ಕುಶಿನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರಪ್ರದೇಶದ ಗೋರಖಪುರದಿಂದ ೫೦ ಕಿಲೋಮೀಟರು ದೂರದಲ್ಲಿ ಮಲ್ಲರೆಂಬ ಮೂಲನಿವಾಸಿಗಳ ಪಾಳೆಯಪಟ್ಟು ಆಗಿದ್ದ ಕುಶಿನಾರ ಮುಂದೆ ಕುಶಿನಗರ ಆಗಿ ಬದಲಾಯಿತು. ಚೀನೀ ಯಾತ್ರಿಕರಾದ ಫಾ-ಹಿಯೆನ್ ಹಾಗೂ ಹಿಯೆನ್ ತ್ಸಾಂಗರು ತಮ್ಮ ಪ್ರವಾಸ ಕಥನದಲ್ಲಿ ಕುಶಿನಾರದ ಉಲ್ಲೇಖ ಮಾಡಿದ್ದಾರೆ. ಈ ಕುಶಿನಗರದಲ್ಲೇ ಗೌತಮಬುದ್ಧನು ತನ್ನ ಜೀವನದ ಅಂತಿಮ ಕ್ಷಣಗಳನ್ನು ಕಳೆದದ್ದು.

ಪರಿನಿರ್ವಾಣ[ಬದಲಾಯಿಸಿ]

ಗೌತಮಬುದ್ಧನು ತನ್ನ ೮೦ನೇ ವಯಸ್ಸಿಗೆ ಕಾಲಿರಿಸಿದಾಗ ಬಿಹಾರದ ವೈಶಾಲಿಯಲ್ಲಿ ಬೋಧನೆ ಮಾಡುತ್ತಿದ್ದ.[೧] ಮಾಘ ಪೂರ್ಣಿಮೆಯ ಆ ದಿನ ಆತ ತನ್ನ ಮರಣ ಸಮೀಪಿಸುತ್ತಿದೆಯೆಂದೂ ಮೂರು ತಿಂಗಳ ಅನಂತರ ಕುಶಿನಗರದಲ್ಲಿ ತಾನು ಸಾಯುವೆನೆಂದೂ ಹೇಳಿದ. ಕ್ತಿಸ್ತಪೂರ್ವ ೫೪೩ ರಲ್ಲಿ ಬುದ್ಧ ಕುಶಿನಾರ ತಲಪಿದ. ವೈಶಾಖ ಪೂರ್ಣಿಮೆಯ ಆ ದಿನ ಆತ ಮರಣಶಯ್ಯೆಯಲ್ಲಿ ಮಲಗಿ ತನ್ನ ಪ್ರಿಯ ಶಿಷ್ಯ ಆನಂದ ಮತ್ತು ಇತರರಿಗೆ ಕೊನೆಯ ಉಪನ್ಯಾಸ ಮಾಡಿ ನಿರ್ವಾಣ ಹೊಂದುತ್ತಾನೆ. ಹೀಗೆ ಕುಶಿನಗರವು ಗೌತಮಬುದ್ಧನ ಪರಿನಿರ್ವಾಣಕ್ಕೆ ವೇದಿಕೆಯಾಗಿದೆ.[೨] ಬುದ್ಧನು ಮರಣ ಹೊಂದಿದ ಆ ಮಹಾ ಪರಿನಿಬ್ಬಾಣದ ಸ್ಥಳದಲ್ಲಿ ಅವನು ಇನ್ನೂ ಮಲಗಿರುವ ಹಾಗೆ, ಅವನ ಶಿಷ್ಯರು ದುಃಖಾಶ್ರುಧಾರೆಯಿಂದ ಅವನನ್ನು ಬೀಳ್ಕೊಡುತ್ತಿರುವ ಹಾಗೆ ಅದೇ ಸ್ಥಳದಲ್ಲಿ ಅದೇ ಹಜಾರದಲ್ಲಿ ಹರಿಬಾಲಾ ಎಂಬಾತ ಸ್ಥಾಪಿಸಿದ ೬.೧೦ ಮೀಟರು ಉದ್ದದ ಪ್ರಾಚೀನ ಧರಾಶಾಯಿ ಬುದ್ಧ ಮೂರ್ತಿಯನ್ನು ಇಡಲಾಗಿದೆ. ಅನಿರ್ವಚನೀಯವಾದ ದೈವೀಕಳೆಯಿಂದ ಬುದ್ಧ ಬೆಳಗುತ್ತಿದ್ದಾನೆ. ಅವನ ಪಾದುಕೆಯೂ ಭಿಕ್ಷಾಪಾತ್ರೆಯೂ ಸನಿಹದಲ್ಲೇ ಇವೆ. ನೀರವ ಮೌನ ಆ ಸ್ಥಳವನ್ನು ವ್ಯಾಪಿಸಿದೆ. ಆ ಮೂರ್ತಿಯು ಕಾರ್ಲೈಲ್ ಎಂಬ ಅಧಿಕಾರಿಯು ೧೮೭೬ರಲ್ಲಿ ಉತ್ಖನನ ನಡೆಸುತ್ತಿದ್ದಾಗ ಗೋಚರವಾಯಿತು. ಪದ್ಮರಾಗದ ಏಕಶಿಲೆಯಲ್ಲಿ ಕಟೆಯಲಾದ ಆ ಪ್ರತಿಮೆಯಲ್ಲಿ ಮೃತ್ಯುಮುಖಿಯಾದ ಬುದ್ಧನು ಅಂಗಾತನಾಗಿರದೆ ಬಲಕ್ಕೆ ಮಗ್ಗುಲಾಗಿ ಮಲಗಿ ಪಶ್ಚಿಮ ದಿಕ್ಕಿನತ್ತ ಮುಖಮಾಡಿ ಶಾಂತಿಯಿಂದ ಕಣ್ಣು ಮುಚ್ಚಿದ್ದಾನೆ. ಇಂದು ಆ ದಿಕ್ಕಿನಲ್ಲಿ ಬೌದ್ಧ ಧರ್ಮ ಅವಸಾನವಾಗುತ್ತಿರುವುದನ್ನು ನೋಡಲಾರದೆ ಬುದ್ಧ ಕಣ್ಣು ಮುಚ್ಚಿದ್ದಾನೇನೋ ಎನಿಸುತ್ತದೆ.

ಸ್ತೂಪ[ಬದಲಾಯಿಸಿ]

ಕುಶಿನಗರದಲ್ಲಿ ಬುದ್ದನ ದೇಹಾಂತವಾದ ಸ್ಥಳದಿಂದ ಪೂರ್ವ ದಿಕ್ಕಿನಲ್ಲಿ ಒಂದೂವರೆ ಕಿಲೋಮೀಟರು ದೂರದಲ್ಲಿ ಬುದ್ಧನ ಅಂತ್ಯ ಸಂಸ್ಕಾರಗಳು ನಡೆದು ಅವನ ದೇಹ ಬೂದಿಯಾದ "ಮುಕತ್ ಬಂಧನ್" ಎಂಬ ಸ್ಥಳದಲ್ಲಿ ಮಲ್ಲರು ಸ್ತೂಪ ಕಟ್ಟಿಸಿದರು. ಮುಂದೆ ಅಶೋಕ ಸಮ್ರಾಟನು ಅದನ್ನು ನವೀಕರಿಸಿದನು. ನನ್ನ ಅವಶೇಷಗಳನ್ನು ಎಲ್ಲೆಡೆ ಕೊಂಡೊಯ್ಯಿರಿ, ಅವುಗಳ ಮೇಲೆ ಸ್ತೂಪಗಳನ್ನು ಕಟ್ಟಿ ಅಲ್ಲಿ ನನ್ನ ಸಿದ್ಧಾಂತಗಳನ್ನು ಪ್ರಚಾರಗೊಳಿಸಿರಿ. ಸ್ತೂಪಗಳು ಸದಾ ಶಾಂತಿ ಸೂಸುವ ಮಂದಿರಗಳಾಗಿರಲಿ ಎಂದು ಬುದ್ಧ ಹೇಳಿದಂತೆ ಸ್ತೂಪ ಅಥವಾ ಪಗೋಡಗಳು ಬೌದ್ಧ ಧಾರ್ಮಿಕ ಕೇಂದ್ರಗಳಾಗಿದ್ದು ಅವುಗಳನ್ನು ಬುದ್ದನ ಅವಶೇಷಗಳ ಮೇಲೆಯೇ ಕಟ್ಟಲಾಗಿರುತ್ತೆ.

ಮುಕತ್ ಬಂಧನದಲ್ಲಿರುವ ವರ್ತುಳಾಕೃತಿಯ ಈ ಕಟ್ಟಡವನ್ನು ಸುಟ್ಟ ಇಟ್ಟಿಗೆಗಳಿಂದ ಕಟ್ಟಲಾಗಿದ್ದು ಅದಕ್ಕೆ ಬಾಗಿಲುಗಳು ಇಲ್ಲ. ಈ ಕಟ್ಟಡ ಮೊದಲೇ ಹೇಳಿದಂತೆ ಬುದ್ಧನ ಅವಶೇಷಗಳನ್ನು ಆವರಿಸಿದಂತೆ ಕಟ್ಟಿದ್ದು. ಹಾಗೆಂದು ತಾಮ್ರಪಟದಲ್ಲಿ ಉಲ್ಲೇಖವಿದೆಯಂತೆ. ಇದರ ತಳದ ವ್ಯಾಸ ೪೭.೨೪ ಮೀಟರು ಇದ್ದು ಮೇಲ್ಮಟ್ಟದ ವ್ಯಾಸ ೩೪.೧೪ ಮೀಟರು ಇದೆ. ಇದರ ಮೇಲೆ ಬಹುಶಃ ಎರಡಕ್ಕಿಂತ ಹೆಚ್ಚು ಛಾವಣಿಗಳಿವೆ. ಹಿಂದೆ ಪಾಷಂಡಿಗಳ ಉಪಟಳದಿಂದ ಬೌದ್ಧಧರ್ಮ ತತ್ತರಿಸಿದಾಗ ಬುದ್ಧನ ಅವಶೇಷಗಳನ್ನು ಈ ಕಟ್ಟಡದಿಂದ ಹೊರ ತೆಗೆದು ಬೇರೆ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆಯಾದರೂ ಹಾಗೆ ಎಲ್ಲಿಗೆ ಕೊಂಡೊಯ್ಯಲಾಯಿತೆಂಬ ಸಂಗತಿ ಅತಿ ನಿಗೂಢವಾಗಿದೆ. ಕ್ರಿಸ್ತಶಕ ೧೨ನೇ ಶತಮಾನದವರೆಗೆ ಜೀವಂತಿಕೆಯಿಂದ ಅರಳಿದ್ದ ಕುಶಿನಗರವು ಅನಂತರ ಇತಿಹಾಸದಲ್ಲಿ ಕಮರಿಹೋಗಿತ್ತು. ಬ್ರಿಟಿಷ್ ಸರ್ವೇಕ್ಷಣ ಅಧಿಕಾರಿ ಕಾರ್ಲೈಲ್ ನು ಕುಶಿನಗರದ ಉತ್ಖನನವನ್ನು ಬಹು ಶ್ರದ್ಧೆಯಿಂದ ಮಾಡಿ ಮಣ್ಣಿನಲ್ಲಿ ಹೂತುಹೋಗಿದ್ದ ಈ ಮಹಾಸ್ತೂಪವನ್ನು ಹಾಗೂ ನಿರ್ವಾಣ ಮೂರ್ತಿಯನ್ನು ಬೆಳಕಿಗೆ ತಂದನು.

೧೯೦೩ರಲ್ಲಿ ಬರ್ಮಾದಿಂದ ಚಂದ್ರಮಣಿ ಎಂಬ ಬೌದ್ಧ ಗುರುವು ಆಗಮಿಸಿ ಮಹಾಪರಿನಿರ್ವಾಣ ಮಂದಿರ ಸ್ಥಾಪಿಸಿ ಕುಶಿನಗರಕ್ಕೆ ಮರುರೂಪ ತಂದುಕೊಟ್ಟನು. ಇದೀಗ ಇಂಡಿಯಾದ ಪ್ರಾಚ್ಯ ವಸ್ತು ಇಲಾಖೆಯು ಈ ಪ್ರಾಚ್ಯ ಕಟ್ಟಡಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ.

ವಸ್ತುಸಂಗ್ರಹಾಲಯ[ಬದಲಾಯಿಸಿ]

ಕುಶಿನಗರದ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಪ್ರಾಚೀನ ಕುಶಾನರ ಕಾಲದ ಹಾಗೂ ಮಥುರೆಯಲ್ಲಿ ದೊರೆತ ಬುದ್ಧ ಸಂಸ್ಕೃತಿಯ ಕುರುಹುಗಳನ್ನು ಅಂದರೆ ಶಿರ, ಸ್ತೂಪ, ಸ್ತಂಭ, ಪ್ರತಿಮೆ ಮುಂತಾದ ಕಲ್ಲಿನ ಕೆತ್ತನೆಗಳನ್ನು ಸಂರಕ್ಷಿಸಿಡಲಾಗಿದೆ. ಮತ್ತೊಂದು ಅಂಕಣದಲ್ಲಿ ಜಪಾನಿನ ಬೌದ್ಧ ಧಾರ್ಮಿಕ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಇದೇ ಅಂಕಣದ ಮತ್ತೊಂದು ಪಾರ್ಶ್ವದಲ್ಲಿ ಸ್ತೂಪ, ಧರ್ಮಚಕ್ರ, ಜಾತಕ ಮುಂತಾದವುಗಳ ವಿವರಣೆಯಿದ್ದು ಕುಶಿನಗರದ ವಿವಿಧ ದೇಶಿಕ ಕಟ್ಟಡಗಳ ಚಿತ್ರಗಳೂ ಸ್ಥಳ ಪುರಾಣವೂ ಪ್ರದರ್ಶಿತವಾಗಿದೆ. ವಸ್ತು ಸಂಗ್ರಹಾಲಯದಿಂದ ಹೊರಬಂದು ಆ ರಸ್ತೆಯಲ್ಲಿ ಮುಂದೆ ಸಾಗಿದರೆ ಬಲಬದಿಯಲ್ಲಿ ಜಪಾನ್-ಶ್ರೀಲಂಕಾ ಮೈತ್ರಿ ಸಂಸ್ಥೆಯ ಬುದ್ಧಮಂದಿರವೂ ಅಧ್ಯಯನ ಪೀಠವೂ ಇದೆ. ಈ ಮಂದಿರವು ಸುಟ್ಟ ಕೆಂಪನೆಯ ಇಟ್ಟಿಗೆಗಳ ಗುಮ್ಮಟಾಕೃತಿಯಲ್ಲಿದ್ದು ಗಿಲಾವು ಇಲ್ಲದೇ ಪ್ರಚ್ಛನ್ನವಾಗಿದೆ.[೩]

ವಿದೇಶೀ ಕೇಂದ್ರಗಳು[ಬದಲಾಯಿಸಿ]

ಅದೇ ರಸ್ತೆಯಲ್ಲಿ ಎರಡು ಜಪಾನೀ ಶೈಲಿಯ ತಾರಾ ಹೋಟೆಲುಗಳನ್ನು ದಾಟಿ ಮುಂದೆ ಹೋದಲ್ಲಿ ಬಲಬದಿಯಲ್ಲೇ ಥೈಲ್ಯಾಂಡ್ ದೇಶದ ಮನಮೋಹಕ ಬುದ್ಧಮಂದಿರ ಇದೆ. ಈ ಮಂದಿರಲ್ಲಿ ಸ್ವರ್ಣಲೇಪಿತ ಬುದ್ಧ ಪ್ರತಿಮೆ ವಿಶೇಷವಾಗಿ ಅಲಂಕೃತವಾದ ಪೀಠದ ಮೇಲಿದೆ. ಆ ಸಭಾಂಗಣವು ಪುಷ್ಪದಾನಿಗಳಿಂದಲೂ ಕಲಾಕುಸುರಿಯ ರತ್ನಗಂಬಳಿ ಹಾಗೂ ಕಲಾಮಯ ಆಸನಗಳಿಂದಲೂ ಸಜ್ಜುಗೊಂಡಿದ್ದು ಪ್ರಾರ್ಥನೆ ಮಾಡಲು ಯೋಗ್ಯ ವಾತಾವರಣ ಒದಗಿಸಿದೆ. ದೇವಾಲಯದ ಆವರಣದಲ್ಲಿ ಬೌದ್ಧ ಭಿಕ್ಷುಗಳ ಶಿಕ್ಷಣ ಮತ್ತು ಅಧ್ಯಯನ ಕೇಂದ್ರವಿದೆ. ಸ್ವರ್ಣಲೇಪಿತ ಸ್ತೂಪಗೋಪುರವೂ ಇದೆ.

ಇವು ಮಾತ್ರವಲ್ಲದೇ ಕುಶಿನಗರದಲ್ಲಿ ಟಿಬೆಟ್ ಶೈಲಿಯ, ಚೀನಾ ಶೈಲಿಯ, ಬರ್ಮಾ ಶೈಲಿಯ ಬುದ್ಧಮಂದಿರಗಳೂ ಸ್ತೂಪಗಳೂ ಅತಿಥಿಗೃಹಗಳೂ ಇವೆ. ಬಂಗಾರ ಲೇಪಿತ ಗೋಪುರಗಳೂ ಸ್ತಂಭಗಳೂ ಕಮಾನುಗಳೂ ಚಾವಣಿಗಳೂ ಉಳ್ಳ ಬುದ್ಧ ಮಂದಿರಗಳು ಒಂದಕ್ಕಿಂತ ಒಂದು ಮಿಗಿಲಾಗಿ ನಿಂತು ಪ್ರವಾಸಿಗರ ಹಾಗೂ ಭಕ್ತರ ಕಣ್ತಣಿಸುತ್ತವೆ. ನಿಜ ಹೇಳಬೇಕೆಂದರೆ ಕುಶಿನಗರವು ವಿವಿಧತೆಯಲ್ಲಿ ಏಕತೆ ಬಿಂಬಿಸುವ ಪುಟ್ಟ ಊರಾಗಿದೆ.

ಭೌಗೋಳಿಕತೆ[ಬದಲಾಯಿಸಿ]

ಕುಶಿನಗರವು ರಾಷ್ಟ್ರೀಯ ಹೆದ್ದಾರಿ -೨೮ ರಲ್ಲಿ ಗೋರಖ್‌ಪುರದಿಂದ ಪೂರ್ವಕ್ಕೆ ೫೩ ಕಿ.ಮೀ ದೂರದಲ್ಲಿರುವ ನಗರ ಪಾಲಿಕೆ ಆಗಿದೆ. ಇದು ಅಕ್ಷಾಂಶ ೨೬ ° ೪೫´N ಮತ್ತು ೮೩ ° ೨೪´E ನಡುವೆ ಇದೆ. ಗೋರಖ್‌ಪುರ್ ಕುಶಿನಗರಕ್ಕೆ ಮುಖ್ಯ ರೈಲ್ವೆ ಟರ್ಮಿನಸ್ ಆಗಿದ್ದರೆ, ಯುಪಿ ಸಿವಿಲ್ ಏವಿಯೇಷನ್‌ನ ಏರ್ ಸ್ಟ್ರಿಪ್ ಕುಶಿನಗರದಿಂದ ೫ ಕಿ.ಮೀ ದೂರದಲ್ಲಿರುವ ಕಾಸಿಯಾದಲ್ಲಿದೆ. ಇದನ್ನು ಪ್ರಸ್ತುತ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಉತ್ತರ ಪ್ರದೇಶ ಸರ್ಕಾರ ಮತ್ತು ಭಾರತ ಸರ್ಕಾರ ಅಭಿವೃದ್ಧಿಪಡಿಸಿದೆ.[೪]

ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "vaishali bihar - Yahoo Search Results Image Search results". in.images.search.yahoo.com. Retrieved 11 January 2020.
  2. Pacific, United Nations Economic and Social Commission for Asia and the (2003). "Promotion of Buddhist Tourism Circuits in Selected Asian Countries" (in ಇಂಗ್ಲಿಷ್). United Nations Publications. Retrieved 11 January 2020.[ಶಾಶ್ವತವಾಗಿ ಮಡಿದ ಕೊಂಡಿ]
  3. Fogelin, Lars (9 February 2006). "Archaeology of Early Buddhism" (in ಇಂಗ್ಲಿಷ್). AltaMira Press. Retrieved 11 January 2020.
  4. http://brandbharat.com/english/up/districts/Kushi%20Nagar/Kushi%20Nagar.html
"https://kn.wikipedia.org/w/index.php?title=ಕುಶಿನಗರ&oldid=1063336" ಇಂದ ಪಡೆಯಲ್ಪಟ್ಟಿದೆ