ಗೋವಿಂದವೈದ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋವಿಂದವೈದ್ಯ  :-ಮೈಸೂರು ಒಡೆಯರಾದ ಕಂಠೀರವ ನರಸರಾಜ ರ ಕಾಲದ ಈ ಕವಿ ಕಂಠೀರವ ನರಸರಾಜ ವಿಜಯ ಎಂಬ ಹಳಗನ್ನಡ ಕಾವ್ಯ ರಚಿಸಿದ್ದಾರೆ.ಕಂಠೀರವ ನರಸರಾಜ ಒಡೆಯರ ಆಸ್ಥಾನಕವಿಯಾಗಿದ್ದ ಈತ 1648ರಲ್ಲಿ ಈ ಕೃತಿಯನ್ನು ರಚಿಸಿದ. ದಳವಾಯಿ ನಂಜರಾಜೇಂದ್ರ ತನ್ನಿಂದ ಕಾವ್ಯ ಬರೆಯಿಸಿದನೆಂದು ಕವಿ ಹೇಳಿಕೊಂಡಿದ್ದಾನೆ. ಕಂಠೀರವನರಸರಾಜ ವಿಜಯದ ಕಡೆಯಲ್ಲಿ ಬರುವ ಗದ್ಯಭಾಗದಲ್ಲಿ ‘ರಂಗನಾಥಸ್ವಾಮಿಯ ಕೃಪೆಯಿಂದ ಶ್ರೀನಿವಾಸ ಪಂಡಿತರ ಮಗ ಗೋವಿಂದ ವೈದ್ಯನು ಕಂಠೀರವ ನರಸರಾಜ ವಿಜಯವನ್ನು ವಿರಚಿಸಿ, ಆಚಂದ್ರಾರ್ಕವಾಗಿ ಭೂಮಿಯೊಳಿರಲಿ ಎಂದು ಭಾರತಿನಂಜನ ಮುಖದಿಂದ ವಾಚಿಸಿ ರಾಜಾಸ್ಥಾನದಲ್ಲಿ ವಿಸ್ತಾರಪಡಿಸಿದನು’ ಎಂದು ಉಕ್ತವಾಗಿದೆ. ಗೋವಿಂದ ವೈದ್ಯ ಬರೆದ ಕಾವ್ಯವನ್ನು ಭಾರತಿನಂಜನೆಂಬಾತ ವಾಚಿಸಿದನೆಂದು ಕೆಲವರೂ ಭಾರತಿನಂಜ ಎಂಬುದು ಗೋವಿಂದ ವೈದ್ಯನ ಮತ್ತೊಂದು ಹೆಸರೆಂದು ಕೆಲವರೂ ಊಹಿಸಿದ್ದಾರೆ.

ಕಾವ್ಯ ರಚನೆ[ಬದಲಾಯಿಸಿ]

ಕಂಠೀರವ ನರಸರಾಜ ವಿಜಯ 26 ಸಂಧಿಗಳನ್ನೂ 2,870 ಪದ್ಯಗಳನ್ನೂ ಒಳಗೊಂಡ ಸಾಂಗತ್ಯಕಾವ್ಯ. ಇದರಲ್ಲಿ ಕಥೆಯಿಲ್ಲ; ಕಂಠೀರವ ನರಸರಾಜ ಒಡೆಯರ ವಿಜಯಪರಂಪರೆಯ ಸವಿಸ್ತಾರ ವರ್ಣನೆಯಿದೆ. ಇದೊಂದು ಶುದ್ಧ ಐತಿಹಾಸಿಕ ಕಾವ್ಯವಾಗಿದ್ದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ನಂಜುಂಡನ ಕುಮಾರರಾಮ ಸಾಂಗತ್ಯ ಗೋವಿಂದ ವೈದ್ಯನ ಮೇಲೆ ಪ್ರಭಾವ ಬೀರಿದ್ದರೂ ಕಂಠೀರವ ನರಸರಾಜ ವಿಜಯವೊಂದು ಅಪೂರ್ವವಾದ ವೀರಕಾವ್ಯವಾಗಿ ಪರಿಣಮಿಸಿದೆ. ಕರ್ನಾಟಕದ ಬಗ್ಗೆ ಗೋವಿಂದ ವೈದ್ಯನಿಗಿರುವ ಅಭಿಮಾನ ಇದರಲ್ಲಿ ಎದ್ದು ಕಾಣುತ್ತಿದೆ. ಕನ್ನಡಿಗರ ಶೌರ್ಯ ಸಾಹಸಗಳನ್ನು ಈತ ಉಜ್ವಲವಾಗಿ ಚಿತ್ರಿಸಿ ತನ್ನ ಕೃತಿಗೆ ರಾಷ್ಟ್ರೀಯ ಕಾವ್ಯದ ಮಹತ್ತ್ವವನ್ನು ತಂದುಕೊಂಡಿದ್ದಾನೆ.

ವೈಶಿಷ್ಟ್ಯತೆ[ಬದಲಾಯಿಸಿ]

ಕಂಠೀರವ ನರಸರಾಜ ಒಡೆಯರನ್ನು ಕಲಿಯುಗದ ನರಸಿಂಹಾವತಾರವೆಂದೂ ಮುಸಲ್ಮಾನರನ್ನು ದನುಜರೆಂದೂ ಕಲ್ಪಿಸಿಕೊಂಡಿರುವ ಕವಿ ಆ ದೊರೆಯ ವಂಶ, ಜೀವನ, ಸಾಧನೆಗಳನ್ನು ಸವಿವರವಾಗಿ ನಿರೂಪಿಸಿದ್ದಾನೆ. ರಣದುಲ್ಲಖಾನನ ದಾಳಿ ಹಾಗೂ ಕಂಠೀರವ ನರಸರಾಜ ಒಡೆಯರು ಅವನನ್ನು ಸೋಲಿಸಿದ್ದು ಸ್ವಾರಸ್ಯಪೂರ್ಣ ವಾಗಿ ಚಿತ್ರಿತವಾಗಿವೆ. ತನ್ನ ಕಾಲದ ಜನಜೀವನವನ್ನೂ ರಾಜಕೀಯವನ್ನೂ ಕವಿ ವಿಸ್ತಾರವಾಗಿ ಹಿಡಿದಿಟ್ಟಿರುವುದರಿಂದ ಈ ಕಾವ್ಯ ಚರಿತ್ರೆಗೆ ಪುರಕವಾಗುತ್ತದೆ. ಅಂದಿನ ಯುದ್ಧ ತಂತ್ರಗಳು, ಆಯುಧಗಳು, ಉಡುಗೆ ತೊಡುಗೆಗಳು, ತಿಂಡಿತಿನಿಸುಗಳು ಮುಂತಾದುವನ್ನೆಲ್ಲ ಈ ಕೃತಿಯಲ್ಲಿ ನೋಡಬಹುದು; ಅಂದಿನ ಕಲೆ ಸಂಸ್ಕೃತಿಗಳನ್ನರಿಯಬಹುದು. ಸಮಕಾಲೀನ ಜೀವನದ ಲೌಕಿಕ, ಧಾರ್ಮಿಕ ಮುಖಗಳೆರಡೂ ಇಲ್ಲಿ ಬಿಂಬಿತವಾಗಿವೆ. ಆಗ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದ ಒಂದು ಸಮಗ್ರ ಚಿತ್ರವನ್ನು ಕವಿ ಕೊಟ್ಟಿದ್ದಾನೆ. ಇದು ವೀರಕಾವ್ಯವಾದರೂ, ಮದನಮೋಹಿನೀ ಪ್ರಸಂಗವೊಂದನ್ನು ಅನಗತ್ಯವಾಗಿ ಸೇರಿಸಿ ಶೃಂಗಾರಕ್ಕೂ ಕವಿ ಅವಕಾಶ ಕಲ್ಪಿಸಿದ್ದಾನೆ.

ಪ್ರಾಮುಖ್ಯತೆ[ಬದಲಾಯಿಸಿ]

ಚಾರಿತ್ರಿಕ ಕೃತಿಯಾಗಿ ಪ್ರಾಮುಖ್ಯ ಪಡೆದುಕೊಂಡಿರುವುದು ಮಾತ್ರವಲ್ಲದೆ ಕಾವ್ಯವಾಗಿಯೂ ಕಂಠೀರವ ನರಸರಾಜ ವಿಜಯ ತಕ್ಕಮಟ್ಟಿಗೆ ಗಮನಾರ್ಹವಾಗಿದೆ. ವಿದ್ವಾಂಸರೊಬ್ಬರು ಗೋವಿಂದ ವೈದ್ಯನನ್ನು ಚಾರಣ ಕವಿಯೆಂದೂ ಅವನ ಕೃತಿಯನ್ನು ಚಾರಣ ಕಾವ್ಯವೆಂದೂ ಕರೆದಿದ್ದಾರೆ. ನಂಜುಂಡನ ಕಾವ್ಯವನ್ನು ಬಿಟ್ಟರೆ ಇಂಥ ಕೃತಿ ಕನ್ನಡದಲ್ಲಿ ಮತ್ತೊಂದಿಲ್ಲ ಎನ್ನಬಹುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: