ಕಾಡು ಬೆಕ್ಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಡು ಬೆಕ್ಕು
ಬಾಯಲ್ಲಿ ಹಕ್ಕಿಯನ್ನು ಹಿಡಿದಿರುವ ಕಾಡು ಬೆಕ್ಕು
Conservation status
Scientific classification
ಸಾಮ್ರಾಜ್ಯ:
ವಿಭಾಗ:
ಕಾರ್ಡೇಟಾ
ವರ್ಗ:
ಸಸ್ತನಿ
ಗಣ:
ಕಾರ್ನಿವೋರಾ
ಕುಟುಂಬ:
ಫೆಲಿಡೇ
ಕುಲ:
ಪ್ರಜಾತಿ:
F. chaus
Binomial name
Felis chaus
Schreber, 1777


'ಕಾಡು ಬೆಕ್ಕು' (Jungle Cat) ಭಾರತ ಸೇರಿದಂತೆ ದಕ್ಷಿಣ ಏಷ್ಯಾದೆಲ್ಲಡೆ ವ್ಯಾಪಿಸಿರುವ ಕಾಡು ಬೆಕ್ಕು,ಹೆಚ್ಚಾಗಿ ಪೊದೆಗಳಲ್ಲಿ ವಾಸಿಸುತ್ತದೆ.೫ ರಿಂದ ೯ ಕೆ.ಜಿ.ಯಷ್ಟು ಭಾರವಿದ್ದು ಉದ್ದನೆಯ ಕಾಲುಗಳಿವೆ.ಎಳೆ ಹಸಿರು ಬಣ್ಣದ ಕ್ರೂರ ದೃಷ್ಟಿಯ ಕಣ್ಣುಗಳನ್ನು ಹೊಂದಿದೆ.ಇದರ ಬಾಲದ ಮೇಲೆ ಕರಿಯ ಬಳೆಗಳಂತೆ ಪಟ್ಟೆಗಳಿದ್ದು, ತುದಿ ಕಪ್ಪಾಗಿರುತ್ತದೆ.ಸಣ್ಣ ಪ್ರಾಣಿಗಳು,ಹಕ್ಕಿಗಳು ಇವುಗಳ ಮುಖ್ಯ ಆಹಾರ.ಕಾಡು ಬೆಕ್ಕಿನ ವೈಜ್ಞಾನಿಕ ಹೆಸರು ಫೆಲಿಸ್ ಚಾಸ್.ಆವಾಸಸ್ಥಾನ ಸಾಮಾನ್ಯವಾದ ಕಾಡುಬೆಕ್ಕುಗಳು ತೇವಾಂಶವುಳ್ಳ ಸ್ಥಳಗಳಲ್ಲಿ ವಾಸಿಸುತ್ತವೆ.ಫೆಲಿಸ್ ಎಂಬ ಕುಲಕ್ಕೆ ಸೇರಿದ ಕಾಡು ಬೆಕ್ಕು ಫೆಲಿಡೆ ಎಂಬ ಕುಟುಂಬಕ್ಕೆ ಸೇರಿದೆ.ದೊಡ್ಡ ಕಾಲುಗಳುಳ್ಳ ಕಾಡು ಬೆಕ್ಕುಗಳು ಫೆಲಿಸ್ ಜಾತಿಯಲ್ಲಿನ ಅತಿ ದೊಡ್ಡ ಪ್ರಾಣಿಗಳು.

ಕಾಡುಬೆಕ್ಕು ಸ್ತನಿ ಗುಂಪಿನ ಕಾರ್ನಿವೋರದ ಫೆಲೀಡಿ ಕುಟುಂಬಕ್ಕೆ ಸೇರಿದ ಪ್ರಾಣಿ. ಇದರ ಕೋರೆಹಲ್ಲುಗಳು ಉದ್ದ ಮತ್ತು ಚೂಪಾಗಿವೆ. ಇವು ಕತ್ತರಿಯ ಹಾಗೆ ಕೆಲಸ ಮಾಡಿ ಮಾಂಸವನ್ನು ಕತ್ತರಿಸಲು ಸಹಾಯ ಮಾಡುತ್ತವೆ. ಅತಿ ಚೂಪಾದ ನಖಗಳಿವೆ. ಇವನ್ನು ಉಪಯೋಗಿಸದೇ ಇದ್ದಾಗ ಪಾದದೊಳಕ್ಕೆ ಮಡಚಿಕೊಂಡು ಮರೆಯಾಗಿಡುವ ಶಕ್ತಿ ಈ ಪ್ರಾಣಿಗೆ ಉಂಟು. ಕಾಡುಬೆಕ್ಕಿನ ಮೂಗು ಸದಾ ಒದ್ದೆಯಾಗಿರುತ್ತದೆ. ವಾಸನೆಯಿಂದಲೇ ಆಹಾರವನ್ನು ಗುರುತಿಸಲು ಈ ತೇವವಾಗಿರುವ ಮೂಗು ಸಹಾಯ ಮಾಡುತ್ತದೆ. ಕಿವಿಯಲ್ಲಿ ಬಹಳ ಕೂದಲುಗಳಿವೆ. ಈ ಕೂದಲುಗಳ ಗ್ರಹಣ ಶಕ್ತಿ ಉತ್ತಮ ಮಟ್ಟವಾಗಿದ್ದು, ಕಣ್ಣಿಗೆ ಕಾಣದಿರುವಂಥ ವಸ್ತುಗಳ ಚಲನವಲನಗಳನ್ನು ಗುರುತಿಸಲು ಸಹಾಯಕವಾಗಿವೆ. ಕಾಡುಬೆಕ್ಕು ಬೇಟೆಯಾಡುವುದು ಸಾಮಾನ್ಯವಾಗಿ ರಾತ್ರಿಯಲ್ಲಿ. ಕತ್ತಲಿನಲ್ಲಿ ಇದರ ಕಣ್ಣುಗಳು ಹೊಳೆಯುತ್ತಿರುತ್ತವೆ. ಗ್ವಾನಿನ್ ಎಂಬ ರಾಸಾಯನಿಕ ವಸ್ತು ಕಣ್ಣುಗಳಲ್ಲಿರುವುದರಿಂದ ಅದರ ಮೇಲೆ ಬಿದ್ದ ಬೆಳಕು ಪ್ರತಿಫಲಿತವಾಗುತ್ತದೆ. ಕತ್ತಲಲ್ಲಿ ತನ್ನ ಆಹಾರವನ್ನು ಹುಡುಕಲು ಬೆಕ್ಕುಗಳಿಗೆ ಈ ಎಲ್ಲ ಗುಣಗಳೂ ಹೊಂದಾಣಿಕೆಯನ್ನು ಒದಗಿಸಿಕೊಟ್ಟಿವೆ.

ಯೂರೋಪಿನ ಕಾಡು ಬೆಕ್ಕು (ಫೆಲಿಸ್ ಸಿಲ್ವೆಸ್ಟ್ರಿಸ್)[ಬದಲಾಯಿಸಿ]

ಫೆಲಿಸ್ ಸಿಲ್ವೆಸ್ಟ್ರಿಸ್ ಯೂರೋಪಿನಲ್ಲಿರುವ ಕಾಡು ಬೆಕ್ಕು. ಇವು ಅತಿ ದಟ್ಟವಾದ ಕಾಡು ಅಥವಾ ಬಂಡೆಗಳಿರುವ ಸ್ಥಳಗಳಲ್ಲಿ ವಾಸಿಸುತ್ತದೆ. ರಾತ್ರಿಯಲ್ಲಿ ನದಿಗಳ ದಂಡೆ ಮತ್ತು ಕೊಳಗಳಿಗೆ ನುಗ್ಗಿ ಅಲ್ಲಿರುವ ಮೊಲ, ಸಣ್ಣ ಪಕ್ಷಿಗಳನ್ನು ಕೆಲವು ವೇಳೆ ಮೀನುಗಳನ್ನು ಬೇಟೆಯಾಡುತ್ತದೆ. ಬೇರೆ ಕಾಡುಬೆಕ್ಕುಗಳನ್ನು ಸಾಮಾನ್ಯವಾಗಿ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಳ್ಳಬಹುದು. ಆದರೆ ಫೆಲಿಸ್ ಸಿಲ್ವೆಸ್ಟ್ರಿಸ್ ಹೀಗೆ ಪಳಗದು.

ಫೆಲಿಸ್ ಚೌಸ್[ಬದಲಾಯಿಸಿ]

ಫೆಲಿಸ್ ಚೌಸ್ ಆಫ್ರಿಕ, ಉತ್ತರ ಅಮೆರಿಕ ಮತ್ತು ಭಾರತ ದೇಶಗಳಲ್ಲಿ ಕಂಡು ಬರುತ್ತದೆ. ಸಾಮಾನ್ಯವಾಗಿ ಇದನ್ನು ಆಫ್ರಿಕದ ಕಾಡುಬೆಕ್ಕು ಎನ್ನುತ್ತಾರೆ. ಇದರ ಬಣ್ಣ ಬೂದು. ದೇಹದ ಹಿಂಭಾಗದಲ್ಲಿ ದಟ್ಟ ಮತ್ತು, ಉದ್ದ ಕೂದಲಿದೆ. ವೇಗವಾಗಿ ಚಲಿಸಲು ಕೂದಲಿನಿಂದ ಸಹಾಯ ಉಂಟು. ಈ ಬೆಕ್ಕಿನ ಮುಖ್ಯ ಆಹಾರವೆಂದರೆ ಸಣ್ಣ ಸ್ತನಿಗಳು ಮತ್ತು ಪಕ್ಷಿಗಳು.

ಫೆಲಿಸ್ ಲೈಬಿಕಾ [ಬದಲಾಯಿಸಿ]

ಫೆಲಿಸ್ ಲೈಬಿಕಾ ಆಫ್ರಿಕಕ್ಕೆ ಮೀಸಲಾಗಿರುವ ಕಾಡುಬೆಕ್ಕು. ಇದನ್ನು ಕಫಿರ ಬೆಕ್ಕು ಎಂದೂ ಕರೆಯುತ್ತಾರೆ. ಕಫಿರ ಬೆಕ್ಕುಗಳು ಪೊದೆಗಳ ಕೆಳಗೆ, ದಟ್ಟವಾಗಿ ಬೆಳೆದಿರುವ ಹುಲ್ಲಿನ ಮಧ್ಯೆ ವಾಸಿಸುತ್ತದೆ. ಇವು ಬಹಳ ಶಕ್ತಿಯುತವಾಗಿವೆ. ಕಾಡು ನಾಯಿಗಳಿಂದ ಸ್ವರಕ್ಷಣೆ ಮಾಡುಕೊಳ್ಳಬಲ್ಲುವು.

ಫೆಲಿಸ್ ನೈಗ್ರಿಪೆಸ್[ಬದಲಾಯಿಸಿ]

ಫೆಲಿಸ್ ನೈಗ್ರಿಪೆಸ್ ಕಾಡುಬೆಕ್ಕು ಕಾಡುಬೆಗಳಲ್ಲೆಲ್ಲ ಅತಿ ಚಿಕ್ಕದು. ಇದನ್ನು ಸೆಬಾಲಾ ಬೆಕ್ಕು ಅಥವಾ ಕಪ್ಪುಪಾದದ ಬೆಕ್ಕು ಎಂದೂ ಕರೆಯುತ್ತಾರೆ. ದಕ್ಷಿಣ ಆಫ್ರಿಕದ ಕಲಹರಿ ಮರಳುಗಾಡಿನಲ್ಲಿ ಇದು ವಾಸಿಸುತ್ತದೆ. ಇದರ ಉದ್ದ ಕೇವಲ 20". ಹಗಲನ್ನು ಯಾವುದಾದರೊಂದು ಬಿಲದಲ್ಲಿ ಮಲಗಿ ಕಳೆಯುತ್ತದೆ. ಈ ಬೆಕ್ಕು ಸಾಕುಬೆಕ್ಕಿನ ಜೊತೆ ಸೇರಿ ಸಂತಾನೋತ್ಪತ್ತಿ ಮಾಡಬಲ್ಲದು. ಎಲ್ಲ ಬೆಕ್ಕುಗಳಂತೆಯೇ ಇದು ಕೂಡ ಒಂದು ಸಾರಿಗೆ ಎರಡು ಅಥವಾ ಮೂರು ಮರಿಗಳನ್ನು ಈಯುತ್ತದೆ.

ಫೆಲಿಸ್ ಕೆನೆಡೆನ್ಸಿಸ್[ಬದಲಾಯಿಸಿ]

ಕೆನಡದ ಕಾಡುಬೆಕ್ಕಾದ ಫೆಲಿಸ್ ಕೆನೆಡೆನ್ಸಿಸ್ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ವಾಸಿಸುತ್ತದೆ. ಇದರ ಕಿವಿಗಳಲ್ಲಿ ಒತ್ತಾಗಿ ಬೆಳೆದಿರುವ ಕೂದಲುಗಳಿವೆ. ಕಿವಿಯ ಅಂಚು ಕಪ್ಪು. ಇದರ ಬಾಲ ಅತಿ ಚಿಕ್ಕದು. ಹಿಂದಿನ ಕಾಲುಗಳು ಅತಿ ಉದ್ದ. ಕೆನಡದ ಈ ಬೆಕ್ಕು ಕೊಲರೊಡೊ ಹಾಗು ನ್ಯೂಯಾರ್ಕುಗಳಲ್ಲಿಯೂ ವಾಸಿಸುತ್ತದೆ. ಇದರ ಉಣ್ಣೆಗೆ ಬಹಳ ಬೆಲೆ. ಆದ್ದರಿಂದ ಇದನ್ನು ಬಹಳವಾಗಿ ಬೇಟೆಯಾಡುತ್ತಾರೆ. ಇದರ ದೃಷ್ಟಿ ಅತಿ ತೀಕ್ಷ್ಣ. ರಾತ್ರಿಯಲ್ಲಿ ಇದು ಬಿಳಿಯ ಮೊಲಗಳನ್ನು ಬೇಟೆಯಾಡುತ್ತದೆ. ಬಿಳಿಯ ಮೊಲಗಳು ಸಿಗದಿದ್ದರೆ ಇದು ಹಸಿವಿನಿಂದ ಸಾಯುತ್ತದೆ. ಸಾಮಾನ್ಯವಾಗಿ ಬೆಕ್ಕುಗಳು ನೀರಿನಿಂದ ದೂರವಿರುತ್ತವೆ. ಆದರೆ ಈ ಕೆನಡದ ಬೆಕ್ಕು, ನಾಯಿಗಳಂತೆ ಈಜಬಲ್ಲುದು. ಇವುಗಳ ಗರ್ಭಾವಧಿ ಎರಡು ತಿಂಗಳು. ಒಂದು ಸೂಲಿಗೆ ಮೂರು ಅಥವಾ ನಾಲ್ಕು ಮರಿಗಳಿಗೆ ಜನ್ಮ ಕೊಡುತ್ತವೆ. ಈ ಮರಿಗಳು ಹುಟ್ಟುವಾಗ ಕುರುಡಾಗಿದ್ದು, ಹತ್ತು ದಿನಗಳ ಅನಂತರ ಕಣ್ಣನ್ನು ತೆರೆಯುತ್ತವೆ. ತಾಯಿ ಎರಡು ತಿಂಗಳವರೆಗೆ ಮರಿಗಳಿಗೆ ಹಾಲುಣಿಸುತ್ತದೆ. ಅನಂತರ ಮರಿಗಳನ್ನು ತನ್ನ ಸಂಗಡ ಬೇಟೆಯಾಡಲು ಕರೆದೊಯ್ಯುತ್ತದೆ. ಮುಂದಿನ ಬೆದೆಯ ಕಾಲ ಬರುವವರೆಗೂ ಮರಿಗಳನ್ನು ಒಟ್ಟಿಗೆ ಇಟ್ಟುಕೊಂಡಿದ್ದು ಅನಂತರ ಅವನ್ನು ಓಡಿಸುತ್ತದೆ.                                        

ಉಲ್ಲೇಖ[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Duckworth, J.W., Steinmetz, R., Sanderson, J. & Mukherjee, S. (2008). Felis chaus. In: IUCN 2008. IUCN Red List of Threatened Species. Retrieved 18 January 2009. Database entry includes justification for why this species is of least concern