ಜಾರ್ಜ್ ಫರ್ನಾಂಡಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾರ್ಜ್ ಫರ್ನಾಂಡೀಸ್

ಕೇಂದ್ರ ರಕ್ಷಣಾ ಸಚಿವ
ಅಧಿಕಾರ ಅವಧಿ
೨೧ ಅಕ್ಟೋಬರ್ ೨೦೦೧ – ೨೨ ಮೇ ೨೦೦೪
ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ
ಪೂರ್ವಾಧಿಕಾರಿ ಜಸ್ವಂತ್ ಸಿಂಗ್
ಉತ್ತರಾಧಿಕಾರಿ ಪ್ರಣಬ್ ಮುಖರ್ಜಿ
ಅಧಿಕಾರ ಅವಧಿ
೧೯ ಮಾರ್ಚ್ ೧೯೯೮ – ೧೬ ಮಾರ್ಚ್ ೨೦೦೧
ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ
ಪೂರ್ವಾಧಿಕಾರಿ ಮುಲಾಯಂ ಸಿಂಗ್ ಯಾದವ್
ಉತ್ತರಾಧಿಕಾರಿ ಜಸವಂತ್ ಸಿಂಗ್

ಕೇಂದ್ರ ರೈಲ್ವೇ ಸಚಿವರು
ಅಧಿಕಾರ ಅವಧಿ
೨ ಡಿಸೆಂಬರ್ ೧೯೮೯ – ೧೦ ನವೆಂಬರ್ ೧೯೯೦
ಪ್ರಧಾನ ಮಂತ್ರಿ ವಿ. ಪಿ. ಸಿಂಗ್
ಪೂರ್ವಾಧಿಕಾರಿ ಮಾಧವ ರಾವ್ ಸಿಂಧಿಯಾ
ಉತ್ತರಾಧಿಕಾರಿ ಜ್ಞಾನೇಶ್ವರ ಮಿಶ್ರಾ
ವೈಯಕ್ತಿಕ ಮಾಹಿತಿ
ಜನನ ಜೂನ್ ೩, ೧೯೩೦
ಮಂಗಳೂರು
ರಾಷ್ಟ್ರೀಯತೆ ಭಾರತೀಯರು
ಸಂಗಾತಿ(ಗಳು) ಲೀಲಾ ಕಬೀರ್
ಮಕ್ಕಳು ಒಬ್ಬ ಪುತ್ರ
ವಾಸಸ್ಥಾನ ಬೆಂಗಳೂರು
ಸಹಿ

ಜಾರ್ಜ್ ಫರ್ನಾಂಡೀಸ್ (ಜೂನ್ ೩, ೧೯೩೦ - ಜನವರಿ ೨೯, ೨೦೧೯) ಭಾರತದ ಕಾರ್ಮಿಕ ಮುಖಂಡ,[೧] ಸಮಾಜ ಸೇವಕ, ರಾಜಕಾರಣಿ,[೨] ಭಾರತ ಸರಕಾರದಲ್ಲಿ ಮಂತ್ರಿ ಹಾಗೂ ಪತ್ರಿಕೋದ್ಯೋಗಿ[೩] ಆಗಿದ್ದರು. ದಕ್ಷಿಣ ಭಾರತದಲ್ಲಿ ಜನಿಸಿ, ಉತ್ತರ ಭಾರತದಲ್ಲಿ ರಾಜಕೀಯ ಬದುಕು ಸವೆಸಿದ ಜಾರ್ಜ್, ನಿಜ ಅರ್ಥದಲ್ಲಿ ಭಾರತೀಯ ಎನ್ನಿಸಿಕೊಂಡ ನೇತಾರ.

ಬಾಲ್ಯ[ಬದಲಾಯಿಸಿ]

ಜಾರ್ಜ್ ಫರ್ನಾಂಡೀಸ್ ಜೂನ್ ೩, ೧೯೩೦ರಂದು ಮಂಗಳೂರಿನಲ್ಲಿ ಜಾನ್ ಜೋಸೆಫ್ ಫರ್ನಾಂಡಿಸ್ ಮತ್ತು ಅಲೀಸ್ ಮಾರ್ಥಾ ಫರ್ನಾಂಡಿಸ್ ದಂಪತಿಗಳ ಮೊದಲ ಮಗನಾಗಿ ಜನಿಸಿದರು.[೪] ಇಂಗ್ಲೆಂಡ್ ದೊರೆ ೫ ಜಾರ್ಜ್ ಅಭಿಮಾನಿಯಾಗಿದ್ದ ತಾಯಿ ಅಲೀಸ್, ದೊರೆ ಜಾರ್ಜ್ ಜನಿಸಿದ ಜೂನ್ ೩ನೆಯ ತಾರೀಖಿನಂದೇ ಹುಟ್ಟಿದ ಮಗನಿಗೆ, ದೊರೆಯ ನೆನಪಿನಲ್ಲಿ ಜಾರ್ಜ್ ಎಂದೇ ಹೆಸರಿಟ್ಟರು.[೫]ಲಾರೆನ್ಸ್, ಮೈಕೆಲ್, ಪಾಲ್, ಅಲಾಯ್ಷಿಯಸ್ ಮತ್ತು ರಿಚರ್ಡ್, ಹೀಗೆ ೫ ಮಂದಿ ತಮ್ಮಂದಿರಿಗೆ ಅಣ್ಣನಾಗಿ ಬೆಳೆದ ಜಾರ್ಜ್, ಮಂಗಳೂರಿನ ಸೇಂಟ್ ಅಲಾಯ್ಷಿಯಸ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದಿದರು. ಮನೆಯವರ ಒತ್ತಾಯದಿಂದ ಪಾದ್ರಿ-ತರಬೇತಿ ಪಡೆಯಲು, ಜಾರ್ಜ್, ಬೆಂಗಳೂರಿನ ಸೇಂಟ್ ಪೀಟರ್ಸ್ ಸೆಮಿನರಿಗೆ ೧೯೪೬ರಲ್ಲಿ ದಾಖಲಾದರು. ೧೯೪೮ರ ಹೊತ್ತಿಗೆ ಸೆಮಿನರಿನಲ್ಲಿನ ಕಟು ವಾಸ್ತವ, ಯೋಚನಾವಿಧಾನದ ವ್ಯತ್ಯಯದಿಂದ ಕ್ರುದ್ಧರಾದ ಜಾರ್ಜ್, ಸೆಮಿನರಿಗೆ ಶರಣು ಹೇಳಿ ಹೊರನಡೆದರು. ಪುನಃ ತವರು ಮಂಗಳೂರಿನಲ್ಲಿ ಕೆಲಕಾಲ ಬದುಕು ಕಟ್ಟಲು ಪ್ರಯತ್ನಿಸಿ, ಕನಸಿನ ನಗರಿ ಮುಂಬೈಗೆ ತೆರಳಿದರು.[೬]

ಕಾರ್ಮಿಕ ಸಂಘಟನೆಯಲ್ಲಿ[ಬದಲಾಯಿಸಿ]

೫೦ರ ದಶಕದಲ್ಲಿನ ಕಾರ್ಮಿಕರ ಬದುಕಿನ ಅಮಾನವೀಯ ಅಂಶಗಳನ್ನು ಹತ್ತಿರದಿಂದ ಕಂಡ ಜಾರ್ಜ್‍ರಲ್ಲಿ, ದಮನಿತರ ಪರ ದನಿ ಎತ್ತುವ ಪಸೆ ಮನೆಮಾಡಿತ್ತು. ಅಲ್ಲಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ದಿನಗಳಲ್ಲೇ ಮಂಗಳೂರಿನ ಸರಕು ಸಾಗಣೆ ಸಂಸ್ಥೆಗಳಲ್ಲಿ ಮತ್ತು ಹೋಟೆಲುಗಳಲ್ಲಿ ಕೆಲಸ ಮಾಡುತ್ತಿದ್ದ ಅಸಂಘಟಿತ ಶೋಷಿತ ಕಾರ್ಮಿಕರನ್ನು ಒಗ್ಗೂಡಿಸಿ ಅವರ ಪರವಾದ ಹೋರಾಟಗಳಿಗೆ ಧ್ವನಿಯಾದರು. ಮುಂದೆ ಮುಂಬಯಿಗೆ ಬಂದು ಕೆಲಸ ಹುಡುಕುತ್ತಾ ಹಲವಾರು ಬಾರಿ ರಸ್ತೆಗಳ ಬದಿಯಲ್ಲಿ ಮಲಗಿ ಬದುಕು ಸವೆಸಿದರು.
ನಂತರ ಪತ್ರಿಕೆಯೊಂದರಲ್ಲಿ ಪ್ರೂಫ್ ರೀಡರ್ ಆದರು. ಹಲವಾರು ಪತ್ರಿಕೆಗಳಲ್ಲಿ ಸಂಪಾದಕೀಯ ಬರೆದು,ರೈತರ ಮತ್ತು ಕಾರ್ಮಿಕರ ಧ್ವನಿಯಾದರು. ಮುಂದೆ ಪ್ಲಾಸಿಡ್ ಡಿ’ಮೆಲ್ಲೋ, ರಾಮ್ ಮನೋಹರ್ ಲೋಹಿಯಾ ಅವರ ಸಹಚರ್ಯೆಗೆ ಬಂದ ಜಾರ್ಜ್ ಫರ್ನಾಂಡೀಸ್, ಅವರುಗಳ ಕಾರ್ಯದಿಂದ ಪ್ರೇರಿತರಾಗಿ ಹೋಟೆಲ್ ಕಾರ್ಮಿಕರು ಮತ್ತು ಸಣ್ಣ ಸಣ್ಣ ಉದ್ಯಮಗಳಲ್ಲಿ ಕೂಲಿ ಮಾಡುತ್ತಿದ್ದ ಶೋಷಿತ ಕಾರ್ಮಿಕರ ಸಂಘಟನೆಗಾಗಿ ಕೆಲಸ ಮಾಡತೊಡಗಿದರು. ಹೀಗೆ ಐವತ್ತು-ಅರವತ್ತರ ದಶಕದಲ್ಲಿ ಅವರು ಮುಂಬಯಿನ ಪ್ರಭಾವಿ ಕಾರ್ಮಿಕ ನಾಯಕರಾಗಿದ್ದರು.

ರಾಜಕೀಯ ಬದುಕು[ಬದಲಾಯಿಸಿ]

೧೯೬೧ರಿಂದ ೧೯೬೮ರ ಅವಧಿಯಲ್ಲಿ ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ನಿನ ಸದಸ್ಯರಾಗಿ ಸೇವೆ ಸಲ್ಲಿಸಿ, ಜನಪ್ರಿಯರಾದರು. ೧೯೬೭ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿ ಸದಾಶಿವ ಕಣೋಜಿ ಪಾಟೀಲ್ (ಎಸ್.ಕೆ. ಪಾಟೀಲ್) ಅಂತಹ ಜನಪ್ರಿಯ ಕಾಂಗ್ರೆಸ್ ನಾಯಕರನ್ನು ಭಾರೀ ಅಂತರದಿಂದ ಸೋಲಿಸಿದರು. ಕ್ರಮೇಣವಾಗಿ ಮುಂಬಯಿನಲ್ಲಿನ ಕಾರ್ಮಿಕ ಸಂಘಟನೆಗಳಲ್ಲಿ ಜಾರ್ಜ್ ಫರ್ನಾಂಡೀಸ್ ಅವರ ಪ್ರಭಾವ ಕಡಿಮೆಯಾಗತೊಡಗಿದರೂ ಅವರು ರೈಲ್ವೇ ಫೆಡರೆಶನ್ನಿನ ಅಧ್ಯಕ್ಷರಾಗಿ ಭಾರತಾದ್ಯಂತ ರೈಲ್ವೇ ಚಳುವಳಿಯನ್ನು ಸಂಘಟಿಸಿದರು. ಈ ಚಳುವಳಿಯಿಂದ ಇಡೀ ಭಾರತವೇ ಸ್ಥಬ್ಧವೆನಿಸಿತ್ತು.

ಪತ್ರಕರ್ತರಾಗಿ ಮತ್ತು ಬರಹಗಾರರಾಗಿ[ಬದಲಾಯಿಸಿ]

ಜಾರ್ಜ್ ಫರ್ನಾಂಡೀಸ್ ತಮ್ಮ ಓದಿನ ದಿನಗಳಿಂದಲೇ ಬರವಣಿಗೆಗೆ ತೊಡಗಿದ್ದರು. ೧೯೪೯ರಲ್ಲಿ ಅವರು ‘ಕೊಂಕಣಿ ಯುವಕ್’ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಅದೇ ಸಮಯದಲ್ಲಿ ಕನ್ನಡದಲ್ಲಿ ‘ರೈತವಾಣಿ’ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು. 2022 ರಲ್ಲಿ, ಕೆನಡಾ ಮೂಲದ ಸಂಶೋಧಕ ಕ್ರಿಸ್ ಇಮ್ಯಾನುಯೆಲ್ ಡಿಸೋಜಾ ಅವರು 'ಬಂಧ್ ಸಾಮ್ರಾಟ್ - ಟೇಲ್ಸ್ ಆಫ್ ಎಟರ್ನಲ್ ರೆಬೆಲ್' ಎಂಬ ಪುಸ್ತಕವನ್ನು ಪ್ರಕಟಿಸಿದರು, ಜಾರ್ಜ್ ಫೆರ್ನಾಂಡಿಸ್ ಅವರ ತವರು ಪಟ್ಟಣವಾದ ಮಂಗಳೂರಿನಲ್ಲಿ ಟ್ರೇಡ್ ಯೂನಿಯನ್ ಕಾರ್ಯಕರ್ತರಾಗಿ ಆರಂಭಿಕ ಹೋರಾಟಗಳು ಮತ್ತು ಮುಂಬೈನಲ್ಲಿ ಅವರ ಪ್ರಗತಿಯನ್ನು ಹೆಚ್ಚಾಗಿ ಕೇಂದ್ರೀಕರಿಸಿದರು[೭]. ೧೯೫೨-೫೩ರ ಅವಧಿಯಲ್ಲಿ ತನ್ನ ಕಾರ್ಯನಿಲ್ಲಿಸಿದ್ದ ‘Dockman’ ವಾರಪತ್ರಿಕೆಯನ್ನು ಪುನಃಚೇತನಗೊಳಿಸಿದರು. ಅವರು ರಚಿಸಿದ ವೈಚಾರಿಕ ಗ್ರಂಥಗಳೆಂದರೆ What Ails the Socialists (೧೯೭೨), The Kashmir Problem, Railway Strike of ೧೯೭೪, Dignity for All: Essays in Socialism and Democracy (೧೯೯೧), ಮತ್ತು ಅವರ ಆತ್ಮಚರಿತ್ರೆಯಾದ George Fernandes Speaks (೧೯೯೧). ಇದಲ್ಲದೆ ಅವರು ಇಂಗ್ಲಿಷ್ ಮಾಸಿಕ The Other Side ಪತ್ರಿಕೆಯ ಸಂಪಾದಕರೂ ಆಗಿದ್ದರು. ಹಿಂದಿಯಲ್ಲಿ ಮೂಡಿಬರುತ್ತಿದ್ದ ‘ಪ್ರತಿಪಕ್ಷ್’ ಪತ್ರಿಕೆಯ ಸಂಪಾದಕೀಯ ಮಂಡಲಿಯ ಅಧ್ಯಕ್ಷರಾಗಿದ್ದರು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿದ್ದರು. ಮಾನವ ಹಕ್ಕುಗಳ ಹೋರಾಟಗಾರರಾಗಿ Amnesty International, People's Union for Civil Liberties ಸಂಸ್ಥೆಗಳ ಸದಸ್ಯರಾಗಿದ್ದರು.

ತುರ್ತುಪರಿಸ್ಥಿತಿ ವಿರುದ್ಧ[ಬದಲಾಯಿಸಿ]

ಇಂದಿರಾಗಾಂಧಿ ಅವರ ಸರ್ವಾಧಿಕಾರತ್ವದ ವಿರುದ್ಧ ಭೂಗತರಾಗಿ ಬಂಡೆದ್ದವರು ಜಾರ್ಜ್ ಫರ್ನಾಂಡೀಸ್. ಅವರನ್ನು ಇಂದಿರಾಗಾಂಧಿ ಸರ್ಕಾರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಲು ವಾರಂಟ್ ಹೊರಡಿಸಿದಾಗ ತಪ್ಪಿಸಿಕೊಂಡು ಭೂಗತ ಚಟುವಟಿಕೆಗಳಿಗೆ ಮೊದಲು ಮಾಡಿದರು. ಜಾರ್ಜ್ ಕೈಗೆ ಸಿಗದಿದ್ದಾಗ ಪೋಲೀಸರು ಅವರ ಸಹೋದರ ಲಾರೆನ್ಸ್ ಫರ್ನಾಂಡೀಸ್ ಅವರನ್ನು ಬಂಧಿಸಿ ಚಿತ್ರಹಿಂಸೆಗೆ ಒಳಪಡಿಸಿದರು. ಅವರೊಡನೆ ಸಂಪರ್ಕ ಹೊಂದಿದ್ದರೆಂಬ ಕಾರಣದಿಂದ 'ಸಂಸ್ಕಾರ' ಚಿತ್ರದ ಖ್ಯಾತಿಯ ಸ್ನೇಹಲತಾರೆಡ್ಡಿ ಅವರಿಗೆ ಅನಾರೋಗ್ಯವಿದ್ಧಾಗಿಯೂ ಬಂಧಿಸಿ ತೊಂದರೆಗೊಳಪಡಿಸಿದರು.

ಇತ್ತ ಜಾರ್ಜ್ ಫರ್ನಾಂಡೀಸ್ ಕೆಲವೊಂದು ಸರ್ಕಾರಿ ಶೌಚಾಲಯಗಳಲ್ಲಿ ಮತ್ತು ಇಂದಿರಾ ಗಾಂಧಿಯವರು ಭಾಷಣ ಮಾಡುತ್ತಿದ್ದ ಸ್ಥಳಗಳ ಸುತ್ತಮುತ್ತ ಸಾವು ನೋವುಗಳು ಸಂಭವಿಸದ ರೀತಿಯಲ್ಲಿ ಡೈನಮೈಟ್ ಸಿಡಿಸಿ ಗಾಬರಿ ಹುಟ್ಟಿಸುವುದರ ಮೂಲಕ ಇಂದಿರಾಗಾಂಧಿ ಅವರ ತುರ್ತುಪರಿಸ್ಥಿತಿಯನ್ನು ವಿರೋಧಿಸುವ ಯೋಜನೆಗಳನ್ನು ನೇಯ್ದಿದ್ದರು. [೮] ಇಂದಿರಾ ಗಾಂಧಿ ಭಾಷಣ ಮಾಡಬೇಕಿದ್ದ ವಾರಣಾಸಿಯಲ್ಲಿ ವೇದಿಕೆಯನ್ನು ಕಾರ್ಯಕ್ರಮಕ್ಕೆ ನಾಲ್ಕು ಗಂಟೆಗಳ ಮುಂಚೆ ಸ್ಫೋಟಿಸುವ ಪ್ರಯತ್ನಗಳು ನಡೆದವು. ಇದು ಬರೋಡ ಡೈನಮೈಟ್ ಪ್ರಕರಣ ಎಂದು ಪ್ರಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸೆರೆಸಿಕ್ಕ ಜಾರ್ಜ್ ಫರ್ನಾಂಡಿಸ್ ಅವರನ್ನು ಇಂದಿರಾಗಾಂಧಿ ಸರ್ಕಾರ ಖೈದಿಯಾಗಿ ಜೈಲಿನಲ್ಲಿರಿಸಿತು.[೯]

ಜನತಾ ಸರ್ಕಾರದಲ್ಲಿ ಕೇಂದ್ರ ಕೈಗಾರಿಕಾ ಮಂತ್ರಿ[ಬದಲಾಯಿಸಿ]

ಮುಂದೆ ಚುನಾವಣೆಗಳು ಘೋಷಿತವಾದಾಗ ಜೈಲಿನಿಂದಲೇ ಚುನಾವಣಾ ನಾಮಪತ್ರ ಸಲ್ಲಿಸಿ ಒಮ್ಮೆ ಕೂಡಾ ಚುನಾವಣಾ ಪ್ರಚಾರ ಮಾಡುವ ಅವಕಾಶ ಸಿಗದಿದ್ದಾಗಿಯೂ ಪ್ರಚಂಡವಾದ ಜಯ ಸಾಧಿಸಿದರು. ಮುರಾರ್ಜಿ ದೇಸಾಯಿಯವರ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಗಳಾದ ಜಾರ್ಜ್ ಫರ್ನಾಂಡೀಸ್, ಬಹುರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಸಮರ ಸಾರಿದರು. ಭಾರತದ ಸಮಾಜವಾದಿ ಹಿನ್ನೆಲೆಯ ಕಾನೂನುಗಳನ್ನು ಪಾಲಿಸದ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಹಿಂದಿನ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದನ್ನು ವಿರೋಧಿಸುತ್ತಲೇ ಬಂದಿದ್ದ ಜಾರ್ಜ್, ತನಿಖೆ ಮತ್ತು [೧೦]

ಐ.ಬಿ.ಎಂ[ಬದಲಾಯಿಸಿ]

ವಿಕ್ರಮ್ ಸಾರಾಭಾಯಿ ಸಮಿತಿ ನೀಡಿದ ವರದಿಯ ಅನ್ವಯ, ಐ.ಬಿ.ಎಂ ಸಂಸ್ಥೆ ಸರ್ಕಾರಿ ಇಲಾಖೆಗಳಿಗೆ ಹಳೆಯ ಕಂಪ್ಯೂಟರ್‍ಗಳನ್ನು ದುಬಾರಿ ಬೆಲೆಗೆ ಬಾಡಿಗೆಗೆ ನೀಡುತ್ತಿದೆ ಎಂಬುದನ್ನು ಕಂಡೂ ಹಿಡಿದ ಜಾರ್ಜ್, ಕಾನೂನು ಸಮರ ಶುರುವಿಟ್ಟರು. ವಿದೇಶಿ ವಿನಿಮಯದ ಕಾನೂನಿಗೆ ವಿರುದ್ದವಾಗಿ ನಡೆಯುತ್ತಿದೆ ಎಂದು ಆರೋಪಿಸಿದ ಕಾರಣ ೧೯೭೮ ಜೂನ್ ನಲ್ಲಿ ಐ.ಬಿ.ಎಂ ಭಾರತದಲ್ಲಿ ತನ್ನ ವಹಿವಾಟು ನಿಲ್ಲಿಸಿತು.[೧೧]೧೯೮೦ರಲ್ಲಿ ಜನತಾ ಸರ್ಕಾರ ಪತನವಾದ ನಂತರ ಐ.ಬಿ.ಎಂ ಮತ್ತೆ ಉಪಕರಣ ರಫ್ತು ಶುರುಮಾಡಿತು.

ಕೋಕಾಕೋಲಾ[ಬದಲಾಯಿಸಿ]

ಕೋಕಾಕೋಲಾ ಕಂಪನಿಯ ವಿರುದ್ಧ ಕೂಡ ೧೯೭೪ರಲ್ಲಿ ಶುರುವಾದ ವಿದೇಶಿ ವಿನಿಮಯ ಉಲ್ಲಂಘನೆಯ ಆರೋಪದ ಬಗ್ಗೆ ಕಾನೂನು ಸಮರ ಸಾರಿದ ಜಾರ್ಜ್, ಕೋಕಾಕೋಲಾ ಕಂಪನಿ ಶೇ೪೦ರಷ್ಟು ಷೇರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇಡತಕ್ಕದ್ದು ಎಂಬ ಕಾನೂನಿನಂತೆ ನಡೆಯಲು ಸೂಚಿಸಿದರು. ಇದಕ್ಕೆ ಒಪ್ಪದ ಕೋಕಾಕೋಲಾ, ಭಾರತದಲ್ಲಿ ತನ್ನ ವ್ಯಾಪಾರವನ್ನು ನಿಲ್ಲಿಸಿತು.[೧೨] ಸ್ವದೇಶಿ ತಯಾರಿಕೆಯ ೭೭ ಎಂಬ ಪೇಯವನ್ನು ಸರ್ಕಾರಿ ಸಂಸ್ಥೆ ಮಾಡರ್ನ್ ಫುಡ್ ಇಂಡಸ್ಟ್ರಿಯ ಅಡಿಯಲ್ಲಿ ಮಾರಾಟ ಮಾಡಲು ಯೋಜಿಸಿದ ಜಾರ್ಜ್ ನಡೆ ಫಲ ಕೊಡಲಿಲ್ಲ. ಥಮ್ಸ್ ಅಪ್ ಮುಂತಾದ ಪೇಯಗಳ ಎದುರು ನಷ್ಟ ಅನುಭವಿಸಿದ ೭೭, ೩ ವರ್ಷಗಳ ನಂತರ ಉತ್ಪಾದನೆ ನಿಲ್ಲಿಸಿತು.[೧೩]೧೯೯೩ರಲ್ಲಿ ಕೋಕಾಕೋಲಾ ಮತ್ತೆ ಭಾರತದಲ್ಲಿ ವ್ಯಾಪಾರ ಶುರು ಮಾಡಿತು.

ಜನತಾ ಸರ್ಕಾರ ಪತನ[ಬದಲಾಯಿಸಿ]

೧೯೭೮ರಲ್ಲಿ ಮಧು ಲಿಮಯೆ ಆರ್.ಎಸ್.ಎಸ್ ಸದಸ್ಯತ್ವ ಹೊಂದಿದ ಜನತಾ ಪರಿವಾರದ ಸದಸ್ಯರ ವಿರುದ್ಧ ಮಧು ಲಿಮಯೆ ಮಂಡಿಸಿದ ಅವಿಶ್ವಾಸ ಮಸೂದೆಯಲ್ಲಿ ಭಾರತೀಯ ಜನಸಂಘದ ನಿಲುವು ವಿರೋಧಿಸಿದ ಜಾರ್ಜ್, ಮೊರಾರ್ಜಿ ಸರ್ಕಾರ ಪತನವಾದಾಗ, ಜಾರ್ಜ ರಾಜೀನಾಮೆ ಇತ್ತರು. ಮೊರಾರ್ಜಿ ವಿರುದ್ಧ ವಾದ ಮಂಡಿಸಿದ ಜಾರ್ಜ್, ಚರಣ್ ಸಿಂಗ್‍ರಿಗೆ ಬೆಂಬಲವಿತ್ತು, ಟೀಕೆಗೆ ಒಳಗಾದರು.[೧೪]೧೯೮೦ರಲ್ಲಿ ಮುಜಫ್ಫರಪುರದಿಂದ ಸಂಸತ್ತಿಗೆ ಆಯ್ಕೆಯಾದ ಜಾರ್ಜ್, ೧೯೮೪ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆಗೆ ನಿಂತು, ಇಂದಿರಾಗಾಂಧಿ ಹತ್ಯೆಯ ಬೃಹತ್ ಅನುಕಂಪದ ಅಲೆಯ ಕಾರಣ ೪೦,೦೦೦ ಮತಗಳಿಂದ ಸೋತರು.[೧೫]

ಸಂಯುಕ್ತ ರಂಗ ಸರ್ಕಾರದ ರೈಲ್ವೇ ಮಂತ್ರಿ[ಬದಲಾಯಿಸಿ]

೧೯೮೯ರ ಚುನಾವಣೆಯಲ್ಲಿ ಮರಳಿ ಮುಜಫ್ಫರಪುರದಿಂದ ಸಂಸತ್ತಿಗೆ ಆಯ್ಕೆಯಾದ ಜಾರ್ಜ್ ರೈಲ್ವೇ ಮಂತ್ರಿಯಾದಾಗ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದಾ ಕೊಂಕಣ ರೈಲ್ವೇಗೆ ಅಸ್ತಿಭಾರ ಹಾಕಿದರು.

ಕೊಂಕಣ ರೈಲ್ವೇ[ಬದಲಾಯಿಸಿ]

೩೦೦ ಕೋಟಿಗಳಿಗಿಂತ ಹೆಚ್ಚಿಲ್ಲದ ರೈಲ್ವೇ ಕಾಮಗಾರಿಯ ಸಮಯದಲ್ಲಿ, ೧೬೦೦ ಕೋಟಿ ವೆಚ್ಚದ ಕೊಂಕಣ ರೈಲ್ವೇ ಯೋಜನೆ, ಜಗತ್ತಿನಲ್ಲಿಯೇ ಅತಿ ಮಹತ್ವಾಕಾಂಕ್ಷಿಯಾದುದಾಗಿತ್ತು.ರೈಲ್ವೇ ಮಂಡಲಿಯ ಸದಸ್ಯರಾಗಿದ್ದ ಈ. ಶ್ರೀಧರನ್ ರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಜಾರ್ಜ್, ಹಿಂದೆಂದೂ ಕಂಡರಿಯದಂತಹ ನೀಲನಕ್ಷೆ ರಚಿಸಿದರು. ಸರ್ಕಾರಗಳು ಉರುಳಿದಾಗ, ಕಾಮಗಾರಿ ಕುಂಠಿತವಾಗುವುದನ್ನು ಅರಿತಿದ್ದ ಜಾರ್ಜ್, ಕೊಂಕಣ ರೈಲ್ವೇಗಾಗಿಯೇ ಬೇರೆ ನಿಗಮವನ್ನು ತೆರೆದು, ಅದಕ್ಕೆ ಶ್ರೀಧರನ್ ರನ್ನೇ ಮುಖ್ಯಸ್ಥರನ್ನಾಗಿಸಿದರು. ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಒಂದಾಗಿಸಿ, ಅರ್ಥ ಸಚಿವ ಮಧು ದಂಡವತೆ (ಮಹಾರಾಷ್ಟ್ರದವರು), ಕರ್ನಾಟಕದ ಕೊಂಕಣಿಗರಾದ ಖುದ್ದು ತಾವು ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಹೀಗೆ ಸಮಮನೋಬಲದ ಮಂದಿಯನ್ನು ಒಂದಾಗಿಸಿ, ಕೊಂಕಣ್ ರೈಲ್ವೆ ನಿಗಮವನ್ನು ರಚಿಸಿದರು.
[೧೬] ಅಸ್ತಿತ್ವಕ್ಕೆ ಬಂತು.
೭೬೦ ಕಿ.ಮೀ ಉದ್ದ, ೨೦೦೦ ಸೇತುವೆಗಳು ಹೀಗೆ ಹಲವು ಪ್ರಥಮಗಳಿಗೆ ಕೊಂಕಣ ರೈಲ್ವೆ ಸಾಕ್ಷಿಯಾಯಿತು.ಪನವೇಲ್ ನದಿಯ ಮೇಲೆ ಕುತುಬ್ ಮಿನಾರಿನಷ್ಟು ಉದ್ದದ ಸೇತುವೆಯನ್ನು ನಿರ್ಮಿಸಿದ ಹೆಮ್ಮೆಗೆ ಜಾರ್ಜ್ ಕಾರಣೀಭೂತರಾದರು. ೮ ವರ್ಷಗಳ ಯೋಜನೆಯನ್ನು ೭ ವರ್ಷಗಳಲ್ಲಿಯೇ ಮುಗಿಸಿದ ಹೆಮ್ಮೆ ಶ್ರೀಧರನ್ ರದ್ದು.[೧೭]ಕೊಂಕಣ್ ರೈಲು ಯೋಜನೆಯಿಂದ ಮುಂಬೈ, ಮಂಗಳೂರು ಮತ್ತು ಕಾರವಾರ ಬಂದರುಗಳು ನೇರಸಂಪರ್ಕಕ್ಕೆ ಬಂದು, ವಾಣಿಜ್ಯ ವಹಿವಾಟು ಸುಗಮವಾಗಿ, ಭಾರತದ ಅರ್ಥವ್ಯವಸ್ಥೆಗೆ ಇಂಬಾಗಿದೆ.[೧೮]

೯೦ರ ದಶಕ[ಬದಲಾಯಿಸಿ]

ವಿ.ಪಿ.ಸಿಂಗ್ ಸರ್ಕಾರ ರಾಮಮಂದಿರ ಗಲಭೆ ಮತ್ತು ನ್ಯಾ.ಬಿ.ಪಿ.ಮಂಡಲ್ ಸಮಿತಿಯ ಮೀಸಲಾತಿ ಮಸೂದೆಯ ಕಾರಣ ಉರುಳಿದಾಗ ಜಾರ್ಜ್, ವಿ.ಪಿ.ಸಿಂಗ್ ರೊಂದಿಗೆ ಜನತಾದಳದಲ್ಲಿ ಉಳಿದರು.೧೯೯೪ರವರೆಗೆ ಜನತಾದಳದಲ್ಲಿಯೇ ಉಳಿದ ಜಾರ್ಜ್, ತದ್ನಂತರ ಲಾಲೂ ಪ್ರಸಾದ್ ಯಾದವ್ ವಿರುದ್ಧ ತೊಡೆತಟ್ಟಿ, ೧೯೯೪ರಲ್ಲಿ ಜಾರ್ಜ್ ನಿತೀಶ್ ಕುಮಾರ್ ಜೊತೆಗೂಡಿ ಸಮತಾ ಪಕ್ಷ ರಚಿಸಿದರು. ಜೀವನ ಪೂರ್ತಿ ವಿರೋಧಿಸುತ್ತಿದ್ದ ಆರ್.ಎಸ್.ಎಸ್ ಮೂಲದ ಭಾರತೀಯ ಜನತಾ ಪಕ್ಷದ ಜೊತೆ ರಾಜಿ ಮಾಡಿಕೊಂಡ ಜಾರ್ಜ್, ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ, ಸಮಾಜವಾದಿ ಸಿದ್ಧಾಂತಕ್ಕೆ ತಿಲಾಂಜಲಿ ಇತ್ತರು ಎಂಬ ಟೀಕೆ ಎದುರಿಸಿದರು.

ಸಮತಾ ಪಕ್ಷ[ಬದಲಾಯಿಸಿ]

ಲಾಲೂ ಪ್ರಸಾದ್ ಯಾದವ್ ಭ್ರಷ್ಟತೆಯ ಆರೋಪದಡಿ ಎಂದು ಮೇವು ಹಗರಣದಲ್ಲಿ ಸಿಲುಕಿಕೊಂಡದ್ದು ಮತ್ತು ಬಿಹಾರದಲ್ಲಿ ಜನತಾದಳದ ಹಲವು ಬಣಗಳು ಭಿನ್ನಮತದಲ್ಲಿ ತೊಡಗಿಕೊಂಡಾಗ, ಜಾರ್ಜ್ ಕ್ರುದ್ಧರಾಗಿ, ನಿತೀಶ್ ಕುಮಾರ್ ರೊಡನೆ ಸೇರಿ ಸಮತಾ ಪಕ್ಷವನ್ನು ಶುರು ಮಾಡಿದರು.[೧೯] ಜಾರ್ಜ್ ರ ಒತ್ತಾಸೆಯ ಫಲವಾಗಿ ಎನ್.ಡಿ.ಎ ಸಂಪುಟ ಸೇರಿದ ನಿತೀಶ್, ತದ್ನಂತರ ಜಾರ್ಜ್‍ರಿಗೇ ಲೋಕಸಭೆಯ ಟಿಕೆಟ್ ನೀಡಲು ನಿರಾಕರಿಸಿದ್ದು ರಾಜಕೀಯದ ವಿರಸದ ಪರಮಾವಧಿ.

ಮೊದಲ ಎನ್.ಡಿ.ಎ ಸರ್ಕಾರ[ಬದಲಾಯಿಸಿ]

ಜಾರ್ಜ್ ೧೯೯೮ರ ವಾಜಪೇಯಿ ಸಂಪುಟದಲ್ಲಿ ರಕ್ಷಣಾ ಸಚಿವರಾದಾಗ, ಅಣ್ವಸ್ತ್ರ ಸಿಡಿಸಿದ ಭಾರತದ ಅಣು ನೀತಿಗೆ ಬಲ ನೀಡಿದರು.

ಪೋಖ್ರಾನ್ ಅಣು ಸ್ಪೋಟ[ಬದಲಾಯಿಸಿ]

೧೯೯೮ ಮೇ ೧೩ರಂದು ಭಾರತ ಪೋಖ್ರಾನ್ ನಲ್ಲಿ ಅಣು ಅಸ್ತ್ರಗಳನ್ನು ಪರೀಕ್ಷಿಸಿತು.ಜೀವಮಾನ್ ಪೂರಾ ಅಣ್ವಸ್ತ್ರಗಳ ಪ್ರಬಲ ಟೀಕಾಕಾರರಾಗಿದ್ದ ಜಾರ್ಜ್, ಭಾರತದ ರಕ್ಷಣಾ ಸಚಿವರಾಗಿ, ಅಣ್ವಸ್ತ್ರ ಪರೀಕ್ಷೆಯನ್ನು ಸಮರ್ಥನೆ ಮಾಡಿಕೊಳ್ಳಬೇಕಾಯಿತು.೪೫ ಕಿಲೋ ಟೋನ್ ಗಳಿಗಿಂತಲೂ ಕಡಿಮೆ ಉತ್ಪನ್ನ ಇದ್ದ ಈ[೨೦] ಪರಮಾಣು ಸಿಡಿತಗಳನ್ನು ಏಷ್ಯಾದ ಯಾವುದೇ ಕಂಪನಮಾಪಕಗಳು ಗುರುತಿಸಲಿಲ್ಲ.[೨೧][೨೨] ಅದ್ಯಾಗೂ ಜಾರ್ಜ್, ಭಾರತದ ಬದಲಾದ ಅಣ್ವಸ್ತ್ರ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡರು.

ಕಾರ್ಗಿಲ್ ಯುದ್ಧ[ಬದಲಾಯಿಸಿ]

ಕಾರ್ಗಿಲ್ ಯುದ್ಧದ ಹೋರಾಟ ೧೯೯೯ ಏರ್ಪಟ್ಟಿತು. [೨೩]ಪಾಕಿಸ್ತಾನ ಭಾರತದ ಸೇನಾನೆಲೆಗಳನ್ನು ಚಳಿಗಾಲದಲ್ಲಿ, ಅತಿಕ್ರಮವಾಗಿ ಆಕ್ರಮಿಸಿ, ಡ್ರಾಸ್, ಬಟಾಲಿಕ್, ಕಾರ್ಗಿಲ್ ಗಳನ್ನು ಭಾರತದ ನಿಯಂತ್ರಣದಿಂದ ತನ್ನ ಸುಪರ್ದಿಗೆ ತೆಗೆದುಕೊಂಡಿತು. ಪಾಕಿಸ್ತಾನವು, ತನ್ನ ಸೇನೆ ಅತಿಕ್ರಮಣ ಮಾಡಿಲ್ಲವೆಂದೂ, ತನಗೂ, ಈ ಅತಿಕ್ರಮಣಕ್ಕೂ ಸಂಬಂಧ ಇಲ್ಲವೆಂದೇ ವಾದಿಸಿತು. ಪಾಕ್ ಸೇನಾಪಡೆಯ ಯೋಧರ ಶವಗಳನ್ನು ಪಡೆಯಲೂ ಕೂಡಾ ನಿರಾಕರಿಸಿದ ಪಾಕಿಸ್ತಾನದ ವಿರುದ್ಧ, ಸಮರ ತೀವ್ರವಾಗುವ ಲಕ್ಷಣ ಕಂಡಾಗ ರಕ್ಷಣಾ ಸಚಿವರಾಗಿದ್ದ ಜಾರ್ಜ್, ಎರಡು ಪ್ರಮುಖ ನಿರ್ಣಯ ಕೈಗೊಂಡರು.

  1. ಯಾವುದೇ ಕಾರಣಕ್ಕೂ, ಅಂತರ್ರಾಷ್ಟ್ರೀಯ ಗಡಿಯನ್ನು ದಾಟಿ, ಭಾರತದ ಪಡೆಗಳು ಪಾಕಿಸ್ತಾನದ ನೆಲದ ಮೇಲೆ ಹೋಗವು
  2. ಸಂಪೂರ್ಣವಾಗಿ ಭಾರತದ ಸೇನಾನೆಲೆಗಳನ್ನು ಹಿಂಪಡೆವವರೆಗೆ, ಹಿಮ್ಮೆಟ್ಟೆವು

ಗಡಿ ಉಲ್ಲಂಘನೆ ಮಾಡದ ಕಾರಣ ಜಾರ್ಜ್, ದೇಶದ ಹೊರಗಡೆ ಪ್ರಶಂಸೆಗೆ ಒಳಗಾದರೂ, ದೇಶದ ಒಳಗೆ ತೀವ್ರತಮ ಟೀಕೆಗೆ ಗುರಿಯಾದರು[೨೪] ಭಾರತೀಯ ಸೇನೆಯು ಭಾರೀ ಸಾವು-ನೋವುಗಳ ಮಧ್ಯೆ ಮತ್ತು ಆಂತರಿಕ ಟೀಕೆಗಳನ್ನು ಎದುರಿಸತೊಡಗಿದಾಗ, ಜಾರ್ಜ್ ಖುದ್ದು ಸೇನೆಯ ಬೆಂಬಲಕ್ಕೆ ನಿಂತರು. ಈ ಮಧ್ಯೆ, ಭಾರತೀಯ ವಾಯುಸೇನೆಯನ್ನು ಬಳಸಲು ಪ್ರಧಾನಿ ವಾಜಪೇಯಿ ಹಿಂಜರಿದರೂ, ಜಾರ್ಜ್‍ರ ಒತ್ತಾಸೆಯ ಕಾರಣ ನಂತರ ಒಪ್ಪಿಗೆ ಇತ್ತರು,[೨೫] ಭಾರತೀಯ ಸೇನೆ ಕಾರ್ಗಿಲ್ ಯುದ್ಧವೆಂದೇ ಖ್ಯಾತವಾದ, ಈ ಹೋರಾಟದಲ್ಲಿ ಪಾಕಿಸ್ತಾನವನ್ನು ಮಣಿಸಿತು. ಜುಲೈ ೩ ೧೯೯೯ರಂದು ಅಮೇರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ರ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ್ದ ಪ್ರಧಾನಿ ನವಾಜ಼್ ಶರೀಫ್, ಕಾರ್ಗಿಲ್ ದಾಳಿಯು ಪಾಕಿಸ್ತಾನದ ತಪ್ಪು ಎಂಬುದಾಗಿಯೂ, ತಮ್ಮ ಸೇನೆ ಹಿಮ್ಮೆಟ್ಟೆದುದನ್ನು ಒಪ್ಪಿಕೊಂಡು ಸಂಧಾನ ಒಪ್ಪಂದಕ್ಕೆ ಭಾರತದ ಪ್ರಧಾನಿ ವಾಜಪೇಯಿರೊಂದಿಗೆ ಸಹಿ ಹಾಕಿದರು.

ಚೀನಾದೊಂದಿಗೆ ಸಂಬಂಧ[ಬದಲಾಯಿಸಿ]

೧೯೯೮ರಲ್ಲಿ ಜಾರ್ಜ್, ಪತ್ರಿಕಾಗೋಷ್ಠಿಯೊಂದರಲ್ಲಿ ಚೀನಾ ಭಾರತದ ಮೊದಲ ಶತ್ರು ಎಂಬ ಹೇಳಿಕೆ ನೀಡಿದರು.[೨೬]ಜಾರ್ಜ್, ಯುದ್ಧದಾಹಿ ಎಂದೂ, ಚೀನಾದ ಜೊತೆಗಿನ ಸಂಬಂಧಕ್ಕೆ ಕಲ್ಲು ಹಾಕಿದರು ಎಂದು ಟೀಕೆಗೆ ಒಳಗಾದರು. ತಮ್ಮ ನಿಲುವಿನಿಂದ ಹಿಂದೆ ಸರಿಯದ ಜಾರ್ಜ್, ಚೀನಾ ದೇಶ ಭಾರತದ ವಿರುದ್ಧ ನಡೆಸುತ್ತಿರುವ ವ್ಯವಹಾರಗಳನ್ನು ಧೈರ್ಯದಿಂದ ಉದಾಹರಣೆಗಳ ಸಹಿತ ಎತ್ತಿಹಿಡಿದರು. ಪಾಕಿಸ್ತಾನಕ್ಕೆ ಅಣ್ವಸ್ತ್ರ ವಿತರಣೆ, ಮಲಕ್ಕಾ, ಶ್ರೀಲಂಕಾದ ಹಂಬಂಟೋಟಾ, ಪಾಕಿಸ್ತಾನದ ಗ್ವದಾರ್ ಹೀಗೆ ಭಾರತದ ಸುತ್ತ ನೌಕಾನೆಲೆಗಳನ್ನು ಸ್ಥಾಪಿಸಿ ಭಾರತವನ್ನು ಹಣಿಯುವ ತಂತ್ರ, ಹೀಗೆ ಜಾರ್ಜ್, ಭಾರತ-ಚೀನಾ ಸಂಬಂಧದ ಕಠಿಣ ಪರಿಸ್ಥಿತಿಯನ್ನು ವಿಶ್ವದ ಹಲವು ವೇದಿಕೆಗಳಲ್ಲಿ ವಿವರಿಸಿದರು.

ಅವರನ್ನು ವಿಚಾರಣೆಗೆ ಗುಣಪಡಿಸಿದ ಆಯೋಗಗಳೆಲ್ಲವೂ ಅವರನ್ನು ನಿರ್ದೋಷಿಯೆಂದು ತೀರ್ಪು ನೀಡಿದವು.[೨೭]

ಹಗರಣಗಳ ಆರೋಪ ಮತ್ತು ದೋಷಮುಕ್ತಿ[ಬದಲಾಯಿಸಿ]

ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷಣ್, ರಕ್ಷಣಾ ಇಲಾಖೆಯ ಗುತ್ತಿಗೆ ಕೊಡಿಸುವುದಾಗಿ ಲಂಚ ಪಡೆದ ಟಿವಿ ವರದಿಯ ಫಲಶ್ರುತಿ ರಕ್ಷಣಾ ಸಚಿವ ಜಾರ್ಜ್‍ರಿಗೆ ತಗುಲಿತು. ವೈಯಕ್ತಿಕವಾಗಿ ಜಾರ್ಜ್‍ರ ಮೇಲೆ ಆರೋಪವಿಲ್ಲದೆಯೇ ಇದ್ದರೂ, ಘಟನೆ ನಡೆದುದು ಜಾರ್ಜರ ಸಹವರ್ತಿ ಜಯಾ ಜೇಟ್ಲಿರ ಮನೆಯಲ್ಲಿ ಆದ್ದರಿಂದ, ಜಾರ್ಜ್ ಕೂಡಾ ಹೊಣೆ ಹೊರುವಂತೆ ಆಯಿತು.
[೨೮] ಕಾರ್ಗಿಲ್ ಯೋಧರಿಗೆ ಶವಪೆಟ್ಟಿಗೆಯನ್ನು ಅಮೇರಿಕದ ಕಂಪನಿಗಳಿಂದ ಬಹು ಹೆಚ್ಚಿನ ವೆಚ್ಚ ನೀಡಿ ಖರೀದಿ ಮಾಡಿದ ಆರೋಪ ಜಾರ್ಜ್ ಮೇಲೆ ಬಂದಿತು. ಆರೋಪ ಬಂದ ಕೂಡಲೆಯೇ, ನೈತಿಕ ಹೊಣೆ ಹೊತ್ತು ಜಾರ್ಜ್ ರಾಜೀನಾಮೆ ಇತ್ತರು. ತಮ್ಮ ಅಧಿಕಾರದ ಅವಧಿಗೂ ಮುನ್ನ ಖರೀದಿಗೆ ಒಪ್ಪಿಗೆ ನೀಡಲಾಗಿತ್ತು ಎಂಬ ಜಾರ್ಜ್‍ರ ಸಮರ್ಥನೆಯನ್ನು ಮಾನ್ಯ ಮಾಡದ ಸಿಎಜಿ ವರದಿಯನ್ನು ವಿರೋಧ ಪಕ್ಷಗಳು ಕೂಗಿ ಕೂಗಿ ಹೇಳಿ, ಜಾರ್ಜ್ ಭ್ರಷ್ಟರು ಎಂದು ಸಮರ ಸಾರಿದವು.ಉನ್ನತ ಮಟ್ಟದ ತನಿಖೆಯು ಜಾರ್ಜ್ ನಿರಪರಾಧಿ ಎಂದು ವರದಿ ನೀಡಿದ ನಂತರ, ಜಾರ್ಜ್ ಮತ್ತೆ ರಕ್ಷಣಾ ಸಚಿವರಾದರು. ಆದರೆ ವಿರೋಧ ಪಕ್ಷಗಳು, ಜಾರ್ಜ್ ಸದನದಲ್ಲಿ ಉತ್ತರ ನೀಡುವಾಗ, ಹೊರನಡೆವ, ರಕ್ಷಣಾ ಖಾತೆಯ ಬಗ್ಗೆ ಪ್ರಶ್ನೆಯನ್ನೇ ಕೇಳದೆ ಜಾರ್ಜ್‍ರನ್ನು ಇಕ್ಕಟ್ಟಿಗೆ ಸಿಲುಕಿಸಿ ಮುಜುಗರ ಉಂಟು ಮಾಡುವ ತಂತ್ರ ಅನುಸರಿಸಿದವು. ಜಾರ್ಜ್, ಈ ಎಲ್ಲಾ ಅವಮಾನಗಳನ್ನು ಸಹಿಸಿಯೂ, ತಮ್ಮ ಖಾತೆಯನ್ನು ನಿರ್ವಹಿಸಿದರು. ಜಾರ್ಜ್ ಹೋರಾಟದ ನಿಲುವನ್ನು ಎತ್ತಿ ಹಿಡಿಯುತ್ತಾ, ಸೈದ್ಧಾಂತಿಕ ಕಾರಣಗಳಿಗಾಗಿ ಎಲ್.ಟಿ.ಟಿ.ಇ, ನಾಗಾ ಬಂಡುಕೋರರು ಹೀಗೆ ಹಲವು ಬಣಗಳ ಪರ ನಿಂತುದು ವೈರುದ್ಧದ ವಿಷಯವಾಗಿತ್ತು.[೨೯]ತಮ್ಮ ಪಟ್ಟು ಸಡಲಿಸದ ಜಾರ್ಜ್, ಶ್ರೀಲಂಕಾ ಸೇರಿದಂತೆ ನೆರೆರಾಷ್ಟ್ರಗಳ ಕೆಂಗಣ್ಣಿಗೆ ಜೀವನಪೂರ್ತಿ ಗುರಿಯಾಗಿದ್ದರು.

೨೦೦೪ ನಂತರ[ಬದಲಾಯಿಸಿ]

ಎನ್.ಡಿ.ಎ ಸರ್ಕಾರದ ಪತನದ ನಂತರ ಜಾರ್ಜ್, ಸಂಸದರಾಗಿ ಮುಂದುವರೆದರು. ೨೦೦೫ರಲ್ಲಿ ನಿತೀಶ್

ನಿಲುವುಗಳು[ಬದಲಾಯಿಸಿ]

ಜೀವನದ ಆರಂಭದಿಂದಲೂ ಸಮಾಜವಾದಿಯಾದ ಜಾರ್ಜ್, ಕಮ್ಯೂನಿಸ್ಟ್ ತತ್ವಕ್ಕೆ ಹೊಂದಿಕೊಂಡು, ಕಾರ್ಮಿಕ ಮತ್ತು ಶೋಷಿತರ ಪರ ದನಿಯಾದರು. ಆರ್.ಎಸ್.ಎಸ್ ಮತ್ತು ಜನಸಂಘವನ್ನು ವಿರೋಧಿಸಿ, ನಂತರ ೧೯೭೭ರ ಮೊರಾರ್ಜಿ ಸಂಪುಟದಲ್ಲಿ, ಜನಸಂಘದ ಜೊತೆ ಹೊಂದಾಣಿಕೆ ಮಾಡಿಕೊಂಡರು. ತತ್ವ-ಸಿದ್ಧಾಂತಕ್ಕೆ ಬದ್ಧರಾಗಿ, ಮೊರಾರ್ಜಿ ಸರ್ಕಾರದ ಪತನದ ಪರ ನಿಣ್ತು ಜನಸಂಘದ ವಿರೋಧಿಯಾದ ಜಾರ್ಜ್, ೧೯೯೬ರ ಹೊತ್ತಿಗೆ ರಾಜಕೀಯ ಉಳಿವಿಗಾಗಿ, ಜನಸಂಘದ ಹೊಸ ಅವತಾರ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡರು.[೩೦] ಬಹುರಾಷ್ಟ್ರೀಯ ಕಂಪನಿಗಳನ್ನು ಲಾಭಕೋರರು ಎಂದು ಟೀಕಿಸುತ್ತಿದ್ದ ಜಾರ್ಜ್, ೧೯೯೧ರ ಆರ್ಥಿಕ ಉದಾರೀಕರಣವನ್ನು ಕಟುವಾಗಿ ಟೀಕಿಸಿದ್ದರು. ಮಂಗಳೂರಿನಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರ ಕುರಿತಾದ ‘ಬಂಧ್ ಸಾಮ್ರಾಟ್- ಟೇಲ್ಸ್ ಆಫ್ ಎಟರ್ನಲ್ ರೆಬೆಲ್’[೩೧] ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಭಾರತದ ಖ್ಯಾತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಅವರು (ಜಾರ್ಜ್ ಫರ್ನಾಂಡಿಸ್ ಕುರಿತು)- “ನೀವು ಅವರನ್ನು ದ್ವೇಷಿಸಬಹುದು ಅಥವಾ ಪ್ರೀತಿಸಬಹುದು; ಆದರೆ ನೀವು ಜಾರ್ಜ್ರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ."ಎಂದು ಹೇಳಿದರು[೩೨]. ೧೯೯೬ರ ಹೊತ್ತಿಗೆ, ಅಧಿಕಾರ ಹಿಡಿವ ಸಲುವಾಗಿ, ಜಾರ್ಜ್ ಬಿಜೆಪಿಯ ನವ-ಉದಾರೀಕರಣದ ಭಾಗವಾಗಿ ಹೋದರು. ಜಾರ್ಜ್, ವಾಜಪೇಯಿ ಸಂಪುಟದ ರಕ್ಷಣೆಗಾಗಿ, ೧೯೯೮ರಲ್ಲಿ ಜಯಲಲಿತಾ ೧೯೯೯-೨೦೦೪ ಅವಧಿಯಲ್ಲಿ ಮೈತ್ರಿಯಲ್ಲಿ ಒಡಕು ಉಂಟಾದಾಗ ಬಾಳ್ ಠಾಕ್ರೆ, ಮಮತಾ ಬ್ಯಾನರ್ಜಿ, ಅಜಿತ್ ಸಿಂಗ್, ಹೀಗೆ ಹಲವು ಧುರೀಣರ ಕೂಡ ಮೈತ್ರಿಯ ಬೆಸುಗೆಯನ್ನು ಅಂಟು ಹಾಕಲು ಸಮರ್ಥವಾಗಿ ನಿಂತರು.

ಅನಾರೋಗ್ಯ ಮತ್ತು ನಿಧನ[ಬದಲಾಯಿಸಿ]

ಜಾರ್ಜ್ ಫರ್ನಾಂಡೀಸ್ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಜನವರಿ ೨೯, ೨೦೧೯ರಂದು ನಿಧನರಾದರು.[೩೩]

ಉಲ್ಲೇಖಗಳು[ಬದಲಾಯಿಸಿ]

  1. https://www.vishwavani.news/george-fernandez-no-more/[ಶಾಶ್ವತವಾಗಿ ಮಡಿದ ಕೊಂಡಿ]
  2. https://www.prajavani.net/stories/national/gaint-killer-george-farnandis-610754.html
  3. https://web.archive.org/web/20100812115404/http://www.parliamentofindia.nic.in/ls/lok13/biodata/13BI34.htm
  4. https://web.archive.org/web/20090628215852/http://www.daijiworld.com/chan/achievers_view.asp?a_id=24
  5. https://www.ndtv.com/india-news/george-fernandes-death-10-reasons-why-george-fernandes-was-a-legendary-politician-1984772
  6. https://books.google.com.bh/books?id=TiG-pS2v3N0C&pg=PA85#v=onepage&q&f=true
  7. https://www.newindianexpress.com/states/karnataka/2022/Aug/11/book-chronicling-george-fernandes-public-life-out-2486338.html
  8. "ಆರ್ಕೈವ್ ನಕಲು". Archived from the original on 2012-10-10. Retrieved 2012-03-03.
  9. "ಆರ್ಕೈವ್ ನಕಲು". Archived from the original on 2015-09-26. Retrieved 2019-01-29.
  10. https://www.bbc.com/news/world-asia-india-47039190
  11. https://www.businesstoday.in/current/corporate/ibm-india-george-fernandes-history-in-india/story/16367.html
  12. https://www.indiatoday.in/india/story/george-fernandes-coca-cola-india-1441600-2019-01-29
  13. https://www.moneycontrol.com/news/business/did-george-fernandes-drive-coca-cola-out-from-india-in-the-70s-3447791.html
  14. https://scroll.in/article/911260/why-george-fernandess-resignation-from-the-janata-government-made-him-better-at-building-coalitions
  15. https://www.thehindu.com/news/national/george-fernandes-obituary-1930-2019/article26120571.ece
  16. https://scroll.in/article/801645/how-e-sreedharan-built-the-konkan-railway-in-a-flat-eight-years
  17. https://kaipullai.com/2012/02/24/dr-elattuvalapil-sreedharan-the-bharat-ratna-no-one-talks-about/
  18. http://www.goodnewsindia.com/Pages/content/milestones/konkanRail.html
  19. https://timesofindia.indiatimes.com/india/had-george-fernandes-not-formed-samata-party-in-1994-i-would-not-have-got-opportunity-to-serve-people-in-bihar-nitish-kumar/articleshow/67904869.cms
  20. https://www.outlookindia.com/newswire/story/nuclear-physicist-p-k-iyengar-dead/745130
  21. https://www.thehindu.com/sci-tech/science/AEC-ex-chief-backs-Santhanam-on-Pokhran-II/article16883345.ece
  22. http://pib.nic.in/newsite/PrintRelease.aspx?relid=52813
  23. https://economictimes.indiatimes.com/news/defence/all-you-need-to-know-about-kargil-war/kargil-vijay-diwas/slideshow/59772216.cms
  24. https://www.globalsecurity.org/military/world/war/kargil-99.htm
  25. http://m.rediff.com/news/1999/may/28kash.htm
  26. https://www.indiatoday.in/magazine/cover-story/story/19980518-china-is-the-potential-threat-no.-1-says-george-fernandes-826430-1998-05-18
  27. "ಆರ್ಕೈವ್ ನಕಲು". Archived from the original on 2012-03-11. Retrieved 2012-03-03.
  28. https://www.rediff.com/news/defsca02.htm
  29. https://www.rediff.com/news/2000/dec/07spec.htm
  30. https://www.outlookindia.com/website/story/india-news-nitish-and-bjp-owe-a-lot-to-george-for-making-nda-such-a-formidable-force-in-bihar/324475
  31. https://www.amazon.in/-/hi/Chris-Emmanuel-Dsouza/dp/9356480818
  32. https://www.mangaloretoday.com/main/A-book-on-iconic-leader-George-Fernandes-titled-Bandh-Samrat-released/[ಶಾಶ್ವತವಾಗಿ ಮಡಿದ ಕೊಂಡಿ]
  33. ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ, ಪ್ರಜಾವಾಣಿ ವರದಿ

ಹೆಚ್ಚಿನ ಓದಿಗೆ[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]