ಕೆ-೨
ಕೆ-೨ ಪ್ರಪಂಚದ ಎರಡನೆಯ ಅತಿ ಎತ್ತರದ ಪರ್ವತಶಿಖರ. ಇದು ಹಿಮಾಲಯದ ಕರಾಕೋರಮ್ ಶ್ರೇಣಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದ ಗಡಿಯಲ್ಲಿದೆ. ಪಾಕ್ ಆಕ್ರಮಿತ ಕಾಶ್ಮೀರವು ತನ್ನ ಭೂಪ್ರದೇಶವೆಂದು ಭಾರತದ ನಿಲುವಾದ್ದರಿಂದ ಆ ದೃಷ್ಟಿಯಲ್ಲಿ ಕೆ-೨ ಭಾರತದ ಅತ್ಯುನ್ನತ ಶಿಖರವೆನಿಸಲ್ಪಡುವುದು. ೮೬೧೧ ಮೀ. (೨೮೨೫೧ ಅಡಿ) ಎತ್ತರದ ಕೆ-೨ ಗೆ ಖೋಗಿರ್, ಗಾಡ್ವಿನ್-ಆಸ್ಟಿನ್, ಡಪ್ಸಾಂಗ್, ಲಂಬಾ ಪಹಾಡ್ ಎಂಬ ಇತರ ಹೆಸರುಗಳೂ ಇವೆ. ೧೮೫೬ರಲ್ಲಿ ಗಾಡ್ವಿನ್-ಆಸ್ಟಿನ್ ನ ನೇತೃತ್ವದ ಯುರೋಪ್ ನ ತಂಡವೊಂದು ಈ ಪರ್ವತದ ಮೋಜಣಿ ನಡೆಸಿ ಎತ್ತರವನ್ನು ನಿಖರವಾಗಿ ನಿರ್ಧರಿಸಿತು. ಈ ಪರ್ವತವನ್ನು ಏರಲು ಹಲವು ದಾರಿಗಳಿವೆ. ಆದರೆ ಯಾವುದೇ ದಾರಿಯೂ ಸುಗಮವೆಂದು ಹೇಳಲಾಗದು. ಅತಿ ಹೆಚ್ಚಿನ ಎತ್ತರದ ಕಾರಣ ಆಮ್ಲಜನಕದ ತೀವ್ರ ಕೊರತೆ, ಹಲವು ದಿನಗಳವರೆಗೆ ಬಿಡದಂತೆ ಬೀಸುವ ಹಿಮದ ಬಿರುಗಾಳಿ, ಅತಿ ಕಡಿದಾದ ಪರ್ವತದ ಮೇಲ್ಮೈ - ಈ ಕಾರಣಗಳಿಂದಾಗಿ ಕೆ-೨ ಶಿಖರವು ಪರ್ವತಾರೋಹಿಗಳಿಗೆ ಒಂದು ಕಠಿಣ ಸವಾಲಾಗಿದೆ. ೧೯೫೪ರಲ್ಲಿ ಇಟಲಿಯ ಪರ್ವತಾರೋಹಿ ತಂಡವೊಂದು ಕೆ-೨ ಪರ್ವತವನ್ನು ಮೊಟ್ಟಮೊದಲ ಬಾರಿಗೆ ಏರುವಲ್ಲಿ ಸಫಲವಾಯಿತು.