ಗೊಡಚಿನಮಲ್ಕಿ ಜಲಪಾತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

'ಗೊಡಚಿನಮಲ್ಕಿ ಜಲಪಾತ'ವು ಗೋಕಾಕದಿಂದ ಸುಮಾರು ೧೯ ಕಿ.ಮೀ ದೂರದಲ್ಲಿದೆ. ಗೋಕಾಕ ಪಟ್ಟಣದಿಂದ ೮ ಕಿ.ಮೀ ದೂರ ಕ್ರಮಿಸಿ ಗೋಕಾಕ ಜಲಪಾತ ನೊಡಿದ ಮೇಲೆ ಅಲ್ಲಿಂದ ಮುಂದುವರೆದು ಸುಮಾರು ೯ ಕಿ.ಮೀ. ಕ್ರಮಿಸಿದರೆ 'ಗೊಡಚಿನಮಲ್ಕಿ' ಎಂಬ ಗ್ರಾಮ ಸಿಗುತ್ತದೆ. ಈ ಗ್ರಾಮದಿಂದ ವಾಹನದಲ್ಲಿ ಮುಂದುವರೆದು ೨ ಕಿ.ಮೀ ದೂರ ಕ್ರಮಿಸಿ ನಂತರ ಅಲ್ಲಿ ಸಿಗುವ ಸಣ್ಣ ಅಂಗಡಿಗಳ ಬಳಿ ಬಲಕ್ಕೆ ತಿರುಗಿ ಸುಮಾರು ೦.೫ ಕಿ.ಮೀ ನಡೆದು ಹೋದರೆ ಜಲಪಾತ ತಲುಪಬಹುದು. ಈ ಗ್ರಾಮ ಕಬ್ಬು, ಗೋವಿನ ಜೋಳ, ಹತ್ತಿ, ಭತ್ತ, ನೆಲಗಡಲೆಕಾಯಿ, ಬಾಳೆ ಮೊದಲಾದ ಕೃಷಿಪ್ರದೇಶಗಳಿಂದ ಸುತ್ತುವರಿದಿದೆ. ಇಲ್ಲಿ ಹರಿಯುವ ಮಾರ್ಕಾಂಡೇಯ ನದಿಯ ಪರಿ ಅನನ್ಯ. ಮಳೆಗಾಲದಲ್ಲಿ ಮೈದುಂಬಿ ತುಂಬಿಹರಿಯುತ್ತದೆ. ಜಲಪಾತ ಮಳೆಗಾಲದಲ್ಲಿ ಅಂದರೆ ಜೂನ್ ತಿಂಗಳಿನಿಂದ ಫೆಬ್ರವರಿಯವರೆಗೆ ತನ್ನ ಗಢಚಿಕ್ಕಿ ಹರಿದು ತನ್ನ ರೌದ್ರತೆಯ ಪರಿಚಯಮಾಡಿಕೊಡುತ್ತದೆ.

ಜಲಪಾತ ಅಷ್ಟೇನೂ ಎತ್ತರವಿಲ್ಲ[ಬದಲಾಯಿಸಿ]

ನದಿ ಅತಿ ಎತ್ತರದಿಂದ ಧುಮುಕದಿದ್ದರೂ, ಈ 'ಗೊಡಚಿನಮಲ್ಕಿ ಜಲಪಾತ'ದ ಚೆಲುವು ಕಡಿಮೆಯಾಗಿಲ್ಲ. ಉದ್ದಕ್ಕೆ ಸಾಲಾಗಿರುವ ಬಂಡೆಗಳಮೇಲೆ ಅರ್ಥಭಾಗದಲ್ಲಿ ನೀರು ಮೇಲಿಂದ ಬಿರುಸಾಗಿ ಹರಿದು ಬರುವಾಗ ಜಲಪಾತದಲ್ಲಿ ನೀರಿನ ಒಂದು ಬಿಳಿಪರದೆ ಸೃಷ್ಟಿಯಾಗುತ್ತದೆ. ಇನ್ನರ್ಧಭಾಗದ ಬಂಡೆಯಮೇಲೆ ನೀರು ಝರಿಯ ತರಹ ಲಾಲಿತ್ಯಪೂರ್ಣವಾಗಿ ಶಾಂತವಾಗಿ ಧುಮ್ಮಿಕ್ಕುತ್ತದೆ. ಜಲಪಾತವಿನ್ನೂ ಪ್ರಸಿದ್ಧಿಗೆ ಬಂದಿಲ್ಲ. ಹೋಗಲು ನಿರ್ದಿಷ್ಟವಾದ ರಸ್ತೆಯೂ ಇಲ್ಲ. ವಾಹನ ನಿಲುಗಡೆಪ್ರದೇಶದಿಂದ ಮುಂದೆ ಕಾಣುವ ಕಾಲುಹಾದಿಯಲ್ಲಿ ನಡೆಯುತ್ತಾ ಸಾಗಿ ಚಿಕ್ಕಕೆರೆಯ ಏರಿಯಮೇಲೆ ಸಾಗಿದರೆ, ಹೊಲಗದ್ದೆಗಳು ಹಸಿರುಬಣ್ಣದ ಕಾಣಿಸುತ್ತವೆ. 'ಗೋಕಾಕ್' ನಿಂದ 'ಕೊಣ್ಣೂರ ರಸ್ತೆ'ಯಲ್ಲಿ ಸುಮಾರು ೧೫ ಕಿ.ಮೀ.ದೂರ ಹೋದರೆ 'ಗೊಡಚಿನಮಲ್ಕಿ ಗ್ರಾಮ'ವನ್ನು ತಲುಪಬಹುದು. ಅಲ್ಲಿಂದ ಸುಮಾರು ೨ ಕಿ.ಮೀ.ಕ್ರಮಿಸಿದರೆ 'ಜಲಪಾತದ ವಾಹನ ನಿಲುಗಡೆ ಪ್ರದೇಶ'ವನ್ನು ಸೇರಬಹುದು. ಜಲಪಾತ ಅಲ್ಲೇ ೧ ಕಿ.ಮೀದೂರದಲ್ಲಿ ಕಾಣಿಸುತ್ತದೆ. ನೀರಿನ ಶಬ್ದವನ್ನೂ ಆಲಿಸಬಹುದು.

ವಸತಿ,ಊಟದ ವ್ಯವಸ್ಥೆಗಳಿಲ್ಲ[ಬದಲಾಯಿಸಿ]

ಇಲ್ಲಿ ಹೋಟೆಲ್ ಗಳಾಗಲಿ ಇನ್ನೆನಾದರು ಊಟತಿಂಡಿಗಳ ವ್ಯವಸ್ಥೆಯಿಲ್ಲ. ನಾವೇ ಊಟತಿಂಡಿ ಮುಂತಾದ ಆಹಾರವಸ್ತುಗಳನ್ನೂ, ಮತ್ತು ಕುಡಿಯುವ ನೀರನ್ನೂ ಕೊಂಡೊಯ್ಯುವುದು ಒಳ್ಳೆಯದು.ಪಾಶಾಪುರಕ್ಕೆ ಹೋಗುವ ಬಸ್ ಗಳು ಗೊಡಚಿನಮಲ್ಕಿ ಮೂಲಕ ಹಾದುಹೋಗುತ್ತವೆ. 'ಗೋಕಾಕ್' ನಿಂದ 'ಜೀಪ್,' 'ಸುಮೋಗಳು', ತಲಾ ೨೫ ರೂಪಾಯಿನಂತೆ ಶುಲ್ಕ ಪಡೆದು 'ಗೊಡಚಿನಮಲ್ಕಿ ದರ್ಶನ'ಮಾಡಿಸಿ ವಾಪಸ್ 'ಗೋಕಾಕ್' ಗೆ ಕರೆತರುತ್ತಾರೆ. ರವಿವಾರ ಅಧಿಕ ಸಂಖೆಯಲ್ಲಿ ಪ್ರವಾಸಿಕರು ಇರುತ್ತಾರೆ. ಈ 'ಪಿಕ್ನಿಕ್ ತಾಣ' ಇನ್ನೂ ಮೂಲಭೂತ ಸೌಲಭ್ಯಗಳಿಗೆ ವಂಚಿತವಾಗಿದೆ.

'ಮಾರ್ಕಾಂಡೇಯ ನದಿಯ ಕೊಡುಗೆ'[ಬದಲಾಯಿಸಿ]

'ಮಲೆನಾಡೂ' ಅಲ್ಲ ಅಥವಾ 'ಬಟ್ಟಬಯಲು ಪ್ರದೇಶ'ವೂ ಅಲ್ಲದ ಕುರುಚಲು ಕಾಡಿನ ಚಿಕ್ಕ ಬೆಟ್ಟಗಳ ಮಧ್ಯದಿಂದ ಹರಿದುಬರುವ ಮಾರ್ಕಾಂಡೇಯ ನದಿ, ಜಲಪಾತವನ್ನು ಉಂಟುಮಾಡುತ್ತದೆ. ಇಳಿಜಾರು ಹಾದಿಯಲ್ಲಿ ಸಾಗಿಬಂದು ಬಂಡೆಗಳ ಮೇಲಿಂದ ಧುಮ್ಮಿಕ್ಕಿ ಕೆಳಗೆ ಬೀಳುವ ಸಮಯದಲ್ಲಿ ಸದ್ದು ಸುಮಾರು ಅರ್ಧ ಕಿ.ಮೀ.ತನಕ ಕೇಳಿಸುತ್ತದೆ.

ಜಲಪಾತದ ದಾರಿ[ಬದಲಾಯಿಸಿ]

ಕಾಲುದಾರಿಯಲ್ಲಿ ಸಾಗಿ,'ಕೆರೆ ಏರಿ'ಯನ್ನು ಹತ್ತಿ ಮುಂದೆ ಸಾಗಿದಂತೆ, 'ಕುರುಚಲು ಗಿಡಗಳ ಕಾಡ'ನ್ನು ಪ್ರವೇಶಿಸುತ್ತೇವೆ. ಎಡಭಾಗಕ್ಕೆ 'ನೀಲಗಿರಿ ನೆಡುತೋಪು', ಇದ್ದರೆ ಬಲಭಾಗಕ್ಕೆ 'ಮಾರ್ಕಾಂಡೇಯ ನದಿ' ಹರಿಯುತ್ತದೆ. ನದಿ ಮತ್ತು ನೆಡುತೋಪನ್ನು ಭೇದಿಸುವಂತೆ ಕಟ್ಟಿದ ಕಲ್ಲಿನ ಕಂಪೌಂಡ್ ನ ಬದಿಯಲ್ಲಿ ನಡೆಯುತ್ತಾ ಗಿಡಮರಗಳ ಸಂದಿಯಲೇ ನಡೆದರೆ, ವಿಶಾಲ ಬಯಲಿಗೆ ಬಂದು ಸೇರುತ್ತೇವೆ. ಇಲ್ಲಿ ನೀರು ಕೆಳಗೆ ಬೀಳುವಾಗ ಶಬ್ದವನ್ನುಂಟುಮಾಡುತ್ತದೆ. ನೀರು ಜಿಗಿದು ಹಾರಿದ ರಭಸಕ್ಕೆ ಮೇಲಿದ್ದ ನೀರಿನ ಹನಿಗಳು ಸೃಷ್ಟಿಸಿದ ದಟ್ಟವಾದ ಹೊಗೆ ಜಲಪಾತದ ಕುರುಹನ್ನು ನೀಡುತ್ತದೆ. ೨೫ ಅಡಿ ಎತ್ತರದಿಂದ ಧುಮುಕುವ ನೀರು ಮಾತೂ ಕೇಳಿಸದಷ್ಟು ಸದ್ದು ಗದ್ದಲವನ್ನುಂಟುಮಾಡುತ್ತದೆ. ಗಾಳಿಬೀಸಿದಾಗ ನೀರ ಕಣಗಳ ಸಿಂಚನ ಕೆಲವೇ ನಿಮಿಷಗಳಲ್ಲಿ ಎಲ್ಲರನ್ನು ತೋಯಿಸಿಬಿಡುತ್ತದೆ. ಅಂಚಿನ ಬಂಡೆಗಳು ಸದಾಕಾಲವೂ ನೀರಿನ ಹೊಡೆತದಿಂದ ಪಾಚಿಕಟ್ತಿರುತ್ತವೆ. ಇವು ಹಲವಾರು ಚಿತ್ರವಿಚಿತ್ರ ಬಣ್ಣಗಳನ್ನು ಪಡೆದು ನೋಡುಗರನ್ನು ಆಶ್ಚರ್ಯಚಕಿತಗೊಳಿಸುತ್ತವೆ.