ಚಾಮುಂಡರಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಹುಬಲಿಯ ಏಕಶಿಲಾ ವಿಗ್ರಹ-ಚಂದ್ರಗಿರಿ, ಶ್ರವಣಬೆಳಗೊಳ

ಚಾವುಂಡರಾಯ ೧೦ ನೇ ಶತಮಾನ(ಕ್ರಿ.ಶ. ಅಂದಾಜು ೯೩೪-೯೯೦)ದಲ್ಲಿ ಬದುಕಿದ್ದ ಒಬ್ಬ ಸೇನಾಧಿಪತಿ, ವಾಸ್ತುಶಿಲ್ಪಿ, ಕವಿ ಮತ್ತು ಮಂತ್ರಿ. ಚಾವುಂಡರಾಯನ ತಂದೆ ಮಾಬಲಯ್ಯ, ತಾಯಿ ಕಾಳಲಾದೇವಿ. ಪಶ್ಚಿಮ ಗಂಗರ ಅಧಿಪತ್ಯದ ಗಂಗವಾಡಿ ಸೀಮೆಯ ರಾಜ ೨ನೇ ಮಾರಸಿಂಹ (ಕ್ರಿ.ಶ ೯೬೧-೭೭) ಇವನ ಹಿರಿಯಮಗ ೪ ನೇ ರಾಚಮಲ್ಲ (ಕ್ರಿ.ಶ ೯೭೪-೭೭) ಮತ್ತು ಅವನ ತಮ್ಮ ರಕ್ಕಸಗಂಗ (ಕ್ರಿ.ಶ ೯೭೭-೮೪) ಇವರ ಸೇವೆಯಲ್ಲಿ ಸೇನಾಧಿಪತಿ, ಸಂಧಿವಿಗ್ರಹಿ, ಮಂತ್ರಿ ಪದವಿಗಳಲ್ಲಿ ಇದ್ದನೆಂದು ತಿಳಿದುಬರುತ್ತದೆ. ತಾಯಿ ಕಾಳಲಾದೇವಿಯ ಆಸೆಯಂತೆ ಶ್ರವಣಬೆಳಗೊಳದಲ್ಲಿ ೫೭.೮ ಅಡಿ ಎತ್ತರದ ಗೊಮ್ಮಟ ಮೂರ್ತಿಯನ್ನು ನಿರ್ಮಿಸಿದ.


ಜೀವನ[ಬದಲಾಯಿಸಿ]

ಶ್ರವಣಬೆಳಗೊಳದಲ್ಲಿನ ಶಾಸನಗಳು ಮತ್ತು ಚಾವುಂಡರಾಯ ಪುರಾಣದಲ್ಲಿ ಬರುವ ಕೆಲವು ಅಂಶಗಳಿಂದ ಚಾವುಂಡರಾಯನ ಮೂಲ ಮತ್ತು ಜೀವನದ ಬಗ್ಗೆ ತಿಳಿಯಬಹುದು.

ಚಾವುಂಡರಾಯ, ಸುಮಾರು ೧೦ನೇ ಶತಮಾನದಲ್ಲಿ ಬದುಕಿದವನಾಗಿದ್ದು, ಮುದಗಲ್ಲು(ಈಗಿನ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿದೆ) ಎಂಬ ಗ್ರಾಮ ಈತನ ಮೂಲ ಊರು. ತಾಯಿ ಕಾಳಲಾದೇವಿ. ಈಕೆಗೆ ಕಾಳಲಾಂಬಿಕೆ, ಕಾಳಮ್ಮ ಎಂಬ ಹೆಸರೂ ಇದೆ. ತಂದೆ ಮಾಬಲಯ್ಯ. ಚಾವುಂಡರಾಯನ ಸಹೋದರಿ ಪುಲವ್ವೆ, ಪತ್ನಿ ಅಜಿತಾದೇವಿ. ಈತನಿಗೆ ನಾಗವರ್ಮ ಹೆಸರಿನ ಸೋದರನೂ ಇದ್ದ[೧].

ಚಾಮುಂಡರಾಯನು ತನ್ನನ್ನು ಬ್ರಹ್ಮಕ್ಷತ್ರಿಯ ವಂಶಜ(ಕ್ಷತ್ರೀಯ ಧರ್ಮ ಸ್ವೀಕರಿಸಿದ ಬ್ರಾಹ್ಮಣ)ನೆಂದು ಕರೆದು ಕೊಂಡಿದ್ದಾನೆ. ಬಾಹುಬಲಿ ಚರಿತೆಯಲ್ಲಿ ಹೇಳಿರುವ "ಬ್ರಹ್ಮ-ಕ್ಷತ್ರಿಯ-ವೈಶ್ಯ-ಶುಕ್ತಿ ನುಮಣಿಃ" ಎಂಬ ಮಾತಿನ ಆಧಾರದಿಂದ ಆತನ ಪೂರ್ವಜರು ಮೊದಲಿಗೆ ಬ್ರಾಹ್ಮಣ ಮತ್ತು ವೈಶ್ಯರಾಗಿದ್ದು ಆನಂತರ ಕ್ಷತ್ರಿಯ ವೃತ್ತಿಯನ್ನು ಧಾರಣೆ ಮಾಡಿದವರಾಗಿರಬೇಕೆಂದು ಊಹಿಸಬಹುದು.

ಸೇನಾನಿ ಮತ್ತು ಮಂತ್ರಿಯಾಗಿ[ಬದಲಾಯಿಸಿ]

ಚಾವುಂಡರಾಯ ಕಟ್ಟಿಸಿದ ಬೊಪ್ಪ ಚೈತ್ಯಾಲಯ(ಚಾವುಂಡರಾಯ ಬಸದಿ)- ಚಂದ್ರಗಿರಿ, ಶ್ರವಣಬೆಳಗೊಳ

ಚಾವುಂಡರಾಯನ ಅಜ್ಜ ಗೋವಿಂದಮಯ್ಯ ಗಂಗ ಮನೆತನದ ಅರಸ ಎರಡನೇ ಎರೆಯಪ್ಪನ ಹತ್ತಿರ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ. ಚಾವುಂಡರಾಯನ ತಂದೆ ಮಾಬಲಯ್ಯ, ಅದೇ ಗಂಗ ಮನೆತನದ ರಾಜ, ನೊಳಂಬ ಕುಲಾಂತಕನೆಂದು ಹೆಸರು ಪಡೆದ, ಗಂಗವಾಡಿಯ ಅರಸ ಮಾರಸಿಂಹನ ಕೆಳಗೆ ಸೇನಾನಿಯಾಗಿದ್ದ. ಚಾವುಂಡರಾಯನೂ ಮಾರಸಿಂಹನ ಹತ್ತಿರ ಸೇನಾಧಿಪತಿಯಾಗಿದ್ದನು[೨].

ಕ್ರಿ.ಶ ೯೭೫ರಲ್ಲಿ ಪಾಂಚಾಲದೇವ ಮಹಾಸಾಮಂತ ಆರಂಭಿಸಿದ ದಂಗೆಯನ್ನು ಚಾವುಂಡರಾಯ ನಿಗ್ರಹಿಸಿದ ಮತ್ತು ಬಾಗೇಯೂರು ಯುದ್ಧದಲ್ಲಿ, ಛಲದಂಕ ಗಂಗ ಮತ್ತು ಗಂಗರಬಂಟ ಎಂಬ ಬಿರುದುಗಳನ್ನು ಹೊಂದಿದ್ದ ಮುದುರಚಯ್ಯನನ್ನು ಕೊಂದು ಸಹೋದರ ನಾಗವರ್ಮನ ಸಾವಿಗೆ ಸೇಡು ತೀರಿಸಿಕೊಂಡ. ಚಾವುಂಡರಾಯನು ತನ್ನ ಶೌರ್ಯವನ್ನು ತೋರಿದ ಈ ಯುದ್ಧಗಳ ನಂತರ, ನಾಲ್ವಡಿ ರಾಚಮಲ್ಲ ಗಂಗ ಸಿಂಹಾಸನವನ್ನು ಏರಿದನು.

ಚಾವುಂಡರಾಯ ತನ್ನ ಪರಾಕ್ರಮಗಳಿಂದಾಗಿ ಸಮರ ಪರಶುರಾಮ, ವೀರ ಮಾರ್ತಾಂಡ, ರಣರಂಗಸಿಂಹ, ಸಮರ ಧುರಂಧರ, ವೈರಿಕುಲ ಕಲಾದಂಡ, ಭುಜವಿಕ್ರಮ ಮತ್ತು ಭಟಮಾರ ಎಂಬ ಬಿರುದುಗಳನ್ನು ಗಳಿಸಿದನು. ಜಗದೇಕವೀರನೆಂದು ಪ್ರಸಿದ್ಧನಾದ ನಾಲ್ವಡಿ ರಾಚಮಲ್ಲ ಸತ್ಯವಾಕ್ಯನಲ್ಲಿ ಕ್ರಿ.ಶ. ೯೭೪ರಲ್ಲಿಯೂ, ಕ್ರಿ.ಶ. ೯೭೭ರಿಂದ ಕ್ರಿ.ಶ. ೯೮೪ರವರೆಗೆ ರಕ್ಕಸಸಂಗ ರಾಚಮಲ್ಲನಲ್ಲಿಯೂ ಚಾವುಂಡರಾಯನು ಸೇನಾಪತಿಯೂ, ಮಂತ್ರಿಯೂ ಸೇವೆ ಸಲ್ಲಿಸಿದ್ದನು[೩].

ನಾಲ್ವಡಿ ರಾಚಮಲ್ಲ ಸತ್ಯವಾಕ್ಯ ಚಾವುಂಡರಾಯನಿಗೆ ರಾಯ ಎಂಬ ಬಿರುದನ್ನು ದಯಪಾಲಿಸಿದನು. ಚಾವುಂಡರಾಯನಿಗೆ ದೊರೆತ ಇತರ ಬಿರುದುಗಳು ವೀರ ಮಾರ್ತಾಂಡ, ಸಮರ ಪರಶುರಾಮ, ಪ್ರತಿಪಕ್ಷರಾಕ್ಷಸ[೪].

ಕವಿ ಮತ್ತು ಬರಹಗಾರ[ಬದಲಾಯಿಸಿ]

ತ್ರಿಷಷ್ಟಿ ಲಕ್ಷಣ ಮಹಾಪುರಾಣ (ಚಾವುಂಡರಾಯ ಪುರಾಣ)[ಬದಲಾಯಿಸಿ]

ಸಂಸ್ಕೃತದಲ್ಲಿ ಜಿನಸೇನ ಗುಣಭದ್ರರಿಂದ ರಚಿತವಾದ ಮಹಾಪುರಾಣದ ಸರಳ ಕನ್ನಡ ರೂಪವೇ ತ್ರಿಷಷ್ಟಿ ಲಕ್ಷಣ ಮಹಾಪುರಾಣ[೫]. ರೂಢಿಯಲ್ಲಿ ಚಾವುಂಡರಾಯ ಪುರಾಣವೆಂದು ಹೆಸರುವಾಸಿಯಾಗಿದೆ. ಈ ಕೃತಿಯನ್ನು ಕ್ರಿ.ಶ. ೯೭೮ರ ಸುಮಾರಿಗೆ ರಚಿಸಲಾಯಿತು.

ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಕೃತಿಯು ಬೆಳಕಿಗೆ ಬರುವ ಮೊದಲು, ಈ ಚಾವುಂಡರಾಯ ಪುರಾಣವೇ ಕನ್ನಡದ ಮೊದಲ ಗದ್ಯ ಕೃತಿ ಎಂದು ಹೇಳಲಾಗುತ್ತಿತ್ತು. ಹಲವಾರು ಸಂಶೋಧನೆಗಳ ನಂತರ, ಚಾವುಂಡರಾಯನ ಕೃತಿಯ ಕಾಲ ಹಾಗೂ ವಡ್ಡಾರಾಧನೆಯ ಭಾಷೆಯ ಬಳಕೆ, ಶಿವಕೋಟ್ಯಾಚಾರ್ಯನ ಕಾಲ ಮುಂತಾದ ಅಂಶಗಳ ಆಧಾರದ ಮೇರೆಗೆ ವಡ್ಡಾರಾಧನೆಯೇ ಕನ್ನಡದ ಮೊದಲ ಗದ್ಯಕೃತಿ ಮತ್ತು ಇದನ್ನು ರಚಿಸಿದ್ದು ಕ್ರಿ.ಶ. ೯೨೦ರ ಸುಮಾರಿಗೆ ಎಂದು ಸಾಬೀತಾಯಿತು. ಆದರೂ ಕೂಡ ಜೈನ ಸಾಹಿತ್ಯ ಕ್ಷೇತ್ರದಲ್ಲಿ ಚಾವುಂಡರಾಯ ಪುರಾಣ ತನ್ನದೇ ಆದ ವಿಶೇಷತೆ ಮಹತ್ವವನ್ನು ಪಡೆದುಕೊಂಡಿದೆ[೬].

ಕೊಡುಗೆ[ಬದಲಾಯಿಸಿ]

  • ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಗೊಮ್ಮಟನ ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿ ಪ್ರತಿಷ್ಥಾಪನೆ ಮಾಡಿಸಿದನು.
  • ಅನೇಕ ಬಸದಿಗಳು

ಆಕರ ಗ್ರಂಥ[ಬದಲಾಯಿಸಿ]

  1. ಕನ್ನಡ ಆದಿತೀರ್ಥಂಕರ ಚರಿತೆಗಳು - ಡಾ|| ಸರಸ್ವತಿ ವಿಜಯಕುಮಾರ್
  1. ಬಾಹುಬಲಿ ಚರಿತೆ

ಉಲ್ಲೇಖಗಳು[ಬದಲಾಯಿಸಿ]

  1. "Chavundarayana Trhishashti Shalaka Purusha Mahapuranam (NEMINATH TAPAKEERE)" (PDF). www.jetir.org/. ournal of Emerging Technologies and Innovative Research. Retrieved 25 March 2022.
  2. "Chavundarayana Trhishashti Shalaka Purusha Mahapuranam (NEMINATH TAPAKEERE)" (PDF). www.jetir.org/. ournal of Emerging Technologies and Innovative Research. Retrieved 25 March 2022.
  3. "ಚಾವುಂಡರಾಯ". kannadakavi.com/. ಕನ್ನಡ ಕವಿ ಬಳಗ. Retrieved 25 March 2022.[ಶಾಶ್ವತವಾಗಿ ಮಡಿದ ಕೊಂಡಿ]
  4. "ಚಾವುಂಡರಾಯ". kannadakavi.com/. ಕನ್ನಡ ಕವಿ ಬಳಗ. Retrieved 25 March 2022.[ಶಾಶ್ವತವಾಗಿ ಮಡಿದ ಕೊಂಡಿ]
  5. "ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣ". bookbrahma.com. Book Brahma Private Limited. Retrieved 26 March 2022.
  6. "Chavundarayana Trhishashti Shalaka Purusha Mahapuranam (NEMINATH TAPAKEERE)" (PDF). www.jetir.org/. ournal of Emerging Technologies and Innovative Research. Retrieved 26 March 2022.