ಪರಮಾಣು ವಿದಳನ ಕ್ರಿಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

}}

ಯುರೇನಿಯಮ್ ಪರಮಾಣುವಿನ ವಿದಳನ ಕ್ರಿಯೆ

ವಿದಳನ ಕ್ರಿಯೆ ಯಾವುದಾದರೂ ಒಂದು ಭಾರವಾದ ಪರಮಾಣು ನ್ಯೂಟ್ರಾನ್ ಕಣದ ಘಷ೯ಣೆಯಿಂದ ಎರಡು ಭಾಗಗಳಾಗಿ ಒಡೆದು ಅತ್ಯಧಿಕ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುವ ಕ್ರಿಯೆ.ಮೂಲವಸ್ತುವಿನ ಸಾಧ್ಯ ಸೂಕ್ಷ್ಮತಮ ರೂಪವಾದ ಪರಮಾಣುವಿನ ಕೇಂದ್ರವೇ ನ್ಯೂಕ್ಲಿಅಯಸ್ ಅಥವಾ ಬೀಜ ಕೇಂದ್ರ, ಭಾರದ ಪರಮಾಣುವಿನ ಕೇಂದ್ರವನ್ನು ನ್ಯೂಟ್ರಾನ್ ತಾಡನೆಯಿಂದ ಒಡೆಯುವ ಕ್ರಿಯೆಯೇ ಬೈಜಿಕ ವಿದಳನ ಕ್ರಿಯೆ. ಇಲ್ಲಿ ಮೂಲ ನ್ಯೂಕ್ಲಿಯಸ್ ಎರಡಾಗಿ ವಿಭಾಗವಾಗುತ್ತದೆ - ಜೀವ ಕೋಶ ಇಬ್ಬಾಗವಾಗುವ ಹಾಗೆ. ಎಂದೇ ಇದಕ್ಕೆ ಬೈಜಿಕ ವಿದಳನ ಎಂಬ ಹೆಸರು ಬಂತು. ಬೈಜಿಕ ವಿದಳನ ಕ್ರಿಯೆಯನ್ನು ಆವಿಷ್ಕರಿಸಿದವರು ಜರ್ಮನಿಯ ರಸಾಯನ ವಿಜ್ಞಾನಿಗಳಾದ ಒಟ್ಟೊ ಹಾನ್ ಮತ್ತು ಫ್ರಿಟ್ಜ಼್ ಸ್ಟ್ರಾಸ್ಮನ್ (೧೯೩೯). ದ್ವಿತೀಯ ಜಾಗತಿಕ ಸಮರ ನಡೆಯುತ್ತಿದ್ದ ಕಾಲ. ಜರ್ಮನಿಯ ವಿಶ್ವವಿದ್ಯಾಲಯದಲ್ಲಿ ಹಾನ್ ಮತ್ತು ಸ್ಟ್ರಾಸ್ಮನ್ ಯುರೇನಿಯಮ್ ಪರಮಾಣು ಬೀಜಕ್ಕೆ ನ್ಯೂಟ್ರಾನ್ ಕಣದಿಂದ ತಾಡಿಸಿ ಇನ್ನಷ್ಟು ಭಾರದ ನೂತನ ಪರಮಾಣುವಿನ ಸೃಷ್ಟಿಯ ಪ್ರಯೋಗದಲ್ಲಿ ನಿರತರಾಗಿದ್ದರು. ಯುರೇನಿಯಮ್ - ೨೩೫ ನ್ಯೂಕ್ಲಿಯಸ್ಸಿಗೆ ಕಡಿಮೆ ಶಕ್ತಿಯ ನ್ಯೂಟ್ರಾನಿನಿಂದ ತಾಡಿಸಿದಾಗ ಅಲ್ಲಿ ಅಧಿಕ ಶಕ್ತಿಯ ನ್ಯೂಟ್ರಾನುಗಳು ಬಿಡುಗಡೆಯಾಗುವುದನ್ನು ಗಮನಿಸಿದರು. ಪ್ರಯೋಗದಲ್ಲಿ ಬಳಸಿದ ಪರಿಶುದ್ಧ ಯುರೇನಿಯಮ್ ಬಿಲ್ಲೆಯಲ್ಲಿ ಬೇರಿಯಮ್, ಕ್ರಿಪ್ಟಾನ್, ಲಾಂಥನಮ್ ಮೊದಲಾದ ಹಗುರುದ ಹೊಸ ಧಾತು ಅಥವಾ ಮೂಲವಸ್ತುಗಳ ಪರಮಾಣುಗಳು ಸೃಷ್ಟಿಯಾಗಿರುವುದು ರಾಸಾಯನಿಕ ಪರೀಕ್ಷೆಗಳು ಸಾರಿದುವು. ಅರೇ ಇದು ಹೇಗೆ ಸಾಧ್ಯ! ಹಾನ್ ಮತ್ತು ಸ್ಟ್ರಾಸ್ಮನ್ ಅವರೊಂದಿಗೆ ಪ್ರಯೋಗದಲ್ಲಿ ಸಹಕರಿಸುತ್ತಿದ್ದವರು ಲಾ ಮೈಟ್ನರ್, ಭೌತ ವಿಜ್ಞಾನಿಯಾಗಿದ್ದ ಮೈಟ್ನರ್ ಅವರಿಗೆ ಸ್ಪಷ್ಟವಾಯಿತು - ಇಲ್ಲೊಂದು ಹೊಸ ವಿದ್ಯಮಾನ ಅನಾವರಣಗೊಂಡಿದೆ. ಮೈಟ್ನರ್ ತಮ್ಮ ಹೊಸ ಪ್ರಯೋಗದ ಫಲಿತಾಂಶಗಳನ್ನು ತನ್ನ ಅಳಿಯ ಭೌತ ವಿಜ್ಞಾನಿ ಒಟ್ಟೊಫ್ರಿಶ್ ಅವರೊಂದಿಗೆ ಚರ್ಚಿಸಿದರು ಮತ್ತು ಪ್ರಾಯಶ: ಇಡೀ ಪ್ರಕ್ರಿಯೆಯಲ್ಲಿ ಯುರೇನಿಯಮ್ ನ್ಯೂಕ್ಲಿಯಸ್ ಒಡೆಯುತ್ತಿರಬಹುದೆಂಬ ತಮ್ಮ ಊಹೆಯನ್ನು ಮುಂದಿಟ್ಟರು. ಫ್ರಿಶ್ ಥಟ್ಟನೆ ಇದಕ್ಕೆ ನ್ಯೂಕ್ಲಿಯರ್ ಫಿಶನ್ ಎಂಬ ಹೆಸರನ್ನು ಟಂಕಿಸಿದರು. ಹೀಗೆ ಪರಮಾಣುವಿನ ಅಂತರಾಳದಿಂದ ಅಗಾಧವಾದ ಶಕ್ತಿಯನ್ನು ಬಸಿಯುವ ವಿನೂತನ ವಿದ್ಯಮಾನವೊಂದು ಆವಿಷ್ಕಾರಗೊಂಡಿತು. ಫ್ರಿಶ್ ಡೆನ್ಮಾರ್ಕಿನ ಕೊಪೆನ್ ಹೆಗನ್ನಿನಲ್ಲಿದ್ದ ಭೋರ್ ಸಂಶೋಧನ ಕೇಂದ್ರದಲ್ಲಿ ಸಂಶೋಧನ ವಿದ್ಯಾರ್ಥಿಯಾಗಿದ್ದರು. ಈ ಸುದ್ದಿಯನ್ನು ಅವರು ನೀಲ್ಸ್ ಬೋರ್ ಅವರಿಗೆ ಅರುಹಿದರು. ಬೋರ್ ಆ ಸಂದರ್ಭದಲ್ಲಿ ಅಮೇರಿಕಕ್ಕೆ ಪಯಣಿಸುವು ಗದಿಬಿಡಿಯಲ್ಲಿದ್ದರು. ಹಡಗು ಏರುವ ಹೊತ್ತಿಗೆ ಫ್ರಿಶ್ ಈ ಹೊಸ ವಿದ್ಯಮಾನದ ಸುದ್ದಿಯನ್ನು ಸಂಕ್ಷಿಪ್ತವಾಗಿ ಹೇಳಿದರು. ಹೇಳಿ ಮುಗಿಸುವ ಮುನ್ನವೇ ಬೋರ್ ಅವರಿಗೆ ಎಲ್ಲವೂ ನಿಚ್ಛಳವಾಯಿತು - ಇದು ಅಂತಿಂಥ ವಿದ್ಯಮಾನವಲ್ಲ - ಶಕ್ತಿಯ ಮಹಾ ಊಟೆಯನ್ನು ಅನಾವರಣಗೊಳಿಸುವ ವಿದ್ಯಮಾನ. ಬೋರ್ ಸಾಗರಯಾನ ಮಾಡಿ ಅಮೇರಿಕದಲ್ಲಿ ಬಂದಿಳಿಯುವ ಹೊತ್ತಿಗೆ ಅವರನ್ನು ಸ್ವಾಗತಿಸಿದವರು ಅರ್ಚಿಬಾಲ್ದ್ ವ್ಹೀಲರ್. ಬೋರ್ ನೂತನ ವಿದ್ಯಮಾನದ ಬಗೆಗೆ ಹೇಳಿದರು - ಆದರೆ ಮರೆತರು ಈ ಎಲ್ಲವೂ ಗುಟ್ಟಿನಲ್ಲಿರಲಿ ಎನ್ನುವುದಕ್ಕೆ.. ವ್ಹೀಲರ್ ತಡಮಾಡಲಿಲ್ಲ. ಮರುದಿನವೇ ಕಾಲ್ಟೆಕ್ ವಿವಿಯಲ್ಲಿ ಸಭೆ ಕರೆದರು ಮತ್ತು ಅಲ್ಲಿ ಬೈಜಿಕ ವಿದಳನದ ಕುರಿತು ವಿವರಿಸಿದರು. ವಿಜ್ಞಾನ ಪ್ರಪಂಚಕ್ಕೆ ಹೀಗೆ ವಿನೂತ ವಿದ್ಯಮಾನದ ಆವಿಷ್ಕಾರದ ಸುದ್ದಿ ಬಹಿರಂಗಗೊಂಡಿತು. ಇಡೀ ವಿದ್ಯಮಾನದಲ್ಲಿ ಯುರೇನಿಯಮ್ - ೨೩೫ ಪರಮಾಣು ಬೀಜಕ್ಕೆ ಮಂದ ಗತಿಯಲ್ಲಿ ಸಾಗುವ ಕಡಿಮೆ ಶಕ್ತಿಯ ನ್ಯೂಟ್ರಾನ್ ಢಿಕ್ಕಿಯಾಗುತ್ತದೆ. ಪರಿಣಾಮವಾಗಿ ಅಲ್ಲಿ ಅಸ್ಥಿರವಾದ ಯುರೇನಿಯಮ್ - ೨೩೬ ಸೃಷ್ಟಿಯಾಗುತ್ತದೆ. ಇದು ಅತ್ಯಂತ ಅಸ್ಥಿರ. ಹಾಗಾಗಿ ಅದು ಇಬ್ಬಾಗವಾಗುತ್ತದೆ. ಒಂದು ಬೇರಿಯಮ್ - ೧೪೧ ಮತ್ತು ಇನ್ನೊಂದು ಕ್ರಿಪ್ಟಾನ್ - ೯೨. ಇವುಗಳೊಂದಿಗೆ ಮೂರು ವೇಗದಲ್ಲಿ ಸಾಗುವ ಶಕ್ತಿಶಾಲಿಯಾದ ನ್ಯೂಟ್ರಾನುಗಳು ಬಿಡುಗಡೆಯಾಗುತ್ತವೆ. ಮೂಲ ಯುರೇನಿಯಮ್ ಮತ್ತು ಹೊಸದಾಗಿ ಸೃಸ್ಟಿಗೊಂಡ ಬೇರಿಯಮ್ ಮತ್ತು ಕ್ರಿಪ್ಟಾನ್ ಹಾಗೂ ಮೂರು ನ್ಯೂಟ್ರಾನುಗಳ ದ್ರವ್ಯರಾಶಿಯನ್ನು ಲೆಕ್ಕ ಹಾಕಿದರೆ ವಿದಳನದ ನಂತರದ ದ್ರವ್ಯರಾಶಿ ಮೊದಲಿನ ದ್ರವ್ಯರಾಶಿಗಿಂತ ೦.೨೧೫ ಪರಮಾಣುರಾಶಿ ಮಾನಕದಷ್ಟು(ಎಟಾಮಿಕ್ ಮಾಸ್ ಯುನಿಟ್)ಕಡಿಮೆ ಇತ್ತು. ಈ ನಷ್ಟವಾದ ದ್ರವ್ಯರಾಶಿ ೨೦೦ ಮೆಗಾ ಎಲೆಕ್ಟ್ರಾನ್ ವೋಲ್ಟ್ ಶಕ್ತಿಯಾಗಿ ಬಿಡುಗಡೆಯಾಗುತ್ತದೆ. ಇದು ಅತ್ಯಂತ ಸೂಕ್ಷ್ಮ ನ್ಯೂಕ್ಲಿಯಸ್ಸಿಗೆ ಹೋಲಿಸಿದರೆ ಅತ್ಯಗಾಧವಾದ ಶಕ್ತಿ.