ನರಸಿಂಹರಾಜು
ನರಸಿಂಹರಾಜು ಕನ್ನಡ ಚಿತ್ರರಂಗದ ಪ್ರಮುಖ ಹಾಸ್ಯ ನಟ ಮತ್ತು ನಿರ್ಮಾಪಕ.(ಜನನ: ಜುಲೈ ೨೮,೧೯೨೬ - ಮರಣ: ಜುಲೈ ೧೧,೧೯೭೯).ಜನ್ಮಸ್ಥಳ ತುಮಕೂರು ಜಿಲ್ಲೆಯ ತಿಪಟೂರು.ತಂದೆ ರಾಮರಾಜು,ತಾಯಿ ವೆಂಕಟಲಕ್ಷ್ಮಮ್ಮ. ವೃತ್ತಿ ರಂಗಭೂಮಿ ಹಾಗೂ ಚಲನಚಿತ್ರ-ಎರಡೂ ಕ್ಷೇತ್ರಗಳಲ್ಲಿ ಹಾಸ್ಯಪಾತ್ರಗಳಿಂದ ಪ್ರಸಿದ್ಧರಾದವರು ಟಿ.ಆರ್.ನರಸಿಂಹರಾಜು. ನಕ್ಕರೆ ಅದೇ ಸ್ವರ್ಗ, ರಣಧೀರ ಕಂಠೀರವ (ಚಲನಚಿತ್ರ), ಪ್ರೊಫೆಸರ್ ಹುಚ್ಚುರಾಯ ಚಿತ್ರಗಳ ನಿರ್ಮಾಪಕರು.ಡಾ.ರಾಜ್‌ಕುಮಾರ್, ಜಿ.ವಿ.ಅಯ್ಯರ್ ಅವರೊದನೆ ಸೇರಿ ಸ್ಥಾಪಿಸಿದ "ಕನ್ನಡ ಚಲನಚಿತ್ರ ಕಲಾವಿದರ ಸಂಘ"ದ ಮೂಲಕವೇ ಚಲನಚಿತ್ರ ರಣಧೀರ ಕಂಠೀರವ ನಿರ್ಮಾಣವಾಯಿತು.ಸುಮಾರು ೨೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ತಮ್ಮ ಮಗ ಶ್ರೀಕಾಂತನ ಹೆಸರಿನಲ್ಲಿ ಸ್ಥಾಪಿಸಿದ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಿಸಿದ ಚಿತ್ರ ಪ್ರೊಫೆಸರ್ ಹುಚ್ಚೂರಾಯ.
ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.
[ಬದಲಾಯಿಸಿ] ನರಹಿಂಹರಾಜು ಅಭಿನಯದ ಕೆಲವು ಚಿತ್ರಗಳು
- ಬೇಡರ ಕಣ್ಣಪ್ಪ
- ಸ್ಕೂಲ್ ಮಾಸ್ಟರ್
- ಸಂಧ್ಯಾರಾಗ
- ಮಹಿಷಾಸುರ ಮರ್ದಿನಿ
- ಸಾಕ್ಷಾತ್ಕಾರ
- ಪ್ರೊಫೆಸರ್ ಹುಚ್ಚುರಾಯ
- ಸತ್ಯ ಹರಿಶ್ಚಂದ್ರ
- ವೀರಕೇಸರಿ
- ನಕ್ಕರೆ ಅದೇ ಸ್ವರ್ಗ
- ಶ್ರೀಕೃಷ್ಣದೇವರಾಯ
- ರಣಧೀರ ಕಂಠೀರವ
- ಪ್ರೀತಿ ಮಾಡು ತಮಾಷೆ ನೋಡು
- ಭಕ್ತ ಮಲ್ಲಿಕಾರ್ಜುನ
- ಮಹಾಕವಿ ಕಾಳಿದಾಸ
- ಭಕ್ತ ಮಾರ್ಕಂಡೇಯ
- ಬೆಟ್ಟದ ಹುಲಿ
- ಅಮರಶಿಲ್ಪಿ ಜಕಣಾಚಾರಿ
- ಕುಲವಧು
- ಗಂಧದ ಗುಡಿ
ತಮ್ಮ ಅಭಿಮಾನಿಗಳಿಂದ ಹಾಸ್ಯ ಚಕ್ರವರ್ತಿ,ಹಾಸ್ಯಬ್ರಹ್ಮಕನ್ನಡದ ಚಾರ್ಲಿ ಚಾಂಪ್ಲಿನ್" ಎಂಬ ಬಿರುದುಗಳಿಂದ ಸನ್ಮಾನಿತರಾಗಿದ್ದಾರೆ. ಅಭಿನಯ ಹಾಸ್ಯದ ಮೂಲಕವೇ ಕನ್ನಡಚಿತ್ರ ರಸಿಕರನ್ನು ನಕ್ಕುನಗಿಸಿದ ಧೀಮಂತ ನಟ ನರಸಿಂಹರಾಜು. ಕನ್ನಡಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ನರಸಿಂಹರಾಜು ಅವರು ಪ್ರಮುಖರು. 1926ರಿಂದ 1979ರವರೆಗೆ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ನರಸಿಂಹರಾಜು ಹಾಸ್ಯನಟರಾಗಿ ಎಷ್ಟರ ಮಟ್ಟಿಗೆ ಬೆಳೆದರೆಂದರೆ, ರಾಜ್ ಕುಮಾರ್ ನಾಯಕ ನಟರಾದರೆ, ಅವರ ಗೆಳೆಯನ ಪಾತ್ರಕ್ಕೆ ನರಸಿಂಹರಾಜು ಆಯ್ಕೆಯಾಗುತ್ತಿದ್ದರು. ನಾಯಕನ ಗೆಳೆಯ, ಸಹೋದ್ಯೋಗಿ, ಸಹಾಯಕ ಹೀಗೆ ಯಾವುದಾದರೂ ಒಂದು ಪಾತ್ರ ಸೃಷ್ಟಿಸಿ ನರಸಿಂಹ ರಾಜು ಅವರಿಗೆ ಅವಕಾಶ ನೀಡಲಾಗುತ್ತಿತ್ತು.
ನರಸಿಂಹರಾಜು ಅವರು ಹುಟ್ಟಿದ್ದು ತುಮಕೂರು ಜಿಲ್ಲೆ ತಿಪಟೂರಿನಲ್ಲಿ. ಚಿಕ್ಕಪ್ಪನ ಪ್ರೋತ್ಸಾಹದಿಂದ ಚಿಕ್ಕಂದಿನಲ್ಲಿಯೇ ರಂಗಭೂಮಿ ಪ್ರವೇಶಿಸಿದ ನರಸಿಂಹರಾಜು ಬಾಲನಟನಾಗಿ ಖ್ಯಾತಿ ಪಡೆದರು. 1954ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನರಸಿಂಹ ರಾಜು ನಟಿಸಿದ ಮೊದಲ ಚಿತ್ರ ಬೇಡರಕಣ್ಣಪ್ಪ. ರಾಜ್ ಕುಮಾರ್ ನಾಯಕ ನಟರಾದ ಮೊದಲ ಚಿತ್ರವೂ ಆದ ಬೇಡರ ಕಣ್ಣಪ್ಪದಲ್ಲಿ ಕಾಶಿ ಪಾತ್ರದಲ್ಲಿ ಕಾಣಿಸಿಕೊಂಡ ನರಸಿಂಹ ರಾಜು ಮತ್ತೆ ಹಿಂತಿರುಗಿ ನೋಡಲೇ ಇಲ್ಲ.ಮಕ್ಕಳರಾಜ್ಯ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿ ಮಿಂಚಿದ ಅವರು, ಸತ್ಯಹರಿಶ್ಚಂದ್ರ ಚಿತ್ರದಲ್ಲಿ ನಕ್ಷತ್ರಿಕರಾಗಿ ಮಾಡಿದ ಪಾತ್ರ ಮರೆಯುವಂತೆಯೇ ಇಲ್ಲ. ನಂತರ ನೂರಾರು ಚಿತ್ರಗಳಲ್ಲಿ ಹಾಸ್ಯನಟರಾಗಿ ವಿಜೃಂಭಿಸಿದರು. ಪ್ರೊಫೆಸರ್ ಹುಚ್ಚೂರಾಯ ಚಿತ್ರದ ಮೂಲಕ ನಾಯಕ ನಟರಾಗಿಯೂ ಅಭಿನಯಿಸಿದರು. ಹಲವು ಚಿತ್ರಗಳಲ್ಲಿ ದ್ವಿಪಾತ್ರ, ತ್ರಿಪಾತ್ರಗಳಲ್ಲೂ ಮನಸೂರೆಗೊಂಡರು.
