ಪಿಟೀಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಿಟೀಲು ಅಥವಾ ವಯೊಲಿನ್ ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತ ಪದ್ಧತಿಗಳಲ್ಲಿ ಜನಪ್ರಿಯವಾದ ಒಂದು ತಂತಿ-ವಾದ್ಯ. ಈ ವಾದ್ಯಕ್ಕಿರುವ ಇಂಗ್ಲಿಷಿನ "ಫಿಡ್ಲ್" ಹೆಸರಿನಿಂದ ನಮ್ಮ "ಪಿಟೀಲು" ತಯಾರಾಯಿತು.

ಪಿಟೀಲುಗಳನ್ನು ೧೬ ನೆಯ ಶತಮಾನದ ಇಟಲಿ ದೇಶದಲ್ಲಿ ಆವಿಷ್ಕರಿಸಲಾಯಿತು ಎಂದು ನಂಬಲಾಗಿದೆ. ಇಂದೂ ಕಾಣಬಹುದಾದ ಅತ್ಯಂತ ಹಳೆಯ ಪಿಟೀಲು ೧೫೬೪ ರಲ್ಲಿ ಇಟಲಿಯ ಆಂಡ್ರಿಯ ಅಮಾತಿ ಅವರಿಂದ ಮಾಡಲ್ಪಟ್ಟಿದ್ದು. ೧೮ ನೆಯ ಶತಮಾನದ ಹೊತ್ತಿಗೆ ಆಧುನಿಕ ವಯೊಲಿನ್ ಗಳ ಆಕಾರ ಮತ್ತು ನುಡಿಸುವ ವಿಧಾನಗಳು ಚಾಲ್ತಿಗೆ ಬಂದವು.[೧][೨][೩]

ಮೊದಲಿಗೆ ವಯೊಲಿನ್ ಕೇವಲ ಪಾಶ್ಚಾತ್ಯ ಸಂಗೀತದಲ್ಲಿ ಮಾತ್ರ ಉಪಯೋಗಗೊಳ್ಳುತ್ತಿತ್ತು - ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಸಂಗೀತಗಳೆರಡರಲ್ಲೂ ಉಪಯೋಗ ಕಂಡ ವಯೊಲಿನ್ ಸಾಕಷ್ಟು ಬೇಗನೆಯೇ ಭಾರತಕ್ಕೆ ಬಂದಿತು. ಚಾರಿತ್ರಿಕ ದಾಖಲೆಗಳ ಪ್ರಕಾರ, ಮೊದಲಿಗೆ ತಿರುವಾಂಕೂರಿನ ಮಹಾರಾಜ ಸ್ವಾತಿ ತಿರುನಾಳ್ (೧೮೧೩ - ೧೮೪೬) ರ ಆಸ್ಥಾನದಲ್ಲಿ ವಯೊಲಿನ್ ನ ಪ್ರದರ್ಶನ ನಡೆಯಿತು. ಮೊದಮೊದಲು ಹರಿಕಥೆಗೆ ಪಕ್ಕವಾದ್ಯವಾಗಿ ಉಪಯೋಗವಾದ ವಯೊಲಿನ್ ಕ್ರಮೇಣ ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಮುಖ್ಯ ಪಕ್ಕವಾದ್ಯವಾಗಿ ಬೆಳೆಯಿತು. ಕರ್ನಾಟಕ ಸಂಗೀತದ ಆಧುನಿಕ ಕಛೇರಿಗಳಲ್ಲಿ ವಯೊಲಿನ್ ಸರ್ವೇ ಸಾಮಾನ್ಯ..[೪] 

ಪಾಶ್ಚಾತ್ಯ ಶೈಲಿಯ ವಯೊಲಿನ್ ಮತ್ತು ಭಾರತೀಯ ಶೈಲಿಯ ವಯೊಲಿನ್ ಗಳಲ್ಲಿ ಆಕಾರ, ಮಾಡುವಿಕೆಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ - ಆದರೆ ನುಡಿಸುವ ವಿಧಾನ ಬೇರೆ ಬೇರೆ.

ಪಿಟೀಲಿನ ನಾದವನ್ನೂ, ಮಾಧುರ್ಯವನ್ನೂ ಹೆಚ್ಚಿಸಿ ಭಾರತೀಯ ಸಂಗೀತಕ್ಕೆ ಪಿಟೀಲನ್ನು ಹೊಂದಿಸುವ ನಿಟ್ಟಿನಲ್ಲಿ ಪ್ರಯೋಗಗಳು ನಡೆದಿವೆ. ಶ್ರೀ. ಚೌಡಯ್ಯನವರ ಏಳು ತಂತಿಗಳುಳ್ಳ ಪಿಟೀಲುವಾದ್ಯವನ್ನೂ, ಶ್ರೀ. ಎಲ್. ಶಂಕರ್‌ರ ವಿಸ್ತೃತ "ಡಬಲ್ ವಯೊಲಿನ್"ಅನ್ನೂ ಇಲ್ಲಿ ಹೆಸರಿಸಬಹುದು.

ಭಾರತದ ಇನ್ನೊಂದು ಮುಖ್ಯ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ವಯೊಲಿನ್ ನ ಉಪಯೋಗ ಸ್ವಲ್ಪ ಕಡಿಮೆ - ಆದರೆ ಇತ್ತೀಚೆಗೆ ಶ್ರೀ ಡಾ|| ವಿ. ಜಿ. ಜೋಗ್‌, ಶ್ರೀಮತಿ ಡಾ|| ರಾಜಮ್, ಶ್ರೀಮತಿ ಕಲಾ ರಾಮನಾಥ್ ಮೊದಲಾದ ಸಂಗೀತಗಾರರಿಂದ ಹಿಂದುಸ್ತಾನಿ ಸಂಗೀತ ಕಛೇರಿಗಳಲ್ಲೂ ವಯೊಲಿನ್ ಉಪಯೋಗಗೊಂಡಿದೆ. ಕರ್ನಾಟಕ ಸಂಗೀತದ ಪ್ರಸಿದ್ಧ ವಯೊಲಿನ್-ವಾದಕರಲ್ಲಿ ಶ್ರೀಮಾನ್ ಪಿಟೀಲು ಟಿ. ಚೌಡಯ್ಯ, ಶ್ರೀಮಾನ್‌ ಎಂ. ಎಸ್. ಗೋಪಾಲಕೃಷ್ಣನ್, ಶ್ರೀಮಾನ್‌ ಲಾಲ್‍ಗುಡಿ ಜಯರಾಮನ್, ಮೈಸೂರು ಸಹೋದರರು (ಶ್ರೀಮಾನ್ ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್), ಶ್ರೀಮಾನ್ ಕುನ್ನಿಕುಡಿ ವೈದ್ಯನಾಥನ್,ಶ್ರೀಮಾನ್ ಕೋಲಾರದ ಕೊಳ್ಳೆಗಾಲ ಗೊಪಾಲಕೃಷ್ಣ ಮೊದಲಾದವರನ್ನು ಹೆಸರಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Singh, Jhujhar. "Interview: Kala Ramnath". News X. YouTube. Retrieved 5 September 2015.
  2. Allen, Edward Heron (1914). Violin-making, as it was and is: Being a Historical, Theoretical, and Practical Treatise on the Science and Art of Violin-making, for the Use of Violin Makers and Players, Amateur and Professional. Preceded by An Essay on the Violin and Its Position as a Musical Instrument. E. Howe. Accessed 5 September 2015.
  3. Choudhary, S.Dhar (2010). The Origin and Evolution of Violin as a Musical Instrument and Its Contribution to the Progressive Flow of Indian Classical Music: In search of the historical roots of violin. Ramakrisna Vedanta Math. ISBN 9380568061. Retrieved 5 September 2015.
  4. "Violin". www.etymonline.com. Online Etymology Dictionary. Retrieved 20 May 2017.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಪಿಟೀಲು&oldid=1123798" ಇಂದ ಪಡೆಯಲ್ಪಟ್ಟಿದೆ