ಪ್ರಕಾಶ್ ರೈ
ಪುತ್ತೂರು ಮೂಲದ ಬಂಟ ಮನೆತನದಲ್ಲಿ೧೯೬೫ ಮಾರ್ಚ್ ೨೬ ಜನಿಸಿದವರು ಪ್ರಕಾಶ್ ರೈ. ಬೆಂಗಳೂರಿನಲ್ಲಿ ಸೈಂಟ್ ಜೋಸೆಫ್ಸ್ ಓದಿನ ಸಮಯದಲ್ಲಿ ನಾಟಕಗಳಲ್ಲಿ ನಟಿಸಿ ಮುಂದೆ ಹವ್ಯಾಸಿ ರಂಗಭೂಮಿ ಮತ್ತು ದೂರದರ್ಶನದ ಪಾತ್ರಗಳಿಗೆ ಬಂದರು. ಅಂದಿನ ದಿನದಲ್ಲಿ ಬರುತ್ತಿದ್ದ ಗುಡ್ಡದ ಭೂತ, ಬಿಸಿಲು ಕುದುರೆ ಇತ್ಯಾದಿ ದೂರದರ್ಶನದ ಪಾತ್ರ ಹಾಗೂ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಲ ನೂಕುತ್ತಿದ್ದ ಹುಡುಗನಿಗೆ ಹರಕೆಯ ಕುರಿ ಎಂಬ ಚಿತ್ರದಲ್ಲಿನ ಅಭಿನಯ ಚಿತ್ರ ವಿಮರ್ಶಕರ ಮೆಚ್ಚುಗೆ ಗಳಿಸಿತು. ಜೊತೆಗೆ ಆ ಚಿತ್ರದಲ್ಲಿ ನಟಿಸಿದ್ದ ಪ್ರಸಿದ್ಧ ನಟಿ ಗೀತ ಅವರು ನಮ್ಮ ಹುಡುಗನನ್ನು ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರಿಗೆ ಪರಿಚಯಿಸಿದರು. ಮುಂದಿನದು ಇತಿಹಾಸ. ಬಾಲಚಂದರ್ ಗರಡಿಯಲ್ಲಿ ಪಳಗಿ ಯಶಸ್ಸು ಗಳಿಸಿದ ಮೇಲೆ ಇವರಿಗೆ ಬಿಡುವು ಸಿಗದಷ್ಟು ನಿರಂತರ ಕೆಲಸ.ನಂತರ ಇವರ ಹೆಸರು ಪ್ರಕಾಶ್ ರಾಜ್ ಎಂದಾಗಿ ಬದಲಾಯಿತು. ಎಲ್ಲಾ ತಮಿಳು ಚಿತ್ರಗಳಲ್ಲೂ, ತೆಲುಗು ಚಿತ್ರಗಳಲ್ಲಿಯೂ ಇವರು ಇರಲೇಬೇಕು ಎನ್ನುವಂತಾಗಿ ಹೋಯಿತು. ಮಲಯಾಳಂನಲ್ಲೂ ಪ್ರಸಿದ್ಧರಾದರು. ಇವರು ಸರಾಗವಾಗಿ ನಟಿಸುವ ರೀತಿ, ಸಂಭಾಷಣೆ ಹೇಳುವ ಪರಿ, ಶಾರೀರಿಕ ಅಭಿವ್ಯಕ್ತಿ ಇವರನ್ನು ಉತ್ತುಂಗಕ್ಕೇರಿಸಿತು. ಬಹಳಷ್ಟು ನಿರ್ಮಾಪಕ ನಿರ್ದೇಶಕರು ಆತನನ್ನು ಉಪಯೋಗಿಸಿಕೊಂಡು ಇವರನ್ನು ಶ್ರೀಮಂತನನ್ನಾಗಿಸಿ ತಾವೂ ಶ್ರೀಮಂತರಾಗುವಂತಹ ವಾಣಿಜ್ಯಕ ವ್ಯವಹಾರ ಧ್ಯೇಯದ ಚಿತ್ರಗಳನ್ನು ನಿರ್ಮಿಸಿದ್ದೇ ಹೆಚ್ಚು. ಅವುಗಳಲ್ಲಿ ನಾಯಕಿಗೆ ಅಪ್ಪನಾಗಿ ನಾಯಕನಿಗೆ ಖಳನಾಗಿ ಮೂಡಿದ್ದುದು ಬಹುಪಾಲು.ನಿರ್ದೇಶಕರಾದ ಕೆ.ಬಾಲಚಂದರ್,ಮಣಿರತ್ನಂ,ಪ್ರಿಯದರ್ಶನ್, ನಾಗಾಭರಣ ಅಂತಹವರಿಗೆ ಇವರ ಸಾಮರ್ಥ್ಯ ಕೂಡಾ ಗೊತ್ತಿತ್ತು.
ಪ್ರಕಾಶ್ ರೈ ೧೯೯೮ರ ವರ್ಷದಲ್ಲಿ ಇರುವರ್ ಚಿತ್ರದಲ್ಲಿನ ಪೋಷಕ ಪಾತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು. ೧೯೯೯ , ೨೦೦೨ , ೨೦೦೩ ರ ವರ್ಷಗಳಲ್ಲಿ ಇವರ ಅಭಿನಯ ರಾಷ್ಟ್ರಪ್ರಶಸ್ತಿ ಆಯ್ಕೆ ಮಂಡಳಿಯ ವಿಶೇಷ ಜ್ಯೂರಿಗಳ ಮೆಚ್ಚುಗೆ ಪಡೆಯಿತು. ೨೦೦೩ರ ವರ್ಷದಲ್ಲಿ ವಿಶೇಷ ಜ್ಯೂರಿ ಮೆಚ್ಚುಗೆಯ ಬಹುಮಾನ ನೀಡುವಾಗ ಆ ವರ್ಷದ ತಮಿಳು, ಕನ್ನಡ ಮತ್ತು ತೆಲುಗಿನ ಒಟ್ಟು ಹನ್ನೆರಡು ಚಿತ್ರಗಳಲ್ಲಿ ಪ್ರಶಂಸನೀಯ ಅಭಿನಯ ನೀಡಿದ್ದಾನೆ ಎಂದು ಕೊಂಡಾಡಿತು. ಇದು ಈ ನಟ ಎಷ್ಟು ಸಮರ್ಥ ಎಂಬುದಕ್ಕೆ ಒಂದು ನಿದರ್ಶನ. ರಾಷ್ಟ್ರಪ್ರಶಸ್ತಿಗಳಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಅಂದರೆ ಅವರು ರಾಷ್ಟ್ರಪ್ರಶಸ್ತಿ ಪಡೆಯುವಲ್ಲಿ ಸ್ವಲ್ಪದರಲ್ಲಿ ವಂಚಿತರಾಗಿದ್ದಾರೆ ಎಂದು ಕೂಡಾ ಅರ್ಥವಿದೆ. ಹೀಗೆ ಹಲವು ಬಾರಿ ರಾಷ್ಟ್ರಪ್ರಶಸ್ತಿ ಪ್ರಕಾಶ್ ರೈ ಬಾಗಿಲ ಹೊಸ್ತಿಲವರೆಗೂ ಬಂದು ಕೈಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿತ್ತು. ೨೦೦೮ರ ವರ್ಷದಲ್ಲಿ ಕಾಂಚೀವರಂ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಕಾಶ್ ರೈ ಅವರಿಗೆ ಕಡೆಗೂ ಶ್ರೇಷ್ಠ ನಟ ಪ್ರಶಸ್ತಿ ಸಂದಿತು."ನಮನ"
ತಮಿಳು ,ತೆಲಗು ಚಿತ್ರಗಳಲ್ಲಿ ಪ್ರಕಾಶ್ ರೈ ಅವರಿಗೆ ಸಂದಿರುವ ರಾಜ್ಯ ಮತ್ತು ಫಿಲಂ ಫೇರ್ ಅಂತಹ ಪ್ರಶಸ್ತಿಗಳು ಹಲವಾರು. ಸುಮಾರು ೩೦೦ ಚಿತ್ರಗಳಲ್ಲಿ ನಟಿಸಿರುವ ಪ್ರಕಾಶ್ ರೈ ಆಗಾಗ ಕನ್ನಡದಲ್ಲೂ ಬಂದು ನಟಿಸಿ ಹೋಗುತ್ತಿದ್ದಾರೆ. ಅವರು ನಟಿಸಿದ ‘ನಾಗಮಂಡಲ’ದಲ್ಲಿನ ಅವರ ಅಭಿನಯ ಜನರ ಮನಸ್ಸಿನಲ್ಲಿ ಚಿರಸ್ಮರಣೀಯ. ಇತ್ತೀಚಿನ ವರ್ಷದಲ್ಲಿ ತಾವೇ ತಮ್ಮದೇ ಚಿಂತನೆಯಾದ ತಮಿಳು ಚಿತ್ರದ ಅವತರಣಿಕೆಯ ಕನ್ನಡ ಚಿತ್ರವೊಂದನ್ನು ಗೆಳೆಯ ಸುರೇಶ್ ಜೊತೆಗೂಡಿ ‘ನಾನು ನನ್ನ ಕನಸು’ ಎಂಬ ಚಿತ್ರವಾಗಿಸಿ, ಸ್ವತಃ ನಿರ್ದೇಶಿಸಿ ಉತ್ತಮ ಯಶಸ್ಸು ಕೂಡಾ ಕಂಡರು. ಇನ್ನೂ ಕೆಲವು ಚಿತ್ರಗಳನ್ನು ಅವರು ನಿರ್ಮಿಸುತ್ತಿದ್ದಾರೆ. ಕನ್ನಡದ ಪ್ರೀತಿಗಾಗಿ ಉತ್ತಮ ಚಿತ್ರಕತೆ ಇದ್ದ ಪಕ್ಷದಲ್ಲಿ ಕೆಲವೊಮ್ಮೆ ಹಣ ಕೂಡಾ ಸ್ವೀಕರಿಸದೆ ಕೆಲಸ ಮಾಡಿರುವ ಇವರ ಹೃದಯವಂತಿಕೆ ಕೂಡಾ ದೊಡ್ಡದೇ.ಅಪ್ಪಟ ಕನ್ನಡದ ಪ್ರತಿಭೆಯಾದ ಪ್ರಕಾಶ್ ರೈ ಕನ್ನಡಕ್ಕೆ ಹೆಚ್ಚು ಉಪಯೋಗವಾಗಲಿಲ್ಲವಲ್ಲ ಎಂದು ಒಮ್ಮೊಮ್ಮೆ ಅನಿಸುವುದು ಸಹಜವಾದರೂ ಇವರು ಕನ್ನಡ ಮತ್ತು ತುಳುವಿನಲ್ಲಿ ಆತ್ಮೀಯವಾಗಿ ಸ್ವಚ್ಚವಾಗಿ ಉತ್ತಮ ವಾಗ್ಮಿಯಾಗಿ, ಉತ್ತಮ ಅಭಿರುಚಿಯವರಾಗಿ ಮಾತನಾಡುತ್ತಾರೆ ಮತ್ತು ಇವರು ಕನ್ನಡದ ಅತ್ಯುತ್ಕೃಷ್ಟ ಓದುಗ ಮತ್ತು ಚಿಂತಕರೂ ಆಗಿದ್ದಾರೆ."ನಮನ".
ಪ್ರಕಾಶ್ ರೈ ಸಂದರ್ಶನದ ಯುಟ್ಯೂಬ್ ವೀಡಿಯೋ.
