ಚಿತ್ರಗುಪ್ತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪತ್ರಿಕೆಯ 18-08-1957ರ ಸಂಚಿಕೆ, ಹೆಚ್.ಆರ್.ನಾಗೇಶರಾವ್ ಸಂಗ್ರಹ.

ಬಿ.ಎನ್.ಗುಪ್ತ ಅವರು ಜನವಾಣಿ ದಿನಪತ್ರಿಕೆಯನ್ನು ಮಾರಿದ ನಂತರ ಅಲ್ಲಿ ವರದಿಗಾರರಾಗಿದ್ದ ಎಂ.ಎಸ್.ಭಾರದ್ವಾಜರು ಎಚ್.ಕೆ.ವೀರಣ್ಣಗೌಡರ ನೇತೃತ್ವದಲ್ಲಿ ನಡೆಯುತ್ತಿದ್ದ "ವಾರ್ತಾ" ದೈನಿಕ "ಚಿತ್ರಗುಪ್ತ" ಸಾಪ್ತಾಹಿಕಗಳಲ್ಲಿ ದುಡಿಯಲು ಹೊರಟರು. ಅಲ್ಲಿ ಅವರ ನೇಹಿಗರು ನಿಷ್ಠಾವಂತ ಜಿ.ನಾರಾಯಣ ಮತ್ತು ಹವ್ಯಾಸೀ ನಟ ಶ್ರೇಷ್ಠ ಬಿ.ಕೃಷ್ಣ. ಮುಂದೆ "ಚಿತ್ರಗುಪ್ತ" ಪಿ.ಆರ್.ರಾಮಯ್ಯನವರ "ತಾಯಿನಾಡು" ಕಾರ್ಯಾಲಯಕ್ಕೆ ಬಂತು. ಅದಾದ ಮೇಲೆ ಸ್ವತಂತ್ರ ಅಸ್ತಿತ್ವ. ಎಲ್ಲ ಹೊಣೆಯೂ ಭಾರದ್ವಾಜರ ಮೇಲೆ. ಆಗ ಅವರ ವಿಶಿಷ್ಠ ಸ್ನೇಹಿತರು ವಶಿಷ್ಟ್ ಮತ್ತು ವಿ.ಎಸ್.ಕೃಷ್ಣ ಅಯ್ಯರ್. ಬರಹಗಾರರ ವಲಯದಲ್ಲಿ ರಾಜಕಾರಣಿಗಳ ಕ್ಷೇತ್ರದಲ್ಲಿ ಸಮಾಜದ ಗಣ್ಯ ವರ್ತುಲದಲ್ಲಿ ವ್ಯಾಪಕ ಸಂಪರ್ಕ. ಆದರೆ ವ್ಯವಹಾರ ಜ್ಞಾನ ಸವಾಲೆಸೆಯಿತು. ಮನೆಯಲ್ಲಿ ತುತ್ತಿನ ಚೀಲ ಬರಿದು. ಅಚ್ಚುಕೂಟದ ಕೆಲಸಗಾರರಿಗೆ ಸಂಪಾದಕ ಮಂಡಳಿಯ ಸದಸ್ಯರಿಗೆ (ವಿ.ಆರ್.ಶ್ಯಾಮ್, ವೆಂಕಟರಾಜ ಪಾನಸೆ, ಶೇಷನಾರಾಯಣ) ಪ್ರತಿ ತಿಂಗಳೂ ಸಾಲ ಮಾಡಿಯೇ "ವೇತನ ಸಂದಾಯ".

ಆ ದಿನಗಳಲ್ಲಿ ಪತ್ರಿಕೆಗೆ ಬರೆಯುತ್ತಿದ್ದವರು ಹೆಚ್.ಆರ್.ನಾಗೇಶರಾವ್, ಪಿ.ಲಂಕೇಶ್, ಎಸ್.ಕೆ.ನಾಡಿಗ್, ಕೋ.ಚೆನ್ನಬಸಪ್ಪ, ಸಿ.ಎಚ್.ಪ್ರಹ್ಲಾದರಾವ್, ಎಚ್.ಎಸ್.ಪಾರ್ವತಿ, ಎಲ್.ಎಸ್.ಶೇಷಗಿರಿರಾವ್ ಮುಂತಾದವರು.

"ಪ್ರಜಾವಾಣಿ" ಸಂಪಾದಕ ಟಿಎಸ್ಸಾರ್ ನೆರವಾಗಬೇಕೆಂದು ಮುಂದಾದರು. ಎಂ.ಬಿ.ಸಿಂಗ್ ಜತೆಗೂಡಿದರು. ಸಹಕಾರ ತತ್ವದ ಮೇಲೆ ಪತ್ರಿಕೆ ನಡೆಸಿದರೆ ಹೇಗೆ, ಯಾಕಾಗಬಾರದು? ರೂಪಿಸಿದ ಸಹಕಾರ ಸಂಸ್ಥೆಯನ್ನು ಕರ್ನಾಟಕದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಉದ್ಘಾಟಿಸಿದರು. ಸಹಕಾರೀ ಆಂದೋಲನ ನಮ್ಮಲ್ಲಿ ಬಲಿಯುವುದು ಕಷ್ಟ. ಉಗ್ರ ಪರೀಕ್ಷೆಗೊಳಗಾದ ಭಾರದ್ವಾಜರು ಸೋತರು.