ಪಂಡಿತ ತಾರಾನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಹುಮುಖ ಪ್ರತಿಭಾವಂತ ತಾರಾನಾಥರು ಅಧ್ಯಾಪಕರಾಗಿ, ವೈದ್ಯರಾಗಿ, ಯೋಗ ಆಯುರ್ವೇದಗಳಲ್ಲಿ ನುರಿತವರಾಗಿ , ಸಂಸ್ಥೆ ಕಟ್ಟುವವರಾಗಿ , ಆಧ್ಯಾತ್ಮಿಕ ಧಾರ್ಮಿಕ ವ್ಯಕ್ತಿಯಾಗಿ , ಸಮಾಜ ಸುಧಾರಕರಾಗಿ ಬಹಳಷ್ಟು ಹೆಸರುಮಾಡಿದರು. ತಮ್ಮ ಕಿರುಜೀವನದಲ್ಲಿ ( ಅವರು ಕೇವಲ ೫೧ವರ್ಷ ಜೀವಿಸಿದ್ದರು) ಅವರು ಸಾಧಿಸಿದ್ದು ಅದ್ಭುತ ಪ್ರಮಾಣದ್ದು.

ಹುಟ್ಟು[ಬದಲಾಯಿಸಿ]

ಪಂಡಿತ ತಾರಾನಾಥರು ಹುಟ್ಟಿದ್ದು ೧೮೮೧ರ ಜೂನ್ ೫ರಂದು , ಮಂಗಳೂರಿನಲ್ಲಿ. ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿಯನ್ನು ತಂದೆಯಿಂದಲೂ, ಧಾರ್ಮಿಕ ನೈತಿಕ ವಿಷಯಗಳಲ್ಲಿ ಆಸಕ್ತಿಯನ್ನು ತಾಯಿಯಿಂದಲೂ ಪಡೆದರು. ಚುರುಕುಬುದ್ಧಿಯ ಹುಡುಗನಾಗಿದ್ದ ತಾರಾನಾಥ ಶಾಲೆಯಲ್ಲಿ ಶಿಕ್ಷಕರ ಮಾತುಗಳನ್ನು ತನಗೆ ಸರಿಯಲ್ಲ ಎಂದು ಕಂಡರೆ ಪ್ರಶ್ನಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ದಂಡನೆಗೊಳಗಾಗುತ್ತಿದ್ದದ್ದೂ ಉಂಟು. ಈ ಬಂಡೇಳುವ ಸ್ವಭಾವ ಅವರ ಜೀವನದುದ್ದಕ್ಕೂ ಕಂಡುಬರುತ್ತದೆ. ಹೈಸ್ಕೂಲು ಮತ್ತು ಕಾಲೇಜು ವಿದ್ಯಾಭ್ಯಾಸಕ್ಕೆ ಹೈದರಾಬಾದಿಗೆ ತೆರಳಿ, ನಂತರ ಮೆಡಿಕಲ್ ಕಾಲೇಜು ಸೇರಿದರು. ಅಲ್ಲಿಯೂ ಅವರ ಅಸಾಧಾರಣ ಪ್ರತಿಭೆಯಿಂದ ಬೆರಗಾದ ಅವರ ಅಧ್ಯಾಪಕರು ಅವರನ್ನು ಗೌರವ ಅಧ್ಯಾಪಕರಾಗಿ ತರಗತಿ ತೆಗೆದುಕೊಳ್ಳಲು ಹೇಳಿದರು!

ಆದರೂ , ಅಲ್ಲಿಯೂ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯದಿಂದಾಗಿ, ಶಿಕ್ಷಣ ಪೂರೈಸಲಿಲ್ಲ. ಆದರೂ ಅವರ ಅಧ್ಯಾಪಕರು ಅವರನ್ನು ದೇಹಶಾಸ್ತ್ರದ ಸಹಾಯಕ ಅಧ್ಯಾಪಕರನ್ನಾಗಿ ನೇಮಿಸಿದರು. ಅದೇ ಕೆಲಸದಲ್ಲಿ ಅವರು ಏಳು ವರ್ಷ ಇದ್ದರು. ಮುಂದೆ ಅವರನ್ನು ಬೀದರಿಗೆ ವರ್ಗಾವಣೆ ಮಾಡಲಾಯಿತು.

ಆಧ್ಯಾತ್ಮ[ಬದಲಾಯಿಸಿ]

ಚಿಕ್ಕಂದಿನಿಂದಲೂ ಅವರಿಗೆ ಯೋಗ ಮತ್ತು ಆಯುರ್ವೇದದಲ್ಲಿ ಆಸಕ್ತಿಯಿತ್ತು. ಸಾಧುಗಳು, ವೈದ್ಯರುಗಳ ಒಡನಾಟದಲ್ಲಿ ಮಾಹಿತಿ ಸಂಗ್ರಹಣೆ ನಡೆಯಿತು. ಬೀದರಿಗೆ ಹೋದ ಮೇಲೆ ಧ್ಯಾನ , ಆಧ್ಯಾತ್ಮದ ಆಳದ ಜೀವನವನ್ನು ಮುಂದುವರಿಸಿದರು. ಆಗಲೇ ಅವರು ಆಧ್ಯಾತ್ಮಿಕ ರಹಸ್ಯ ಅನುಭವಗಳನ್ನು ಪಡೆಯತೊಡಗಿ, ಕೆಲವು ವಿಶೇಷ ಶಕ್ತಿಗಳನ್ನೂ ಪಡೆದುಕೊಂಡಿದ್ದರು ಎಂದು ಹೇಳಲಾಗಿದೆ. ದೈಹಿಕ ಕಾಹಿಲೆಗಳಿಗೆ ಭೌತಿಕದ ಬದಲು ಮಾನಸಿಕ ಚಿಕಿತ್ಸೆ ಹೆಚ್ಚು ಪ್ರಯೋಜನಕಾರಿ ಎಂದು ನಂಬಿದ್ದ ಅವರೆಡೆ ಔಷಧಕ್ಕಾಗಿ ಅನೇಕರು ಬರುತ್ತಿದ್ದರು.

ಧಾರ್ಮಿಕ ಗಡಿಗಳಿಗೆ ಅತೀತರಾಗಿದ್ದ ತಾರಾನಾಥರನ್ನು ಹಿಂದೂ , ಮುಸ್ಲಿಮ್ ಮತ್ತು ಕ್ರೈಸ್ತರೆಲ್ಲರೂ ತಮ್ಮವರೆಂದುಕೊಂಡಿದ್ದರು.ಆದರೂ ಕರ್ಮಠರು ಅವರ ಮೇಲೆ ಸಿಟ್ಟಾಗಿ ಕೊಲ್ಲುವ ಹೊಂಚೂ ಹಾಕಿದರು.ಆದರೆ ಕೊಲೆ ಮಾಡಲುಬಂದವರು ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ , ಕಾಲಿಗೆ ಬಿದ್ದು ಕ್ಷಮಾಪಣೆ ಬೇಡಿದರು.

ಸಾಮಾಜಿಕ ಜೀವನ[ಬದಲಾಯಿಸಿ]

ಮುಂದೆ ಸರಕಾರೀ ಸೇವೆಗೆ ರಾಜಿನಾಮೆಯಿತ್ತ ತಾರಾನಾಥರು ರಾಯಚೂರಿನಲ್ಲಿ ’ಮದರಸಾ ಹಿ ಹಮ್ದರ್ದ್’ ಎಂಬ ಶಾಲೆಯನ್ನು ಪ್ರಾರಂಭಿಸಿದರು.ಅವರ ಉದ್ದೇಶ ಬರಿಯ ಬುದ್ಧಿಯನ್ನಷ್ಟೇ ಬೆಳೆಸಲು ಮಾತ್ರ ಅಲ್ಲದೆ ವಿದ್ಯಾರ್ಥಿಯ ನೈತಿಕ ಅರಿವು ಮತ್ತು ಸದ್ಗುಣಗಳನ್ನು ಬೆಳೆಸಬೇಕು ಎಂದಿತ್ತು. ಸ್ವತಃ ಸಂಗೀತಜ್ಞಾನಿಯಾಗಿದ್ದ ಅವರು ,ಗಣಿತವನ್ನು ಸಂಗೀತದ ಮೂಲಕ ಕಲಿಸುವುದೇ ಮೊದಲಾದ ಅನೇಕ ಶೈಕ್ಷಣಿಕ ಪ್ರಯೋಗಗಳನ್ನು ಮಾಡಿದರು.

ಆಗ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ರಾಯಚೂರಿನಲ್ಲಿದ್ದಾಗಲೇ, ಹೈದರಾಬಾದ್ ನಿಜಾಮರ ನಿರಂಕುಶ ಆಡಳಿತವನ್ನು ಹಾಗೂ ನಜರಾನಾ ತೆರಿಗೆಯನ್ನು ಪ್ರತಿಭಟಿಸಿ ’ಹಿಂದೂ’ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದರು. ಇದರಿಂದಾಗಿ ತಾರಾನಾಥರ ಮೇಲೆ ರಾಜದ್ರೋಹದ ಆರೋಪ ಬಂದು, ಅವರ ಮೇಲೆ ಬಂಧಿಸಿ ಗಡಿಪಾರು ಮಾಡುವ ವಾರಂಟ್ ಹೊರಟಿತ್ತು. ಈ ವಿಷಯದ ತಿಳಿದ ಮಿತ್ರರು ತಾರಾನಾಥರನ್ನು ಊರು ಬಿಟ್ಟು ಹೋಗಲು ಒತ್ತಾಯಿಸಿದರು.ಮೊದಮೊದಲು ನಿರಾಕರಿಸಿದ ತಾರಾನಾಥರು, ತಾವಿಲ್ಲೇ ಇದ್ದರೆ ತಮ್ಮ ಶಾಲೆಯೂ ಸರಕಾರದ ಕೆಂಗಣ್ಣಿಗೆ ಗುರಿಯಾಗಬಹುದೆಂದು ತಿಳಿದು, ಊರು ಬಿಡಲು ಒಪ್ಪಿದರು.

ಅಂತೆಯೇ ಮಧ್ಯರಾತ್ರಿಯಲ್ಲಿ ತುಂಗಭದ್ರಾ ನದಿಯನ್ನು ದಾಟಿ ಬ್ರಿಟಿಷ್ ಸರಕಾರದ ಗಡಿಯನ್ನು ಪ್ರವೇಶಿಸಿದರು. ಆಲ್ಲಿ ’ಪ್ರೇಮಾಯತನ’ ಎಂಬ ಆಶ್ರಮವನ್ನು ಸ್ಥಾಪಿಸಿ , ಆರೋಗ್ಯೋಪಚಾರದ ಆಯುರ್ವೇದದ ಸಿದ್ಧಾಂತ, ಆಚರಣೆಗಳನ್ನು ಪ್ರಚಾರಮಾಡತೊಡಗಿದರು. ಇದು ಬಹಳ ಜನಪ್ರಿಯವಾಯಿತು.

ರಾಜಕೀಯ ಜೀವನ[ಬದಲಾಯಿಸಿ]

ಹೈದರಾಬಾದ್ ಸಂಸ್ಥಾನದಿಂದ ಹೊರಬಿದ್ದಮೇಲೆ, ರಾಜಕೀಯದಲ್ಲಿ ಪ್ರತ್ಯಕ್ಷವಾಗಿ ಪಾಲುಗೊಳ್ಳದಿದ್ದರೂ, ಅದರ ಕುರಿತು ಆಸ್ಥೆ, ಚಿಂತನೆ ನಡೆದೇ ಇತ್ತು. ೧೯೩೩ರಲ್ಲಿ ಬ್ರಿಟಿಷ್ ಸರಕಾರ ಆವರ ಆಶ್ರಮದಲ್ಲಿ ಪಿತೂರಿ ನಡೆಯುತ್ತಿದೆ ಎಂದು ಸಂಶಯಿಸಿ, ಅದರ ಮೇಲೆ ಧಾಳಿ ನಡೆಯಿಸಿತು. ಆದರೆ ಯಾವುದೇ ದೋಷಾರೋಪಣೆಯ ವಸ್ತು ಸಿಗಲಿಲ್ಲ.

ವೈವಾಹಿಕ ಜೀವನ[ಬದಲಾಯಿಸಿ]

೪೦ನೆಯ ವಯಸ್ಸಿನವರೆಗೂ ಬ್ರಹ್ಮಚಾರಿಯಾಗಿದ್ದ ತಾರಾನಾಥರು , ಮದರಾಸಿನಿಂದ ರೋಗಿಯಾಗಿ ಬಂದಿದ್ದ ಸುಮತಿಬಾಯಿ ಎಂಬುವವರನ್ನು ಗುಣಪಡಿಸಿದರು , ಮುಂದೆ ಮದುವೆಯಾದರು. ಮದುವೆಯ ನಂತರ ಅವರು ತಮ್ಮ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆಯತೊಡಗಿದರು.


ನಿಧನ[ಬದಲಾಯಿಸಿ]

ತಮ್ಮ ೫೧ನೆಯ ವರ್ಷದಲ್ಲಿ, ೧೯೪೨ ಅಕ್ಟೋಬರ್‍ ೩೧ರಂದು ತಾರಾನಾಥರು ವಿಧಿವಶರಾದರು.

ಆಕರ[ಬದಲಾಯಿಸಿ]

ಪುಸ್ತಕ : ಕನಾಟಕ ಏಕೀಕರಣದ ನಾಲ್ವರು ಚಿಂತಕರು, ಮೂಲ ಇಂಗ್ಲೀಷ್ : ಪ್ರೊ. ಕೆ.ರಾಘವೇಂದ್ರರಾವ್, ಕನ್ನಡಕ್ಕೆ : ಆರ್ಯ , ಮನೋಹರ ಗ್ರಂಥ ಮಾಲಾ , ೨೦೦೫