಂಗತ್ಯಗಳನ್ನೂ ಒಳಗೊಂಡಿವೆಯೆಂಬುದನ್ನೂ ಎತ್ತಿತೋರಿಸುತ್ತ ತನ್ನ ಪರಿಹಾರಗಳತ್ತ ಸಾಗುತ್ತಿದ್ದ. ಇವನ ತೀರ್ಮಾನಗಳಲ್ಲಿ ತುಂಬ ಗಮನಾರ್ಹವಾದುದೆಂದರೆ ಸದ್ಗುಣವೂ ಜ್ಞಾನವೇ ಎಂಬುದು. ಸದಾಚಾರವೆಲ್ಲ ಬುದ್ಧಿಮೂಲವೆನ್ನುವ ಈ ಸರಣಿ ಗ್ರೀಕ್ ನೀತಿಶಾಸ್ತ್ರವನ್ನೇ ಕಲುಷಿತಗೊಳಿಸಿದೆಯೆಂಬುದು ಕ್ರಿಶ್ಚನ್ ಧಾರ್ಮಿಕರ ಆರೋಪ. ಆದರೆ ಈತ ಹೇಳುವ ನೀತಿ ಈ ಆರೋಪಕ್ಕೆ ಒಳಗಾಗಲಾರದು. ಏಕೆಂದರೆ ಇವನ ಪ್ರಕಾರ ಅದು ಕೇವಲ ಅಮೂರ್ತವಾದ ಬೌದ್ಧಿಕ ಪ್ರಚೋದನೆಯಲ್ಲ. ಈತ ಹೇಳುವ ನ್ಯಾಯ ಒಳ್ಳೆಯ ಪ್ರಜೆಯ ಸದ್ವರ್ತನೆ. ಅವನ ಸುನೀತಿಯ ಅಥವಾ ಧರ್ಮದ (ಗುಡ್) ಆದರ್ಶ, ಪ್ರಜಾರಾಜ್ಯದಲ್ಲಿ ಸಾಧಿಸಬೇಕಾದ ಮೌಲ್ಯ. ತನ್ನ ರಿಪಬ್ಲಿಕ್ ಗ್ರಂಥದಲ್ಲಿ ಈತ ಒಂದು ಸುಸಂಘಟಿತವಾದ ರಾಜ್ಯವ್ಯವಸ್ಥೆಯಲ್ಲಿಯ ಸಾಮಾಜಿಕ ವರ್ತನೆಯ ಆಧಾರದ ಮೇಲಿಂದ ಮಾತ್ರ ವ್ಯಕ್ತಿಯ ನೈತಿಕತೆಯನ್ನು ನಿರೂಪಿಸುತ್ತಾನೆ. ವಿಶ್ವದ ದುರ್ಭೇದ್ಯರಹಸ್ಯವನ್ನು ಈ ಸುನೀತಿಯ ಕಲ್ಪನೆಯಿಂದ ಒಡೆಯುತ್ತಾನೆ. ಏಕೆಂದರೆ ಸುನೀತಿ ಬರಿಯ ಅಮೂರ್ತ ಆದರ್ಶ ಕಲ್ಪನೆಯಷ್ಟೇ ಅಲ್ಲ: ಅದು ಇಹದಲ್ಲಿ ಸಾಕ್ಷಾತ್ಕøತವಾದ ಸಿದ್ಧಿಯೂ ಅಹುದು. ಮತ ಧರ್ಮಗಳಲ್ಲಿ ದೇವರ ಕಲ್ಪನೆಗೆ ಯಾವ ಸ್ಥಾನವೋ ಸುನೀತಿಗೂ ಅದೇ ಮಹತ್ತ್ವದ ಸ್ಥಾನವಿದೆ. ಅದೇ ಜೀವನಕೆಲ್ಲ ಅಂತಿಮ ಗಂತವ್ಯವೆನಿಸುವ ಮೌಲ್ಯವೂ ಎಲ್ಲ ಜೀವದ ಮೂಲಾಧಾರವೂ ಹೌದು.
  • ಪ್ಲೇಟೋ ಪ್ರಭಾವ ಅಸಂಖ್ಯ ತತ್ತ್ವಚಿಂತಕರ ಮೇಲೇ ಹೇಗೋ ಹಾಗೆ ಅಗಣಿತ ಕವಿಗಳ ಮೇಲೂ ಅನೇಕ ಶತಮಾನಗಳವರೆಗೆ ಅಗಾಧವಾಗಿದ್ದುದು ಎದ್ದು ಕಾಣುತ್ತದೆ. ಇವನಿಂದ ಸ್ಫೂರ್ತಿ ಪಡೆಯದ ತತ್ತ್ವಜ್ಞಾನಿಗಳೆ ಯೂರೋಪಿನಲ್ಲಿ ಇಲ್ಲವೆನ್ನಬಹುದು. ಇವನ ಶಿಷ್ಯರು ಇವನ ತತ್ತ್ವಗಳ ಪ್ರಸಾರಕ್ಕೆ ಮುಂದಾದರೂ, ಯಾರೂ ಅರಿಸ್ಪಾಟಲನಷ್ಟು ಯಶಸ್ವಿಗಳಾಲಿಲ್ಲ. ಪ್ಲೇಟೋ ತತ್ತ್ವಗಳಿಗೆ ಶಾಸ್ತ್ರೀಯ ಸ್ವರೂಪವನ್ನು ಒದಗಿಸಿ ವಿಚಾರವನ್ನು ಮುಂದುವರಿಸಿದ ಕೀರ್ತಿ ಅರಿಸ್ಟಾಟಲನಿಗೇ ಸಲ್ಲಬೇಕು.

ಗ್ರಂಥಗಳು[ಬದಲಾಯಿಸಿ]

  • (ರಿಪಬ್ಲಿಕ್ ಗ್ರಂಥ ಮುಖ್ಯವಾದುದು)
  • ಪ್ಲೇಟೋ ಗ್ರಂಥಗಳೆಲ್ಲ ಉಪಲಬ್ಭವಾಗಿವೆ. ಅವುಗಳ ಪ್ರಮಾಣ ಎಂಟು ಆಧುನಿಕ ಸಂಪುಟಗಳಷ್ಟಿದೆ. ವಿಶ್ವದ ತಾತ್ತ್ವಿಕವಿವೇಚನೆಯ ಉತ್ತುಂಗ ಶಿಖರವನ್ನು ನಾವು ಅಲ್ಲಿ ಸಂದರ್ಶಿಸುವಂತೆ ಉನ್ನತ ಮಟ್ಟದ ವಾಗ್ವಿಲಾಸವನ್ನೂ ಕಾಣುತ್ತೇವೆ. ಆದ್ದರಿಂದ ಅವು ತಾತ್ತ್ವಿಕ ದೃಷ್ಟಿಯಂತೆ ಸಾಹಿತ್ಯದೃಷ್ಟಿಯಿಂದಲೂ ಮಹನೀಯವೆನಿಸಿವೆ. ತತ್ತ್ವಶಾಸ್ತ್ರವೇನೆಂದು ಯಾರಾದರೂ ಕೇಳಿದರೆ ಪ್ಲೇಟೋವನ್ನು ಓದಿ ತಿಳಿ ಎಂದು ಉತ್ತರಿಸುವಂತಿದೆ. ತತ್ತ್ವಶಾಸ್ತ್ರವೆಂಬ ಪದವನ್ನು ಮೊದಲು ಬಳಸಿದವನೇ ಪ್ಲೇಟೋ, ಅದನ್ನು ಸರ್ವಾಂಗೀಣವಾಗಿ ವಿವೇಚಿಸಿದವನೂ ಆತನೇ, ಇಲ್ಲಿ ನಾವು ಮೊದಲು ಬಾರಿಗೆ ಕಾಣುವ ವ್ಯವಸ್ಥಿತ ತತ್ತ್ವಚಿಂತನೆ ಸಾಕ್ರಟೀಸ್ ಮತ್ತು ಅವನ ಪೂರ್ವಿಕರಾರಲ್ಲಿಯೂ ಕಾಣಸಿಗದು.
  • ಪ್ಲೇಟೋ ಬರೆದುದೆಲ್ಲ ಹೆಚ್ಚಾಗಿ ಸಂವಾದ ಅಥವಾ ಸಂಭಾಷಣೆಯ ಶೈಲಿಯಲ್ಲಿದೆ. ಚಿಂತನೆಯಲ್ಲಿ ಯಥಾರ್ಥ ಹಾಗೂ ಯಥೋಚಿತ ಪದಪ್ರಯೋಗ ಶಕ್ಯವಾಗಬೇಕಾದರೆ ಇತರರೊಡನೆ ಚರ್ಚೆಮಾಡಿ ಇತರರ ವಿಮರ್ಶೆಯನ್ನು ಗಮನಿಸದೆ ಸಾಧ್ಯವಿಲ್ಲ. ಸಾಮಾನ್ಯವಾಗಿ ಪ್ಲೇಟೋ ಸಂವಾದಗಳನ್ನು ಆದಿಕಾಲದವು ಹೆಚ್ಚಾಗಿ ಸಾಕ್ರಟೀಸ್ ಮಹತ್ತ್ವವನ್ನು ನಿರೂಪಿಸುತ್ತವೆನ್ನಬಹುದು. ಮೊದಲು ಒಂದು ಸಿದ್ಧಾಂತವನ್ನು ಪರೀಕ್ಷೆಗಾಗಿ ಮುಂದಿರಿಸುವುದು, ಅದರ ನಾನಾ ಮುಖಗಳನ್ನು ವಿವೇಚಿಸುವುದು, ವಿವಿಧ ವಾದಪ್ರತಿವಾದಗಳಿಗೆಲ್ಲ ಎಡೆಯೀಯುವುದು, ಕಡೆಗೆ ಎಲ್ಲಕ್ಕಿಂತ ಪ್ರಬಲವಾದ ಸಮರ್ಥನೆ ಯಾವ ಪಕ್ಷಕ್ಕೆ ಇದೆಯೊ ಅದನ್ನು ಸ್ವೀಕರಿಸುವುದು-ಇದು ಪ್ಲೇಟೋ ಹೆಚ್ಚಾಗಿ ಬಳಸುವ ವಿವೇಚನಾಸರಣಿ.

ಸಾಕ್ರಟೀಸ್ ಮತ್ತು ಪ್ಲೇಟೋ[ಬದಲಾಯಿಸಿ]

  • ಮಧ್ಯಕಾಲದವುಗಳಲ್ಲಿ ವಾದಕ್ಕಾಗಿ ಯಾವುದೇ ಅಭಿಪ್ರಾಯದಿಂದಲಾದರೂ ವಿವೇಚನೆಗೆ ಹೊರಡುವ ಸಾಕ್ರಟೀಸ್ ಮಾರ್ಗದಲ್ಲಿ ಪ್ಲೇಟೋ ತನ್ನ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ. ನಿಕೃಷ್ಟವಾದ ನಿರ್ಣಯಗಳಿಂದಲೇ ವಿವೇಚನೆ ಆರಂಭವಾಗುವಂತೆ ಶ್ರಮಿಸುತ್ತಾನೆ. ಉದಾಹರಣೆಗೆ : ಲೋಕದಲ್ಲಿ ನ್ಯಾಯವಾದ ನಡೆವಳಿಕೆಗಳಾಗಲಿ ಅನ್ಯಾಯದ ವರ್ತನೆಗಳಾಗಲಿ ಲೆಕ್ಕವಿಲ್ಲದಷ್ಟು ರೀತಿ ಕಾಣಬಹುದು. ಆದರೆ ಯಾವುದೋ ಒಂದು ನಿರ್ದಿಷ್ಟ ಅರ್ಥದಲ್ಲಿ ಒಂದೇ ನ್ಯಾಯವನ್ನು ಒಂದೇ ಅನ್ಯಾಯವನ್ನು ಸಹ ನಾವು ಮನಗಾಣುತ್ತೇವೆ. ಹಾಗೆಯೇ ಅಸಂಖ್ಯ ಸುಂದರ ವಸ್ತುಗಳಿದ್ದರೂ ಒಂದು ಸೌಂದರ್ಯದ ಕಲ್ಪನೆ ನಮಗೆ ಶಕ್ಯವಿದೆ. ಈ ಒಂದು ಸೌಂದರ್ಯ ವಸ್ತುಗಳಂತೆ ಪರಿಣಾಮಶೀಲವಾಗಿರಲಾರದು, ಎಲ್ಲ ಸುಂದರ ವಸ್ತುಗಳಿಗೂ ಆಧಾರಭೂತ ಪ್ರಾಣಶಕ್ತಿಯಾಗಿ ಅದು ಏಕರೀತಿಯಾಗಿರಬೇಕಾಗುತ್ತದೆ. ಅದರಂತೆ ಸಾಮ್ಯವೆಂಬ ಕಲ್ಪನೆಯೂ ಏಕರೂಪವಾಗಿ ಒಂದು ಇರದಿದ್ದರೆ ಜಗತ್ತಿನಲ್ಲಿ ಒಂದು ವಸ್ತು ಇನ್ನೊಂದಕ್ಕೆ ಸಮವೆಂದು ನಮಗೆ ಹೇಗೆ ಹೇಳಲು ಬಂದೀತು? ಆದ್ದರಿಂದ ನಮ್ಮ ಹೊರಗಣ್ಣಿಗೆ ಕಾಣುವ ಜಗತ್ತೇ ಬೇರೆ, ಈ ಎರಡನೆಯ ಅಂತರ್ವಿಶ್ವದಲ್ಲಿ ಇರತಕ್ಕವೆಲ್ಲ ಪರಿಪೂರ್ಣ ಪರಿಶುದ್ಧ ಹಾಗೂ ನಿತ್ಯ. ಇವು ಕೇವಲ ಬುದ್ಧಿಗಮ್ಯ ಮತ್ತು ಶಬ್ದಪ್ರತಿಪಾದ್ಯವಾದ ಫಾರ್ಮ್ ಅಥವಾ ಐಡಿಯ ಅಥವಾ ಚಿದಾಕಾರಗಳು. ಈ ಮೂಲ ಚಿದಾಕಾರಗಳ ಸಂವೇದನೆ ಮತ್ತು ವಿವೇಚನೆಯೇ ತತ್ತ್ವಜ್ಞಾನಿಯ ಕಾರ್ಯಕ್ಷೇತ್ರ. ಇವನ್ನು ಅರಿಯಲಾರದವರು, ತೋರಿಸಿದರೂ ಒಪ್ಪಲಾರದವರು ತತ್ತ್ವಚಿಂತಕರಲ್ಲ. ನಿಜವಾಗಿ ಜ್ಞಾನದ ವಿಷಯವೆಂದರೆ ಈ ನಿಶ್ಚಲ ಚಿದಾಕಾರಗಳು, ಅಥವಾ ತತ್ತ್ವಗಳು ಮಾತ್ರವೆ. ಮಿಕ್ಕುದೆಲ್ಲ ಬರಿಯ ವೈಯಕ್ತಿಕ ಅಭಿಪ್ರಾಯ. ದೃಶ್ಯ ವಸ್ತುಗಳ ಹಿಂದಿನ ನಿಶ್ಚಲ ಪ್ರಕಲ್ಪನೆಗಳನ್ನರಿತ ಮೇಲೆ ಅವನ್ನೆಲ್ಲ ಏಕಸೂತ್ರದಿಂದ ಬೆಸೆಯುವ ಒಂದು ಸರ್ವಮೂಲ ತತ್ತ್ವವೂ ಇರಬಹುದು. ಅದು ಪ್ರತಿಭಾಮಾತ್ರವೇದ್ಯವಾದ, ವಿಚಾರಶಕ್ತಿಗೆ ಮೀರಿದ ತತ್ತ್ವ.
  • ಈ ಚಿಂತನಮಾರ್ಗವನ್ನು ಪ್ಲೇಟೋ ರಾಜಕೀಯ ಕ್ಷೇತ್ರಕ್ಕೆ ಅನ್ವಯಿಸಿ ಬರೆದ ಸಂವಾದಗಳನ್ನು ರಿಪಬ್ಲಿಕ್ (ಪ್ರಜಾರಾಜ್ಯ) ಮತ್ತು ಲಾಸ್ (ಆಡಳಿತ ನೀತಿಗಳು) ಮುಖ್ಯವಾಗಿ ರಚನೆಗಳೆನಿಸಿವೆ.

ರಿಪಬ್ಲಿಕ್[ಬದಲಾಯಿಸಿ]

  • ರಿಪಬ್ಲಿಕ್: ಇದು ಪ್ಲೇಟೋ ಆದರ್ಶರಾಜ್ಯದ ಚಿತ್ರವನ್ನೊ ಒದಗಿಸುವ ಗ್ರಂಥ. ತನ್ನ ಆದರ್ಶರಾಜ್ಯವನ್ನು ಪ್ಲೇಟೋ ಕ್ಸಾಲಪೋಲಿಸ್ ಎಂದು ಕರೆದಿದ್ದಾನೆ. ಗ್ರಾಮೀಣ ಸಮಾಜದ ಆಡಳಿತದಿಂದ ಹಿಡಿದು ಒಂದು ನಗರ ರಾಜ್ಯದ ನಿರ್ವಹಣೆಯವರೆಗೆ ಅದರ ವ್ಯಾಪ್ತಿ ಗುಣಕರ್ಮಗಳ ವಿಭಾಗವನ್ನಾಶ್ರಯಸಿ ಜನರಲ್ಲಿ ಮೂರು ವರ್ಗಗಳುಂಟು. ಪಾಲಕರು ಸಹಾಯಕರು ಮತ್ತು ಕಾರ್ಮಿಕರು ಎಂಬುದಾಗಿ. ಪ್ಲೇಟೋನ ವಿಚಾರಗಳೆಲ್ಲ ಹೆಚ್ಚಾಗಿ ಮೊದಲ ಎರಡುವರ್ಗದವರಿಗೆ ಎಂದರೆ ರಾಜ್ಯಪಾಲಕರಿಗೆ ಮತ್ತು ಸೈನಿಕರಿಗೆ ಅನ್ವಯಿಸುತ್ತವೆ. ಆ ವರ್ಗಗಳ ಸ್ತ್ರೀಪುರುಷರಿಗೆ ಸಂಪೂರ್ಣ ರಾಜ್ಯಾಧಿಕಾರವಿರುತ್ತದೆ. ಅದಕ್ಕೆ ಪ್ರತಿಯಾಗಿ ಅವರು ಸ್ವಂತ ಆಸ್ತಿಗೂ ಸ್ವಂತ ಕುಟುಂಬಕ್ಕೂ ಎರವಾಗಬೇಕು. ಅವರ ಉತ್ತಮ ಬೀಜದಿಂದ ವಂಶವರ್ಧನೆಯಾಗುವ ವ್ಯವಸ್ಥೆಯಿರುತ್ತದೆ. ರಾಜ್ಯದ ಮಿಕ್ಕ ವರ್ಗಗಳಿಗೆ ಪ್ರಭುತ್ವದಲ್ಲಿ ಪಾಲಾಗಲಿ ಉಚ್ಚಶಿಕ್ಷಣದ ಅಗತ್ಯವಾಗಲಿ ಇರುವುದಿಲ್ಲ. ಒಳ್ಳೆಯ ರೈತರು ಇಲ್ಲವೇ ಕೆಲಸಗಾರರಾಗುವುದಷ್ಟೆ ಅವರ ಕಸಬು. ಬಾಹ್ಯಯುದ್ಧಗಳ ಆಂತರಿಕ ಆಡಳಿತಕಾರ್ಯಗಳ ಎಲ್ಲ ಹೊಣೆಯೂ ಪಾಲಕವರ್ಗದವರಿಗೇ ಅವರು ತತ್ತ್ವಜ್ಞಾನಿಗಳಾಗುವುದರಿಂದ ಅದು ಚಿರಕಾಲ ಬಾಳುತ್ತದೆ: ಅದರಲ್ಲಿ ಕವಿಗಳಿಗೆ ಮಾತ್ರ ಪ್ರವೇಶವಿಲ್ಲ. ಏಕೆಂದರೆ ಅವರು ಸತ್ಯಾನ್ವೇಷಿಗಳಲ್ಲ: ಸ್ವಕಲ್ಪನಾಪ್ರಿಯರು. ಅವರ ವರ್ಣನೆಯಲ್ಲ ಮೂಲಸತ್ವದ ಅನುಕರಣೆಯ ಅನುಕರಣೆ. ಅವರಿಂದ ಅನೀತಿಗೂ ಪ್ರಚೋದನೆ ದೊರೆಯುತ್ತದೆ.
  • ಯಾವ ಪರಿವರ್ತನೆಗಳಿಗೂ ಆದರ್ಶ ರಾಜ್ಯದಲ್ಲಿ ಅವಕಾಶವಿಲ್ಲ. ಇಷ್ಟಾದರೂ ಮನುಷ್ಯ ಸ್ವಭಾವದ ಫಲವಾಗಿ ಯುಗಾಂತರದಲ್ಲಿ ಆದರ್ಶ ರಾಜ್ಯದಲ್ಲಿಯೂ ಅವನತಿಯುಂಟಾಗಿ ಪ್ರಜಾರಾಜ್ಯ ಹಾಗೂ ಏಕಾಧಿಪತ್ಯಗಳ ದುರ್ದೆಸೆಯೊದಗಬಹುದೆಂದು ಪ್ಲೇಟೋ ಸೂಚಿಸುತ್ತಾನೆ. ಇದನ್ನು ನೋಡಿದರೆ ಪ್ಲೇಟೋ ತನ್ನ ಸಮಕಾಲೀನ ಸ್ಥಿತಿಯನ್ನು ಉದ್ದೇಶಿಸಿ ಬರೆದಂತೆ ತೋರುವುದೇ ಇಲ್ಲ. ಏಕೆಂದರೆ ಇವನ ಕಾಲದಲ್ಲಿ ಪ್ರಜಾರಾಜ್ಯವೇ ಊರ್ಜಿತವಾಗಿತ್ತು, ನೌಕಾಸೈನ್ಯದ ಮಹತ್ತ್ವ ವಿಶೇಷವಾಗಿತ್ತು. ಆದರೆ ಆದರ್ಶರಾಜ್ಯದಲ್ಲಿ ಪಾಲಕರ ಸಹಾಯಕರಿಗೆ ಸಕಲ ದೈಹಿಕ ಬೌದ್ಧಿಕ ಶಿಕ್ಷಣಗಳ ವಿವರಗಳು ಬಂದರೂ ನೌಕಪಡೆಯ ಉಲ್ಲೇಖವೇ ಇಲ್ಲ. ವ್ಯಕ್ತಿಯಲ್ಲಿ ಬುದ್ಧಿಗೆ ಯಾವ ಪ್ರಾಶಸ್ತ್ಯವುಂಟೊ ಅದನ್ನೆ ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸಿ ತತ್ತ್ವಜ್ಞಾನಿಗಳ ಆದರ್ಶರಾಜ್ಯವನ್ನು ನಡೆಸಬಲ್ಲರೆಂಬಂತೆ ತೋರುತ್ತದೆ. ವ್ಯಕ್ತಿ ಹಾಗೂ ರಾಜ್ಯ-ಎರಡಲ್ಲೂ ನ್ಯಾಯದ ಸ್ವರೂಪವನ್ನು ಪ್ಲೇಟೋ ನಿರ್ದೇಶಿಸುತ್ತಾನೆ, ವ್ಯಾಯಾಮದಿಂದ ಹೇಗೆ ವ್ಯಕ್ತಿಯ ಆರೋಗ್ಯ ಫಲಿಸುವುದೊ ಹಾಗೆಯೆ ನ್ಯಾಯದ ಬಲದಿಂದ ರಾಜ್ಯದಲ್ಲಿ ಕ್ಷೇಮ ನೆಲಸುವುದೆಂದು ಈತ ಭಾವಿಸುತ್ತಾನೆ. ಸತ್ತ್ವವಿಲ್ಲದೆ ಆರೋಗ್ಯ ಹೇಗೆ ಅಶಕ್ಯವೂ ಹಾಗೆಯೆ ನ್ಯಾಯವಿಲ್ಲದ ರಾಜ್ಯಾಡಳಿತದಲ್ಲಿ ಒಳಿತು ಅಶಕ್ಯ. ಕೇವಲ ಶಿಕ್ಷೆಯ ಭಯದಿಂದ ನ್ಯಾಯ ಪರನಾದವನಿಗೆ ನಿಜವಾಗಿ ಈ ಮೂಲಸತ್ತ್ವವೆ ಇರುವುದಿಲ್ಲ. ರಾಜ್ಯ ಆರ್ಥಿಕವಾಗಿ ಸಬಲವೂ ಯುದ್ಧದಲ್ಲಿ ಪ್ರಬಲವೂ ಕ್ರಾಂತಿಗಳಿಂದ ಸುರಕ್ಷಿತವೂ ಆಗಿರಬೇಕಾದರೆ ಪ್ಲೇಟೋ ಹೇಳುವ ಮೂರು ವರ್ಗಗಳಲ್ಲಿಯೂ ಪರಸ್ಪರ ಸಹಜವಾದ ಸಹಕಾರ ಶಿಸ್ತು ಇರಬೇಕಾಗುತ್ತದೆ.

ಕಾನೂನು[ಬದಲಾಯಿಸಿ]

  • ಲಾಸ್: ಪ್ಲೇಟೋ ಆದರ್ಶರಾಜ್ಯ ಒಂದು ಕಾಲ್ಪನಿಕ ಮಾಯಪ್ರಪಂಚವಾದರೆ, ಅವನ ಆಡಳಿತನೀತಿಗಳನ್ನು ಹೇಳುವ ಈ ಗ್ರಂಥ ಅತ್ಯಂತ ಕಾರ್ಯಕಾರಿಯಾಗಿದೆ. ಇದು ಸೂಚಿಸುವ ರಾಜ್ಯವ್ಯವಸ್ಥೆಯಲ್ಲಿ ಶಿಷ್ಯರು ಕೂಡ ಸ್ವಂತ ಆಸ್ತಿಗಳನ್ನೂ ಹೆಂಡಿರು ಮಕ್ಕಳನ್ನೂ ಹೊಂದಿರಬಹುದು. ಸಮಾಜದ ಕೆಳವರ್ಗದವರಿಗೆ ಕೂಡ ಹಕ್ಕುಗಳೂ ಅಧಿಕಾರಗಳೂ ಉಂಟು; ಅವರಿಗೆ ರಾಜ್ಯ ಸೂತ್ರ ನೇರವಾಗಿ ಮಾತ್ರ ದೊರೆಯದು. ಒಳ್ಳೆಯ ಶಿಕ್ಷಣ ಪಡೆದರೂ ಒಡೆಯರು ತತ್ತ್ವಜ್ಞಾನಿಗಳೇ ಆಗಿರಬೇಕೆಂಬ ಒತ್ತಾಯವಿಲ್ಲ. ಸ್ತ್ರೀಯರು ಯುದ್ಧ ಪಟುಗಳಾಗಬೇಕಾಗಿಲ್ಲ. ಚುನಾವಣೆಗಳನ್ನು ಹೇಗೆ ನಡೆಸಬೇಕು, ನ್ಯಾಯಾಲಯಗಳಲ್ಲಿ ಯಾವ ನಿಯಾಮಾವಳಿಗಳಿರಬೇಕು, ಹಬ್ಬಗಳ ಆಚರಣೆ, ವ್ಯಾಪಾರ, ಶಿಕ್ಷಣ, ವ್ಯವಸಾಯ-ಇತ್ಯಾದಿಗಳ ಬಗ್ಗೆ ವಿಧಿನಿಷೇಧಗಳು, ಕಡೆಗೆ ಗರ್ಭಿಣಿಯರ ಪಥ್ಯ, ಮಕ್ಕಳ ಆಟ ಮುಂತಾದವನ್ನು ಕೂಡ ನಿಯಮಿಸುವ ಸೂತ್ರಗಳನ್ನು ಈ ಗ್ರಂಥ ಒಳಗೊಂಡಿದೆ. ಅದು ಎರಡನೆಯ ದರ್ಜೆಯ ರಾಜ್ಯದ ರೂಪರೇಷೆಯೆಂದು ಪ್ಲೇಟೋ ಹೇಳಿರುವ ಕಾರಣ, ಜನರ ಗಮನ ಇದರ ಕಡೆಗೆ ಅಷ್ಟಾಗಿ ಹರಿದಿಲ್ಲ. ಇದರ ಸಮರ್ಥ ನಿರ್ವಹಣೆಗೆ ಒಬ್ಬ ಉತ್ತಮ ಆಡಳಿತಗಾರ ಹಾಗೂ ನಿರಂಕುಶ ಪ್ರಭುವಿನ ಅಗತ್ಯವುಂಟೆಂಬ ಮಾತು ಅಚ್ಚರಿಗೊಳಿಸುವಂತಿದೆ. ಪ್ಲೇಟೋ ಇದನ್ನು ಸೈರಕ್ಯೂಸಿನ ಪ್ರಭು ಡೈಯನೀಷೀಅಸನ ಪ್ರೀತ್ಯರ್ಥ ಬರೆದನೆಂದು ಭಾವಿಸಬೇಕಾಗಿದೆ. ಇದರಲ್ಲಿ ಅಂದು ಅಥೆನ್ಸಿನಲ್ಲಿ ಪ್ರಚಲಿತವಿದ್ದ ಅನೇಕ ನಿಯಾಮಾವಳಿಗಳನ್ನು ಪ್ಲೇಟೋ ಕ್ರೋಢೀಕರಿಸಿರುವಂತೆಯೂ ತೋರುತ್ತದೆ. ನಗರರಾಜ್ಯಗಳ ಭವಿಷ್ಯ ನಶ್ವರವೆಂಬ ಕಲ್ಪನೆಯೇ ಪ್ಲೇಟೋಗೆ ಬಂದಂತಿಲ್ಲ: ಅದೇ ಶಾಶ್ವತ ವ್ಯವಸ್ಥೆಯೆಂದು ಗೃಹೀತ ಹಿಡಿದು ಆತ ಗ್ರಂಥ ಬರೆದಂತಿದೆ.

ಫೀಡ್ರಸ್[ಬದಲಾಯಿಸಿ]

  • ಫೀಡ್ರಸ್: ಈ ಗ್ರಂಥದ ಮುಖ್ಯ ಉದ್ದೇಶವೆಂದರೆ ಸುಬದ್ಧ ವಕ್ತತ್ವ ಕಲೆಗೆ ತಾರ್ಕಿಕ ಯುಕ್ತಿ ಹಾಗು ಮನುಷ್ಯನ ರಾಗಾವೇಶಗಳ ಶಾಸ್ತ್ರೀಯ ಅಧ್ಯಯನ ಈ ಎರಡರ ಸಮರ್ಥ ನೆಲೆಗಟ್ಟನ್ನು ಒದಗಿಸುವುದು. ಆದರೆ ಇದಕ್ಕೆ ಅಂಗವಾಗಿ ಪ್ರೇಮದ ಮನೋವ್ಲತ್ತಿಯ ವಿವೇಚನೆಯನ್ನೂ ಇಲ್ಲಿ ಒದಗಿಸಿದ್ದಾನೆ. ಅಲೌಕಿಕ ಪ್ರೇಮ ಅಥವಾ ಭಾವನೆಯೋಗದ ವಿಷಯಗಳಿ ಶಾಶ್ವತ ಚಿದಾಕಾರಗಳೇ (ಫಾರ್ಮ್) ಎಂದಿಲ್ಲಿ ನಿರ್ಣಯಿಸಲಾಗಿದೆ. ದೇಹಾಧಾರಣೆಗೂ ಮುನ್ನ ಆತ್ಮ ಈ ಮೂಲ ತತ್ತ್ವದರ್ಶನವನ್ನು ಹೊಂದಿರುತ್ತದೆ ಎಂದು ತರ್ಕ. ಸೌಂದರ್ಯದ ಮೂಲ ಚಿದಕಾರವನ್ನು ಇಂದ್ರಿಯಾನುಭವ ತಟ್ಟನೆ ಅಭಿವ್ಯಕ್ತಗೊಳಿಸುವುದುಂಟು; ಅದನ್ನೆ ನಿಷ್ಕಾರಣ ಅನುರಾಗವೆನ್ನುವರು. ಹೀಗೆ ಕಾಂತಾನುರಾಗದಿಂದ ಪರವಶನಾದ ಕಾಮಿಗೆ ಅಂತರಾತ್ಮದ ಗರಿಗಳು ಮತ್ತೆ ಬೆಳೆಯತೊಡಗಿವೆಯೆಂದೆ ಅರ್ಥಹಿಸಬೇಕು; ಆತ್ಮ ತನ್ನ ಪರಮಾನಂದವನ್ನು ಪಡೆಯುವ ವಿಕಾಸಪಥದಲ್ಲಿ ಪ್ರೇಮವೂ ಒಂದು ಮೊದಲ ಹೆಜ್ಜೆ.

ಟಿಮೇಯಸ್[ಬದಲಾಯಿಸಿ]

  • ಟಿಮೇಯಸ್: ಇದರಲ್ಲಿ ಜಗತ್ತಿನ ಸೃಷ್ಟಿವಾದದ ವಿವೇಚನೆಯಿದೆ. ಭೌತಿಕ ತತ್ತ್ವದ ಮತ್ತು ಜೀವತತ್ತ್ವದ ನಿರೂಪಣೆಯೂ ಇದೆ. ಶಾಶ್ವತ ಸತ್ತೆ ಮತ್ತು ಕ್ಷಣಿಕ ಪರಿವರ್ತನೆಗಳಲ್ಲಿರುವ ವ್ಯತ್ಯಾಸವನ್ನು ತಿಳಿಸಿ, ಪೂರ್ಣ ಸಾಕ್ಷಾತ್ಕಾರಕ್ಕೆ ಶಾಶ್ವತ ಸತ್ತೆ ಮಾತ್ರ ವಿಷಯವಾಗಬಲ್ಲದೆಂದು ಇಲ್ಲಿ ಸಿದ್ದಾಂತ ಮಾಡಲಾಗಿದೆ. ಈ ದೃಶ್ಯ ಹಾಗೂ ಪರಿಣಾಮಶೀಲ ಜಗತ್ತಿಗೆ ಒಂದು ಆದಿಯಿದೆ. ದೇವರೇ ಸೃಷ್ಟಿಕರ್ತೆ. ಅವನಿಗೆ ಸಕಲವಸ್ತುಗಳ ತಾತ್ತ್ವಿಕ ಪ್ರಕಾರಗಳೂ ಗೋಚರವಿರುತ್ತವೆ. ಅವನ್ನು ಅನುಕರಣ ಮಾಡಿ ಆತ ಸೃಸ್ಟಿ ಮಾಡುತ್ತಾನೆ. ಜಗತ್ತಿನ ಮೂಲ ಘಟಕಗಳೆಂದರೆ-ಅಭೇದ, ಭೇದ ಮತ್ತು-ಸತ್ತೆ ಎಂಬ ತತ್ತ್ವಗಳೇ ಜಗದಾತ್ಮವನನು ದೇವರು ದಿವ್ಯಲೋಕಗಳಲ್ಲಿರಿಸಿ ಅವಕ್ಕೆ ಗಮನ ನೀಡಿದ. ಬಳಿಕ ಮಿಕ್ಕ ದೇವತೆಗಳ ಹಾಗೂ ಮಾನವರ ಆತ್ಮ ಶರೀರಗಳು ರೂಪಾಂತರವು. ದೇವರು ಇಲ್ಲಿ ಜಗತ್ತಿನ ಅಭಿನ್ನ ನಿಮಿತ್ತೋಪಾದಾನ-ಕಾರಣನಾಗುತ್ತಾನೆ. ಭೌತಿಕ ವಿಜ್ಞಾನ ಎಷ್ಟಾದರೂ ಅಪೂರ್ಣವೇ ಸರಿ. ನಮ್ಮ ಬುದ್ದಿಗೆ ನಿಲುಕದ ಒಂದು ಕಾರಣ ತತ್ತ್ವವನ್ನಾಗಿ ನಿಯತಿಯನ್ನೂ ಪ್ಲೇಟೋ ಒಪ್ಪಿದಂತಿದೆ. ಭೂಮಿ, ಅಗ್ನಿ ವಾಯು, ಜಲ ಎಂಬ ಭೂತದ್ರವ್ಯಗಳ ಅಣುಗಳು ಪಿತ್ಯಾಗರಸನ ಗಣಿತ ಪ್ರಕ್ರಿಯೆಗೆ, ಅನುಗುಣವಾಗಿ ಕೂಡಿಕೊಂಡಾಗ ಭೂತಸೃಷ್ಟಿಯಾಗುತ್ತದೆ. ಹೀಗೆ ವಿಜ್ಞಾನ ಹಾಗೂ ದೇವತಾವಾಗಳ ಮೊದಲ ಚರ್ಚೆ ಇಲ್ಲಿ ಮನನೀಯವಾಗಿದೆ.

ಅಪಾಲೊಜಿ, ಯೂತಿಪ್ರೊ ಮತ್ತು ಕ್ರೀಟೋ[ಬದಲಾಯಿಸಿ]

Sanzio 01 Plato Aristotle- ಪ್ಲೇಟೋ (ಎಡ) ಮತ್ತು ಅರಿಸ್ಟಾಟಲ್ (ಬಲ) ದಿ ಸ್ಕೂಲ್ ಆಫ್ ಅಥೆನ್ಸ್‌ನ ವಿವರ, ರಾಫೆಲ್ ಬರೆದ ಫ್ರೆಸ್ಕೊ. ಅರಿಸ್ಟಾಟಲ್ ತನ್ನ ನಿಕೋಮಾಚಿಯನ್ ಎಥಿಕ್ಸ್ ನಕಲನ್ನು ಕೈಯಲ್ಲಿ ಹಿಡಿದುಕೊಂಡು ಭೂಮಿಗೆ ಸನ್ನೆ ಮಾಡುತ್ತಾನೆ. ಪ್ಲೇಟೋ ತನ್ನ ಟಿಮಾಯಸ್ ಅನ್ನು ಹಿಡಿದು ಸ್ವರ್ಗಕ್ಕೆ ಸನ್ನೆ ಮಾಡುತ್ತಾನೆ.
  • ಅಪಾಲೊಜಿ, ಯೂತಿಪ್ರೊ ಮತ್ತು ಕ್ರೀಟೋ: ಈ ಮೂರು ಗ್ರಂಥಗಳು ವಿಚಾರಣೆಯ ಕಾಲದಲ್ಲಿ, ಅದಕ್ಕೆ ಮೊದಲು ಮತ್ತು ಅನಂತರ, ಸಾಕ್ರಟೀಸ್ ಹೇಗಿದ್ದನೆಂಬುದನ್ನು ವಿವರಿಸಲೆಂದೇ ರಚಿತವಾಗಿವೆ. ಸಾಕ್ರಟೀಸನ ಮೂಲಭೂತ ನಿಲವು ಹಾಗೂ ಉದ್ದೇಶಗಳ ಬಗೆಗೆ ತಪ್ಪು ಅಭಿಪ್ರಾಯಗಳನ್ನು ತಪ್ಪಿಸುವುದು ಇವುಗಳ ಗುರಿ. ಆತ್ಮವಿಚಾರ, ಆತ್ಮದರ್ಶನಗಳ ತತ್ವಾರ್ಥ ಮತ್ತು ಪ್ರಾಮುಖ್ಯ-ಇವೇ ಈ ಗ್ರಂಥಗಳ ಮುಖ್ಯವಿಷಯ. ಮತ ಧರ್ಮ (ರಿಲಿಜನ್) ಎಂದರೇನು-ಎಂಬುದು ಯೂತಿಪ್ರೊ ಎತ್ತುವ ಪ್ರಶ್ನೆ. ಬರಿಯ ಪರಂಪರಾಗತ ವ್ರತಾಚರಣೆಯಷ್ಟೆ ದೇವತಾರಾಧನೆಯಲ್ಲ ಒಂದು ಮಹತ್ವಾರ್ಯದ ಸಾಧನೆ ಎಂದರೆ ಆತ್ಮಸಾಕ್ಷಾತ್ಕಾರವೇ. ನಿಜವಾಗಿಯೂ ದೇವತಾರಾಧನೆ ಎಂಬುದು ಇಲ್ಲಿಯ ಸಿದ್ಧಾಂತ, ಮಿಕ್ಕ ಎರಡು ಗ್ರಂಥಗಳ ವಿಷಯ ಸಾಕ್ರಟೀಸನಿಗೆ ಹೆಚ್ಚು ಅನ್ವಯಿಸುವುದರಿಂದ ಇಲ್ಲಿ ಪ್ರಸ್ತುತವಲ್ಲ.
  • ಫೀಡೊ: ಈ ಗ್ರಂಥದಲ್ಲಿ ಆತ್ಮ ಅಮರನೆಂಬ ತತ್ತ್ವ ಪ್ರತಿಪ್ಠಾಪಿತವಾಗಿದೆ. ನಮ್ಮ ಜಗತ್ತಿನ ತರ್ಕಶುದ್ದ ಪರಿಜ್ಞಾನಕ್ಕೆ ಯಾವ ತಾತ್ತ್ವಿಕ ಪ್ರಕಾರಗಳ ಸಂವೇದನೆ ಅತ್ಯಗತ್ಯವೂ ಅವುಗಳ ಸ್ವರೂಪವಿವೇಚನೆಯಿಂದಲೆ ಆತ್ಮಕ್ಕೆ ಮರಣವಿಲ್ಲವೆಂಬುದೂ ಸಿದ್ಧವಾಗುತ್ತದೆ. ಆತ್ಮ ಶರೀರಾಧೀನವಾಗಿರುವುದನ್ನು ತಪ್ಪಿಸಲೇಂದೆ ತತ್ತ್ವಜ್ಞಾನಿಯ ಇಡಿಯ ಜೇವನ ಮುಡಿಪಾಗಿರುತ್ತದೆ. ಆತ್ಮ ಮೂಲತಃ ದಿವ್ಯ, ಆತ ಏವ ಮರಣಾನಂತರವೂ ಸ್ಥಿರ, ಶರೀರದ ಸಂಕಲೆ ಹರಿದೊಡನೆ ಆತ್ಮ ತನ್ನದೆ ಆದ ಅಮರತ್ವದಲ್ಲಿ ಮೋಕ್ಷ ಪಡೆಯುತ್ತದೆ. ಸತ್ತಮೇಲೆಯೂ ಆತ್ಮ ಉಳಿಯುತ್ತದೆನ್ನಲು ಇಲ್ಲಿ ಮೂರು ಕಾರಣಗಳನ್ನು ಕೊಡಲಾಗಿದೆ.
  • 1 ಮಿಕ್ಕ ಜೀವಜಂತುಗಳಲ್ಲೆಲ್ಲ ಜನ್ಮ-ಮರಣದ ಚಕ್ರವತಿ ಪ್ರತ್ಯಕ್ಷವಾಗಿದೆ. ಅದರಂತೆ ಮನುಷ್ಯನ ಆತ್ಮಕ್ಕೂ ಮತ್ತೆ ಮತ್ತೆ ಹುಟ್ಟುಸಾವುಗಳಿರುವುದು ಯುಕ್ತಿ ಯುಕ್ತವಾಗಿದೆ. ಹಾಗಿಲ್ಲದಿದ್ದರೆ ಜಗತ್ತಿನಲ್ಲಿ ಜೀವ ಎಂದೊ ನಷ್ಟವಾಗಬೇಕಾಗಿತ್ತು. ಅಲ್ಲದೆ ಜನ ಕಲಿಯುವುದು ಕೂಡ ಪೂರ್ವ ಜನ್ಮದ ಸಂಸ್ಕಾರದಿಂದಲೇ ಸರಿ.
  • 2. ನಿರುಪಾಧಿಕ ತಾತ್ತ್ವಿಕ ಚಿಂತನೆಯಲ್ಲಿ ಅನುಭವಕ್ಕೆ ಬರುವ ನಿತ್ಯಪ್ರಕಾರಗಳಂತೆ, ಜ್ಞಾತೃವಾದ ಆತ್ಮನೂ ನಿತ್ಯನೆ ಇರಬೇಕು. ಹೀಗೆ ಮಾನವನಲ್ಲಿರುವ ದೇವಾಂಶವಾದ ಆತ್ಮಕ್ಕೆ ಸಾವಿಲ್ಲ. ಆತ್ಮವೂ ದೇಹದ ಒಂದು ಸಾಮರಸ್ಯದ ಅವಿಷ್ಕಾರ-ಸಂಗೀತದ ರಾಗದಂತೆ ಎಂಬ ವಾದ ವಿಚಾರಸಹ್ಯವಲ್ಲ. ಏಕೆಂದರೆ ಸಮಾನುಶ್ರುತಿಯೇ ರಾಗವಲ್ಲ. 3 ಆತ್ಮಕ್ಕೂ ಇತರ ವಸ್ತುಗಳಂತೆ ಒಂದು ಸ್ವವಿಶಿಷ್ಯ ಪ್ರಕಾರವಿದೆ: ಅದು ಜೀವನ, ಅದ್ದರಿಂದ ತದ್ವಿರುದ್ದವಾದ ಮರಣದ ಪ್ರಕಾರ ಅದಕ್ಕೆ ಅನ್ವಯಿಸಲು ಆಗದು. ತಿಯೋಟಿಟಸ್; ಜ್ಞಾನದ ತಾತ್ತ್ವಿಕ ಲಕ್ಷಣವೇನು ಎಂಬುದೇ ಇಲ್ಲಿಯ ಮೂಲಭೂತ ಪ್ರಶ್ನೆ. ಪ್ಲೇಟೋ ಇಲ್ಲಿ ಪ್ರತಿಪಾದಿಸುವಂತೆ
  • (1) ಕೇವಲ ಇಂದಿಯ ಸಂವೇದನೆ ಅಥವಾ ಚಿದಾಕರರಹಿತ ಪ್ರತ್ಯಕ್ಷ ಜ್ಞಾನವೆನಿಸಲಾರದು (2) ತತ್ತ್ವ ಶಾಸ್ತ್ರದಲ್ಲಿ ಕೇವಲ ಸಾಪೇಕ್ಷತಾವಾದವಾಗಲಿ ಕೇವಲ ಪ್ರಾಮಾಣ್ಯವಾಗಲಿ ಅಶಕ್ಯ. ಇಲ್ಲಿ ಪ್ಲೇಟೋ ಅನಿಶ್ಚಿತ ಅಭಿಪ್ರಾಯ ಹಾಗೂ ನಿಶ್ಚಿತಜ್ಞಾನಗಳ ಅಂತರವನ್ನು ಸ್ಪಷ್ಟಪಡಿಸಲು ಯತ್ನಿಸಿದ್ದಾನೆ. ಪಾರಿಭಾಷಿಕವಾದ ಚಿದಾಕಾರಗಳ ಮಾತನ್ನೆತ್ತುವುದಿಲ್ಲ. ಇಂದ್ರಿಯಗೋಚರವಾಗಿರುವ ವಸ್ತುಸಂವೇದನೆಗೂ ಇಂದ್ರಿಯಾತೀತ ಧರ್ಮಗಳ -ಉದಾಹರಣೆಗೆ: ಸಂಖ್ಯೆ, ಸಾಮ್ಯ, ಅಭೇದ, ಅಸ್ತಿತ್ವ, ಒಳಿತು ಇತ್ಯಾದಿ-ಪರಿಜ್ಞಾನಕ್ಕೂ ಅಂತರವನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ. ಇಂದ್ರಿಯಕ್ರಿಯೆ ಹಾಗೂ ಜ್ಞಾನಕ್ರಿಯೆಗಳು ಬೇರೆಬೇರೆಯೇ ಸರಿ ಎನ್ನಲಾಗಿದೆ.
  • ಫಿಲೆಬಸ್: ಇದರಲ್ಲಿ ಒಳಿತಿನ ಬಗ್ಗೆ ಪರಿಪಕ್ವ ವಿವೇಚನೆಯನ್ನು ಕಾಣುತ್ತೇವೆ. ಒಳಿತು ಒಂದು ಸುಖಕರ ಸಂವೇದನೆಯೊ ಇಲ್ಲವೆ ಜ್ಞಾನಕ್ರಿಯೆಯೊ ಎಂಬುದು ಇಲ್ಲಿನ ಸಮಸ್ಯೆ. ಸಾಕÀ್ರಟೀಸನ ಸಹಕಾರ ಈ ಸಮಸ್ಯೆಗೆ ಒಂದು ಸೂಕ್ತ ಪರಿಹಾರವನ್ನು ತೋರಿಸುತ್ತದೆ. ಉತ್ತಮ ಜೀವನದಲ್ಲಿ ಎರಡಕ್ಕೂ ಸ್ಥಾನವಿದೆ; ಆದರೂ ಚಿದಂಶಕ್ಕೆ ಪ್ರಾಶಸ್ತ್ಯ ಹೆಚ್ಚು ಎಂಬುದೆ ಪರಿಹಾರ. ಹೇಗೆಂದರೆ ವಾಸ್ತವ ಜಗತ್ತಿನಲ್ಲಿರುವ ಸಕಲವನ್ನೂ ನಾಲ್ಕು ವರ್ಗಗಳಲ್ಲಿ ತರಬಹುದು:
  • (1) ನಿರವಧಿಕ (2) ಸಾವಧಿಕ (3) ಇವೆರಡರ ಸಂವಿಶ್ರಣ (4) ಸಂವಿಶ್ರಣದ ಕಾರಣ. ಜೀವನದಲ್ಲಿ ಒಳಿತೆನ್ನಬಹುದಾದದ್ದೆಲ್ಲ ಮೂರನೆಯ ವರ್ಗದಲ್ಲೆ ಬರುತ್ತದೆ. ನಿರವಧಿ ಅನುಭವಕ್ಕೆ ಇವು ಒಂದು ಅವಧಿಯನ್ನು ಕಲಿಸುವುವೆಂದು ಒಪ್ಪಬೇಕಾಗುತ್ತದೆ. ಇದರ ಫಲವಾಗಿ ಮಧ್ಯಮ-ಸ್ವರೂಪ (ಮೀನ್) ಎಂಬ ವಾದ ಇಲ್ಲಿ ಮೂಡಿಬರುತ್ತದೆ.
  • ಸಿಂಪೋಸಿಯಮ್: ಫೀದ್ರಸಿನಲ್ಲಿರುವಂತೆ ಇಲ್ಲಿಯೂ ಪ್ರೇಮದ ಮೀಮಾಂಸೆ ಐಂದ್ರಿಯಿಕ ಸ್ತರದಿಂದ ಆರಂಭವಾಗಿ ಪರಮಾತ್ಮನೊಡನೆ ಆತ್ಮದ ಐಕ್ಯವಾಗುವ ಸಾಕ್ಷಾತ್ಕಾರದವರೆಗೂ ಸಾಗುತ್ತದೆ. ಸಾಕ್ರಟೀಸ್ ಇಂಥ ಜೀವನ್ಮುಕ್ತನಾದ ವ್ಯಕ್ತಿಯಾದರೆ ಕೇವಲ ಪ್ರಾಪಂಚಿಕ ಸುಖಕ್ಕಾಗಿ ಆಧ್ಯಾತ್ಮಿಕ ಆನಂದವನ್ನು ವ್ಯಕ್ತಿಯಾದರೆ ಕೇವಲ ಪ್ರಾಪಂಚಿಕ ಸುಖಕ್ಕಾಗಿ ಆಧ್ಯಾತ್ಮಿಕ ಆನಂದವನ್ನು ಬಲಿಗೊಟ್ಟ ಅ್ಯಲ್ಸಿಬಿಡೀಸ್ ಅವನಿಗೆ ತೀರ ವಿರುದ್ಧಸ್ವಭಾವದ ವ್ಯಕ್ತಿಯಾಗಿ ಇಲ್ಲಿ ಚಿತ್ರಿತವಾಗಿದ್ದಾರೆ.
  • ಪ್ಲೇಟೋ ಗೀಕರಲ್ಲೆಲ್ಲ ಉತ್ತಮ ಗದ್ಯಲೇಖಕನೆಂಬ ಕೀರ್ತಿಯನ್ನುಗಳಿಸಿದ್ದಾನೆ. ಇವನಲ್ಲಿ ಶಬ್ದಸಂಪತ್ತು. ಸೂಕ್ಷ್ಮ ಅರ್ಥವ್ಯಕ್ತಿ, ಸಹಜಸುಂದರ ಸಂವಾದಶೈಲಿ, ಉತ್ತಮ ವಕ್ತ್ಯತ್ವಕಲೆ, ಪ್ರತಿಭಾಸ್ಪೂರ್ತಿ, ಸರಸತೆ, ಹಾಸ್ಯ, ವಿಡಂಬನೆ, ಗಾಂಭೀರ್ಯ, ಸಮಯೋಚಿತವಾದ ಭಾಷಾಮಾಧುರ್ಯ ಹಾಗೂ ಕಾರ್ಕಶ್ಯ, ಉಪಮಾ-ರೂಪಕಾದಿ ಅಲಂಕಾರಗಳ ಸೌಂದ್ರ್ಯ, ಪಾತ್ರಚಿತ್ರಣ ಸಾಮಥ್ರ್ಯ-ಎಲ್ಲವೂ ಸಮರಸವಾಗಿ ಸಮ್ಮೀಳಿತವಾಗಿರುವುದರಿಂದ ಶೈಲಿ ನಿರುಪಮವಾಗಿದೆ. ಇವನ ಗ್ರಂಥಗಳಲ್ಲಿ ಕೆಲವು ವರ್ಣನಾತ್ಮಕ; ಕೆಲವು ಪ್ರಭಾವ ಪ್ರಚೋದಕ; ಎಲ್ಲವೂ ತತ್ತ್ವಶಾಸ್ತ್ರದ ವಿಷಯ ವಿಶೆÉ್ಲೀಷಣೆಯಲ್ಲಿ ಪ್ರಮಾಣಕ. ಈತ ನಾಟಕತಂತ್ರ ಹಾಗೂ ಭಾಷಣಕಲೆಗಳೆರಡನ್ನೂ ಸಮಯೋಚಿತವಾಗಿ ಬಳಸಿದ್ದಾನೆ. ಇವನು ಮುಖ್ಯವಾಗಿ ತರುಣ ಶ್ರೋತೃಗಳನ್ನೇ ಉದ್ದೇಶಿಸಿ ಬರೆದಿದ್ದಾನೆ; ಪರಿಣಾಮಕಾರಿಯಾಗಿ ತನ್ನ ಚಿಂತನೆಗಳನ್ನು ಪ್ರಕಟಿಸಿದ್ದಾನೆ. (ಕೆ.ಕೆ.)

ತತ್ತ್ವಶಾಸ್ತ್ರ- ಸೌಂದರ್ಯ ಮೀಮಾಂಸೆ[ಬದಲಾಯಿಸಿ]

  • ತತ್ತ್ವಶಾಸ್ತ್ರದಲ್ಲೂ ಸೌಂದರ್ಯ ಮೀಮಾಂಸೆಯಲ್ಲೂ ಪ್ಲೇಟೋನ ಸ್ಧಾನ ಅತ್ಯುಚ್ಚವಾದದ್ದು, ಅನ್ಯಾದೃಶವಾದದ್ದು. ಕಾವ್ಯ ವಿಮರ್ಶೆಯಲ್ಲಾದರೂ ಅವನ ಪ್ರಾಬಲ್ಯ ಅಷ್ಟೊಂದು ಹೆಚ್ಚಾಗಿಲ್ಲ. ಇಷ್ಟವಿಲ್ಲದೆ, ತನ್ನ ಸಂಕಲ್ಪಕ್ಕೆ ವಿರುದ್ಧವಾಗಿ, ಅವನು ಆ ಕೆಲಸಕ್ಕೆ ಕೈಯಿಕ್ಕಿದಂತೆ ಭಾಸವಾಗುತ್ತದೆ. ಫೀದ್ರಸ್ ಮತ್ತು ಇಯಾನ್ ಸಂವಾದಗಳು ವಿಮರ್ಶೆಯಿಂದ ತುಂಬಿಕೊಂಡಿವೆ. ರಿಪಬ್ಲಿಕ್ ಹಾಗೂ ಲಾಸ್ ಗ್ರಂಥಗಳಲ್ಲಿ ಕವಿಗಳ ವಿಷಯ ಅಲ್ಲಲ್ಲಿ ಚರ್ಚೆಗೀಡಾಗಿದೆ. ಇತರ ಸಂವಾದಗಳಲ್ಲೂ ಕವಿ ಮತ್ತು ಕಾವ್ಯದ ಪ್ರಸ್ತಾಪ ಉಂಟು. ಎಲ್ಲಿಯೇ ಬಂದರೂ ಯಾವ ರೀತಿಯಲ್ಲಿ ವಚನಿಸಿದ್ದರೂ ಕವಿಗಳನ್ನು ಕುರಿತ ಅವನ ಟಿಚಿಠಿe ಸಾಧಾರಣವಾಗಿ ಖಂಡನೆಯಿಂದ ಕೂಡಿದೆ. ಹೆಚ್ಚುಕಡಿಮೆ ಸತ್ಯಾಂಶಕ್ಕೆ ವಿರುದ್ಧವಾಗಿದೆ.
  • ಪ್ಲೇಟೋ ಎಂದ ಕೂಡಲೆ ಆವರ್ತ ಸಿದ್ಧಾಂತ (ತೀಯೊರಿ ಆಫ್ ಐಡಿಯಾಸ್) ಜ್ಞಾಪಕಕ್ಕೆ ಬರುತ್ತದೆ. ಅದನ್ನು ಕಾವ್ಯಕ್ಕೆ ಅನ್ವಯಿಸುವಾಗ ಈತ ಪಕ್ಷಪಾತಿಯಾದ. ಭ್ರಾಂತಿಗೀಡಾದ, ತಪ್ಪುಗಳನ್ನು ಮಾಡಿದ್ದಾನೆ. ಆದರ್ಶವನ್ನು ಅನುಕರಿಸುವುದೇ ಎಲ್ಲರ ಎಲ್ಲ ಕೃಷಿಯ ಉದ್ದೇಶವೆಂಬ ವಿಷಯ ಇವನಿಗೊಂದು ಧರ್ಮ ಸೂತ್ರ. ಹಾಗೆ ಅನುಕರಿಸುವವರಲ್ಲಿ, ಉಪಯುಕ್ತವಿದ್ಯೆಯ ಕಲೆಗಾರ ಮೇಲೆ. ಕವಿ ಕೆಳಗೆ-ಎಂದು ಇವನಿಗೆ ತೋರಿಬಂತುಲ. ಆದ್ದರಿಂದ ಕಾವ್ಯದಲ್ಲಿ ಎದ್ದು ಕಾಣುವುದು ಆದರ್ಶಸತ್ಯ ಆದರ್ಶಸೌಂದರ್ಯಗಳ ನಕಲಿನ ನಕಲು. ಈ ಅಭಿಪ್ರಾಯ ನಿಜಾಂಶಕ್ಕೆ ಹೊಲ್ಲ. ಅಲ್ಲದೆ, ಅನುಕರಣೆ ಎನ್ನುವ ಕವಿ ಕರ್ತವ್ಯವನ್ನು ಈತ ಬಹಳ ಒತ್ತಿ ಹೇಳಿದ. ವಿಪರೀತ ದೂರಕ್ಕೆ ಕೊಂಡೊಯ್ದ.ತಾನೇ ಹೃದಯಂಗಮವಾಗಿ ವರ್ಣಿಸಿರುವ ಕವಿತಾವೇಶವನ್ನೂ ಅದರ ನೇರ ಸೃಷ್ಟಿಕಾರ್ಯವನ್ನು ಏತಕ್ಕೋ ಹಲವು ಸಂದರ್ಭಗಳಲ್ಲಿ ತಾನೇ ಮರೆತು ಬಿಟ್ಟಿದ್ದಾನೆ. ತನಗೇ ಚೆನ್ನಾಗಿ ಗೊತ್ತಿತ್ತು. ಪ್ರತಿಭಾವಂತ ಕವಿ ಮಾದರಿಯನ್ನು ಮುಂದಿಟ್ಟುಕೊಂಡು ಚಾಚೂ ತಪ್ಪದಂತೆ ಅದರ ಪ್ರತಿಬಿಂಬವನ್ನು ತಯಾರಿಸುವ ಕ್ಷುದ್ರ ಕಲೆಗಾರ ಸಲ್ಲನೆಂಬ ಸಂಗತಿ. ಆದರೂ ಕವಿ ಗಡಣವನ್ನು ಹಳಿಯುವಾಗ ಎಲ್ಲ ದರ್ಜೆಯ ಕವಿಗಳನ್ನೂ ಕಲೆಹಾಕಿ ಒಟ್ಟಾರೆ ಎಲ್ಲರನ್ನು ನಿಂದಿಸುವುದು ಇವನಲ್ಲಿ ಕಂಡುಬರುತ್ತದೆ.

ಪ್ಲೇಟೋನ- ವಿರೋಧ[ಬದಲಾಯಿಸಿ]

  • ಕವಿಗಳ ಮೇಲೆ ಪ್ಲೇಟೋ ಆರೋಪಿಸಿದ ಅಪರಾಧಗಳು ಇವು: (1) ದೇವತೆಗಳೂ ಮನುಷ್ಯರಂತೆ ಚಿತ್ತಚಾಪಲ್ಯಕ್ಕೆ ಪಕ್ಕಾಗಿ, ವಂಚನೆ ಅನೃತ ಕ್ರೌರ್ಯ ಮೊದಲಾದ ದುಷ್ಕಾರ್ಯದಲ್ಲಿ ಅನುರಕ್ತರಾಗುತ್ತಾರೆ ಎಂದು ಕಥೆ ಹೇಳುತ್ತ ಕವಿಗಳು ದೇವವರ್ಗಕ್ಕೆ ಅನ್ಯಾಯ ಮಾಡಿ ಸುಳ್ಳು ಹೇಳಿದ್ದಾರೆ. ಪ್ಲೇಟೋನಂಥ ಗಾಢ ತತ್ತ್ವಜ್ಞ ಗ್ರೀಕರಿಗೆ ಬಳಕೆಯಾಗಿದ್ದು ಕವಿಗಳಿಗೆ ವಿಷಯ ಸಾಮಗ್ರಿಯನ್ನು ಒದಗಿಸುತ್ತಿದ್ದ ಆದ್ಯ ಪೌರಾಣಿಕ ಕಥಾವಳಿಯ ಕಡೆಗೆ ಲಕ್ಷ್ಯಕೊಡದೆ ಹೋದದ್ದು ನಿಜವಾಗಿ ಒಂದು ಕೌತುಕ. (2) ಕಣ್ಣೀರು ಬರಿಸುವ ಪ್ರಸಂಗಗಳನ್ನು ಮನಮೋಹಕವಾಗಿ ವಾಚನ ಮಾಡುತ್ತ. ನಾಟಕಾಲಯದಲ್ಲಿ ಅವನ್ನು ಪರಿಣಾಮಕರವಾಗಿ ಅಭಿನಯಿಸಿ ತೋರಿಸುತ್ತ, ಕರುಣರಸವನ್ನು ತಾನೆ ತಾನಾಗಿ ಉಕ್ಕಿಸಿ, ಸ್ರೋತೃಗಳು ಅಧೈರ್ಯವಂತರೂ ಅಸಮರ್ಥರೂ ಆಗುವಂತೆ ಮಾಡುತ್ತಾರೆ. ಇದು ರಾಷ್ಟ್ರದ ಭದ್ರತೆಗೆ ಅಪಾಯ; ಆದ್ದರಿಂದ ಕವಿಗಳಿಗೂ ದೇಶದ್ರೋಹಿಗಳಿಗೂ ವ್ಯತ್ಯಾಸವಿಲ್ಲ ಎಂಬುದು ಇವನ ತರ್ಕ, ಇಲ್ಲಿ ಇವನ ನೋಟ ವ್ಯವಹಾರಗಳ ಮೇಲು ಮೇಲಣ ತೋರ್ಕೆಯನ್ನು ಮಾತ್ರ ಲೆಕ್ಕಿಸದಂತೆ ಕಾಣುತ್ತದೆ. ಕಾವ್ಯ ನಾಟಕಗಳು ದೊರಕಿಸುವ ಗಂಭೀರಾನುಭವವನ್ನು ಅದರ ಪರಿವರ್ತನ ಪ್ರಭಾವವನ್ನು ಅದು ಗಮನಿಸಲಿಲ್ಲ. (3) ಇವನ ಈ ದೃಷ್ಟಿಮಾಂದ್ಯವೆ ಇನ್ನೊಂದು ಕೆಡುಕನ್ನು ಕವಿಗಳ ಮೇಲೆ ಹೊರಿಸಿತು. ಲೌಕಿಕವೂ ಸಾಮಾನ್ಯವೂ ಆದ ವೃತ್ತಾಂತಗಳಿಗೆ ಮೆರುಗು ಕೊಟ್ಟು ಸಾಮಾಜಿಕರು ಅವುಗಳಲ್ಲಿ ತಲ್ಲೀನರಾಗುವಂತೆ ಮಾಡಿ ಅವರ ಚಿತ್ತ ಉದಾತ್ತ ತತ್ತ್ವಗಳ ಕಡೆಗೆ ತಿರುಗದಂತೆ ಕವಿಗಳು ನಿರ್ಬಂಧಿಸುತ್ತಾರೆ. ಎಂದ ಮೇಲೆ ಸತ್ಪ್ರಜೆಗಳೂ ಸಮರ್ಥ ಪ್ರಜೆಗಳೂ ಹೇಗೆ ಉದಿಸಿಯಾರು? ಕಾವ್ಯ ನಾಟಕಗಳಿಂದ ಪರಿಪೋಷಿತವಾಗುವ ಪ್ರಜಾವರ್ಗ ಅದಮವರ್ಗವಾಗದೆ ಮತ್ತೇನು? ಈ ಆಕ್ಷೇಪದ ವಿಕಟಿತ್ವ ಪ್ಲೇಟೋನ ಮನಸ್ಸನ್ನು ತಾಕಲಿಲ್ಲ.
  • ಪೂರ್ವಾಪರ ವಿರೋಧ ಪ್ಲೇಟೋನಲ್ಲಿ ಕಾಣಬರುತ್ತದೆ. ಕವಿಗಳನ್ನು ಪೂರ್ತಿ ಕೈಬಿಡುವ ಹಾಗಿಲ್ಲವೆಂದು ತಾನೆಏ ಒಪ್ಪಿಕೊಂಡಿದ್ದಾನೆ. ಅವರಷ್ಟು ಚಿತ್ತಾಕರ್ಷಕವಾಗಿ ಮತ್ತಾರು ಬರೆದಾರು? ಅವರಂತೆ ಜನರನ್ನು ಮುಗ್ಧಗೊಳಿಸುವವರು ಮತ್ತಾರು? ಆದ್ದರಿಂದ ಕವಿಗಳನ್ನು ಸಮಾಜದೊಳಕ್ಕೆ ಸೇರಗೊಡಬೇಕು; ಆದರೆ ಅವರಿಗೆ ಯಾವ ಸ್ವಾತಂತ್ರ್ಯವನ್ನೂ ಕೊಡದೆ ಯಾವುದನ್ನು ಯಾವರೀತಿ ಯಾರಿಗೆ ಬೋಧಿಸಬೇಕು ಎಂಬ ಶಿಸ್ತಿನ ಕಾರ್ಯಕ್ರಮವನ್ನು ನಿಗದಿ ಮಾಡಿಕೊಟ್ಟ. ಅದನ್ನು ಅವರು ನೆರವೇರಿಸುವಾಗ ಅವರ ಮೇಲೆ ಕಟ್ಟುನಿಟ್ಟಿನ ಉಸ್ತುವಾರಿಯನ್ನು ಸದಾ ಇಟ್ಟು, ಹತೋಟಿ ಮೀರದಂತೆ ಅವರನ್ನು ನೋಡಿಕೊಳ್ಳುವುದು ಆಡಳಿತಗಾರರ ಕರ್ತವ್ಯ-ಎಂದ, ಇಂಥ ಅಂಕೆಗೆ ಶ್ರೇಷ್ಠ ಸಾಹಿತಿಯಾದ ಪ್ಲೇಟೋನೆ ಸಿಕ್ಕಿಕೊಂಡಿದ್ದರೆ, ಅವನಿಂದ ಯಾವ ಲೇಖನ ಆಗುತ್ತಿದ್ದಿತೊ ಹೇಳಲಾಗದು.

ಉಪಸಂಹಾರ[ಬದಲಾಯಿಸಿ]

  • ಪ್ಲೇಟೋನ ಕಾವ್ಯವಿಮರ್ಶೆ ಹೀಗೆ ದೋಷಯುಕ್ತವಾಗಿದ್ದರೂ ಅದನ್ನು ನಾವೇಕೆ ಗಣನೆಗೆ ತೆಗೆದುಕೊಳ್ಳಬೇಕು. ಅದೇ ಪ್ಲೇಟೋನ ಮಹಾತ್ಮೆ. ಅನೇಕ ವಿಮರ್ಶಕರ ನ್ಯಾಯವಾಕ್ಯಗಳಿಗಿಂತಲೂ ಪ್ಲೇಟೋನ ಮಹಾತ್ಮ್ಯ. ಅನೇಕ ವಿಮರ್ಶಕರ ನ್ಯಾಯವಾಕ್ಯಗಳಿಗಿಂತಲೂ ಪ್ಲೇಟೋನ ಅನ್ಯಾಯ ವಾಕ್ಯಗಳು ಹೆಚ್ಚು ಬೆಳಕನ್ನೂ ಸ್ಪೂರ್ತಿಯನ್ನೂ ನೀಡಬಲ್ಲುವು-ಎಂದಿದ್ದಾರೆ ವಿದ್ವಾಂಸರು. ಅದು ದಿಟ. ಇನ್ನು ಕೆಲವರು ಪ್ಲೇಟೋಗೆ ಕಾವ್ಯವೆಂದರೆ ಅಪಾರ ವಾಂಛಲ್ಯ. ಆದ್ದರಿಂದಲೇ ಕವಿಗಳ ಮೇಲೆ ಎಂದರೆ ಕುಕವಿಗಳ ಮೇಲೆ ಅವನಿಗೆ ಪರಮಾಗ್ರಹ ಎಂಬ ಸಮಾಧಾನವನ್ನು ಅವನ ಪರ ಆಡಿದ್ದಾರೆ. ಅವನು ಒಂದಾವರ್ತಿ ಹೇಳಿದ ವಿವರಣೆ 'ಕೋಮಲವಾದ ರೆಕ್ಕೆ ಕೆದರಿ ಹಾರಿ ಹೋಗುವ, ಪವಿತ್ರ ವಸ್ತು ಕವಿ" (ದಟ್ ಲೈಟ್‍ವಿದಂಗ್ಡ್ ಅಂಡ್ ಸೇಕ್ರೆಡ್ ತಿಂಗ್ ದಿ ಪೊಯೆಟ್) ಎಂಬ ವಚನ ಅವನ ಸಾರಸ್ವತ ಪಾತಕವನ್ನು ನಿವಾರಿಸುವ ಮಂತ್ರವಾಗಿದೆ. ಕವಿಪ್ರತಿಭೆ, ಕಾವ್ಯಾನಂದ ಹಾಗೂ ನೈಜಕಾವ್ಯಗಳನ್ನು ಅವನಂತೆ ಯಥಾವತ್ತಾಗಿ ರಸವತ್ತಾಗಿ ಜ್ಞಾನಪ್ರದವಾಗಿ ಬಣ್ಣಿಸಿರುವವರು ಅತಿ ವಿರಳ. ಪ್ಲೇಟೋ ಕರಳಿಸದಿದ್ದರೆ ಅರಿಸ್ಟಾಟಲ್ ತನ್ನ ಅಮೂಲ್ಯ ವಿಮರ್ಶೆಯನ್ನು ರಚಿಸುತ್ತಿದ್ದನೊ ಇಲ್ಲವೊ! (ಎಸ್.ವಿ.ಆರ್.)
  • ಸೌಂದರ್ಯ ಮೀಮಾಂಸೆ: ರಿಪಬ್ಲಿಕ್ ಮತ್ತು ಸಿಂಪೋಸಿಯಂ ಎಂಬ ಗ್ರಂಥಗಳಲ್ಲಿ ಈ ವಿಷಯ ಅಡಕವಾಗಿದೆ. ಸಿಂಪೋಸಿಯಮ್ ಗ್ರಂಥದಲ್ಲಿ ಹೇಳಿರುವಂತೆ ಸೌಂದರ್ಯದ ಸ್ವರೂಪ ಅಸದೃಶ, ಶಾಶ್ವತ, ಕ್ಷಯ ವೃದ್ಧಿರಹಿತ ಸಾಪೇಕ್ಷವಲ್ಲದ್ದು ಏಕಾಂತಿಕ[೧][೨]

ಉಲ್ಲೇಖ[ಬದಲಾಯಿಸಿ]

ಪ್ಲೇಟೋನ ಕೃತಿಗಳು[ಬದಲಾಯಿಸಿ]

  1. ದಿ ರಿಪಬ್ಲಿಕ್.
  2. ಸ್ಟೇಟ್ಸಮನ್.
  3. ದಿ ಲಾಸ್.
  4. ಡಯಲಗ್.
  5. ಅಪಾಲಜಿ.

ಪ್ಲೇಟೋನಿಂದ ರಚಿತವಾದ ಈ ಗ್ರಂಥಗಳಲ್ಲಿ ('ದಿ_ ರಿಪಬ್ಲಿಕ್') ಒಂದು ರಾಜಕೀಯ ಮತ್ತು ನೈತಿಕ ಉದ್ಗ್ರಂಥ. ಈ ಗ್ರಂಥವು ಪ್ಲೇಟೋನ* ಹೆಸರನ್ನು ಶಾಶ್ವತಗೊಳಿಸಿದೆ.

ನೋಡಿ[ಬದಲಾಯಿಸಿ]

[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ಲೇಟೋ]


ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಪ್ಲೇಟೊ]]
  • Other resources:
    •  Herbermann, Charles, ed. (1913). "Plato and Platonism" . Catholic Encyclopedia. New York: Robert Appleton Company. {{cite encyclopedia}}: Cite has empty unknown parameters: |HIDE_PARAMETER4=, |HIDE_PARAMETER2=, |HIDE_PARAMETERq=, |HIDE_PARAMETER20=, |HIDE_PARAMETER5=, |HIDE_PARAMETER8=, |HIDE_PARAMETER7=, |HIDE_PARAMETER6=, |HIDE_PARAMETER9=, |HIDE_PARAMETER1=, and |HIDE_PARAMETER3= (help)
    • Website on Plato and his works: Plato and his dialogues by Bernard Suzanne
    • Approaching Plato: A Guide to the Early and Middle Dialogues

ಉಲ್ಲೇಖ[ಬದಲಾಯಿಸಿ]

  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ಲೇಟೋ
  2. [Plato- Definition;by Joshua J. Mark ;published on 02 September 2009]
"https://kn.wikipedia.org/w/index.php?title=ಪ್ಲೇಟೊ&oldid=1209891" ಇಂದ ಪಡೆಯಲ್ಪಟ್ಟಿದೆ