ದೊಡ್ಡಗದ್ದವಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಕ್ಷ್ಮೀ ದೇವಿ ದೇವಾಲಯ,ದೊಡ್ಡಗದ್ದವಳ್ಳಿ
Aerial view of Lakshmidevi temple at Doddagaddavalli (1114 CE)

ದೊಡ್ಡಗದ್ದವಳ್ಳಿಯುಹಾಸನ ಜಿಲ್ಲೆಯ ಒಂದು ಹಳ್ಳಿ. ಇದು ಹೊಯ್ಸಳ ಶೈಲಿಯ ಪುರಾತನ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಸಿದ್ಧಿ. ಹಾಸನದಿಂದ ಬೇಲೂರಿಗೆ ಹೋಗುವ ರಸ್ತೆಯಲ್ಲಿ ೧೬ ಕಿ.ಮೀ. ಸಾಗಿದರೆ ದೊಡ್ಡಗದ್ದವಳ್ಳಿ ಸಿಗುತ್ತದೆ. ಇಲ್ಲಿಯ ಪ್ರಮುಖ ಆಕರ್ಷಣೆಯಾದ ಮಹಾಲಕ್ಷ್ಮಿ ದೇವಸ್ಥಾನವನ್ನು ಹೊಯ್ಸಳ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಕ್ರಿ.ಶ. ೧೧೧೪ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯವು ಚತುಷ್ಕುಟ(ಒಂದೇ ಜಗತಿಯ ಮೇಲೆ ನಾಲ್ಕು ಮುಖ್ಯ ಗರ್ಭಗುಡಿಗಳು ಮತ್ತು ನಾಲ್ಕು ಮುಖ್ಯ ಶಿಖರಗಳಿರುವುದು) ದೇವಾಲಯವಾಗಿದ್ದು , ಕಾಲಿಮಾತೆ, ಮಹಾಲಕ್ಷ್ಮಿ, ಶಿವಲಿಂಗ, ಮತ್ತು ವಿಷ್ಣು ( ನಲವತ್ತು ವರುಷಗಳ ಹಿಂದೆ ಮೂಲ ವಿಷ್ಣು ವಿಗ್ರಹವು ಕಳುವಾಗಿದ್ದು ಸದ್ಯ ಕಾಲಭೈರವನ ಮೂರ್ತಿಯು ಇಲ್ಲಿದೆ)ವಿನ ವಿಗ್ರಹಗಳಿವೆ. ಇದು ಪೂಜೆಗೊಳ್ಳುವ ಆಲಯವಾಗಿದ್ದು ಭಾರತೀಯ ಪುರಾತತ್ವ ಸರ್ವೇಕ್ಷಣದ ಸುಪರ್ದಿಗೊಳಪಟ್ಟಿದೆ. ೧೯೫೮ ರಲ್ಲಿ ಈ ಆಲಯವನ್ನು ಕೇಂದ್ರ ಸರಕಾರವು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದೆ. ದೇವಾಲಯವು ಸೂರ್ಯೋದಯದಿಂದ ಸೂರ್ಯಾಸ್ತದವರೆವಿಗೆ ತೆರೆದಿರುತ್ತದೆ.

ಮಹಾಲಕ್ಷ್ಮಿ ದೇವಾಲಯ ದೊಡ್ಡಗದ್ದವಳ್ಳಿ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ಹಾಸನ ತಾಲ್ಲೂಕಿನಲ್ಲಿರುವ ಒಂದು ಹಳ್ಳಿ. ಕೊಲ್ಹಾಪುರದಲ್ಲಿರುವ ಹಾಗೆ ಇಲ್ಲೊಂದು ಲಕ್ಷ್ಮೀ ದೇವಾಲಯವಿರುವುದರಿಂದ ಇದನ್ನು ಅಭಿನವ ಕೊಲ್ಹಾಪುರವೆಂದೂ ಕರೆಯಲಾಗಿದೆ. ಹೊಯ್ಸಳ ವಾಸ್ತುಶೈಲಿಯ ಅಪೂರ್ವ ಚತುಷ್ಕೂಟಾಚಲ ದೇವಾಲಯಕ್ಕಾಗಿ ಇದು ಪ್ರಸಿದ್ಧವಾಗಿದೆ. ಇಲ್ಲಿಯ ಲಕ್ಷ್ಮೀ ದೇವಾಲಯವನ್ನು ವಿಷ್ಣುವರ್ಧನನ ಕಾಲದಲ್ಲಿ (1113) ಪಾರಿಯಾತ್ರದ ಮಹಾವಡ್ಡ ವ್ಯವಹಾರಿಕುಲ್ಲಹಣ ರಾಹುತನೂ ಅವನ ಸತಿ ಸಹಜಾದೇವಿಯೂ ಸೇರಿ ಕಟ್ಟಿಸಿದರೆಂದು ಹೇಳಲಾಗಿದೆ.

ವಾಸ್ತು ಶಿಲ್ಪ[ಬದಲಾಯಿಸಿ]

Kadamba shikhara (rear, left and right) and dravida shikhara (front) Lakshmi Devi temple at Doddagaddavalli
ಲಕ್ಷ್ಮೀದೇವಿ ಗುಡಿಯಲ್ಲಿರುವ 'ಬೇತಾಳ' ಮೂರ್ತಿ

ಇದು 1113 ಕ್ಕಿಂತ ಸ್ವಲ್ಪ ಈಚಿನದೆಂದೂ ಅಭಿಪ್ರಾಯಪಡಲಾಗಿದೆ.ಲಕ್ಷ್ಮೀ ದೇವಾಲಯ 118 ಅಡಿ ಉದ್ದ ಮತ್ತು 112 ಅಡಿ ಅಗಲ ಇರುವ ಅಂಗಳದ ಮಧ್ಯದಲ್ಲಿದೆ. ಸುತ್ತಲೂ 7 ಅಡಿ ಎತ್ತರದ ಪ್ರಾಕರವಿದೆ. ಇದಕ್ಕೆ ಎರಡು ಮಹದ್ವಾರಗಳುಂಟು. ಪೂರ್ವದ್ವಾರಮಂಟಪ ಬಿದ್ದುಹೋಗಿದೆ. ಪಶ್ಚಿಮದ್ವಾರಮಂಟಪ ಚೆನ್ನಾಗಿದೆ. ಇದರ 16 ಕಂಬಗಳೂ 9 ಭುವನೇಶ್ವರಿಗಳೂ ಅವುಗಳಲ್ಲಿ ಕೆತ್ತಿದ ತಾಂಡವೇಶ್ವರ ಮತ್ತು ಅಷ್ಟದಿಕ್ಪಾಲಕ ವಿಗ್ರಹಗಳೂ ಆಕರ್ಷಕವಾಗಿವೆ.

ಲಕ್ಷ್ಮೀ ದೇವಾಲಯಕ್ಕೆ ನಾಲ್ಕು ಗೋಪುರಗಳೂ ನಾಲ್ಕು ಗರ್ಭಗೃಹಗಳೂ ನಾಲ್ಕು ಅಂತರಾಳಗಳೂ ಇವೆಲ್ಲಕ್ಕೆ ಸಮಾನವಾದ 15 ಅಂಕಣಗಳ ಒಂದು ನವರಂಗವೂ ಇದೆ. ಪೂರ್ವದಿಕ್ಕಿನ ಗರ್ಭಗುಡಿಯಲ್ಲಿ ಸಮಭಂಗದಲ್ಲಿ ನಿಂತಿರುವ ಚತುರ್ಭುಜಸಹಿತ ಲಕ್ಷ್ಮೀ ವಿಗ್ರಹ, ಪಶ್ಚಿಮದ ಗರ್ಭಗುಡಿಯಲ್ಲಿ ಭೂತನಾಥಲಿಂಗ, ದಕ್ಷಿಣದ ಗರ್ಭಗೃಹದಲ್ಲಿ ಭೈರವ ವಿಗ್ರಹ, ಉತ್ತರದ ಗರ್ಭಗೃಹದಲ್ಲಿ ಸುಖಾಸನದಲ್ಲಿ ಕುಳಿತ ಅಷ್ಟಭುಜದ ಸುಂದರವಾದ ಕಾಳಿಯ ವಿಗ್ರಹ ಹೀಗೆ ನಾಲ್ಕು ಮೂರ್ತಿಗಳಿವೆ. ಭೈರವ ವಿಗ್ರಹದ ಪೀಠದ ಮೇಲೆ ಗರುಡ ವಿಗ್ರಹವನ್ನು ಕೆತ್ತಿರುವುದರಿಂದ ಮೊದಲು ಇಲ್ಲಿ ವಿಷ್ಣು ವಿಗ್ರಹವಿತ್ತೆಂದು ಊಹಿಸಬಹುದಾಗಿದೆ. ಕಾಳಿಯ ವಿಗ್ರಹ ರುದ್ರಭೀಕರವಾದ್ದು. ಈ ಗುಡಿಯ ಅಂತರಾಳ ಭಾಗದಲ್ಲಿ ಆಚೀಚೆ ನಿಂತಿರುವ ಬೆತ್ತಲೆ ಬೇತಾಳ ವಿಗ್ರಹಗಳು ಬಲು ಅಪೂರ್ವವಾದವು. ಸುಮಾರು 6 ಅಡಿ ಎತ್ತರವಿರುವ, ಕೇವಲ ಅಸ್ಥಿಪಂಜರದ ಆಕಾರದಲ್ಲಿರುವ ಈ ವಿಗ್ರಹಗಳಲ್ಲಿ ಒಂದರ ಕೈಗಳು ಮುರಿದಿವೆ.

ಕಾಳಿ ಗುಡಿಗೆ ಹೊಂದಿಕೊಂಡ ನವರಂಗದಲ್ಲಿ ಪೂರ್ವ ಹಾಗೂ ಪಶ್ಚಿಮಾಭಿಮುಖವಾಗಿ ಎರಡು ದ್ವಾರಗಳಿವೆ. ಇವುಗಳಲ್ಲಿ ಪಶ್ಚಿಮದ್ವಾರ ಸುಂದರವಾದ ಕೆತ್ತನೆ ಕೆಲಸಗಳಿಂದ ಕೂಡಿದೆ. ಇದರ ಬಾಗಿಲು ಪಟ್ಟಿಕೆಗಳಲ್ಲಿ ವೈಷ್ಣವ ದ್ವಾರಪಾಲಕರ ವಿಗ್ರಹಗಳನ್ನೂ ಕೆತ್ತಲಾಗಿದೆ. ದೇವಾಲಯದ ಹೊರ ಗೋಡೆಯ ಮೇಲೆಲ್ಲ ಸಣ್ಣ ಗೋಪುರಗಳನ್ನು ಹೊತ್ತುಕೊಂಡ ಸ್ತಂಭಿಕೆಗಳನ್ನೂ ದೇವಕೋಷ್ಠಗಳನ್ನೂ ಕೆತ್ತಲಾಗಿದೆ. ಇವುಗಳಲ್ಲಿ ಯಾವುದೇ ವಿಗ್ರಹವಿಲ್ಲ. ಕಾಳಿಕಾದೇವಾಲಯದ ಹಿಂಗೋಡೆಯ ಮೇಲೆ ಮಾತ್ರ ಕಾಳಿಯ ಉಬ್ಬುಗೆತ್ತನೆ ಶಿಲ್ಪವುಂಟು.

ದೇವಾಲಯದ ಭಿತ್ತಿಭಾಗದ ಮೇಲೆ ಕಪೋತ ಮತ್ತು ಅದರ ಮೇಲೆ ನಾಲ್ಕು ಶಿಖರಗಳು ಶೋಭಿಸುತ್ತವೆ. ಇವುಗಳಲ್ಲಿ ಲಕ್ಷ್ಮೀ ಗುಡಿಯ ಶಿಖರ ಚಾಳುಕ್ಯ ಶೈಲಿಯಲ್ಲೂ ಉಳಿದವು ಕದಂಬನಾಗರ ಶೈಲಿಯಲ್ಲೂ ಇವೆ. ಸುಖನಾಸಿ ಭಾಗದಲ್ಲಿ ಹೊಯ್ಸಳ ಲಾಂಛನ ಶಿಲ್ಪಗಳಿವೆ.

ಕಾಳಿ ಗುಡಿಯ ಪಕ್ಕದಲ್ಲೆ ಭೈರವನ ಪ್ರತ್ಯೇಕವಾದ ಗುಡಿಯಿದೆ. ಅದರಲ್ಲಿ ಗರ್ಭಗೃಹ ಹಾಗೂ ತೆರೆದ ಅಂತರಾಳಗಳುಂಟು. ಗರ್ಭಗುಡಿಯಲ್ಲಿರುವ ಮೂಲ ವಿಗ್ರಹ ಈಗ ಇಲ್ಲ. ಅಲ್ಲಿ ಚಿಕ್ಕದಾದ ಬೇರೊಂದು ವಿಗ್ರಹವನ್ನಿಡಲಾಗಿದೆ. ಇದರ ಬಾಗಿಲು ಪಟ್ಟಿಕೆಗಳ ಮೇಲೆ ಕೆಲವು ಶಿಲ್ಪಗಳನ್ನು ಕೆತ್ತಲಾಗಿದೆ. ಇವುಗಳ ಪೈಕಿ ದಕ್ಷಿಣಾಮೂರ್ತಿ ಹಾಗೂ ಮೋಹಿನಿಯ ವಿಗ್ರಹಗಳೂ ಸತ್ತುಬಿದ್ದಿರುವವನೊಬ್ಬನ ತಲೆಯನ್ನು ತುಳಿಯುತ್ತ ನಿಂತ ಇನ್ನೊಬ್ಬ ತನ್ನ ತಲೆಯನ್ನೇ ಕತ್ತಿಯಿಂದ ಕತ್ತರಿಸಿ ಕೊಳ್ಳುತ್ತಿರುವಂತೆ ಕೆತ್ತಿರುವ ಶಿಲ್ಪವೂ ಗಮನಾರ್ಹವಾದವು.

ದೇವಾಲಯದ ಪ್ರಾಕಾರಕ್ಕೆ ಹೊಂದಿಕೊಂಡಂತೆ ನಾಲ್ಕು ಮೂಲೆಗಳಲ್ಲಿ ನಾಲ್ಕು ಪುಟ್ಟ ಗುಡಿಗಳು ಉತ್ತರ ಹಾಗೂ ದಕ್ಷಿಣಾಭಿಮುಖವಾಗಿದೆ. ಇವುಗಳ ದ್ವಾರದ ಲಲಾಟ ಬಿಂಬದ ಮೇಲೆ ಲಕ್ಷ್ಮೀ ವಿಗ್ರಹವನ್ನು ಕೆತ್ತಲಾಗಿದ್ದರೂ ಮೂಲೆಗುಡಿಯಲ್ಲಿ ಯಾವ ಮೂರ್ತಿಗಳಿದ್ದುವೆಂಬುದನ್ನು ಹೇಳಲಾಗುವುದಿಲ್ಲ. ಈ ಗುಡಿಗಳ ಶಿಖರಗಳೂ ಕದಂಬ ನಾಗರ ಶೈಲಿಯವು. ಒಟ್ಟು ಒಂಬತ್ತು ಶಿಖರಗಳಿಂದ ಕೂಡಿದ ಈ ದೇವಾಲಯ ಹೊಯ್ಸಳ ವಾಸ್ತುಶಿಲ್ಪದಲ್ಲೇ ಅಪರೂಪವಾದ್ದು.

ಶಾಸನಗಳು[ಬದಲಾಯಿಸಿ]

ದೊಡ್ಡ ಗದ್ದವಳ್ಳಿಯಲ್ಲಿ ಇದುವರೆಗೂ ಸುಮಾರು ಹದಿನಾರು ಶಾಸನಗಳು ದೊರಕಿವೆ. ದೇವಾಲಯವನ್ನು ನಿರ್ಮಿಸಿದವನು ವಿಶ್ವಕರ್ಮ ಸುಭಾಷಿತನೆಂದು ಖ್ಯಾತನಾದ ಮಲ್ಲೋಜಮಾಣಿಯೋಜ ಎಂಬುದಾಗಿ ಆ ಶಾಸನಗಳ ಪೈಕಿ ಒಂದರಲ್ಲಿ (ಹಾಸನ 149) ಹೇಳಲಾಗಿದೆ; ದೇವಾಲಯದ ಬೇರೆ ಬೇರೆ ಅಂಗಭಾಗಗಳನ್ನು ತಾಂತ್ರಿಕ ಪರಿಭಾಷೆಯಲ್ಲಿ ವರ್ಣಿಸಿದೆ. ಕೊನೆಯಲ್ಲಿ ದೇವಸ್ಥಾನವನ್ನು ಗೃಹರಾಜ ಎಂಬುದಾಗಿ ಹೆಸರಿಸಲಾಗಿದೆ. ಲಕ್ಷ್ಮಿ ದೇವಾಲಯದ ಪೂರ್ವಭಾಗದಲ್ಲಿ ಪುಷ್ಕರಿಣಿಯೊಂದು ಉಂಟು. ಅದರ ಪಾವಟಿಗೆಗಳ ಬದಿಯಲ್ಲಿ ಭಗ್ನಮೂರ್ತಿಗಳೂ ಆತ್ಮಾರ್ಪಣಶಿಲೆಗಳೂ ಬಿದ್ದಿವೆ. ಕೇಂದ್ರ ಪುರಾತತ್ವ ಸರ್ವೇಕ್ಷಣ ಇಲಾಖೆಯವರು ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿದ್ದಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: