ಗೋವಿಂದ II (ರಾಷ್ಟ್ರಕೂಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋವಿಂದ II (ರಾಷ್ಟ್ರಕೂಟ)ರಾಷ್ಟ್ರಕೂಟ ವಂಶದ ದೊರೆ (ಸು.774-80). ಒಂದನೆಯ ಕೃಷ್ಣರಾಜನ ಜ್ಯೇಷ್ಠ ಪುತ್ರ. ಈತನಿಗೆ ಪ್ರಭೂತವರ್ಷ, ವಿಕ್ರಮಾವಲೋಕ, ಪ್ರತಾಪಾವಲೋಕ ಎಂಬ ಬಿರುದುಗಳಿದ್ದುವು.

ರಾಜ್ಯಭಾರ[ಬದಲಾಯಿಸಿ]

ಗೋವಿಂದ ತನ್ನ ತಂದೆ ಕೃಷ್ಣರಾಜನ ಕಾಲದಲ್ಲೇ ಗಂಗರು ಮತ್ತು ವೆಂಗಿ ಚಾಳುಕ್ಯರ ಮೇಲೆ ಹೋರಾಡಿ ವೀರಯೋಧನೆಂದು ಖ್ಯಾತಿ ಹೊಂದಿದ್ದ. ತಾನೇ ರಾಜನಾದ ಮೇಲೆ ಗೋವರ್ಧನ ಪ್ರಾಂತವನ್ನು (ನಾಸಿಕ ಜಿಲ್ಲೆ) ವಶಪಡಿಸಿಕೊಂಡನೆಂದೂ ಪಾರಿಜಾತ ರಾಜನನ್ನು ಸೋಲಿಸಿದನೆಂದೂ ಶಾಸನಗಳಿಂದ ತಿಳಿದುಬರುತ್ತದೆ. ಆದರೆ ಹಿಂದೆ ರಾಷ್ಟ್ರಕೂಟ ರಾಜ್ಯದ ಒಳಗೆ ಇದ್ದ ಗೋವರ್ಧನ ಪ್ರಾಂತವನ್ನೇಕೆ ಇವನು ವಶಪಡಿಸಿಕೊಳ್ಳಬೇಕಾಯಿತು ಮತ್ತು ಪಾರಿಜಾತ ಯಾರು ಎಂಬುದು ತಿಳಿಯದು. ಗೋವಿಂದ ಚಕ್ರಾಧಿಪತ್ಯವನ್ನು ವಹಿಸಿಕೊಂಡ ಪ್ರಾರಂಭದಲ್ಲಿ ರಾಜ್ಯ ಸಂಘಟನಾಕಾರ್ಯದಲ್ಲಿ ಉತ್ಸಾಹ ತೋರಿಸಿದರೂ ಕ್ರಮೇಣ ರಾಜ್ಯ ಪರಿಪಾಲನೆಯಲ್ಲಿ ಅನಾಸಕ್ತನಾಗಿ, ಸುಖಲೋಲುಪನಾಗಿದ್ದ. ಅಷ್ಟೇ ಅಲ್ಲದೆ ಇವನ ಆಳಿಕೆಯ ಬಹುಕಾಲ ಪೂರ್ತ ಅಧಿಕಾರವನ್ನು ಭದ್ರಪಡಿಸಿಕೊಳ್ಳುವುದರಲ್ಲೇ ಕಳೆಯಿತು. ಅಧಿಕಾರ ಮದದಿಂದ ದುಶ್ಚಟಗಳಿಗೆ ಬಲಿಯಾದ ಗೋವಿಂದ ಪ್ರಜೆಗಳ ಹಾಗೂ ಸಾಮಂತರ ಕೋಪಕ್ಕೆ ಬೇಗನೆ ಗುರಿಯಾದ. ನಾಸಿಕ ಪ್ರಾಂತದಲ್ಲಿ ಇವನ ಅಧೀನನಾಗಿ ಆಳುತ್ತಿದ್ದ ಇವನ ತಮ್ಮ ಧ್ರುವ ಈ ಅವಕಾಶವನ್ನು ಉಪಯೋಗಿಸಿಕೊಂಡು ರಾಜ್ಯಾಡಳಿತದ ಸೂತ್ರವನ್ನು ಕಸಿದುಕೊಳ್ಳಲು ಹವಣಿಸಿದ. ಅಣ್ಣನನ್ನು ಧಿಕ್ಕರಿಸಿ ತನ್ನ ಹೆಸರಿನಲ್ಲಿಯೇ ಶಾಸನವನ್ನು ಹೊರಡಿಸಲು ಪ್ರಾರಂಭಿಸಿದ. ಇದನ್ನರಿತ ಗೋವಿಂದ ಧ್ರುವನನ್ನು ಅಧಿಕಾರ ಸ್ಥಾನದಿಂದ ತಳ್ಳಿ ತಾನೇ ಅಧಿಕಾರವನ್ನು ವಹಿಸಿಕೊಂಡ. ಧ್ರುವ ಅಣ್ಣನ ವಿರುದ್ಧ ದಂಗೆ ಎದ್ದ. ಗೋವಿಂದ ಕಂಚಿ, ಗಂಗವಾಡಿ, ವೆಂಗಿ, ಮಾಳವ ಮೊದಲಾದ ರಾಜರುಗಳ ನೆರವನ್ನು ಯಾಚಿಸಿ ಧ್ರುವನೊಡನೆ ಯುದ್ಧಕ್ಕೆ ಸಿದ್ಧನಾದ. ಆದರೆ ರಾಷ್ಟ್ರಕೂಟ ವೈರಿಗಳತ್ತ ಇವನು ನೆರವಿಗೆ ಕೈಚಾಚಿದ್ದರಿಂದ ಇವನ ಮಂತ್ರಿ ಸಾಮಂತರೂ ಧ್ರುವನ ಪಕ್ಷ ವಹಿಸಿದರು. ವೆಂಗಿಯ ವಿಷ್ಣುವರ್ಧನ ಧ್ರುವನ ಮಾವನಾದುದರಿಂದ ಗೋವಿಂದನ ನೆರವಿಗೆ ಬರಲಿಲ್ಲ. ಉಳಿದ ರಾಜರ ಸಹಾಯ ಬರುವುದಕ್ಕೆ ಮೊದಲೇ ಧ್ರುವ ಗೋವಿಂದನನ್ನು ಸೋಲಿಸಿ ರಾಜ್ಯಾಧಿಕಾರವನ್ನು ಕಿತ್ತುಕೊಂಡು ರಾಷ್ಟ್ರಕೂಟ ಸಾಮ್ರಾಜ್ಯದ ಅಧಿಪತಿಯಾದ. ಗೋವಿಂದ 780ರಲ್ಲಿ ಯುದ್ಧರಂಗದಲ್ಲೇ ಅಸುನೀಗಿರಬೇಕೆಂದು ತೋರುವುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]


ಪೂರ್ವಾಧಿಕಾರಿ
Krishna I
Rashtrakuta Emperor
774–780
ಉತ್ತರಾಧಿಕಾರಿ
Dhruva Dharavarsha
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: