ಕೊಟ್ರೇಶ್ ಎಸ್.ಉಪ್ಪಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಟ್ರೇಶ್ ಎಸ್. ಉಪ್ಪಾರ್ ರವರು ಮೂಲತಃ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಬಿ.ಓಬಳಾಪುರದಲ್ಲಿ ಶ್ರೀಸಣ್ಣ ಮೂಗಪ್ಪ ಮತ್ತು ಸಾವಿತ್ರಮ್ಮ ದಂಪತಿಗಳ ಜೇಷ್ಠ ಪುತ್ರರಾಗಿ 1980 ಏಪ್ರಿಲ್ 11 ರಂದು ಜನಿಸಿದರು. ಪ್ರಸ್ತುತ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ತಾಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂ.ಎ.ಬಿ.ಇಡಿ ಪದವೀಧರರಾದ ಇವರು ಕಳೆದ ಒಂದೂವರೆ ದಶಕದಿಂದ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ದುಡಿಯುತ್ತಾ ಬಂದಿದ್ದಾರೆ. ಕಾವ್ಯ, ಕಥೆ, ಪ್ರಬಂಧ ಹಾಗೂ ಶಿಕ್ಷಣ ಕ್ಷೇತ್ರದ ಹಲವಾರು ವಿಚಾರಗಳನ್ನು, ವೈಜ್ಞಾನಿಕ ವಿಷಯಗಳ ಕೌತುಕಗಳನ್ನು, ಪ್ರಗತಿಪರ ಚಿಂತನಗಳನ್ನು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಬರೆದು ರಾಜ್ಯಾದ್ಯಂತ ಅನೇಕ ಓದುಗರನ್ನು ತಲುಪಿದ್ದಾರೆ.

ಗಣ್ಯ ಆಧುನಿಕ ವಚನಕಾರರಾದ ಇವರು- ವಚನ ದುಂಧುಬಿ (2005), ವಚನ ದೀಪಿಕಾ (2009), ವಚನ ಮಾಣಿಕ್ಯ (2013), ವಚನ ಸಾನಿಕಾ (2014), ವಚನ ವಿನೋದ (2014), ವಚನ ಲಾವಣ್ಯ (2015), ಎಂಬ ಆಧುನಿಕ ವಚನ ಸಂಕಲಗಳನ್ನು ನೀಡಿದ್ದಾರೆ. ಮುಗಿಲಾಚೆಗಿನ ಮಾತು (2010), ಮೃತ್ಯುವಿನಾಚೆಯ ಬದುಕು (2010), ಕತ್ತಲಾಚೆಯ ಹಾದಿ(2014), ಸಾವಿನಾಚೆಯ ಅಳಲು(2015) ಮಾತೃ ಮಡಿಲು ಎಂಬ ಕವನ ಸಂಕಲನಗಳು, ವೈಜ್ಞಾನಿಕ ವಿಸ್ಮಯಗಳು (2010), ವಿಶ್ವದ ವೈಚಿತ್ರಗಳು (2010), ವೈಜ್ಞಾನಿಕ ಕೌತುಕಗಳು (2011), ವಿದ್ಯಾರ್ಥಿಗಳಿಗಾಗಿ ವಿಜ್ಞಾನ (2012), ಪರಮಾಣು ಸಂಶೋಧನೆ ಮತ್ತು ವಿಜ್ಞಾನಿಗಳು (2011), ಅನುಗನಾಳಲ್ಲೊಂದು ಔಷಧಿವನ(2011) ಎಂಬ ವಿಜ್ಞಾನ ವಿಚಾರಕ್ಕೆ ಸಂಬಂಧಿಸಿದ ಕೃತಿಗಳು; ಗುಣಾತ್ಮಕ ಶಿಕ್ಷಣದ ಮಜಲುಗಳು(2010), ಶಿಕ್ಷಕ, ಮಗು ಮತ್ತು ಶಿಕ್ಷಣ(2013) ಎಂಬ ಶೈಕ್ಷಣಿಕ ಕೃತಿಗಳು; ಮಂತಣ(2010), ಅವಳ ಮುಖಗಳು(2011), ಮಂಥನ(2012) ವೈಚಾರಿಕ ಕೃತಿಗಳು. ‘ನಿಬಂಧಗಳು’ (2011), ಪರಿಸರ ಪ್ರೇಮಿ ಅನುಗನಾಳು(2011), ಡಾ|| ರಾಜೇಂದ್ರಸಿಂಗ್ ಮತ್ತು ಇತರ ಲೇಖನಗಳು (2013), ಮಹಾಕವಿ ಕುವೆಂಪು ಮತ್ತು ಇತರ ಲೇಖನಗಳು (2013), ಸಮಷ್ಠಿ(2013), ‘ವ್ಯಾಕರಣ ದರ್ಪಣಂ’(2013) ಹೀಗೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇನ್ನೂ ಐದಾರು ಕೃತಿಗಳು ಅಚ್ಚಿನಲ್ಲಿವೆ. ಕಾವ್ಯ, ಕಥೆ, ಲೇಖನ, ವಚನ ಸಾಹಿತ್ಯ, ವಿಜ್ಞಾನ, ಶಿಕ್ಷಣ ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಯಶಕಂಡಿದ್ದಾರೆ. ಸೃಜನಾತ್ಮಕ ಲೇಖಕರಾದ ಇವರು ಕನ್ನಡ ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್, ಭಾರತ ಜ್ಞಾನ ವಿಜ್ಞಾನ ಸಮಿತಿ, ಮನೆ-ಮನೆ ಕವಿಗೋಷ್ಠಿ ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಇವರು "ಮಾಣಿಕ್ಯ ಪ್ರಕಾಶನವನ್ನು " ಪ್ರಾರಂಭಿಸಿ ಜಿಲ್ಲೆ ಹಾಗೂ ರಾಜ್ಯದಾದ್ಯಂತ ಯುವ ಸಾಹಿತಿಗಳಿಗೆ ಇದರ ಮುಖೇನ ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೇ ಸೃಜನಶೀಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿಯನ್ನು ಹುಟ್ಟುಹಾಕಿ ಸಾಹಿತ್ಯ , ಕಲೆ ಹಾಗೂ ಸಾಂಸ್ಕೃತಿಕವಾಗಿ ಹಲವಾರು ಕಾಯ‍್ಕ್ರಮಗಳನ್ನು ಮಾಡುತ್ತಿದ್ದಾರೆ. ಉಚಿತವಾಗಿ ಯುವ ಸಾಃಇತಿಗಳ ಕೃತಿಗಳನ್ನು ತಮ್ಮ ಪ್ರಕಾಶನದಲ್ಲಿ ಪ್ರಕಟಿಸುತ್ತಿದ್ದಾರೆ. ಸಾಹಿತ್ಯ ಸೇವೆಗಾಗಿ ಡಾ|| ಸಿದ್ಧಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ, ಕರುನಾಡ ಧೃವತಾರೆ ರಾಜ್ಯ ಪ್ರಶಸ್ತಿ, ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ, ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, ಕುವೆಂಪು ಸಾಹಿತ್ಯ ಪ್ರಶಸ್ತಿ, ನಾಡೋಜ ಡಾ|| ದೇ.ಜ.ಗೌ.ಸಾಹಿತ್ಯ ರತ್ನ ಪ್ರಶಸ್ತಿ, ಸರ್ವೋತ್ತಮ ಶಿಕ್ಷಕ ಪ್ರಶಸ್ತಿ ಅಲ್ಲದೇ ಪ್ರಕಾಶನದ 2014 ರ ಉತ್ತಮ ಲೇಖಕ ಪ್ರಶಸ್ತಿ, ಶಿಕ್ಷಣ ಸೇವಾ ರತ್ನ ಪ್ರಶಸ್ತಿಗಳು ಸಂದಿವೆ.