ಕಂಗಿಲು ಕುಣಿತ -ಆಚರಣೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕಂಗಿಲು ಕುಣಿತ ಮತ್ತ ಆಚರಣೆ ಕರಾವಳಿ ಕರ್ನಾಟಕದಲ್ಲಿ ಕಂಗಿಲು ಆಚರಣೆ ಹಾಗೂ ಕುಣಿತ ಪ್ರಕಾರವು ಒಂದು ನಿರ್ದಿಷ್ಟ ಜನವರ್ಗದವರುಗಳ ಆರಾಧನಾ ಪದ್ಧತಿಯಾಗಿದೆ. ಈ ಕುಣಿತ ಹಾಗೂ ಆರಾಧನಾ ಕ್ರಮಗಳನ್ನು ನಿರ್ದಿಷ್ಟವಾದ ಋತುಮಾನದಲ್ಲಿ ನಡೆಸುವರು. ಮುಖ್ಯವಾಗಿ ತುಳುವಿನಲ್ಲಿ ಹೆಚ್ಚಾಗಿ ಆರಾಧನಕ್ರಮಗಳು ನಡೆಯಲ್ಪಡುವ 'ಮಾಯಿ'- ತಿಂಗಳ ಹುಣ್ಣಿಮೆಯ ಬೆಳದಿಂಗಳಲ್ಲಿ ನಡೆಯುವುದು ರೂಢಿ. 'ಮಾಯಿ'= ತಿಂಗಳ ಬೆಳದಿಂಗಳ ಈ ಆರಾಧನ ಪದ್ಧತಿಯಲ್ಲಿ ಹಾಸ್ಯ, ಕುಣಿತ, ಹಾಡು, ಡೋಲು ಬಡಿಯುವಿಕೆ ಮತ್ತು ಆಶೀ೯ವಚನ ಕಾಣಿಕೆ ಒಪ್ಪಿಸುವುದು ಮುಂತಾದ ಕ್ರಿಯೆಗಳಿವೆ. ಕಂಗಿಲು ನೃತ್ಯ ಮತ್ತು ಆರಾಧನ ಪದ್ಧತಿಯನ್ನು ಮೂರು ಹಗಲು ಮೂರು ರಾತ್ರಿ ನಡೆಸುವರು. ಮುಖ್ಯವಾಗಿ ಈ ಪದ್ಧತಿಯನ್ನು ಉಳಿಸಿಕೊಂಡು ಬಂದಿರುವ ಜನವರ್ಗ 'ಗೊಡ್ಡ ಜನಾಂಗದವರು'. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಜನಾಂಗದವರ ಸಂಖ್ಯೆ ಅತ್ಯಂತ ವಿರಳ. 'ಗೊಡ್ಡ'- ಜನಾಂಗದವರು ತಮ್ಮ ಮಾತೃ ಭಾಷೆಯಾಗಿ ತುಳು ಮಾತಾನಾಡಿದರೂ ಪರಂಪರೆಯ ಕಥೆಯ ಪ್ರಕಾರ ಈ ಜನವರ್ಗದವರು ' ತುಳು ನಾಡಿಗೆ '-ಪ್ರವೇಶಿಸಿದ್ದು ಹೊರಗಿನಿಂದ ಎಂಬ ಅಭಿಪ್ರಾಯವಿದೆ. ಹೊಯ್ಸಳ-ರ ಕಾಲದಲ್ಲಿ ಈ ಜನವರ್ಗದವರುಗಳು ದೇವಳದ ಸೇವೆಯಲ್ಲಿದ್ದರೆಂದೂ ಮತ್ತು ಕ್ರಮೇಣ ಯುದ್ದ ಕೌಶಲವನ್ನು ತಿಳಿದವರಾಗಿದ್ದರೆಂಬುದು ಅಭಿಮತವಿದೆ. ಆರಂಭದಲ್ಲಿ ಕಟ್ಟಿಂಗೇರಿಯಲ್ಲಿ ಈ ಜನವರ್ಗದವರ ಮೂಲ ಸಂತತಿ ಇದ್ದುದಾಗಿ ಕ್ರಮೇಣ ಉತ್ತರ ಭಾಗವಾದ 'ಕಾಪು'-ಉಡುಪಿ ಈ ಪ್ರದೇಶಗಳಲ್ಲಿ ದೈವಾರಾಧನೆಯ ಕೈಂಕರ್ಯ ನಡೆಸುವಲ್ಲಿ ಪಾಲ್ಗೊಂಡರು. ಇದಕ್ಕೆ ಉದಾಹರಣೆ ಎನ್ನುವಂತೆ ಕಾಪು ಹಳೇ ಮಾರಿ ಗುಡಿಯ ಸಮೀಪದಲ್ಲಿ ಇರುವ ದೈವ ಸಾನದಲ್ಲಿ ನಡೆಸುವ ಪಿಲಿ ಕೋಲ, ಗುಳಿಗ ಆರಾಧನೆ, ಬೆರ್ಮೆರು ಆರಾಧನೆ ನಡೆಸುವ ಯಜಮಾನಿಕೆ ಈ ಜನವರ್ಗದಲ್ಲಿ ಇಂದಿಗೂ ಇರುವುದು ಸಾಕ್ಷಿಯಾಗಿದೆ. ಈ ಆರಾಧನೆಯಲ್ಲಿ ನಡೆಯುವ ಕ್ರಿಯೆಗಳನ್ನು ಗಮನಿಸಿದಾಗ ಈ ಜನವರ್ಗದವರು ಕ್ಷಾತ್ರಧರ್ಮವನ್ನು ಮೈಗೂಡಿಸಿಕೊಂಡಿದ್ದರೆನ್ನುವುದನ್ನು ಇನ್ನಷ್ಟೂ ಸ್ಪಷ್ಟಪಡಿಸಬಲ್ಲದು. 'ಗೊಡ್ಡ'= ಜನವರ್ಗದವರು ನಡೆಸುವ ಬೆಳದಿಂಗಳ ಈ ಆರಾಧನ ಪದ್ಧತಿ ಮತ್ತು ಕುಣಿತ ಪುರುಷ ಪ್ರಧಾನವಾದುದು. ಈ ಕುಣಿತವನ್ನು ಗಮನಿಸಿದಾಗ ಆರಾಧನ ಪಾತ್ರಧಾರಿಗಳು ತಮ್ಮ ಉಡುಪು ಮತ್ತು ಶಿರಸ್ತ್ರಾಣವಾಗಿ ತೆಂಗಿನ ಸಿರಿಯನ್ನು ಹೆಚ್ಚಾಗಿ ಬಳಸುತ್ತಾರೆ ಮತ್ತು ಡೋಲು-ಚಂಡೆಯ ನಿನಾದಕ್ಕೆ ತಕ್ಕನಾಗಿ ಕುಣಿಯುವರು. ದೈವಸಾನದಲ್ಲಿ ಆರಂಭವಾಗುವು ಕಂಗಿಲು ಕುಣಿತದ ತಿರುಗಾಟ ಮೂರು ರಾತ್ರಿ ಮತ್ತು ಮೂರು ಹಗಲು ನಡೆಯುವುದು. ತಿರುಗಾಟದ ಸಂದರ್ಭದಲ್ಲಿ ಕಂಗಿಲು ಕುಣಿತದವರುಗಳು ತೆಂಗಿನ ಸಿರಿಯನ್ನು ಹೊದ್ದುಕೊಳ್ಳುವುದರಿಂದಾಗಿ ಇವರನ್ನು ಸಿರಿಯ ಮಕ್ಕಳೆಂದು ಕರೆಯುವರು. (ದ.ಕ. ಜಿಲ್ಲೆಯಲ್ಲಿ ಸಿರಿ-ಆಚರಣೆ ಅಥವಾ ಸಾಮೂಹಿಕ ದೈವಾವೇಷ ಬರುವ ಸಿರಿ ಆಚರಣೆಗೂ ಈ ಆಚರಣೆಗೂ ಸಂಬಂಧವಿಲ್ಲ). ಕಂಗಿಲು ಪಾತ್ರಧಾರಿಗಳು ತೆಂಗಿನ ಸಿರಿಲಂಗ ಧರಿಸಿದುದರಿಂದ ಇವರನ್ನು ಸಿರಿಯ ಮಕ್ಕಳು ಎಂದು ಮನ್ನಣೆ ಕೊಡಲಾಗಿದೆ. ಸಿರಿಯ ಮಕ್ಕಳೆಂದರೆ ಫಲವತ್ತಿಕೆಯನ್ನು ತಂದು ಅನಿಷ್ಟವನ್ನು ಹೊಡೆದೋಡಿಸುವ ಮಕ್ಕಳೆಂಬುದು ಈ ಆರಾಧನಾ ಪದ್ಧತಿಯಿಂದ ತಿಳಿದು ಬರುವುದು. ಕಂಗಿಲು ಕುಣಿತದ ಮೊದಲ ದಾಖಲೀಕರಣದ ಮಾಹಿತಿ ಲಭ್ಯವಾಗುವುದು ೧೯೩೮-ರಲ್ಲಿ ಆರ್ನಾಲ್ದ್ ಬಾಕೆ ಡಚ್ ವಿದ್ವಾಂಸ ಸಂಗ್ರಹಿಸಿದ ಮೂಕಿ-ಟಾಕಿ ಚಿತ್ರದಿಂದ. ಆನಂತರ ೧೯೯೬-ರಲ್ಲಿ ದಾಖಲೀಕರಣ ಹಾಗೂ ಅಧ್ಯಯನ ನಡೆಸಲು ಮುಂದಾದ ಸಂಸ್ಥೆ ಉಡುಪಿಯ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಂಶೋಧನ ಬಳಗ ಬಹು ಮಾಧ್ಯಮಗಳಲ್ಲಿ ದಾಖಲೀಕರಣ ಹಾಗೂ ಸಂಶೋಧನಾ ಅಧ್ಯಯನ ನಡೆಸಿತು.

ಕಂಗಿಲು ಶಬ್ದ ಕುರಿತು: ಕೆಲವೊಮ್ಮೆ ಬರಹ ಮಾಧ್ಯಮದಿಂದ ಇಡೀ ಜನ ಸಮೂಹದ ಅರಿವನ್ನು ತಪ್ಪಾಗಿ ಗ್ರಹಿಸುವಂತೆ ಮಾಡಬಹುದಾಗಿದೆ, ಇದಕ್ಕೆ ಕಂಗಿಲು ಪದ ಅಥವಾ ಶಬ್ದ ಕೂಡ ಈ ಅಪವಾದದಿಂದ ಹೊರತಾಗಿಲ್ಲ. ಹಂಪಿ ವಿಶ್ವ ವಿದ್ಯಾನಿಲಯ ಪ್ರಕಟಿಸಿದ (ಹಿ.ಚಿ. ಬೋರಲಿಂಗಯ್ಯ ಸಂಪಾದಿತ) ಹೊರ ತಂದ 'ಕರ್ನಾಟಕ ಜನಪದ ಕಲೆಗಳ ಕೋಶ' (೧೯೯೬) ತಿಳಿಸುವಂತೆ 'ಕಂಗು' -ಎಂದರೆ ಅಡಿಕೆ ಮರ, ಈ ಮರದ ಸಿರಿಯನ್ನು ಬಳಸಿದುದರಿಂದ 'ಕಂಗಿಲು '-ಬಂದಿದೆ ಎಂದಿರುವರು. ಇದೊಂದು ತಪ್ಪು ಗ್ರಹಿಕೆ. ಕ್ಷೇತ್ರಕಾರ್ಯ ಮತ್ತು ಅಧ್ಯಯನದ ಪ್ರಕಾರ ಕಂಗಿಲು ಸಿರಿ ಮಕ್ಕಳು ಪುರುಷ ಪಾತ್ರಧಾರಿಯಾದರೂ ಇವರೆಲ್ಲಾ ಸ್ರ್ತೀಯರು ಮತ್ತು ಕೃಷ್ಣನ ಓಲೈಸಿಕೊಳ್ಳಲು ಬಂದವರು ಎನ್ನುವುದು ಒಂದು ಅಭಿಮತವಾಗಿದೆ. ಈ ಎಲ್ಲಾ ಕ್ರಿಯೆಗಳು ನಡೆಯುವುದು ಮತ್ತು ನಡೆಯುತ್ತಿದ್ದುದು ಕಾನನ-ದಲ್ಲಿ. ಇದಕ್ಕೆ ಮುಖ್ಯ ಕಾರಣ ಈ ಕುಣಿತದ ನಡುವೆ ಗೊಲ್ಲರ ಪ್ರತಿನಿಧಿಯೆನಿಸಿಕೊಂಡ ಕೃಷ್ಣ ಕಡೆಗಣ-ನಾಗಿ ( ಕೊರಗ ಸಮುದಾಯದ ಸಾಂಸ್ಕೃತಿಕ ಪುರುಷ ) ಪ್ರಮುಖ ಪಾತ್ರ ವಹಿಸಿದ್ದಾನೆ. ಈತನ ಸುತ್ತ ಸಿರಿ ಮಕ್ಕಳು ಕುಣಿಯುವರು. ಸಿರಿ ಮಕ್ಕಳು ಮನೆಯ ಮುಂದೆ ಕುಣಿದು ಪಡಿ-ಕಾಣಿಕೆ ದಾನವಾಗಿ ಮನೆಯ ಯಜಮಾನತಿಯಿಂದ ಪಡೆದರೆ ಕಡೆಗಣ-ಪಾತ್ರಧಾರಿ ಮನೆಯ ಹಿಂಭಾಗದಲ್ಲಿ ಹೋಗಿ ದಾನ ಪಡೆಯುವುದು ಈ ಆರಾಧನಾ ಪದ್ಧತಿಯ ವೈಶಿಷ್ಟ್ಯವಾಗಿದೆ. ಭಕ್ತಾದಿಗಳು ಕೊಡುವ ಪಡಿ-ಕಾಣಿಕೆ ಯನ್ನು ಕಡೆಗಣ ಪಡೆದು ತನ್ನ ಹಣೆಯಲ್ಲಿನ ಕಪ್ಪು ಮಸಿ (ಮಾಂತ್ರಿಕ ತಿಲಕ)-ಯನ್ನು ತೆಗೆದು ಭಕ್ತಾದಿಗಳ ಹಣೆಗೆ ಸೋಕಿಸುವುದು ಕಂಗಿಲು-ಆರಾಧನಾ ಪದ್ಧತಿಯಲ್ಲಿ ವಿಶೇಷವಾಗಿದೆ. ಕಂಗಿಲು ಕುಣಿತ ಹಾಗೂ ಆರಾಧನಾ ಪದ್ಧತಿಗೂ ಹುಣ್ಣಿಮೆ ಕಾಮನಿಗೂ ಸಂಬಂಧವಿರುವುದನ್ನು ಈ ಆರಾಧನಾ ಪದ್ಧತಿಯಲ್ಲಿ ಬಳಸುವ ಸಾಹಿತ್ಯದಲ್ಲಿ ಗಮನ ಸೆಳೆಯುವ ಅಂಶವಾಗಿದೆ. ಇಲ್ಲಿ ಕೃಷ್ಣ ಕಾಮನ ಸಂಕೇತವಾಗಿರುವುದನ್ನು ಅಧ್ಯಯನದಿಂದ ತಿಳಿಯಲಾಗಿದೆ.