ಚರ್ಚೆಪುಟ:ನಾಡ ಗೀತೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿವಾದ[ಬದಲಾಯಿಸಿ]

ಕುವೆಂಪು ಅವರ ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಕವನವು ನಾಡ ಗೀತೆಯಾದ ಸಮಯದಿಂದ ವಿವಾದಕ್ಕೊಳಗಾಗಿದೆ. ಅದನ್ನು ೭/7 ನಿಮಿಷದ ಅವಧಿಯ ಪೂರ್ಣ ನಾಡಗೀತೆ ಹಾಡಬೇಕೋ ಅಥವಾ ೧/1 ನಿಮಿಷದವಳಗೆ ಹಿಂದೆ ಸಮಿತಿ ಸೂಚಿಸಿದಂತೆ ೫೦/5೦ ಸೆಕೆಂಡುಗಳ ಕಾಲ ಹಾಡುವುದೋ ಎಂದು - ವಿವಾದವೆದ್ದಿದೆ.

ನನ್ನ ಅಭಿಪ್ರಾಯದಲ್ಲಿ ಡಾ. ಚಿ.ಮೂರ್ತಿಯವರ ಸಲಹೆಯಂತೆ ೫೦/5೦ ಸೆಕೆಂಡಿನ ಗೀತೆ ಹಾಡುವುದು ಸರಿ.7 ನಿಮಿಷ ನಿಲ್ಲುವದು ಹಿಂಸೆ-ಕೆಲವರಿಗೆ ತಲೆಸುತ್ತು ಬರುವುದು.ನಾಡಗೀತೆಯನ್ನು ಸಂತೋಷದಿಂದ ಅನುಭವಿಸುವಂತಿರಬೇಕು ಅದ ಹಿಂಸೆಯಾಗಬಾರದು. ಆ ಹಿಂಸೆಯನ್ನು ಅನುಭವಿಸಿ ನನ್ನ ಅಭಿಪ್ರಾಯ ತಿಳಿಸಿದ್ದೇನೆ. / ಕೆಳಗೆ ಡಾ. ಚಿದಾನಂದ ಮೂರ್ತಿಯವರ ಅಭಿಪ್ರಾಯವನ್ನು ಕೊಟ್ಟಿದೆ (ಲೇಖನದ ಮುಖ್ಯಭಾಗ). Bschandrasgr ೧೧:೧೦, ೨೨ ನವೆಂಬರ್ ೨೦೧೪ (UTC)ಸದಸ್ಯ:Bschandrasgr/ಪರಿಚಯ/ಚರ್ಚೆ

ಡಾ. ಚಿ.ಮೂರ್ತಿಯವರ ಸಲಹೆ[ಬದಲಾಯಿಸಿ]

  • ಕನ್ನಡ ಮಾತನಾಡುವವರು ಬೇರೆ ಬೇರೆ ರಾಜ್ಯಗಳಲ್ಲಿ ಹಂಚಿ ಹೋಗಿ ಕನ್ನಡವು ದೀನ ಸ್ಥಿತಿಯಲ್ಲಿದ್ದಾಗ, ಭಾರತವು ಬ್ರಿಟಿಷರ ದಾಸ್ಯಕ್ಕೆ ಸಿಕ್ಕಿ ನಲುಗಿ ಹೋಗುತ್ತಿದ್ದಾಗ ಕುವೆಂಪು ಈ ಕವನವನ್ನು ಬರೆದದ್ದು ಒಂದು ಅವಿಸ್ಮರಣೀಯ ಸಂಗತಿ; ನಮ್ಮೆಲ್ಲರ ಹೆಮ್ಮೆಯನ್ನು ಅದು ಉಕ್ಕಿಸುತ್ತದೆ.
  • ಭಾರತಕ್ಕೆ ಸ್ವಾತಂತ್ರ್ಯ ದೊರಕುವ ಮುನ್ನ ಬಂಕಿಂಚಂದ್ರರ ‘ವಂದೇ ಮಾತರಂ’ ಗೀತೆಯು ಜನಮಾನಸದಲ್ಲಿ ದೇಶಭಕ್ತಿಯನ್ನು ಉದ್ಘೋಷಿಸುತ್ತಿತ್ತು. ನಾವು ವಿದ್ಯಾರ್ಥಿಗಳಾಗಿದ್ದಾಗ (1945) ಬೀದಿಗಳಲ್ಲಿ ‘ವಂದೇ ಮಾತರಂ’ ಎಂಬ ಘೋಷಣೆ ಕೂಗಿದರೆ ಪೊಲೀಸರು ದೊಣ್ಣೆಯಿಂದ ಹೊಡೆಯುತ್ತಿದ್ದರು. 1947ಕ್ಕೆ ಮುಂಚೆ ‘ಇಂಡಿಯಾ’ದ ಸಾಮ್ರಾಜ್ಯ ಗೀತೆ ‘God save the king’ ಆಗಿತ್ತು. 1947ರಲ್ಲಿ ಭಾರತ ಸ್ವತಂತ್ರವಾದ ಮೇಲೆ ಸಂವಿಧಾನ ರೂಪುಗೊಂಡು ರವೀಂದ್ರನಾಥ ಟ್ಯಾಗೋರರ ‘ಜನಗಣಮನ ಅಧಿನಾಯಕ ಜಯಹೇ’ ಕವನವನ್ನು ರಾಷ್ಟ್ರಗೀತೆ (National Anthem) ಎಂದು, ಬಂಕಿಂಚಂದ್ರ ಚಟರ್ಜಿಯವರ ‘ವಂದೇ ಮಾತರಂ’ ಕವನವನ್ನು ರಾಷ್ಟ್ರಗಾಥೆ (National Song) ಎಂದು ಗೌರವಿಸಿ ಎರಡಕ್ಕೂ ಸಮಾನ ಸ್ಥಾನವನ್ನು ನೀಡಲಾಯಿತು. ಎರಡೂ ರಾಷ್ಟ್ರಗೀತೆಗಳೇ– ಎರಡನ್ನೂ ಸಭೆಗಳಲ್ಲಿ ಎಲ್ಲರೂ ಎದ್ದು ನಿಂತು ಹಾಡಬೇಕು; ಗೌರವಿಸಬೇಕು.
  • ಗಮನಿಸಬೇಕಾದ ಮುಖ್ಯ ಸಂಗತಿ ಇದು: ಟ್ಯಾಗೋರರ ಕವನದ ಐದು ಪದ್ಯ ಖಂಡಗಳಲ್ಲಿ ಪಲ್ಲವಿಯ ಜೊತೆ ಒಂದು ಪದ್ಯ ಖಂಡವನ್ನು, ಬಂಕಿಂಚಂದ್ರರ ಐದು ಪದ್ಯ ಖಂಡಗಳಲ್ಲಿ ಪಲ್ಲವಿಯ ಜೊತೆ ಒಂದು ಪದ್ಯ ಖಂಡ¬ವನ್ನು ಆರಿಸಲಾಗಿದೆ. ಅಂದರೆ ರಾಷ್ಟ್ರಗೀತೆಗಳಾಗಿ ಹಾಡಲು ಅನುಕೂಲವಾಗುವಂತೆ ಮೂಲ ಕವನಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ. ಒಂದನ್ನು ಹಾಡಲು ಸುಮಾರು 58 ಸೆಕೆಂಡುಗಳು, ಇನ್ನೊಂದನ್ನು ಹಾಡಲು 45 ಸೆಕೆಂಡುಗಳು ಮಾತ್ರ ಬೇಕಾಗುತ್ತದೆ. ಇದರಿಂದಾಗಿ ರಾಷ್ಟ್ರಗೀತೆಗಳ ಪಾಠ ಎಲ್ಲರಿಗೂ ನೆನಪಿರುತ್ತದೆ. ಎಲ್ಲರೂ ಅದನ್ನು ಎದ್ದು ನಿಂತು ಏಕಕಂಠದಿಂದ ಹಾಡುತ್ತಾರೆ. ಅವುಗಳಿಗೆ ನಿರ್ದಿಷ್ಟ ರಾಗ ಸಂಯೋಜನೆ ಮಾಡಲಾಗಿದೆ.
  • 1956ರಲ್ಲಿ ರಾಜ್ಯ ಏಕೀಕರಣಗೊಂಡರೂ ಕರ್ನಾಟಕ ಸರ್ಕಾರ ಕುವೆಂಪು ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ 2003ರಲ್ಲಿ ಅವರ ಕವನ ‘ಜಯ ಭಾರತ ಜನನಿಯ ತನುಜಾತೆ’ಯನ್ನು ‘ನಾಡಗೀತೆ’ ಎಂದು ಘೋಷಿಸಿತು. ಆ ಕವನದ ಏಳು ಪದ್ಯ ಖಂಡಗಳಲ್ಲಿ ನಾಲ್ಕು ಪದ್ಯ ಖಂಡಗಳನ್ನು ಉಳಿಸಿಕೊಂಡಿತು. ‘ಜಯ ಹೇ ಕರ್ನಾಟಕ ಮಾತೆ...’, ‘ಜನನಿಯ ಜೋಗುಳ ವೇದದ ಘೋಷ...’, ‘ಸರ್ವ ಜನಾಂಗದ ಶಾಂತಿಯ ತೋಟ...’, ‘ಕನ್ನಡ ನುಡಿ ಕುಣಿದಾಡುವ ಗೇಹ...’ ಎಂದು ಆರಂಭವಾಗುತ್ತವೆ ಆ ಪದ್ಯ ಭಾಗಗಳು.
  • ಇಡೀ ಕವನವನ್ನು ನಾಡಗೀತೆಯಾಗಿ ಘೋಷಿಸಬೇಕು ಎಂದು ಕೆಲವರು ಒತ್ತಡ ಹಾಕಿದ್ದರಿಂದ 2004ರಲ್ಲಿ ಇಡೀ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸಲಾಯಿತು. ನಾನೂ ಸೇರಿದಂತೆ ಹಲವರು ಅದನ್ನು ವಿರೋಧಿಸಿದೆವು. ಆ ವಿರೋಧಕ್ಕೆ ಕಾರಣ–
  • 1. ಇಡೀ ಕವನವನ್ನು ಯಾರೂ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ. ಇಂದಿನ ರಾಷ್ಟ್ರಗೀತೆಗಳಾದ ‘ಜನಗಣಮನ ಅಧಿನಾಯಕ...’ ಮತ್ತು ‘ವಂದೇ ಮಾತರಂ’ಗಳ ಪೂರ್ಣ ಪಾಠ ಯಾರಿಗೂ ಗೊತ್ತಿಲ್ಲ. ಆದರೆ ಇಂದು ಪ್ರಚಲಿತವಿರುವ ಆ ಸಂಕ್ಷಿಪ್ತಗೊಂಡ ಗೀತೆಗಳನ್ನು ಎಲ್ಲರೂ ನೆನಪಿಟ್ಟುಕೊಂಡು ಹಾಡುತ್ತಾರೆ.
  • 2. ಸಂಕ್ಷಿಪ್ತಗೊಂಡಿರುವ ರಾಷ್ಟ್ರಗೀತೆಗಳನ್ನು ಹಾಡಲು ಸೆಕೆಂಡುಗಳು ಸಾಕು. ಆದರೆ ‘ನಾಡಗೀತೆ’ಯ ಪೂರ್ಣ ಪಾಠವನ್ನು ಹಾಡಲು ಕನಿಷ್ಠ ನಾಲ್ಕು ನಿಮಿಷ ಬೇಕು. ಕೆಲವರು ರಾಗಾಲಾಪನೆ ಮಾಡಿ ಹಾಡಿದರೆ 6–7 ನಿಮಿಷ ಬೇಕು. ಅಷ್ಟು ಕಾಲ ವಯಸ್ಕರಿಗೆ, ದೈಹಿಕ ತೊಂದರೆ ಇರುವವರಿಗೆ ಎದ್ದು ನಿಲ್ಲುವುದು ಕಷ್ಟವಾಗುತ್ತದೆ. ಆರೋಗ್ಯವಂತರೂ ಯಾವಾಗ ಮುಗಿಯುತ್ತದೋ ಎಂದು ಚಡಪಡಿಸುತ್ತಾರೆ.
  • 3. ಇಡೀ ‘ನಾಡಗೀತೆ’ಯನ್ನು ವೇದಿಕೆ ಮೇಲಿನಿಂದ ಯಾರೋ ಒಬ್ಬರು ಅಥವಾ ಇಬ್ಬರು ಪುಸ್ತಕ ನೋಡಿಕೊಂಡು ಹಾಡುತ್ತಾರೆ. ಕೇಳುಗರು ಅವರ ಜೊತೆ ದನಿಗೂಡಿಸುತ್ತಾರೆ. ಪುಸ್ತಕ ನೋಡಿಕೊಳ್ಳದೆ ಹೇಳುವವರು ಪದ್ಯಖಂಡಗಳ ಅನುಕ್ರಮಣಿಕೆ ಬದಲಾವಣೆ ಮಾಡಿರುವುದೂ ಉಂಟು. ಇದು ನೆನಪಿನ ದೋಷದ ಪರಿಣಾಮ.
  • 4. ನಮ್ಮ ಹಿಂದಿನ ದೀರ್ಘ ಕಾವ್ಯಗಳನ್ನು ಪಠ್ಯವಾಗಿ ಬೋಧಿಸಲು ಸಂಕ್ಷಿಪ್ತ¬ಗೊಳಿಸಲಾಗಿದೆ. ಉದಾಹರಣೆಗೆ, ‘ಪಂಪ ಭಾರತ ಸಂಗ್ರಹ’, ‘ಗದಾಯುದ್ಧ ಸಂಗ್ರಹ’, ಕುಮಾರವ್ಯಾಸನ ‘ಸಭಾ ಪರ್ವ ಸಂಗ್ರಹ’ ಇತ್ಯಾದಿ. ಹಾಗೆ ಸಂಗ್ರಹಿಸಿದರೆ ಅದರಿಂದ ಕವಿಗಳಿಗೆ ಅಪಚಾರ ಮಾಡಿದಂತೆ ಆಗುವುದಿಲ್ಲ. ಕೆಲವು ಪದ್ಯಗಳನ್ನು ಬಿಡಬಹುದೇ ಹೊರತು ಗದ್ಯ¬ವಾಗಲಿ ಪದ್ಯವಾಗಲಿ ಕವಿ ಬರೆದಿರುವ ಮೂಲ ಪಾಠವನ್ನು ತಿದ್ದುವ ಹಕ್ಕು ಮಾತ್ರ ಯಾರಿಗೂ ಇಲ್ಲ; ಕುವೆಂಪು ಬರೆದಿರುವ ನಾಡಗೀತೆಯ ಪದ್ಯ ಭಾಗ¬ಗಳನ್ನು ಬಿಡಬಹುದು. ಆದರೆ ಪಾಠವನ್ನು ತಿದ್ದುವಂತಿಲ್ಲ.

ಈಗಾಗಲೇ ರಾಜ್ಯ ಸರ್ಕಾರ ಜಿ.ಎಸ್‌.ಶಿವರುದ್ರಪ್ಪ, ಚನ್ನವೀರ ಕಣವಿ ನೇತೃತ್ವದ ಸಮಿತಿಗಳನ್ನು ರಚಿಸಿ ವರದಿಗಳನ್ನು ಸಿದ್ಧಪಡಿಸಿದೆ. ಸ್ವತಃ ಶ್ರೇಷ್ಠ ಕವಿಗಳಾದ ಅವರೇ ನಾಡಗೀತೆಯನ್ನು ಸಂಕ್ಷಿಪ್ತಗೊಳಿಸಿ ವರದಿ ಕೊಟ್ಟಿದ್ದಾರೆ. ಈಚೆಗೆ ಗಾಯಕ ಮತ್ತು ನಿವೃತ್ತ ಹಿರಿಯ ಅಧಿಕಾರಿ ವೈ.ಕೆ.ಮುದ್ದುಕೃಷ್ಣ ನಾಡಗೀತೆಯ ಸಂಕ್ಷಿಪ್ತೀಕರಣವನ್ನು ಬೆಂಬಲಿಸಿದ್ದಾರೆ. ಆ ಕಾರಣ ಯಾವುದೇ ಒತ್ತಡಕ್ಕೂ ಮಣಿಯದೆ ಸರ್ಕಾರ ಜಿ.ಎಸ್‌.ಶಿವರುದ್ರಪ್ಪ ಅಥವಾ ಚನ್ನವೀರ ಕಣವಿಯವರ ಶಿಫಾರಸುಗಳಲ್ಲಿ ಒಂದನ್ನು ಒಪ್ಪಿ, ಆ ಸಂಕ್ಷಿಪ್ತಗೊಂಡ ನಾಡಗೀತೆಗೆ ಸೂಕ್ತವಾದ ರಾಗಾಲಾಪನೆ ರೂಪಿಸಿ ಅದನ್ನು ಅಧಿಕೃತವಾಗಿ ಘೋಷಿಸಬೇಕು.

  • ಕುವೆಂಪು ಅವರ ಕವನವನ್ನು ಇಡಿಯಾಗಿ ಪಠ್ಯಪುಸ್ತಕಗಳಲ್ಲಿ ಸೇರಿಸಿದರೆ ಅದನ್ನು ವಿಸ್ತೃತವಾಗಿ ಅಧ್ಯಾಪಕರು ವಿವರಿಸಿ ಅದರ ಸಂಪೂರ್ಣ ಧ್ವನ್ಯರ್ಥವನ್ನು ತಿಳಿಸುತ್ತಾರೆ. ‘ನಾಡಗೀತೆ’ ಹಾಡುವಾಗ ಆ ಎಲ್ಲ ವಿವರಗಳು ತಿಳಿದಿರಲೇ ಬೇಕೆಂದಿಲ್ಲ. ‘ನಾಡಗೀತೆ’ ಕರ್ನಾಟಕದ ಅಸ್ಮಿತೆಯ ಸಂಕೇತ. ನಮ್ಮಲ್ಲಿ ನಾಡ ಪ್ರೇಮವನ್ನು ಉಕ್ಕಿಸುವುದು, ಉದ್ದೀಪನಗೊಳಿಸುವುದು ಅದರ ಪ್ರಮುಖ ಆಶಯ. ಈ ದಿಸೆಯಲ್ಲಿ ಸರ್ಕಾರ ‘ನಾಡಗೀತೆ’ಯನ್ನು ಸಂಕ್ಷಿಪ್ತಗೊಳಿಸಬೇಕು. ಇದೇ ಅತ್ಯಂತ ಉಚಿತವಾದುದು.

ಕೆ.ಎಸ್.ನಿಸಾರ್ ಅಹಮದ್ ರವರು ಪೂರ್ಣ ಗೀತೆ ಇರಬೇಕೆನ್ನುತ್ತಾರೆ. (ಪ್ರಜಾವಾಣಿ -22/11/2014)Bschandrasgr