ತವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


50 ಇಂಡಿಯಮ್ತವರ ( ಟಿನ್ )ಆಂಟಿಮೊನಿ
ಜರ್ಮೇನಿಯಮ್

Sn

ಸೀಸ
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ತವರ ( ಟಿನ್ ), Sn, 50
ರಾಸಾಯನಿಕ ಸರಣಿpoor metal
ಗುಂಪು, ಆವರ್ತ, ಖಂಡ 14, 5, p
ಸ್ವರೂಪಹೊಳೆಯುವ ಬೆಳ್ಳಿಯ ಬಣ್ಣ
ಅಣುವಿನ ತೂಕ 118.710 g·mol−1
ಋಣವಿದ್ಯುತ್ಕಣ ಜೋಡಣೆ [ಕ್ರಿಪ್ಟಾನ್] 4d10 5s² 5p²
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 18,4
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)(ಬಿಳಿ) 7.03 g·cm−3
ಸಾಂದ್ರತೆ (ಕೋ.ತಾ. ಹತ್ತಿರ)(ಬೂದು) 5.796 g·cm−3
ದ್ರವಸಾಂದ್ರತೆ at ಕ.ಬಿ.6.99 g·cm−3
ಕರಗುವ ತಾಪಮಾನ505.08 K
(231.93 °C, 449.47 °ಎಫ್)
ಕುದಿಯುವ ತಾಪಮಾನ2875 K
(2602 °C, 4716 °F)
ಸಮ್ಮಿಲನದ ಉಷ್ಣಾಂಶ(ಬಿಳಿ) 7.03 kJ·mol−1
ಭಾಷ್ಪೀಕರಣ ಉಷ್ಣಾಂಶ(ಬಿಳಿ) 296.1 kJ·mol−1
ಉಷ್ಣ ಸಾಮರ್ಥ್ಯ(25 °C) (ಬಿಳಿ) 27.112 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 1497 1657 1855 2107 2438 2893
ಅಣುವಿನ ಗುಣಗಳು
ಸ್ಪಟಿಕ ಸ್ವರೂಪಚತುರ್ಭುಜಾಕೃತಿಯ ಹರಳು
ಆಕ್ಸಿಡೀಕರಣ ಸ್ಥಿತಿಗಳು4
(ಆಂಫೊಟೆರಿಕ್ ಆಕ್ಸೈಡ್)
ವಿದ್ಯುದೃಣತ್ವ1.96 (Pauling scale)
ಅಣುವಿನ ತ್ರಿಜ್ಯ217 pm
ಅಣುವಿನ ತ್ರಿಜ್ಯ (ಲೆಖ್ಕಿತ)145 pm
ತ್ರಿಜ್ಯ ಸಹಾಂಕ141 pm
ವಾನ್ ಡೆರ್ ವಾಲ್ಸ್ ತ್ರಿಜ್ಯ217 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆಮಾಹಿತಿ ಇಲ್ಲ
ವಿದ್ಯುತ್ ರೋಧಶೀಲತೆ(0 °C) 115Ω·m
ಉಷ್ಣ ವಾಹಕತೆ(300 K) 66.8 W·m−1·K−1
ಉಷ್ಣ ವ್ಯಾಕೋಚನ(25 °C) 22.0 µm·m−1·K−1
ಶಬ್ದದ ವೇಗ (ತೆಳು ಸರಳು)(r.t.) 2730 m·s−1
ಯಂಗ್ ಮಾಪಾಂಕ50 GPa
ವಿರೋಧಬಲ ಮಾಪನಾಂಕ18 GPa
ಸಗಟು ಮಾಪನಾಂಕ58 GPa
ವಿಷ ನಿಷ್ಪತ್ತಿ 0.36
ಮೋಸ್ ಗಡಸುತನ1.5
ಬ್ರಿನೆಲ್ ಗಡಸುತನ51 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-50-8
ಉಲ್ಲೇಖನೆಗಳು

ತವರ (ರಾಸಾಯನಿಕ ಹೆಸರು: "ಸ್ಟಾನಮ್"-Tin, ಚಿಹ್ನೆ: Sn) ಒಂದು ಲೋಹ ಮೂಲಧಾತು. ಇದು ಸುಲಭವಾಗಿ ಗಾಳಿಯೊಂದಿಗೆ ಪ್ರಕ್ರಿಯೆಗೆ ಒಳಗಾಗುವುದಿಲ್ಲವಾದುದರಿಂದ ಇದನ್ನು ಇತರ ಲೋಹಗಳ ಮೇಲೆ ರಕ್ಷಣೆಗೆ ಲೇಪನ ಹಾಕಲಾಗುತ್ತದೆ.[೧] ಅನೇಕ ಮಿಶ್ರಲೋಹಗಳಲ್ಲೂ ಉಪಯೋಗಿಸಲಾಗುತ್ತದೆ. ತಾಮ್ರದೊಂದಿಗೆ ಸೇರಿಸಿದಾಗ ಮಿಶ್ರಲೋಹವಾಗಿ ಕಂಚು ದೊರೆಯುತ್ತದೆ. ೫೦೦೦ ವರ್ಷಕ್ಕಿಂತ ಹಳೆಯ ಕಾಲದಿಂದ ಮಾನವ ಕಂಚನ್ನು ಉಪಯೋಗಿಸುತ್ತಿದ್ದಾನೆ.[೨] ಗಾಜಿನ ತಯಾರಿಕೆ, ವಿದ್ಯುನ್ಮಾನ ಕ್ಷೇತ್ರದ ಸಾಲ್ಡರ್ನಲ್ಲಿ, ಇತ್ಯಾದಿ ಇತರ ಉಪಯೋಗಗಳೂ ಇವೆ.

ತವರ ಆವರ್ತಕೋಷ್ಟಕದ ಪ್ರಧಾನ ಗುಂಪು ೪ರ ಲೋಹ; ಪರಮಾಣು ಸಂಖ್ಯೆ ೫೦; ಪರಮಾಣು ತೂಕ ೧೧೮, ೬೯; ಪ್ರತೀಕ Sn (ಲ್ಯಾಟನ್ನಿನ ಸ್ಟ್ಯಾನ್ನಮ್ ಪದದಿಂದ); ನೈಸರ್ಗಿಕವಾಗಿ ಲಭಿಸುವ ಸಮಸ್ಥಾನಿಗಳು ಆಧಿಕ್ಯದ ರೀತಿ ಅಳವಡಿಸಿದಾಗ ೧೨೦, ೧೧೮, ೧೧೬, ೧೧೯, ೧೧೭,  ೧೨೪, ೧೧೨, ೧೧೪, ೧೧೫, ಎಲೆಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10 5s2 5p2. ಅಯಾನಿಕ್ ತ್ರಿಜ್ಯ Sn+2 ೧.೦೨ Å, Sn+4 ೦.೬೫ Å. ಸಹವೇಲೆಂಟ್ ತ್ರಿಜ್ಯ ೧.೪೦೫ Å. ಲೋಹಾತ್ಮಕ ತ್ರಿಜ್ಯ ೧.೫೧೧ Å ಪ್ರಥಮ ಅಯಾನೀಕರಣ ವಿಭವ ೭.೩೩೨ eV; ದ್ವಿತೀಯ ೧೪.೫೨ eV; ತೃತೀಯ ೩೦.೪೯ eV; ಚತುರ್ಥ ೪೦.೫೭ eV. ಉತ್ಕರ್ಷಣ ವಿಭವ Sn->Sn +2 +2e-, ೦.೪೦೬ V; Sn +2 → Sn +4  + 2e-,

-೦.೧೪ V: HSnO2 - + 30H -+ H2O → Sn(OH)6-2 + 2e-,  ೦.೯೬ V; Sn +3OH → HSnO2-+ H2O + 2e -, ೦೭೯ V, ದ್ರವನ ಬಿಂದು ೨೩೧.೮೯ C, ಕುದಿಬಿಂದು ೨೨೭೦ C.

ಇತಿಹಾಸ[ಬದಲಾಯಿಸಿ]

ಕಂಚನ್ನು ಕ್ರಿ. ಪೂ. ೩೦ ಶತಮಾನಗಳಷ್ಟು ಹಿಂದೆಯೇ ತಯಾರಿಸಿದ್ದರೂ ಆ ಕಾಲಕ್ಕೇ ತವರ ಪರಿಶುದ್ಧ ರೂಪದಲ್ಲಿ ಉದ್ಧೃತಿಗೊಂಡಿತ್ತೇ ಎಂಬುದು ತಿಳಿದಿಲ್ಲ. ಕ್ರಿ. ಪೂ. ೧೫೮೦ - ೧೩೫೦ರ ಕಾಲಾವಧಿಯಲ್ಲಿ ಮೃತಪಟ್ಟ ಈಜಿಪ್ಷಿಯನ್ನರ ಸಮಾಧಿಯಲ್ಲಿ ದೊರೆತ ಉಂಗುರ ಹಾಗೂ ಜಲಕಲಶಗಳು (ಯಾತ್ರಾಪಾತ್ರೆ) ಪರಿಶುದ್ಧ ತವರದಿಂದ ಮಾಡಲ್ಪಟ್ಟ ವಸ್ತುಗಳಲ್ಲಿಯೇ ಮೊದಲಿನವೆಂದು ಭಾವಿಸಲಾಗಿದೆ. ಐರೋಪ್ಯರು ದಕ್ಷಿಣ ಅಮೆರಿಕಕ್ಕೆ ಬರುವ ಮುನ್ನವೇ ಅಲ್ಲಿಯ ಆದಿವಾಸಿಗಳಿಗೆ ತವರ ಗೊತ್ತಿತ್ತೆಂಬುದಕ್ಕೆ ಪೇರೂವಿನ ಮಚೂ-ಪಿಚ್ಚೂದಲ್ಲಿ ಶೋಧಿಸಿರುವ ಶುದ್ಧ ತವರವೇ ಸಾಕ್ಷಿ. ಕ್ರಿ.ಶ. ೪ನೆಯ ಶತಮಾನದ ವೇಳೆಗೆ ಸ್ಟ್ಯಾನಮ್ ಎಂಬ ಪದವನ್ನು ಮಿಶ್ರಲೋಹದ ಬದಲು ತವರಕ್ಕೆ ಅನ್ವಯಿಸಿದ್ದು ಕಂಡುಬರುತ್ತದೆ. ಕ್ರಿ.ಶ ೧೨ನೆಯ ಶತಮಾನದ ಕೃತಿ ವಾಗ್ಭಟನ ರಸರತ್ನ ಸಮುಚ್ಚಯದಲ್ಲಿ ತವರದ ಸ್ಪಷ್ಟ ಉಲ್ಲೇಖ ಉಂಟು. ಅಲ್ಲಿ ಇದನ್ನು ವಂಗ ಎಂದು ಕರೆದಿದೆ.

ಪ್ರಕೃತಿಯಲ್ಲಿ ತವರ[ಬದಲಾಯಿಸಿ]

ಪ್ರಕೃತಿಯಲ್ಲಿ ತವರ ಅಷ್ಟೇನೂ ಹೇರಳವಾಗಿ ದೊರೆಯುವುದಿಲ್ಲ. ಆಧಿಕ್ಯದ ರೀತ್ಯ ಧಾತುಗಳ ಪೈಕಿ ಇದಕ್ಕೆ ೨೩ನೆಯ ಸ್ಥಾನವಿದೆ. ಪ್ರಪಂಚದ ವಾರ್ಷಿಕ ಉತ್ಪನ್ನ ಕೂಡ ಇತರ ಸುಪರಿಚಿತ ಲೋಹಗಳ ಉತ್ಪನ್ನಗಳಿಗೆ ಹೋಲಿಸಿದರೆ ಬಲು ಕಡಿಮೆ. ಈ ದೃಷ್ಟಿಯಿಂದ ತವರವನ್ನು ವಿರಳಲೋಹವೆಂದೇ ಅನ್ನಬಹುದು. ಆದರೆ ಆಧುನಿಕ ಕೈಗಾರಿಕಾರಂಗದಲ್ಲಿ ವಿವಿಧೋದ್ದೇಶಗಳಿಗಾಗಿ ತವರದ ಬಳಕೆ ಸರ್ವೇಸಾಮಾನ್ಯವಾಗಿದ್ದು ಇಂದು ಇದೊಂದು ಅತ್ಯುಪಯುಕ್ತ ಮತ್ತು ಸುಪರಿಚಿತ ಲೋಹವಾಗಿದೆ. ಬಳಕೆದಾರರಿಗಿಂತಲೂ ಉತ್ಪಾದಕರಿಗೆ ಇದು ಹೆಚ್ಚು ಪರಿಚಿತವಾಗಿದೆ.

ಪ್ರಕೃತಿಯಲ್ಲಿ ತವರ ಶುದ್ಧಧಾತುವಿನ ರೂಪದಲ್ಲಿ ದೊರೆಯುವುದಿಲ್ಲ. ಇದರ ಮುಖ್ಯ ಅದುರೆಂದರೆ ಕ್ಯಾಸಿಟರೈಟ್. ರಾಸಾಯನಿಕವಾಗಿ ಇದು ತವರದ ಆಕ್ಸೈಡ್ SnO2. ಈ ಅದುರು ಪ್ರಕೃತಿಯಲ್ಲಿ ಎರಡು ರೀತಿಯಲ್ಲಿ ದೊರೆಯುತ್ತದೆ. ಪ್ರಾಥಮಿಕ ಅದುರು ಭೂಗರ್ಭದಲ್ಲಿ ಗಡುಸಾದ ಬೆಣಚುಕಲ್ಲಿನೊಳಗೆ ಹಾಸು ಹೊಕ್ಕಾಗಿ ಬೆಸೆದುಕೊಂಡಿರುವುದು, ಇದರ ಪ್ರಮಾಣ ಮತ್ತು ಪ್ರಾಮುಖ್ಯ ಅಷ್ಟೇನೂ ಹೆಚ್ಚಿನದಲ್ಲ. ಪ್ರಕೃತಿಯಲ್ಲಿ ೮೦% ಕ್ಕಿಂತ ಹೆಚ್ಚಿನ ತವರದ ನಿಕ್ಷೇಪಗಳು ಜೇಡಿಮಣ್ಣಿನೊಂದಿಗೆ ಮಿಶ್ರಿತವಾದವು. ಗಡುಸಾದ ಪ್ರಾಥಮಿಕ ಅದುರುಗಳು ಬಿಸಿಲು, ಗಾಳಿ, ಮಳೆಗಳಿಂದ ಜರ್ಝರಿತವಾಗಿ ಸ್ಥಳಾಂತರಹೊಂದಿ ಕ್ರಮೇಣ ನದೀ ಪಾತ್ರಗಳಲ್ಲಿ ಅಥವಾ ಮುಖಜ ಭೂಮಿಯಲ್ಲಿ ಹುಡಿಮಣ್ಣು ಮಿಶ್ರಿತ ಅದುರುಗಳಾಗಿ ರೂಪಾಂತರ ಹೊಂದುತ್ತವೆ. ಇವೇ ಈಗ ತವರದ ಪ್ರಮುಖ ನಿಕ್ಷೇಪಗಳು.[೩] ಇವುಗಳಲ್ಲಿ ತವರದ ಅಂಶ ಕೇವಲ ೦.೦೦೦೧೩೩% ಮಾತ್ರ. ಬೊಲಿವಿಯದಲ್ಲಿನ ತವರದ ನಿಕ್ಷೇಪಗಳಲ್ಲಿ ಗಣನೀಯ ಪ್ರಮಾಣದಲ್ಲಿ, (ಸುಮಾರು ೯%) ಅಮೂಲ್ಯ ಟಂಗ್‌ಸ್ಟನ್ ಲೋಹ ಉಂಟು. ತವರ ನಿಕ್ಷೇಪಗಳು ಇರುವ ಮತ್ತು ತವರದ ಉತ್ಪಾದನೆಯಲ್ಲಿ ತೊಡಗಿರುವ ಮುಖ್ಯ ದೇಶಗಳೆಂದರೆ ಇಂಗ್ಲೆಂಡ್, ಸ್ಪೇನ್, ಇಂಡೋನೇಶ್ಯ, ಮಲೇಶ್ಯ, ಥೈಲ್ಯಾಂಡ್, ಬೊಲಿವಿಯಾ, ಕಟಾಂಗ, ನೈಜಿರಿಯಾ ಮತ್ತು ಚೀನಾ. ೧೯೬೦ರಿಂದೀಚೆಗೆ ಥೈಲ್ಯಾಂಡ್ ಮತ್ತು ಇಂಡೊನೇಶ್ಯ ದೇಶಗಳಲ್ಲಿ ಸಮುದ್ರತೀರದ ನಿಕ್ಷೇಪಗಳ ಬಳಕೆಯಲ್ಲಿ ಆಸಕ್ತಿ ಹೆಚ್ಚಾಗುತ್ತಲಿದೆ.

ಲೋಹದ ಉತ್ಪಾದನೆ[ಬದಲಾಯಿಸಿ]

ಪ್ರಕೃತಿಮೂಲ ತವರದ ನಿಕ್ಷೇಪಗಳಿಂದ ಲೋಹವನ್ನು ಶುದ್ಧ ರೂಪದಲ್ಲಿ ಪ್ರತ್ಯೇಕಿಸುವ ಕಾರ್ಯದಲ್ಲಿ ಮೊದಲನೆಯ ಹಂತ ಅದುರುಗಳ ಸಾರೀಕರಣ ಮತ್ತು ಶುದ್ಧೀಕರಣ. ಈ ದಿಸೆಯಲ್ಲಿ ಅನುಸರಿಸುವ ಕಾರ್ಯ ವಿಧಾನಗಳು ನಿಕ್ಷೇಪದ ಲಕ್ಷಣಗಳ ಮೇಲೆ ನಿರ್ಧರಿತವಾಗುತ್ತವೆ. ಬೊಲಿವಿಯಾ ಮತ್ತು ಕಾರನ್‌ವಾಲ್ ಪ್ರದೇಶಗಳಲ್ಲಿ ದೊರೆಯುವ ಗಡಸುಕಲ್ಲಿನ ನಿಕ್ಷೇಪಗಳಾದರೆ ಅದುರನ್ನು ಮೊದಲು ಯಾಂತ್ರಿಕವಾಗಿ ಆಗಲಿ ರಾಸಾಯನಿಕ ಆಸ್ಫೋಟಕಗಳನ್ನು ಬಳಸಿ ಆಗಲಿ ಪುಡಿಮಾಡಬೇಕು. ಆಗ ಅದು ಮಣ್ಣುಮಿಶ್ರಿತ ಕ್ಯಾಸಿಟರೈಟ್ ಅದುರಿಗೆ ಸಮವಾಗುತ್ತದೆ. ಕ್ಯಾಸಿರೈಟಿನ ಸಾಂದ್ರತೆ ಮಣ್ಣಿಗಿಂತ ಹೆಚ್ಚಾಗಿದ್ದು ಸಾಂದ್ರತೆ ಆಧಾರಿತ ಕ್ರಮಗಳಿಂದ ಹಗುರವಾದ ಮಣ್ಣು ಮತ್ತಿತರ ಕಲ್ಮಷಗಳನ್ನು ಬೇರ್ಪಡಿಸುವುದು ಸಾಧ್ಯ. ಈ ಉದ್ದೇಶದಿಂದ ಕ್ಯಾಸಿಟರೈಟ್ ನಿಕ್ಷೇಪಗಳನ್ನು ಕೃತಕ ನೀರಿನ ಕೊಳವೊಂದರಲ್ಲಿ ಜಾಲಾಡುವುದರಿಂದಾಗಲಿ ಕೊಳವೆಗಳ ಮೂಲಕ ಸಂಮರ್ದಭರಿತ ನೀರನ್ನು ಹಾಯಿಸುವುದರಿಂದಾಗಲಿ ಗಣಿ ಪ್ರದೇಶದಲ್ಲಿಯೇ ಸಾರೀಕರಿಸುವುದೂ ಸಾಮಾನ್ಯವಾಗಿ ಬಳಕೆಯಲ್ಲಿರುವ ಒಂದು ವಿಧಾನ. ಭಾರವಾದ ತವರಾಂಶ ಪ್ರತ್ಯೇಕವಾಗಿ ಉಳಿದು ಮಣ್ಣೆಲ್ಲವೂ ನೀರಿನೊಡನೆ ಹರಿದು ಹೋಗುತ್ತದೆ. ಹೀಗೆ ಶುದ್ಧ ಕ್ಯಾಸಿಟರೈಟನ್ನು (೭೦%-೭೭% ತವರ) ಪಡೆಯುವುದು ಸಾಧ್ಯ. ನೀರಿನ ಬದಲು ನಿಯಂತ್ರಿತ ಸಾಂದ್ರತೆಯ ದ್ರಾವಣಗಳ ಮಾಧ್ಯಮದಲ್ಲಿ ಕ್ಯಾಸಿಟರೈಟ್ ಅದುರನ್ನು ಬೇರ್ಪಡಿಸುವುದು ಇನ್ನು ವಿಹಿತವಾದ ವಿಧಾನ. ಪ್ರಾಥಮಿಕ ಗಡಸುಗಲ್ಲಿನ ನಿಕ್ಷೇಪ ಮೂಲಗಳಿಂದ ಹೊರಬೀಳುವ ಸಾರೀಕೃತ ತವರಿನ ಅದುರಿನಲ್ಲಿ ತವರಾಂಶ ಕಡಿಮೆ - ಸುಮಾರು(೪೦%- ೬೦%). ಪರಿಣಾಮವಾಗಿ ತವರಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಅದನ್ನು ಇನ್ನೂ ಕೆಲವು ಕ್ರಮಗಳಿಗೆ ಒಳಪಡಿಸುವುದು ಅಪೇಕ್ಷಣೀಯ. ಉದಾಹರಣೆಗೆ ಅದುರನ್ನು ಕಾಸಿಹುರಿಯುವುದರಿಂದ ಬಲು ಮಟ್ಟಿನ ಗಂಧಕ ಮತ್ತು ಆರ್ಸೆನಿಕ್ ಕಲ್ಮಷಾಂಶಗಳು ಹೊರಬೀಳುತ್ತವೆ. ವಾಯುಸಂಪರ್ಕದಲ್ಲಿ ಹುರಿಯುವುದರಿಂದ ಅದರಲ್ಲಿನ ಆಕ್ಸಿಜನ್ನಿನಲ್ಲಿ ಗಂಧಕಾಂಶ ಉತ್ಕರ್ಷಣೆಗೊಂಡು ಅಶುದ್ಧತೆಗಳಾದ ಕಬ್ಬಿಣ, ತಾಮ್ರ, ಸತು ಮತ್ತು ಬಿಸ್ಮತ್ ಲೋಹಗಳೆಲ್ಲವೂ ಆಕ್ಸೈಡುಗಳಾಗಿ ಪರಿವರ್ತನೆ ಹೊಂದುತ್ತವೆ. ಇವನ್ನು ಹೈಡ್ರೊಕ್ಲೋರಿಕ್ ಅಥವಾ ಸಲ್ಫ್ಯೂರಿಕ್ ಆಮ್ಲಗಳಲ್ಲಿ ವಿಲೀನಗೊಳಿಸುವರು. ಮತ್ತೂ ಮುಂದುವರಿದು ಉತ್ಕರ್ಷಣ ಪ್ರೇರಕ ವಾತಾವರಣದಲ್ಲಿ ಅದುರು ಮತ್ತು ಉಪ್ಪಿನ ಮಿಶ್ರಣವನ್ನು ಹುರಿದರೆ ಬಿಸ್ಮತ್, ಸೀಸ ಮತ್ತು ಆರ್ಸೆನಿಕ್ ಮುಂತಾದವು ಕ್ಲೋರೈಡುಗಳಾಗಿ ಪರಿವರ್ತನೆ ಹೊಂದಿ ಉರಿಯ ಉಷ್ಣತೆಯ ಮಟ್ಟದಲ್ಲಿ ಹೊಗೆಯಂತೆ ಹೊರಬೀಳುತ್ತವೆ. ಹೀಗೆ ಹುರಿದ ಅದುರನ್ನು ನೀರಿನಲ್ಲಿ ತೊಳೆದರೆ ತವರ ತನ್ನ ಆಕ್ಸೈಡ್ ರೂಪದಲ್ಲಿ ಹಾಗೆಯೇ ನಿಂತು ಉಳಿದ ಕಲ್ಮಷ ಲೋಹಗಳ ಅನೇಕ ಕ್ಲೋರೈಡುಗಳು ನೀರಿನಲ್ಲಿ ಲೀನವಾಗುತ್ತವೆ. ಅಂತೂ ಗಂಧಕ ಮತ್ತು ಇತರ ಅನೇಕ ಲೋಹಾಂಶಗಳ ಬೇರ್ಪಡಿಕೆಯಾದಾಗ ಉಳಿಯುವ ಕ್ಯಾಸಿಟರೈಟನಲ್ಲಿ ತವರದ ಸಾರಾಂಶ ಮತ್ತೂ ಹೆಚ್ಚಾಗಿರುತ್ತದೆ.

ಬೊಲಿವಿಯಾ ದೇಶದ ತವರ ನಿಕ್ಷೇಪಗಳಲ್ಲಿ ಅಮೂಲ್ಯವಾದ ಟಂಗ್‌ಸ್ಟನ್ ಲೋಹ ಮಿಶ್ರಿತವಾಗಿರುತ್ತದೆ. ಟಂಗ್‌ಸ್ಟನ್ ಲೋಹಾಂಶವನ್ನು ಮೊದಲೇ ಬೇರ್ಪಡಿಸುವುದು ಹಲವಾರು ಕಾರಣಗಳಿಂದ ಅಪೇಕ್ಷಣೀಯವಾದುದು. ನಿಕ್ಷೇಪದ ಪುಡಿ ಅದುರನ್ನು ನೀರಿನಲ್ಲಿ ತೊಳೆಯುವಾಗ ಟಂಗ್‌ಸ್ಟನ್ ಲೋಹಾಂಶ ತನ್ನ ಹೆಚ್ಚಿನ ಸಾಂದ್ರತೆಯಿಂದಾಗಿ ಕ್ಯಾಸಿಟರೈಟಿನೊಡನೆಯೇ ಉಳಿಯುವುದು. ಈ ಹಂತದಲ್ಲಿ ಟಂಗ್‌ಸ್ಟನ್ ಲೋಹಾಂಶವನ್ನು ಬೇರ್ಪಡಿಸದೇ ಹೋದರೆ ಮುಂದೆ ಕ್ಯಾಸಿಟರೈಟನ್ನು ಕಾದ ಕುಲುಮೆಯಲ್ಲಿ ಅಪಕರ್ಷಣ ಕ್ರಿಯೆಗೆ ಒಳಪಡಿಸಿದಾಗ ಟಂಗ್‌ಸ್ಟನ್ ಲೋಹವನ್ನು ಪ್ರತ್ಯೇಕವಾಗಿ ಪಡೆಯುವುದು ಕೈಗಾರಿಕಾರ್ಥಿಕ ದೃಷ್ಟಿಯಿಂದಲೂ ಅಪೇಕ್ಷಣೀಯವಾದುದು. ಹೀಗಾಗಿ ಕ್ಯಾಸಿಟರೈಟನಿಂದ ಟಂಗ್‌ಸ್ಟನ್ ಅದುರನ್ನು ಬೇರ್ಪಡಿಸುವ ಎರಡು ಮುಖ್ಯಕ್ರಮಗಳು ಬಳಕೆಯಲ್ಲಿವೆ. ಮೊದಲನೆಯದು ಕಾಂತ ವಿಧಾನ, ಟಂಗ್‌ಸ್ಟನ್ ಕಾಂತೀಯವಾದದ್ದು, ಆದರೆ ತವರ ಕಾಂತೀಯವಲ್ಲ. ಇದರಿಂದಾಗಿ ಟಂಗ್‌ಸ್ಟನ್ ಮಿಶ್ರಿತ ಕ್ಯಾಸಿಟರೈಟ್ ಅದುರಿನ ಪುಡಿಯನ್ನು ವಿದ್ಯುತ್ಕಾಂತ ಚಕ್ರವೊಂದರ ಸಮೀಪಕ್ಕೆ ಪ್ರವಹಿಸಿದರೆ ಟಂಗ್‌ಸ್ಟನ್ ಲೋಹಾಂಶ ಆಕರ್ಷಣೆಗೆ ಒಳಗಾಗಿ ಕ್ಯಾಸಿಟರೈಟನಿಂದ ಬೇರ್ಪಟ್ಟು ಎರಡು ಅಂಶಗಳು ಬೇರೆ ಬೇರೆ ಗುಡ್ಡೆಗಳಾಗಿ ಬೀಳುತ್ತವೆ. ಟಂಗ್‌ಸ್ಟನ್ ಲೋಹಾಂಶವನ್ನು ತವರಾಂಶದಿಂದ ಪ್ರತ್ಯೇಕಿಸಲು ಅನುಸರಿಸುವ ಎರಡನೆಯ ವಿಧಾನ ರಾಸಾಯನಿಕವಾದದ್ದು. ಸಾರೀಕೃತ ಕ್ಯಾಸಿಟರೈಟ್ ಅದುರಿನ ಪುಡಿಯನ್ನು ಸೋಡಿಯಮ್ ಕಾರ್ಬೊನೇಟನೊಂದಿಗೆ ಬೆರೆಸಿ ೬೦೦ ಸೆ. ಮಟ್ಟದಲ್ಲಿ ಕಾಸಿದರೆ ಸೋಡಿಯಮ್ ಟಂಗ್‌ಸ್ಟೇಟ್ ಉತ್ಪತ್ತಿಯಾಗುತ್ತದೆ. ಇದು ನೀರಿನಲ್ಲಿ ಸುಲಭವಾಗಿ ವಿಲೀನವಾಗುವುದು. ಕ್ಯಾಸಿಟರೈಟ್ ಮಾತ್ರ ಹಾಗೆಯೇ ಉಳಿಯುತ್ತದೆ. ಸೋಡಿಯಮ್ ಕಾರ್ಬೊನೆಟಿನೊಂದಿಗೆ ಕಾಸಿದಾಗ ಜರಗುವ ರಾಸಾಯನಿಕ ಕ್ರಿಯೆಯನ್ನು ಈ ತೆರನಾಗಿ ನಿರೂಪಿಸಬಹುದು:

ಸೋಡದೊಡನೆ ಕಾಸಿದ ಅದುರನ್ನು ನೀರಿನಲ್ಲಿ ತೊಳೆಯುವುದರಿಂದ ಸೋಡಿಯಮ್ ಟಂಗ್‌ಸ್ಟೇಟ್ ದ್ರಾವಣವೂ ಘನ ಕ್ಯಾಸಿಟರೈಟ್ ಅದುರೂ ಬೇರೆ ಬೇರೆಯಾಗಿ ದೊರೆಯುತ್ತದೆ. ಹೀಗೆ ಪ್ರಥಮ ಹಂತದಲ್ಲಿ ಸಾರೀಕರಣಕ್ಕೆ ಒಳಗಾದ ತವರದ ಅದುರನ್ನು ಎರಡನೆಯ ಹಂತದಲ್ಲಿ ರಾಸಾಯನಿಕ ಅಪಕರ್ಷಣೆಗೆ ಒಳಪಡಿಸಿ ಲೋಹವನ್ನು ಪ್ರತ್ಯೇಕಿಸುವರು. ತವರದ ಅದುರು, ಕಲ್ಲಿದ್ದಲು, ಸುಣ್ಣಕಲ್ಲು ಮತ್ತು ಮರಳುಗಳ ಮಿಶ್ರಣವನ್ನು ಕುಲುಮೆಯೊಂದರೊಳಗೆ ಕಾಸುವರು. ತವರಲೋಹದ ದ್ರವರೂಪದಲ್ಲಿ ಕುಲುಮೆಯ ತಳದಲ್ಲಿ ಶೇಖರಿತವಾಗುವುದು, ಆಗಾಗ್ಗೆ ನಿಗದಿಯಾದ ತೂತವೊಂದರ ಮೂಲಕ ದ್ರವಲೋಹವನ್ನು ಈಚೆಗೆ ಹಾಯಿಸಿ ಎರಕ ಹುಯ್ಯುವರು. ಕುಲುಮೆಯೊಳಗೆ ಬಾಯಿಯಿಂದ ತಳದವರೆಗೆ ಹಂತ ಹಂತದಲ್ಲಿ ಉಷ್ಣತೆ ಮಟ್ಟ ೨೦-೪೦೦ C ಯಿಂದ ೧೩೦೦ C ವರೆಗೆ ಇರುತ್ತದೆ. ಸುಮಾರು ೧೦೦೦ C ವರೆಗಿನ ಮಟ್ಟದಲ್ಲಿ ತವರದ ಆಕ್ಸೈಡ್ ಇಂಗಾಲದೊಂದಿಗೆ ಅಪಕರ್ಷಣೆಗೆ ಒಳಗಾಗಿ ತವರ ಹೊರಬರುತ್ತದೆ.

SnO2 + C → Sn + CO2

ಈ ಉಷ್ಣತೆಯ ಮಟ್ಟದಲ್ಲಿ ಅದುರಿನ ಕಬ್ಬಿಣಾಂಶ ಅಪಕರ್ಷಣೆಗೆ ಒಳಗಾಗುವುದು. ಆಗ ಪರಿಣಮಿಸುವ ಕಬ್ಬಿಣ ತವರದೊಂದಿಗೆ ಸೇರಿ ಗಟ್ಟಿಲೋಹವಾಗುತ್ತದೆ. ಇದು ಅನಪೇಕ್ಷಣೀಯವಾದದ್ದು. ದ್ರವತವರ ಪಾದರಸದಷ್ಟೇ ಪ್ರವಾಹಿಯಾಗಿದ್ದು ಕುಲುಮೆಯ ಒಳ ಮೈಯಲ್ಲಿರುವ ಸಣ್ಣ ಸಣ್ಣ ರಂಧ್ರಗಳ ಒಳಗೆಲ್ಲ ಒಸರುತ್ತದೆ. ಇದು ಒಂದು ನಷ್ಟ. ಅಲ್ಲದೆ ತವರಕ್ಕೆ ಕಿಟ್ಟದೊಳಗೆ ಗಣನೀಯವಾಗಿ ವಿಲೀನವಾಗುವ ಪ್ರವೃತ್ತಿ ಉಂಟು. ಆದ್ದರಿಂದ ಕಬ್ಬಿಣ ಮಿಶ್ರಣದಿಂದ ತವರದ ಇಳುವರಿ ಕಡಿಮೆ ಆಗುತ್ತದೆ. ಹೀಗಾಗಿ ಗಡುಸಾದ ತವರದಿಂದ ಮತ್ತು ಕುಲುಮೆಯ ಪ್ರಾಥಮಿಕ ಕಿಟ್ಟದಿಂದ ಅಂತರ್ಗತ ತವರವನ್ನು ಪಡೆಯಲು ಮತ್ತೊಮ್ಮೆ ಕುಲುಮೆಯೊಳಗೆ ಅಪಕರ್ಷಣೆಗೆ ಒಳಪಡಿಸುವುದು ವಾಡಿಕೆ. ಇತ್ತೀಚೆಗೆ ತವರಲೋಹದ ಉತ್ಪಾದನೆಯಲ್ಲಿ ವಿದ್ಯುತ್ ಕುಲುಮೆಗಳು ಕೂಡ ಬಳಕೆಗೆ ಬರುತ್ತಿವೆ. ಕುಲುಮೆಯಿಂದ ಹೊರಬಿದ್ದ ಅಶುದ್ಧ ತವರವನ್ನು ಶುದ್ಧೀಕರಿಸುವುದು ತವರದ ಉತ್ಪಾದನೆಯಲ್ಲಿ ಮೂರನೆಯ ಅಥವಾ ಅಂತಿಮ ಹಂತ. ಇದರಲ್ಲಿ ಮೊದಲನೆಯದಾಗಿ ಆಶುದ್ಧ ತವರದ ವಿವರಗಳನ್ನು ಇಳಿಜಾರಿನ ಮೇಲ್ಮೈ ಇರುವ ಒಂದು ಕುಲುಮೆಯಲ್ಲಿಟ್ಟು ಕಾಸಿದರೆ ತವರ ಕರಗಿದಂತೆ (ದ್ರವನ ಬಿಂದು ೨೩೨ C ) ಹರಿದು ದೊಡ್ಡ ಕಡಾಯಿಗಳಲ್ಲಿ ಶೇಖರವಾಗುವುದು. ಕಬ್ಬಿಣ, ತಾಮ್ರ ಮುಂತಾದ ಕಲ್ಮಷಪ್ರಾಯವಾದ ಲೋಹಗಳು ಕರಗದ ಘನಶೇಷವಾಗಿ ಹಿಂದುಳಿದ ತವರ ಮಾತ್ರ ಸೀಸ ಮತ್ತು ಬಿಸ್ಮತ್‌ನಂಥ ಇತರ ಕಡಿಮೆ ದ್ರವನಬಿಂದು ಇರುವ ಲೋಹಗಳೊಂದಿಗೆ ದ್ರವರೂಪದಲ್ಲಿ ದೊರೆತಂತಾಗುತ್ತದೆ. ಈ ದ್ರವರೂಪದಲ್ಲಿರುವ ಇನ್ನೂ ಅಶುದ್ಧವಾದ ತವರವನ್ನು ಹಬೆ ಅಥವಾ ವಾಯು ಅಥವಾ ಹಸಿರು ಮರದ ಕೋಲುಗಳಿಂದ ಚೆನ್ನಾಗಿ ಕದಡಿದರೆ ಇತರ ಕಲ್ಮಷಗಳು ದ್ರವತವರದ ಮೇಲೆ ಕೆನೆಗೂಡುತ್ತವೆ. ಕಲ್ಮಷಗಳ ಕೆನೆಯನ್ನು ಸೌಟುಗಳಿಂದ ತೆಗೆದುಹಾಕಿ ಉಳಿದ ಶುದ್ಧ ತವರವನ್ನು ಕಬ್ಬಿಣದ ಪಾತ್ರೆಗಳೊಳಕ್ಕೆ ಎರಕ ಹುಯ್ಯುವರು. ಈ ರೀತಿ ಪಡೆದ ತವರದ ಶುದ್ಧತೆ ೯೯.೮% ರಷ್ಟಿರುತ್ತದೆ. ವಿದ್ಯುದ್ವಿಭಜನ ಕ್ರಮಗಳಿಂದ ೯೯.೯೯ + ೧% ಶುದ್ಧತೆಯ ತವರವನ್ನು ಪಡೆಯುವುದು ಸಾಧ್ಯ. ಆದರೆ ಖರ್ಚು ಹೆಚ್ಚು ಮತ್ತು ಅಷ್ಟೊಂದು ಶುದ್ಧ ತವರಕ್ಕೆ ಕೈಗಾರಿಕೆಗಳಿಂದ ಬೇಡಿಕೆ ಸಾಕಷ್ಟಿಲ್ಲ.

ಸಾಮಾನ್ಯ ಕೈಗಾರಿಕಾಲೋಹಗಳ ಪೈಕಿ ತವರ ಬಲು ಬೆಲೆ ಬಾಳುವ ಒಂದು ಲೋಹ. ನಿಕ್ಷೇಪಗಳ ಆಧಿಕ್ಯ ಮಾತ್ರ ಕಡಿಮೆ. ಅದೂ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿದೆ. ಕೈಗಾರಿಕಾ ರಂಗದಲ್ಲಿ ಬಹಳ ಮುನ್ನಡೆದಿರುವ ಅಮೆರಿಕದಲ್ಲೆ ತವರದ ನಿಕ್ಷೇಪಗಳಿಲ್ಲ. ಹೀಗಾಗಿ ಒಮ್ಮೆ ಉಪಯೋಗಿಸಿ ಅನಂತರ ನಿಷ್ಪ್ರಯೋಜಕ ಚೂರುಗಳೆಂದು ಬಿಸಾಡುವ ಕಂಚಿನ ಹಳೆಯ ಪಾತ್ರೆಗಳು ಮತ್ತು ಎರಕಗಳು ತವರಲೇಪಿತ ಕಬ್ಬಿಣ ಮತ್ತು ಉಕ್ಕಿನ ಚೂರುಗಳು, ಡಬ್ಬಗಳು ಮುಂತಾದವುಗಳಿಂದ ತವರವನ್ನು ಪುನರುತ್ಪಾದಿಸುವುದು ಅನಿವಾರ್ಯ ಆಗಿದೆ.[೪] ಹಳೆಯ ಕಂಚನ್ನೇನೊ ಸುಲಭವಾಗಿ ಕರಗಿಸಿ ಎರಕಹೊಯ್ಯಬಹುದು. ಅಥವಾ ಹೊಸಕಂಚಿನೊಡನೆ ಸೇರಿಸಬಹುದು. ಆದರೆ ಬಲು ತೆಳವಾಗಿ ತವರ ಲೇಪನ ಪಡೆದಿರುವ ಮತ್ತು ಉಕ್ಕಿನ ಪದಾರ್ಥಗಳಿಂದ ತವರವನ್ನು ಪಡೆಯಲು ಬೇರೆ ಕ್ರಮವನ್ನು ಅನುಸರಿಸಬೇಕಾಗುವುದು. ಅಲ್ಲದೆ ಉಕ್ಕನ್ನು ಕರಗಿಸಿ ಅದರ ಪುನಃ ಪ್ರಯೋಜನ ಹೊಂದಲು ಅದರಲ್ಲಿನ ತವರಾಂಶವನ್ನು ಮೊದಲು ಪ್ರತ್ಯೇಕಿಸುವುದು ಅನಿವಾರ್ಯ. ೧೯ನೆಯ ಶತಮಾನದ ಮಧ್ಯಭಾಗದಿಂದಲೂ ಇದೊಂದು ಕೈಗಾರಿಕೆಯಂತೆ ಅಸ್ತಿತ್ವಕ್ಕೆ ಬಂದಿತು. ಪ್ರಮುಖವಾಗಿ ವಿದ್ಯುದ್ವಿಭಜನ ಕ್ರಮಗಳು ಮತ್ತು ರಾಸಾಯನಿಕ ಕ್ರಮಗಳು ಬಳಕೆಯಲ್ಲಿವೆ. ಶುಷ್ಕಕ್ಲೋರಿನ್ ಅನಿಲ ಕೇವಲ ೫೦ C  ಯಲ್ಲಿ ತವರವನ್ನು ಮಾತ್ರ ಕ್ರಿಯೆಗೆ ಒಳಪಡಿಸಿ ಉಕ್ಕನ್ನು ಮುಟ್ಟದಿರುವುದು ಒಂದು ಅನುಕೂಲಕರವಾದ ಆಂಶ. ಹೀಗಾಗಿ ತವರದ ಕ್ಲೋರೈಡ್ ಹೊರಬಿದ್ದು ಅದನ್ನೇ ನೇರವಾಗಿ ಕೈಗಾರಿಕಾ ಉಪಯೋಗಗಳಿಗೆ ಬಳಸುವುದು ಸಾಧ್ಯ. ಒಂದು ಕಾಲದಲ್ಲಿ ರೇಷ್ಮೆ ಕೈಗಾರಿಕೆಯಲ್ಲಿ ತವರದ ಕ್ಲೋರೈಡ್ ಬಳಕೆಯಲ್ಲಿದ್ದು ಈ ವಿಧಾನ ಪ್ರಾಮುಖ್ಯ ಪಡೆದಿತ್ತು. ಆದರೆ ಇದು ಕ್ರಮೇಣ ನಶಿಸಿ ಈಗ ನೇರವಾಗಿ ಲೋಹ ಅಥವಾ ಅಪೇಕ್ಷಿಸಿದಲ್ಲಿ ಲವಣಗಳ ರೂಪದಲ್ಲಿ ತವರವನ್ನು ಮತ್ತೊಮ್ಮೆ ರಾಸಾಯನಿಕ ವಿಧಾನದಲ್ಲಿ ಪಡೆಯುತ್ತಾರೆ. ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದೊಂದಿಗೆ ಉತ್ಕರ್ಷಣಕಾರಿ ಸೋಡಿಯಮ್ ನೈಟ್ರೇಟನ್ನು ಬೆರೆಸಿ, ತವರಾಂಶ ಸಂಭೂತ ಹಳೆಯ ಕಬ್ಬಿಣ ಅಥವಾ ಉಕ್ಕಿನ ಚೂರುಗಳನ್ನು ಆ ದ್ರಾವಣದಲ್ಲಿ ಅದ್ದಿ ತೊಳೆದರೆ ತವರ ರಾಸಾಯನಿಕ ಸಂಯುಕ್ತ ಸೋಡಿಯಮ್ ಸ್ಟಾನೇಟ್ ಆಗಿ ಪರಿವರ್ತನೆ ಹೊಂದಿ ದ್ರಾವಣದೊಂದಿಗೆ ಸೇರುತ್ತದೆ.

9Sn + 6NaNO3 + 12NaOH + 24H2O → 9Na2Sn(OH)6 + 2N2 + 2NH3

ಈ ತವರದ ಸಂಯುಕ್ತದ್ರಾವಣವನ್ನು ಕಾಸಿ ಅದೇ ಸಂಯಕ್ತವನ್ನು ಘನ ಹರಳುಗಳ ರೂಪದಲ್ಲಿ ಪಡೆಯಬಹುದು ಅಥವಾ ಆಮ್ಲಗಳೊಡನೆ ಕ್ರಿಯೆಗೆ ಒಳಪಡಿಸಿ ತವರದ ಆಕ್ಸೈಡ್ (SnO2 ) ಪಡೆದು ಒಂದು ಪ್ರತ್ಯೇಕ ವಿಧಾನವನ್ನು ಆಚರಣೆಗೆ ತಂದಿರುವುದು ತಿಳಿದುಬಂದಿದೆ. ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಉತ್ಕರ್ಷಣಕಾರಿ ವಸ್ತು ಸೋಡಿಯಮ್ ಮೆಟನೈಟ್ರೊಬೆನ್‌ಜೊಎಟ್ ಬೆರೆಸಿ ಅದರಲ್ಲಿ ತವರಲೇಪಿತ ಚೂರುಗಳನ್ನು ಅದ್ದುವುದು ವರದಿಗಳಿಂದ ತಿಳಿದು ಬರುವ ವಿಷಯ. ಆದರೆ ಆ ಉತ್ಕರ್ಷಣಕಾರಿಯ ಪಾತ್ರ ಮತ್ತು ಪ್ರಯೋಜನಗಳು ಮಾತ್ರ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಭೌತಗುಣಗಳು[ಬದಲಾಯಿಸಿ]

ತವರ ಮೃದುವಾದ, ಬೆಳ್ಳಿಯಂತೆ ಥಳಥಳನೆ ಹೊಳೆಯುವ ಒಂದು ಲೋಹ. ಇದರ ದ್ರವನ ಬಿಂದು ಬಹಳ ಕಡಿಮೆ ಮಟ್ಟದ್ದಾದರೂ (೨೩೨ C), ಕುದಿ ಬಿಂದು ಬಹಳ ಹೆಚ್ಚು (೨೨೭೦ C). ಇದರಿಂದಾಗಿ ಮಿಶ್ರ ಲೋಹಗಳ ತಯಾರಿಕೆಗಾಗಿ ತವರವನ್ನು ಕಾಸಿದಾಗ ಇದು ಬಲು ಸುಲಭವಾಗಿ ದ್ರವರೂಪಕ್ಕೆ ಇಳಿದರೂ ಬೇಗನೆ ಆವಿಯಾಗಿ ನಷ್ಟವಾಗುವುದಿಲ್ಲ. ಫಲಿತ ಮಿಶ್ರ ಲೋಹಗಳ ತ್ರಾಣ ಮತ್ತು ಗಡಸುತನ ವೃದ್ಧಿಗೊಂಡಿರುತ್ತವೆ. ದ್ರವೀಕೃತ ತವರ ಕಬ್ಬಿಣ, ಉಕ್ಕು, ತಾಮ್ರ, ಹಿತ್ತಾಳೆಗಳ ಮೇಲ್ಮೈಗೆ ಸುಲಭವಾಗಿ ಅಂಟಿಕೊಂಡು ಬಿಳಿಯ ರಕ್ಷಣಕವಚವನ್ನು ಕೊಡುತ್ತದೆ. ಉಷ್ಣತೆಯ ಮಟ್ಟವನ್ನು ಅವಲಂಬಿಸಿ ಘನ ತವರದ ಮೂರು ಪ್ರಮುಖ ರೂಪಗಳನ್ನು ಕಾಣಬಹುದು.

             ೧೩೨C	   ೧೬೧C
ಬೂದು ಬಣ್ಣದ α ತವರ      ಬಿಳಿಯ β ತವರ      γ ತವರ
(ವಜ್ರದ ಘನಾಕಾರ)        (ಚತುರ್ಭುಜಾಕಾರ)   (ಭಿದುರ) (ವಜ್ರಮುಖಿ)

ಸಾಮಾನ್ಯ ವಾತಾವರಣದಲ್ಲಿ ಕಾಣಬರುವ ಬಿಳಿಯ ತವರ ಬೂದುಬಣ್ಣದ ತವರವಾಗಿ ಮಾರ್ಪಾಡಾಗಲು ನಿಜವಾಗಿಯೂ ಬಹಳ ಕಾಲವೂ ಮೇಲೆ ಸೂಚಿಸಿರುವುದಕ್ಕಿಂತ ಕಡಿಮೆ ಎಂದರೆ –೪೦Cಯಷ್ಟು ಉಷ್ಣತೆಯೂ ಆವಶ್ಯಕ. ಬಿಸ್ಮತ್, ಸೀಸ ಮುಂತಾದ ಕೆಲಲೋಹಗಳನ್ನು ಅಲ್ಪ ಪ್ರಮಾಣದಲ್ಲಿ ಮಿಶ್ರ ಮಾಡುವುದರಿಂದ ಬಿಳಿಯ ತವರದ ಪರಿವರ್ತನೆಯನ್ನು ಮತ್ತೂ ನಿಧಾನಗೊಳಿಸಬಹುದು. ಅದೇ ತವರದ ಒಂದರೆಡು ಕಣಗಳನ್ನು ಮಿಶ್ರಮಾಡಿದರೆ ಪರಿವರ್ತನೆ ಶೀಘ್ರಗೊಳ್ಳುತ್ತವೆ.

ರಾಸಾಯನಿಕ ಗುಣಗಳು[ಬದಲಾಯಿಸಿ]

ತವರ ಶುದ್ಧ ನೀರಿನೊಡನೆ ಕ್ರಿಯೆಗೆ ಒಳಗಾಗುವುದಿಲ್ಲ. ಪ್ರಬಲ ಆಮ್ಲ ಮತ್ತು ಪ್ರತ್ಯಾಮ್ಲಗಳೆರಡರಲ್ಲೂ ಕ್ರಿಯೆಗೆ ಒಳಗಾಗುತ್ತದೆ. ಸಾಮಾನ್ಯ ವಾತಾವರಣದಲ್ಲಿ ಆಕ್ಸಿಜನ್ನಿನೊಡನೆ ವರ್ತಿಸಿ ತೆಳುವಾದ ಆಕ್ಸೈಡ್ ಮೇಲ್ಮೈ ಪದರವನ್ನು ಪಡೆಯುತ್ತದೆ. ಉಷ್ಣತೆ ಹೆಚ್ಚಾದಂತೆಲ್ಲ ಪದರದ ದಪ್ಪವೂ ಹೆಚ್ಚಾಗುತ್ತದೆ. ತವರ ಲೇಪಿತ ಕಬ್ಬಿಣದ ಡಬ್ಬಿಗಳೊಳಗೆ ವಾಯುರಹಿತ ವಾತಾವರಣದಲ್ಲಿ ಹಣ್ಣಿನ ರಸಗಳು ಆಥವಾ ಆಹಾರವನ್ನು ಶೇಖರಿಸಿಡುವುದು ಇತ್ತೀಚಿನ ದಿನಗಳಲ್ಲಿ ಬಹಳ ರೂಢಿಗೆ ಬಂದಿದೆ. ಕಬ್ಬಿಣ ತುಕ್ಕುಹಿಡಿಯದಂತೆ ಅದರಿಂದಾಗಿ ಶೇಖರಿಸಿದ ಆಹಾರ ಕೆಡದಂತೆ ತಡೆಹಿಡಿಯುವುದೇ ತವರದ ಪಾತ್ರ. ಅಡುಗೆ ಮಾಡುವ ತವರಲೇಪಿತ ಕಬ್ಬಿಣ ಅಥವಾ ಹಿತ್ತಾಳೆ ಪಾತ್ರೆಗಳ ಉಪಯೋಗ, ಡಬ್ಬಗಳಲ್ಲಿ ಶೇಖರಿತ ಆಹಾರದ ನಿತ್ಯಬಳಕೆಗಳಿಂದಾಗಿ ಮಾನವ ತನ್ನ ಆಹಾರದಲ್ಲಿ ತವರವನ್ನು ಪ್ರತಿನಿತ್ಯವೂ ಸೇವಿಸುತ್ತಲೇ ಇರುವನು. ಆದರೆ ಜೀವಕ್ರಿಯೆಗಳ ಮೇಲೆ ಅದರ ಪರಿಣಾಮ ಮಾತ್ರ ಸ್ಪಷ್ಟ. ಹೈಡ್ರೊಜನ್, ನೈಟ್ರೊಜನ್, ಇಂಗಾಲಾಮ್ಲ, ಅಮೊನಿಯಾಗಳೊಂದಿಗೆ ತವರ ನೇರವಾಗಿ ವರ್ತಿಸುವುದಿಲ್ಲ. ಸಲ್ಫ್ಯೂರಿಕ್ ಆಮ್ಲ, ಕ್ಲೋರಿನ್, ಬ್ರೋಮಿನ್ ಫ್ಲೂರಿನ್ನುಗಳೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ಹೈಡ್ರೊಕ್ಲೋರಿಕ್ ಆಮ್ಲದಲ್ಲಿ (ಅದರಲ್ಲೂ ಕಾಸಿದಾಗ) ಸುಲಭವಾಗಿ ಕರಗುತ್ತದೆ. ಸಲ್ಫ್ಯೂರಿಕ್ ಆಮ್ಲದಲ್ಲೂ ಅಷ್ಟೇ, ನೈಟ್ರಿಕ್ ಆಮ್ಲದಲ್ಲಿ ತವರದ ಆಕ್ಸೈಡ್ ಆಗಿ ಘನಶೇಷವಾಗಿ ಉಳಿಯುತ್ತದೆ. ಇದೇ ತವರದ ಪ್ರಮಾಣಾಂಶ ಮಾಪನದ ಆಧಾರವಾಗಬಹುದು. ಸಿಟ್ರಿಕ್, ಟಾರ್ಟಾರಿಕ್ ಮುಂತಾದ ಕಾರ್ಬಾನಿಕಾಮ್ಲಗಳು ಆಕ್ಸಿಜನ್ನಿನ ಸಂಪರ್ಕದಲ್ಲಿ ಮಾತ್ರ ಆಗಲೂ ಮಂದಗತಿಯಲ್ಲಿ ತವರವನ್ನು ಜೀರ್ಣಿಸುತ್ತವೆ. ಉತ್ಕರ್ಷಣಕಾರಿ ದ್ರಾವಣಗಳೆಲ್ಲವೂ ಸಾಮಾನ್ಯವಾಗಿ ತವರವನ್ನು ಕ್ರಮೇಣ ಕ್ರಿಯೆಗೆ ಒಳಪಡಿಸಬಲಬಲ್ಲವು. ಪೆಟ್ರೋಲ್, ಹರಳೆಣ್ಣೆ ಮುಂತಾದವುಗಳಿಗೆ ತವರದೊಂದಿಗೆ ಯಾವ ಕ್ರಿಯೆಯೂ ಇರುವುದಿಲ್ಲ.

ತವರದ ಸಂಯುಕ್ತಗಳು[ಬದಲಾಯಿಸಿ]

ತನ್ನ ಪರಮಾಣುವಿನ 5s25p2 ಎಲೆಕ್ಟ್ರಾನ್ ವಿನ್ಯಾಸವನ್ನು ಪಡೆದಿರುವ ತವರ ಪ್ರಮುಖ ಉತ್ಕರ್ಷಣಾವಸ್ಥೆ ಅಥವಾ ಸಂಯೋಗ ಸಾಮರ್ಥ್ಯಗಳನ್ನು ಪ್ರದರ್ಶಿಸಬಲ್ಲದು. ಅವೆಂದರೆ +೨ ಮತ್ತು +೪. ಆದ್ದರಿಂದ ಮುಖ್ಯವಾಗಿ ತವರ ಎರಡು ವರ್ಗದ ಸಂಯುಕ್ತಗಳನ್ನು ಕೊಡಬಲ್ಲದು. ಅದೇ ತವರ (ii) ಮತ್ತು ತವರ (iv) ಸಂಯುಕ್ತಗಳು. ಉದಾಹರಣೆಗೆ SnCl2 ಮತ್ತು SnCl4. ಜೊತೆಗೆ Na2Sn(OH)6 ಮಾದರಿಯ ಸಂಕೀರ್ಣ ಸಂಯುಕ್ತಗಳು. ತವರದ ಪರಮಾಣು ಇಂಗಾಲದ ಪರಮಾಣುವಿನೊಡನೆ ನೇರ ಬಂಧಕ್ಕೆ ಒಳಗಾಗಿರುವ ಕಾರ್ಬನಿಕ ಅಣು ಬಂಧಿತ ಲೋಹ ಸಂಯುಕ್ತಗಳೂ [(C2H5)4Sn] ಉಂಟು.

ತವರ ವಿನಿಯೋಗವಾಗುವ ಒಟ್ಟು ಮೊತ್ತದ ೧% ಕ್ಕಿಂತಲೂ ಕಡಿಮೆ ಅಂಶ ವಾಣಿಜ್ಯೋದ್ಯಮಗಳಲ್ಲಿ ಬಳಕೆ ಆಗುವ ತವರ ಸಂಯುಕ್ತಗಳಲ್ಲಿ ಸೇರುತ್ತದೆ. ವಸ್ತ್ರೋದ್ಯಮ, ರಂಗುಹಾಕುವಿಕೆ, ಗಾಜು ಕೈಗಾರಿಕೆ, ಇಲ್ಲೆಲ್ಲ ವಾಣಿಜ್ಯ ಗಾತ್ರಗಳಲ್ಲಿ ತವರದ ಉಪಯೋಗ ಉಂಟು. ತವರದ ಮಿಶ್ರಲೋಹಗಳು ಎರಡು ಬಗೆಯವು: ತಾಮ್ರವನ್ನು ಮುಖ್ಯ ಧಾತುವಾಗಿ ಪಡೆದ ಕಂಚುಗಳು, ತಾಮ್ರವನ್ನು ಮುಖ್ಯಧಾತುವಾಗಿ ಪಡೆದ ಬಿಳಿಯ ಲೋಹಗಳು, ಇವುಗಳ ಪೈಕಿ ಕೆಲವು ಮುಖ್ಯ ಮಿಶ್ರ ಲೋಹಗಳಲ್ಲಿನ ಧಾತುಗಳ ಪ್ರಮಾಣ ಈ ಮುಂದಿನಂತಿದೆ:

ಮಿಶ್ರಲೋಹ ಶೇಕಡ ಪ್ರಮಾಣ ಇತರೆ
ತವರ ತಾಮ್ರ ಸೀಸ
ಕಂಚುಗಳು
ಗಂಟೆಯ ಕಂಚು ---- ೧೫-೨೫ ೭೫-೮೬ - --
ಕೋವಿಯ ಕಂಚು ---- ೮-೧೪ ೮೬-೯೨ - -
ನಾಣ್ಯದ ಕಂಚು ---- ೯೫ - ಸತು ೧
ಬಿಳಿ ಲೋಹಗಳು
ಬ್ಯಾರಿಂಗ್ ಲೋಹ ---- ೭೫ ೧೨.೫ - ೧೨.೫ ಆಂಟಿಮೊನಿ
ನಯವಾದ ಬೆಸುಗೆ ಲೋಹ --- ೬೦ .... ೪೦
ಮುದ್ರಣ ಮೊಳೆಯ ಲೋಹ ೨೬ ೫೮ ೧೫ ಆಂಟಿಮೊನಿ

ಉಪಯೋಗಗಳು[ಬದಲಾಯಿಸಿ]

ಬೆಸುಗೆಯ ಲೋಹವಾಗಿ ಅಥವಾ ಇಂಥ ಒಂದು ಮಿಶ್ರಲೋಹದ ಪ್ರಮುಖ ಘಟಕವಾಗಿ ತವರಕ್ಕೆ ವಿಶೇಷ ಸ್ಥಾನ ಉಂಟು. ಎರಡು ಲೋಹಪದಾರ್ಥಗಳಿಗಿಂತಲೂ ಸುಲಭವಾಗಿ ಕರಗಬಲ್ಲ (ಉಷ್ಣತೆಯಿಂದ) ಮಿಶ್ರಲೋಹಗಳಿಗೆ ಬೆಸುಗೆಯ ಲೋಹಗಳೆಂದು ಹೆಸರು. ಇವನ್ನು ಮುಖ್ಯವಾಗಿ ತವರ ಹಾಗೂ ಸೀಸಗಳಿಂದ ತಯಾರಿಸಿರುವರು. ಸಾದಾ ಬೆಸುಗೆಯ ಲೋಹದಲ್ಲಿ ಸಮಪ್ರಮಾಣದಲ್ಲಿ ತವರವೂ ಸೀಸವೂ ಇದ್ದರೆ ಭಾರೀ ಕೊಳವೆಗಳನ್ನು ಬೆಸೆಯಲು ಬಳಸುವ ಬೆಸುಗೆಯ ಲೋಹದಲ್ಲಿ ೨ ಅಂಶ ಸೀಸಕ್ಕೆ ೧ ಅಂಶ ತವರ ಇರುತ್ತದೆ. ಈ ಮಿಶ್ರಲೋಹಗಳಲ್ಲಿ ಸೀಸದ ಅಂಶ ಹೆಚ್ಚಿದಷ್ಟೂ ಲೋಹ ಬಿರುಸಾಗುತ್ತಿದ್ದರೆ ತವರದ ಅಂಶ ಹೆಚ್ಚಿದಷ್ಟೂ ಅದು ಬೇಗ ಕರಗಬಲ್ಲುದು. ಈ ಲೋಹಗಳು ಇನ್ನೂ ಸುಲಭದಲ್ಲಿ ಕರಗಬೇಕಿದ್ದರೆ ಬಿಸ್ಮತ್ ಅಥವಾ ಕ್ಯಾಡ್ಮಿಯಮ್ ಧಾತುಗಳನ್ನು ಸೇರಿಸಬೇಕು. ಇವುಗಳಿಂದಾದ ಲೋಹಗಳೆಲ್ಲ ಮೃದುವಾಗಿರುವುದರಿಂದ ಇವಕ್ಕೆ ಬೆಸುಗೆಯ ಲೋಹಗಳೆಂದು ಹೆಸರುಂಟು. ೭೦% ತವರವನ್ನೂ ೩೦% ಸೀಸವನ್ನೂ ಪಡೆದ ಬೆಸುಗೆ ಲೋಹ ೧೯೨o C ಗೆ ಕರಗುತ್ತದೆ. ಆದರೆ ತವರದ ಅಂಶ ಕ್ರಮಶ: ಕಡಿಮೆ ಆಗುತ್ತ ೨೦% ಕ್ಕೆ ಇಳಿದು ಸೀಸದ ಅಂಶ ಕ್ರಮಶಃ ೮೦% ಕ್ಕೆ ಏರಿದರೆ ಆಯಾ ಲೋಹಗಳ ದ್ರವನ ಬಿಂದು ಕ್ರಮಶಃ ಏರುತ್ತ ಹೋಗಿ ೨೭೭C ಯನ್ನು ಮುಟ್ಟುತ್ತದೆ. ಆದರೆ ಈ ವಿವಿಧ ಪ್ರಮಾಣಗಳ ಲೋಹಗಳೆಲ್ಲ ೧೮೩ C ಗಿಂತ ಕಡಿಮೆ ಉಷ್ಣತೆಯಲ್ಲಿ ಸಂಪೂರ್ಣ ಘನರೂಪವಾಗಿರುತ್ತವೆ. ಲೋಹ ಪದಾರ್ಥಗಳನ್ನು ಭದ್ರವಾಗಿ ಜೋಡಿಸಬಲ್ಲ, ಸುಲಭದಲ್ಲಿ ಕರಗಬಲ್ಲ ಆದರೂ ಅತ್ಯಲ್ಪ ಅಂಶದ ತವರವನ್ನು ಪಡೆದ ಬೆಸುಗೆಯ ಲೋಹಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಅಲ್ಲದೆ ಬೆಸುಗೆ ಮಾಡುವ ಕಾಲದಲ್ಲಿ ಬೆಸುಗೆಲೋಹಗಳೊಂದಿಗೆ ರಾಳದ ಪುಡಿ, ಹೈಡ್ರೊಕ್ಲೋರಿನ್ ಆಮ್ಲದಲ್ಲಿ ಅದ್ದಿದ ಸತುವಿನ ತುಂಡು ಮುಂತಾದ ಪದಾರ್ಥಗಳನ್ನು ಉಪಯೋಗಿಸುವರು.

ಉಲ್ಲೇಖಗಳು[ಬದಲಾಯಿಸಿ]

  1. Holleman, Arnold F.; Wiberg, Egon; Wiberg, Nils (1985). "Tin". Lehrbuch der Anorganischen Chemie (in ಜರ್ಮನ್) (91–100 ed.). Walter de Gruyter. pp. 793–800. ISBN 978-3-11-007511-3.
  2. Cierny, J.; Weisgerber, G. (2003). "The "Bronze Age tin mines in Central Asia". In Giumlia-Mair, A.; Lo Schiavo, F. (eds.). The Problem of Early Tin. Oxford: Archaeopress. pp. 23–31. ISBN 978-1-84171-564-3.
  3. Penhallurick, R. D. (1986). Tin in Antiquity: its Mining and Trade Throughout the Ancient World with Particular Reference to Cornwall. London: The Institute of Metals. ISBN 978-0-904357-81-3.
  4. Carlin, Jr., James F. "Tin: Statistics and Information" (PDF). United States Geological Survey. Archived from the original on 2008-12-06. Retrieved 2008-11-23.

ಗ್ರಂಥಸೂಚಿ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ತವರ&oldid=1198127" ಇಂದ ಪಡೆಯಲ್ಪಟ್ಟಿದೆ