ಪೋಲೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೋಲೊ ಆಟಗಾರರು

ಪೋಲೊ ಒಂದು ವಿಶಿಷ್ಟ ತಂಡ ಕ್ರೀಡೆಯಾಗಿದ್ದು ಇದರಲ್ಲಿ ಕುದರೆಯನ್ನೇರಿದ ಆಟಗಾರರು ತಮ್ಮ ಎದುರಾಳಿ ತಂಡದ ವಿರುದ್ಧ ಗೋಲು ಗಳಿಸಲು ಶತಾಯಗತಾಯ ಹೋರಾಟ ನಡೆಸುತ್ತಾರೆ. ಆಟಗಾರರು ಕುದುರೆ ಚಲಾಯಿಸುತ್ತಲೇ ಉದ್ದನೆಯ ಹಿಡಿಕೆಯುಳ್ಳ ಸುತ್ತಿಗೆ ಆಕಾರದ ದಂಡವನ್ನು ಬಳಸಿಕೊಂಡು ಪ್ಲಾಸ್ಟಿಕ್‌ ಅಥವಾ ಮರದ ಚಿಕ್ಕ ಚೆಂಡ ನ್ನು ಎದುರಾಳಿಗಳ ಗೋಲ್‌ ಎಡೆಗೆ ಚಲಿಸುತ್ತಾರೆ. ಸಾಂಪ್ರದಾಯಿಕ ಎಂದು ಕರೆಯಲ್ಪಡುವ ಈ ಪೋಲೊ ಕ್ರೀಡೆಯಲ್ಲಿ ವೇಗವೇ ಮುಖ್ಯವಾದ ಅಂಶ ಅದನ್ನು ಹೆಚ್ಚಾಗಿ ೩೦೦ ಗಜ ಉದ್ದವುಳ್ಳ ಹುಲ್ಲುಗಾವಲಲ್ಲಿ ಆಡಲಾಗುತ್ತದೆ ಹಾಗೂ ಪ್ರತಿಯೊಂದು ಪೋಲೊ ತಂಡವೂ ನಾಲ್ಕು ಕುದುರೆ ಸವಾರರನ್ನು ಒಳಗೊಂಡಿರುತ್ತದೆ.

ವೈವಿಧ್ಯತೆಗಳು[ಬದಲಾಯಿಸಿ]

ಕುದುರೆಯ ಬೆನ್ನೇರಿ[ಬದಲಾಯಿಸಿ]

ಇತ್ತೀಚೆಗಿನ ಬದಲಾವಣೆ ಎಂದರೆ ಪೋಲೊ ಅನ್ನು ಒಳಾಂಗಣದಲ್ಲಿ ಆಡಲಾಗುತ್ತಿದೆ. ಇದನ್ನು “ಅರೇನಾ ಪೋಲೊ” ಎಂದು ಕರೆಯಲಾಗುತ್ತದೆ. ಹೊರಾಂಗಣದಲ್ಲಿ ಆಡಿದರೂ ಹವಾಮಾನದ ವೈಪರಿತ್ಯಗಳನ್ನು ತಕ್ಕ ಮಟ್ಟಿಗೆ ನಿಗ್ರಹಿಸುವ ಮಟ್ಟಿಗೆ ಅದನ್ನು ಭಾಗಶಃ ಮುಚ್ಚಲಾಗಿರುತ್ತದೆ (ಕ್ರೀಡೆ ಜರುಗುವ ಕ್ರೀಡಾಂಗಣವೂ ಸಾಕಷ್ಟು ಚಿಕ್ಕದಾಗಿದ್ದು ಸಾಮಾನ್ಯವಾಗಿ ಅದರ ಉದ್ದ ೧೦೦ ಗಜವನ್ನೂ ಮೀರುವುದಿಲ್ಲ). ಈ ಅರೇನಾ ಪೋಲೊದಲ್ಲಿ ಸಾಮಾನ್ಯವಾಗಿ ಪ್ರತಿ ತಂಡವೂ ಮೂವರು ಕ್ರೀಡಾಳುಗಳನ್ನು ಒಳಗೊಂಡಿರುತ್ತದೆ ಮತ್ತು ಗಾಳಿ ತುಂಬಿದ ಚರ್ಮದ ಚೆಂಡನ್ನು ಬಳಸಲಾಗುತ್ತದೆ. ಹೀಗೆ ಸಾಕಷ್ಟು ಸುಧಾರಣೆಗೆ ಒಳಗಾಗಿರುವ ಅರೇನಾ ಪೋಲೊ ಕಾಲಾವಕಾಶದಲ್ಲೂ ಗಮನಾರ್ಹ ಸುಧಾರಣೆ ಹೊಂದಿದೆ. ವಿಶಾಲ ಹುಲ್ಲುಗಾವಲಲ್ಲಿ ಆಡಲ್ಪಡುವ ಹಾಗೂ ೭ ನಿಮಿಷಗಳ ಎಂಟು ಕಾಲಾವಧಿಗಳನ್ನು (ಆಟವಾಡುವ ಸ್ಥರಗಳ ಮೇಲೆ ಅದನ್ನು ನಿರ್ಧರಿಸಲಾಗುತ್ತದೆ) ಹೊಂದಿರುವ ಪೋಲೊ ಆಟಕ್ಕೆ ತದ್ವಿರುದ್ಧವಾಗಿ, ಅರೇನಾ ಪೋಲೊ ಪಂದ್ಯಗಳು ೭ ನಿಮಿಷಗಳ ನಾಲ್ಕು ಕಾಲಾವಧಿಗಳನ್ನು ಹೊಂದಿರುತ್ತವೆ.(ಅವುಗಳನ್ನು ಚಕ್ಕರ್ ಗಳು ಎಂದು ಗುರುತಿಸಲಾಗುತ್ತದೆ). ಪಶ್ಚಿಮ ಅಮೇರಿಕಾದಲ್ಲಿ ವ್ಯಾಪಕವಾಗಿ ಕಂಡುಬರುವ “ಕೌಬಾಯ್ ಪೋಲೊ” ಅರೇನಾ ಪೋಲೊದ ಇನ್ನೊಂದು ಪ್ರಕಾರವಷ್ಟೇ.

ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ’ಬೀಚ್‌ ಪೋಲೊ’ ಎಂಬ ಇನ್ನೊಂದು ಪ್ರಕಾರದ ಪೋಲೊ ಅನ್ನು ದುಬೈ ಹಾಗೂ ಮಿಯಾಮಿಗಳ ಸಮುದ್ರತೀರಗಳಲ್ಲಿ ಆಡಲಾಗುತ್ತದೆ. ಇದು ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ಹೊಸ್ತಿಲು ಎಡತಾಕಿದೆ.

ಇದೇ ರೀತಿ ಉದ್ಭವಿಸಿರುವ ಪೋಲೊದ ಆಧುನಿಕ ಪ್ರಕಾರವೆಂದರೆ “ಸ್ನೋ ಪೋಲೊ”. ಇದನ್ನು ಹೆಚ್ಚಾಗಿ ಹಿಮದಿಂದಲೇ ಆವರಿಸಲ್ಪಟ್ಟ ಸಮತಲ ಕ್ರೀಡಾಂಗಣ ಅಥವಾ ಮಂಜುಗಟ್ಟಿದ ಸರೋವರಗಳ ಮೇಲೆ ಆಡಲಾಗುತ್ತದೆ. ಸ್ನೋ ಪೋಲೊದ ವಿನ್ಯಾಸ ಆಡಲು ದೊರೆತ ಸ್ಥಳಗಳನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ. ಪ್ರತಿಯೊಂದು ತಂಡವೂ ಸಾಮಾನ್ಯವಾಗಿ ಮೂವರು ಆಟಗಾರರನ್ನು ಹೊಂದಿರುತ್ತದೆ ಹಾಗೂ ಗಾಢ ಬಣ್ಣದ ಪ್ಲಾಸ್ಟಿಕ್‌ ಚೆಂಡುಗಳಿಗೆ ಆದ್ಯತೆ ನೀಡಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

೧೯೩೦ರ ದಶಕದಲ್ಲಿ ಆಸ್ಟ್ರೇಲಿಯಾದಲ್ಲಿ ಪೋಲೊ ಜೊತೆಗೆ ಇನ್ನೊಂದು ಜನಪ್ರಿಯ ಆಟ ಲ್ಯಾಕ್ರಾಸ್‌ (ಬಲೆಯುಳ್ಳ ದಾಂಡಿನಿಂದ ಆಡುವ ಚೆಂಡಾಟ) ಅನ್ನು ಸಮ್ಮಿಶ್ರಣಗೊಳಿಸಿ “ಪೋಲೊಕ್ರಾಸ್‌“ ಎಂಬ ನೂತನ ಆಟವನ್ನು ಆವಿಷ್ಕರಿಸಲಾಯಿತು.

ತಂಡದ ರಚನೆ, ಬಳಸುವ ಕ್ರೀಡಾ ಪರಿಕರಗಳು, ನಿಯಮಗಳು ಹಾಗೂ ಲಭ್ಯವಿರುವ ಕ್ರೀಡಾ ಸೌಲಭ್ಯಗಳನ್ನು ಮಾನದಂಡವನ್ನಾಗಿಟ್ಟುಕೊಂಡು ಈ ಕ್ರೀಡೆಗಳನ್ನು ಪ್ರತ್ಯೇಕ ಕ್ರೀಡೆಗಳನ್ನಾಗಿ ಗುರುತಿಸಲಾಗುತ್ತದೆ.

ಇನ್ನಿತರ ಪ್ರಕಾರಗಳು[ಬದಲಾಯಿಸಿ]

ಪೋಲೊ ಎಂದರೆ ಅದೇನು ಕಡ್ಡಾಯವಾಗಿ ಕುದುರೆಯ ಬೆನ್ನೇರಿಯೇ ಆಡಬೇಕಾದ ಕ್ರೀಡೆಯಲ್ಲ. ಕೆನೊ ಪೋಲೊ, ಸೈಕಲ್‌ ಪೋಲೊ, ಒಂಟೆ ಪೋಲೊ, ಗಜ ಪೋಲೊ, ಗಾಲ್ಫ್‌ಕಾರ್ಟ್‌ ಪೋಲೊ, ಸೆಗ್‌ವೇ ಪೋಲೊ ಹಾಗೂ ಯಾಕ್‌ ಪೋಲೊಗಳನ್ನು ಒಳಗೊಂಡಂತೆ ಹಲವು ಬಗೆಯ ಪೋಲೊ ಪ್ರಕಾರಗಳನ್ನು ಮನಸ್ಸಂತೋಷಕ್ಕಾಗಿ ಹಾಗೂ ಪ್ರವಾಸೋದ್ಯಮದ ಉದ್ದೇಶಗಳಿಂದ ನಡೆಸಲಾಗುತ್ತದೆ.

ಇತಿಹಾಸ[ಬದಲಾಯಿಸಿ]

ಈ ಕ್ರೀಡೆಯನ್ನು ಪ್ರಥಮ ಬಾರಿಗೆ ಪರ್ಶಿಯಾ(ಇರಾನ್‌) ರಾಷ್ಟ್ರದಲ್ಲಿ ಕ್ರಿ.ಪೂ.೫ನೇ ಶತಮಾನದಲ್ಲಿ ಅಥವಾ ಅದಕ್ಕಿಂತಲೂ ಪೂರ್ವದಲ್ಲಿ[೧] ಕ್ರಿ.ಶ.೧ ಶತಮಾನದಲ್ಲಿ ಆವಿಷ್ಕರಿಸಲಾಯಿತು ಎಂದು ಹೇಳಲಾಗುತ್ತದೆ[೨]. ಈ ಕ್ರೀಡೆಯನ್ನು ಪ್ರಾರಂಭದಲ್ಲಿ ಚಕ್ರವರ್ತಿಯ ಅಂಗರಕ್ಷಕ ಪಡೆ ಅಥವಾ ಉನ್ನತ ಮಟ್ಟದ ಅಶ್ವದಳಕ್ಕೆ ತರಬೇತಿ ನೀಡಲು ಬಳಸಿಕೊಳ್ಳಲಾಗುತ್ತಿತ್ತು. ತಂಡವೊಂದರಲ್ಲಿ ನೂರಕ್ಕೂ ಮಿಕ್ಕಿದ ಸದಸ್ಯರನ್ನು ಹೊಂದಿರುತ್ತಿದ್ದ ಆ ಯುದ್ಧದಾಹಿ ಬುಡಕಟ್ಟು ಜನಾಂಗದವರ ಆಟ ಮೇಲ್ನೋಟಕ್ಕೆ ಯುದ್ಧದಂತೆಯೇ ಗೋಚರಿಸುತ್ತಿತ್ತು.[೩] ಈ ಮಧ್ಯೆ ಪೊಲೊ ಕ್ರೀಡೆಯನ್ನು ಇರಾನ್‌ನ ರಾಷ್ಟ್ರೀಯ ಕ್ರೀಡೆಯನ್ನಾಗಿ ಘೋಷಿಸಲಾಯಿತು ಹಾಗೂ ಅದನ್ನು ವಿಶೇಷವಾಗಿ ಕುಲೀನ ಮನೆತನದವರೇ ಆಡುತ್ತಿದ್ದರು. ಕ್ರಿ.ಶ. ೬ ನೇ ಶತಮಾನದಲ್ಲಿ ರಾಜ ಕೊರ್ಸೊ ಎರಡನೇ ಪರ್ವೀಜ್‌ ತನ್ನ ಆಸ್ಥಾನಿಕರ ಜೊತೆ ರಾಣಿ ಹಾಗೂ ಆಕೆಯ ಸಖಿಯರೊಡನೆ ಪೊಲೊ ಕ್ರೀಡೆಯಲ್ಲಿ ತೊಡಗುತ್ತಿದ್ದನು ಎಂಬುದಕ್ಕೆ ಆಧಾರಗಳು ಲಭ್ಯವಾಗಿವೆ. ಇದರರ್ಥ, ಪುರುಷ-ಮಹಿಳೆಯರಾದಿಯಾಗಿ ಪ್ರತಿಯೊಬ್ಬರೂ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು.[೪] ಪರ್ಶಿಯನ್ ಸಾಹಿತ್ಯ ಹಾಗೂ ಕಲೆಗಳಲ್ಲೂ ಈ ಕ್ರೀಡೆಯ ಕುರಿತು ಪ್ರಸ್ತಾಪಗಳಿವೆ. ಇರಾನ್‌ ಮೂಲದ ಪ್ರಸಿದ್ಧ ಸಾಹಿತಿ ಹಾಗೂ ಇತಿಹಾಸಕಾರ ಫಿರ್ದೋಸಿ ತಾನು ರಚಿಸಿದ ಮಹಾಕಾವ್ಯ, “ಶಹನಾಮಾ”ದಲ್ಲಿ (ಚಕ್ರವರ್ತಿಗಳ ಮಹಾಕಾವ್ಯ) ತನ್ನ ಸಮಕಾಲೀನ ಸಮಾಜದಲ್ಲಿ, ಅಂದರೆ ೯ ನೇ ಶತಮಾನದಲ್ಲಿ, ಜರುಗಿದ ರಾಜಮನತೆನದ ಪೊಲೊ ಪಂದ್ಯಾವಳಿಗಳ ಕುರಿತು ವಿಸ್ತೃತವಾಗಿ ತಿಳಿಸುತ್ತಾನೆ. ಅದಕ್ಕೂ ಮುಂಚಿತವಾಗಿಯೇ, ಟ್ಯುರೇನಿಯನ್‌ ಸೇನಾಪಡೆ ಹಾಗೂ ಇರಾನ್‌ ಸಾಮ್ರಾಜ್ಯದ ದಂತಕತೆ, ರಾಜ ಸಿಯ್ಯಾವಾಶ್‌ನ ಹಿಂಬಾಲಕರ ನಡುವೆ ನಡೆದ ಪೊಲೊ ಪಂದ್ಯಾವಳಿಯನ್ನು ಫಿರ್ದೋಸಿ ರಮ್ಯವಾಗಿ ಬಣ್ಣಿಸಿದ್ದಾನೆ. ಪೊಲೊ ಕ್ರೀಡೆಯಲ್ಲಿ ಸಿಯ್ಯಾವಾಶ್‌ ತೋರುವ ಕಲೆಗಾರಿಕೆಯನ್ನು ಫಿರ್ದೋಸಿ ತನ್ನ ಈ ಕಾವ್ಯದಲ್ಲಿ ಮುಕ್ತಮನಸ್ಸಿನಿಂದ ಶ್ಲಾಘಿಸಿದ್ದಾನೆ. ಹೀಗೆ ಇರಾನ್‌ನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಪೊಲೊ ಕ್ರೀಡೆಯನ್ನು ಬಣ್ಣಿಸುವ ಫಿರ್ದೋಸ್‌ ಮತ್ತೊಂದು ನಿದರ್ಶನದಲ್ಲಿ ೪ನೇ ಶತಮಾನದಲ್ಲಿ ಇರಾನ್‌ ಅನ್ನು ಆಳುತ್ತಿದ್ದ ಸಸ್ಸಾನಿದ್‌ ರಾಜವಂಶದ ಕುಡಿ ಎರಡನೇ ಶಾಪುರ್ ತನ್ನ ಏಳನೇ ವಯಸ್ಸಿನಲ್ಲಿಯೇ ಪೊಲೊ ಕ್ರೀಡೆಯಲ್ಲಿ ಹಿಡಿತ ಸಾಧಿಸಿದ್ದ ಎನ್ನುತ್ತಾನೆ.[೫]

೧೨೦೬ ರಿಂದ ೧೨೧೦ ವರೆಗೆ ಕೇವಲ ನಾಲ್ಕು ವರ್ಷ ಆಳ್ವಿಕೆ ಮಾಡಿದರೂ ಉತ್ತರ ಭಾರತವನ್ನು ಆಳಿದ ಪ್ರಪ್ರಥಮ ಮುಸ್ಲಿಂ ದೊರೆ ಎಂಬ ಹೆಗ್ಗಳಿಕೆ ಹೊಂದಿರುವ ಸುಲ್ತಾನ್‌ ಕುತ್ಬುದ್ಧಿನ್‌ ಐಬಕ್‌ ೧೨೦೧೦ರಲ್ಲಿ ಪೊಲೊ ಆಡಬೇಕಾದರೆ ಆಕಸ್ಮಿಕವಾಗಿ ಬಿದ್ದು ಮರಣ ಹೊಂದಿದ್ದ. ತನ್ನ ಕುದುರೆಯ ಬೆನ್ನೇರಿ ಪೊಲೊ ಆಡುತ್ತಿದ್ದ (ಪೊಲೊ ಅನ್ನು ಭಾರತೀಯ ಪರಿಭಾಷೆಯಲ್ಲಿ ಚೌಗಾನ್‌ ಎಂದು ಕರೆಯಲಾಗುತ್ತದೆ) ಐಬಕ್‌ ಆಕಸ್ಮಿಕವಾಗಿ ನೆಲಕ್ಕುರುಳಿದ ತನ್ನ ಕುದುರೆಯ ಬೆನ್ನಮೇಲಿನ ಜೀನಿನ ಹಿಡಿಕೆ ತಗುಲಿ ಮರಣ ಹೊಂದಿದ ಎನ್ನುತ್ತದೆ ಇತಿಹಾಸ. ಹೀಗ ಅಕಾಲಿಕ ಮರಣಹೊಂದಿದ ಐಬಕ್‌ನ ಅಂತ್ಯಸಂಸ್ಕಾರವನ್ನು (ಈಗ ಪಾಕಿಸ್ತಾನದಲ್ಲಿರುವ) ಲಾಹೋರ್‌ನ ಅನಾರ್ಕಲಿ ಬಜಾರ್‌ನಲ್ಲಿ ನೆರೆವೇರಿಸಲಾಯಿತು. ಕ್ರಿ.ಶ.೧೨೧೧ ರಲ್ಲಿ ಐಬಕ್‌ನ ಮಗ ಅರಾಮ್ ಮರಣಹೊಂದಿದನು[2], ಹಾಗಾಗಿ ಶಮ್ಸ್-ಉದ್-ದಿನ್ ಇಲ್ತಮಿಶ್ ಟರ್ಕಿಯ ಮನೆತನದ ಇನ್ನೊಬ್ಬ ಮಾಜಿ ಗುಲಾಮನು ಐಬಕ್‌ನ ಮಗಳನ್ನು ಮದುವೆಯಾಗಿ ದೆಹಲಿಯ ಸುಲ್ತಾನನಾಗಿ ಗದ್ದುಗೇರಿದನು.

ಮಧ್ಯಕಾಲೀನ ಯುಗದಲ್ಲಿ ಪೊಲೊ ಕ್ರೀಡೆ ಪರ್ಶಿಯಾದಿಂದ ಬೈಜಾಂಟೈನ್‌ಗಳಿಗೆ (ಜೈಕಾನಿಯನ್ ಎಂದು ಕರೆಯಲಾಗುತ್ತಿತ್ತು) ಹಬ್ಬಿತು. ಈಜಿಪ್ಟ್‌ನ ಅಯ್ಯುಬಿದ್‌, ಮಾಮೆಲುಕೆ ರಾಜಮನೆತನಗಳು ಹಾಗೂ ಲವೆಂತ್‌ಗಳ ಮೇಲೆ ಮುಸ್ಲಿಂ ರಾಜರುಗಳು ಮಾಡಿದ ಆಕ್ರಮಣದೊಂದಿಗೇ ಅವರ ನೆಚ್ಚಿನ ಪೊಲೊ ಕೂಡ ಖಂಡಾಂತರ ಮಾಡಿತು. ಸಲಾದೀನ್‌ ಹಾಗೂ ಬೆಬಾರ್ ತರಹದ ಪ್ರಸಿದ್ಧ ಸುಲ್ತಾನರು ಪೊಲೊ ಕ್ರೀಡೆಯಲ್ಲಿ ಎಲ್ಲಿಲ್ಲದ ಕೌಶಲ್ಯ ಸಾಧಿಸಿದ್ದರು ಹಾಗೂ ತಮ್ಮ ಆಶ್ರಯದಲ್ಲಿ ಆ ಕ್ರೀಡೆ ಪ್ರಜ್ವಲಮಾನವಾಗಿರುವ ಮಟ್ಟಿಗೆ ಪ್ರೋತ್ಸಾಹ ನೀಡಿದರು.[೬] ಇದು ಎಷ್ಟರ ಮಟ್ಟಿಗೆ ವ್ಯಾಪಕವಾಗಿದೆ ಎಂದರೆ ಆ ಕಾಲದ ಮುನ್ಸೂಚಕಗಳಿಂದ ಹಿಡಿದು ಈ ಕಾಲದ ಆಟದ ಕಾರ್ಡುಗಳ ವರೆಗೂ ಪೊಲೊ ದಾಂಡುಗಳು ಚಿತ್ರಿಸಲ್ಪಟ್ಟಿವೆ. ಪೊಲೊ ಬೈಜಾಂಟೈನ್‌ ಸಾಮ್ರಾಜ್ಯದ ಚಕ್ರವರ್ತಿ ಅಲೆಕ್ಸಿಯಸ್ ಕಾಮ್ನೆನಸ್‌ನ ಅತ್ಯಂತ ನೆಚ್ಚಿನ ಕ್ರೀಡೆಯಾಗಿತ್ತು. ನಂತರ ಆತನ ಈ ಪೊಲೊ ಪ್ರೇಮವೇ ಆತನ ಜೀವಕ್ಕೂ ಎರವಾಯಿತು.

ಪರ್ಷಿಯಾದ ಸಫಾವಿದ್ ಸಾಮ್ರಾಜ್ಯದ ಸಮಯದ ಗೇ ಯು ಚೌಗಾನ್‌ನಲ್ಲಿ ಪರ್ಷಿಯಾದ ಕಿರುಚಿತ್ರ ( ಚೆಂಡು ಮತ್ತು ಪೋಲೊ ಮ್ಯಾಲೆಟ್), 1546 AD ಯಲ್ಲಿ ಪರ್ಷಿಯಾದ ದೇಶಗಳು ಕದುರೆಯ ಬೆನ್ನಿನ ಮೇಲೆ ಕುಳಿತು ಪೋಲೊ ಆಡುತ್ತಿರುವುದನ್ನು ತೋರಿಸುತ್ತದೆ.

ಕಾಲಾ ನಂತರದಲ್ಲಿ ಪೊಲೊ ಪರ್ಶಿಯಾ ಗಡಿ ದಾಟಿ ಭಾರತ ಉಪಖಂಡ[೭] ಹಾಗೂ ಚೀನಾವನ್ನೂ ಸೇರಿದಂತೆ ಏಷ್ಯಾದ ಸಮಸ್ತ ದಿಕ್ಕಿಗೂ ಹಬ್ಬತೊಡಗಿತು. ಚೀನಾದ ತಾಂಗ್ ರಾಜಮನೆತನದ ಆಳ್ವಿಕೆಯ ಸಂದರ್ಭದಲ್ಲಿ ಪೊಲೊ ಇನ್ನಿಲ್ಲದ ಜನಪ್ರಿಯತೆಗೆ ಭಾಜನವಾಯಿತು. ಪ್ರಸ್ತುತ ರಾಜಮನೆತನದ ಆಳ್ವಿಕೆಯ ಸಂದರ್ಭದಲ್ಲಿ ಮೂಡಿ ಬಂದ ಪ್ರತಿಯೊಂದು ಕಲೆ ಹಾಗೂ ವಾಸ್ತುಶಿಲ್ಪಗಳಲ್ಲಿ ಅದು ಸ್ಪಷ್ಟವಾಗಿ ಕಂಡುಬರುತ್ತದೆ. ಮಧ್ಯಯುಗದಲ್ಲಿ ಅಶ್ವದಳಕ್ಕೆ ತರಬೇತಿ ನೀಡುವ ಉದ್ದೇಶದಿಂದ ಈ ಕ್ರೀಡೆಯನ್ನು ಕಾನ್‌ಸ್ಟ್ಯಾಂಟಿನೋಪಲ್‌ನಿಂದ ಹಿಡಿದು ಜಪಾನ್‌‌ವರೆಗೂ ಆಡಲಾಗುತ್ತಿತ್ತು. ಪೌರ್ವಾತ್ಯ ರಾಷ್ಟ್ರಗಳಲ್ಲಿ ಇದನ್ನು ’ಕ್ರೀಡೆಗಳ ಮಹಾರಾಜ’ ಎಂದು ಬಣ್ಣಿಸಲಾಗುತ್ತಿತ್ತು.[೪] ಪೊಲೊ ಎಂಬ ಹೆಸರು ಟಿಬೆಟ್‌ನ “ಪುಲು” ಎಂಬ ಹೆಸರಿನಿಂದ ಹುಟ್ಟಿರಬಹುದು. ಟಿಬೆಟ್‌ ಭಾಷೆಯಲ್ಲಿ “ಪುಲು” ಎಂದರೆ “ಚೆಂಡು” ಎಂದರ್ಥ.[೮]

ಪೊಲೊ ಕ್ರೀಡೆಗೆ ಆಧುನಿಕತೆಯ ಸ್ಪರ್ಶ ನೀಡಿ ಪ್ರಸಿದ್ಧಗೊಳಿಸಿದವರು ಬ್ರಿಟೀಷರಾದರೂ ಅಂಥದ್ದೊಂದು ಆಧುನಿಕತೆಗೆ ನಾಂದಿ ಹಾಡಿದ್ದು ಮಣಿಪುರದಲ್ಲಿ. (ಅದೀಗ ಭಾರತದ ಒಂದು ರಾಜ್ಯ). ಮಣಿಪುರದಲ್ಲಿ ಆ ಕ್ರೀಡೆಯನ್ನು ’ಸ್ಯಾಗೊಲ್ ಕಂಗ್ಜೆ’, ’ಕಂಜೈ-ಬಾಜೀ’ ಹಾಗೂ ’ಪುಲು’ ಎಂಬ ಹೆಸರಿನಲ್ಲಿ ಆಡಲಾಗುತ್ತಿತ್ತು.[೯] ಇದು ’ಪುಲು’ವಿನ ಆಂಗ್ಲೀಕರಣಗೊಂಡ ಕ್ರೀಡೆ. ಇದರಲ್ಲಿ ಮರದ ಚೆಂಡುಗನ್ನು ಬಳಸಲಾಗುತ್ತಿತ್ತು, ಇದು ನಿಧಾನವಾಗಿ ಪಶ್ಚಮಕ್ಕೆ ಹರಡಿತು, ೧೮೩೪ರಲ್ಲಿ ಮೊದಲ ಪೋಲೊ ಕ್ಲಬ್ ‌ಭಾರತದ ಅಸಾಂನ ಸಿಲ್ಚಾರ್ ನಗರದಲ್ಲಿ ಸ್ಥಾಪನೆಯಾಯಿತು.

ಮಣಿಪುರದಲ್ಲಿ ಈ ಕ್ರೀಡೆಯ ಹುಟ್ಟಿಗೆ ಕಾರಣರಾದವರು ಎಂದರೆ ಸ್ಯಾಗೊಲ್ ಕಂಜೈನ ಸೃಷ್ಟಿಕರ್ತರು.[೧೦] ಮಣಿಪುರದಲ್ಲಿ ಪ್ರಚಲಿತದಲ್ಲಿದ್ದ ಮೂರು ಹಾಕಿ ಪ್ರಕಾರಗಳಲ್ಲಿ ಇದೂ ಕೂಡ ಒಂದು. ಇದನ್ನು ಬಿಟ್ಟರೆ ಜನತೆ ನಡುವೆ ಚಾಲ್ತಿಯಲ್ಲಿದ್ದ ಹಾಕಿಯ ಪ್ರಕಾರಗಳೆಂದರೆ ’ಮೈದಾನ ಹಾಕಿ’(ಖೊಂಗ್ ಕಂಜೈ ಎನ್ನಲಾಗುತ್ತದೆ) ಹಾಗೂ ’ಕುಸ್ತಿ ಹಾಕಿ’ (ಮುಖ್ನಾ ಕಂಜೈ ಎನ್ನಲಾಗುತ್ತದೆ). ಇಲ್ಲಿನ ಸ್ಥಳೀಯ ದೇವತೆಯಾಗಿರುವ ಬಾಲ, ರೆಕ್ಕೆ ಹೊಂದಿರುವ ಪೊಲೊದ ದೇವತೆ, ಮಾರ್ಜಿಂಗ್,ಗೆ ಸಂಬಂಧಿಸಿದ ಆಚರಣೆಗಳಲ್ಲಿ ಮತ್ತು ತನ್ನ ಮಗ ಹಾಗೂ ಪೊಲೊ ಆಟವಾಡುವ ದೇವತೆ ಖೋರಿ-ಫಾಬಾನ ಜೀವನವನ್ನು ವರ್ಣಿಸುವ ಲೈ ಹಾರೋಬಾ ಉತ್ಸವಗಳು ಕೂಡ ಹೇಗೆ ಪೊಲೊ ಅಲ್ಲಿನ ಜನಜೀವನದಲ್ಲಿ ಮಿಳಿತಗೊಂಡಿದೆ ಎಂಬುದಕ್ಕೆ ಅತ್ಯುತ್ತಮ ದೃಷ್ಟಾಂತಗಳು. ತನ್ಮೂಲಕ ಇವು, ಲಭ್ಯವಿರುವ ಮಣಿಪುರದ ಐತಿಹಾಸಿಕ ದಾಖಲೆಗಳಿಗಿಂತಲೂ, ಅಂದರೆ ಕ್ರಿ.ಶ ೧ನೇ ಶತಮಾನದ, ಹಿಂದೆಯೇ ಪೊಲೊ ಚಾಲ್ತಿಯಲ್ಲಿದ್ದಿರಬಹುದೇ ಎಂಬುದನ್ನು ಇದು ಸೂಚಿಸುತ್ತದೆ.

ಮಣಿಪುರರ ಇಂಫಾಲ್‌ನಲ್ಲಿ ಹಳೆಯ ಪೋಲೊ ಅಂಗಣ
ಅರ್ಜೆಂಟೀನಾ ರಲ್ಲಿ ಪೊಲೊ ಚಾಂಪಿಯನ್ಶಿಪ್

ಮಣಿಪುರದಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಪೊಲೊ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಂದು ತಂಡದಲ್ಲೂ ೭ ಜನ ಕ್ರೀಡಾಳುಗಳಿರುತ್ತಾರೆ. ಸುಮಾರು ೧೩ ಮಾರುಗಳಷ್ಟು ಮಾತ್ರ ಉದ್ದವಿರುವ ಮಣಿಪುರಿ ತಳಿಯ ಚಿಕ್ಕ ಕುದುರೆಯನ್ನೇರುವ ಆ ಎರಡೂ ತಂಡಗಳು ಕ್ರೀಡೆಯಲ್ಲಿ ತಮ್ಮ ಬಲಾಬಲ ಪ್ರದರ್ಶಿಸಲು ಸನ್ನದ್ಧರಾಗುತ್ತಾರೆ. ಅವರು ಆಡುವ ಕ್ರೀಡಾಂಗಣದಲ್ಲಿ ಯಾವುದೇ ಗೋಲ್‌ ಪೋಸ್ಟ್‌ ಇರುವುದಿಲ್ಲ. ಚೆಂಡನ್ನು ಮೈದಾನದ ಅಂಚಿಗೆ ಕೊಂಡೊಯ್ಯುವ ಮೂಲಕ ಅಂಕ ಗಳಿಸುವುದು ಇವರು ರೂಢಿಸಿಕೊಂಡಿರುವ ನಿಯಮ. ಇವರು ಆಡುವ ಆಟದಲ್ಲಿ ಚೆಂಡನ್ನು ಕೈಯಲ್ಲಿ ಕೊಂಡಯ್ಯೊಲು ಅವಕಾಶವಿದೆ ಹಾಗೂ ಹಾಗೆ ಕೊಂಡೊಯ್ಯುವಾಗ ಅದನ್ನು ತಡೆಯಲು ಎದುರಾಳಿ ತಂಡದವರು ದೈಹಿಕವಾಗಿ ಮುಖಾಮುಖಿಯಾಗಲೂ ಅವಕಾಶವಿದೆ. ಕ್ರೀಡೆಗೆ ಬಳಸುವ ಕೋಲುಗಳನ್ನು ಬೆತ್ತದಿಂದ ತಯಾರಿಸಿದರೆ ಚೆಂಡನ್ನು ಬಿದುರಿನ ಬೇರುಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಕುದುರೆಗಳ ದೇಹದ ಅತಿಸೂಕ್ಷ್ಮ ಭಾಗಗಳನ್ನು ರಕ್ಷಿಸಲು ಬಣ್ಣ ಬಣ್ಣದ ಪೊಮ್‌-ಪೊಮ್‌ ಬಟ್ಟೆಗಳನ್ನು ಅವುಗಳ ಮೇಲೆ ಹೊದಿಸಲಾಗುತ್ತದೆ. ಆಟಗಾರರು ತಮ್ಮ ಕುದುರೆಗಳ ಜೀನಿನ ಮೇಲೆ ಚರ್ಮದ ಕವಚಗಳನ್ನು ಇಳಿ ಬಿಡುವುದರಿಂದ ತಮ್ಮ ಕಾಲುಗಳಿಗೆ ಹೊಡೆತ ಬೀಳದಂತೆ ಜಾಗ್ರತೆ ವಹಿಸುತ್ತಾರೆ..[೧೧]

ಮಣಿಪುರದ ಮಟ್ಟಿಗೆ ಪೊಲೊ ಕೇವಲ ಸಿರಿವಂತರ ಕ್ರೀಡೆಯಲ್ಲ. ತಮ್ಮದೇ ಕುದುರೆಯನ್ನು ಹೊಂದಿ ಅತಿ ಸಾಮಾನ್ಯ ವ್ಯಕ್ತಿಯೂ ಈ ಕ್ರೀಡೆಯಲ್ಲಿ ತನ್ನ ಕೌಶಲ್ಯವನ್ನು ಸಾಬೀತುಪಡಿಸಬಹುದು.[೮] ಮಣಿಪುರದ ರಾಜರುಗಳು ತಮ್ಮ ಕಂಗ್ಲಾ ಕೋಟೆಯೊಳಗೆ ತಮ್ಮದೇ ಆದ ರಾಯಲ್‌ ಪೊಲೊ ಕ್ರೀಡಾಂಗಣವನ್ನು ಹೊಂದಿದ್ದರು. ಇಲ್ಲಿ ಅವರು ಮಾನುಂಗ್ ಕಂಜೈ ಬಂಗ್‌ (ಅಕ್ಷರಶಃ ಹೇಳಬೇಕೆಂದರೆ, “ಆಂತರಿಕ ಪೊಲೊ ಕ್ರೀಡಾಂಗಣ) ಅನ್ನು ಆಡುತ್ತಿದ್ದರು. ಇನ್ನು ಸಾರ್ವಜನಿಕರಿಗಾಗಿ, ಈಗ ನಡೆಯುವಂತೆ, ಕಂಗ್ಲಾ ಹೊರಭಾಗದಲ್ಲಿರುವ ಮಾಪನ್‌ ಕಂಜೈ ಬಂಗ್ (ಬಾಹ್ಯ ಪೊಲೊ ಕ್ರೀಡಾಂಗಣ)ದಲ್ಲಿ ಪೊಲೊ ಪಂದ್ಯಾವಳಿಗಳು ಜರುಗುತ್ತಿದ್ದವು. ವಾರೊಕ್ಕೊಮ್ಮೆ ನಡೆಯುವ ಹಪ್ತಾ ಕಂಜೈ(ವಾರಕ್ಕೊಮ್ಮೆ ಆಡುವ ಪೊಲೊ) ಅನ್ನು ಈಗಿನ ಅರಮನೆಯ ಹೊರಭಾಗದಲ್ಲಿರುವ ಕ್ರೀಡಾಂಗಣದಲ್ಲಿ ಆಡಲಾಗುತ್ತಿತ್ತು.

ಕ್ಯಾಪ್ಟನ್‌ ರಾಬರ್ಟ್‌ ಸ್ಟಿವರ್ಟ್‌ ಹಾಗೂ ಮೇಜರ್ ಜನರಲ್ ಜೊ ಶೆಯಾರರ್ ಎಂಬ ಬ್ರಿಟೀಷ್‌ ಸೈನಿಕರಿಬ್ಬರು ೧೮೩೪ ರಲ್ಲಿ ಮೊಟ್ಟ ಮೊದಲ ಪೊಲೊ ಕ್ಲಬ್‌ ಎಂದು ಕರೆಯಲ್ಪಡುವ ’ಕಲ್ಕತ್ತಾ ಪೊಲೊ ಕ್ಲಬ್‌’ ಅನ್ನು ಸ್ಥಾಪಿಸಿದರು.[೧೨] ತದನಂತರ ಈ ಕ್ರೀಡೆಯನ್ನು ತಮ್ಮ ಇಂಗ್ಲೆಂಡ್‌ನಲ್ಲಿದ್ದ ಸ್ನೇಹಿತರಿಗೆ ಪರಿಚಯಿಸಿಕೊಟ್ಟರು. ಹೀಗೆ ತಮಗೆ ಬಳುವಳಿಯಾಗ ಬಂದ ಪೊಲೊ ಕ್ರೀಡೆಯನ್ನು ಬ್ರಿಟೀಷರು ೧೯ನೇ ಅಂತ್ಯಭಾಗದಲ್ಲಿ ಹಾಗೂ ೨೦ನೇ ಮೊದಲಾರ್ಧದಲ್ಲಿ ಪ್ರಪಂಚದಾದ್ಯಂತ ಪಸರಿಸಿದರು. ಮಿಲಿಟರಿ ಅಧಿಕಾರಿಗಳು ಪೊಲೊ ಅನ್ನು ೧೮೬೦ರಲ್ಲಿ ಬ್ರಿಟನ್‌ಗೆ ಆಮದು ಮಾಡಿಕೊಂಡರು. ಕ್ರೀಡೆಗೆ ಸರ್ವಮಾನ್ಯ ಎನ್ನಬಹುದಾದ ನಿಯಮಗಳನ್ನು ಹೆಣೆದ ಬಳಿಕ ಇಂಗ್ಲೆಂಡ್‌ ಹಾಗೂ ಪಶ್ಚಿಮ ಯೂರೋಪಿನಾದ್ಯಂತ ಪೊಲೊ ಕ್ಲಬ್‌ಗಳನ್ನು ತೆರೆಯಲಾಯಿತು.[೧೧] ಅಲ್ಡರ್ ಶಾಟ್, ಹ್ಯಾಂಟ್‌ನ ೧೦ನೇ ಹಸ್ಸಾರ್ಸ್ ೧೮೩೪ರಲ್ಲಿ ಪೊಲೊ ಅನ್ನು ಇಂಗ್ಲೆಂಡ್‌ಗೆ ಪರಿಚಯಿಸಿದರು. ಈ ಕ್ರೀಡೆಯನ್ನು ನಿರ್ಧರಿಸುವ ಇಂಗ್ಲೆಂಡ್‌ನ ಮುಖ್ಯ ಸಂಸ್ಥೆ ಎಂದರೆ ಹರ್ಲಿಂಗ್‌ಹ್ಯಾಮ್‌ ಪೊಲೊ ಅಸೋಸಿಯೇಷನ್‌. ಪೊಲೊ ಕ್ರೀಡೆಯಲ್ಲಿ ಈಗಲೂ ಅನುಸರಿಸುವ ಬ್ರಿಟೀಷ್‌ ನಿಯಮಾವಳಿಗಳನ್ನು ಇದೇ ಸಂಸ್ಥೆ ೧೮೭೪ರಲ್ಲಿ ರೂಪಿಸಿತು.

ಈ ನಡುವೆ, ಅರ್ಜೈಂಟೈನಾದ ಪಾಂಪಾಸ್‌ನಲ್ಲಿ ನೆಲೆಸಿದ್ದ ಬ್ರಿಟೀಷರು ತಮ್ಮ ಬಿಡುವಿನ ವೇಳೆಯಲ್ಲಿ ಈ ಕ್ರೀಡೆಯನ್ನು ಅಭ್ಯಸಿಸಲಾರಂಭಿಸಿದರು. ಅವರಲ್ಲಿ, ಡೇವಿಡ್‌ ಶೆನನ್‌ ಎಂಬ ವ್ಯಕ್ತಿ ೧೮೭೫ರಲ್ಲಿ ಮೊಟ್ಟ ಮೊದಲ ಬಾರಿಗೆ ಆ ದೇಶದ ಔಪಚಾರಿಕ ಪೊಲೊ ಪಂದ್ಯಾವಳಿ ಆಯೋಜಿಸಿದನು ಎನ್ನಲಾಗಿದೆ. ಪ್ರತಿಭಾವಂತ ಗೋಷೋಗಳು ಹಾಗೂ ವೆನಡೊ ಟ್ಯುರ್ಟೊ, ಕೆನಡಾ ದೆ ಗೊಮೆಜ್‌, ಕ್ವಿಲ್ಮೇಸ್, ಫ್ಲೋರ್ಸ್‌ ಹಾಗೂ (೧೮೮೮ರಲ್ಲಿ) ಹರ್ಲಿಂಗ್‌ಟನ್‌ ನಗರಗಳಲ್ಲಿ ಪ್ರಾರಂಭವಾದ ವಿವಿಧ ಕ್ಲಬ್‌ಗಳಿಂದಾಗಿ ಪೊಲೊ ಕ್ರೀಡೆ ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯಗೊಂಡಿತು. ೧೮೯೨ರಲ್ಲಿ ’ದ ರಿವರ್ ಪ್ಲೇಟ್‌ ಪೊಲೊ ಅಸೋಸಿಯೇಷನ್‌’ ಅನ್ನು ಸ್ಥಾಪಿಸಲಾಯಿತು ಮತ್ತು ಈಗ ಪ್ರಚಲಿತದಲ್ಲಿರುವ ’ಅಸೋಸಿಯಾಸಿಯನ್ ಅರ್ಜೆಂಟೈನಾ ದೆ ಪೊಲೊ’ ಸಂಸ್ಥೆಗೆ ಬುನಾದಿ ಹಾಕಲಾಯಿತು. ೧೯೨೪ರಲ್ಲಿ ಪ್ಯಾರೀಸ್‌ನಲ್ಲಿ ಜರುಗಿದ ಓಲಂಪಿಕ್‌ ಕ್ರೀಡೆಯಲ್ಲಿ ಜುವಾನ್‌ ಮೈಲ್ಸ್‌, ಎನ್ರಿಕ್‌ ಪಡಿಲ್ಲಾ, ಜುವಾನ್‌ ನೆಲ್ಸನ್‌, ಅರ್ತುರೊ ಕೆನ್ನಿ, ಜಿ.ಬ್ರೂಕ್‌ ನೆಲಾರ್, ಎ.ಪೆನಿಯಾ ಅವರನ್ನು ಒಳಗೊಂಡ ತಂಡ ಸ್ವರ್ಣಪದಕವನ್ನು ತನ್ನದಾಗಿಸಿಕೊಂಡಿತು. ಹಾಗೆಯೇ, ಬರ್ಲಿನ್‌ನಲ್ಲಿ ೧೯೩೬ರಲ್ಲಿ ನಡೆದ ಓಲಂಪಿಕ್‌ ಕ್ರೀಡೆಯಲ್ಲಿ ಮ್ಯಾನ್ಯುಲ್‌ ಆಂಡ್ರಡಾ, ಆಂಡ್ರೆಸ್ ಗಝೊಟ್ಟಿ, ರಾಬರ್ಟೊ ಕವನಾಗ್, ಲ್ಯುಯಿಸ್ ಡಗ್ಗನ್, ಜುವಾನ್ ನೆಲ್ಸನ್‌, ಡಿಯಾಗೊ ಕವನಾಗ್ ಹಾಗೂ ಎನ್ರಿಕ್ ಅಲ್ಬೆರ್ಡಿ ಕ್ರೀಡಾಳುಗಳನ್ನು ಒಳಗೊಂಡ ತಂಡ ಸ್ವರ್ಣ ಪದಕ ಪಡೆಯಿತು. ಅಲ್ಲಿಂದೀಚೆಗೆ ಪೊಲೊ ಕ್ರೀಡೆ ದೇಶದಾದ್ಯಂತ ಜನಪ್ರಿಯತೆ ಗಳಿಸಿದೆ. ಹೀಗೆ ಪೊಲೊ ಕ್ರೀಡೆಯನ್ನು ಹುಲುಸಾಗಿ ಬೆಳೆಯಲು ವೇದಿಕೆ ಒದಗಿಸಿದ ಅರ್ಜೆಂಟೈನಾ ದೇಶವನ್ನು ಪೊಲೊ ’ಕ್ರೀಡೆಯ ಮೆಕ್ಕಾ’ ಎಂದೇ ಪರಿಗಣಿಸಲಾಗುತ್ತದೆ.

ಕುದುರೆಯ ಬೆನ್ನಿನ ಮೇಲೆ ಕುಳಿತು ಪೋಲೊ ಆಟವಾಡುತ್ತಿರುವ ಚೈನಾದ ಟ್ಯಾಂಗ್ ರಾಜವಂಶದ ಆಸ್ಥಾನಿಕರು , 706 AD.

೧೯ನೇ ಶತಮಾನದಲ್ಲಿ ಆಡಲಾಗುತ್ತಿರುವ ಪೊಲೊ ಪ್ರಕಾರ ಮಣಿಪುರದಲ್ಲಿ ಪ್ರಚಲಿತದಲ್ಲಿರುವ ಶೀಘ್ರಗತಿಯ ಪೊಲೊಗಿಂತ ಹಲವು ಬಗೆಯಲ್ಲಿ ವಿಭಿನ್ನವಾಗಿದೆ. ಈ ಪ್ರಕಾರ ಅತ್ಯಂತ ನಿಧಾನಗತಿಯದು ಹಾಗೂ ಕ್ರಮಬದ್ಧವಾದದ್ದು. ಇಲ್ಲಿ ಆಟಗಾರರ ನಡುವೆ ಅತ್ಯಂತ ಕಡಿಮೆ ಪಾಸಿಂಗ್ ಇರುತ್ತದೆ ಹಾಗೂ ಚೆಂಡು ಇಲ್ಲದೇ ಕೆಲವು ನಿರ್ದಿಷ್ಟ ನಡೆಗಳನ್ನು ಆಟಗಾರರು ಕಾಯ್ದುಕೊಳ್ಳಬೇಕಾಗುತ್ತದೆ. ಆಟಗಾರರಾಗಲೀ, ಕುದುರೆಗಳೇ ಆಗಲೀ ಶೀಘ್ರಗತಿಯ, ತಡೆರಹಿತ ಆಟಕ್ಕೆ ಪೂರಕವಾದ ತರಬೇತಿಗಳನ್ನು ಪಡೆದಿರುವುದಿಲ್ಲ. ಈ ಪ್ರಕಾರದ ಪೊಲೊ ಆಕ್ರಮಣಕಾರಿ ಆಟದ ಪದ್ಧತಿಗಳನ್ನಾಗಲೀ, ಕುದುರೆಸವಾರಿಯ ತಂತ್ರಗಾರಿಕೆಯನ್ನಾಗಲೀ ಹೊಂದಿರುವುದಿಲ್ಲ. ಭಾರತವನ್ನು ಪ್ರತಿನಿಧಿಸುತ್ತಿದ್ದ ಪೊಲೊ ತಂಡ ೧೮೦೦ರಿಂದ ೧೯೧೦ರ ವರೆಗೆ ಜಾಗತಿಕ ಪೊಲೊ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿತ್ತು.[೧೧]

ಟೆರ್ರಾಕೋಟಾ ಮಹಿಳಾ ಪೋಲೊ ಆಟಗಾರ್ತಿ, ಟ್ಯಾಂಗ್ ರಾಜವಂಶ, ಎಂಟನೇಯ ಶತಮಾನಕ್ಕಿಂತ ಪೂರ್ವದಲ್ಲಿ, ಮ್ಯೂಸಿ ಗಿಮೆಟ್, ಪ್ಯಾರಿಸ್.

ಅರ್ಜೆಂಟೈನಾ, ಬ್ರೆಜಿಲ್‌, ಚಿಲಿ, ಮೆಕ್ಸಿಕೊ, ಪಾಕಿಸ್ತಾನ್‌ ಹಾಗೂ ಅಮೆರಿಕ ರಾಷ್ಟ್ರಗಳಲ್ಲಿ ಪೊಲೊ ಜನಪ್ರಿಯ ಕ್ರೀಡೆಯಾಗ ಬೆಳೆದಿದೆ.[೧೩][೧೪][೧೫]

ಜ್ಯೂನಿಯರ್.ಜೇಮ್ಸ್‌ ಗೊರ್ಡೊನ್‌ ಬೆನೆಟ್‌ ನ್ಯೂಯಾರ್ಕ್‌ ನಗರದ ಐದನೇ ಅವೆನ್ಯೂದಲ್ಲಿರುವ ೩೯ನೇ ರಸ್ತೆಯಲ್ಲಿರುವ ಡಿಕ್ಕೆಲ್ಸ್‌ ರೈಡಿಂಗ್ ಅಕಾಡೆಮಿಯಲ್ಲಿ ಪೊಲೊ ಪಂದ್ಯವನ್ನು ಆಯೋಜಿಸುವ ಮೂಲಕ ಅಮೆರಿಕದ ಪ್ರಪ್ರಥಮ ಪೊಲೊ ಪಂದ್ಯಾವಳಿಗೆ ನಾಂದಿ ಹಾಡಿದರು. ೨೦ನೇ ಶತಮಾನದ ಮೊದಲಾರ್ಧದಲ್ಲಿ ಹ್ಯಾರಿ ಪೇನೆ ವೈಟಿ ಅವರ ನಾಯಕತ್ವದಲ್ಲಿ ಪೊಲೊ ಇಂಗ್ಲೆಂಡ್‌ನಲ್ಲಿದ್ದ ಕ್ರೀಡೆಗೆ ತದ್ವಿರುದ್ಧವಾದ ಶೀಘ್ರಗತಿಯ ಕ್ರೀಡೆಯಾಗಿ ಅಮೆರಿಕದಲ್ಲಿ ಪ್ರಚಲಿತಕ್ಕೆ ಬಂತು. ಹೀಗೆ ವೇಗದ ರೂಪ ಧರಿಸಿದ ಪೊಲೊ ಕ್ರೀಡೆಯಲ್ಲಿ ಎದುರಾಳಿ ಗೋಲ್‌ಗೆ ಮುನ್ನುಗ್ಗಲು ಅತ್ಯಂತ ಚಿಕ್ಕದಾದ ಪಾಸ್‌ಗಳು ಸಾಕಾಗಿದ್ದವು. ವೈಟ್ನಿ ಹಾಗೂ ಆವರ ತಂಡದ ಸದಸ್ಯರು ವೇಗದ ಬ್ರೆಕ್‌ಗಳನ್ನು ಬಳಸುತ್ತಿದ್ದರು ಹಾಗೂ ಗುಂಪು ಗುಂಪಾಗಿ ಚಲಿಸುವಾಗ ಎದುರಾಳಿ ತಂಡದ ಜಾಲದಲ್ಲಿ ಚಿಕ್ಕ ಬಿರುಕು ಕಂಡುಬಂದರೂ ಅದರ ಪ್ರಯೋಜನ ಪಡೆದು ಚೆಂಡನ್ನು ತಳ್ಳುವುದರ ಮೂಲಕ ಉದ್ದನೆಯ ಪಾಸ್‌ ಅನ್ನು ತೆಗೆದುಕೊಂಡು ತಮ್ಮ ಕಾರ್ಯಸಿದ್ಧಿ ಮಾಡಿಕೊಳ್ಳುವ ತಂತ್ರಗಾರಿಕೆಯನ್ನು ಮೈಗೂಡಿಸಿಕೊಂಡಿದ್ದರು.

ಮಣಿಪುರ ರಾಜ್ಯದ ಇಂಫಾಲ್‌ದಲ್ಲಿರುವ ಪೊಲೊ ಕ್ರೀಡಾಂಗಣವನ್ನು ಅತ್ಯಂತ ಹಳೆಯ ಕ್ರೀಡಾಂಗಣ ಎಂದು ಕರೆಯುತ್ತಾರೆ. ಈ ಪೊಲೊ ಕ್ರೀಡಾಂಗಣದ ಇತಿಹಾಸ ಕ್ರಿ.ಶ. ೩೩ ರಷ್ಟು ಪುರಾತನವಾದ “ಚೆತಾರೊಲ್ ಕಂಬಾಬಾ” ರಾಜಮನೆತನದ ಚರಿತ್ರೆಯೊಂದಿಗೆ ಬೆಸೆದುಕೊಂಡಿದೆ. ಆಧುನಿಕ ಪೊಲೊ ಕ್ರೀಡೆಯ ಪಿತಾಮಹ ಲೆಫ್ಟಿನೆಂಟ್ ಶರೇರ್ ೧೮೫೦ರಲ್ಲಿ ಮಣಿಪುರ ರಾಜ್ಯಕ್ಕೆ ಭೇಟಿ ನೀಡಿದ್ದರು ಹಾಗೂ ಈ ಕ್ರೀಡಾಂಗಣದಲ್ಲಿ ಪೊಲೊ ಆಟವಾಡಿದ್ದರು ಎನ್ನುತ್ತದೆ ಇತಿಹಾಸ. ಭಾರತದ ವೈಸ್‌ರಾಯ್‌ ಆಗಿ ಕಾರ್ಯನಿರ್ವಹಿಸಿದ್ದ ಲಾರ್ಡ್ ಕರ್ಜನ್‌ ೧೯೦೧ರಲ್ಲಿ ಈ ರಾಜ್ಯಕ್ಕೆ ಭೇಟಿ ನೀಡಿದ್ದರು ಮತ್ತು ತಮ್ಮ ಕುದುರೆಯ ಬೆನ್ನೇರಿ, ಚೆಂಡನ್ನು ಅಟ್ಟುತ್ತಾ ೨೨೫ ಗಜಗಳಷ್ಟು ಉದ್ದ ಹಾಗೂ ೧೧೦ ಗಜಗಳಷ್ಟು ಅಗಲ ವಿಸ್ತಾರದ ಪೊಲೊ ಕ್ರೀಡಾಂಗಣದ ಉದ್ದಗಲ ಅಳೆದಿದ್ದರು. ೧೬ನೇ ಶತಮಾನದಲ್ಲಿದ್ದ ಪಾಕಿಸ್ತಾನಗಿಲ್ಗಿಟ್ ಪೊಲೊ ಫೀಲ್ಡ್‌‌ನ್ನು ಅತ್ಯಂತ ಹಳೆಯ ರಾಜಮನೆತನದ ಪೊಲೊ ಸ್ಕ್ವೇರ್ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ, ಪಾಕಿಸ್ಥಾನದ ಚಿತ್ರಾಲ್‌ ಜಿಲ್ಲೆಯ ಶಂದೂರ್‌ನಲ್ಲಿರುವ ೪೩೦೭ ಮೀಟರ್ (೧೪,೦೦೦ ಅಡಿಗಳು). ವಿಸ್ತಾರದ ಕ್ರೀಡಾಂಗಣವನ್ನು ಜಗತ್ತಿನ ಅತಿ ದೊಡ್ಡ ಪೊಲೊ ಕ್ರೀಡಾಂಗಣ ಎನ್ನಲಾಗುತ್ತದೆ. ಚಿತ್ರಾಲ್‌ ಹಾಗೂ ಗಿಲ್ಗಿಟ್‌ ಪ್ರಾಂತಗಳ ನಡುವಿನ ಸಾಂಪ್ರದಾಯಿಕ ಪೊಲೊ ಪಂದ್ಯಾವಳಿ ಪ್ರತಿ ಜುಲೈ ತಿಂಗಳಂದು ನಡೆಯುತ್ತದೆ. ಪೊಲೊ ಕ್ರೀಡೆಯ ಕಟ್ಟಾ ಅಭಿಮಾನಿಯಾಗಿದ್ದ, ಬ್ರಿಟೀಷ್ ರಾಜ್‌ನ, ಮಾಜ್‌ ಕೊಬ್‌ ‘ಮೆಹ್ತಾರ್ ಚಿತ್ರಾಲ್‌’ ಅವರ ಆಮಂತ್ರಣಕ್ಕೆ ಓಗೊಟ್ಟು ಬೆಳದಿಂಗಳಲ್ಲಿ ಪೊಲೊ ಆಡುವ ಸಲುವಾಗಿ ಶಂದೂರ್‌ಗೆ ಆಗಾಗ್ಗೆ ಬರುತ್ತಿದ್ದರು. ಇಂದಿಗೂ ಅಸ್ತಿತ್ವದಲ್ಲಿರುವ ಜಗತ್ತಿನ ಅತ್ಯಂತ ಹಳೆಯ ಪೊಲೊ ಕ್ಲಬ್‌ ಎಂದರೆ ‘ಕಲ್ಕತ್ತಾ ಪೊಲೊ ಕ್ಲಬ್‌’(೧೮೬೨)

ಕ್ರೀಡೆಯ ವಿಧಾನ[ಬದಲಾಯಿಸಿ]

ಪಾಕಿಸ್ತಾನದಲ್ಲಿ ಪೋಲೊ

ಫೀಲ್ಡ್‌ ಪೊಲೊ ತಲಾ ನಾಲ್ಕು ಮಂದಿ ಆಟಗಾರರನ್ನು ಹೊಂದಿರುವ ಎರಡು ತಂಡಗಳ ಆಟ. ಈ ಕ್ರೀಡೆಗೆ ಬಳಸಲಾಗುವ ಕ್ರೀಡಾಂಗಣ ೩೦೦ ಗಜಗಳಷ್ಟು ಉದ್ದ ಹಾಗೂ ೨೦೦ ಅಥವಾ ೧೬೦ ಗಜಗಳಷ್ಟು ಅಗಲವಾಗಿರುತ್ತದೆ. ಅದರ ಪಕ್ಕ ಪೇರಿಸಿಡಲಾದ ಬದಿ ಬೋರ್ಡ್‌ಗಳು ಸಾಮಾನ್ಯವಾಗಿ ೬ ಅಡಿಗಳಷ್ಟು ಉದ್ದವಿರುತ್ತವೆ. ಕ್ರೀಡಾಂಗಣದ ಎರಡೂ ಅಂಚುಗಳಲ್ಲಿ ಬಗ್ಗಿಸಬಹುದಾದ ೮ ಗಜ ಅಗಲವಾದ ಗೋಲ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿರುತ್ತದೆ. ಗೋಲ್‌ಪೋಸ್ಟ್‌ಗಳೆಡೆಗೆ ಚೆಂಡನ್ನು ತಳ್ಳುವುದರ ಮೂಲಕ ಸಾಧ್ಯಾಂತ ಗೋಲುಗಳ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಈ ಆಟದ ಪ್ರಮುಖ ಉದ್ದೇಶ. ಪ್ರತಿಯೊಂದು ಗೋಲು ಗಳಿಸಿದಾಗಲೂ ಉಭಯ ತಂಡಗಳು ಮೈದಾನ ಹಾಗೂ ಗಾಳಿಯ ದಿಕ್ಕಿಗೆ ಅನುಗುಣವಾಗಿ ತಮ್ಮ ದಿಕ್ಕುಗಳನ್ನು ಬದಲಿಸಿಕೊಳ್ಳುತ್ತವೆ.

ಅಮೆರಿಕದಲ್ಲಿ ಅತಿ ಹೆಚ್ಚು ಜನಪ್ರಿಯಗೊಂಡಿರುವ ಅರೇನಾ ಪೊಲೊದಲ್ಲಿ ಕ್ರೀಡಾಂಗಣದ ಉದ್ದ ೧೦೦ ಗಜಗಳಷ್ಟು ಉದ್ದ ಹಾಗೂ ೫೦ ಗಜಗಳಷ್ಟು ಅಗಲವಿರುತ್ತದೆ. ಒಳಾಂಗಣ ಆರ್ಮರಿಗಳು ಹಾಗೂ ಕುದುರೆ ಸವಾರಿ ಅಕಾಡೆಮಿಗಳು ಇಂದಿಗೂ ಸಾಂದರ್ಭಿಕವಾಗಿ ಬಳಕೆಯಾಗುತ್ತಿರುವುರ‍ಂದ ಅರೇನಾ ಪೊಲೊ ಜನ್ಮ ತಳೆದ ಅಮೆರಿಕದಲ್ಲಿರುವ ಅರೇನಾ ಕ್ರೀಡಾಂಗಣದ ಉದ್ದಗಲಗಳಲ್ಲಿ ಆಗಾಗ್ಗೆ ಬದಲಾವಣೆಯಾಗುತ್ತಲೇ ಇರುತ್ತವೆ. ಕ್ರೀಡಾಂಗಣದ ಗಡಿಯನ್ನು ೬ ಅಡಿ ಉದ್ದದ ಮರದ ಹಲಗೆಯನ್ನು ಇಡುವ ಮೂಲಕ ಗುರುತಿಸಲಾಗುತ್ತದೆ. ಅರೇನಾ ಪೊಲೊದಲ್ಲಿ ಮೂವರು ಕುದುರೆ ಸವಾರರು ಮೈದಾನಕ್ಕಿಳಿಯುತ್ತಾರೆ ಮತ್ತು ಉದ್ದ ಪಾಸ್‌ ಮೂಲಕ ಚಂಡನ್ನು ೧೦ ಅಡಿ ಅಗಲ ಹಾಗೂ ೧೨ ಅಡಿ ಎತ್ತರದ ಗೋಲ್‌ಪೋಸ್ಟ್‌ನೊಳಗೆ ಅಟ್ಟುವ ಮೂಲಕ ರನ್ನು ಗಳಿಸುತ್ತಾರೆ. ಅರೇನಾ ಪೊಲೊದಲ್ಲಿ ಕೊನೆಯ ಆರು ನಿಮಿಷಗಳ ಅವಧಿಯಲ್ಲಿ (ಚುಕ್ಕಾ, ಚುಕ್ಕರ್, ಅಥವಾ ಚುಕ್ಕರ್) ಮೈದಾನದ ಅಂಚುಗಳನ್ನು ಬದಲಾಯಿಸಲಾಗುತ್ತದೆ ಆದರೆ ಗೋಲ್‌ ಸಂಪಾದಿಸಿದ ಮೇಲೆ ಅಲ್ಲ. ಅರೇನಾ ಪೊಲೊ ಆಟದಲ್ಲಿ ೧೨.೫ ಅಥವಾ ೧೫ ಇಂಚುಗಳ ಚರ್ಮದ ಚಿಕ್ಕ ಚೆಂಡನ್ನು ಬಳಸಲಾಗುತ್ತದೆ. ಅದು ನೋಡಲು ಚಿಕ್ಕ ಫುಟ್‌ಬಾಲ್ ರೀತಿ ಕಾಣುತ್ತದೆ.

ಪಾಕಿಸ್ತಾನದ ಶಂದೂರ್‌ನಲ್ಲಿ ಪ್ರತಿ ಜುಲೈ ತಿಂಗಳಲ್ಲಿ ನಡೆಯುವ ಚಿತ್ರಾಲ್‌ ಹಾಗೂ ಗಿಲ್ಗಿಟ್ ತಂಡಗಳ ನಡುವೆ ನಡೆಯುವ ಪೊಲೊ ಹಣಾಹಣಿಯನ್ನು ವೀಕ್ಷಿಸಲು, ಆಮೂಲಕ ಪೊಲೊದ ವೈಭವವನ್ನು ನೋಡಲು ಶಂದೂರ್ ಆಮಂತ್ರಿಸುತ್ತದೆ. ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪೊಲೊ ಕ್ರೀಡಾಂಗಣ ಎಂದು ಕರೆಯಲ್ಪಡುವ, ೩,೭೦೦ ಮೀಟರ್ ವಿಸ್ತೀರ್ಣವುಳ್ಳ ಶಂದೂರ್ ಪಾಸ್‌ನಲ್ಲಿ ಈ ಪಂದ್ಯಾವಳಿ ನಡೆಯುತ್ತದೆ. ಈ ಪಂದ್ಯಾವಳಿಯಲ್ಲಿ ಕೇವಲ ಪೊಲೊ ಆಟ ಮಾತ್ರ ಜರುಗುವುದಿಲ್ಲ. ಅದರ ಜೊತೆಗೆ, ಜಾನಪದ ಸಂಗೀತ, ನೃತ್ಯಗಳು ಹಾಗೂ ಗ್ರಾಮ ರೂಪದ ಸೆಟ್ಟಿಗ್‌ಗಳೂ ಈ ಸಂದರ್ಭಕ್ಕೆ ಸಂಭ್ರಮದ ಬಣ್ಣ ತುಂಬುತ್ತವೆ.

ಗಿಲ್ಗಿಟ್, ಚಿತ್ರಾಲ್ ಹಾಗೂ ಸ್ಕರ್ದು ತಂಡಗಳು ಆಡುವ ಪೊಲೊ ಮೂಲ ಪೊಲೊ ಕ್ರೀಡೆಗೆ ಸಮೀಪವಾದದ್ದು. ಈ ಹಿಂದೆ ಸ್ಥಳೀಯ ಖಾನ್‌ಗಳು, ‍ಮಿರ್ ಗಳು ಹಾಗೂ ಮೆಹ್ತಾರ್ ಗಳು ಈ ಕ್ರೀಡೆಗೆ ಆಶ್ರಯ ಹಾಗೂ ಪ್ರೋತ್ಸಾಹ ನೀಡಿದ್ದರು. ಕೆಲವು ಸಂದರ್ಭಗಳಲ್ಲಿ ಆ ಪ್ರಾಂತಗಳ ವಾರ್ಷಿಕ ಆಯವ್ಯಯದಲ್ಲಿ ಶೇ.೫೦ ಕ್ಕೂ ಹೆಚ್ಚು ಹಣವನ್ನು ಪೊಲೊ ಕ್ರೀಡೆಯ ಉತ್ತೇಜನಕ್ಕಾಗಿ ನೀಡಿದ್ದೂ ಉಂಟು.[೧೬]

ಪೊಲೊ ಕ್ರೀಡೆಯೊಂದು ತನ್ನದೇ ಅವಧಿಗಳನ್ನು ಹೊಂದಿರುತ್ತದೆ. ಅವುಗಳನ್ನು ಚುಕ್ಕಾಗಳು ಎಂದು ಕರೆಯಲಾಗುತ್ತದೆ (ಚುಕ್ಕರ್ ಅಥವಾ ಚುಕ್ಕರ್ ). ಈ ಪದ ೧೮೯೮ ರಲ್ಲಿ ವ್ಯುತ್ಪನ್ನವಾಯಿತು. ಇದು ಮೊದಲು ಸಂಸ್ಕೃತದ ’ಚಕ್ರ ’ ಅಥವಾ ವರ್ತುಲ, ಹಾಗೂ ಹಿಂದಿಯ ’ಚಕ್ಕರ್ ’ ಪದಗಳಿಂದ ಬಂದಿದೆ. ಆಯಾ ನಿರ್ದಿಷ್ಟ ಪಂದ್ಯಾವಳಿಗಳು ಹಾಗೂ ಲೀಗ್‌ನಲ್ಲಿ ಅಳವಡಿಸಿಕೊಳ್ಳಲಾಗುವ ನಿಯಮಾವಳಿಗಳನ್ನು ಆಧರಿಸಿ ಒಂದೊಂದು ಆಟವೂ ೪,೬ ಅಥವಾ ೮ ಚುಕ್ಕಾಗಳನ್ನು ಹೊಂದಿರಬಹುದು; ಇವುಗಳಲ್ಲಿ ೬ ಚುಕ್ಕಾ ಅತ್ಯಂತ ಸಾಮಾನ್ಯವಾದದ್ದು[೧೭]. ಆದರೆ ಇನ್ನೂ ಕೆಲವು ಆಟಗಳು ಇನ್ನೂ ಕಡಿಮೆ ಅವಧಿಯ ಚುಕ್ಕಾಗಳನ್ನೂ ಅಳವಡಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಪ್ರತಿಯೊಂದು ಚುಕ್ಕಾವೂ ೭ ನಿಮಿಷಗಳ ಕಾಲಾವಧಿ ಹೊಂದಿದ್ದು, ಆಟಗಾರರು ಹೊಸ ಕುದುರೆಗಳನ್ನು ಏರಬಹುದು. ಕಡಿಮೆ ಸ್ಪರ್ಧಾತ್ಮಕತೆಯುಳ್ಳ ಪೊಲೊ ಲೀಗ್‌ಗಳಲ್ಲಿ ಆಟಗಾರರು ಕೇವಲ ಎರಡು ಕುದುರೆಗಳನ್ನು ಮಾತ್ರ ಬದಲಾಯಿಸುತ್ತಾರೆ. ಆದರೆ ಅತ್ಯಂತ ಹೆಚ್ಚಿನ ಸ್ಪರ್ಧಾತ್ಮಕತೆಯುಳ್ಳ ಪೊಲೊ ಲೀಗ್‌ಗಳಲ್ಲಿ ಮಾತ್ರ, ಅದರಲ್ಲೂ ಅಮೆರಿಕದ ಇಂಟರ್ ಕಾಲೇಜಿಯೇಟ್ ಪೊಲೊ ಪಂದ್ಯದಲ್ಲಿ ಒಂದೊಂದು ಕುದುರೆಯೂ ಕನಿಷ್ಠ ಎರಡು ಚುಕ್ಕಾಗಳಲ್ಲಿ ತನ್ನ ಯಜಮಾನನಿಗೆ ಸಾಥ್ ನೀಡುತ್ತವೆ.

ಒಂದು ಚೆಂಡನ್ನು ಹಿಡಿದಿರುವ ಅಂಪೈರ್ ಒಬ್ಬ ಒಂದು ಕೋಲನ್ನು ಎತ್ತಿಕೊಂಡು ಬುಜದ ಮೇಲೆ ಹೊಡೆಯುತ್ತಿರುವುದು.

ಈ ಆಟದಲ್ಲಿ ಕೆಲವೊಮ್ಮೆ ನಿರ್ಬಂಧಗಳನ್ನೂ ಬಳಸಲಾಗುತ್ತದೆ. ಇದರಲ್ಲಿ ಪ್ರತಿಯೊಬ್ಬ ಆಟಗಾರನ ನಿರ್ಬಂಧಗಳನ್ನು ಹೋಲಿಸಲಾಗುತ್ತದೆ. ಕಡಿಮೆ ನಿರ್ಬಂಧಕಗಳನ್ನು ಹೊಂದಿದ ತಂಡಕ್ಕೆ ಆಟ ಪ್ರಾರಂಭವಾಗುವುದಕ್ಕೂ ಮುನ್ನ ನಿರ್ಬಂಧಕಗಳನ್ನೇ ಗೋಲ್‌ಗಳ ರೂಪದಲ್ಲಿ ನೀಡಲಾಗುತ್ತದೆ.

ಉಭಯ ತಂಡಗಳ ನಾಲ್ಕು ಮಂದಿ ಕ್ರೀಡಾಳುಗಳು ೧,೨,೩,೪ ರಂತೆ ನಿಂತ ಎರಡು ಸಾಲುಗಳನ್ನು ಹೊಂದಿರುತ್ತವೆ. ಆ ಎರಡೂ ತಂಡಗಳ ಮಧ್ಯೆ ಅಂಪೈರ್ ನಿಂತಿರುತ್ತಾರೆ. ಮೈದಾನದಲ್ಲಿ ಕುದುರೆ ಏರಿದ ಇಬ್ಬರು ಅಂಪೈರುಗಳು ಉಪಸ್ಥಿತರಿರುತ್ತಾರೆ. ಒಬ್ಬ ರೆಫ್ರಿ ಮೈದಾನದ ಹೊರಭಾಗದಲ್ಲಿ ನಿಂತಿರುತ್ತಾರೆ. ಆಟದ ಪ್ರಾರಂಭದಲ್ಲಿ ಅಂಪೈರ್ ಒಬ್ಬರು ಎರಡೂ ತಂಡಗಳ ನಡುವೆ ಚೆಂಡನ್ನು ಬಿಸಾಕುತ್ತಾರೆ. ಒಂದೊಂದು ಗೋಲು ಗಳಿಸಿದಾಗಲೂ ಅಥವಾ ಚಕ್ಕರ್ ಗಳ ನಂತರವೂ ಉಭಯ ತಂಡಗಳು ಯಾವುದೇ ಗಾಳಿಯ ಪರಿಣಾಮವನ್ನು ತಗ್ಗಿಸುವುದಕ್ಕೋಸ್ಕರ ಫೀಲ್ಡ್‌/ಅರೇನಾದ ಅಂಚಿನಲ್ಲಿರುವ ತಮ್ಮ ಗೋಲುಗಳನ್ನು ಬದಲಾಯಿಸಿಕೊಳ್ಳುತ್ತವೆ. ದಿಕ್ಕುಗಳನ್ನು ಬದಲಾಯಿಸುವುದರಿಂದ ಹಾಗೂ ಪ್ರತಿಯೊಬ್ಬ ಆಟಗಾರನೂ ತನ್ನ ಬಲಗೈಯಲ್ಲೇ ಆಡಬೇಕಾದುದರಿಂದ, ಪ್ರತಿಯೊಂದು ತಂಡಕ್ಕೂ ಚೆಂಡನ್ನು ತಮ್ಮ ಬಲಭಾಗದಲ್ಲಿಯೇ ಉಳಿಸಿಕೊಳ್ಳಲು ಸಮಾನ ಅವಕಾಶ ದೊರೆಯುತ್ತದೆ.

ಸಾಮಾನ್ಯ ಕೌಶಲಗಳು ಮತ್ತು ಅಭ್ಯಾಸಗಳು[ಬದಲಾಯಿಸಿ]

ಪೊಲೊದಲ್ಲಿ ಎರಡು ಬಗೆಯ ರಕ್ಷಣಾತ್ಮಕ ತಂತ್ರಗಳನ್ನು ಬಳಸಲಾಗುತ್ತದೆ. ಹೂಕಿಂಗ್ ಅಥವಾ “ಕೊಂಡಿ ಹಾಕುವುದು” ಇದರಲ್ಲಿ ಒಂದು. ಅಂದರೆ, ಎದುರಾಳಿ ಆಟಗಾರನ ಸುತ್ತಿಗೆಯಾಕಾರದ ದಂಡವನ್ನು(ಮೆಲ್ಲೆಟ್) ತನ್ನ ದಂಡದಿಂದ ಬಂಧಿಸಿ ಚೆಂಡನ್ನು ತಿರುಗಿಸುವ ಆತನ ಯತ್ನವನ್ನು ವಿಫಲಗೊಳಿಸುವುದು. ಆದರೆ ಮನಸ್ಸಿಗೆ ಬಂದಂತೆ ಕೊಂಡಿ ಹಾಕಲಾಗುವುದಿಲ್ಲ. ಯಾವ ಕಡೆಗೆ ಚೆಂಡನ್ನು ತಿರುಗಿಸಲಾಗುತ್ತಿದೆಯೋ ಆ ದಿಕ್ಕಿನಲ್ಲಿ, ಇಲ್ಲವೇ ನೇರವಾಗಿ ಎದುರಾಗಿ ಅಥವಾ ಹಿಂದಿನಿಂದ ಮಾತ್ರ ಎದುರಾಳಿ ಆಟಗಾರನ ದಂಡಕ್ಕೆ ಕೊಂಡಿ ಹಾಕಬಹುದು. ಯಾವುದೇ ಹೂಕಿಂಗ್ ಆಟದ ನಿಯಮಾವಳಿಯನ್ನು ಉಲ್ಲಂಘಿಸಿದರೆ ಅಂಥ ಸಂದರ್ಭದಲ್ಲಿ “ಫೌಲ್‌” ಎಂದು ಘೋಷಿಸಲಾಗುತ್ತದೆ. ಉದಾಹರಣೆಗೆ, ಯಾವುದೇ ಆಟಗಾರ ಹೂಕಿಂಗ್ ಮಾಡುವ ಸಂದರ್ಭದಲ್ಲಿ ಎದುರಾಳಿ ಆಟಗಾರನ ಕುದುರೆಯ ಸಮೀಪ ಸಾಗುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅದಕ್ಕೆ ದಂಡ ವಿಧಿಸಲಾಗುತ್ತದೆ.

ಇನ್ನೊಂದು ತಂತ್ರವೆಂದರೆ ಢಿಕ್ಕಿ ಹೊಡೆಯುವುದು. ಇದನ್ನು ಇಂಗ್ಲೀಷ್‌ನಲ್ಲಿ ’ಬಂಪ್‌’ ಅಥವಾ ’ರೈಡ್‌ ಆಫ್‌’ಎನ್ನುತ್ತಾರೆ. ಇದನ್ನು ಹಾಕಿ ಆಟದಲ್ಲಿನ ಬಾಡಿ-ಚೆಕ್‌ಗೆ ಹೋಲಿಸಬಹುದು. ಎದುರಾಳಿ ಆಟಗಾರನ ಏಕಾಗ್ರತೆಯನ್ನು ಭಂಗಗೊಳಿಸಲು ಈ ತಂತ್ರವನ್ನು ಬಳಸಲಾಗುತ್ತದೆ. ಎದುರಾಳಿ ಆಟಗಾರನನ್ನು ಚೆಂಡಿನ ಲೈನ್‌ನಿಂದ ದೂರ ಮಾಡುವುದು ಅಥವಾ ಆತನ ಹೊಡೆತವನ್ನು ವಿಫಲಗೊಳಿಸುವುದು ಈ ತಂತ್ರದ ಉದ್ದೇಶ. ಒಬ್ಬ ಆಟಗಾರ ತನ್ನ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದಾಗ ಎದುರಾಳಿ ತಂಡದ ಆಟಗಾರ ಅವನನ್ನು ಚೆಂಡಿನಿಂದ ದೂರ ಕಳಿಸುವುದೆ ರೈಡ್-ಆಫ್. ಈ ಸಂಘರ್ಷದ ಆಯಾಮ ೪೫ ಡಿಗ್ರಿ ದಾಟುವವರೆಗೆ ಮಾತ್ರ ಈ ತಂತ್ರಕ್ಕೆ ಮಾನ್ಯತೆ ಉಂಟು.

ಪೋಲೊ ಕುದುರೆ ಮರಿಗಳು[ಬದಲಾಯಿಸಿ]

ಪೋಲೋ ಆಟ ಪ್ರಾರಂಭವಾಗುವುದನ್ನು ಕಾಯುತ್ತಿರುವ ಕುದುರೆ ಮರಿ

ಈ ಆಟದಲ್ಲಿ ಬಳಸುವ ಕುದುರೆಮರಿಗಳನ್ನು ’ಪೊಲೊ ಕುದುರೆಮರಿಗಳು’ ಎಂದು ಗುರುತಿಸಲಾಗುತ್ತದೆ. ಹಾಗೆ ನೋಡಿದರೆ ಕುದುರೆಮರಿ ಎಂಬ ಶಬ್ದ ಅತ್ಯಂತ ಸಾಂಪ್ರದಾಯಿಕವಾದದ್ದು. ಕುದುರೆ ಎಂದರೆ ಅದು ದೊಡ್ಡ ಪ್ರಮಾಣದ ಕುದುರೆ ಎಂದು ಕರೆಯಲಾಗುತ್ತದೆ. ಅವುಗಳು ೧೪.೨ ರಿಂದ ೧೬ ಮಾರುಗಳಷ್ಟು ಎತ್ತರವಿರುತ್ತವೆ (ಒಂದು ಮಾರುದ್ದ ಎಂದರೆ ಸುಮಾರು ೪ ಇಂಚುಗಳು ಅಥವಾ ೧೦.೧೬ ಸೆಂ.ಮೀಗಳು) ಹಾಗೂ ೯೦೦ ರಿಂದ ೧೧೦೦ lb ಪೌಂಡ್‌ಗಳಷ್ಟು ತೂಕ ಹೊಂದಿರುತ್ತವೆ. ಪೊಲೊ ಕುದುರೆಮರಿಗಳನ್ನು ಅವುಗಳ ಸಾಮರ್ಥ್ಯ, ವೇಗ, ದೃಢತೆ ಹಾಗೂ ತಂತ್ರಗಾರಿಕೆಗಾಗಿ ತುಂಬಾ ಚಾಣಾಕ್ಷತನದಿಂದ ಆಯ್ಕೆ ಮಾಡಲಾಗುತ್ತದೆ. ಅವುಗಳ ಸ್ವಭಾವ ಇಲ್ಲಿ ಅತ್ಯಂತ ಪ್ರಮುಖವಾದದ್ದು. ಒತ್ತಡದಲ್ಲೂ ಅವು ಕ್ರಿಯಾಶೀಲವಾಗಿರಬೇಕಾಗಿರುತ್ತದೆ. ಹಾಗೂ ಸವಾರನ ನಿಯಂತ್ರಣಕ್ಕೆ ದಕ್ಕದ ರೀತಿಯಲ್ಲಿ ಭಾವೋದ್ವೇಗಗೊಳ್ಳುವ ಕುದುರೆಗಳಿಗೆ ಇಲ್ಲಿ ಅವಕಾಶವೇ ಇಲ್ಲ. ಅವುಗಳಲ್ಲಿ ಹೆಚ್ಚಿನವು ಥರೋಬ್ರೆಡ್‌ ತಳಿಯವಾಗಿರುತ್ತವೆ ಅಥವಾ ಥರೋಬ್ರೆಡ್‌ನಿಂದ ಕ್ರಾಸ್‌ ಮಾಡಲಾದ ತಳಿಗಳೂ ಆಗಿರುತ್ತವೆ. ಅವುಗಳಿಗೆ ಒಂದೇ ಕೈಯಲ್ಲಿ ನಿಯಂತ್ರಿಸಬಲ್ಲಂತೆ ತರಬೇತಿ ನೀಡಲಾಗಿರುತ್ತದೆ ಹಾಗೂ ಮುಂದುವರಿಯಲು, ಪಕ್ಕಕ್ಕೆ ತಿರುಗಲು ಹಾಗೂ ನಿಲ್ಲಲು ಸವಾರ ತನ್ನ ಕಾಲುಗಳಲ್ಲಿಯೇ ನೀಡುವ ಸಂಜ್ಞೆಗಳನ್ನು ಅರ್ಥ ಮಾಡಿಕೊಳ್ಳುವ ಸೂಕ್ಷತೆಯನ್ನು ಅವುಗಳಿಗೆ ತರಬೇತಿಯ ಮೂಲಕ ಕಲಿಸಿಕೊಡಲಾಗುತ್ತದೆ. ಉತ್ತಮ ರೀತಿಯಲ್ಲಿ ತರಬೇತಿ ಪಡೆದ ಕುದುರೆ ತನ್ನ ಸವಾರನನ್ನು ಸುಲಲಿತವಾಗಿ ಹಾಗೂ ಚುರುಕಾಗಿ ಚೆಂಡಿನೆಡೆಗೆ ಕೊಂಡೊಯ್ಯುತ್ತದೆ ಮತ್ತು ತನ್ಮೂಲಕ ಆಟಗಾರನ ಕೌಶಲ್ಯಕ್ಕೆ ಶೇ. ೬೦ ರಿಂದ ೭೦ರಷ್ಟು ಕೊಡುಗೆಯನ್ನು ನೀಡುತ್ತದೆ. ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ಪೊಲೊ ತರಬೇತಿ ಸಾಮಾನ್ಯವಾಗಿ ಮೂರು ವರ್ಷಕ್ಕೇ ಪ್ರಾರಂಭಗೊಂಡು ಎರಡು ವರ್ಷಕ್ಕೆ ಆರು ತಿಂಗಳಿರುವಾಗಲೇ ಮುಕ್ತಾಯಗೊಳ್ಳುತ್ತದೆ. ಬಹುತೇಕ ಕುದುರೆಗಳು ತಮ್ಮ ಐದನೇ ವಯಸ್ಸಿನಲ್ಲಿಯೇ ದೈಹಿಕವಾಗಿ ಪ್ರಬುದ್ಧ ಸ್ಥಿತಿಗೆ ತಲುಪುತ್ತವೆ ಹಾಗೂ ಅವು ತಮ್ಮ ೬ ಹಾಗೂ ೭ನೇ ವಯಸ್ಸಿನಲ್ಲಿ ಕ್ರೀಡಾಕ್ಷಮತೆ ಹಾಗೂ ತರಬೇತಿಯ ತುತ್ತ ತುದಿಯನ್ನು ತಲುಪುತ್ತವೆ. ಅದೇನೇ ಇರಲಿ, ಯಾವುದೇ ಅಪಘಾತಗಳಲ್ಲಿ ಅವು ಗಾಯಗೊಳ್ಳದೇ ಇದ್ದಲ್ಲಿ ಪೊಲೊ ಕುದುರೆಮರಿಗಳು ತಮ್ಮ ೧೮ ರಿಂದ ೨೦ ವರ್ಷಗಳ ವರೆಗೆ ಕ್ರೀಡಾಂಗಣದಲ್ಲಿ ಪ್ರಸ್ತುತವಾಗಿ ಉಳಿದುಕೊಳ್ಳಬಲ್ಲವು.

ಆಟದಲ್ಲಿ ಬಳಲಿದ ಕುದುರಗಳನ್ನು ಬದಲಾಯಿಸಲು ಹಾಗೂ ಚುಕ್ಕಾಗಳ ನಡುವೆ ಹೊಸ ಕುದುರೆಗಳನ್ನು ಬಳಸಿಕೊಳ್ಳಲೋಸುಗ ಪ್ರತಿಯೊಬ್ಬ ಕ್ರೀಡಾಳುವೂ ಒಂದಕ್ಕಿಂತ ಹೆಚ್ಚು ಕುದುರೆಗಳನ್ನು ಹೊಂದಿರಬೇಕಾಗುತ್ತದೆ. ಹಾಗಾಗಿ, ಸಾಮಾನ್ಯವಾಗಿ ಒಬ್ಬ ಕ್ರೀಡಾಳು ೪ ರಿಂದ ೮ ಕುದುರೆಗಳನ್ನು ಹೊಂದಿರುತ್ತಾನೆ. ಒಬ್ಬ ಕ್ರೀಡಾಳುವಿನ ಬೊಕ್ಕಸದಲ್ಲಿರುವ ಕುದುರೆಗಳ ಸಮೂಹವನ್ನು ’ಪೊಲೊ ಕುದುರೆಮರಿಗಳ ಸರಣಿ ’ ಎಂದೇ ಕರೆಯಲಾಗುತ್ತದೆ. ಇವುಗಳಲ್ಲಿ ಕನಿಷ್ಠ ೨ ಅಥವಾ ೩ ಕುದುರೆಮರಿಗಳನ್ನು ಕಡಿಮೆ ಗೋಲ್‌ ಪಂದ್ಯಗಳಲ್ಲಿ (ಮರು ಬಳಕೆ ಮಾಡುವುದಕ್ಕಿಂತ ಮೊದಲು ಕನಿಷ್ಠ ಒಂದು ಚಕ್ಕರ್ ನಷ್ಟು ವಿಶ್ರಾಂತಿ ಪಡೆಯುತ್ತವೆ), ೪ಕ್ಕಿಂತ ಹೆಚ್ಚು ಕುದುರೆಗಳನ್ನು ಮಧ್ಯಮ ಗೋಲ್‌ ಪಂದ್ಯಗಳಲ್ಲಿ (ಚಕ್ಕರ್ ಗೆ ಕನಿಷ್ಠ ಒಂದು ಕುದುರೆ ಬಳಸಲಾಗುತ್ತದೆ) ಹಾಗೂ ಹೆಚ್ಚಿನ ಮಟ್ಟದ ಸ್ಪರ್ಧೆಗಳಿಗೆ ಇನ್ನಷ್ಟು ಕುದುರೆಗಳನ್ನು ಬಳಸಿಕೊಳ್ಳಲಾಗುತ್ತದೆ.

ಆಟಗಾರರು[ಬದಲಾಯಿಸಿ]

ಯುನೈಟೆಡ್ ಸ್ಟೇಟ್ಸ್‌ನ ಮಹಿಳಾ ಪೋಲೊ ತಂಡ.

ಪ್ರತಿಯೊಂದು ತಂಡ ಕೂಡ ನಾಲ್ಕು ಮಂದಿ ಕುದುರೆ ಸವಾರರನ್ನು ಒಳಗೊಂಡಿರುತ್ತದೆ. ತಂಡವೊಂದು ಪುರುಷ ಹಾಗೂ ಮಹಿಳೆಯರಿಬ್ಬರನ್ನೂ ಒಳಗೊಂಡಿರಬಹುದು.

ಪ್ರತಿಯೊಬ್ಬ ಆಟಗಾರನೂ ತನ್ನದೇ ಸ್ಥಾನವನ್ನು, ಜವಾಬ್ದಾರಿಗಳನ್ನೂ ಹೊಂದಿರುತ್ತಾನೆ:

  • ಒಂದನೇ ಸ್ಥಾನ ಮೈದಾನದಲ್ಲಿಯೇ ಅತ್ಯಂತ ಆಕ್ರಮಣಕಾರಿ ಸ್ಥಾನ. ಒಂದನೇ ಸಂಖ್ಯೆ ಸಾಮಾನ್ಯವಾಗಿ ಎದುರಾಳಿ ತಂಡದ ನಾಲ್ಕನೇ ಸ್ಥಾನದನ್ನು ಕವರ್ ಮಾಡುತ್ತದೆ.
  • ಎರಡನೇ ಸ್ಥಾನ ವಿಘ್ನವುಂಟು ಮಾಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಓಟದಲ್ಲಿಯೇ ಇರಲಿ, ಗೋಲು ಗಳಿಸುವುದರಲ್ಲಿಯೇ ಇರಲಿ, ಅಥವಾ ಒಂದನೇ ಸಂಖ್ಯೆಗೆ ಪಾಸ್‌ ನೀಡುವುದರಲ್ಲಿ ಮತ್ತು ಅವುಗಳ ಹಿಂದೆ ಒತ್ತಾಸೆಯಾಗಿ ನಿಲ್ಲುವುದಿರಲಿ ಪ್ರತಿಯೊಂದರಲ್ಲೂ ಅದು ಮಹತ್ವದ ಪಾತ್ರವಹಿಸುತ್ತದೆ. ರಕ್ಷಣಾತ್ಮಕ ಆಟವನ್ನೇ ತೆಗೆದುಕೊಂಡರೆ ಅವರು ಎದುರಾಳಿ ತಂಡದ ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸುವ ಹಾಗೂ ಸಾಮಾನ್ಯವಾಗಿ ದಕ್ಷ ಆಟಗಾರರಾಗಿರುವ ಮೂರನೇ ಸ್ಥಾನದನ್ನು ಕವರ್ ಮಾಡುತ್ತಾರೆ. ಈ ಸ್ಥಾನ ಎಷ್ಟು ಕಷ್ಟದಿಂದ ಕೂಡಿರುತ್ತದೆ ಎಂದರೆ ಮೂರನೇ ಸ್ಥಾನದಲ್ಲಿ ಆಡುವ ಉತ್ತಮ ಆಟಗಾರ ಸಿಗುವವರೆಗೆ ತಂಡದ ಅತ್ಯಂತ ಪ್ರತಿಭಾವಂತ ಹಾಗೂ ಅತ್ಯುತ್ತಮ ಆಟಗಾರ ಎರಡನೇ ಸ್ಥಾನದಲ್ಲಿ ಆಡುವುದು ತೀರಾ ಅಪರೂಪ.
  • ಮೂರನೇ ಸ್ಥಾನ ಒಂದು ರೀತಿಯಲ್ಲಿ ತಾಂತ್ರಿಕ ನಾಯಕ ಎಂದರೆ ತಪ್ಪಲ್ಲ. ಎದುರಾಳಿ ತಂಡಕ್ಕೆ ಅಗಾಧ ಪ್ರತಿರೋಧ ಒಡ್ಡುತ್ತಲೇ ಒಂದನೇ ಹಾಗೂ ಎರಡನೇ ಸ್ಥಾನದ ಆಟಗಾರರ ಕೈ ತಲುಪುವಂತೆ ಚೆಂಡನ್ನು ಹಿಟ್‌ ಮಾಡುವ ಶಕ್ತಿಶಾಲಿ ಹಿಟ್ಟರ್ ಪಾತ್ರವನ್ನು ಆತ ವಹಿಸಬೇಕಾಗುತ್ತದೆ. ಒಂದು ತಂಡದ ಅತ್ಯಂತ ಉತ್ತಮ ಆಟಗಾರ ಮೂರನೇ ಸ್ಥಾನದಲ್ಲಿ ಆಡುತ್ತಿರುತ್ತಾನೆ ಹಾಗೆಯೇ ಹೆಚ್ಚಿನ ನಿರ್ಬಂಧಗಳನ್ನು ಸೃಷ್ಟಿಸುವ ಜವಾಬ್ದಾರಿಯೂ ಆತನ ಹೆಗಲ ಮೇಲಿರುತ್ತದೆ.
  • ನಾಲ್ಕನೇ ಸ್ಥಾನ ದಆಟಗಾರ ಮುಖ್ಯವಾಗಿ ರಕ್ಷಣಾತ್ಮಕ ಆಟಗಾರನಾಗಿರುತ್ತಾನೆ. ಅವರು ಮೈದಾನದ ಯಾವ ಮೂಲೆಯನ್ನು ಬೇಕಾದರೂ ಪ್ರವೇಶಿಸಬಹುದಾದರೂ ಅವರು ಹೆಚ್ಚಾಗಿ ಎದುರಾಳಿ ತಂಡ ಹೆಚ್ಚು ಅಂಕ ಪಡೆಯದೇ ಇರುವಂತೆ ನೋಡಿಕೊಳ್ಳುತ್ತಾರೆ. ಅತ್ತ ನಾಲ್ಕನೇ ಸ್ಥಾನದ ಆಟಗಾರ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡುತ್ತಿದ್ದರೆ ಇತ್ತ ಮೂರನೇ ಸ್ಥಾನದ ಆಟಗಾರ ಇನ್ನಷ್ಟು ಆಕ್ರಮಣಕಾರಿಯಾಗಿ ಆಟವಾಡಲು ಅವಕಾಶ ದೊರೆಯುತ್ತದೆ. ಏಕೆಂದರೆ ತಾವೊಮ್ಮೆ ಚೆಂಡಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡರೆ ಎದುರಾಳಿ ತಂಡದವರು ತಮ್ಮನ್ನು ಕವರ್ ಮಾಡುವ ಸಾಧ್ಯತೆಯನ್ನು ಅರಿತಿರುತ್ತಾರೆ.

ಪೊಲೊ ಆಟವನ್ನು ಬಲಗೈಯಲ್ಲಿಯೇ ಆಡತಕ್ಕದ್ದು.

ಆಟದ ಸಲಕರಣೆಗೆಳು[ಬದಲಾಯಿಸಿ]

ಇರಾನಿನ ಮಹಿಳಾ ಪೋಲೊ ಆಟಗಾರ್ತಿ
ಮೊಣಕಾಲು ಪಟ್ಟಿ ಧರಿಸಿದ ಪೋಲೊ ಆಟಗಾರ, ಎದುರಾಳಿಯಿಂದ "ಚೆಂಡನ್ನು ತಪ್ಪಿಸುವುದು"

ಆಟಗಾರ ಸಾಮಾನ್ಯ ವೇಷ-ಭೂಷಣವೆಂದರೆ ಶಿರಸ್ತ್ರಾಣ (ದೂರದಲ್ಲಿ ಕುಳಿತು ಆಟವನ್ನು ವೀಕ್ಷಿಸುವ ಮಂದಿಗೆ ಅನುಕೂಲವಾಗುವಂತೆ ವಿಭಿನ್ನ ಬಣ್ಣಗಳ ಶಿರಸ್ತ್ರಾಣಗಳನ್ನು ಆಟಗಾರರು ಧರಿಸುತ್ತಾರೆ), ಮೊಣಕಾಲಿನಿಂದ ತುಸು ಕೆಳಭಾಗದವರೆಗಿರುವ ರೈಡಿಂಗ್ ಬೂಟುಗಳು, ಬಿಳಿ ಷರಾಯಿ (ಕೆಲವೊಮ್ಮೆ ಸಾಮಾನ್ಯ ಡೆನಿಮ್‌ ಜೀನ್ಸ್‌ ಬಟ್ಟೆಯದು), ಮತ್ತು ತಮ್ಮ ಸ್ಥಾನವನ್ನು ತಿಳಿಸುವ ಸಂಖ್ಯೆಯನ್ನು ಹೊಂದಿದ ಬಣ್ಣದ ಅಂಗಿಯನ್ನು ಆಟಗಾರರು ಧರಿಸುತ್ತಾರೆ. ಒಂದು ಅಥವಾ ಎರಡು ಕೈಗವಚಗಳು, ಸೊಂಟಪಟ್ಟಿ, ಮಂಡಿಕವಚಗಳು (ಕೆಲವು ಕ್ಲಬ್‌ಗಳಲ್ಲಿ ಇವು ಕಡ್ಡಾಯ), ಮುಳ್ಳುಹಿಮ್ಮಡಿ, ಮುಖಕವಚ ಹಾಗೂ ಒಂದು ಚಾಟಿ ಇವೆಲ್ಲವನ್ನೂ ಐಚ್ಛಿಕ ಪರಿಕರಗಳು ಒಳಗೊಂಡಿರುತ್ತವೆ. ಯುನೈಟೆಡ್‌ ಸ್ಟೇಟ್ಸ್ ಪೊಲೊ ಅಸೋಸಿಯೇಷನ್ (ಯುಎಸ್‌ಪಿಎ) ಆಟಗಾರರಿಗೆ ಶಿರಸ್ತ್ರಾಣ ಅಥವಾ ಟೊಪ್ಪಿ ಜೊತೆ ಚಿನ್‌ ಸ್ಟ್ರ್ಯಾಪ್‌ ಅನ್ನು ಕಡ್ಡಾಯಗೊಳಿಸಿದೆ.[೧೮]

ಬಾಹ್ಯ ಕ್ರೀಡಾಂಗಣದ ಪೊಲೊದಲ್ಲಿ ಬಳಸುವ ಚೆಂಡು ಹೆಚ್ಚು ಪರಿಣಾಮಕಾರಿಯಾದ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಆದರೆ ಪ್ರಾರಂಭದಲ್ಲಿ ಅದನ್ನು ಬಿದಿರು ಅಥವಾ ನೀರು ಹಿಪ್ಪೆ ಗಿಡದ ಬೇರಿನಿಂದ ಮಾಡಲಾಗುತ್ತಿತ್ತು. ಒಳಾಂಗಣದ ಪೊಲೊ ಚೆಂಡು ಚರ್ಮದ ಹೊದಿಕೆ ಹೊಂದಿರುತ್ತದೆ ಹಾಗೂ ೪½ ಇಂಚು (೧೧.೪ ಸೆಂ.ಮೀ) ಸುತ್ತಳತೆ ಹೊಂದಿರುತ್ತದೆ. ಬಾಹ್ಯ ಕ್ರೀಡಾಂಗಣದಲ್ಲಿ ಬಳಸಲಾಗುವ ಚೆಂಡು ೩¼ (೮.೩ ಸೆಂ.ಮೀ) ಇಂಚುಗಳಷ್ಟಿರುತ್ತದೆ ಹಾಗೂ ೪ ಔನ್ಸ್‌ಗಳಷ್ಟು(೧೧೩.೪ ಗ್ರಾಂಗಳು) ತೂಕವಿರುತ್ತದೆ. ಪೊಲೊ ಆಡಲು ಬಳಸುವ ಸುತ್ತಿಗೆಯಾಕಾರದ ಉದ್ದನೆಯ ದಂಡ (ಮೆಲ್ಲೆಟ್‌) ದ ಹಿಡಿಕೆ ರಬ್ಬರ್ ಹೊದಿಕೆ ಹಾಗೂ ಹೆಬ್ಬೆರಳನ್ನು ಸುತ್ತಿಕೊಂಡಿರುವ ಸ್ಲಿಂಗ್ ಎಂದು ಕರೆಯಲಾಗುವ ಛಡಿಯನ್ನು ಹೊಂದಿರುತ್ತದೆ. ಅದರ ಉದ್ದನೆಯ ಹಿಡಿಯನ್ನು ಮಾನೌ-ಬೆತ್ತದಿಂದ ಮಾಡಲಾಗಿರುತ್ತದೆ (ಪೊಳ್ಳಾಗಿರುತ್ತದೆ ಎಂಬ ಕಾರಣಕ್ಕೆ ಬಿದಿರನ್ನು ಬಳಸುವುದಿಲ್ಲ) ಆದರೆ ಇಂದು ಮೆಲ್ಲೆಟ್‌ಗಳನ್ನು ಸಮ್ಮಿಶ್ರ ಪದಾರ್ಥಗಳಿಂದ ತಯಾರಿಸಲಾಗುತ್ತಿದೆ. ನ್ಯೂಜಿಲೆಂಡ್‌ನಲ್ಲಿ ತಯಾರಿಸಲಾಗುತ್ತಿರುವ ಮರದ ಮಿಲ್ಲೆಟ್‌ಗಳು ಈ ತಂತ್ರಜ್ಞಾನದ ಮೇರು ಅನ್ವೇಷಣೆ ಎನ್ನಬಹುದು. ಮೆಲ್ಲೆಟ್‌ಗಳ ಶಿರಭಾಗ ಸಿಗಾರ್ ನ ರೂಪದಲ್ಲಿರುತ್ತದೆ, ಗಟ್ಟಿ ಮರವಾದ ಟಿಪಾದಿಂದ ತಯಾರಿಸಲಾಗುವ ಇದು ೯ ೧/೪" ಇಂಚುಗಳಷ್ಟು ಉದ್ದವಿರುತ್ತದೆ. ಮೆಲ್ಲೆಟ್‌ನ ತೂಕ ಆಟಗಾರನ ಇಚ್ಛೆ ಹಾಗೂ ಅದನ್ನು ತಯಾರಿಸಲು ಬಳಸಲಾದ ಮರವನ್ನು ಆಧರಿಸಿ ೧೬೦ ಗ್ರಾಂ ನಿಂದ ೨೪೦ ಗ್ರಾಂಗಳಷ್ಟಿರುತ್ತದೆ. ವೃತ್ತಿಪರ ಆಟಗಾರು ಮೆಲ್ಲೆಟ್‌ನ ಶಿರಭಾಗದ ತೂಕದ ಕುರಿತು ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ಮಹಿಳಾ ಆಟಗಾರರು ಪುರುಷ ಆಟಗಾರರಿಗೆ ಹೋಲಿಸಿದರೆ ಅತ್ಯಂತ ಕಡಿಮೆ ತೂಕದ ಮೆಲ್ಲೆಟ್‌ಗಳನ್ನು ಬಳಸುತ್ತಾರೆ. ಕೆಲವು ಪೊಲೊ ಆಟಗಾರರು ತಮ್ಮ ಕುದುರೆಗಳ ಎತ್ತರಕ್ಕೆ ಅನುಗುಣವಾಗಿ ಎಷ್ಟು ಉದ್ದದ ಮೆಲ್ಲೆಟ್‌ ಅನ್ನು ಬಳಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಕುದುರೆ ಎಷ್ಟು ಉದ್ದವಿದೆಯೋ ಅಷ್ಟು ಉದ್ದದ ಮೆಲ್ಲೆಟ್‌. ಇನ್ನು ಕೆಲವು ಆಟಗಾರರು ಕುದುರೆ ಎಷ್ಟೇ ಎತ್ತರವಿರಲಿ ನಿರ್ದಿಷ್ಟ ಉದ್ದದ ಮೆಲ್ಲೆಟ್‌ ಅನ್ನು ಬಳಸುತ್ತಾರೆ. ಇನ್ನು ಕೆಲವು ಆಟಗಾರರು ಕುದುರೆ ಎಷ್ಟೇ ಎತ್ತರವಿರಲಿ ನಿರ್ದಿಷ್ಟ ಉದ್ದದ ಮೆಲ್ಲೆಟ್‌ ಅನ್ನು ಬಳಸುತ್ತಾರೆ. ಹೀಗೆ ಬಳಸಲಾಗುವ ವಿಭಿನ್ನ ಉದ್ದದ ಮೆಲ್ಲೆಟ್‌ಗಳು ೫೦ ಇಂಚಿನಿಂದ ೫೩ ಇಂಚಿನವರೆಗಿರುತ್ತವೆ. ಆಟದ ಸಂದರ್ಭದಲ್ಲಿ ಚೆಂಡು ದುಂಡಾದ ಹಾಗೂ ಚಪ್ಪಟೆಯಾದ ಭಾಗಕ್ಕೆ ತಾಗುವುದಕ್ಕಿಂತ ಹೆಚ್ಚಾಗಿ ಮೆಲ್ಲೆಟ್‌ನ ಶಿರೋಭಾಗದ ಉದ್ದನೆಯ ಭಾಗಕ್ಕೆ ತಗುಲುತ್ತದೆ.

ಪೊಲೊ ಜೀನುಗಳು ಇಂಗ್ಲೀಷ್‌ ಮಾದರಿಯಲ್ಲಿರುತ್ತವೆ. ಹತ್ತಿರದ ಸಂಪರ್ಕ, ಮೇಲ್ನೋಟಕ್ಕೆ ಜಂಪಿಂಗ್ ಜೀನುಗಳ ರೀತಿಯಲ್ಲಿದ್ದರೂ ಪೊಲೊದಲ್ಲಿ ಬಳಸಲಾಗುವ ಬಹುತೇಕ ಜೀನುಗಳು ಕವಾಟಗಳನ್ನು ಹೊಂದಿರುವುದಿಲ್ಲ. ಬದಲಿಗೆ ಜೀನು ಹೊದಿಕೆಯನ್ನು ಹೊಂದಿರುತ್ತವೆ. ಆದರೆ ಕೆಲವು ಆಟಗಾರರು ಜೀನು ಹೊದಿಕೆಯನ್ನು ಬಳಸುವುದಿಲ್ಲ. ಮುಂದಿನ ಬಿಲ್ಲೆಟ್‌ಗೆ ಅಂಟಿಕೊಂಡಂತಿರುವ ಎದೆಗವಚವನ್ನು ಅವರು ಹೆಚ್ಚಾಗಿ ಬಳಸುತ್ತಾರೆ. ಟೈ-ಡೌನ್‌ (ಸ್ಟ್ಯಾಂಡಿಂಗ್ ಮಾರ್ಟಿಂಗೇಲ್) ಕೂಡ ಬಳಸಬಹುದಾಗಿದೆ. ಆದರೂ ಸುರಕ್ಷತೆಯ ದೃಷ್ಟಿಯಿಂದ ಎದೆಗವಚ ಅವಶ್ಯಕವಾದದ್ದು. ಸಾಮಾನ್ಯವಾಗಿ ನೆಕ್‌ ಸ್ಟ್ರ್ಯಾಪ್‌ಕ್ಯಾಪ್‌ ಈ ಟೈ-ಡೌನ್‌ಗೆ ಒತ್ತಾಸೆಯಾಗಿರುತ್ತದೆ. ಜೀನುಪಟ್ಟಿಯನ್ನೂ ಬಳಸಲಾಗುತ್ತದೆ. ಈ ಎಲ್ಲಾ ಪರಿಕರಗಳಲ್ಲಿ ಕುದುರೆ ಸವಾರಿ ಮಾಡುವಾಗ ಕಾಲೂರಲು ಬಳಸುವ ಕಬ್ಬಿಣದ ಬಳೆ ಅತಿ ಹೆಚ್ಚು ಭಾರವಾದದ್ದು. ಹಾಗೆಯೇ ಆ ಬಳೆಯನ್ನು ಹೊಂದಿರುವಂತ ಚರ್ಮದ ಪಟ್ಟಿ ಹೆಚ್ಚು ಅಗಲವಾಗಿಯೂ, ದಪ್ಪವಾಗಿಯೂ ಇರುತ್ತದೆ. ಆಟವಾಡುವ ಸಂದರ್ಭದಲ್ಲಿ ಕುದುರೆಗಳ ಕಾಲಿಗೆ ಗಾಯವಾಗದಂತೆ ಮೊಣಕಾಲುಗಳ ತುಸು ಕೆಳಗೆ ಪೊಲೊ ಹೊದಿಕೆಯನ್ನು ಕಟ್ಟಲಾಗಿರುತ್ತದೆ. ಇದರ ಜೊತೆಗೆ ಕೆಲವೊಮ್ಮೆ ಜಿಗಿಯುವ ಅಥವಾ ನೆಗೆಯುವ (open front) ಬೂಟುಗಳನ್ನು ಬಳಸಲಾಗುತ್ತದೆ. ಈ ಎಲ್ಲಾ ಪರಿಕರಗಳ ಬಣ್ಣ ತಂಡದ ಆಟಗಾರರು ಧರಿಸಿದ ವಸ್ತ್ರದ ಬಣ್ಣಕ್ಕೆ ಹೊಂದುವಂತಿರುತ್ತದೆ. ಸವಾರನ ಮೆಲ್ಲೆಟ್‌ಗೆ ತಾಕದಂತೆ ಕುದುರೆಯ ಕುತ್ತಿಗೆ ಮೇಲಿನ ಕೂದಲನ್ನು ಹೆಣೆಯಲಾಗಿರುತ್ತದೆ ಹಾಗೂ ಅವುಗಳ ಬಾಲದ ಕೂದಲುಗಳನ್ನು ರಿಬ್ಬನ್‌ನಿಂದ ಸುತ್ತಲಾಗಿರುತ್ತದೆ.

ಕುದುರೆಗಳಿಗೆ ಬಳಸಲಾಗುವ ಕಡಿವಾಣ ಹೆಚ್ಚಾಗಿ ಗಾಗ್ ಕಡಿವಾಣವಾಗಿರುತ್ತದೆ ಅಥವಾ ಪೆಲ್ಹಾಮ್‌ ಕಡಿವಾಣವಾಗಿರುತ್ತದೆ. ಗಾಗ್ ಕಡಿವಾಣವಾದರೆ ಅದರೊಂದಿಗೆ ಹೊಂದಿಕೊಂಡಂತೆ ಇರುವ ಕ್ಯಾವೆಸನ್‌ಗೆ ಹೆಚ್ಚುವರಿಯಾಗಿ ನೋಸ್‌ಬ್ಯಾಂಡ್‌ ಅನ್ನು ಅಳವಡಿಸಿರುತ್ತಾರೆ. ಸವಾರರು ತಮ್ಮ ಕುದುರೆಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಎರಡು ಸೆಟ್‌ ಲಗಾಮುಗಳನ್ನು ಬಳಸುತ್ತಾರೆ ಮತ್ತು ಅದರಲ್ಲಿ ಒಂದು ಸೆಟ್‌ ಲಗಾಮನ್ನು ಹಿಡಿದೆಳೆಯಲು ಬಳಸುತ್ತಾರೆ.

ಕ್ರೀಡಾಂಗಣ[ಬದಲಾಯಿಸಿ]

ಪೊಲೊ ಆಟವಾಡುವ ಕ್ರೀಡಾಂಗಣ ೩೦೦ ಗಜಗಳಷ್ಟು ಉದ್ದವಿರುತ್ತದೆ ಹಾಗೂ ೧೬೦ ಗಜಗಳಷ್ಟು ಅಗಲವಿರುತ್ತದೆ. ಅಂದರೆ ಅಮೆರಿಕದ ಒಂಬತ್ತು ಫುಟ್‌ಬಾಲ್‌ ಮೈದಾನಗಳಿಗೆ ಪೊಲೊದ ಒಂದು ಮೈದಾನ ಸಮ. ತ್ವರಿತಗತಿಯ ಪೊಲೊ ಆಡುವ ಮೈದಾನಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ದಪ್ಪನೆಯ ಹುಲ್ಲುಹಾಸನ್ನು ಬೆಳೆಸಲಾಗಿರುತ್ತದೆ. ಗೋಲ್‌ ಪೋಸ್ಟ್‌ ೮ ಅಡಿ ಅಗಲವಾಗಿರುತ್ತವೆ ಹಾಗೂ ಮೈದಾನದ ಎರಡೂ ಅಂಚಿನ ಮಧ್ಯದಲ್ಲಿ ನಿಲ್ಲಿಸಲಾಗಿರುತ್ತದೆ. ಪೊಲೊ ಮೈದಾನದ ಮೇಲ್ಬಾಗವನ್ನು ಆಟಕ್ಕೆ ಸೂಕ್ತವಾಗಿಡಲು ತುಂಬಾ ಎಚ್ಚರಿಕೆಯಿಂದ ಹಾಗೂ ಮುತುವರ್ಜಿಯಿಂದ ಕಾಪಾಡಿಕೊಳ್ಳಬೇಕಾಗುತ್ತದೆ. ಪಂದ್ಯದ ಅರ್ಧದಲ್ಲಿ ವೀಕ್ಷಕರನ್ನೂ ಮೈದಾನಕ್ಕೆ ಬರಮಾಡಿಕೊಂಡು ಪೊಲೊದ ಸಂಪ್ರದಾಯವಾದ ’ಡಿವೋಟ್ ಸ್ಟ್ಯಾಂಪಿಂಗ್‌’’ ನಲ್ಲಿ ಭಾಗವಹಿಸಲು ಅವರಿಗೂ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕುದುರೆಗಳ ಕಾಲಿಗೆ ಸಿಕ್ಕು ಆಕಾರ ಕಳೆದುಕೊಂಡ ಮೈದಾನದ ಮೇಲಿನ ಹುಲ್ಲಿನ ಚಿಕ್ಕ ಚಿಕ್ಕ ಉಬ್ಬುಗಳನ್ನು ಸರಿಮಾಡುವುದರ ಜೊತೆಗೆ ಅಲ್ಲಿ ಬಂದಿದ್ದ ಎಲ್ಲಾ ವೀಕ್ಷಕರೂ ಒಬ್ಬರಿಗೊಬ್ಬರು ಬೆರೆಯಲೋಸುಗ ಈ ಸಂಪ್ರದಾಯವನ್ನು ಪ್ರಾರಂಭಿಸಲಾಯಿತು ಎನ್ನಲಾಗಿದೆ.

ಹೊರಾಂಗಣ ಪೊಲೊ[ಬದಲಾಯಿಸಿ]

ಈ ಆಟ ೭ ನಿಮಿಷಗಳ ಆರು ಚುಕ್ಕಾಗಳನ್ನು ಹೊಂದಿರುತ್ತದೆ. ಆಟಗಾರರು ಈ ನಡುವೆಯೇ ತಮ್ಮ ಕುದುರೆಗಳನ್ನು ಬದಲಿಸುತ್ತಾರೆ. ೭ ನಿಮಿಷಗಳ ಒಂದು ಚುಕ್ಕಾ ಪ್ರತಿ ಬಾರಿಯೂ ಅಂತ್ಯಗೊಂಡಾಗ ಆಟ ನಿಲ್ಲುವವರೆಗೂ ೩೦ ನಿಮಿಷಗಳಷ್ಟು ಹೆಚ್ಚುವರಿ ಕಾಲ ಮುಂದುವರಿಯುತ್ತದೆ. ಪ್ರತಿಯೊಂದು ಚುಕ್ಕಾಗಳ ನಡುವೆ ನಾಲ್ಕು ನಿಮಿಷಗಳ ವಿಶ್ರಾಂತಿ ಇರುತ್ತದೆ. ಪೆನಾಲ್ಟಿ, ಪರಿಕರಗಳು ಮುರಿಯುವುದು ಅಥವಾ ಆಟಗಾರನಾಗಲೀ, ಕುದುರೆಯಾಗಲೀ ಗಾಯಗೊಳ್ಳದ ಹೊರತು ಒಮ್ಮೆ ಶುರುವಾದ ಪಂದ್ಯ ನಿರಂತರವಾಗಿ ಮುಂದುರಿಯುತತಲೇ ಇರುತ್ತದೆ. ಮೈದಾನದ ಅಂಚಿನಲ್ಲಿ ನಿಲ್ಲಿಸಲಾದ ಗೋಲ್‌ ಪೋಸ್ಟ್‌ ಗಳ ನಡುವೆ ಚೆಂಡನ್ನು ನುಗ್ಗಿಸಿ ಗೋಲು ಗಳಿಸುವುದಷ್ಟೇ ಉಭಯ ತಂಡಗಳ ಏಕೈಕ ಉದ್ದೇಶವಾಗಿರುತ್ತದೆ. ಒಂದು ಪಕ್ಷ, ಗೋಲ್‌ಗಿಂತ ಅಗಲವಾಗಿ ಚೆಂಡನ್ನು ಹೊಡೆದರೆ ಎದುರಾಳಿ ತಂಡಕ್ಕೆ ಚೆಂಡು ಯಾವ ಜಾಗದಲ್ಲಿ ಮೈದಾನದ ಬೌಂಡರಿ ದಾಟಿತೋ ಅಲ್ಲಿಂದಲೇ ’ನಾಕ್‌-ಇನ್‌’ ಮಾಡುವ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಆ ಮೂಲಕ ಬೌಂಡರಿ ಬಿಟ್ಟು ಹೊರ ಹೋದ ಚೆಂಡು ಮತ್ತೊಮ್ಮೆ ಕ್ರೀಡಾಂಗಣದೊಳಗೆ ಪ್ರವೇಶ ಪಡೆಯುತ್ತದೆ.

ಅರೇನಾ ಪೊಲೊ[ಬದಲಾಯಿಸಿ]

ಅರೇನಾ ಪೊಲೊಗೆ ಸಂಬಂಧಿಸಿದಂತೆ ಅಮೆರಿಕದ ಹಾಗೂ ಬ್ರಿಟೀಷ್‌ ನಿಯಮಾವಳಿಯಲ್ಲಿ ಚಿಕ್ಕ ಪುಟ್ಟ ವ್ಯತ್ಯಾಸಗಳಿವೆ. ಆಟದಲ್ಲಿರುವ ನಾಲ್ಕು ಅವಧಿಗಳನ್ನು ಚುಕ್ಕಾ(ಬ್ರಿಟೀಷ್ ಅರೆನಾ ಪೊಲೊ ಕ್ರೀಡೆಯ ನಿಯಮಾವಳಿಯಲ್ಲಿ ಪ್ರಸ್ತುತ ಆರುವರೆ ನಿಮಿಷದ ಚುಕ್ಕಾವನ್ನು ಅಳವಡಿಸಿಕೊಳ್ಳಲಾಗಿದೆ) ಎಂದೇ ಕರೆಯಲಾಗುತ್ತದೆ. ಈ ನಡುವೆಯೇ ಆಟಗಾರರು ತಮ್ಮ ಕುದುರೆಗಳನ್ನು ಬದಲಿಸಿಕೊಳ್ಳುತ್ತಾರೆ. ಒಂದೇ ಕುದುರೆಗೆ ಎರಡು ಚುಕ್ಕಾಗಳನ್ನು ಏಕಕಾಲದಲ್ಲಿ ಆಡಲು ಸಾಧ್ಯವಾಗದೇ ಇರಬಹುದು. ಪೆನಾಲ್ಟಿ ಸಂಭವಿಸುವವರೆಗೆ, ಯಾವುದಾದರೂ ಪರಿಕರ ಮುರಿಯುವವರೆಗೆ, ಹಾಗೂ ಆಟಗಾರನಾಗಲೀ, ಕುದುರೆಯಾಗಲೀ ಗಾಯಗೊಳ್ಳುವವರೆಗೆ ಆಟ ನಿರಂತರವಾಗಿ ಸಾಗುತ್ತಿರುತ್ತದೆ. ಉಭಯ ತಂಡಗಳ ಗಮನವೆಲ್ಲಾ ಅರೇನಾದ ಎರಡೂ ಅಂಚಿನಲ್ಲಿಟ್ಟ ಗೋಲ್‌ಪೋಸ್ಟ್‌ನೊಳಗೆ ಚೆಂಡನ್ನು ನುಗ್ಗಿಸಿ ಅಂಕ ಗಳಿಸುವುದರೆಡೆಗೇ ಇರುತ್ತದೆ. ಕ್ರೀಡಾಂಗಣದಲ್ಲಿ ಆಡುವ ಪೊಲೊ ರೀತಿ ಗೋಲು ಗಳಿಸಿದ ಮೇಲೆ ಅಂಚುಗಳನ್ನು ಬದಲಿಸದೇ, ಪ್ರತಿಯೊಂದು ಚುಕ್ಕಾದ ಅಂತ್ಯದಲ್ಲೂ ಮೈದಾನದ ಅಂಚನ್ನು ಬದಲಿಸಲಾಗುತ್ತದೆ. ಚೆಂಡು ಕ್ರೀಡಾಂಗಣವನ್ನು ದಾಟಿ ಹೋಗದಂತೆ ತಡೆಯಲು ೫-೬ ಅಡಿ ಎತ್ತರವಿರುವ ಮರದ ಬೌಂಡರಿ ಗೋಡೆಗಳನ್ನು ನಿರ್ಮಿಸಲಾಗಿರುತ್ತದೆ. ಒಂದು ವೇಳೆ ಚೆಂಡು ಕ್ರೀಡಾಂಗಣ ದಾಟಿದರೆ ಅದನ್ನು ಡೆಡ್‌ ಬಾಲ್‌ ಎಂದು ಪರಿಗಣಿಸಲಾಗುತ್ತದೆ ಹಾಗೂ ಆಟವನ್ನು ಪುನಃ ಪ್ರಾರಂಭಿಸಲಾಗುತ್ತದೆ.(ಯಾವ ತಂಡ ಚೆಂಡನ್ನು ಕ್ರೀಡಾಂಗಣದ ಹೊರಗೆ ಹೊಡೆಯುತ್ತದೋ ಅದರ ಎದುರಾಳಿ ತಂಡಕ್ಕೆ ಫ್ರೀ ಹಿಟ್‌ ಗಳನ್ನು ಹೊಡೆಯುವ ಅವಕಾಶವನ್ನು ಈಗಿನ ಬ್ರಿಟೀಷ್ ಅರೇನಾ ನಿಯಮಾವಳಿ ಒದಗಿಸಿಕೊಟ್ಟಿದೆ). ಅರೇನಾ ಪೊಲೊದಲ್ಲಿನ ಸ್ಥಳಾವಕಾಶ ತುಂಬಾ ಸೀಮಿತವಾಗಿರುವುದರಿಂದ ಕುದುರೆಗಳಿಗೆ ಹೊರಾಂಗಣದಲ್ಲಿ ಸಿಗುವಂತೆ ನೆಗೆಯುವ ಅವಕಾಶ ದೊರೆಯುವುದೇ ಇಲ್ಲ. ಆಟ ಮಾತ್ರ ಯಾವುದೇ ಅಡೆ ತಡೆ ಇಲ್ಲದೇ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ಸಮಕಾಲೀನ ಕ್ರೀಡೆ[ಬದಲಾಯಿಸಿ]

ಓಲಂಪಿಕ್ ಆಟದ ಒಂದು ಭಾಗವಾಗಿ ಪೋಲೊ ಆಡಲಾಯಿತು (1900)

ಪೊಲೊ ಇಂದು ಸುಮಾರು ೭೭ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿದೆ. ಅದರ ಓಲಂಪಿಕ್ ಕ್ರೀಡೆಯಲ್ಲಿ ಮಿಂಚುವ ಅವಕಾಶ ೧೯೦೦ ರಿಂದ ೧೯೩೯ರ ವರೆಗೆ ಮಾತ್ರ ಸೀಮಿತಗೊಂಡಿದ್ದರೂ ೧೯೯೮ರ ಅಂತರ್‌ರಾಷ್ಟ್ರೀಯ ಓಲಂಪಿಕ್‌ ಸಮಿತಿ ಇದನ್ನು ’ಫೆಡರೇಷನ್‌ ಆಫ್‌ ಇಂಟರ್ ನ್ಯಾಷನಲ್ ಪೊಲೊ’ ಎಂಬ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಹೊಂದಿದ ಕ್ರೀಡೆ ಎಂದು ಪರಿಗಣಿಸಿತು. ಫೆಡರೇಷನ್‌ ಆಫ್‌ ಇಂಟರ್ ನ್ಯಾಷನಲ್ ಪೊಲೊ ಪ್ರತಿ ಮೂರು ವರ್ಷಗಳಿಗೊಮ್ಮೆ ಅಂತರ್ ರಾಷ್ಟ್ರೀಯ ಮಟ್ಟದ ’ವರ್ಲ್ಡ್‌ ಪೊಲೊ ಚಾಂಪಿಯನ್‌ಶಿಪ್‌’ ಅನ್ನು ಆಯೋಜಿಸುತ್ತದೆ.

ಆದರೆ ಪೊಲೊ ಅನ್ನು ವೃತ್ತಿಪರ ಆಟವೆಂಬಂತೆ ಗುರುತಿಸಿದ ರಾಷ್ಟ್ರಗಳು ತೀರಾ ಕಡಿಮೆ. ಅವುಗಳೆಂದರೆ, ಅರ್ಜೈಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್‌, ಕೆನಡಾ, ಚಿಲಿ, ಡೊಮಿನಿಕನ್ ರಿಪಬ್ಲಿಕ್, ಫ್ರಾನ್ಸ್, ಜರ್ಮನಿ, ಇರಾನ್, ಇಂಡಿಯಾ, ಮೆಕ್ಸಿಕೋ, ಪಾಕಿಸ್ತಾನ, ಸ್ಪೇನ್‌, ಸ್ವಿಡ್ಜರ್ಲ್ಯಾಂಡ್, ಇಂಗ್ಲೆಂಡ್ ಹಾಗೂ ಅಮರಿಕ ರಾಷ್ಟ್ರಗಳು. ತಂಡ ಕ್ರೀಡೆಗಳಲ್ಲಿಯೇ ಪೊಲೊ ಅತ್ಯಂತ ವಿಶಿಷ್ಟವಾದದ್ದು. ಇದರಲ್ಲಿ ಹವ್ಯಾಸಿ ಆಟಗಾರರು, ಕೆಲವೊಮ್ಮೆ ತಂಡದ ಮಾಲಿಕರು, ಈ ಆಟದ ಅತ್ಯುತ್ತಮ ಆಟಗಾರರನ್ನು ಖರೀದಿಸಿ ತಮ್ಮ ತಂಡದ ಪರವಾಗಿ ಮೈದಾನಕ್ಕಿಳಿಸುತ್ತಾರೆ.{16/}

ಅಮೆರಿಕ ದೇಶದ ಪೊಲೊ ಕ್ರೀಡೆಯ ಚುಕ್ಕಾಣಿ ಇರುವುದು ಯುನೈಟೆಡ್‌ ಸ್ಟೇಟ್ಸ್‌ ಪೊಲೊ ಅಸೋಸಿಯೇಷನ್‌ (ಯುಎಸ್‌ಪಿಎ) ಕೈಯಲ್ಲಿ. ಅಮೆರಿಕ ’ಯನೈಟೆಡ್‌ ಸ್ಟೇಟ್ಸ್‌ ವುಮನ್ಸ್‌ ಪೊಲೊ ಫೆಡರೇಷನ್‌’ ಅನ್ನು ಹೊಂದಿದ್ದು ಜಗತ್ತಿನಲ್ಲಿ ಮಹಿಳಾ ಪೊಲೊ ತಂಡ ಹೊಂದಿದ ಹೆಗ್ಗಳಿಕೆ ಆ ರಾಷ್ಟ್ರದ್ದು.

ಆಧುನಿಕ ಕ್ರೀಡೆ ಮುಂದೆ ಹಲವಾರು ಸವಾಲುಗಳಿವೆ. ಸಾಂಪ್ರದಾಯಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ದಂತ ಗೋಪುರದಲ್ಲಿರುವ ಈ ಆಟ ತುಸು ದುಬಾರಿ ಕೂಡ ಹೌದು. ಈ ಆಟವನ್ನು ಇನ್ನಷ್ಟು ಸಾರ್ವಜನಿಕ ಸ್ನೇಹಿಯನ್ನಾಗಿಸಬೇಕು ಎಂಬುದು ಹಲವು ಕ್ರೀಡಾಳುಗಳ ಆಗ್ರಹ. ಇದರಿಂದ ಆಟದ ಗುಣಮಟ್ಟವನ್ನು ಹೆಚ್ಚಿಸಬಹುದು ಎಂಬುದು ಅವರ ಅಭಿಪ್ರಾಯ. ಆದರೆ ಇನ್ನು ಕೆಲವು ಆಟಗಾರರು ಕ್ರೀಡೆಗೆ ಇರುವ ಸಾಮಾಜಿಕ ಹಾಗೂ ಆರ್ಥಿಕ ಪ್ರಭಾವಳಿಯನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂಬರ್ಥದಲ್ಲಿ ವಾದ ಮಂಡಿಸುತ್ತಾರೆ. ವಾದ-ವಿವಾದವೇನೇ ಇರಲಿ, ೧೯೮೦ ದಶಕದೀಚೆಗೆ ಪೊಲೊ ಕ್ರೀಡೆಯ ಜನಪ್ರಿಯತೆಯ ಸೂಚ್ಯಾಂಕದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

ಕ್ರೀಡೆಯಲ್ಲಿ ಅಪರಿಮಿತ ಆಸಕ್ತಿ ಹೊಂದಿದ ವ್ಯಕ್ತಿಗಳಿಗೆ ಅರೇನಾ (ಅಥವಾ ಒಳಾಂಗಣ) ಪೊಲೊ ಅಷ್ಟೇನೂ ದುಬಾರಿಯಲ್ಲದ ಆಯ್ಕೆ ಎನ್ನಬಹುದು. ಹಾಗೂ ನಿಯಮಾವಳಿಯಲ್ಲೂ ದೊಡ್ಡ ಮಟ್ಟದ ವ್ಯತ್ಯಾಸವೇನಿಲ್ಲ. ಒಳಾಂಗಣದಲ್ಲಿ ನಡೆಯುವ ಈ ಆಟ ಒಳಾಂಗಣದಲ್ಲಿ ಆಡುವ ಇನ್ನಿತರ ಆಟಗಳಂತೆ ಈ ಪೊಲೊ ಆಟ ಕೂಡ ೩೦೦ * ೧೫೦ ಅಡಿಯಷ್ಟು ಆವೃತಗೊಂಡಿರುವ ಒಳಾಂಗಣದಲ್ಲಿ ಜರುಗುತ್ತದೆ. ಇದರ ಕನಿಷ್ಠ ಅಳತೆ ಎಂದರೆ ೧೫೦*೭೫ ಅಡಿ. ಅಮೆರಿಕದಲ್ಲಿ ಹಲವಾರು ಅರೇನಾ ಪೊಲೊ ಕ್ಲಬ್‌ಗಳಿವೆ. ಸಾಂತಾ ಬಾರ್ಬರಾ ಪೊಲೊ & ರಾಕ್ವೆಟ್‌ ಕ್ಲಬ್‌ಗಳು ಸೇರಿದಂತೆ ಪ್ರಭಾವಶಾಲಿ ಪೊಲೊ ಕ್ಲಬ್‌ಗಳು ವರ್ಷಪೂರ್ತಿ ಕ್ರಿಯಾಶೀಲವಾಗಿರುತ್ತವೆ. . ಪೊಲೊಗೆ ಸಂಬಂಧಿಸಿದಂತೆ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಹೊರಾಂಗಣ ಹಾಗೂ ಒಳಾಂಗಣ ಕ್ರೀಡೆಗಳ ನಡುವಿನ ವ್ಯತ್ಯಾಸವೆಂದರೆ, ವೇಗ (ಹೊರಾಂಗಣ ಕ್ರೀಡೆ ತ್ವರಿತಗತಿಯಲ್ಲಿ ಸಾಗುತ್ತದೆ), ದೈಹಿಕ ದೃಢತೆ/ಗಟ್ಟಿತನ (ಒಳಾಂಗಣ/ಅರೇನಾ ಕ್ರೀಡೆಯಲ್ಲಿ ಹೆಚ್ಚಿನ ದೈಹಿಕ ಶ್ರಮದ ಅವಶ್ಯಕತೆ ಇದೆ), ಚೆಂಡಿನ ಗಾತ್ರ (ಒಳಾಂಗಣದಲ್ಲಿ ದೊಡ್ಡ ಗಾತ್ರದ ಚೆಂಡನ್ನು ಬಳಸಲಾಗುತ್ತದೆ), ಗೋಲ್‌ನ ಗಾತ್ರ (ಒಳಾಂಗಣದಲ್ಲಿ ಸ್ಥಳಾವಕಾಶ ಚಿಕ್ಕದಾಗಿರುವುದರಿಂದ ಗೋಲ್‌ನ ಗಾತ್ರ ಚಿಕ್ಕದಾಗಿರುತ್ತದೆ) ಹಾಗೂ ಕೆಲವು ಪೆನಾಲ್ಟಿಗಳು. ಅಮೆರಿಕ ಹಾಗೂ ಕೆನಡಾದಲ್ಲಿ ಆಡಲಾಗುವ ಕಾಲೇಜು ಶಿಕ್ಷಣದ ಪೊಲೊ ಅರೇನಾ ಪೊಲೊ ಕ್ರೀಡೆಯಾಗಿದೆ; ಆದರೆ ಇಂಗ್ಲೆಂಡ್‌ನಲ್ಲಿ ಮಾತ್ರ ಅದು ಎರಡೂ ಕ್ರೀಡೆಯಾಗಿದೆ.

ಆಗ್ನೇಯ ಏಷ್ಯಾ[ಬದಲಾಯಿಸಿ]

2007ರ ಸಿಇಎ ಗೇಮ್ಸ್ ಪೋಲೊದಲ್ಲಿ ಇಂಡೊನೇಶಿಯಾ ಥೈಲ್ಯಾಂಡ್ ವಿರುದ್ಧ ಆಟವಾಡಿತು.

೨೦೦೭ರಲ್ಲಿ ನಡೆದ ಆಗ್ನೇಯ ಏಷ್ಯಾ ಕ್ರೀಡಾಕೂಟ ಪೊಲೊ ಕ್ರೀಡೆಯನ್ನೂ ಒಳಗೊಂಡಿತ್ತು. ಇಂಡೋನೇಷ್ಯಾ, ಸಿಂಗಾಪುರ್, ಮಲೇಷ್ಯಾ, ಥಾಯ್‌ಲ್ಯಾಂಡ್‌ ಹಾಗೂ ಫಿಲಿಫೈನ್ಸ್‌ ರಾಷ್ಟ್ರಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು. ಈ ಪಂದ್ಯಾವಳಿಯಲ್ಲಿ ಮಲೇಷ್ಯಾ ಸ್ವರ್ಣ ಪದಕ ಗಳಿಸಿದರೆ ಸಿಂಗಾಪೂರ್ ಹಾಗೂ ಥಾಯ್‌ಲ್ಯಾಂಡ್‌ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪದಕಗಳನ್ನು ತಮ್ಮದಾಗಿಸಿಕೊಂಡವು.

ಆಗ್ನೇಯ ಏಷ್ಯಾಗಳಲ್ಲಿ ನೂರ್ಮಡಿಗೊಂಡ ಪೊಲೊ ಪ್ರೇಮ ಇಂದು ಪಟ್ಟಾಯ, ಕೌಲಾಂಪುರ್, ಜಕಾರ್ತ ನಗರಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತಿದೆ. ಇನ್ನು ಪಾಟ್ಟಾಯ ಒಂದರಲ್ಲಿಯೇ ಮೂರು ಕ್ಲಬ್‌ಗಳು ಸಕ್ರಿಯವಾಗಿವೆ (ಪೊಲೊ ಎಸ್ಕೇಪ್‌, ಸಿಯಾಮ್‌ ಪೊಲೊ ಪಾರ್ಕ್‌ ಹಾಗೂ ಥಾಯ್‌ ಪೊಲೊ ಹಾಗೂ ಇಕ್ವೆಸ್ಟ್ರಿಯನ್‌ ಕ್ಲಬ್‌). ಇಂಡೋನೇಷ್ಯಾದಲ್ಲಿ ನುಸಂತರಾ ಪೊಲೊ ಕ್ಲಬ್‌ ಸಕ್ರಿಯವಾಗಿದೆ. ೨೦೦೮ರಲ್ಲಿ ಪ್ರಾಥಮಿಕ ಸಭೆ ನಡೆಸುವ ಮೂಲಕ ’ಸೌತ್‌ ಈಸ್ಟ್‌ ಏಷ್ಯಾ ಪೊಲೊ ಫೆಡರೇಷನ್‌’ ಅನ್ನು ಹುಟ್ಟು ಹಾಕಲಾಯಿತು. ಇದರಲ್ಲಿ ರಾಯಲ್‌ ಮಲೇಷಿಯನ್‌ ಪೊಲೊ ಅಸೋಸಿಯೇಷನ್‌, ಥಾಯ್‌ಲ್ಯಾಂಡ್‌ ಪೊಲೊ ಅಸೋಸಿಯೇಷನ್‌, ಇಂಡೋನೇಷ್ಯನ್‌ ಪೊಲೊ ಅಸೋಸಿಯೇಷನ್‌, ಸಿಂಗಾಪುರ್ ಪೊಲೊ ಅಸೋಸಿಯೇಷನ್‌, ರಾಯಲ್ ಬ್ರೂನಿ ಪೊಲೊ ಅಸೋಸಿಯೇಷನ್‌ ಹಾಗೂ ದ ಫಿಲಿಫೈನ್ಸ್ ಪೊಲೊ ಅಸೋಸಿಯೇಷನ್‌ಗಳೂ ಒಳಗೊಂಡಿದ್ದವು. ಇತ್ತೀಚೆಗಷ್ಟೇ ಜನೆಕ್‌ ಗಝೆಕಿ ಹಾಗೂ ರುಕಿ ಬೈಲ್ಯು “ಮೆಟ್ರೊಪಾಲಿಟನ್‌ ಆಸ್ಟ್ರೇಲಿಯಾ, ಸಿರಿವಂತ ಪ್ರಾಯೋಜಕರ” ಒತ್ತಾಸೆಯಿಂದಾಗಿ” ಪಾರ್ಕ್‌ಗಳಲ್ಲಿ ಪೊಲೊ ಪಂದ್ಯಗಳನ್ನು ಆಯೋಜಿಸಿದ್ದವು.[೧೯]

’ಚೈನೀಸ್‌ ಇಕ್ವೆಸ್ಟ್ರಿಯನ್‌ ಅಸೋಸಿಯೇಷನ್‌’ ಅನ್ನು ಹೊಸದಾಗಿ ಸ್ಥಾಪಿಸಲಾಗಿದೆ ಹಾಗೂ ಅದರ ಜೊತೆಗೇ ಚೀನಾದಲ್ಲಿಯೇ ಇನ್ನೆರಡು ಹೊಸ ಕ್ಲಬ್‌ಗಳನ್ನು ಸ್ಥಾಪಿಸಲಾಗಿದೆ. ಅವುಗಳೆಂದರೆ, ೨೦೦೪ರಲ್ಲಿ[೨೦] ಕ್ಸಿಯಾ ಯಂಗ್ ಸ್ಥಾಪಿಸಿದ ’ಬೀಜಿಂಗ್ ಸನ್ನಿ ಪೊಲೊ ಕ್ಲಬ್‌’ ಹಾಗೂ ಶಾಂಗೈನಲ್ಲಿ ೨೦೦೫ರಲ್ಲಿ ಸ್ಥಾಪಿಸಲಾದ ನೈನ್‌ ಡ್ರ್ಯಾಗನ್ಸ್‌ ಹಿಲ್‌ ಪೊಲೊ ಕ್ಲಬ್‌.[೨೧]

ರೂಪಾಂತರಗಳು[ಬದಲಾಯಿಸಿ]

ಜೈಪುರದ ಸಿಟಿ ಪ್ಯಾಲೇಸ್‌ನಲ್ಲಿ ಹಳೆಯ ಪೊಲೊಕಾರ್ಟ್ ಪ್ರದರ್ಶಿಸಲಾಗಿದೆ. ವಸ್ತುಸಂಗ್ರಹಾಲಯವು "ನೈಟ್ ಪೋಲೊ ಬಾಲ್" ಅನ್ನು ತಿರುಗಿಸುವ ವೇದಿಕೆಯೊಂದಿಗೆ ಮೇಣದಬತ್ತಿಯನ್ನು ಇಡುತ್ತದೆ.[೨೨] ಮೇಲೆ ಚರ್ಚಿಸಿದ ಸಾಗೋಲ್ ಕಾಂಗ್ಜೀ, ಪೋಲೊದ ಒಂದು ಆವೃತ್ತಿಯಾಗಿದ್ದರೂ, ಇದನ್ನು ಆಧುನಿಕ ಹೊರಾಂಗಣ ಪೋಲೊನ ಪೂರ್ವಗಾಮಿ ಎಂದು ಸಹ ಕಾಣಬಹುದು.

ಪ್ರಖ್ಯಾತ ಪೋಲೊ ಆಟಗಾರರು[ಬದಲಾಯಿಸಿ]

ಇಟಾಲಿಯನ್ ಶೈಲಿಯಲ್ಲಿ ಬರೆದ ಆಟಗಾರರ ಹೆಸರುಗಳು ಪೋಲೊ ಆಟವಲ್ಲದೇ ಹೊರಗಡೆಯು ಪ್ರಸಿದ್ಧವಾಗಿದೆ.

  • ಮಾರಿಯಾನೊ ಅಗ್ವೆರೆ
  • ಮೈಕ್ ಅಜಾರೊ
  • ಪೀಟ್ ಬೋಸ್ಟ್‌ವಿಕ್
  • ಹೆನ್ರಿ ಬ್ರೆಟ್
  • ಅಡಾಲ್ಫೊ ಕ್ಯಾಂಬಿಯಾಸೊ
  • ಬಾರ್ತೊಲೋಮ್ ಕಾಸ್ಟಾಗ್ನೊಲಾ
  • ಪ್ರಿನ್ಸ್ ಚಾರ್ಲ್ಸ್
  • ಜಾನ್-ಪೌಲ್ ಕ್ಲಾರ್ಕಿನ್
  • ಪೌಲ್ ಕ್ಲಾರ್ಕಿನ್
  • ಡೆನ್ನಿಸ್ ಕೋಲ್ರಿಜ್ ಬೋಲ್ಸ್
  • ಗ್ಯಾಬ್ರಿಯಲ್ ಡೊನೊಸೊ
  • ನ್ಯಾಚೊ ಫಿಗ್ವೆರಾಸ್
  • ಮಾರ್ಟಿನ್ ಗ್ಯಾರಿಕ್
  • ರಾಬರ್ಟ್ ಎಲ್. ಗೆರ್ರಿ, ಜೂನಿಯರ್
  • ಕಾರ್ಲೋಸ್ ಗ್ರೇಸಿಡಾ
  • ಪ್ರಿನ್ಸ್ ಹ್ಯಾರಿ
  • ಟಾಮಿ ಹಿಚ್‌ಕಾಕ್,ಜೂನಿಯರ್.
  • ಟಾಮಿ ಲೀ ಜೋನ್ಸ್
  • ವಾಟರ್ ಜೋನ್ಸ್
  • ಗೊಂಜಾಲೊ ಪೀಯರ್ಸ್
  • ಫೆಕಂಡೊ ಪೀಯರ್ಸ್
  • ರಾಬರ್ಟ್ ಸ್ಕಿನೆ
  • ಪೊರ್ಫಿರಿಯೊ ರುಬಿರೊಸಾ
  • ಜೊನಾಥನ್ ಕರ್ಥ್‌ಬರ್ಟ್ ರೈಟ್
  • ಲ್ಯೂಕ್ ಟಾಮ್ಲಿನ್‌ಸನ್
  • ಹ್ಯಾರಿ ಪೇಯ್ನ್ ವೈಟ್ನಿ
  • ಸ್ಟೀಫನ್ ಓ'ಬ್ರಯನ್
  • ಜಾರ್ಜ್ ಫ್ಯಾಟನ್
  • ಕಾರ್ಲೋಸ್ ಮೆಂಡಿಟ್‌ಗೈ

ಸಂಬಂಧಿತ ಆಟಗಳು[ಬದಲಾಯಿಸಿ]

  • ಬುಜ್‌ಕಾಶಿ ಕುದುರೆ ಸವಾರರ ಎರಡು ತಂಡಗಳು, ಸತ್ತ ಆಡು ಮತ್ತು ಕೆಲವು ನಿಯಮಗಳನ್ನು ಒಳಗೊಂಡಿದೆ. ಇದನ್ನು ಮಧ್ಯ ಏಷ್ಯಾದಲ್ಲಿ ಆಡಲಾಗುತ್ತದೆ, ಮತ್ತು ಭಿನ್ನ ರೀತಿಯಲ್ಲಿರುವ ಇದನ್ನು ಕೊಕ್ಪರ್ ಎಂದು ಕರೆಯಲಾಗುತ್ತದೆ, ಇವೆರಡು ಒಂದೇ ತೆರನಾಗಿದೆ.
  • ಕೌಬಾಯ್ ಪೋಲೊ ಇದರ ನಿಯಮಗಳು ನಿಯಮಿತವಾಗಿ ಆಡಲಾಗುವ ಪೋಲೊದ ನಿಯಮವನ್ನೆ ಹೋಲುತ್ತದೆ, ಆದರೆ ಸಣ್ಣದಾದ ಅಖಾಡಾದಲ್ಲಿ ಗಾಳಿ ಊದಿ ಉಬ್ಬಿಸಬಹುದಾದ ರಬ್ಬರ್ ಚಿಕಿತ್ಸಾ ಚೆಂಡು ಬಳಸಿ ಸವಾರರು ವೆಸ್ಟರ್ನ್ ಸ್ಯಾಡಲ್‌ಗಳ ಜೊತೆಗೆ ಸ್ಪರ್ಧಿಸುತ್ತಾರೆ.
  • ಹಾರ್ಸ್‌ಬಾಲ್ ಆಟದಲ್ಲಿ ಕುದುರೆ ಬೆನ್ನಿನ ಮೇಲೆ ಕುಳಿತು ಚೆಂಡನ್ನು ನಿರ್ವಹಣೆ ಮಾಡಬೇಕು, ಮತ್ತು ಎತ್ತರವಾದ ನೆಟ್‌ನಿಂದ ಶೂಟ್‌ ಮಾಡಿ ಪಾಯಿಂಟ್ ಗಳಿಸಬೇಕು. ಈ ಆಟವು ಪೋಲೊ, ರಗ್ಬಿ, ಮತ್ತು ಬಾಸ್ಕೆಟ್‌ಬಾಲ್ ಆಟಗಳ ಸಂಯೋಜನೆಯಾಗಿದೆ.
  • ಪ್ಯಾಟೊ ಆಟವನ್ನು ಅರ್ಜಂಟೈನಾ ದೇಶದಲ್ಲಿ ಶತಮಾನಗಳಿಂದಲೂ ಆಡಲಾಗುತ್ತಿದ್ದು, ಇದು ಆಧುನಿಕ ಪೋಲೊಗಿಂತ ಬಿನ್ನವಾಗಿದೆ. ಇದರಲ್ಲಿ ಮ್ಯಾಲೆಟ್(ಪೋಲೋದಲ್ಲಿ ಚೆಂಡು ಹೊಡೆಯಲು ಬಳಸುವ ದಾಂಡು) ಬಳಸಲಾಗುವುದಿಲ್ಲ, ಮತ್ತು ಹುಲ್ಲು ಹಾಸಿನ ಮೇಲೆ ಆಡುವುದಿಲ್ಲ.
  • ಪೋಲೊಕ್ರಾಸ್ ಕುದುರೆ ಬೆನ್ನಿನ ಮೇಲೆ ಕುಳಿತು ಆಡುವ ಇನ್ನೊಂದು ಆಟವಾಗಿದ್ದು, ಇದು ಪೋಲೊ ಮತ್ತು ಲ್ಯಾಕ್ರೋಸ್‌ ಆಟಗಳ ಮಿಶ್ರಣವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಆರ್. ಗಿ. ಗೋಯೆಲ್, ವೀಣಾ ಗೋಯೆಲ್, ಎನ್‌ಸೈಕ್ಲೋಪೀಡಿಯಾ ಅಫ್ ಸ್ಪೋರ್ಟ್ಸ್ ಆ‍ಯ್‌೦ಡ್ ಗೇಮ್ಸ್‌ , ವಿಕಾಸ್ ಪಬ್ಲಿಕೇಶನ್ ಹೌಸ್‌ನಿಂದ ಪ್ರಕಟಣೆ, ೧೯೮೮, ಪುಟ ೩೧೮ರಿಂದ ಆಯ್ದುಕೊಂಡ ಭಾಗ: ಪರ್ಷಿಯನ್ ಪೋಲೊ. ಇದರ ಮೂಲ ನೆಲೆ ಏಷ್ಯಾ, ಸುಮಾರು ಕ್ರಿ.ಪೂ. ೨೦೦೦ದ ಹಿಂದೆ ಇದನ್ನು ಅಧಿಕೃತವಾಗಿ ರೂಪಿಸಿದ ಕೀರ್ತಿ ಪರ್ಷಿಯಾಗೆ ಸಲ್ಲುತ್ತದೆ.
  2. ಸ್ಟೀವ್ ಕ್ರೇಗ್, ಸ್ಪೋರ್ಟ್ಸ್ ಆ‍ಯ್‌೦ಡ್ ಗೇಮ್ಸ್ ಆಫ್ ದ ಏನ್ಶಿಯಂಟ್ , ಗ್ರೀನ್‌ವುಡ್ ಪಬ್ಲಿಷಿಂಗ್ ಗ್ರುಪ್‌ನಿಂದ ಪ್ರಕಟನೆಯಾಗಿದೆ, ೨೦೦೨, ISBN ೦-೩೧೩-೩೧೬೦೦-೭, ಪು. ೧೫೭.
  3. "polo. (2007). In Encyclopædia Britannica. Retrieved April 26, 2007, from Encyclopaedia Britannica Online".
  4. ೪.೦ ೪.೧ "Polo History". Archived from the original on 2010-09-25. Retrieved 2010-10-15.
  5. in ಇಸ್‌ಫಹಾನ್‌ನಲ್ಲಿನ ನಾಕ್ಷ್-ಐ ಜಹಾನ್ ಸ್ಕ್ವೇರ್ ಪೋಲೊ ಕ್ರೀಡಾಂಗಣವಾಗಿದೆ. ೧೭ನೇಯ ಶತಮಾನದಲ್ಲಿ ಇದನ್ನು ರಾಜ ಅಬ್ಬಾಸ್ I ನಿರ್ಮಿಸಿದನು.
  6. Touregypt.net
  7. ಮ್ಯಾಲ್ಕೊಲಮ್ ಡಿ. ವೈಟ್‌ಮನ್, ಟೆನ್ನಿಸ್: ಒರಿಜಿನ್ಸ್ ಆ‍ಯ್‌೦ಡ್ ಮಿಸ್ಟರೀಸ್ , ಕೋರಿಯರ್ ಡೋವರ್ ಪಬ್ಲಿಕೇಶನ್‌ನಿಂದ ಪ್ರಕಟಗೊಂಡಿದೆ, ೨೦೦೪, ISBN ೦-೪೮೬-೪೩೩೫೭-೯, ಪು. ೯೮.
  8. ೮.೦ ೮.೧ ರಾಬರ್ಟ್ ಕ್ರೆಗೊರಿಂದ ಸ್ಪೋರ್ಟ್ಸ್ ಆ‍ಯ್‌೦ಡ್ ಗೇಮ್ಸ್ ಆಫ್ ದ ೧೮th ಆ‍ಯ್‌೦ಡ್ ೧೯th ಸೆಂಚುರೀಸ್. ಪುಟ ೨೫. ಪ್ರಕಟಣೆ ೧೯೯೭ ಗ್ರೀನ್‌ವುಡ್ ಮುದ್ರಣಾಲಯ ಸ್ಪೋರ್ಟ್ಸ್ & ರಿಕ್ರಿಯೇಶನ್. ೨೯೬ ಪುಟಗಳು ISBN ೦-೬೮೮-೧೬೮೯೪-೯
  9. "Polo History".
  10. ದ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್. ೧೯೯೧ ಆವೃತ್ತಿ (ಪುಟ ೨೮೮)
  11. ೧೧.೦ ೧೧.೧ ೧೧.೨ ರಾಬರ್ಟ್ ಕ್ರೆಗೊರಿಂದ ಸ್ಪೋರ್ಟ್ಸ್ ಆ‍ಯ್‌೦ಡ್ ಗೇಮ್ಸ್ ಆಫ್ ದ ೧೮th ಆ‍ಯ್‌೦ಡ್ ೧೯th ಸೆಂಚುರೀಸ್. ಪುಟ ೩೪೯. ಪ್ರಕಟಣೆ ೧೯೯೭ ಗ್ರೀನ್‌ವುಡ್ ಮುದ್ರಣಾಲಯ ಸ್ಪೋರ್ಟ್ಸ್ & ರಿಕ್ರಿಯೇಶನ್. ೨೯೬ ಪುಟಗಳು. ISBN ೦-೬೮೮-೧೬೮೯೪-೯
  12. "History of Calcutta Polo Club". Calcutta Polo Club. Archived from the original on 2020-09-03. Retrieved 2009-06-05.
  13. ರಾಬರ್ಟ್ ಕ್ರೆಗೊರಿಂದ ಸ್ಪೋರ್ಟ್ಸ್ ಆ‍ಯ್‌೦ಡ್ ಗೇಮ್ಸ್ ಆಫ್ ದ ೧೮th ಆ‍ಯ್‌೦ಡ್ ೧೯th ಸೆಂಚುರೀಸ್. Page ೨೬ - ೨೭. ಪ್ರಕಟಣೆ ೧೯೯೭ ಗ್ರೀನ್‌ವುಡ್ ಮುದ್ರಣಾಲಯ ಸ್ಪೋರ್ಟ್ಸ್ & ರಿಕ್ರಿಯೇಶನ್. ೨೯೬ ಪುಟಗಳು ISBN ೦-೬೮೮-೧೬೮೯೪-೯
  14. "ಎಫ್‍ಐಪಿ ವರ್ಲ್ಸ್ ಕಪ್ VIII - 2007". Archived from the original on 2012-01-25. Retrieved 2010-10-15.
  15. "Tourismesouthasia.com". Archived from the original on 2010-06-30. Retrieved 2010-10-15.
  16. Youtube.com
  17. .ಪೋಲೊ.co.uk Archived 2011-07-28 ವೇಬ್ಯಾಕ್ ಮೆಷಿನ್ ನಲ್ಲಿ.
  18. "ಯುನೈಟೆಡ್ ಸ್ಟೇಟ್ಸ್ ಪೋಲೊ ಅಸೊಸಿಯೇಶನ್ ರೂಲ್ ಬುಕ್ ೨೦೦೯" (PDF). Archived from the original (PDF) on 2011-07-21. Retrieved 2010-10-15.
  19. David, Ceri (2008-11-23). "Going Polo". Sunday Herald Sun. pp. Sunday magazine supplement (pp. 20–21).
  20. ದ ಡೈಲಿ ಟೆಲಿಗ್ರಾಫ್
  21. NDPಪೋಲೊ.com
  22. "ಆರ್ಕೈವ್ ನಕಲು". msmsmuseum.com. Archived from the original on 28 ಅಕ್ಟೋಬರ್ 2014. Retrieved 11 January 2020.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Media related to ಪೋಲೊ at Wikimedia Commons

"https://kn.wikipedia.org/w/index.php?title=ಪೋಲೊ&oldid=1180795" ಇಂದ ಪಡೆಯಲ್ಪಟ್ಟಿದೆ