ಜೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೋಗ ಜಲಪಾತ
ಜೋಗ ಜಲಪಾತ
ಜೋಗ is located in Karnataka
ಜೋಗ
ಸ್ಥಳಸಿದ್ಧಾಪುರ ,ಉತ್ತರ ಕನ್ನಡ , ಕರ್ನಾಟಕ, ಭಾರತ
ಸಮುದ್ರ ಮಟ್ಟದಿಂದ ಎತ್ತರ೪೮೮ ಮೀ (೧೬೦೦ ಅಡಿ)
ಒಟ್ಟು ಉದ್ದ೨೫೩ ಮೀ (೮೨೯ ಅಡಿ)
ಒಟ್ಟು ಪ್ರಪಾತಗಳು1
ಉದ್ದವಾದ ಪ್ರಪಾತ253 meters (829 feet)
ಸೇರುವ ನದಿಶರಾವತಿ
ಸರಾಸರಿ
ಹರಿಯುವ ವೇಗ
153 m³/s or 5,387 cu ft/s

ಜೋಗ ಅಥವಾ 'ಗೇರುಸೊಪ್ಪಿನ ಜಲಪಾತ' ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತ.[೧][೨] ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಸ್ಥಳದಲ್ಲಿದೆ. ಜೋಗ ಜಲಪಾತವನ್ನು ವೀಕ್ಷಿಸುವ ತಾಣ ಜೋಗವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಒಂದು ಪ್ರಮುಖ ಪ್ರವಾಸಿ ತಾಣ. ಜೋಗ ಜಲಪಾತವು ಸುಮಾರು ೨೯೨ ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯ೦ತ ರಮಣೀಯರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುವುದು. ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಜೋಗ ತನ್ನ ಮೊದಲಿನ ಸೌಂದರ್ಯ ಹಾಗು ವೈಭವವನ್ನು ಕಳೆದುಕೊಂಡಿದೆ ಎಂದು ಅನೇಕರು ಹೇಳುತ್ತಾರೆ.

ಮಳೆಗಾಲದಲ್ಲಿ ಮೈದುಂಬಿಕೊಂಡಿರುವ ಜೋಗ ಜಲಪಾತ
ಬೇಸಿಗೆಯಲ್ಲಿ ಜೋಗ ಜಲಪಾತ


ಜಲಪಾತ ವಿವರಣೆ

  • ಶರಾವತಿ ನದಿಯ ಜಲಪಾತ ಗೇರುಸೊಪ್ಪೆ ಎಂದೂ ಪ್ರಸಿದ್ಧ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿ ಮಧ್ಯೆ ಇರುವ ಈ ಜಲಪಾತ ಸಾಗರ ತಾಲ್ಲೂಕಿನ ತಾಳಗುಪ್ಪ ರೈಲು ನಿಲ್ದಾಣಕ್ಕೆ ೧೬ ಕಿಮೀ ದೂರದಲ್ಲಿದೆ. ಜಲಪಾತ ಶಿವಮೊಗ್ಗದಿಂದ ೧೦೦ ಕಿಮೀ ದೂರದಲ್ಲೂ, ಹೊನ್ನಾವರದಿಂದ ೫೬ ಕಿಮೀ ದೂರದಲ್ಲೂ ಇದೆ. ಇಲ್ಲಿ ಶರಾವತಿ ನದಿ ೨೫೨.೭ ಮೀ (೮೨೯ ಅಡಿ) ಆಳದ ಪ್ರಪಾತಕ್ಕೆ ಧುಮುಕುತ್ತದೆ. ಸೌಂದರ್ಯಪೂರ್ಣ ಔನ್ನತ್ಯದಲ್ಲಿ ಗೇರುಸೊಪ್ಪೆಯನ್ನು ಮೀರಿಸುವ ಜಲಪಾತ ಜಗತ್ತಿನಲ್ಲೆಲ್ಲೂ ಇಲ್ಲ.
  • ಆಲ್ಪ್ಸ್ ಪರ್ವತದಲ್ಲಿರುವ ಸೆರೊಸೊಲಿ (೨೪೦೦ ಅಡಿ), ಎವಾನ್ಸನ್ (೧೨೦೦ ಅಡಿ) ಮತ್ತು ಆರ್ವೆ (೧೧೦೦ ಅಡಿ) ಜೋಗ ಜಲಪಾತಕ್ಕಿಂತ ಎತ್ತರವಾಗಿವೆಯಾದರೂ ಅವುಗಳಲ್ಲಿ ಜೋಗದಷ್ಟು ಜಲಸಮೃದ್ಧಿ ಇಲ್ಲ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕವಾಗಿದ್ದರೂ, ಅದರ ಎತ್ತರ (೧೬೪ ಅಡಿ) ಗೇರುಸೊಪ್ಪೆಯಷ್ಟು ಇಲ್ಲ. ಶರಾವತಿ ನದಿ ಹರಿದು ಧುಮುಕುವ ಕಮರಿಯ ಬಂಡೆ ೨೫೦ ಗಜಗಳಷ್ಟು ಉದ್ದವಾಗಿದೆ.
  • ನಾಲ್ಕು ಪ್ರತ್ಯೇಕ ಬಿರುಕುಗಳಿಂದ ನದಿ ರಭಸದಿಂದ ಇಳಿದು ಕಮರಿಗೆ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸುಮಾರು ೮೨೯ ಅಡಿ ಆಳಕ್ಕೆ ಧುಮುಕುತ್ತದೆ. ರಾಜಾ ಬೀಳುತ್ತಿರುವಂತೆಯೇ ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕಮರಿಗೆ ಬೀಳುತ್ತದೆ.
  • ಮೂರನೆಯ ಜಲಪಾತ ರಾಕೆಟ್ ಬಂಡೆಯ ಮೇಲಿನಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ನಾಲ್ಕನೆಯ ರಾಣಿ ಜಲಪಾತ (ಲೇಡಿ ಬ್ಲಾಂಚೆ) ಬೀಳುವ ರಭಸದಿಂದೇಳುವ ನೊರೆಯಿಂದ ತುಂಬಿ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ.
  • ಮಳೆಗಾಲದಲ್ಲಿ ಹೆಚ್ಚು ನೀರು ರಭಸದಿಂದ ಬೀಳುವ ಕಾರಣ ನೀರಿನಿಂದ ಏಳುವ ಧೂಮ ಪ್ರಪಾತವನ್ನು ಆವರಿಸಿದ್ದು ನೀರಿನ ಭೋರ್ಗರೆತದ ಶಬ್ದ ಹೃದಯವನ್ನು ಕಂಪಿಸುವಂತಿರುತ್ತದೆ.
  • ಮಳೆಗಾಲದ ಅನಂತರದ ತಿಂಗಳುಗಳಲ್ಲಿ ನದಿಯ ಪ್ರವಾಹ ಸರಿಯಾದ ಗಾತ್ರದಲ್ಲಿರುವುದರಿಂದ ಜಲಪಾತ ನೋಡಲು ರಮ್ಯವಾಗಿರುತ್ತದೆ. ಜಲಪಾತದ ಪೂರ್ಣ ದೃಶ್ಯವನ್ನು ಶಿವಮೊಗ್ಗ ಗಡಿ ಭಾಗದಿಂದ ನೋಡಬಹುದು. ಜಲಪಾತದ ಬಂಡೆಯ ಅಂಚುಗಳಲ್ಲಿರುವ ಪೊಟರೆಗಳಲ್ಲಿ ಕಾಡು ಪಾರಿವಾಳಗಳು ಮನೆ ಮಾಡಿಕೊಂಡು ಪ್ರಪಾತದ ಬಳಿ ಗುಂಪುಗುಂಪಾಗಿ ಹಾರುತ್ತಿರುತ್ತವೆ.
  • ಸೂರ್ಯಕಿರಣಗಳಿಂದ ಜಲಪಾತದ ದಿನದ ವಿವಿಧ ಕಾಲಗಳಲ್ಲಿ ಕಾಮನ ಬಿಲ್ಲು ಅನೇಕ ವೈವಿಧ್ಯ ತಾಳುತ್ತದೆ. ಜಲಪಾತದ ಏಕತಾನದ ನಾದ ಹತ್ತಿರ ನಿಂತು ಕೇಳುವವರ ಕಿವಿಗಳಿಗೆ ಘನಗರ್ಜನೆಯಂತೆ ಕೇಳಿಸುತ್ತದೆ. ಅದರ ಮೇಘನಾದದ ಗಾಂಭೀರ್ಯ ನಿಸರ್ಗ ಸಂಗೀತದ ಒಂದು ನಿರುಪಮ ಮಾದರಿ. ಮೌನವನ್ನು ಸೀಳುವ ಆ ನಿತ್ಯನಾದವನ್ನು ಆಲಿಸುತ್ತ ನಿಂತವರಿಗೆ ಒಮ್ಮೆ ನಾದಸಮಾಧಿಯನ್ನು ಉಂಟುಮಾಡಬಹುದು.
  • ಜೊತೆಗೆ ಬಿಸಿಲು ಹರಿದಂತೆ ಜಲಧರೆಗಳ ಮೇಲಿನ ಕಾಮನಬಿಲ್ಲುಗಳು ನಿತ್ಯ ನವ್ಯವಾಗಿ ಕಾಣಿಸುವುವು : ಬೆಳದಿಂಗಳ ರಾತ್ರಿಯಲ್ಲೂ ಕಾಮನಬಿಲ್ಲು ಕಾಣಿಸುವುದುಂಟು. ಈ ಜೀವಂತ ಪ್ರವಾಹದ ಸೌಮ್ಯ-ಭೀಕರತೆಗಳ ವರ್ಣನೆ ಮಾತಿಗೆ ನಿಲುಕದ್ದು. ಗೇರುಸೊಪ್ಪೆ ಜಲಪಾತದ ಮಾಹಿತಿ ಗಳನ್ನು ಸಂಗ್ರಹಿಸಲು ಮಾರ್ಚ್ ೧೮೫೬ರಲ್ಲಿ ಬಂದ ಇಬ್ಬರು ಬ್ರಿಟಿಷ್ ನೌಕಾಧಿಕಾರಿಗಳ ವರದಿಯಂತೆ- ಪ್ರಪಾತದ ಆಳ ೮೨೯ ಅಡಿಗಳು. ಪ್ರಪಾತದ ತಳದಲ್ಲಿ ನದಿ ಕೊರೆದಿರುವ ಮಡುವಿನ ಆಳ ೧೩೯ ಅಡಿಗಳು.
  • ನದಿಯ ಆಡ್ಡಗಲ ಉತ್ತರ ಕನ್ನಡ ಮತ್ತು ಶಿವಮೊಗ್ಗ ದಂಡೆಗಳ ಮೇಲಿರುವ ಬಂಗಲೆಗಳ ನಡುವೆ ೨೧೩೦ ಅಡಿಗಳು. ೧೮೬೯ರ ಜನವರಿಯಲ್ಲಿ ಜಲಪಾತ ಪ್ರದೇಶಕ್ಕೆ ಭೇಟಿ ನೀಡಿದ್ದ ಶ್ರೀಮತಿ ಲೂಯಿ ಬ್ರೌನಿಂಗ್ ತಿಳಿಸುವಂತೆ- ಆಗ ಶಿವಮೊಗ್ಗ ಜಿಲ್ಲೆಯ ಅಂಚಿನ ಕಡೆ ಜಲಪಾತದ ಸಮೀಪದಲ್ಲಿ ಡೇರೆಯನ್ನು ಹಾಕಲು ಸಹ ಸಾಧ್ಯವಿಲ್ಲದಂತೆ ಒತ್ತಾದ ಕಾಡು ಬೆಳೆದಿತ್ತು.
  • ಈಗ ಜಲಪಾತದ ಎದುರಿಗೆ, ನದಿ ಭೋರ್ಗರೆದು ಸಾಗುವ ಸುಂದರವಾದ ಸ್ಥಳದಲ್ಲಿ ಪ್ರವಾಸಿ ಬಂಗಲೆ, ಉಪಹಾರ ಗೃಹ ಮತ್ತು ಅಂಚೆ ಕಚೇರಿ ಇವೆ. ಅಕ್ಟೋಬರಿನಿಂದ ಫೆಬ್ರವರಿಯವರೆಗೆ ಸಹಸ್ರಾರು ಪ್ರವಾಸಿಗಳು ಜಗತ್ಪ್ರಸಿದ್ಧವಾದ ಈ ಮನೋಹರ ಸ್ಥಳಕ್ಕೆ ಭೇಟಿ ನೀಡುವುದುಂಟು.

ಶರಾವತಿ ನದಿಯು ನಾಲ್ಕು ಹೋಳಾಗಿ ಕಣಿವೆಗೆ ಧುಮುಕುತ್ತದೆ. ನದಿಯ ನಾಲ್ಕೂ ಝರಿಗಳಿಗೆ ಹೆಸರುಗಳಿವೆ. ನೋಡುಗರ ಎಡದಿಂದ ಬಲಕ್ಕೆ ಹಸರುಗಳು ಈ ಕೆಳಗಿನಂತಿವೆ:

  • ರಾಜ: ಈ ಝರಿಯು ರಾಜಗಾಂಭೀರ್ಯದಿಂದ ಧುಮುಕುತ್ತದೆ.
  • ರೋರರ್: ಕಲ್ಲು ಬಂಡೆಗಳ ನಡುವಿನಿಂದ ನುಗ್ಗುವ ಈ ಝರಿಯು ಅತಿ ಹೆಚ್ಚಿನ ಶಬ್ದ ಮಾಡುತ್ತದೆ.
  • ರಾಕೆಟ್: ಹೆಚ್ಚಿನ ಪ್ರಮಾಣದ ನೀರು ಸಣ್ಣ ಕಿಂಡಿಯಿಂದ ರಭಸವಾಗಿ ಧುಮುಕುತ್ತದೆ.
  • ರಾಣಿ: ಈ ಝರಿಯ ಆಕಾರವು ಹೆಣ್ಣು ನರ್ತಕಿಯ ತಳುಕು-ಬಳುಕಿಗೆ ಹೋಲುತ್ತದೆ.

ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ

ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ ಜೋಗ ಜಲಪಾತದ ಬಳಿ ಇರುವ ವಿದ್ಯುತ್ ಸ್ಥಾವರ. ಸ್ವಾತಂತ್ರಪೂರ್ವದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಮೊದಲ ಬಾರಿ ಜೋಗಕ್ಕೆ ಭೇಟಿಯಿತ್ತಾಗ ಜೋಗ ಜಲಪಾತವನ್ನು ನೋಡಿ "ಎಂತಹ ವ್ಯರ್ಥ" ಎಂದು ಉದ್ಗರಿಸಿದರಂತೆ. ಅವರ ಈ ಮಾತಿನ ಫಲಶ್ರುತಿ ಈ ಜಲವಿದ್ಯುತ್ ಆಗಾರ. ೧೯೩೦ರ ದಶಕದ ಪೂರ್ವಭಾಗದಲ್ಲಿ ಮೈಸೂರು ಲೋಕೋಪಯೊಗಿ ಇಲಾಖೆಯಿಂದ ಜಲವಿದ್ಯುತ್ ಯೋಜನಾ ಕಾರ್ಯ ಶುರುವಾಯಿತು. ಮೊದಲ ಹಂತದ ಕೆಲಸ ೧೯೩೯ರಲ್ಲಿ ಜೋಗ ಜಲಪಾತದಿಂದ ೨೪ ಕಿ. ಮಿ. ದೂರದಲ್ಲಿರುವ ಹಿರೆಭಾಸ್ಕರ ಎಂಬ ಸ್ಥಳದಲ್ಲಿ ಶುರುವಾಯಿತು. ಮೊದಲು ಕೃಷ್ಣರಾಜೇಂದ್ರ ಜಲವಿದ್ಯುತ್ ಯೋಜನೆಯೆಂದು ಕರೆಯಲ್ಪಡುತಿದ್ದ ಈ ಯೋಜನೆಯನ್ನು ನಂತರ ಮಹಾತ್ಮ ಗಾಂಧಿ ಜಲವಿದ್ಯುತ್ ಯೊಜನೆಯೆಂದು ನಾಮಕರಣ ಮಾಡಲಾಯಿತು. ಫೆಬ್ರುವರಿ ೨೧ ೧೯೪೯ರಲ್ಲಿ ಉದ್ಘಾಟನೆಯಾದ ಈ ವಿದ್ಯುತ್ ಸ್ಥಾವರ ೧೨೦ ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸುವ ಕ್ಷಮತೆಯನ್ನು ಹೊಂದಿದೆ. ಮೊದಲು ಹಿರೆಭಾಸ್ಕರ ಜಲಾಶಯದಿಂದ ಈ ಯೊಜನೆಗೆ ನೀರಿನ ಸರಬರಾಜಾಗುತ್ತಿತ್ತು. ೬೦ರ ದಶಕದಲ್ಲಿ ಲಿಂಗನಮಕ್ಕಿ ಜಲಾಶಯ ಪ್ರಾರಂಭವಾದ ನಂತರ ಅದೆ ಈ ಯೋಜನೆಗೆ ನೀರಿನ ಮೂಲ.[೩]

ಪ್ರವಾಸಿಗರಿಗೆ ಮಾರ್ಗದರ್ಶನ

  • ಆಗಸ್ಟ್-ಡಿಸೆಂಬರ್ ಅವಧಿಯ ಜೋಗ ಜಲಪಾತವನ್ನು ವೀಕ್ಷಿಸಲು ಅತಿ ಸೂಕ್ತ ಸಮಯ. ಸಿದ್ದಾಪುರದಿಂದ ಜೋಗವು ೨೪ ಕಿಲೋಮೀಟರ್ ಹಾಗು ಬೆಂಗಳೂರಿನಿಂದ ೩೭೯ ಕಿಲೋಮೀಟರ್ ದೂರದಲ್ಲಿದೆ.
  • ಬೆಂಗಳೂರಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನಲ್ಲಿ ಸಿದ್ದಾಪುರ ತಲುಪಿ, ಸಿದ್ದಾಪುರದಿಂದ ಖಾಸಗಿ ಬಸ್ಸಿನಲ್ಲಿ ಜೋಗ ತಲುಪಬಹುದು.
  • ರೈಲಿನಲ್ಲಿ ಬರುವುದಾದರೆ ಬೆಂಗಳೂರಿನಿಂದ ಸಾಗರ ತಲುಪಿ,ಸಾಗರದಿಂದ ಜೋಗಕ್ಕೆ ಬಸ್ಸಿನಲ್ಲಿ ತಲುಪಬಹುದು. ಸಾಗರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇದೆ.

ಜೋಗದ ಜಲಪಾತ

ಜೋಗದ ಜಲಪಾತ

ಎಡದಲ್ಲಿ ನೇರವಾಗಿ ಬೀಳುತ್ತಿರುವುದು 'ರಾಜ' ;ಅದರ ಪಕ್ಕದಲ್ಲಿ ಸಂದಿಯಿಂದ ಧುಮುಕುತ್ತಿರುವುದು 'ರೋರರ್'-ಆರ್ಭಟ ಅದರದ್ದೇ ;ನಂತರದಲ್ಲಿ ಕೆಳಭಾಗಲ್ಲಿ ಮೂರು ಸೀಳು ಮೇಲೆ ಒಂದೇಇರುವ-ರಾಕೆಟ್ ಹಾರಿದಾಗ ಉಗುಳುವ ಹೊಗೆಯಂತಿರುವುದು 'ರಾಕೆಟ್'; ನಂತರ ಕೊನೆಯ ಬಲಭಾಗದಲ್ಲಿರುವುದು 'ಲೇಡಿ', ಮೆಲ್ಲಗೆ ಇಳಿಜಾರಿನಲ್ಲಿ ಜಾರುತ್ತಿದೆ.

ಛಾಯಾಂಕಣ

ಬಾಹ್ಯ ಸಂಪರ್ಕ

ಉಲ್ಲೇಖಗಳು

  1. "ಆರ್ಕೈವ್ ನಕಲು". Archived from the original on 2009-09-24. Retrieved 2013-08-13.
  2. http://en.wikipedia.org/wiki/Jog_Falls
  3. "ಅರ್ಧ ಶತಮಾನದಿಂದ ಲಿಂಗನಮಕ್ಕಿಯಲ್ಲಿ ಮುಳುಗಿದ್ದರೂ ಸುಸ್ಥಿರವಾಗಿದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಹಿರೇಭಾಸ್ಕರ ಆಣೆಕಟ್ಟು;June 4, 2019". Archived from the original on ಜುಲೈ 1, 2019. Retrieved ಜೂನ್ 22, 2020.
ಕರ್ನಾಟಕದ ಏಳು ಅದ್ಭುತಗಳು
ಹಿರೇಬೆಣಕಲ್ ಶಿಲಾ ಸಮಾಧಿಗಳು | ಹಂಪಿ | ಗೋಲ ಗುಮ್ಮಟ | ಶ್ರವಣಬೆಳಗೊಳದ ಗೊಮ್ಮಟೇಶ್ವರ | ಮೈಸೂರು ಅರಮನೆ | ಜೋಗ ಜಲಪಾತ | ನೇತ್ರಾಣಿ ದ್ವೀಪ
"https://kn.wikipedia.org/w/index.php?title=ಜೋಗ&oldid=1191817" ಇಂದ ಪಡೆಯಲ್ಪಟ್ಟಿದೆ