ಪೇಯಾಳ್ವಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಹಿಂದೂ ಧರ್ಮವೈಷ್ಣವ ಪಂಥಕ್ಕೆ ಸೇರಿದ ತಮಿಳುನಾಡಿನ ಹನ್ನೆರಡು ಆಳ್ವಾರ್ ಸಂತರಲ್ಲಿ ಒಬ್ಬರು. ಮೂವರು ಪ್ರಮುಖ ಆಳ್ವಾರರಲ್ಲಿ ಇವರು ಮೂರನೆಯವರು - ಉಳಿದಿಬ್ಬರು ಪೇಯಾಳ್ವಾರ್ ಮತ್ತು ಭೂತನಾಥಾಳ್ವಾರ್ .

ಈ ಮೂವರು ಆಳ್ವಾರುಗಳ ವಿಷಯದಲ್ಲಿ ಒಂದು ಮನೋಹರವಾದ ದಂತ ಕಥೆಯುಂಟು. ಇವರು ಹುಟ್ಟಿನಿಂದಲೂ ಜ್ಞಾನ ವೈರಾಗ್ಯ ಭಕ್ತಿಯುಳ್ಳವರಾಗಿ ಯಾವ ಸಮಯಾಚಾರಕ್ಕೂ ಸಾಮಾಜಿಕ ನಿಯಮಗಳಿಗೂ ಸಿಕ್ಕದೆ ಮನಬಂದಂತೆ ಇದ್ದು ಮನಬಂದೆಡೆ ಸಂಚರಿಸುತ್ತ ತಮ್ಮ ಆತ್ಮೈಶ್ವರ್ಯವನ್ನು ನಡೆನುಡಿಗಳಿಂದ ಜನಕ್ಕೆ ಆಗಾಗ ಪ್ರಕಾಶಪಡಿಸುತ್ತ ದಿವ್ಯಕ್ಷೇತ್ರ ಯಾತ್ರೆಗಳಲ್ಲಿ ದಿನಗಳನ್ನು ನೂಕುತ್ತಿರುವಾಗ ಒಂದು ದಿನ ತಿರುಕ್ಕೋವಿಲೂರ್ ಎಂಬ ಪುಣ್ಯಸ್ಥಳದಲ್ಲಿ ಒಬ್ಬರನ್ನೊಬ್ಬರು ಒಂದು ಸಣ್ಣ ಗುಡಿಸಿಲಿನಲ್ಲಿ ಸಂಧಿಸಿದರು. ಸಂತರು ಸಂತರೊಡನೆ ಕಲೆತಾಗ ಆ ಕೂಟದ ಸಂತೋಷವನ್ನು ವರ್ಣಿಸುವುದು ಯಾರಿಗೆ ಸಾಧ್ಯ ? ಹೀಗೆ ಅವರು ಪರಸ್ಪರ ಮಗ್ನರಾಗಿರುವಲ್ಲಿ ಹಗಲೇ ಇರುಳಾಗುವಂತೆ ಒಂದು ಕಾರ್ಮೋಡವೆದ್ದು ದೊಡ್ಡ ಮಳೆ ಬಿತ್ತು. ಆ ಸಂದರ್ಭದಲ್ಲಿ ನಾಲ್ಕನೆಯ ವ್ಯಕ್ತಿಯೊಬ್ಬ ಅವರ ನಡುವೆ ಸೇರಿಕೊಂಡು ಆ ಕಿರಿದೆಡೆಯನ್ನೆಲ್ಲ ತುಂಬಿ ಇವರನ್ನು ಇರುಕಿ ಅವುಕುತ್ತಿರುವ ಅನುಭವ ಈ ಮೂವರಿಗೂ ಆಯಿತು. ಆದರೆ ಆ ವ್ಯಕ್ತಿ ಮಾತ್ರ ಇವರ ಕಣ್ಣಿಗೆ ಬೀಳನು. ಕೈಗೆ ಸಿಕ್ಕನು. ಇದಾರಿರಬಹುದೆಂದು ಇವರು ಬಗೆಹರಿಯದ ಚಿಂತೆಯಲ್ಲಿದ್ದಾಗ ಭಗವಂತ ಕರುಣೆಯಿಂದ ಅವರಿಗೆ ತನ್ನ ದರ್ಶನ ಕೊಟ್ಟ. ತಮ್ಮ ಅಂತರ್ಯಾಮಿ ಪ್ರಭುವೇ ಹೀಗೆ ಹೊರಬಂದು ತಮ್ಮೊಡನೆ ಸೇರಿಕೊಂಡಿದ್ದಾನೆಂಬ ಅಂಶವನ್ನು ಆ ಮಹಾನುಭಾವರು ಸಾಕ್ಷಾತ್ಕರಿಸಿಕೊಂಡು, ಪುರುಷಸೂಕ್ತದಲ್ಲಿ ವರ್ಣಿತನಾದ ವಿರಾಟ್ ಪುರುಷನನ್ನು ಕಣ್ಣಾರೆ ಕಂಡು, ಆ ಜ್ಞಾನಾನಂದದ ಮತ್ತಿನಲ್ಲಿ ಒಬ್ಬೊಬ್ಬರೂ ನೂರು ನೂರು ಪಾಶುರಗಳಲ್ಲಿ ಆತನನ್ನು ಕೊಂಡಾಡಿದರು. ಅದೇ ಈ ಮೂರು ತಿರುವಂದಾದಿಗಳು. ಇವು ನಾಲ್ಕು ಸಾವಿರ ಪ್ರಬಂಧಗಳಲ್ಲಿ ಶ್ರುತಿ ಮನೋಹರವಾಗಿವೆ.

ಇವರು ಪೂದತ್ತಾಳ್ವಾರರು ಹುಟ್ಟಿದ ಮರುದಿನ ಜನ್ಮತಾಳಿದರೆಂದು ಸಂಪ್ರದಾಯ ತಿಳಿಸುತ್ತದೆ. ಇವರ ಜನ್ಮದಿನೋತ್ಸವ ತುಲಾಮಾಸದ ಶತಭಿಷಾ ನಕ್ಷತ್ರದ ದಿವಸ ಜರುಗುತ್ತದೆ. ಇವರು ಹುಟ್ಟಿದೂರಿನ ಹೆಸರು ಮಾಮೈಲೈನಗರ ಅಥವಾ ಮಯೂರಪುರಿ. ಮಿಕ್ಕಿಬ್ಬರದಂತೆ ಇವರ ಹುಟ್ಟು ಬೆಳೆವಣಿಗೆ ವಿದ್ಯಾಭ್ಯಾಸ ರಹಸ್ಯವಾಗಿಯೇ ಉಳಿದಿವೆ. ಅದರೆ ಅರಿವು ಮಾತ್ರ ಮೂರನೆಯ ತಿರುವಂದಾದಿ ಎಂಬ ನೂರು ಬಿಡಿ ಪದ್ಯಗಳ ಪ್ರಬಂಧದಲ್ಲಿ ಮಹೋಜ್ವಲವಾಗಿ ಬೆಳಗುತ್ತಿದೆ. ಇವರು ಮಹಾವಿಷ್ಣುವಿನ ನಂದಕಾಂಶವೆಂದು ಸಂಪ್ರದಾಯ ಸನ್ಮಾನಿಸುತ್ತದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: