ಕಲಾಬತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕತ್ತರಿಸಿ ಕಟ್ಟು ಹಾಕಲ್ಪಟ್ಟ ಅಮೂಲ್ಯವಾದ ಹಳೆಯ ಕಲಾಬತು,ಬೆಲ್ಜಿಯಮ್ ದೇಶದ್ದು


ಕಲಾಬತು ನಾರು, ಹತ್ತಿ, ಉಣ್ಣೆ,ರೇಷ್ಮೆ, ಲೋಹ ಮೊದಲಾದವುಗಳಿಂದ ಮಾಡಿದ ದಾರದಿಂದ ಹೆಣೆದು ಬಟ್ಟೆಗಳ ಮೇಲೆ ಅಲಂಕಾರಕ್ಕಾಗಿ ಉಪಯೋಗಿಸುವ ಪಟ್ಟಿ. ಜರತಾರಿಯ ಪಟ್ಟಿಯನ್ನು ಕಲಾಪತ್ತೆಂದು ಕರೆಯುವುದೂ ಉಂಟು. ಆದರೆ ಇಲ್ಲಿ ಇಂಗ್ಲಿಷಿನ ಲೇಸ್ ಎಂಬ ಶಬ್ದಕ್ಕೆ ಸಮಾನಾರ್ಥಕವಾಗಿ ಕಲಾಬತು ಎಂಬ ಪದವನ್ನು ಬಳಸಲಾಗಿದೆ. ಲೇಸ್ ಎಂಬ ಶಬ್ದವೂ ಕನ್ನಡದಲ್ಲಿ ರೂಢಿಗೆ ಬಂದಿರುವುದರಿಂದ ಅದನ್ನೂ ಈ ಲೇಖನದಲ್ಲಿ ಪರ್ಯಾಯವಾಗಿ ಬಳಸಲಾಗಿದೆ.

Knitted Sampler, c. 1800, Brooklyn Museum

ಕಸೂತಿ ಮತ್ತು ಕಲಾಬತುಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಬಲು ಕಷ್ಟ. ಒಂದು ದೃಷ್ಟಿಯಲ್ಲಿ ಕಲಾಬತನ್ನು ಕಸೂತಿಯ ಒಂದು ಬಗೆಯೆಂದೇ ಪರಿಗಣಿಸಬಹುದು. ಅಂಚುಕಟ್ಟುವುದನ್ನು, ವಂಕಿಯಾಕಾರದಲ್ಲಿ ಒಂದಕ್ಕೊಂದು ಹೊಸೆದುಕೊಂಡಂತೆಯೇ ಹೆಣೆದುಕೊಂಡಂತೆಯೋ ದಾರ ಹಾಕಿ ಸೇರಿಸುವುದನ್ನು, ಅಥವಾ ವಸ್ತ್ರ ನೇಯುವಾಗಲೇ ಜರಿಯೇ ಮುಂತಾದವುಗಳ ಸಿಂಗಾರಪಟ್ಟಿಕೆಗಳನ್ನು ಅಳವಡಿಸುವುದನ್ನು ಕಲಾಬತು ಕೆಲಸವೆನ್ನಬಹುದು. ಹೊಲಿದ ಅಥವಾ ತಯಾರಿಸಿದ ಬಟ್ಟೆಯ ಮೇಲೆ ಅಲಂಕಾರಕ್ಕಾಗಿ ಮಾಡುವ ದಾರದ ಚಿತ್ರಕೆಲಸವನ್ನು ಕಸೂತಿಯೆನ್ನುತ್ತಾರೆ. ಆದರೆ ಇವೆರಡರ ನಡುವಣ ರೇಖೆ ಅನೇಕ ವೇಳೆ ಬಲು ಸೂಕ್ಷ್ಮ.

ಇತಿಹಾಸ[ಬದಲಾಯಿಸಿ]

ಕಲಾಬತಿನ ಇತಿಹಾಸ ಬಲು ಹಳೆಯದು. ಕೊಕ್ಕೆ ಸೂಜಿ ಅಥವಾ ಕ್ರೋಷೆಯಿಂದ ಹಿಡಿದು ಯಂತ್ರಗಳ ವರೆಗೆ ವಿವಿಧ ನಮೂನೆಗಳ ಕಲಾಬತು ಅಥವಾ ಲೇಸುಗಳು ಬೆಳಕಿಗೆ ಬಂದಿವೆ. ಅಂದವಾಗಿ ಹೆಣೆದ ಕಸೂತಿ ಬಟ್ಟೆಗೆ ಸುತ್ತಲೂ ಕೈಯಿಂದ ತಯಾರಿಸಿದ ಲೇಸುಗಳನ್ನು ಹಾಕಿ ಬಟ್ಟೆಯನ್ನು ಇನ್ನೂ ಆಕರ್ಷಕವಾಗಿ ಮಾಡುತ್ತಾರೆ. ಕೈಯಿಂದ ಹೆಣೆದ ಲೇಸುಗಳು ಬಹಳ ಕಾಲ ಬಾಳುತ್ತವೆ. ಇಂದು ಲೇಸುಗಳಿಗಾಗಿ ಉಪಯೋಗಿಸುವ ಎಳೆಗಳಲ್ಲಿ ಸಾಕಷ್ಟು ವೈವಿಧ್ಯವುಂಟು. ೧೮೦೦ಕ್ಕೂ ಮೊದಲು ಲಿನೆನ್ ಸಾಮಾನ್ಯವಾಗಿದ್ದು ತದನಂತರ ಹತ್ತಿಯ ಲೇಸು ಸರ್ವಸಾಮಾನ್ಯವಾಯಿತು. ಕಾಲಕ್ರಮೇಣ ರೇಷ್ಮೆ ಮತ್ತು ಲೋಹದೆಳೆಗಳೂ ಉಣ್ಣೆ ಮತ್ತು ಲೋಳಸರದ ಜಾತಿಯ ವನಸ್ಪತಿಗಳ ಎಳೆಗಳೂ ಉಪಯೋಗಕ್ಕೆ ಬಂದವು. ಕೈ ಕಸೂತಿಯಂತೆಯೇ ಕಲಾಬತನ್ನು ಬಹಳ ಕಾಲದ ವರೆಗೆ ಕೈಯಿಂದಲೇ ತಯಾರಿಸಲಾಗುತ್ತಿತ್ತು. ೧೮ನೆಯ ಶತಮಾನದ ಉತ್ತರಾರ್ಧದಲ್ಲಿ ಕಲಾಬತನ್ನು ತಯಾರಿಸುವ ಯಂತ್ರಗಳು ಬಂದು ೧೯ನೆಯ ಶತಮಾನದ ಹೊತ್ತಿಗೆ ಸಾಮಾನ್ಯವಾದುವು. ಇತಿಹಾಸಪೂರ್ವಕಾಲದಿಂದಲೂ ಕಲಾಬತಿನ ಬೆಳವಣಿಗೆಯನ್ನು ಕಾಣಬಹುದು. ಪುರಾತನ ಜನರ ಮೀನುಬಲೆಗಳು, ಹಕ್ಕಿಶಿಕಾರಿಯ ಬಲೆಗಳು ಮೊದಲಾದವು ಬಲೆಯ ಹೆಣಿಕೆಗಳನ್ನು ಕಲಾತ್ಮಕವಾಗಿ ರೂಪಿಸುವಂತೆ ಮಾನವನ ಕಲಾಭಿಜ್ಞತೆಯನ್ನು ಪ್ರಚೋದಿಸಿರಬಹುದು. ಪ್ರಾಚೀನ ಈಜಿಪ್ಟಿನ ಅನೇಕ ಸಮಾಧಿಗಳಲ್ಲಿ ಎಳೆತೆಗೆದ ಹೊಲಿಗೆಗಳೂ ಕತ್ತರಿಸಿದ ಕಲಾಬತಿನ ಹಾಗೂ ಕಸೂತಿಯ ನಮೂನೆಗಳೂ ದೊರಕಿವೆ. ಅರೇಬಿಯದಲ್ಲೂ ಕಲಾಬತು ಬಹಳ ಹಿಂದೆ ಜನಪ್ರಿಯವಾಗಿತ್ತೆಂಬುದಕ್ಕೆ ಸಾಕ್ಷ್ಯಗಳು ಸಿಕ್ಕುತ್ತವೆ. ಪೆರುವಿನ ಒಂದು ಪ್ರದೇಶದಲ್ಲಿ ಬಿಡಿಬಿಡಿ ವಂಕಿಗಳಿಂದ ಹೆಣೆದ ಎಳೆತೆಗೆದ ನಮೂನೆಗಳು ಕಾಣಬರುತ್ತವೆ.

೧೨ನೆಯ ಹಾಗೂ ೧೩ ನೆಯ ಶತಮಾನಗಳಿಂದೀಚೆಗೆ ಅನೇಕ ಕಲಾಬತಿನ ನಮೂನೆಗಳು ಯುರೋಪಿನ ಕೆಲವಾರು ಕಡೆಗಳಲ್ಲಿ ಇನ್ನೂ ಇವೆ. ಆಗ ರೇಷ್ಮೆ ಹಾಗೂ ಲಿನೆನ್ ಬಟ್ಟೆಗಳ ಮೇಲೆ ಎಳೆತೆಗೆದ ಹೊಲಿಗೆಗಳನ್ನೂ ಕತ್ತರಿಸಿ ಮಾಡಿದ ಕಲಾಬತುಗಳನ್ನೂ ತಯಾರಿಸುತ್ತಿದ್ದರು. ಫ್ರಾನ್ಸಿನಲ್ಲಿ ಸುಮಾರು (೧೩)ನೆಯ ಶತಮಾನದಲ್ಲಿ ಚಿನ್ನಬೆಳ್ಳಿಗಳ ಎಳೆಗಳಿಂದ ಹೆಣೆದ ರೇಷ್ಮೆ ಅಂಚುಕಟ್ಟುಗಳು ವಾಣಿಜ್ಯವಸ್ತುಗಳಾಗಿದ್ದುವೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಪುನರುಜ್ಜೀವನಕಾಲಕ್ಕೆ ಮೊದಲು ಕಲಾಬತಿನ ಕಲೆ ಗಮನಾರ್ಹವಾದಷ್ಟು ಬೆಳಕಿಗೆ ಬಂದಿರಲಿಲ್ಲವಾದರೂ ಆದಾಗಲೇ ನಿಚ್ಚಳವಾಗಿಯಂತೂ ರೂಪುಗೊಂಡಿತ್ತು.

ಸೂಜಿಮೊನೆಯ ಕಲಾಬತಿನ ಉಗಮವನ್ನು ಸುಮಾರು ೧೫ ನೆಯ ಶತಮಾನದ ಉತ್ತರಾರ್ಧದಲ್ಲಿಯ ಇಟಲಿ ಮತ್ತು ಫ್ಲೆಮಿಷ್ ಚಿತ್ರಕಲೆಗಳಲ್ಲಿ ಗಮನಿಸಬಹುದು. ಈ ಕಲಾಕೃತಿಗಳಲ್ಲಿ ಕಲಾಬತಿನ ನಮೂನೆಯ ಅಂಚು ಸೇರಿಸಿ ಹೊಲಿದ ಹೊಲಿಗೆಗಳನ್ನು ಲಿನೆನ್ ವಸ್ತ್ರ ಹಾಗೂ ಮೆತ್ತೆಗಳ ಮೇಲೆ ಹೊಲಿದಿರುವುದನ್ನು ನೋಡಬಹುದು. ಹಿತ್ತಾಳೆಯ ಪಿನ್ನುಗಳು ಬೆಳಕಿಗೆ ಬಂದ ಅನಂತರ ಉರುಳೆ ಲೇಸುಗಳು ಬೆಳಕಿಗೆ ಬಂದವು. ಉರುಳೆ ಲೇಸಿನ ಮೊದಲ ಮಾದರಿಯ ಬಗ್ಗೆ ಮಾಹಿತಿಗಳಿಲ್ಲ. ಅದು ೧೬ನೆಯ ಶತಮಾನದಿಂದೀಚಿನದೆಂದು ಸಂಶಯವಿಲ್ಲದೆ ಹೇಳಬಹುದು. ಹಿತ್ತಾಳೆಯ ಪಿನ್ನುಗಳನ್ನು ಉಪಯೋಗಿಸುವುದಕ್ಕೆ ಮೊದಲು ಮೀನುಮೂಳೆಗಳನ್ನು ಪಿನ್ನುಗಳಾಗಿ ಉಪಯೋಗಿಸುತ್ತಿದ್ದುದೂ ಉಂಟು. ಸುಮಾರು ೧೬ ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ, ಸೂಜಿಮೊನೆಯ ಲೇಸು ಹಾಗೂ ಉರುಳೆ ಲೇಸುಗಳೇ ಅಲ್ಲದೆ ಲಿನೆನಿನ ಮೇಲೆ ಎಳೆತೆಗೆದ ಕತ್ತರಿಸಿದ ಲೇಸುಗಳೂ ಫಿಲೆಟ್ ಅಥವಾ ಉಬ್ಬು ಕಲಾಬತುಗಳೂ ಬಳಕೆಗೆ ಬಂದಿದ್ದುವು. ಮೊದಲಿಗೆ ಬಣ್ಣಗಳಿಗೆ ಹೆಚ್ಚು ಪ್ರಾಮುಖ್ಯ ಕೊಡುತ್ತಿರಲಿಲ್ಲ; ನಿರ್ದಿಷ್ಟವಾದ, ಸಮಮಿತವಾದ ಮಾದರಿಗಳಿಗೆ ಬಹಳ ಬೇಡಿಕೆಯಿತ್ತು. ತದನಂತರ ವಿವಿಧ ಹಿಂಬದಿಗಳನ್ನಿಟ್ಟು ಕಲಾಬತುಗಳನ್ನು ಮಾಡಲಾಗುತ್ತಿತ್ತು. ಕಲಾಬತನ್ನು ಪುನರುಜ್ಜೀವನಕಾಲದ ಅತ್ಯಂತ ನಿಜವಾದ ಮಗು ಎಂದು ಒಬ್ಬ ಕಲೇತಿಹಾಸಕಾರ ಹೇಳಿದ್ದಾನೆ. ೧೫೨೦ ರಿಂದೀಚೆಗೆ ಜರ್ಮನಿಯಲ್ಲಿ ಮುದ್ರಿತವಾದ ಕಲಾಬತಿನ ಮಾದರಿಗಳುಳ್ಳ ಪುಸ್ತಕಗಳು ಪ್ರಚಾರಕ್ಕೆ ಬಂದವು. ಅನಂತರ ೧೫೩೦ರಲ್ಲಿ ಪುನರುಜ್ಜೀವನ ಮಾದರಿಯ ವೆನಿಷಿಯನ್ ಅಥವಾ ಇಟಾಲಿಯನ್ ಪುಸ್ತಕಗಳು ಮುಂದಾದುವು. ೧೫೪೨ರಲ್ಲಿ ಕತ್ತರಿಸಿದ ಕಲಾಬತಿನ ಮಾದರಿಗಳುಳ್ಳ ಪುಸ್ತಕ ಬೆಳಕಿಗೆ ಬಂದಿತು. ಕೆಲವು ವರ್ಷಗಳ ಅನಂತರ ಎಲೆ ಮತ್ತು ಬಳ್ಳಿಗಳುಳ್ಳ ಕತ್ತರಿಸಿದ ಮಾದರಿಯ ಕಲಾಬತನ್ನು ಚತುರ್ಭುಜೀಯ ಹಿನ್ನೆಲೆಯ ಮೇಲೆ ಹಾಸುಹೊಕ್ಕಾಗಿ ಸೂಜಿಮೊನೆ ಹೊಲಿಗೆಯಿಂದ ಹಾಕತೊಡಗಿದರು. ಉರುಳೆ ಲೇಸು ಮಾದರಿಯುಳ್ಳ ಇಟಾಲಿಯನ್ ಪುಸ್ತಕವೊಂದು ೧೫೫೭ರಲ್ಲಿ ಪ್ರಕಟವಾಯಿತು. ೧೬ನೆಯ ಶತಮಾನದ ಅಂತ್ಯದ ಹೊತ್ತಿಗೆ ಫ್ಲೆಮಿಷ್ ಕಲೆಗಾರರು ಕಲಾಬತನ್ನು ತಯಾರಿಸುವುದರಲ್ಲಿ ನಿಪುಣರಾದರು. ಆ ಶತಮಾನದ ಇನ್ನೊಂದು ಮುಖ್ಯ ನಮೂನೆಯೆಂದರೆ ರೆಟಿಸೆಲೊ ಕಲಾಬತು. ರೆಟಿಸೆಲೊದಲ್ಲಿ ವೃತ್ತವಾಗಿ ಅಥವಾ ಯಾವುದೇ ಜ್ಯಾಮಿತೀಯ ಆಕೃತಿಗಳನ್ನು ಹಾಕಲಾಗುತ್ತಿತ್ತು. ಕ್ಷಿಪ್ರವಾಗಿ ರೆಟಿಸೆಲೊ ಎಲ್ಲೆಲ್ಲೂ ಜನಪ್ರಿಯವಾಯಿತು. ಈ ಮಾದರಿಯಲ್ಲಿ ಕತ್ತರಿಸುವ ಕೆಲಸ ಬಹಳ. ಅನಂತರದ ಉರುಳೆ ಲೇಸಿನಲ್ಲೂ ಇದರ ಅನುಕರಣೆಯನ್ನು ಕಾಣಬಹುದು.

೧೭ನೆಯ ಶತಮಾನದ ಹೊತ್ತಿಗೆ ಯುರೋಪಿನಲ್ಲಿ ಕಲಾಬತು ಒಂದು ವೈಭವಯುತವಾದ ವಾಣಿಜ್ಯವಸ್ತುವಾಗಿತ್ತು. ಸ್ತ್ರೀಯರೂ ಪುರುಷರೂ ವಿಧವಿಧವಾದ ಕಲಾಬತುಗಳನ್ನು ಬಳಸುತ್ತಿದ್ದರು. ಲೇಸುಗಳು ಎಷ್ಟು ಜನಪ್ರಿಯವಾಗಿದ್ದುವೆಂದರೆ, ಪ್ರತಿಯೊಂದು ದೇಶಕ್ಕೆ ಮಾತ್ರವಲ್ಲದೆ ಪ್ರತಿಯೊಂದು ನಗರಕ್ಕೂ ವಿಶಿಷ್ಟವಾದ ಶೈಲಿಯಿತ್ತು. ಸೂಜಿಮೊನೆಯ ಲೇಸುಗಳೇ ಅತ್ಯಂತ ಜನಪ್ರಿಯವಾದ ಮಾದರಿಗಳಾಗಿದ್ದುವು. ಆ ಶತಮಾನದ ಧರ್ಮಗುರುಗಳ ಉಡುಪುಗಳಲ್ಲಿ ಕಂಡುಬರುವ ನಿರಿಪಟ್ಟಿಗಳೇ ಮೊದಲಾದವನ್ನು ಇನ್ನೂ ಸುರಕ್ಷಿತವಾಗಿ ಇಡಲಾಗಿದೆ. ಶತಮಾನದ ಕೊನೆಯ ಹೊತ್ತಿಗೆ ಪುರುಷರು ಕಾಲರುಗಳ ಬದಲಾಗಿ ಕಲಾಬತುಗಳನ್ನು ಉಪಯೋಗಿಸತೊಡಗಿದರು. ಆ ಕಾಲದ್ದೆಂದು ಹೇಳಲಾಗಿರುವ ಹೂದಾನಿಗಳ ಮೇಲುವಸ್ತ್ರಗಳು, ಕೆಲವು ಉಡುಪುಗಳು ಮತ್ತು ಚರ್ಚುಗಳಲ್ಲಿ ಪೀಠಗಳ ಮೇಲೆ ಉಪಯೋಗಿಸುತ್ತಿದ್ದ ವಸ್ತ್ರಗಳು ಇಂದೂ ಸುರಕ್ಷಿತವಾಗಿವೆ. ೧೭ನೆಯ ಶತಮಾನದಲ್ಲಿ ಇಟಲಿ ಫ್ರಾನ್ಸ್‌ಗಳಲ್ಲಿ ಕಲಾಬತಿನ ಉದ್ಯಮ ಬೆಳೆದಿತ್ತು. ಇಟಲಿಯಲ್ಲಿ ವೆನಿಸ್ ಮುಖ್ಯ ಕೇಂದ್ರ. ೧೬೫೦ರಲ್ಲಿ ಬೆಳಕಿಗೆ ಬಂದವೆನಿಸಿನ ನಮೂನೆಯೊಂದರಲ್ಲಿ ಶಿಲ್ಪಾಕೃತಿಯೊಂದರಲ್ಲಿ ಸೂಜಿಮೊನೆಯ ಹೆಣಿಕೆಯಿಂದ ಕಲಾಬತನ್ನು ಎತ್ತರಕ್ಕೆ ಉಬ್ಬಿಸಿ ಹೆಣೆಯಲಾಗಿದೆ. ಹೆಣಿಕೆಯಲ್ಲಿ ನಯವಾದ ಸೂತ್ರಜಾಲ ಮೊದಲು ಕಡಿಮೆಯಾಗಿದ್ದು, ಬರಬರುತ್ತಾ ಕ್ಲಿಷ್ಟ ಹಾಗೂ ಅಲಂಕಾರಮಯವಾದ ವಂಕಿಗಳಿಂದೊಡಗೂಡಿ ಅಧಿಕವಾಗಿ ಸಾಮಾನ್ಯವಾಯಿತು. ಇದೇ ರೀತಿಯಲ್ಲಿ ಉಬ್ಬಿಲ್ಲದ ಕೆಲವು ಕಲಾಬತುಗಳನ್ನೂ ಹಾಕುತ್ತಿದ್ದರು. ೧೭ನೆಯ ಶತಮಾನದ ಫ್ಲೆಮಿಷ್ ಲೇಸು ಅಧಿಕವಾಗಿತ್ತು. ಶತಮಾನದ ಮಧ್ಯಭಾಗದ ಹೊತ್ತಿಗೆ, ನಯವಾದ ಸೂತ್ರಜಾಲವುಳ್ಳ ಅಸಮ ಆಕೃತಿಗಳನ್ನುಳ್ಳ ಲೇಸುಗಳು ಸೂಕ್ಷ್ಮದಾರಗಳುಳ್ಳ ರೆಟಿಸೆಲೊಲೇಸನ್ನು ಹಿಂದೂಡಿ ಪ್ರಮುಖವಾದುವು.

ಫ್ರಾನ್ಸಿನಲ್ಲಿ ಫಿಲೆಟ್ ಮತ್ತು ಕಟ್ ವರ್ಕ್ ಗಳ ಯಂತ್ರಗಳು ಬಳಕೆಗೆ ಬರುವವರೆಗೂ ಕಲಾಭಿಮಾನಿಗಳಿಗೆ ಇದು ಒಂದು ಉತ್ತಮ ಹವ್ಯಾಸವಾಗಿತ್ತು. ೧೬೬೫ರಲ್ಲಿ ೧೪ನೆಯ ಲೂಯಿಯ ಖ್ಯಾತ ಮಂತ್ರಿ ಜೀನ್ ಕಾಲ್ಬಾರ್ ವೆನಿಸ್ ಮತ್ತು ಫ್ಲಾಂಡರ್ಸ್‌ಗಳಿಂದ ಕುಶಲ ಕಲಾಬತುಗಾರರನ್ನು ಕರೆಸಿ ಫ್ರಾನ್ಸಿನ ಏಳು ನಗರಗಳಲ್ಲಿ ಇದರ ಶಿಕ್ಷಣವನ್ನೇರ್ಪಡಿಸಿದ. ಹೀಗಾಗಿ ಕಲಾಬತುಗಳನ್ನು ಆಮದು ಮಾಡಿಕೊಳ್ಳುವುದು ಬಹಳ ಕಡಿಮೆಯಾಯಿತು. ಇಟಾಲಿಯನ್ ಮಾದರಿಗಳನ್ನು ಕೆಲಕಾಲ ಅನುಕರಿಸಿದ ಮೇಲೆ, ಫ್ರಾನ್ಸ್‌ ತನ್ನದೇ ಆದ ಶೈಲಿಯನ್ನು ರೂಢಿಸಿಕೊಂಡಿತು.

ಯುರೋಪಿನ ಇನ್ನಿತರ ದೇಶಗಳಲ್ಲೂ ಹದಿನೇಳನೆಯ ಶತಮಾನದಲ್ಲಿ ಕಲಾಬತುಗಳನ್ನು ಹಾಕುತ್ತಿದ್ದರು. ಆದರೆ ಅಲ್ಲಿ ಇದು ಇಟಲಿ, ಫ್ರಾನ್ಸ್‌ ಮತ್ತು ಫ್ಲಾಂಡರ್ಸ್‌ನಲ್ಲಿಯಷ್ಟು ಪ್ರಾಮುಖ್ಯಗಳಿಸಲಿಲ್ಲ. ಬಣ್ಣಬಣ್ಣದ ರೇಷ್ಮೆವಸ್ತ್ರಗಳ ಮೇಲೆ ಚಿನ್ನಬೆಳ್ಳಿಗಳ ಲೇಸುಗಳನ್ನು ಹಾಕುತ್ತಿದ್ದುದುಂಟು. ಸ್ಪಾನಿಷ್ ಮಾದರಿಯೊಂದರಲ್ಲಿ ಬಾಬಿನ್ ಮತ್ತು ಸೂಜಿಮೊನೆಯ ಲೇಸಿನಲ್ಲಿ ಅಂಚುಗಳಲ್ಲಿ ದಪ್ಪನೆಯ ಹೊಲಿಗೆಗಳನ್ನು ಹಾಕುತ್ತಿದ್ದರು. ಜರ್ಮನಿಯ, ೧೭ನೆಯ ಶತಮಾನದ್ದೆಂದು ಹೇಳಲಾದ, ಉರುಳೆಲೇಸು ದೊರಕಿದೆ. ಆ ಶತಮಾನದ ಇಂಗ್ಲಿಷ್ ಸೂಜಿಮೊನೆಯ ಲೇಸು ಸಾಮಾನ್ಯವಾಗಿ ರೆಟಿಸೆಲೊ ಮಾದರಿಯದಾಗಿದ್ದು, ಅದರಲ್ಲಿ ಕೆಲವು ಕೃತಿಗಳ ಮೇಲೆ ಕಸೂತಿಗಳಿಗೆ ಹಾಕುವಂತೆ ಹೂ, ಗಿಡಬಳ್ಳಿಗಳು, ಮನುಷ್ಯ ಅಥವಾ ಪ್ರಾಣಿಗಳ ಆಕೃತಿಗಳನ್ನು ಹಾಕುತ್ತಿದ್ದರು. ಲೇಸುಗಳನ್ನು ಆಮದುಮಾಡಿಕೊಳ್ಳುವುದನ್ನು ಸರ್ಕಾರ ಬಹಿಷ್ಕರಿಸಿದ್ದೂ ಉಂಟು. ಫ್ಲಾಂಡರ್ಸಿನಿಂದ ವಲಸೆಬಂದ ಪ್ರಾಟೆಸ್ಟಂಟ್ ನಿರಾಶ್ರಿತರು ಉರುಳೆಲೇಸನ್ನು ಇಂಗ್ಲೆಂಡಿನಲ್ಲಿ ಪ್ರಚುರ ಪಡಿಸಿದರು. ಡಚ್ ಜನರಿಗಾಗಿಯೇ ಫ್ಲಾಂಡರ್ಸ್‌ನಲ್ಲಿ ಒಂದು ರೀತಿಯ ಜಪಾನ್ ಸೇವಂತಿಗೆಯ ಮಾದರಿಯ ಲೇಸುಗಳನ್ನು ತಯಾರಿಸುತ್ತಿದ್ದರು.

ಶ್ರೀಮಂತರ ಉಡುಪಿನ ಒಂದು ಅಂಗವಾಗಿ ಕಲಾಬತು

೧೮ನೆಯ ಶತಮಾನದಲ್ಲಿ ಅಸಮಕೃತಿಗಳು ಮಾಯವಾಗಿ ಅತ್ಯಲಂಕಾರದ ನಮೂನೆಗಳು ಹೊರಬಂದಾಗ, ರೇಜೋಸೂತ್ರಜಾಲಗಳು ಎಲ್ಲೆಲ್ಲೂ ಕಂಡುಬರತೊಡಗಿದ್ದವು. ಲೇಸುಗಳು ಇನ್ನೂ ಹಗುರವಾಗಿ, ಒತ್ತಾಗಿಲ್ಲದೆ, ಬರತೊಡಗಿದುವು. ಈ ರೀತಿಯ, ಗಾಳಿತೂರುವಂಥ, ಒತ್ತಾಗಿಲ್ಲದ ಲೇಸುಗಳನ್ನು ತಯಾರಿಸಲು ಉರುಳೆ ವಿಧಾನ ಬಹಳಮಟ್ಟಿಗೆ ಸಾಧಕವಾಯಿತು. ಅಂಚುಕಟ್ಟುವುದು, ನಿರಿಪಟ್ಟಿಗಳನ್ನು ಅಳವಡಿಸುವುದು ಮೊದಲಾದವು ಬಳಕೆಯಲ್ಲಿದ್ದುವು. ಇವನ್ನು ಮೇಜು ಮೊದಲಾದ ಪೀಠೋಪಕರಣಗಳ ಮೇಲೂ ಉಡುಪುಗಳ ಮೇಲೂ ಸೇರಿಸುತ್ತಿದ್ದರು. ಕುಪ್ಪುಸದ ತೋಳಿನ ಕೊನೆಗೂ ಉರುಳೆಲೇಸನ್ನು ಹಾಕುತ್ತಿದ್ದರು. ಧಾರ್ಮಿಕ ಸಂಸ್ಕಾರಗಳಿಗೂ ಪ್ರಾರ್ಥನೆಗಳಿಗೂ ಉಪಯೋಗಿಸುತ್ತಿದ್ದ ಕೆಲವು ವಿಶಿಷ್ಟ ಉಡುಪುಗಳು ಕಲಾಬತುಗಳಿಂದ ಅಲಂಕೃತವಾಗುತ್ತಿದ್ದವು. ಹದಿನೇಳನೆಯ ಶತಮಾನದಲ್ಲಿ ಪ್ರಮುಖವಾಗಿದ್ದ ಕಲಾಬತಿನ ಕೇಂದ್ರಗಳೇ ಆ ಶತಮಾನದಲ್ಲೂ ಬಹಳ ಖ್ಯಾತವಾಗಿದ್ದುವು. ಇಟಲಿಗಿಂತ ಫ್ರಾನ್ಸ್‌ ಈ ಕಲೆಯಲ್ಲಿ ಪ್ರಮುಖವಾಯಿತು. ಕಾಲ್ಬಾರನ ಅಭಿಲಾಷೆಯಂತೆ ಫ್ರಾನ್ಸಿನಲ್ಲಿ ಅಕ್ಕಪಕ್ಕದಲ್ಲಿದ್ದ ಎರಡು ನಗರಗಳಾದ ಅಲೆಂಕಾನ್ ಮತ್ತು ಅರ್ಜೆಂಟಾನ್ಗಳು ಸೂಜಿಮೊನೆಯ ಕಲಾಬತಿನ ತಯಾರಿಕೆಯಲ್ಲಿ ಬಹಳ ಪ್ರಸಿದ್ಧವಾಗಿದ್ದುವು. ಅಲೆಂಕಾನಿನಲ್ಲಿ ಇಪ್ಪತ್ತಕ್ಕೂ ಅಧಿಕವಾಗಿ ವಿವಿಧ ನಮೂನೆಗಳುಳ್ಳ, ಕಲಾಬತ್ತುಗಳು ಇದ್ದವೆಂದು ತಿಳಿದುಬರುತ್ತದೆ. ಷಟ್ಭುಜಾಕೃತಿಗಳುಳ್ಳ ಚಿಕ್ಕ ಚುಕ್ಕಿಯಂತ ಕಲಾಬತ್ತು ಸೇರಿಸಿದ ಅರ್ಜೆಂಟೆಲಾ ಮಾದರಿಯೂ ದಾರ ಅಥವಾ ಕೂದಲಿನಿಂದ ತಯಾರಿಸಿದ ಜಡೆಪಟ್ಟಿಯಾಗಿ ಉಪಯೋಗಿಸುತ್ತಿದ್ದ ಕಲಾಬತುಗಳೂ ಜನಪ್ರಿಯವಾಗಿದ್ದುವು.

೧೮ನೆಯ ಶತಮಾನದಲ್ಲಿ ಬ್ರಸಲ್ಸನಲ್ಲಿ ಸೂತ್ರಜಾಲದಂಥ ವಂಕಿಗಳುಳ್ಳ ವಿಶಿಷ್ಟ ರೀತಿಯ ಉರುಳೆಲೇಸುಗಳನ್ನು ಹಾಕಲಾಗುತ್ತಿತ್ತು. ಲಿನೆನ್ ಮತ್ತು ರೇಷ್ಮೆಮಿಶ್ರಿತ ಬಟ್ಟೆಯ ಮೇಲೆ ಉರುಳೆವಿಧಾನದಿಂದ ಉಬ್ಬಿದ ಹೊರ ಎಳೆಯನ್ನು ಹಾಕಲಾಗುತ್ತಿತ್ತು. ಇವುಗಳ ಮಧ್ಯದಲ್ಲಿ ಹಡಗು, ಭವನ, ಪಶುಪಕ್ಷಿ ಬೇಟೆ ಮೊದಲಾದುವನ್ನು ಹಾಕಿದಾಗ ಬಹಳ ಮನೋಹರವಾಗಿ ಕಂಡುಬರುತ್ತಿತ್ತು. ಈ ಶತಮಾನದ ಮೆಶ್ಲಿನ್ ಲೇಸಿನಲ್ಲಿ ಹೊಳೆಯುವ ದುಂಡಾದ ಆಕೃತಿಗಳುಳ್ಳ ಜಡೆಪಟ್ಟಿಗಳನ್ನು ಹಾಕುತ್ತಿದ್ದರು. ಇಟಲಿಯಲ್ಲಿ ವೆನಿಷಿಯನ್ ಸೂಜಿಮೊನೆಯ ಲೇಸು ಬಹಳ ಹಗುರವಾಗುತ್ತ ಬಂದು ಹದಿನೆಂಟನೆಯ ಶತಮಾನದ ಆದಿಯಲ್ಲಿ ಗುಲಾಬಿಮೊನೆಯ ಅಥವಾ ರೊಸಲಿನಿನ ಆಕಾರ ತಳೆಯಿತು. ಕಲ್ಪನೆಯಲ್ಲಿ ಮೂಡಿದ ಅನೇಕ ಹೂಗಳ ಆಕೃತಿಗಳು ಉಬ್ಬಿದಂತೆ ಮೂಡುತಿದ್ದವು. ನವಿರಾದ ಸೂತ್ರಜಾಲದ ಮೇಲೆ ವಂಕಿಯಾಕಾರದಲ್ಲಿ ಚಿಕ್ಕ ಚಿಕ್ಕ ಹೂಗಳು ಮೂಡಿ ಬರುತಿದ್ದವು. ಕೆಲವು ಬಾರಿ ಹೂಗಳೇ ಅಲ್ಲದೆ ಸಿಂಹಗಳನ್ನೂ ಮತ್ಸ್ಯಕನ್ಯೆಯರನ್ನೂ ಮೂಡಿಸುತಿದ್ದದ್ದುಂಟು. ಇವೇ ಅಲ್ಲದೆ ಇಂಗ್ಲೆಂಡ್, ಜರ್ಮನಿ, ಡೆನ್ಮಾರ್ಕ್ ಮೊದಲಾದ ದೇಶಗಳಲ್ಲೂ ವಿವಿಧ ಮಾದರಿಯ ಲೇಸುಗಳು ಪ್ರಚಲಿತವಾದವು.

ಫ್ರಾನ್ಸಿನ ಕ್ರಾಂತಿ ಮತ್ತು ಕೈಗಾರಿಕಾ ಕ್ರಾಂತಿಗಳಿಂದ ಕಲಾಬತಿನ ಮೇಲೂ ೧೯ನೆಯ ಶತಮಾನದಲ್ಲಿ ತೀವ್ರ ಪರಿಣಾಮವುಂಟಾಯಿತು. ಫ್ರೆಂಚ್ ಮತ್ತು ಫ್ಲೆಮಿಷ್ ಲೇಸಿನ ಕೈಗಾರಿಕೆ ೧೭೯೦ರ ಹೊತ್ತಿಗೆ ಅವನತಿ ಹೊಂದಿತು. ಕೆಲಕಾಲಾನಂತರ ಅದು ಮತ್ತೆ ತಲೆಯೆತ್ತಿದರೂ ಕಲಾಬತುಗಳು ಅನಂತರದ ಜನಾಂಗದಲ್ಲಿ ದಿನನಿತ್ಯದ ಅಲಂಕರಣ ವಸ್ತುಗಳಾಗದೆ, ಕೇವಲ ಧಾರ್ಮಿಕ ಸಂಪ್ರದಾಯಗಳ ಆಚರಣೆಯಲ್ಲಿ ಉಪಯೋಗಿಸುವ ವಸ್ತುಗಳಾದವು. ಈ ಅವನತಿ ಯಂತ್ರಗಳ ಉಪಜ್ಞೆಯಿಂದ ಕ್ಷಿಪ್ರಗೊಂಡಿತು. ಈ ಶತಮಾನದ ಆದಿಯಲ್ಲೇ ಯಂತ್ರಗಳಿಂದ ಬಹಳ ಪರಿಶ್ರಮವಿಲ್ಲದೆಯೇ ಪುರಾತನ ಕಾಲದ ಮಾದರಿಯ ಲೇಸುಗಳ ತಯಾರಿಕೆ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಸ್ತ್ರೀಯರು ಈ ಯಂತ್ರಗಳ ಲೇಸುಗಳಿಗೆ ಬಹಳವಾಗಿ ಮಾರುಹೋಗದಿದ್ದರೂ ಶತಮಾನದ ಮಧ್ಯಭಾಗದ ಹೊತ್ತಿಗೆ ಹೆಂಗಸರ ಫ್ಯಾಷನ್ನಿಗೆ ಇವು ಪುರಕವಾದವು. ಲಿನೆನ್ಗಿಂತ ಹತ್ತಿ ಸುಲಭ ಲಭ್ಯವಾದ್ದರಿಂದ ಹತ್ತಿಯ ಬಳಕೆ ಅಧಿಕವಾಯಿತು. ಕೆಲವು ವಿಕ್ಟೋರಿಯನ್ ಮಾದರಿಯ ಲೇಸುಗಳು ನಯನ ಮನೋಹರವಾಗಿವೆ. ಬಣ್ಣಬಣ್ಣದ ರೇಷ್ಮೆ ವಸ್ತ್ರಗಳ ಮೇಲೆ ಹಾಕಿದ ಸೂಜಿಮೊನೆಯ ಕಲಾಬತಿನ ಶಾಲೊಂದರ ಮೇಲೆ ಇರುವ ಬಗೆಬಗೆಯ ಹೂಗಳು ಸಹಜವೆನಿಸುವಷ್ಟು ಸುಂದರವಾಗಿವೆ. ರಾಣಿಯೊಬ್ಬಳಿಗಾಗಿ ತಯಾರಿಸಿದ ಈ ಶಾಲನ್ನು ನ್ಯೂಯಾರ್ಕಿನ ಮೆಟ್ರೊಪಾಲಿಟನ್ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಕಲಾಭಿರುಚಿಯುಳ್ಳ ಮಹಿಳೆಯರಿಂದ ಹೊಸ ಹೊಸ ಲೇಸುಗಳನ್ನು ತಯಾರಿಸುವ ಸಂಸ್ಥೆಗಳು ಬೆಳಕಿಗೆ ಬಂದವು; ಹಳೆಯ ಸಂಸ್ಥೆಗಳ ಪುನರುತ್ಥಾನ ಮಾಡಲಾಯಿತು. ಹವ್ಯಾಸಿ ಕಲೆಗಾರರು ಸಹ ಲೇಸುಗಳನ್ನು ಹಾಕತೊಡಗಿದರು. ಆ ಕಾಲದ ವೈಶಿಷ್ಟ್ಯವೇನೆಂದರೆ, ದೊಡ್ಡ ದೊಡ್ಡ ಶಾಲುಗಳಿಗೆ ಬೇಬಿ ಲೇಸೆಂಬ ಚಿಕ್ಕ ಅಂಚುಳ್ಳ ವಿವಿಧ ಮಾದರಿಯ ಕಲಾಬತುಗಳನ್ನು ಹಾಕುತ್ತಿದ್ದದ್ದು.

ಯಂತ್ರಗಳು ಬಳಕೆಗೆ ಬಂದಿದ್ದರೂ ಒಂದನೆಯ ಮಹಾಯುದ್ಧದ ವರೆಗೂ ಕೈಯಿಂದ ಹಾಕಲಾಗುತ್ತಿದ್ದ ಕಲಾಬತುಗಳು ಬಳಕಯಲ್ಲಿದ್ದವು. ಚೀನದಲ್ಲಿ ತಯಾರಾದ ಉರುಳೇಲೇಸು, ಸೂಜಿಮೊನೆಯ ಲೇಸು ಮತ್ತು ಫಿಲೆಟ್ ಲೇಸುಗಳು ಯುರೋಪ್ ಮತ್ತು ಅಮೆರಿಕೆಗಳಿಗೆ ರಫ್ತಾಗತೊಡಗಿದವು. ಈ ಶತಮಾನದ ಮಧ್ಯಭಾಗದ ಹೊತ್ತಿಗೆ ಕಲಾಬತುಗಳ ತಯಾರಿಕೆ ಕಡಿಮೆಯಾಗಿ, ಅದನ್ನು ಸ್ತ್ರೀಯರು ಕೇವಲ ಹವ್ಯಾಸವಾಗಿ, ತಮ್ಮ ಕಲಾಭಿರುಚಿಯನ್ನು ವ್ಯಕ್ತಪಡಿಸಲು ಮಾತ್ರ ಹಾಕತೊಡಗಿದರು.


ತಯಾರಿಕೆ ವಿಧಾನಗಳು[ಬದಲಾಯಿಸಿ]

ಕೈ ಕಲಾಬತನ್ನು ತಯಾರಿಸುವ ವಿಧಾನಗಳು: ಕಲಾಬತುಗಳ ತಯಾರಿಕೆಯಲ್ಲಿ ಪೂರ್ವದೇಶಗಳು ಸಾಕಷ್ಟು ಪರಿಣತಿಹೊಂದಿದ್ದರೂ ಇದರಲ್ಲಿ ಪಾಶ್ಚಾತ್ಯರ ಕೊಡುಗೆ ಅಮೂಲ್ಯವಾದುದು. ಪೂರ್ವದಲ್ಲಿಯ ಕಲಾಬತಿನ ವಿಧಾನಗಳು ಸಾಮಾನ್ಯವಾಗಿದ್ದುವು. ಆಕರ್ಷಕ ಹಾಗೂ ಅದ್ದೂರಿಯ ಕಲಾಬತುಗಳ ಸೃಷ್ಟಿ ಪಾಶ್ಚಾತ್ಯರ ಕೊಡುಗೆಯಾಯಿತು.

ಕ್ರೋಷೆ ಕೆಲಸದ ವಿಧಾನವನ್ನು ಅರಿತರೆ, ಅದರಲ್ಲಿಯೇ ವಿವಿಧ ನಮೂನೆಗಳನ್ನು ಕಲ್ಪಿಸಿಕೊಂಡು ಬೇಕಾದ ಆಕಾರದಲ್ಲಿ ಕಲಾಬತನ್ನು ಹಾಕಬಹುದು. ಲೇಸನ್ನು ಸಾಮಾನ್ಯವಾಗಿ ಎರಡು ವಿಧಾನಗಳಿಂದ ತಯಾರಿಸುತ್ತಾರೆ. ೧ ಸೂಜಿಮೊನೆಯ ಲೇಸು, (೨) ಉರುಳೆ ಲೇಸು ಅಥವಾ ಬಾಬಿನ್ ಲೇಸು. ಸೂಜಿಮೊನೆಯ ಲೇಸನ್ನು ತಯಾರಿಸಲು ಬಟ್ಟೆಯ ಮೇಲೆ ದಪ್ಪ ಕಾಗದವೊಂದನ್ನಿಟ್ಟು, ಬೇಕಾದ ಆಕೃತಿಯನ್ನು ಸೀಸದ ಕಡ್ಡಿಯಿಂದ ಅದರ ಮೇಲೆ ಮೂಡಿಸಿ ಹೊರಗಿನ ಒಂದು ಹೊಲಿಗೆಯನ್ನು ಆಕೃತಿಯ ಸುತ್ತಲೂ ಹಾಕಬೇಕು. ಅನಂತರ ಸೂಜಿದಾರಗಳಿಂದ ಒಂದಾದಮೇಲೊಂದರಂತೆ ಗುಂಡಿಮೊನೆಯ ಹೊಲಿಗೆಗಳನ್ನು ಬೇಕಾದೆಡೆಯಲ್ಲಿ ಬಿಗಿಯಾಗಿ ಅಥವಾ ಸಡಿಲವಾಗಿರುವಂತೆ ಹಾಕುತ್ತ ಹೋಗಬೇಕು. ಇಲ್ಲಿ ಸೂಜಿ ಏನೇ ಆದರೂ ಹಿಂಬದಿಯಿಂದ ಬರಬಾರದೆಂದು ಗಮನಿಸತಕ್ಕದ್ದು. ಕೆಲಸ ಮುಗಿದ ಅನಂತರ ಕತ್ತರಿಯ ಸಹಾಯದಿಂದ ಹೊರಗಿನ ಸಾಲನ್ನು ಕತ್ತರಿಸಿ ಕಲಾಬತನ್ನು ಹೊರತೆಗೆಯಬೇಕು.

ಬಾಬಿನ್ ಲೇಸ್‍ನ ಮಾದರಿ ತಯಾರಿಕಾ ಹಂತದಲ್ಲಿ.

ಉರುಳೆ ಲೇಸನ್ನು (ಬಾಬಿನ್ ಲೇಸ್) ಹಾಕಬೇಕಾದರೆ ಅನುಸರಿಸಬೇಕಾದ ವಿಧಾನವಿದು. ಕೈಯಲ್ಲಿ ಹಿಡಿದುಕೊಳ್ಳಲನುವಾಗುವಂಥ ಒಂದು ಉರುಳೆಗೆ ದಾರಗಳ ಎಳೆಗಳನ್ನು ಹೊಗಿಸಲಾಗುತ್ತದೆ. ದಪ್ಪ ಕಾಗದವೊಂದರ ಮೇಲೆ ಬೇಕಾದ ಆಕೃತಿಯನ್ನು ಬರೆದು ಅತ್ಯಂತ ಹೊರಗಿನ ವಲಯದಲ್ಲಿ ಗುಂಡುಸೂಜಿಗಳನ್ನು ಚುಚ್ಚಿ ಒಂದೊಂದು ಕೈಯಲ್ಲೂ ಒಂದೊಂದು ಉರುಳೆ ಚಾಲಿಸುತ್ತ ಲೇಸನ್ನು ಹಾಕಬೇಕು. ಉರುಳೆ ಲೇಸಿನಲ್ಲೂ ಎರಡು ಬಗೆಗಳಿವೆ. ಉದ್ದವಾದ ಉರುಳೆ ಲೇಸಿನಲ್ಲಿ ಅಲ್ಲಾಡದ ಹಿನ್ನಲೆಯ ಮೇಲೆ ಒಂದೇ ದಿಕ್ಕಿನಲ್ಲಿ ಲೇಸನ್ನು ಹಾಕುತ್ತಾರೆ. ಅನೇಕ ವೇಳೆ, ಒಂದಕ್ಕಿಂತ ಹೆಚ್ಚು ಉರುಳೆಗಳನ್ನು ಉಪಯೋಗಿಸಿ ಉದ್ದವಾದ ಒಂದು ಲೇಸನ್ನು ತಯಾರಿಸುತ್ತಾರೆ. ಹಿನ್ನಲೆ ಸಾಮಾನ್ಯವಾಗಿ ಬಹಳ ಉದ್ದವಾಗಿರದ ಕಾರಣ, ಚಿಕ್ಕ ಚಿಕ್ಕ ಲೇಸುಗಳನ್ನು ಸೇರಿಸಿ ಉದ್ದವಾಗಿ ಮಾಡುವುದೂ ಉಂಟು. ಎರಡನೆಯದೆಂದರೆ ಮುಕ್ತ ಲೇಸು (ಫ್ರೀ ಲೇಸ್). ಇದರಲ್ಲಿ ಹಿನ್ನಲೆಯನ್ನು ಹಿಂದೆ ಮಾಡಿ ಜರುಗಿಸುವುದು ಸಾಧ್ಯ. ಹೀಗೆ ಜರುಗಿಸಿ ಡೊಂಕುಡೊಂಕಾದ ಲೇಸಿನ ನಮೂನೆ ಪಡೆಯಬಹುದು. ನಮೂನೆಯ ಬಿಡಿಬಿಡಿಭಾಗಗಳು ಹೊರಬಂದಮೇಲೆ, ಅವನ್ನು ನಯವಾದ ಸೂತ್ರಜಾಲವೊಂದರಿಂದ ಒಟ್ಟಾಗಿ ಸೇರಿಸಬಹುದು. ಕೆಲವು ನಮೂನೆಯ ಉರುಳೆ ಲೇಸುಗಳನ್ನು ಹಿಂದುಮುಂದಾಗಿಯೂ ಉಪಯೋಗಿಸಬಹುದು. ಸೂಜಿಮೊನೆಯ ಲೇಸನ್ನು ಹಾಕುವುದು ಬಹಳ ಕಷ್ಟವಾದ ವಿಧಾನವಾದುದರಿಂದ, ಇದು ಸುರುಳಿ ಲೇಸಿನಷ್ಟು ಜನಪ್ರಿಯವಾಗಲಿಲ್ಲ. ಕಲಾಬತಿನ ಪ್ರಾರಂಭದ ನಮೂನೆಗಳಲ್ಲೂ ಕೆಲವಾರು ಜನಪದ ಕಲಾಕೃತಿಗಳಲ್ಲೂ ಸೂಜಿಮೊನೆಯ ಲೇಸನ್ನು ಕಾಣಬಹುದು. ಸುಲಭವಿಧಾನಗಳಿಂದೊಡಗೂಡಿದ ಸುರುಳಿ ಲೇಸು ಅತ್ಯಂತ ಜನಪ್ರಿಯವಾಗಿ ಅಸಂಖ್ಯಾತ ಕಲಾಭಿಮಾನಿಗಳ ಹವ್ಯಾಸವಾಗಿದೆ. ಇದರ ಜನಪ್ರಿಯತೆ ಎಷ್ಟು ಅಗಾಧವಾಗಿತ್ತೆಂದರೆ ೧೯ ನೆಯ ಶತಮಾನದಲ್ಲಿ ಆರು ಏಳು ವರ್ಷಗಳ ವಯಸ್ಸಿನಲ್ಲೇ ಬೆಲ್ಜಿಯಂ ಬಾಲಕಿಯರು ಲೇಸುಗಳನ್ನು ತಯಾರಿಸುವ ಶಾಲೆಗಳಲ್ಲಿ ಅಭ್ಯರ್ಥಿಗಳಾಗಿರುತ್ತಿದ್ದರು.

ಕಲಾಬತನ್ನು ಹಾಕಲು ಇವೆರಡೇ ಅಲ್ಲದೆ ಇನ್ನೂ ಕೆಲವೂ ವಿಧಾನಗಳಿವೆ. ಎಳೆ ತೆಗೆದ ಲೇಸುಗಳಲ್ಲಿ ಮೂರು ಬಗೆಗಳುಂಟು. ಒಂದು ಬಗೆಯಲ್ಲಿ ಲಿನೆನಿನಂಥ ಬಟ್ಟೆಯ ಮೇಲೆ ಹಾಸುಹೊಕ್ಕಾಗಿ ಹಾಕಿದ ಲೇಸಿನ ಕೆಲವು ದಾರಗಳನ್ನು ಎಳೆದು ತೆಗೆಯಲಾಗುತ್ತದೆ. ಮಿಕ್ಕ ಎಳೆಗಳನ್ನು ಸೂಜಿ ಹೊಲಿಗೆಗಳಿಗಾಗಿ ಬಿಡಲಾಗುತ್ತದೆ. ಎರಡನೆಯ ಬಗೆಯಲ್ಲಿ ಹಾಸುಹೊಕ್ಕಾಗಿ ಮಾಡಿದ ಲೇಸನ್ನು ಬಟ್ಟೆಯ ಉದ್ದಕ್ಕೂ ಎಣಿಕೆಮಾಡಿ ಎಳೆತೆಗೆದು, ಉಳಿದ ಎಳೆಗಳ ಮೇಲೆ ನಿಬಿಡವಾದ ಸ್ಥಳವನ್ನುಂಟುಮಾಡಲಾಗುತ್ತದೆ. ಮೂರನೆಯ ವಿಧದಲ್ಲಿ ಹಿನ್ನಲೆಯ ಕೆಲವು ಹಾಸುಹೊಕ್ಕಾಗಿರುವ ಎಳೆಗಳನ್ನು ತೆಗೆದು, ಮಿಕ್ಕ ಭಾಗಗಳಲ್ಲಿ ಹಾಗೆಯೇ ಬಿಡಲಾಗುತ್ತದೆ. ಕತ್ತರಿಸಿದ ಕಲಾಬತಿನ ಒಂದು ರೀತಿಯಲ್ಲಿ, ನೇಯ್ದ ಬಟ್ಟೆಯ ಮೇಲೆ ಮಧ್ಯೆ ಮಧ್ಯೆ ನಾಜೂಕಾಗಿ ಕತ್ತರಿಸಿ, ಆ ಭಾಗಗಳಲ್ಲಿ ಲೇಸನ್ನು ಹಾಕಲಾಗುತ್ತದೆ. ನೋಡಲು ಇದು ಬಹಳ ಸುಂದರವಾಗಿ ಇರುತ್ತದೆ. ಮತ್ತೊಂದು ವಿಧಾನದಲ್ಲಿ ಹಿನ್ನಲೆಯನ್ನು ಛಿದ್ರಛಿದ್ರಮಾಡಿ, ನಮೂನೆಯ ಬಿಡಿಭಾಗಗಳಿಂದ ಹೆಣೆದು ಅಂಚು ಕಟ್ಟಲಾಗುತ್ತದೆ.

ಕಟ್ಟುಪಟ್ಟಿ (ಫಿಲೆಟ್) ಅಥವಾ ಬಲೆಗೆಲಸದಲ್ಲಿ (ನೆಟ್ವರ್ಕ್) ಬಲೆಯೊಂದರ ಮೇಲೆ ಕಲಾಬತನ್ನು ಹಾಕುತ್ತಾರೆ. ಬ್ಯೂರಟೊ ಅಥವಾ ನಿರಿಕಟ್ಟಿನ ಲೇಸಿನಲ್ಲಿ ತಳಭಾಗವನ್ನು ಅಲಂಕಾರಕ್ಕಾಗಿ ಜೋಲಾಡುವಂತೆ ಒಟ್ಟು ಮೇಲ್ಭಾಗದ ಅಂಚನ್ನು ನಿರಿಹಿಡಿದು ಬಟ್ಟೆಯ ಅಂಚಿಗೆ ಕಟ್ಟುತ್ತಾರೆ. ಇದನ್ನು ಜಾಲರಿಯಂತಿರುವ ಬಟ್ಟೆಗಳ ಮೇಲೆ ಹಾಕಿದರೆ ಬಹಳ ಅಂದವಾಗಿರುತ್ತದೆ. ವರ್ತುಲಾಕಾರದ ಕಲಾಬತಿನಲ್ಲಿ ಕಾರ್ಡ್ಬೋರ್ಡ್ ನಮೂನೆಯ ಮೇಲೆ ಉರುಳೆಯಿಂದ ಲೇಸನ್ನು ಹಾಕುತ್ತಾರೆ. ಗಂಟಿನ ಮಾದರಿಯ ಲೇಸಿನಲ್ಲಿ ಎಳೆಗಳಿಂದ ಗಂಟುಗಳನ್ನು ಹಾಕಿಯೇ ಲೇಸನ್ನು ತಯಾರಿಸಲಾಗುತ್ತದೆ. ನೇಯ್ದ ಜಮಖಾನಗಳ ಕೊನೆಯಲ್ಲಿ ಹಾಸು ಎಳೆಗಳಿಂದ ಹಾಕಿರುವ ಗಂಟುಗಳಲ್ಲಿ ಇದನ್ನು ಗಮನಿಸಬಹುದು. ಟೇಪ್ ಲೇಸಿನಲ್ಲಿ ಉರುಳೆ ಅಥವಾ ಯಾವುದೇ ಯಂತ್ರದಿಂದ ತಯಾರಿಸಿದ ಟೇಪಿನಿಂದ ಕಲ್ಪಿತ ಆಕೃತಿಯನ್ನು ಹೆಣೆಯಬಹುದು. ಇವೇ ಅಲ್ಲದೆ, ನೇಯ್ಗೆಯಲ್ಲಿ ಹಾಸು ಎಳೆಗಳ ನಡುವೆ ಹೊಕ್ಕು ಎಳೆಗಳನ್ನು ಹಾಯಿಸುವ ಲಾಳಿಯ ಸಹಾಯದಿಂದ ಗಂಟುಗಳನ್ನು ಹೆಣೆದು ಇನ್ನೊಂದು ಬಗೆಯ ಕುಣಿಕೆ ಲೇಸನ್ನು ತಯಾರಿಸುತ್ತಾರೆ.

The Chancellor of Oxford University. The robes of some high officers of state and university officials are trimmed with gold plate lace or gold oakleaf lace.

ಹದಿನೆಂಟನೆಯ ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ಐರೋಪ್ಯ ದೇಶಗಳಲ್ಲಿ ಕಲಾಬತು ಎಷ್ಟು ಜನಪ್ರಿಯವಾಗಿತ್ತೆಂದರೆ ಯಾವೊಬ್ಬ ಸುಶಿಕ್ಷಿತ ಮಹಿಳೆಯೂ ಅಂದವಾದ ಲೇಸನ್ನು ಉಪಯೋಗಿಸದೆ ಪರಿಪೂರ್ಣಳಾಗುವುದಿಲ್ಲ-ಎಂದು ಹೇಳುತ್ತಿದ್ದರು. ಭಾರತದಲ್ಲಿ ಸ್ಯಾಟಿನ್ ಲೇಸು, ಜರಿಯ ಲೇಸು, ನೈಲಾನ್ ಲೇಸು ಮುಂತಾದವು ಬಳಕೆಯಲ್ಲಿವೆ. ಬಗೆಬಗೆಯ ಬಣ್ಣದ ರೇಷ್ಮೆಯ ಹಾಗೂ ಜರತಾರಿಯ ಕಲಾಬತುಗಳನ್ನು ಸೀರೆಗಳಿಗೆ ಜೋಡಿಸಿದಾಗ ಕಣ್ತಣಿಸುವಂತಿರುತ್ತದೆ. ಬನಾರಸಿನ ಸೀರೆಯನ್ನು ನೇಯುವಾಗಲೇ, ಸೀರೆಯ ಅಂಚಿನಲ್ಲಿ ಕಾಲು ಇಂಚಿನಿಂದ ಹಿಡಿದು ಐದು ಇಂಚುಗಳ ವರೆಗಿನ ಕಲಾಬತುಗಳು ತಯಾರಾಗುತ್ತವೆ. ಕಲಾಪ್ರಿಯರಾದ ಭಾರತೀಯ ಮಹಿಳೆಯರು ತಮ್ಮ ಉಡುಪುಗಳಲ್ಲಿಯೂ ಮನೆಯ ಅಲಂಕಾರದ ವಸ್ತ್ರಗಳಲ್ಲಿಯೂ ಕಲಾಬತುಗಳನ್ನು ಅಳವಡಿಸುತ್ತಾರೆ. ಬಾಗಿಲ ಪರದೆಯ ಅಂಚು, ಮೇಜುವಸ್ತ್ರ, ಮೊದಲಾದವು ಲೇಸುಗಳಿಂದ ಕಂಗೊಳಿಸುತ್ತವೆ.

ಕಸೂತಿ ಬಟ್ಟೆಗಳಂತೆ ಲೇಸುಗಳನ್ನು ಕಾಪಾಡುವುದೂ ಒಂದು ಕಲೆ. ಬಣ್ಣ ಮಾಸದಂತೆ ಲೇಸುಗಳನ್ನು ಬಹಳ ಜಾಗರೂಕತೆಯಿಂದ ಉಪಯೋಗಿಸಬೇಕು. ಇವನ್ನು ಸಾಬೂನಿನಿಂದ ತೊಳೆಯಬಹುದಾದರೂ ಸೋಡವನ್ನು ಉಪಯೋಗಿಸಬಾರದು. ನೀರಿನಲ್ಲಿ ಸ್ವಲ್ಪ ನಿಂಬೆರಸವನ್ನು ಹಾಕಿ ಬಟ್ಟೆಯನ್ನು ಹಿಂಡಿದರೆ ಹೊಳಪು ನಯ ಹೆಚ್ಚುತ್ತವೆ.

ಕೆಲವು ದೇಶಗಳಲ್ಲಿ ಕಲಾಬತನ್ನು ಶೇಖರಿಸುವುದೂ ಒಂದು ಮುಖ್ಯ ಹವ್ಯಾಸವಾಗಿದೆ. ಕೈಯಿಂದ ಹಾಕಲಾದ ನವಿರಾದ ಸೂಕ್ಷ್ಮ ಬಣ್ಣಬಣ್ಣಗಳ ಕಲಾಬತುಗಳಿಗೆ ಬೆಲೆಯೂ ಅಧಿಕ. ಕೆಲವು ಅಪೂರ್ವವಾದ ಲೇಸುಗಳು ತಲತಲಾಂತರವಾಗಿ ಬಂದವು. ಆದರೆ ಅವುಗಳ ಮೌಲ್ಯಗಳನ್ನು ಕಂಡುಹಿಡಿಯುವುದು ಕಷ್ಟ. ಈ ಅಭಿರುಚಿಯೂ ದಿನೇ ದಿನೇ ಕ್ಷೀಣಿಸುತ್ತಿರುವುದರಿಂದ, ವಸ್ತುಸಂಗ್ರಹಾಲಯಗಳೂ ಹಣ ತೆತ್ತು ಇವನ್ನು ಕೊಳ್ಳಲು ಮುಂದೆ ಬರುತ್ತಿಲ್ಲ. ಕೊಡುಗೆಯಾಗಿ ಕೊಟ್ಟಲ್ಲಿ ಸ್ವೀಕರಿಸಿ ಪ್ರದರ್ಶಿಸಲು ಅವು ಸಿದ್ಧವಿವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಕಲಾಬತು&oldid=1054221" ಇಂದ ಪಡೆಯಲ್ಪಟ್ಟಿದೆ