ಜಿ.ನಾರಾಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿ. ನಾರಾಯಣ
ಜನನಸೆಪ್ಟೆಂಬರ್ ೨, ೧೯೨೩
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿ
ಮರಣನವೆಂಬರ್ ೧೯, ೨೦೧೧
ಇದಕ್ಕೆ ಖ್ಯಾತರುಕನ್ನಡ ಸೇವೆ, ಆಡಳಿತ, ಜಾನಪದ, ಸಾರ್ವಜನಿಕ ಸೇವೆ

ಜಿ. ನಾರಾಯಣ (ಸೆಪ್ಟೆಂಬರ್ ೨, ೧೯೨೩ - ನವೆಂಬರ್ ೧೯, ೨೦೧೧) ಕನ್ನಡದ ವಿದ್ವಾಂಸರಾಗಿ, ಕನ್ನಡ ನಾಡು ಕಂಡ ಮಹತ್ವದ ಆಡಳಿತಗಾರರಲ್ಲಿ ಒಬ್ಬರಾಗಿದ್ದಾರೆ. ಆಡಳಿತ ಮತ್ತು ರಾಜಕೀಯದಲ್ಲಿದ್ದರೂ ಜಿ. ನಾರಾಯಣ್ ಅವರು ವಿವಾದಾತೀತರೆನಿಸಿದ್ದರು.

ಜೀವನ[ಬದಲಾಯಿಸಿ]

ಜಿ. ನಾರಾಯಣ ಅವರು ಸೆಪ್ಟೆಂಬರ್ ೨, ೧೯೨೩ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿಯಲ್ಲಿ ಜನಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ[ಬದಲಾಯಿಸಿ]

ಶಾಲೆಯಿಂದ ಹೊರಬಿದ್ದ ನಾರಾಯಣರು ತಮ್ಮ ಜೀವನವನ್ನು ದೇಶ ಸೇವೆಗೆ ಮುಡಿಪುಗೊಳಿಸಿದರು. ಮದ್ದೂರಿನ ವೀರಣ್ಣಗೌಡರ ಪ್ರಭಾವದ ಆಕರ್ಷಣೆಗೆ ಒಳಗಾದ ನಾರಾಯಣರು ಅವರೊಡನೆ ಸ್ವಾತಂತ್ರ್ಯ ಹೋರಾಟದ ಕೆಲಸದಲ್ಲಿ ಭಾಗಿಯಾದರು. ಶಿವಪುರದ ಸತ್ಯಾಗ್ರಹದಲ್ಲಿ ಭಾಗಿಯಾದ ನಂತರದಲ್ಲಿ ಸಾಹುಕಾರ್ ಚೆನ್ನಯ, ಕೆಂಗಲ್ ಹನುಮಂತಯ್ಯ ಅಂತಹ ಹಿರಿಯರ ಪರಿಚಯ ಒಡನಾಟಗಳು ಅವರಿಗೆ ದೊರಕಿದವು. ಪೂನಾದ ಬಳಿ ಉದಲಿ ಎಂಬಲ್ಲಿಗೆ ಹೋಗಿ ಖಾದಿ ಗ್ರಾಮೋದ್ಯೋಗದ ಬಗ್ಗೆ ತರಬೇತಿ ಪಡೆದು ಬಂದರು. [೧]

ಪತ್ರಿಕೋದ್ಯಮಿ[ಬದಲಾಯಿಸಿ]

ಚಾಮರಾಜಪೇಟೆಯಲ್ಲಿ ತಮ್ಮದೇ ಆದ ಮುದ್ರಣಾಲಯ ಆರಂಭಿಸಿದರು. ಅಂದಿನ ದಿನದಲ್ಲಿ ಕಾಂಗ್ರೆಸ್ ಪತ್ರಿಕೆಯನ್ನು ಅವರೇ ಸಂಪಾದಿಸುತ್ತಿದ್ದರು. ‘ವಿನೋದ’ ಹಾಸ್ಯ ಮಾಸಪತ್ರಿಕೆ ಅವರ ಮಹತ್ವದ ಕೊಡುಗೆಗಳಲ್ಲೊಂದು. ಆ ಪತ್ರಿಕೆ ಅಂದಿನ ದಿನಗಳಲ್ಲಿ ಬಹು ಜನಪ್ರಿಯಗೊಂಡು ನಾಡಿಗೇರ ಕೃಷ್ಣರಾವ್, ಶ್ರೀನಿವಾಸ ವೈದ್ಯ, ಎಚ್. ಎಲ್. ಕೇಶವಮೂರ್ತಿ, ಅನಂತ ಕಲ್ಲೋಳ ಅಂತಹ ಮಹಾನ್ ಪ್ರತಿಭೆಗಳ ಹೊರಹೊಮ್ಮುವಿಕೆಗೆ ಕಾರಣೀಭೂತವೆನಿಸಿತ್ತು.

ಆಡಳಿತಗಾರರಾಗಿ[ಬದಲಾಯಿಸಿ]

ಜಿ. ನಾರಾಯಣರು ೧೯೬೪ರ ಅವಧಿಯಲ್ಲಿ ಬೆಂಗಳೂರಿನ ಮೇಯರ್ ಆಗಿ, ೧೯೬೯ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ೧೯೮೭ರಲ್ಲಿ ಕರ್ನಾಟಕ ಪ್ರೆಸ್ ಅಕಾಡೆಮಿ ಅಧ್ಯಕ್ಷರಾಗಿ, ೧೯೯೨ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಲ್ಲಿಸಿರುವ ಸೇವೆ ಸ್ಮರಣೀಯವಾದುದು. ತಾವರೆ ಎಲೆ ಕೆಸರು ನೀರುಗಳನ್ನು ಹೇಗೆ ಅಂಟಿಸಿಕೊಳ್ಳುವುದಿಲ್ಲವೋ ಹಾಗೆ ಅವರು ಅಭಿವೃದ್ಧಿ ಕಾರ್ಯಗಳಿಗೆ ಹೆಸರಾದರೇ ವಿನಹ ಆಪಾದನೆ, ವಿವಾದಗಳಿಗೆ ಎಂದೂ ಸಿಲುಕಲಿಲ್ಲ. ಸಾಹಿತ್ಯದಲ್ಲಿ ಅವರು ಸೇವೆ ಮಾಡಿದ್ದಾರಾದರೂ ಅವರು ಸಾಂಸ್ಕೃತಿಕ ವಲಯದಲ್ಲಿ ಹೆಚ್ಚು ತೊಡಗಿಕೊಂಡದ್ದರಿಂದ ಕನ್ನಡದ ಮಹಾನ್ ಸಾಹಿತಿಗಳ ಸಾನ್ನಿಧ್ಯ ಅವರಿಗೆ ನಿರಂತರವಾಗಿ ಲಭ್ಯವಾಗಿತ್ತು. ಆಕರ್ಷಣೀಯ ವ್ಯಕ್ತಿತ್ವದ ನಾರಾಯಣರು ತಮ್ಮ ಸಮಂಜಸ ನಿಲುವುಗಳು, ಗಾಂಭೀರ್ಯ, ಆಕರ್ಷಕ ವ್ಯಕ್ತಿತ್ವಗಳಿಂದ ಎಲ್ಲಾ ಜನರಿಗೂ ಪ್ರಿಯರಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟು ಸರ್ಕಾರದಿಂದ ಸೂಕ್ತ ಬೆಂಬಲಗಳು ಪರಿಷತ್ತಿಗೆ ದೊರಕುವಂತೆ ಮಾಡಿ ಸಾಹಿತ್ಯ ಪರಿಷತ್ತು ಉತ್ತಮ ಕೆಲಸ ಮಾಡುವಲ್ಲಿ ಜಿ ನಾರಾಯಣರು ವಹಿಸಿದ ಪಾತ್ರ ಮಹತ್ವಪೂರ್ಣವಾದುದು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವರು ಅಧ್ಯಕ್ಷರಾಗಿದ್ದಾಗ ನಡೆಸಿದ ಮಹತ್ವಪೂರ್ಣ ಕಾಯಕಗಳಲ್ಲಿ ಜಾನಪದ ತಜ್ಞರ ಭಾಗವಹಿಕೆಯಲ್ಲಿ ಮೂಡಿಸಿದ ‘ಕರ್ನಾಟಕ ಜಾನಪದ ಲೋಕ’ದಂತಹ ಕೃತಿಗಳು ಈಗಲೂ ಜನಪ್ರಿಯವಾಗಿವೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷತೆಯನ್ನೂ ಅಲಂಕರಿಸಿದ್ದ ನಾರಾಯಣರು ಈ ಲೋಕವನ್ನಗಲುವ ಸಂದರ್ಭದವರೆಗೆ ‘ಜಾನಪದ ಲೋಕ’ ಟ್ರಸ್ಟಿನ ಅಧ್ಯಕ್ಷರಾಗಿದ್ದರು.

ಹಲವು ಸಾರ್ವಜನಿಕ ಸಂಸ್ಥೆಗಳ ಜೊತೆ ಸಂಪರ್ಕ[ಬದಲಾಯಿಸಿ]

  • 'ಬಿ.ಎಂ.ಶ್ರೀ ಪ್ರತಿಷ್ಠಾನ',
  • 'ಸಾಹಿತ್ಯ ಸಂವರ್ಧಕ ಟ್ರಸ್ಟ್',
  • 'ಜಾನಪದ ಲೋಕ'

ಮುಂತಾದ ಅನೇಕ ಸಂಸ್ಥೆಗಳ ದತ್ತಿಗಳ ನಿರ್ವಹಣೆ ಕೂಡಾ ಜಿ.ನಾರಾಯಣರ ತೆಕ್ಕೆಯಲ್ಲಿದ್ದುದು ಅವರು ಹಲವಾರು ಪ್ರತಿಷ್ಠಿತ ಸ್ಥಾನಗಳಲ್ಲಿದ್ದಾಗಿಯೂ ಸಾರ್ವಜನಿಕ ಜೀವನದಲ್ಲಿ ಗಳಿಸಿದ ಉತ್ತಮ ಹೆಸರಿಗೆ ದ್ಯೋತಕವಾಗಿವೆ. ಜಿ. ನಾರಾಯಣರು ಕರ್ನಾಟಕ ಗಮಕ ಕಲಾ ಪರಿಷತ್, ಶಶಿ ಕಲಾವಿದರು, ಲೇಖಕರ ಬಳಗ, ಶಾರದಾ ವಿದ್ಯಾಪೀಠ, ಉದಯ ಭಾನು ಕಲಾ ಸಂಘ ಮುಂತಾದ ಹಲವಾರು ಸಂಸ್ಥೆಗಳಿಗೆ ಮಾರ್ಗದರ್ಶಕರೂ ಆಗಿದ್ದವರು.

ಕನ್ನಡ ಪರ ಹೋರಾಟಗಾರರಾಗಿ[ಬದಲಾಯಿಸಿ]

ಕನ್ನಡ ಪರವಾದ ಮಹತ್ವದ ಹೋರಾಟಗಳಲ್ಲಿ ಜಿ. ನಾರಾಯಣರು ಗಮನಾರ್ಹವಾದ ಪಾತ್ರವಹಿಸಿದ್ದಾರೆ. ಅದರಲ್ಲೂ ಅವರು ಕರ್ನಾಟಕ ಏಕೀಕರಣ ಚಳುವಳಿ ಮತ್ತು ಗೋಕಾಕ್ ಚಳುವಳಿಗಳಲ್ಲಿ ನಿರ್ವಹಿಸಿದ ಪಾತ್ರಗಳು ಗಮನಾರ್ಹವಾದದ್ದು. ಅವರು ಗೋಕಾಕ ಸಮಿತಿಯ ಸದಸ್ಯರೂ ಆಗಿದ್ದರು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

  • ಕರ್ನಾಟಕ ಏಕೀಕರಣ ಹೋರಾಟದಲ್ಲಿ ಇವರು ವಹಿಸಿದ ಪ್ರಮುಖ ಪಾತ್ರವನ್ನು ಗುರುತಿಸಿ ರಾಜ್ಯ ಸರ್ಕಾರವು ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿದೆ.
  • ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿ ನೀಡಿದೆ.

ಗ್ರಂಥ ರಚನೆ[ಬದಲಾಯಿಸಿ]

  • ‘ಅಕ್ಷರವ ನೀವ್ ಕಲಿಯಿರಿ’.
  • ‘ಮಲೇರಿಯಾ ಹಾವಳಿ’,
  • ‘ಕಬ್ಬಿನ ಕಥಾಂತರ’,
  • ‘ರಾಷ್ಟ್ರೀಯ ಪದಗಳು’,
  • ‘ಹೆಚ್ಚು ಬೆಳೆಯನ್ನು ಬೆಳೆಯಿರಿ’ ಮುಂತಾದ ಕೃತಿಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.

ವಿದಾಯ[ಬದಲಾಯಿಸಿ]

ಜಿ ನಾರಾಯಣರು ನವೆಂಬರ್ ೧೯, ೨೦೧೧ರಂದು ಈ ಲೋಕವನ್ನಗಲಿದರು.

ಉಲ್ಲೇಖಗಳು[ಬದಲಾಯಿಸಿ]

  1. ಸಾಂಸ್ಕೃತಿಕ ಮೈಲುಗಲ್ಲು ಜಿ. ನಾರಾಯಣ

ಮಾಹಿತಿ ಆಧಾರ[ಬದಲಾಯಿಸಿ]

vbnewsonline.com , kannadamma.net ಮತ್ತು ವಿವಿಧ ಪತ್ರಿಕಾ ವರದಿಗಳು.