ತ್ರಿವೇಣಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ತ್ರಿವೇಣಿ

ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದ ಶ್ರೀಮತಿ ಅನಸೂಯ ಶಂಕರ್ ರವರು. ಇವರು, ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಮರೆಯಲಾಗದ ಕಾಣಿಕೆ ನೀಡಿದ್ದಾರೆ.

ಪರಿಚಯ[ಬದಲಾಯಿಸಿ]

 • ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದ ಶ್ರೀಮತಿ ಅನಸೂಯ ಶಂಕರ್ ರವರು ಸೆಪ್ಟಂಬರ್ ೧, ೧೯೨೮ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ.ಎಮ್.ಕೃಷ್ಣಸ್ವಾಮಿ, ತಾಯಿ ತಂಗಮ್ಮ. ಇವರ ಹೈಸ್ಕೂಲ್‍ವರೆಗಿನ ಶಿಕ್ಷಣ ಮಂಡ್ಯದಲ್ಲಿ ಆಯಿತು. ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. ೧೯೪೭ರಲ್ಲಿ ಮಹಾರಾಜಾ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಸಿದ್ದೇಗೌಡ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು.
 • ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ಇವರು, ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಮರೆಯಲಾಗದ ಕಾಣಿಕೆ ನೀಡಿದ್ದಾರೆ. ತ್ರಿವೇಣಿಯವರು ತಮ್ಮ ಮೂವತ್ತೈದನೆಯ ವಯಸ್ಸಿನಲ್ಲಿಯೇ ಜುಲೈ ೨೯, ೧೯೬೩ರಂದು ನಿಧನರಾಗಿದ್ದು ಕನ್ನಡ ಕಾದಂಬರಿಲೋಕಕ್ಕೆ ಬಹಳಷ್ಟು ನಷ್ಟವನ್ನುಂಟುಮಾಡಿದೆ ಎಂದು ವಿಮರ್ಶಕರ ಅಭಿಪ್ರಾಯ.ಮನಃಶಾಸ್ತ್ರದ ಪದವೀಧರೆಯಾದ ತ್ರಿವೇಣಿಯವರ ಅನೇಕ ಕೃತಿಗಳು ಮನಃಶಾಸ್ತ್ರಕ್ಕೆ ಸಂಬಂಧಪಟ್ಟವು.
 • ಮನಃಶಾಸ್ತ್ರದ ಅಧ್ಯಯನಕ್ಕೆ ಸಂಬಂಧಪಟ್ಟ ಸನ್ನಿವೇಶಗಳು ಹಾಗೂ ಉದಾಹರಣೆಗಳು ಅವರ ಅನೇಕ ಸಣ್ಣ ಕಥೆಗಳು ಹಾಗೂ ಕಾದಂಬರಿಗಳಲ್ಲಿ ಕಂಡುಬರುತ್ತವೆ. ಇವರ ಸಣ್ಣ ಕತೆಗಳ ಸಂಕಲನವಾದ "ಸಮಸ್ಯೆಯ ಮಗು"ವಿಗೆ ೧೯೬೨ರಲ್ಲಿ "ದೇವರಾಜ್ ಪ್ರಶಸ್ತಿ"ಮತ್ತು ೧೯೬೦ರಲ್ಲಿ "ಅವಳ ಮನೆ" ಕಾದಂಬರಿಗೆ ರಾಜ್ಯ ಪ್ರಶಸ್ತಿ ದೊರಕಿದವು.

"ಅಪಸ್ವರ"ಮತ್ತು "ಅಪಜಯ"ಕಾದಂಬರಿಗಳನ್ನು ಮತ್ತು "ತ್ರಿವೇಣಿ ಸಪ್ತಕ್"ಎಂಬ ಹೆಸರಿನಲ್ಲಿ ಏಳು ಸಣ್ಣ ಕತೆಗಳನ್ನು ಹಿಂದಿಗೆ ಎಸ್.ಎಮ್.ರಾಮಸ್ವಾಮಿ ಅವರು ಅನುವಾದ ಮಾಡಿದ್ದಾರೆ.ಮೀರಾ ನರ್ವೆಕರ್ ಎನ್ನುವವರು "ಶರಪಂಜರ"ವನ್ನು "The Mad Woman" ಎಂಬ ಹೆಸರಿನಲ್ಲಿ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ."ಬೆಕ್ಕಿನ ಕಣ್ಣು " ಕಾದಂಬರಿಯನ್ನು ಶರ್ವಾಣಿಯವರು ತೆಲುಗಿಗೆ ಅನುವಾದಿಸಿದ್ದಾರೆ.

ಕೃತಿಗಳು[ಬದಲಾಯಿಸಿ]

ತ್ರಿವೇಣಿಯವರ ಕೆಲವು ಕೃತಿಗಳು:

ಕಾದಂಬರಿಗಳು[ಬದಲಾಯಿಸಿ]

 1. ಹಣ್ಣೆಲೆ ಚಿಗುರಿದಾಗ
 2. ಬೆಳ್ಳಿಮೋಡ
 3. ಶರಪಂಜರ
 4. ಮುಕ್ತಿ
 5. ಹೂವು ಹಣ್ಣು
 6. ಕಾಶಿಯಾತ್ರೆ
 7. ದೂರದ ಬೆಟ್ಟ
 8. ಬೆಕ್ಕಿನ ಕಣ್ಣು
 9. ಬಾನು ಬೆಳಗಿತು
 10. ಹೃದಯಗೀತೆ
 11. ಕೀಲುಗೊಂಬೆ
 12. ಅಪಸ್ವರ
 13. ಅಪಜಯ
 14. ತಾವರೆ ಕೊಳ
 15. ಸೋತು ಗೆದ್ದವಳು
 16. ಕಂಕಣ
 17. ಮುಚ್ಚಿದ ಬಾಗಿಲು
 18. ಮೊದಲ ಹೆಜ್ಜೆ
 19. ಅವಳ ಮನೆ
 20. ವಸಂತಗಾನ
 21. ತೀರ್ಥಯಾತ್ರೆ
 22. ಅವಳ ಮಗಳು(ಈ ಕಾದಂಬರಿಯು ಅರ್ಧವಾಗಿದ್ದಾಗ ತ್ರಿವೇಣಿಯವರು ನಿಧನರಾದರು. ಶ್ರೀಮತಿ ಎಮ್.ಸಿ.ಪದ್ಮಾ ಇದನ್ನು ಪೂರ್ಣಗೊಳಿಸಿದ್ದಾರೆ.)

ಕಥಾಸಂಕಲನಗಳು[ಬದಲಾಯಿಸಿ]

 • ಸಮಸ್ಯೆಯ ಮಗು
 • ಎರಡು ಮನಸ್ಸು
 • ಹೆಂಡತಿಯ ಹೆಸರು

ತ್ರಿವೇಣಿಯವರ ಅನುವಾದಗೊಂಡ ಕೃತಿಗಳು[ಬದಲಾಯಿಸಿ]

ಅಪಸ್ವರ, ಅಪಜಯ ಹಾಗು ಏಳು ಸಣ್ಣ ಕತೆಗಳು ಹಿಂದಿ ಭಾಷೆಗೆ ತ್ರಿವೇಣಿ ಸಪ್ತಕ್ ಎಂದು ಅನುವಾದವಾಗಿವೆ. ಎಸ್.ಎಮ್. ರಾಮಸ್ವಾಮಿಯವರು ಅನುವಾದಿಸಿದ್ದಾರೆ. ಮೀರಾ ನಾರ್ವೇಕರ ಅವರುಶರಪಂಜರ ಕಾದಂಬರಿಯನ್ನು ಇಂಗ್ಲಿಷ್ ಭಾಷೆಗೆ ಹಾಗು ಶರ್ವಾಣಿಯವರು ಬೆಕ್ಕಿನ ಕಣ್ಣು ಕಾದಂಬರಿಯನ್ನು ತೆಲುಗು ಭಾಷೆಗೆ ಅನುವಾದಿಸಿದ್ದಾರೆ.

ಚಲನಚಿತ್ರೀಕರಣ[ಬದಲಾಯಿಸಿ]

ತ್ರಿವೇಣಿಯವರ ೫ ಕಾದಂಬರಿಗಳು ಚಲನಚಿತ್ರಗಳಾಗಿವೆ:

 1. ಹಣ್ಣೆಲೆ ಚಿಗುರಿದಾಗ(೧೯೬೮)
 2. ಬೆಳ್ಳಿಮೋಡ (೧೯೭೦)
 3. ಶರಪಂಜರ (೧೯೭೧)
 4. ಮುಕ್ತಿ
 5. ಹೂವು ಹಣ್ಣು(೧೯೯೩)

"ಬೆಕ್ಕಿನ ಕಣ್ಣು" ಕಾದಂಬರಿಯನ್ನು ಚಲಚ್ಚಿತ್ರವನ್ನಾಗಿ ನಿರ್ದೇಶಿಸಲು ಶ್ರೀ ಪುಟ್ಟಣ್ಣ ಕಣಗಾಲರು ಬಯಸಿದ್ದರು. ಆದರೆ ಕಾರಣಾಂತರದಿಂದ ಅದನ್ನು ಕನ್ನಡದಲ್ಲಿ ಮಾಡದೆ ಮಲಯಾಳಮ್‌ನಲ್ಲಿ "ಪೂಚಕಣ್ಣಿ" ಎಂಬ ಹೆಸರಿನಲ್ಲಿ ನಿರ್ದೇಶಿಸಿದರು. [೧] ಪ್ರೇಮ್ ನಜೀರ್, ಅಡೂರ್ ಭಾಸಿ, ತಿಕ್ಕುರಿಸಿ ಸುಕುಮಾರನ್ ನಾಯರ್, ಮೊದಲಾದವರು ಅಭಿನಯಿಸಿದ ಈ ಚಿತ್ರ ೧೯೬೬ರಲ್ಲಿ ಬಿಡುಗಡೆಯಾಗಿ ಬಹಳ ಜನಪ್ರಿಯತೆಯನ್ನು ಗಳಿಸಿತ್ತು.

ಕಿರುತೆರೆ ಧಾರವಾಹಿಗಳಾಗಿ ತ್ರಿವೇಣಿ ಕಾದಂಬರಿಗಳು[ಬದಲಾಯಿಸಿ]

ತ್ರಿವೇಣಿ ಅವರ ಕಾದಂಬರಿ ಮತ್ತು ಕತೆಗಳನ್ನು ಆಧರಿಸಿ ನಟ ಶ್ರೀನಿವಾಸ ಮೂರ್ತಿ ಅವರು ಈ ಟೀವಿಗಾಗಿ ಧಾರಾವಾಹಿ ಸರಣಿ ಮಾಡಿದ್ದಾರೆ. ತ್ರಿವೇಣಿ ಅವರ 'ಅವಳ ಮನೆ', 'ಅಪಸ್ವರ', 'ಅಪಜಯ' ಮುಂತಾದ ಕಾದಂಬರಿಗಳನ್ನು ದೂರದರ್ಶನ ಮಾಧ್ಯಮಕ್ಕೆ ಅಳವಡಿಸಲಿದ್ದಾರೆ. ಈ ಧಾರಾವಾಹಿ ಜನವರಿ ೨೯ ೨೦೦೭ ರಿಂದ ಪ್ರಸಾರವಾಗಲಿವೆ. ಧಾರಾವಾಹಿಗಳಾಗುತ್ತಿರುವ ಈ ಕಾದಂಬರಿಗಳ ಹಕ್ಕುಗಳನ್ನು ತ್ರಿವೇಣಿಯವರ ಮಗಳು ಮೀರಾಕುಮಾರ್ ಅವರಿಂದ ತೆಗೆದುಕೊಳ್ಳಲಾಗಿದೆ.

ಪುರಸ್ಕಾರ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

"http://kn.wikipedia.org/w/index.php?title=ತ್ರಿವೇಣಿ&oldid=529546" ಇಂದ ಪಡೆಯಲ್ಪಟ್ಟಿದೆ