ಕರ್ನಾಟಕ ಮಲ್ಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

'ಕರ್ನಾಟಕ ಮಲ್ಲ,' 'ಚಂದ್ರಶೇಖರ ಪಾಲೆತ್ತಾಡಿ'ಯವರಿಂದ ಪ್ರಕಾಶಿತ ಹಾಗೂ ಮುದ್ರಿತ, ಮುಂಬೈನಿಂದಲೇ ನೇರವಾಗಿ ಪ್ರಕಾಶಿತಗೊಳ್ಳುವ ಏಕೈಕ ದೈನಂದಿಕ ಕನ್ನಡ ಪತ್ರಿಕೆ. ಇದಕ್ಕೆ ಶಾಖೆಗಳಿಲ್ಲ. ಮುಂಬೈ ಜನಜೀವನ, ಕ್ರೀಡೆ, ರಾಜಕೀಯ, ಸ್ಥಳೀಯ ವಾರ್ತೆಗಳು, ನಗೆ-ಹನಿ, ಕೆಲವು ಸಾಲುಗಳಲ್ಲಿ ಕೊಡುವ ತುಳು ನಗೆಬರಹಗಳು, ಅಂಕಣ, ಸಂಪಾದಕೀಯ, ಹಾಗೂ ಅತ್ಯುತ್ತಮ ವರ್ಣ-ಚಿತ್ರಗಳು-ಇವೇ ಅದರ ಪ್ರಮುಖ ಬಲಗಳು. ಕ್ರೀಡೆಯಬಗ್ಗೆ ಬರೆಯುವ ಲೇಖನಗಳಲ್ಲಿ ಬಳಸುವ ಕನ್ನಡ ಭಾಷೆ, ಅತ್ಯಂತ ಪ್ರಭಾವಿ ಹಾಗೂ ಮನೋರಂಜಕ. ಇದಕ್ಕೆ ಸ್ಪರ್ಧೆ ಕೊಡುವ ಮತ್ತೊಂದು ಪತ್ರಿಕೆ,ಉದಯವಾಣಿ. ಮುಂಬೈನ ಸ್ಥಳೀಯ ವಾರ್ತೆಗಳಿಗೆ 'ಕರ್ನಾಟಕಮಲ್ಲ' ದ ಆದ್ಯತೆ ಹೆಚ್ಚು. ಇದರ ಬೆಲೆ ೨-೫೦ ರೂಪಾಯಿಗಳು.

’ಕರ್ನಾಟಕ ಮಲ್ಲ ದಿನ ಪತ್ರಿಕೆ’-೨೦ ರ ಹುಟ್ಟುಹಬ್ಬದ ಸಂಭ್ರಮದಲ್ಲಿ [ಬದಲಾಯಿಸಿ]

'ಮುಂಬೈಕನ್ನಡಿಗರ ಮನಮನೆಯ ವಾರ್ತಾ ಮಾಧ್ಯಮವಾಗಿ 'ಕರ್ನಾಟಕ ಮಲ್ಲದಿನ-ಪತ್ರಿಕೆ,' ಕನ್ನಡಿಗರ ಭಾವನಾತ್ಮಕ ಕೊಂಡಿಯಾಗಿ ಬೆಸೆದಿದೆ. ಮುಂಬೈಕನ್ನಡಿಗರ ಮುಖವಾಣಿಯಾಗಿ ಇಂದು ೨೦ ನೆಯ ವರ್ಷಕ್ಕೆ ಪಾದಾರ್ಪಣೆಮಾಡಿದೆ. ಸನ್, ೧೯೯೨ ರ ಫೆಬ್ರವರಿ, ೨ ರ ಪ್ರಥಮ ಸಂಚಿಕೆ, ಫೆಬ್ರವರಿ ೧ ರಂದು, ಮುಂಬೈನ ಮಾಹಿಮ್ ಉಪನಗರದಲ್ಲಿರುವ 'ಕರ್ನಾಟಕ ಸಂಘ'ದ 'ವಿಶೇಶ್ವರಯ್ಯ ಸಭಾಗೃಹ'ದಲ್ಲಿ ಉದ್ಘಾಟಿಸಲ್ಪಟ್ಟಿತ್ತು. ಆಗ ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು, ಕರ್ನಾಟಕದ ಹಿರಿಯ ರಾಜಕಾರಿಣಿ, ನರಸಿಂಹಮೂರ್ತಿ, ಮತ್ತು ಡಾ. ಜೀವರಾಜ ಆಳ್ವರು. ಈ ಪತ್ರಿಕೆಯ ಆಗಿನ ಸಂಪಾದಕರು, 'ಶ್ರೀ. ಎಂ. ಮಲ್ಲಿಕಾರ್ಜುನಯ್ಯನವರು'. ಅವರು, ಮಂಗಳೂರಿನ 'ಸಂಜೆ ಪತ್ರಿಕೆ'ಯ ಸಂಪಾದಕರಾಗಿ ದುಡಿಯುತ್ತಿದ್ದರು. ಹೀಗೆ ಕೂಸಾಗಿ ಹುಟ್ಟಿ, ಬೆಳೆದು ಪ್ರವರ್ಧಮಾನಕ್ಕೆ ಬರುತ್ತಿರುವ 'ಕರ್ನಾಟಕ ಮಲ್ಲ ಪತ್ರಿಕೆ', ಈಗ ಮುಂಬೈನ ಕನ್ನಡಿಗರ ಧ್ವನಿಯಾಗಿ, ಅಭಿವ್ಯಕ್ತತೆಯ ಸಂಕೇತವಾಗಿ, ಎಲ್ಲರ ಆವಶ್ಯಕತೆಗಳಿಗೆ ಸ್ಪಂದಿಸುತ್ತಾ ಬಂದಿದೆ.

ಪತ್ರಿಕೆಯ ಮಾಲಕತ್ವ ಮರಾಠಿಗರದು [ಬದಲಾಯಿಸಿ]

ಕನ್ನಡ ಪತ್ರಿಕೆಯನ್ನು ಪ್ರಾರಂಭಿಸಿದ, ದಿನಗಳು ಆರ್ಥಿಕವಾಗಿ, ಅಷ್ಟೇನೂ ಸುಖಕರವಾಗಿಲ್ಲದಿದ್ದರೂ, ಕಳೆದ ಒಂದೂವರೆ ದಶಕಗಳಲ್ಲಿ ಸಮೃದ್ಧವಾಗಿ ಬೆಳೆದು ೨೦ ರ ಯವ್ವನದಲ್ಲಿ ಸಂಭ್ರಮಿಸುತ್ತಿದೆ. ಇದಕ್ಕೆಲ್ಲಾ ಕಾರಣ, ಮುಂಬೈ ಕನ್ನಡಿಗರು ತಮ್ಮ ಮುದ್ದಿನ ಮರಿಯೆಂದು ಭಾವಿಸಿ, ಪತ್ರಿಕೆಯನ್ನು ಬೆಳೆಸಲು ಸಹಕರಿಸಿದ್ದು. ಮತ್ತೊಂದು ಪ್ರಮುಖ ಯೋಗದಾನವೆಂದರೆ, ಪತ್ರಿಕೆಯ ಮಾಲಿಕತ್ವ ಮರಾಠಿಗರದಾದರೂ ಪತ್ರಿಕಾನೀತಿಗೆ ಬದ್ಧವಾಗಿ ಮುನ್ನಡೆಯುವುದಕ್ಕೆ ಯಾವುದೆ ಅಡ್ಡಿ-ಆತಂಕಗಳನ್ನು ಒಡ್ಡದೆ ಪ್ರೋತ್ಸಾಹ ಕೊಡುವ ನೀತಿಯೂ ಪ್ರಮುಖವಾಗಿದೆ. ಹಾಗಾಗಿ ಮರಾಠಿ-ಕನ್ನಡ ಸೌಹಾರ್ದ ಸೇತುವೆಯಾಗಿ ಈ ಪತ್ರಿಕೆ ಬೆಳೆಯುತ್ತಾ ನಡೆದಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಪತ್ರಿಕೆಯೊಂದನ್ನು ಸಮರ್ಥವಾಗಿ ನಡೆಸಿಕೊಂಡು ಬರಲು ಅನೇಕ ಆಡೆ-ತಡೆಗಳಿವೆ. 'ನ್ಯೂಸ್ ಪ್ರಿಂಟ್ ಬೆಲೆ' ಶುರುಮಾಡಿದ ಸಮಯದಲ್ಲಿ ಕೆಜಿಗೆ ೧೫-೧೬ ರೂಪಾಯಿಗಳಿತ್ತು. ಈಗ ಅದರ ಬೆಲೆ, ಕೆಜಿಗೆ ೯೦-೧೦೦ ರೂ.ದಾಟಿದೆ. ಹೀಗಾಗಿ ಸಾಮನ್ಯ ಬಂಡವಾಳಗಾರರಿಗೆ ಅಸಾಧ್ಯವಾದ ಮಾಧ್ಯಮವೆಂಬುದನ್ನು ಹಲವಾರುಮಂದಿ ಮನಗಂಡಿದ್ದಾರೆ. ಬೊಂಬಾಯಿನ ನಾಗರಿಕರು, ಕನ್ನಡ ಪತ್ರಿಕೆಯನ್ನು ಕೊಳ್ಳುವುದಲ್ಲದೆ, ಅದರಲ್ಲಿ ತಮ್ಮ ಅಮೂಲ್ಯವಾದ 'ಜಾಹಿರಾತು'ಗಳನ್ನು ಕೊಡುವಮೂಲಕ ಬೆಂಬಲವಾಗಿ ನಿಂತಿರುವುದರಿಂದ ಇಂದು ಪತ್ರಿಕೆ ತನ್ನ ಸ್ಥಿರತೆಯನ್ನು ಕಾಯ್ದುಕೊಂಡು ಮುಂಬೈನ ಕನ್ನಡಿಗರ ಜೀವನಾಡಿಯಂತೆ ಬೆಳೆಯಲು ಸಾಧ್ಯವಾಗಿದೆ.

'ಕರ್ನಾಟಕ ಮಲ್ಲ'ಪತ್ರಿಕೆಯ ವಿಶೇಷತೆ [ಬದಲಾಯಿಸಿ]

ಮುಂಬೈಕನ್ನಡಿಗರ ಮೊದಲ ಕನ್ನಡ ಪತ್ರಿಕೆಯಾದ 'ಕರ್ನಾಟಕ ಮಲ್ಲ'ದ ಮೊದಲ ಸಂಚಿಕೆಯ, ಮೊದಲ ಪುಟದಲ್ಲಿ ಘೋಷಿಸಿದಂತೆ, ಇಂದಿಗೂ 'ಮುಂಬೈ ಕನ್ನಡಿಗರ ಯಾವತ್ತೂ ಚಟುವಟಿಕೆಗಳಮುಖವಾಣಿಯಾಗಿ ಕಾರ್ಯನಿರ್ವಹಿಸಲು ಬದ್ಧವಾಗಿದೆ'. ಮುಂಬೈನಗರದ ಸಮಸ್ಯೆಗಳನ್ನು ಸಮರ್ಥವಾಗಿ ಬಿಂಬಿಸುತ್ತಿದೆ. ಅದಲ್ಲದೆ ಮುಂಬೈನಲ್ಲಿ ನೆಲೆಸಿರುವ ಕನ್ನಡನಾಡಿನ ಹಲವಾರು ಸ್ಥಳಗಳಿಂದ ಬಂದು ನೆಲೆಸಿರುವ ಕನ್ನಡಿಗರ ದನಿಯನ್ನು ಒಗ್ಗೂಡಿಸುವ ಮಹಾನ್ ಕಾರ್ಯವನ್ನು, ಪತ್ರಿಕೆಯ ಇಂದಿನ ಸಂಪಾದಕರಾದ, 'ಶ್ರೀ.ಚಂದ್ರಶೇಖರ ಪಾಲತ್ತಾಡಿ'ಯವರ ಮುಂದಾಳತ್ವದಲ್ಲಿ ಸಮರ್ಥವಾಗಿ ಮಾಡುತ್ತಾ ಬಂದಿದೆ.