ಪ್ರಧಾನ ಮಂತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಪ್ರಧಾನಮಂತ್ರಿ ಅಥವಾ ಪ್ರಧಾನಿಗಳು ಸಂಸದೀಯ ವ್ಯವಸ್ಥೆಯಲ್ಲಿ ಸರ್ಕಾರದ ಕಾರ್ಯಾಂಗ ಶಾಖೆಯ ಮಂತ್ರಿಮಂಡಲದ ಅತ್ಯಂತ ಹಿರಿಯ ಸಚಿವರು. ಅನೇಕ ವ್ಯವಸ್ಥೆಗಳಲ್ಲಿ, ಪ್ರಧಾನಮಂತ್ರಿಗಳು ಮಂತ್ರಿಮಂಡಲದ ಇತರ ಸದಸ್ಯರನ್ನು ಆಯ್ಕೆ ಮಾಡುತ್ತಾರೆ, ವಜಾ ಮಾಡುತ್ತಾರೆ, ಸರ್ಕಾರದಲ್ಲಿ ಅವರಿಗೆ ಹುದ್ದೆಗಳನ್ನು ಗೊತ್ತುಪಡಿಸುತ್ತಾರೆ. ಅನೇಕ ವ್ಯವಸ್ಥೆಗಳಲ್ಲಿ, ಪ್ರಧಾನಿಯು ಮಂತ್ರಿಮಂಡಲದ ಸದಸ್ಯ ಹಾಗೂ ಅಧ್ಯಕ್ಷರು. ಕೆಲವೊಂದು ವ್ಯವಸ್ಥೆಗಳಲ್ಲಿ ಪ್ರಧಾನಿಗಳು (ಮುಖ್ಯವಾಗಿ ಸರ್ಕಾರದ ಅರೆ ಅಧ್ಯಕ್ಷೀಯ ವ್ಯವಸ್ಥೆಗಳಲ್ಲಿ) ರಾಷ್ಟ್ರ ಪ್ರಮುಖನ ನಿರ್ದೇಶನಗಳನ್ನು ಜಾರಿಗೊಳಿಸಲು ಮತ್ತು ನಾಗರಿಕ ಸೇವೆಗಳನ್ನು ನಿರ್ವಹಿಸಲು ನೇಮಕವಾದ ಅಧಿಕಾರಿ ಆಗಿರುತ್ತಾರೆ .

ಲಂಡನ್ನಿನ ಪಾರ್ಲಿಮೆಂಟ್ ವ್ಯವಸ್ಥೆಯ ಮಾದರಿಯ ಸಂಸದೀಯ ವ್ಯವಸ್ಥೆಗಳಲ್ಲಿ, ಪ್ರಧಾನ ಮಂತ್ರಿಯು ಕಾರ್ಯಾಂಗದ ಮುಖ್ಯಸ್ಥರೂ ಸರಕಾರದ ಮುಖ್ಯಸ್ಥರೂ ಅಗಿರುತ್ತಾರೆ. ಅಂತಹ ವ್ಯವಸ್ಥೆಗಳಲ್ಲಿ, ರಾಷ್ಟ್ರದ ಪ್ರಮುಖ ಅಥವಾ ರಾಜ್ಯದ ಅಧಿಕೃತ ಪ್ರತಿನಿಧಿ ಮುಖ್ಯಸ್ಥನು (ಅಂದರೆ ರಾಜ, ಅಧ್ಯಕ್ಷ, ರಾಷ್ಟ್ರಪತಿ ಅಥವಾ ಗವರ್ನರ್ ಜನರಲ್) ಸಾಮಾನ್ಯವಾಗಿ ಅಲಂಕಾರಿಕ ಹುದ್ದೆಯನ್ನು ಹೊಂದಿರುತ್ತಾರೆ. ಆದರೆ ಅವರಿಗೇ ಮೀಸಲಾದ ಕೆಲವು ಅಧಿಕಾರಗಳೂ ಇರಬಹುದು.

ಪ್ರಧಾನಮಂತ್ರಿಗಳು ಸಾಮಾನ್ಯವಾಗಿ ಸಂಸತ್ತಿನ ಸದಸ್ಯನಾಗಿರುತ್ತಾರೆ. ಅವರೂ ಮಂತ್ರಿಮಂಡಲದ ಕೆಲವು ಹುದ್ದೆಗಳನ್ನು ಹೊಂದಿರಬಹುದು.