ಶ್ರೀ ಶಿವಕುಮಾರ ಸ್ವಾಮಿಗಳು
Wikipedia ಇಂದ
ಕರ್ನಾಟಕ ರತ್ನ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳುತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳು. ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. ೧೨ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ "ಕಾಯಕವೇ ಕೈಲಾಸ" ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು. ಮಾರ್ಚ್ ೩, ೧೯೩೦ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ವೀರಶೈವ ಧರ್ಮ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.
ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿರುವರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದಾರೆ.
ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನಪ್ಪ ಮತ್ತು ತಾಯಿ ಗಂಗಮ್ಮನವರಿಗೆ ಎಪ್ರಿಲ್ ೧, ೧೯೦೮ರಲ್ಲಿ ಶಿವಣ್ಣನವರಾಗಿ ಜನಿಸಿ, ೧೯೧೩ರಲ್ಲಿ ಪ್ರಾಥಮಿಕ ಮತ್ತು ೧೯೨೧ರಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸವನ್ನು ನಾಗವಲ್ಲಿಯಲ್ಲಿ ಮುಗಿಸಿ ೧೯೨೨ರಲ್ಲಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು ೧೯೨೬ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು. ೧೯೨೭ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳವರೊಡನಾಟ ಆಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು.


