ಪಿ.ಶೇಷಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪತ್ರಿಕೋದ್ಯಮ[ಬದಲಾಯಿಸಿ]

ತಿ.ತಾ.ಶರ್ಮ ಸಂಪಾದಕತ್ವದ ವಿಶ್ವ ಕರ್ನಾಟಕ ಪತ್ರಿಕೆಯಲ್ಲಿ ವೃತ್ತಿಜೀವನ ಆರಂಭಿಸಿದ ಪಿ.ಶೇಷಪ್ಪ, ಎಂ.ಎಲ್.ಶ್ರೀಕಂಠಯ್ಯನವರ ಮಾತೃಭೂಮಿ ಪತ್ರಿಕೆಯ ವರದಿಗಾರರೂ ಆಗಿದ್ದರು. ನಂತರ ಅವರು ಸ್ವಾತಂತ್ರ್ಯೋದಯ ಎಂಬ ಪತ್ರಿಕೆಯನ್ನು ಸ್ವತಃ ಆರಂಭಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಅವರು ಪ್ರತ್ಯಕ್ಷ ಭಾಗವಹಿಸಿ ಅನೇಕ ಸಲ ಕಾರಾವಾಸವನ್ನು ಅನುಭವಿಸಿದ್ದರು. ಇವೆಲ್ಲವೂ ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚಿನ ಸಾಹಸಗಳು.

1946ರ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಅಧಿವೇಶನದ ವರದಿ ಮಾಡಲು ತಾಯಿನಾಡು ಪತ್ರಿಕೆಯಿಂದ ಹೆಚ್.ಆರ್.ನಾಗೇಶರಾವ್ ಮಾತೃಭೂಮಿಯ ಪಿ.ಶೇಷಪ್ಪ, ಸಾಧ್ವಿಅಗರಂ ರಂಗಯ್ಯ, ದೇಶಬಂಧುವಿನ ಇ.ಆರ್.ಸೇತೂರಾಂ ಹಾಗೂ ಎನ್.ಎಸ್.ವೆಂಕೋಬರಾವ್ ಮುಂತಾದವರು ಹೋಗಿದ್ದರು. ಮೈಸೂರು ಸಂಸ್ಥಾನದ ದಿವಾನರಾಗಿ ನೇಮಕಗೊಂಡ ಸರ್ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್‌ರವರು ಭಾಗವಹಿಸಿದ ಪ್ರಥಮ ಕೋಲಾಹಲಕಾರಿ ಅಧಿವೇಶನವದು.

ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ ಶೇಷಪ್ಪನವರು ಮಹಾರಾಜರ ಆಡಳಿತದಲ್ಲಿದ್ದ ಮೈಸೂರು ಸಂಸ್ಥಾನಕ್ಕೆ ಸ್ವಾತಂತ್ರ್ಯ ಬರುವುದೆಂದು? ಎಂದು ಚಿಂತಿಸಿದ್ದರು. ಆ ಬಗ್ಗೆ ೧೫-೦೮-೧೯೪೭ರಂದೇ ಪುಸ್ತಕವೊಂದನ್ನು ಬಿಡುಗಡೆ ಮಾಡಿದ್ದರು. ಪುಸ್ತಕದ ಪ್ರಕಾಶಕರು ಕೆ.ಎಸ್.ರಾಮಕೃಷ್ಣಮೂರ್ತಿ. ಅದೇ ದಿನ ತಮ್ಮ ಹಸ್ತಾಕ್ಷರ ಹಾಕಿ ಗೆಳೆಯ ನಾಗೇಶರಾವ್‌ಗೆ ಪ್ರತಿಯೊಂದನ್ನು ಶೇಷಪ್ಪ ನೀಡಿದ್ದರು.

ಹೆಚ್.ಆರ್.ನಾಗೇಶರಾವ್ ಸಂಗ್ರಹ

ಹಿಂದಿನ ಮೈಸೂರು ಸರಕಾರದವರು `ಸ್ವಾತಂತ್ರ್ಯೋದಯ'ವನ್ನು ಪ್ರತಿಬಂಧಿಸಿದ ನಂತರ ೧೯೪೮ರಲ್ಲಿ ಕಿಡಿ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ನಿರ್ಭೀತ ಮತ್ತು ನಿರ್ದಾಕ್ಷಿಣ್ಯ ಲೇಖನಗಳಿಗಾಗಿ ಶ್ರೀ ಶೇಷಪ್ಪನವರ ಲೆಕ್ಕಣಿಕೆ ಹೆಸರಾಗಿತ್ತು.

ಹನ್ನೆರಡು ವರ್ಷಗಳ ದೀರ್ಘ ನರಳಿಕೆಯ ನಂತರ 44ನೆಯ ಕಿರಿವಯಸ್ಸಿನಲ್ಲಿ 02-01-1963ರಂದು ಬೆಂಗಳೂರಿನಲ್ಲಿ ಶೇಷಪ್ಪ ನಿಧನರಾದರು.

ಸಹೃದಯಿ ಶೇಷಪ್ಪ[ಬದಲಾಯಿಸಿ]

ಹೆಚ್.ಆರ್.ನಾಗೇಶರಾವ್ ಸಂಗ್ರಹ

ಶೇಷಪ್ಪನವರನ್ನು ಹತ್ತಿರದಿಂದ ಕಂಡವರು ಸದಾ ಹೇಳುವ ಮಾತು ಅವರೊಬ್ಬ ಸಹೃದಯಿ. ಆಳುವ ಸರ್ಕಾರದ ವಿರೋಧ ಕಟ್ಟಿಕೊಂಡು, ಏಕಾಂಗಿಯಾಗಿ ಪತ್ರಿಕೆಯೊಂದನ್ನು ಸಂಪಾದಿಸಿ ನಿರ್ವಹಣೆ ಮಾಡುತ್ತಿದ್ದರು ಶೇಷಪ್ಪ. ತಾವೇ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾಗಲೂ ಸಹಾ ಮತ್ತೊಬ್ಬರ ತೊಂದರೆಗಳಿಗೆ ಸ್ಪಂದಿಸುವ ಗುಣ ಅವರದಾಗಿತ್ತು. ಇಂಥ ಸ್ನೇಹಜೀವಿ ಶೇಷಪ್ಪ, ಮತ್ತೊಂದು ಪತ್ರಿಕೆಯಲ್ಲಿ (ಜನವಾಣಿ)ಕೆಲಸ ಮಾಡುತ್ತಿದ್ದ ಮಿತ್ರ ಎಸ್.ವೆಂಕಟರಾಮ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾಗ ಜತೆಗಿದ್ದು ಸ್ವಾಂತನ ಹೇಳಿ, ಕೈಲಾದಷ್ಟು ಧನಸಹಾಯ ನೀಡಿ, ಕಿಡಿ ಓದುಗರನ್ನೂ ಸಹಾಯ ಮಾಡುವಂತೆ ಕೋರಿದ್ದು ಕನ್ನಡ ಪತ್ರಿಕೋದ್ಯಮದಲ್ಲೊಂದು ಐತಿಹಾಸಿಕ ಘಟನೆ.

ಇವುಗಳನ್ನೂ ನೋಡಿ[ಬದಲಾಯಿಸಿ]