ಜನಪ್ರಗತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಚ್.ಆರ್.ನಾಗೇಶರಾವ್ ಸಂಗ್ರಹದಿಂದ

ಚಲನಚಿತ್ರ ಹಂಚಿಕೆದಾರರೂ ಹಾಗೂ ಬ್ಯುಸಿನೆಸ್‍ಮನ್ ಆಗಿದ್ದ ಬಿ.ಎನ್.ಗುಪ್ತ ಅವರಿಗೆ ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿಯಿತ್ತು. ‘ಜನಪ್ರಗತಿ’ ಪತ್ರಿಕೆಯನ್ನು 1951ರಲ್ಲಿ ಸ್ಥಾಪನೆ ಮಾಡಿ ತಾವೇ ಸಂಪಾದಕತ್ವವನ್ನು ವಹಿಸಿಕೊಂಡಿದ್ದರು. ಈ ಸಾಹಸದಲ್ಲಿ ಗುಪ್ತ ಅವರಿಗೆ ನವಚೈತನ್ಯ ತುಂಬಿದವರು ಸಹ ಸಂಪಾದಕರುಗಳಾಗಿದ್ದ ಬಿ.ಶ್ರೀನಿವಾಸಮೂರ್ತಿ, ಎನ್.ಎಸ್.ಸೀತಾರಾಮಶಾಸ್ತ್ರಿ, ಕಲ್ಲೆ ಶಿವೋತ್ತಮರಾವ್, ಕೆ.ಎಸ್.ನಾಗಭೂಷಣಂ .... ಮುಂತಾದವರು. ನಿರಂಜನ ‘ಜನಪ್ರಗತಿ’ಗೆಂದು ನಾಲ್ಕೈದು ವರ್ಷಗಳ ಕಾಲ [1952-56], ಹೆಚ್ಚು ಕಡಮೆ ಪ್ರತಿ ವಾರವೂ, ‘ಸಾಧನ ಸಂಚಯ’ ಎಂಬ ಸ್ಥಿರ ಶೀರ್ಷಿಕೆಯ ಕೆಳಗೆ ಓಲೆಗಳನ್ನು ಅವರು ಬರೆದರು. ಅವು ಅವರ ಪ್ರೇಯಸಿಗೆಂದು [ಅನುಪಮ] ಬರೆದ ಓಲೆಗಳು. ಆದರೆ, ಬರೆದು ಮುಗಿದೊಡನೆ, ಕಾಗದ ಅಂಚೆಯ ಮನೆ ಸೇರದೆ ಅಚ್ಚಿನ ಮನೆಯ ಹಾದಿ ಹಿಡಿಯುತ್ತಿತ್ತು. ಬರೆಯುತ್ತಿದ್ದುದು ಪ್ರಕಟಣೆಗೋಸ್ಕರವಾದರೂ ನಿರ್ದಿಷ್ಟವಾದೊಂದು ಆತ್ಮೀಯ ವ್ಯಕ್ತಿಯನ್ನು ಉದ್ದೇಶಿಸಿ ಒಕ್ಕಣೆ ಸಿದ್ಧವಾಗುತಿತ್ತು. ಆಯಾ ವಾರದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಘಟನೆಗಳ ಬಗ್ಗೆ ವಿಶ್ಲೇಷಣಾತ್ಮಕ ಚಿಂತನೆ ಆ ಓಲೆಗಳಲ್ಲಿರುತ್ತಿತ್ತು. ಅಂಥದೊಂದು ಪ್ರಯೋಗಕ್ಕೆ ಇಂಬು ಕೊಟ್ಟವರು ಆ ಸಮಯದಲ್ಲಿ ‘ಜನಪ್ರಗತಿ’ಯ ಸಹ ಸಂಪಾದಕರಾಗಿದ್ದು ಆ ಸಾಪ್ತಾಹಿಕಕ್ಕೆ ಕನ್ನಡ ಪತ್ರಿಕಾರಂಗದಲ್ಲಿ ಹಿರಿಯ ಸ್ಥಾನ ದೊರಕಿಸಿಕೊಟ್ಟ ಎನ್.ಎಸ್.ಸೀತಾರಾಮಶಾಸ್ತ್ರಿಯವರು. ಮುಂದೆ ಶಾಸ್ತ್ರಿಯವರು ‘ಕನ್ನಡಪ್ರಭ’ ದಿನಪತ್ರಿಕೆಯ ಮೊದಲ ಸಂಪಾದಕರಾಗಿ ನಿಯೋಜಿತರಾದರು.

ಹೆಚ್.ಆರ್.ನಾಗೇಶರಾವ್ ಸಂಗ್ರಹದಿಂದ

ಅನಕೃ’ ಅವರ ಕಾದಂಬರಿಗಳಾದ ‘ಮಾರ್ಜಾಲ ಸನ್ಯಾಸಿ’, ‘ಭೂಮಿಗಿಳಿದು ಬಂದ ಭಗವಂತ’, ‘ಭಾಗ್ಯದ ಬಾಗಿಲು’ ಜನಪ್ರಗತಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದವು. ರಾಜಕೀಯ ವಿಶ್ಲೇಷಣೆ, ಸಣ್ಣ ಕತೆ, ಹಾಸ್ಯಬರಹಗಳಿಗೆ ಪ್ರಾಶಸ್ತ್ಯವಿತ್ತು. ‘ಅಯ್ಯಪ್ಪನ ಚಾವಡಿ’ಯೆಂಬ ವಿಶಿಷ್ಟ ಹಳ್ಳಿಗಾಡಿನ ಹಾಸ್ಯಾಂಕಣ ಓದುಗರನ್ನು ಸೂರೆಗೊಂಡಿತ್ತು. ಇಂದಿನ ಯೂ.ಎಸ್.ಪಿ.ಗಳಾದ ವಾರಭವಿಷ್ಯ, ಜ್ಯೋತಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರ, ಸಚಿತ್ರ ಸಿನಿಮಾ ಪುಟಗಳು, ಮುಖಪುಟದಲ್ಲಿಯೇ ತಾರೆಯರ ಬ್ಲೋಅಪ್‍ಗಳು ಜನಪ್ರಗತಿಯಲ್ಲೂ ರಾರಾಜಿಸುತ್ತಿದ್ದವು. ಮುದ್ರಣ, ಬಹುಶಃ ಗುಪ್ತ ಅವರದ್ದೇ ಮುದ್ರಣಾಲಯವಿರಬೇಕು, ಅಚ್ಚುಕಟ್ಟಾಗಿರುತ್ತಿತ್ತು. ಹಳೆಯ ‘ಇಲ್ಲಸ್ಟ್ರೇಟೆಡ್ ವೀಕ್ಲಿ’ ಗಾತ್ರದ 24 ಪುಟಗಳ ಜನಪ್ರಗತಿಗೆ 1963ರಲ್ಲಿ 20 ಪೈಸೆ ಬೆಲೆ ನಿಗದಿ ಮಾಡಲಾಗಿತ್ತು.ಅವರು ಆರಂಭಿಸಿದ ವಾರಪತ್ರಿಕೆ ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಕಲಾವಿದ ಜಿ.ಕೆ.ಸತ್ಯ ಅವರ ಆರಂಭದ ದಿನಗಳ ವರ್ಣಚಿತ್ರಗಳು ‘ಜನಪ್ರಗತಿ’ಯನ್ನು ಅಲಂಕರಿಸಿದ್ದವು. ಹಿರಿಯ ಕವಿ, ಕಲಾವಿದ, ಕಾದಂಬರಿಕಾರ, ವಿಮರ್ಶಕರ ಲೇಖನಗಳು ‘ಜನಪ್ರಗತಿ’ಯ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾಗುತ್ತಿದ್ದವು.