ಕೆರೆಮನೆ ಮಹಾಬಲ ಹೆಗಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆರೆಮನೆ ಮಹಾಬಲ ಹೆಗಡೆ
Bornಜೂನ್ ೩೦, ೧೯೨೭
ಉತ್ತರ ಕನ್ನಡ ಜಿಲ್ಲೆಯಲ್ಲಿ
Diedಅಕ್ಟೋಬರ್ ೩೦, ೨೦೦೯
Occupationಯಕ್ಷಗಾನ ವಿದ್ವಾಂಸರು ಮತ್ತು ಕಲಾವಿದರು

ಕೆರೆಮನೆ ಮಹಾಬಲ ಹೆಗಡೆ (ಜೂನ್ ೩೦, ೧೯೨೭ - ಅಕ್ಟೋಬರ್ ೩೦, ೨೦೦೯) ಯಕ್ಷಗಾನ ಲೋಕದ ಮಹಾನ್ ವಿದ್ವಾಂಸರು ಮತ್ತು ಕಲಾವಿದರು. ಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ಅಂಥ ಮನೆತನ ಮತ್ತು ಕಲೆಯ ಅನರ್ಘ್ಯ ಪರಂಪರೆಯ ಕೊಂಡಿಯಾಗಿದ್ದವರು ಮಹಾಬಲರ ಹೆಗಡೆ.

ಜೀವನ[ಬದಲಾಯಿಸಿ]

ಮಹಾಬಲರು ಹುಟ್ಟಿದ್ದು ಜೂನ್ ೩೦, ೧೯೨೭ರ ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ. ತಂದೆ ತಾಯಿ ಶ್ರೀರಾಮ ಹೆಗಡೆ ತಾಯಿ ಮಾದೇವಿ.

ಮಹಾಬಲರು ಚಿತ್ರಾಪುರದ ಶ್ರೀಪಾದರಾಯರಿಂದ ಹಿಂದೂಸ್ಥಾನಿ ಸಂಗೀತದ ಪ್ರಾರಂಭಿಕ ಅಭ್ಯಾಸ ನಡೆಸಿದ ನಂತರದಲ್ಲಿ ಧಾರಾವಾಡದ ನಾರಾಯಣ ಮುಜುಂದಾರರಿಂದ ಹೆಚ್ಚಿನ ಸಂಗೀತ ಶಿಕ್ಷಣ ಪಡೆದರು. ಶಾಲೆಯಲ್ಲಿ ಕಲಿತದ್ದು ನಾಲ್ಕನೇ ತರಗತಿಯವರೆಗೆ ಮಾತ್ರ.

ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿ. ಅಪ್ಪಟ ತುಂಟ. ಪುಂಡಾಟ. ಆದರೆ ಚಿಕ್ಕಪ್ಪ ಕೆರೆಮನೆ ಶಿವರಾಮ ಹೆಗಡೆಯವರಿಗೆ ‘ಮಾಣಿ ಫಟಿಂಗನಾದರೆ ಕಷ್ಟ’ ಎಂದು ಕಂಡದ್ದೇ ಮಹಾಬಲರ ೧೪ನೇ ವರ್ಷದಲ್ಲಿ ಬಂಕಿಕೊಂಡ್ಲ ಎಂಬ ಊರಲ್ಲಿ ‘ವೃಷಸೇನ’ ವೇಷ ಹಾಕಿಸಿದರು. ಹೀಗೆ, ರಂಗಕ್ಕೆ ಪ್ರವೇಶಿಸಿದ ಮಹಾಬಲರು ನಂತರ ಶರಧಿ ಗಂಭೀರ. ಕೊನೆಗೆ, 60ಕ್ಕೂ ಅಧಿಕ ವರ್ಷ ರಂಗದ ಜೊತೆಗಿನ ಅವಿನಾಭಾವ ಸಂಬಂಧದ ಅನಂತರ ವೇಷ ಕಳಚಿ ರಂಗದಿಂದ ನಿವೃತ್ತರಾದುದು ೭೫ರ ಹರೆಯದಲ್ಲಿ.

ವಿಶ್ವದೆಲ್ಲೆಡೆ ಹೆಜ್ಜೆ[ಬದಲಾಯಿಸಿ]

ಮಹಾಬಲ ಹೆಗಡೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಅಂದಿನ ಪ್ರಸಿದ್ಧ ಕಲಾವಿದರೆಲ್ಲರೊಂದಿಗೂ ಪಾತ್ರ ಹಾಕಿ ಕುಣಿದಿದ್ದರು. ೧೯೮೨ರಲ್ಲಿ ಭಾರತ ಸರ್ಕಾರದ ಸಾಂಸ್ಕೃತಿಕ ತಂಡದಲ್ಲಿ ಯಕ್ಷಗಾನವನ್ನು ಪ್ರತಿನಿಧಿಸಿ ಯುರೋಪ್ ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದರು. ಹಾಗೆಂದು ಮಹಾಬಲರು ಯಕ್ಷಗಾನಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಂಡವರಲ್ಲ.. ಜೀವನವನ್ನು ಬೆಳಗಬಲ್ಲ ಎಲ್ಲ ಕಲೆಗಳ ಹೂರಣದಲ್ಲಿ ಮಿಂದೆದ್ದವರು ಮಹಾಬಲರು. ಸಂಗೀತ, ಸಾಹಿತ್ಯ, ನಾಟಕ, ಭಜನೆ, ಮದ್ದಳೆವಾದನ.., ಹೀಗೆ ಎಲ್ಲದರಲ್ಲೂ ಅವರು ಮಹಾಬಲರೆ! ಅವರು ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ; ಸಂಜೆ ವೇಳೆ, ಮನೆಯಲ್ಲಿ ಕುಳಿತು ಎಲೆಕ್ಟ್ರಾನಿಕ್ ಶ್ರುತಿಪೆಟ್ಟಿಗೆ ಇಟ್ಟುಕೊಂಡು ಹಾಡುತ್ತಿದ್ದರಂತೆ.

ಪ್ರಯೋಗಶೀಲತೆ[ಬದಲಾಯಿಸಿ]

ಯಕ್ಷಗಾನದಲ್ಲಿ ಸಂಗೀತವನ್ನು ಪರಂಪರೆಗೆ ಭಂಗ ಬಾರದಂತೆ ಅಳವಡಿಸುವುದರ ಕುರಿತು ಸಾಕಷ್ಟು ಚಿಂತನೆ ಮಾಡಿದವರವರು. ಶಾಸ್ತ್ರೀಯ ಸಂಗೀತವನ್ನು ಕಲಿತರೂ ಅಲ್ಲಿ ಅವರ ಹುಡುಕಾಟ ಯಕ್ಷಗಾನಗಳಲ್ಲಿನ ಶಾಸ್ತ್ರೀಯತೆಯನ್ನು ಹುಡುಕುವುದಾಗಿತ್ತು. ಭಾಗವತಿಕೆಯಲ್ಲಿ ರಾಗದ ಖಚಿತತೆ ಬಯಸುತ್ತಿದ್ದರು. ಶ್ರುತಿಬದ್ಧವಾಗಿ ಹಾಡಿಕೊಂಡೇ ಅಭಿನಯಿಸಿ ಅರ್ಥ ಹೇಳುವುದು ಅವರಿಗೆ ಸಿದ್ಧಿಸಿತ್ತು. ಅದಕ್ಕಾಗಿಯೇ ಅವರಿಗೆ ಎಂತಹ ಭಾಗವತ ಹಾಡಿದರೂ ಸರಿ ಬರುತ್ತಿರಲಿಲ್ಲ. ಕಡು ನಿಷ್ಠುರವಾಗಿಯೇ ನಡೆದುಕೊಳ್ಳುತ್ತಿದ್ದರು. ಮೊಟ್ಟ ಮೊದಲು ಬಡಗಿನ ಚೆಂಡೆಗೆ ಶೃತಿಯನ್ನು ಅಳವಡಿಸಿದ್ದೂ ಮಹಾಬಲರೇ!

ಶಾಸ್ತ್ರೀಯ ಸಂಗೀತ ಒಂದು ಬದ್ಧತೆಯನ್ನು, ಶಿಸ್ತನ್ನು, ಕ್ರಮವನ್ನು, ಆಚಾರವನ್ನು ಬಯಸುವ ಕಲೆ. ಆದರೆ ಯಕ್ಷಗಾನದ ಸ್ವರೂಪ ಸ್ವಚ್ಛಂದ. ಹಾಗಾಗಿ ತಮ್ಮ ಕಲಾ ಬದುಕಿನಲ್ಲಿ ಯಕ್ಷಗಾನದ ಶಾಸ್ತ್ರೀಯ ಅಂಶವನ್ನೇ ಹುಡುಕಿ ತಪ್ಪು-ಸರಿಗಳನ್ನು ಎತ್ತಿ ತೋರಿಸುತ್ತಿದ್ದರು. ವಿಶ್ವಾಮಿತ್ರ ಮೇನಕೆಯಲ್ಲಿ ಅಭಿನಯಿಸುವಾಗ ಗಂಗಾಧರ ಶಾಸ್ತ್ರಿಯವರ “ಎಲ್ಲೆಲ್ಲೂ ಸೊಬಗಿದೆ, ಸುತ್ತೆಲ್ಲ ಸೊಗಸಿದೆ” ಎನ್ನುವ ಪದ್ಯವನ್ನು ಸುಮಾರು ೧೯೫೫ರಲ್ಲಿ ಬಳಸಿಕೊಂಡರೂ, ಅದು ಯಕ್ಷಗಾನಕ್ಕೆ ಹೊಂದುವುದಿಲ್ಲ ಎಂದು ತಿಳಿದಾಗ ನಿರ್ದಾಕ್ಷಿಣ್ಯವಾಗಿ ಬಿಟ್ಟುಬಿಟ್ಟರು.

ರಂಗ ಪಯಣದಲ್ಲಿ ಅನೇಕ ಪ್ರಯೋಗವನ್ನು ಮಾಡಿ ಯಕ್ಷಗಾನಕ್ಕೆ ಪೂರಕವಾದದ್ದನ್ನಷ್ಟೇ ಉಳಿಸಿಕೊಂಡವರು. ಪ್ರಯೋಗವೆಂಬುದು ವಿಕಸನವೇ ಹೊರತು ಪ್ರತ್ಯೇಕತೆಯಲ್ಲ, ಕಲಾವಿದನ ಅಭಿನಯ ಕೇವಲ ಬಣ್ಣ ಬದಲಿಸುವುದಷ್ಟೇ ಅಲ್ಲ ಎಂದು ನಂಬಿದ್ದರು. ಹಾಗಾಗಿ ಮಹಾಬಲ ಹೆಗಡೆಯವರ ಪಾತ್ರಗಳು ಶಾಸ್ತ್ರದ ಆಧಾರದಿಂದ ಸೃಜನಶೀಲವಾಗಿ ಹೊಸ ನಾಯಕತ್ವದ ಆಯಾಮಕ್ಕೆ ಕಾರಣವಾಯಿತು. ಕಲಾವಿದನ ರಂಗ ಪಯಣದಲ್ಲಿನ ಅನುಭವಜನ್ಯ ಪ್ರಯೋಗಗಳೇ ಕಲೆಯ ಮೇಲಿನ ಹಿಡಿತವನ್ನು ಕಟ್ಟಿಕೊಡುತ್ತವೆ. ವರ್ತಮಾನದಿಂದ ಪೌರಾಣಿಕ ಲೋಕಕ್ಕೆ ಕರೆದೊಯ್ಯುವ, ಯಕ್ಷಲೋಕದ ವರ್ತಮಾನ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಅವರ ವಾಕ್ ಸಾಮರ್ಥ್ಯ, ಕಲಾಭಿಜ್ಞತೆ, ಚಿಕಿತ್ಸಕ ದೃಷ್ಟಿ ಎಲ್ಲವೂ ಅನುಪಮ. ಜೊತೆಗೆ ಪಾತ್ರದ ವ್ಯಕ್ತಿತ್ವವನ್ನು ಸಮಕಾಲೀನ ಸಂದರ್ಭಕ್ಕೆ ಬೆಸೆಯುತ್ತಾ; ಪ್ರೇಕ್ಷಕವರ್ಗದಲ್ಲಿ ಜಾಗೃತಿ, ಚಿಂತನೆ ತರುತ್ತಿದ್ದ ಅವರ ವಾಕ್ಪಟುತ್ವ, ಪಾತ್ರಕ್ಕೆ ತಕ್ಕುದಾದ ಕಂಠ, ಭಾವಾಭಿನಯ, ಸೂಕ್ತವಾದ ನಡೆ-ನುಡಿ ಮತ್ತು ನೃತ್ಯಾಭಿನಯ, ಲಯಬದ್ಧ ಕುಣಿತ ಅವರದ್ದು. ವಿಶಿಷ್ಟವಾದ ಚೌತಾಳರ ಕುಣಿತ ಮಹಾಬಲರದ್ದೇ. ನಾಟ್ಯಶಾಸ್ತ್ರದಲ್ಲಿ ಬರುವ ಸಾತ್ವತೀ ಮತ್ತು ಆರಭಟೀ ವೃತ್ತಿಗೆ ಮಾದರಿಯಾಗಬಲ್ಲ ಪಾತ್ರವನ್ನು ಕಟ್ಟಿಕೊಟ್ಟವರು ಮಹಾಬಲರು.

ಯಕ್ಷಗಾನದ ಸವ್ಯಸಾಚಿ[ಬದಲಾಯಿಸಿ]

ಯಕ್ಷಗಾನದಲ್ಲಿ ವೇಷ ಮಾಡುವುದೆಂದರೆ, ಒಂದಷ್ಟು ಗಟ್ಟಿ ಮಾತಿನಿಂದ, ಚರ್ವಿತ ಚರ್ವಣ ಸೇರಿಸಿ ಮಾತು ಹೆಣೆದು, ಶಬ್ದಾಲಂಕಾರ ಬಳಸಿ ಪ್ರೇಕ್ಷಕರನ್ನು ಮೋಡಿ ಮಾಡುವುದು ಎಂದೇ ಆಗಿದೆ. ಆದರೆ ಉಪಮಾ – ರೂಪಕ ಅಲಂಕಾರಗಳಿಂದಾಗಿ ಮಹಾಬಲರದ್ದು ವಿಪುಲವಾದ ಸಾಹಿತ್ಯದ ಅಧ್ಯಯನದಿಂದ ಅರಿವು ಪಡೆದು ಸಂಸ್ಕಾರಗೊಂಡ ಭಾಷೆ. ನೇರ ತೂಕ ತಪ್ಪದ ಗತ್ತಿನ ಮಾತು. ನಾಟಕ ಕ್ಷೇತ್ರದಲ್ಲಿಯೂ ತಮ್ಮ ಸ್ತ್ರೀಪಾತ್ರಕ್ಕಾಗಿ, ಪ್ರಸಿದ್ಧಿ ಗಳಿಸಿದ್ದರು. ಹಾಗಾಗಿ ಮಾತಿನ ವ್ಯಂಗ್ಯ ವೈಶಿಷ್ಟ್ಯಕ್ಕೆ ಒಂದರ್ಥದಲ್ಲಿ ಕಾರಣವೇ ನಾಟಕ ರಂಗದ ಅನುಭವ. ರಂಗಕ್ಕೆ ಒಗ್ಗುವ ಹಾಗೆ ಪ್ರಾದೇಶಿಕ ಪದಗಳ (ಗ್ರಾಮೀಣ/ ಗಾಂವಟಿ ಶಬ್ದ) ಬಳಕೆಯೂ ಮಹಾಬಲ ಹೆಗಡೆ ಶೈಲಿ ವೈಶಿಷ್ಟ್ಯ..

ರಂಗದ ಕುರಿತಾದ ಅಧ್ಯಯನದಿಂದ ವೈಚಾರಿಕ ಸಂಪನ್ನರೆನಿಸಿದವರು ಹೆಗಡೆ. ಇವೆಲ್ಲದಕ್ಕೆ ಬೇಕಾದ ಪೂರ್ವಾಧ್ಯಯನದಲ್ಲಿ ಅವರಿಗಿದ್ದ ಆಸಕ್ತಿ, ಕಲಾಭಿಮಾನಿಗಳಿಗೆ ಹೇಗೆ ಭಾವ-ರಸ ಉಣಬಡಿಸಬಹುದೆಂಬ ಕುರಿತಾದ ಅವರ ಚಿರಂತನ ಚಿಂತನೆ ಯಕ್ಷಗಾನ ಕಲಾವಿದರಿಗೆ ಒಂದು ಶ್ರೇಷ್ಠ ಮಾದರಿಯಾಗಿದೆ.

ಖ್ಯಾತ ವಿದ್ವಾಂಸ ದಿ| ಕು.ಶಿ. ಹರಿದಾಸಭಟ್ಟರು ತಮ್ಮ ಅಂಕಣ ‘ಲೋಕಾಭಿರಾಮ’ದಲ್ಲಿ ಕಿರುತೆರೆಯಲ್ಲಿ ಪ್ರಸಾರವಾದ, ಆ ಕಾಲದಲ್ಲಿ ಇಡೀ ದೇಶವನ್ನೇ ಬೆರಗುಗೊಳಿಸಿದ ಮಹಾಭಾರತ ಸರಣಿಯ ಬಗೆಗೆ ಬರೆಯುತ್ತಾ, ಭೀಷ್ಮನ ಪಾತ್ರಧಾರಿಯ ಮುಕೇಶ್ ಖನ್ನಾನನ್ನು ಕುರಿತು ಹೊಗಳುವಾಗ ಮಹಾಬಲ ಹೆಗಡೆಯವರ ಭೀಷ್ಮನನ್ನು ಹೊರತುಪಡಿಸಿ ಎಂದು ವಿವರಿಸಿದ್ದರು.

ಮಹಾಬಲರ ಭೀಷ್ಮ ಮಾತ್ರವಲ್ಲ, ಅವರು ನಿರ್ವಹಿಸಿ ಹೆಸರು ಪಡೆದ ದಶರಥ, ರಾವಣ, ಕಂಸ, ಕೌರವ, ಅರ್ಜುನ, ಸುಧನ್ವ, ಹಾಸ್ಯಪಾತ್ರ, ಸ್ತ್ರೀಪಾತ್ರಗಳು ಹೀಗೆ ಮಹಾಬಲರ ಪಾತ್ರ ಸಾಕ್ಷಾತ್ಕಾರದಲ್ಲಿ ದೈವೀಸಿದ್ಧಿಯನ್ನು ನಾಟ್ಯಧರ್ಮಿಯತೆಯಲ್ಲಿ ಮಿಳಿತ ಮಾಡುವುದನ್ನು ಪ್ರೇಕ್ಷಕ ಅನುಭವಿಸಿದ್ದಾನೆ. ಒಂದರ್ಥದಲ್ಲಿ ಮಹಾಬಲರು ಯಕ್ಷಗಾನದ ಸವ್ಯಸಾಚಿ ಅಂದರೆ ಅತಿಶಯವಲ್ಲ ಎಂಬುದು ವಿದ್ವಾಂಸರು ಹೇಳುವ ಮಾತು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಮಹಾಬಲರು ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಕಮಲಶಿಲೆ, ಬಚ್ಚಗಾರು ಮೇಳಗಳಲ್ಲಿ ಭಾಗವಹಿಸಿದ್ದರು. ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೯೧), ಚೆನ್ನೈಯ ಶ್ರುತಿ ಸಂಸ್ಥೆ, ಬೆಂಗಳೂರಿನ ಗಾನಕಲಾ ಪರಿಷತ್, ಕರ್ನಾಟಕ ಜನಪದ-ಯಕ್ಷಗಾನ ಅಕಾಡೆಮಿಯ ಜೀವನ ಸಾಧನೆ ಪ್ರಶಸ್ತಿ (೨೦೦೫) ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಸಂದಿದ್ದವು.

ಅಂತ್ಯ[ಬದಲಾಯಿಸಿ]

ಮಹಾಬಲರು ಅಕ್ಟೋಬರ್ ೩೦, ೨೦೦೯ರಲ್ಲಿ ತಮ್ಮ ೮೨ನೆಯ ವಯಸ್ಸಿನಲ್ಲಿ ನಿಧನರಾದರು.

ಮಹಾಬಲ ಹೆಗಡೆ, ಶಂಭು ಹೆಗಡೆ ಜೋಡಿ ಯಕ್ಷಗಾನದಲ್ಲಿನ ಅಮೃತ ಗಳಿಗೆಗಳಲ್ಲೊಂದು. ಶಂಭು ಹೆಗಡೆ ಅವರು ನಿಧನರಾದ ನಂತರದಲ್ಲಿ ಮಹಾಬಲರು ಕೂಡಾ ನಿಧನರಾಗಿರುವುದರಿಂದ ಈ ಕೆರೆಮನೆಯ ಜೋಡಿ ಕಲಾದಿಗಂತದಿಂದ ಮರೆಯಾದಂತಾಗಿದೆ. ಯಕ್ಷಗಾನದ ವೈಭವಪೂರ್ಣ ಅಧ್ಯಾಯಕ್ಕೊಂದು ತೆರೆ ಬಿದ್ದಿದೆ.

ಮಾಹಿತಿ ಕೃಪೆ[ಬದಲಾಯಿಸಿ]

‘ನೂಪುರ ಭ್ರಮರಿ’ಯಲ್ಲಿನ ಸಂಪಾದಕರ ಲೇಖನ