ಒಡಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಒರಿಯ ಇಂದ ಪುನರ್ನಿರ್ದೇಶಿತ)
ಒರಿಯಾ
ଓଡ଼ିଆ oṛiā
 
ಉಚ್ಛಾರಣೆ: IPA: ಟೆಂಪ್ಲೇಟು:IPA-or
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳl, ತ್ರಿಪುರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ, ಬಿಹಾರ. ಇಲ್ಲಿಯೂ ಮಾತನಾಡಲ್ಪಡುತ್ತದೆ ಸೂರತ್, ಬೆಂಗಳೂರು, ನವ ದೆಹಲಿ ಮತ್ತು ಮುಂಬೈi. Prominent speakers in ಪುಣೆ, ಹೈದರಾಬಾದ್ಮತ್ತು ಚೆನ್ನೈ
ಒಟ್ಟು 
ಮಾತನಾಡುವವರು:
೩೩ಮಿಲಿಯ
ಭಾಷಾ ಕುಟುಂಬ:
 ಇಂಡೋ -ಇರಾನಿಯನ್
  ಇಂಡೋ -ಆರ್ಯನ್
   Eastern
    ಒರಿಯಾ ಭಾಷೆ
     ಒರಿಯಾ 
ಬರವಣಿಗೆ: ಒರಿಯಾ ಅಕ್ಷರಮಾಲೆ (ಬ್ರಾಹ್ಮೀ)
Oriya Braille 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಒಡಿಶಾ, ಜಾರ್ಖಂಡ್
ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1: or
ISO 639-2: ori
ISO/FDIS 639-3: ori
Indic script
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...

ಒರಿಯಾ ಒಂದು ಭಾರತೀಯ ಭಾಷೆ.ಒಡಿಶಾ (ಹಿಂದಿನ ಒರಿಸ್ಸಾ) ರಾಜ್ಯದ ಅಧಿಕೃತ ಭಾಷೆ ಇದು ಇಂಡೋ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿದ್ದು, ಇಂಡೋ-ಆರ್ಯನ ಶಾಖೆಯಲ್ಲಿದೆ.

ಒರಿಯ ಭಾಷೆ ಒರಿಸ್ಸ ರಾಜ್ಯದ ಜನರ ಭಾಷೆ. ಭಾರತ ಸಂವಿಧಾನದಿಂದ ಮಾನ್ಯತೆ ಪಡೆದಿರುವ 22 ಭಾಷೆಗಳಲ್ಲಿ ಒಂದು. ಆರ್ಯಭಾಷಾ ಪರಿವಾರದ ಮುಖ್ಯ ಭಾಷೆಗಳಲ್ಲೊಂದಾಗಿದ್ದು ಮಾಗಧ ಅಪಭ್ರಂಶದಿಂದ ಬೆಳೆದು ಬಂದ ಬಂಗಾಳಿ, ಅಸ್ಸಾಮೀ ಭಾಷೆಗಳೊಂದಿಗೆ ನಿಕಟ ಸಂಬಂಧ ಪಡೆದಿದೆ. ಮೂವತ್ತೆರಡು ಸಾವಿರ ಚದರ ಮೈಲಿ ಪ್ರದೇಶವನ್ನು ಹೊಂದಿದೆ. ಇಲ್ಲಿ ಶೇ. 81.4ರಷ್ಟು (2002) ಜನ ಈ ಭಾಷೆಯನ್ನಾಡುತ್ತಾರೆ. ಭಾರತದ ಬಂಗಾಲ ಕೊಲ್ಲಿಯ ತೀರದಲ್ಲಿ ಪ್ರಚಾರದಲ್ಲಿರುವ ಈ ಭಾಷೆ ಉತ್ತರದಲ್ಲಿ ಬಂಗಾಳಿ, ವಾಯವ್ಯದಲ್ಲಿ ಬಿಹಾರ, ದಕ್ಷಿಣದಲ್ಲಿ ತೆಲುಗು ಭಾಷೆಗಳಿಂದಲೂ ನೈಋತ್ಯದಲ್ಲಿ ಮರಾಠಿಯ ಹಾಲ್ವಿ ಮತ್ತು ಭತ್ರಿ ಉಪಭಾಷೆಗಳು ಮತ್ತು ಪುರ್ವೀ ಹಿಂದಿಯ ಛತ್ತೀಸ್ಗಡಿ ಉಪಭಾಷೆಗಳಿಂದಲೂ ಆವರಿಸಲ್ಪಟ್ಟಿದೆ.

ಭಾಷೆಯ ಹೆಸರು[ಬದಲಾಯಿಸಿ]

ಆಂಗ್ಲಭಾಷೆಯಲ್ಲಿ ಕ್ಯಾನರೀಸ್ ಎಂದು ಕರೆಯುವ ಭಾಷೆಯ ನಿಜವಾದ ಹೆಸರು ಕನ್ನಡವಾಗಿರುವಂತೆಯೇ ಆಂಗ್ಲಭಾಷೆಯಲ್ಲಿ ಒರಿಯ ಎನ್ನಿಸಿಕೊಂಡ ಭಾಷೆಯ ಸರಿಯಾದ ಹೆಸರು ಒಡಿಯ. ಶಬ್ದದ ಉತ್ಪತ್ತಿಯನ್ನು ನೋಡಿದರೆ ಒರಿಸ್ಸ ಶಬ್ದ ಒರಿಸು ಎನ್ನುವ (ಒಕ್ಕಲಿಗ, ರೈತ) ಶಬ್ದದಿಂದಲೂ ಒಡಿಯ ಜನ ಎಂಬ ಶಬ್ದ ಓಢ್ರ ಎಂಬ ಒರಿಸ್ಸದ ಪ್ರಾಚೀನ ನಿವಾಸಿಗಳ ಹೆಸರಿನಿಂದಲೂ ಬಂದಿವೆಯೆಂದು ಊಹಿಸಬಹುದು. ಈಗಲೂ ಎಷ್ಟೊ ಜನ ಈ ಶಬ್ದವನ್ನು ಉರಿಯ ಎಂದು ತಪ್ಪಾಗಿ ಉಚ್ಚರಿಸುತ್ತಾರೆ. ಕಳೆದ ಶತಮಾನದ ಇಂಡಿಯನ್ ಸಿವಿಲ್ ಸರ್ವಿಸಿಗೆ ಸೇರಿದ ಕೆಲವು ಭಾಷಾವಿಜ್ಞಾನಿ ಒರಿಯ ಶಬ್ದವನ್ನು ಉಪಯೋಗಿಸುತ್ತಿದ್ದುದರಿಂದ ಅದೇ ಹೆಸರು ಬಳಕೆಗೆ ಬಂದಿರಬೇಕು.

ಲಿಪಿ[ಬದಲಾಯಿಸಿ]

ಒರಿಯ ಭಾಷೆಗೆ ತನ್ನದೇ ಆದ ವಿಶಿಷ್ಟವಾದ ಲಿಪಿಯಿದೆ. ಈ ಲಿಪಿ ಬ್ರಾಹ್ಮೀಲಿಪಿ ಯಿಂದಲೇ ಬೆಳೆದುಬಂದುದಾಗಿದ್ದು, ದೇವನಾಗರಿಯ ಸೋದರ ಲಿಪಿಯೆನಿಸಿಕೊಂಡಿದೆ ಯಾದರೂ ದೇವನಾಗರಿಯಿಂದ ತೀರ ಭಿನ್ನವಾಗಿದೆ. ಉತ್ತರ ಭಾರತದ ಮತ್ತು ದಕ್ಷಿಣ ಭಾರತದ ಲಿಪಿಗಳನ್ನು ಹೋಲುವ ಈ ಲಿಪಿ ಎರಡೂ ವರ್ಗದ ಲಿಪಿಗಳಿಗೆ ಮಧ್ಯವರ್ತಿ ಯಾಗಿದೆಯೆನ್ನಬಹುದು. ದಕ್ಷಿಣ ಲಿಪಿಗಳೊಡನೆ ಇದರ ಸಾಮ್ಯ ಹೆಚ್ಚೆಂದು ಹೇಳಬಹುದು. ಒರಿಯ ಅಕ್ಷರಗಳ ಈಗಿನ ರೂಪ ತೆಲುಗು, ಮಲಯಾಳ, ತಮಿಳು, ಸಿಂಹಳಿ ಮತ್ತು ಬರ್ಮೀ ಭಾಷೆಯ ಅಕ್ಷರಗಳನ್ನು ಬಹುಮಟ್ಟಿಗೆ ಹೋಲುತ್ತದೆ. ಒರಿಯದ ಪ್ರತಿ ಅಕ್ಷರದ ಮೇಲ್ಭಾಗದಲ್ಲಿ ಒಂದೇ ರೀತಿಯ ಅರ್ಧವೃತ್ತಾಕಾರವಿರುವುದರಿಂದ ಎಲ್ಲ ಅಕ್ಷರಗಳೂ ಒಂದೇ ಬಗೆಯಾಗಿರುವಂತೆ ಭಾಸವಾಗುತ್ತದೆ. ಕೆಲವು ವಿದೇಶೀಯರಂತೂ ನೋಡಿದೊಡನೆ ಎಲ್ಲ ಅಕ್ಷರಗಳೂ ಒಂದೇ ರೀತಿಯ ವೃತ್ತಾಕಾರಗಳಾಗಿವೆಯೆಂದು ಭಾವಿಸುತ್ತಾರೆ. ಆ ವೃತ್ತಾಕಾರಗಳ ಒಳಗೆ ಇನ್ನು ಕೆಲವು ಆಕಾರಗಳಿವೆಯೆಂಬುದನ್ನು ಕಾಣಲು ಅವರು ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಬೇಕಾಗುತ್ತದೆ. ಪ್ರಾಯಶಃ ತಾಳ ಪತ್ರದಲ್ಲಿ ಕಬ್ಬಿಣದ ಕಂಠದಿಂದ ಬರೆಯುತ್ತಿದ್ದುದರಿಂದ ಈ ರೀತಿ ಗುಂಡುಗುಂಡಾದ ಅಕ್ಷರಗಳು ಪ್ರಚಾರಕ್ಕೆ ಬಂದಿರಬೇಕು. ಇತ್ತೀಚೆಗೆ ಒಬ್ಬಿಬ್ಬರು ನೀಳವಾದ ತಲೆ ಕಟ್ಟುಗಳನ್ನು ಕೊಟ್ಟು ದೇವನಾಗರಿಯ ರೀತಿಯಲ್ಲಿ ಇದನ್ನು ಬರೆಯುವ ಪ್ರಯತ್ನ ಮಾಡಿದ್ದಾರಾದರೂ ಅದು ಫಲಕಾರಿಯಾಗಲಿಲ್ಲ. ಈಗ ಒರಿಸ್ಸ ಸರ್ಕಾರ ಲಿಪಿ ಸುಧಾರಣೆಯ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

ಲಿಖಿತ ರೂಪಗಳು[ಬದಲಾಯಿಸಿ]

ಕಳಿಂಗ ರಾಜನಾದ ಅನಂತವರ್ಮ ವಜ್ರಹಸ್ತದೇವನ ಶಿಲಾಶಾಸನವೇ (1051) ಒರಿಯದಲ್ಲಿ ಈವರೆಗೆ ದೊರೆತ ಅತಿ ಪ್ರಾಚೀನ ಶಾಸನ. ಇದಲ್ಲದೆ ಪ್ರ.ಶ.ಪು. 3ನೆಯ ಶತಮಾನದ ಅಶೋಕನ ಮತ್ತು ಪ್ರ.ಶ.ಪು. ಮೊದಲ ಶತಮಾನದ ಖಾರವೇಲನ ಶಿಲಾಶಾಸನಗಳು ಕೂಡ ಒರಿಸ್ಸದಲ್ಲಿ ಸಿಕ್ಕಿವೆ. ಈ ಶಾಸನಗಳಿಂದ ಆ ಕಾಲದಲ್ಲಿ ಪಾಲಿ ಭಾಷೆ ಪ್ರಚಾರದಲ್ಲಿದ್ದುದು ಕಂಡುಬರುತ್ತದೆ. ಈ ಶಾಸನಗಳ ಮತ್ತು ನಮಗೆ ದೊರೆತ ಅತಿ ಪ್ರಾಚೀನ ಸಾಹಿತ್ಯಕೃತಿಗಳ ನಡುವಣ ಯುಗದಲ್ಲಿ ಓಢ್ರ ಎನ್ನುವ ಉಪಭಾಷೆಯ ಹೆಸರೂ ಕೇಳಿಬರುತ್ತದೆ. ಪಾಲಿ, ಪ್ರಾಕೃತಗಳ ಪ್ರಭಾವದಿಂದ ಬೆಳೆದುಬಂದ ಈ ಭಾಷೆಯನ್ನು ಬೌದ್ಧರು ಉಪಯೋಗಿಸುತ್ತಿದ್ದರು. ಎರಡನೆಯ ಶತಮಾನದ ಭರತನ ನಾಟ್ಯಶಾಸ್ತ್ರದಲ್ಲಿಯೂ 7ನೆಯ ಶತಮಾನದ ಹೂಯೆನ್ತ್ಸಾಂಗನ ಬರೆಹಗಳಲ್ಲಿಯೂ ಇದರ ಉಲ್ಲೇಖವಿದೆ. ಒರಿಯ ರಾಜ್ಯದ ಗಡಿಯೊಳಗೆ ಪ್ರಚಾರದಲ್ಲಿದ್ದ ಸಂಸ್ಕೃತ ಮತ್ತು ದ್ರಾವಿಡ ಭಾಷೆಗಳಲ್ಲಿ ಬರುವ ಒರಿಯ ಶಬ್ದ ಮತ್ತು ನುಡಿಗಟ್ಟುಗಳಿಂದಲೂ ಏಳನೆಯ ಮತ್ತು 9ನೆಯ ಶತಮಾನದ ಶಿಲಾಶಾಸನಗಳಿಂದಲೂ ಒರಿಯ ಭಾಷೆಯ ಚಾರಿತ್ರಿಕ ಪ್ರಗತಿಯನ್ನು ಊಹಿಸಬಹುದು. 13ನೆಯ ಶತಮಾನದ ಭುವನೇಶ್ವರ ದೇವಸ್ಥಾನದ ಶಾಸನದಿಂದ ಒರಿಯ ಭಾಷೆ ಆ ವೇಳೆಗಾಗಲೆ ಕೆಲವು ಶತಮಾನಗಳಿಂದ ಅಭಿವೃದ್ಧಿಗೊಳ್ಳುತ್ತಿತ್ತೆಂದು ಸ್ಪಷ್ಟವಾಗಿ ತಿಳಿದುಬರುತ್ತದೆ. 10-12ನೆಯ ಶತಮಾನಗಳ ಮಧ್ಯದಲ್ಲಿ ರಚಿಸಲಾಗಿದೆಯೆಂದು ಊಹಿಸಬಹುದಾದ ಸಾರಳಾದಾಸ ಕವಿಯ ಮಹಾಭಾರತವೇ ಉಪಲಬ್ಧ ಒರಿಯ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು. ಈ ಗ್ರಂಥದ ನಿಜವಾದ ಕಾಲನಿಷ್ಕರ್ಷೆಯ ಬಗ್ಗೆ ವಾದವಿವಾದಗಳಿದ್ದು ಕೆಲವರು ಇದನ್ನು 15ನೆಯ ಶತಮಾನದ ಕೃತಿಯೆಂದು ಊಹಿಸುತ್ತಾರೆ.

ಭಾಷಾ ಪ್ರಭೇದಗಳು[ಬದಲಾಯಿಸಿ]

ಕಟಕ್ ಮತ್ತು ಪುರಿ ಪ್ರದೇಶಗಳಲ್ಲಿನ ಆಡುನುಡಿ ಈ ಭಾಷೆಯ ಮುಖ್ಯ ಪ್ರಭೇದವೆಂದೂ ಒರಿಯ ಮಾತಾಡುವ ಎಲ್ಲ ಜನರೂ ಈ ಪ್ರಭೇದವನ್ನು ಅರ್ಥಮಾಡಿಕೊಳ್ಳಬಲ್ಲರೆಂದೂ ಹೇಳಬಹುದು. ಒರಿಯದ ಉಪಭಾಷಾಪರಿವೀಕ್ಷಣೆ ಈ ವರೆಗೆ ನಡೆದಿಲ್ಲ. ಹೀಗಾಗಿ ಉಪಭಾಷೆಗಳ ವಿತರಣೆಗೆ ಸಂಬಂಧಿಸಿದಂತೆ ಯಾವ ಸಾಹಿತ್ಯವೂ ನಮಗೆ ದೊರೆಯುವುದಿಲ್ಲ. ಆದರೂ ಸ್ಥೂಲವಾಗಿ ಕೆಲವು ಪ್ರಧಾನ ಪ್ರಭೇದಗಳನ್ನು ಗುರುತಿಸಬಹುದು. ಸಂಬಲ್ಪುರ ಮತ್ತು ಅದರ ಆಸುಪಾಸಿನ ಜಿಲ್ಲೆಗಳ ಜನರ ಆಡುನುಡಿಯಾದ ಸಂಬಲ್ಪುರಿ ಈ ಭಾಷೆಯ ಪ್ರಧಾನ ಪ್ರಭೇದಗಳಲ್ಲಿ ಒಂದು. ಇದು ಛತ್ತೀಸ್ಗಢಿ ಮತ್ತು ಹಿಂದಿಯಿಂದ ಪ್ರಭಾವಿತವಾಗಿದೆ. ಇನ್ನೊಂದು ಪ್ರಭೇದ ಉತ್ತರ ಭಾಗದಲ್ಲಿ ಬಂಗಾಳದ ಗಡಿ ಪ್ರದೇಶದಲ್ಲಿ ಪ್ರಚಾರದಲ್ಲಿದೆ. ಇದು ಬಂಗಾಳಿಯಿಂದ ಎಷ್ಟು ಪ್ರಭಾವಿತವಾಗಿದೆಯೆಂದರೆ ಗ್ರಿಯರ್ಸನ್ನನ ಮಾತಿನಲ್ಲಿ ಹೇಳುವುದಾದರೆ ಈ ಭಾಗದ ಜನರ ಆಡುಮಾತಿನಲ್ಲಿ ಒರಿಯದಲ್ಲಿ ಪ್ರಾರಂಭವಾದ ವಾಕ್ಯ ಬಂಗಾಳಿಯಲ್ಲಿ ಕೊನೆಗೊಳ್ಳುತ್ತದೆ. ರಾಜ್ಯದ ಉತ್ತರ ಭಾಗದಲ್ಲಿ ಕೆಲವೆಡೆಯಂತೂ ಒರಿಯ ಪುಸ್ತಕಗಳು ಬಂಗಾಳಿ ಲಿಪಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಮುದ್ರಿತವಾಗಿ ಸಾಮಾನ್ಯ ಜನತೆಯಲ್ಲಿ ಪ್ರಚಾರದಲ್ಲಿವೆ. ದಕ್ಷಿಣದ ಗಂಜಾಂ ಮತ್ತು ಕೋರಾಪುಟ್ ಜಿಲ್ಲೆಗಳಲ್ಲಿನ ಆಡುಮಾತು ತೆಲುಗು ಭಾಷೆಯಿಂದ ಪ್ರಭಾವಿತವಾಗಿದೆ. ಈ ಪ್ರಭೇದವನ್ನು ದಕ್ಷಿಣೀ ಎಂದು ಕರೆಯುತ್ತಾರೆ. ಕೋರಾಪುಟ್ ಜಿಲ್ಲೆಯ ಗಿರಿಜನರಲ್ಲಿ ಪ್ರಚಾರದಲ್ಲಿರುವ ಆಡುನುಡಿ ದಕ್ಷಿಣೀ ಭಾಷೆಯಿಂದ ಭಿನ್ನವಾಗಿದ್ದು ದೇಶೀಯ ಎನ್ನಿಸಿಕೊಳ್ಳುತ್ತದೆ.

ಶಬ್ದಸಂಪತ್ತು[ಬದಲಾಯಿಸಿ]

ಹಲವು ಶತಮಾನಗಳವರೆಗೆ ಒರಿಸ್ಸ ರಾಜ್ಯ ತೆಲಿಂಗ ರಾಜರ ಅಧೀನದಲ್ಲಿತ್ತು. 20ನೆಯ ಶತಮಾನದಲ್ಲೂ ಹಲವು ಕಾಲ ಅದರ ಒಂದು ಭಾಗ ಮದ್ರಾಸ್ ಸರಕಾರದ ಆಳ್ವಿಕೆಗೊಳಗಾಗಿತ್ತು. ಹೀಗಾಗಿ ಅನೇಕ ತಮಿಳು ಮತ್ತು ತೆಲುಗು ಶಬ್ದಗಳು ಒರಿಯ ಭಾಷೆಯಲ್ಲಿ ಸೇರಿಕೊಂಡಿವೆ. ಸು. ಐವತ್ತು ವರ್ಷಗಳ ಕಾಲ ಒರಿಸ್ಸ ರಾಜ್ಯ ನಾಗಪುರದ ಭೋನ್ಸ್ಲೆ ರಾಜರ ವಶದಲ್ಲಿತ್ತು. ಹೀಗಾಗಿ ಒರಿಯ ಮರಾಠಿ ಶಬ್ದಗಳನ್ನೂ ಸ್ವೀಕರಿಸಿದೆ. ಒರಿಸ್ಸ ರಾಜ್ಯದ ಐದನೆಯ ಒಂದು ಪಾಲು ಜನಸಂಖ್ಯೆ ಗಿರಿಜನರಿಂದ ಕೂಡಿರುವುದರಿಂದ ಕೋಂಡ್, ಕೋಲ್ಹ, ಕುಯಿ, ಹೊ, ಸವರ, ಜುವಂಗ್ ಮುಂತಾದ ಭಾಷೆಗಳ ಶಬ್ದಗಳೂ ಒರಿಯದ ಭಂಡಾರಕ್ಕೆ ಸೇರಿಕೊಂಡಿವೆ. ಇವುಗಳ ಜೊತೆ ಸಂಸ್ಕೃತದ ತತ್ಸಮ ಮತ್ತು ತದ್ಭವ ಶಬ್ದಗಳು, ಅರೇಬಿಕ್ ಮತ್ತು ಪರ್ಷಿಯನ್ ಶಬ್ದಗಳೂ ಗಣನೀಯ ಪ್ರಮಾಣದಲ್ಲಿ ಸೇರಿಕೊಂಡಿವೆ. ಪೋರ್ಚುಗೀಸ್ ಮತ್ತು ಇತರ ವಿದೇಶೀ ಶಬ್ದಗಳು ನೇರವಾಗಿ ಅಥವಾ ಇತರ ಭಾರತೀಯ ಭಾಷೆಗಳ ಮೂಲಕ ಒರಿಯ ಶಬ್ದಭಂಡಾರಕ್ಕೆ ಬಂದು ಸೇರಿವೆ. ಇಂಗ್ಲಿಷ್ ಶಬ್ದಗಳಂತೂ ಆಬಾಲವೃದ್ಧರ ಆಡುನುಡಿಯಲ್ಲಿ ದಿನದಿನಕ್ಕೂ ಅಧಿಕ ಸಂಖ್ಯೆಯಲ್ಲಿ ಬಂದು ನೆಲೆಯೂರುತ್ತಿವೆ.

ಧ್ವನಿ ವ್ಯವಸ್ಥೆ[ಬದಲಾಯಿಸಿ]

ಆನುವಂಶಿಕವಾಗಿ ಒರಿಯ ಭಾಷೆ ಬಂಗಾಳಿ ಮತ್ತು ಅಸ್ಸಾಮೀಗಳಿಗೆ ಸಮೀಪವಾಗಿದ್ದರೂ ಲಿಪಿ ಮತ್ತು ಧ್ವನಿವ್ಯವಸ್ಥೆಯಲ್ಲಿ ಈ ಭಾಷೆ ಅವಕ್ಕಿಂತ ಭಿನ್ನವಾಗಿದೆ. ಇದರ ಒಂದು ಪ್ರಧಾನವಾದ ಮತ್ತು ಮೂಲಭೂತವಾದ ವೈಶಿಷ್ಟ್ಯವೆಂದರೆ ಅಕ್ಷರಗಳು ಸ್ವರಾಂಗತವಾಗಿರುವುದು. ಒರಿಯದ ಶಬ್ದಗಳೂ ಸ್ವರದಲ್ಲಿ ಕೊನೆಗೊಳ್ಳುತ್ತವೆ (ಅಜಂತಗಳಾಗಿವೆ). ಸೋದರಭಾಷೆಗಳಲ್ಲಿ ಅಜಂತಗಳಲ್ಲದ ಶಬ್ದಗಳು ಒರಿಯದಲ್ಲಿ ಓ ಎಂಬ ವಿಶಿಷ್ಟವಾದ ವಿವೃತ ಒ ಕಾರದಲ್ಲಿ (ಎ) ಕೊನೆಗೊಳ್ಳುತ್ತವೆ. ಹಿಂದಿ ಮತ್ತು ಬಂಗಾಳಿಯ ಘರ್ ಎನ್ನುವ ಹಲಂತ ಶಬ್ದ ಒರಿಯದಲ್ಲಿ ಘೊರೊ (ghoಡಿo) ಎಂದು ಅಜಂತವಾಗುತ್ತದೆ. ಇದರಿಂದಾಗಿಯೆ ಗ್ರಿಯರ್ಸನ್ ಒರಿಯ ಭಾಷೆಯಲ್ಲಿ, ಬರೆವಣಿಗೆ ಮತ್ತು ಉಚ್ಚಾರಣೆ ಒಂದೇ ರೀತಿಯಾಗಿವೆಯೆಂದು ಹೇಳಿದ್ದಾನೆ. ಸ್ವರಗಳ ಹ್ರಸ್ವ ದೀರ್ಘ ರೂಪಗಳು ಪ್ರತ್ಯೇಕ ಸ್ವನಿಮಯಗಳಾಗಿಲ್ಲ. ಸಂಸ್ಕೃತ ಶಬ್ದಗಳಲ್ಲಿನ ದೀರ್ಘಸ್ವರಗಳು ಹ್ರಸ್ವ ಸ್ವರಗಳಾಗಿ ಉಚ್ಚರಿಸಲ್ಪಡುತ್ತವೆ. ಇನ್ನೆರಡು ವಿಚಾರಗಳಲ್ಲಿಯೂ ಒರಿಯ ಹಿಂದಿ ಮತ್ತು ಬಂಗಾಳಿಯಿಂದ ಭಿನ್ನವಾಗಿದೆ. ಹಿಂದಿ ಮತ್ತು ಬಂಗಾಳಿಯಲ್ಲಿಲ್ಲದ ಣ ಮತ್ತು ಳ ಒರಿಯದಲ್ಲಿದೆ. ಸ, ಶ, ಷ ಗಳೆಂಬ ಮೂರು ಊಷ್ಮಧ್ವನಿಗಳ ಸ್ಥಾನದಲ್ಲಿ ಬಂಗಾಳಿ ಭಾಷೆ ಶಕಾರವನ್ನು ಮಾತ್ರ ಬಳಸಿದರೆ ಒರಿಯ ಸಕಾರವನ್ನು ಮಾತ್ರ ಬಳಸುತ್ತದೆ. ಬರೆಹದಲ್ಲಿ ಬಕಾರ ಮತ್ತು ವಕಾರ ಪ್ರತ್ಯೇಕವಾಗಿ ಕಂಡುಬಂದರೂ ಉಚ್ಚಾರಣೆಯಲ್ಲಿ ಈ ಎರಡರ ಸ್ಥಾನದಲ್ಲಿ ಓಷ್ಠ್ಯ, ಬಕಾರ ಮಾತ್ರ ಬಳಕೆಯಲ್ಲಿದೆ. ಪದಾಘಾತ ಮತ್ತು ಸ್ವರವನ್ನು ಈ ತನಕ ಯಾರೂ ಅಧ್ಯಯನ ಮಾಡದಿದ್ದರೂ ಅವುಗಳ ವಿಚಾರವಾಗಿ ಒಂದೆರಡು ಮಾತುಗಳನ್ನು ಹೇಳಬಹುದು. ಶಬ್ದದ ಪ್ರಥಮಾಕ್ಷರಕ್ಕೆ ಆಘಾತವಿರುತ್ತದೆ. ಬಹ್ವಕ್ಷರೀ ಶಬ್ದಗಳಲ್ಲಿ ಪ್ರಥಮಾಕ್ಷರಕ್ಕೆ ಆಘಾತವಿಲ್ಲ. ವಾಕ್ಯದ ಕೊನೆಯಲ್ಲಿ ವಾಕ್ಯಸ್ವರ ಇಳಿಮುಖವಾಗುತ್ತದೆ.

ವ್ಯಾಕರಣ[ಬದಲಾಯಿಸಿ]

ಒರಿಯದಲ್ಲಿ ಏಕ, ಬಹು ಎಂಬ ಎರಡು ವಚನಗಳಿವೆ. ಬಹುತ್ವವನ್ನು ದ್ಯೋತಿಸುವ ಶಬ್ದಗಳನ್ನು ಏಕವಚನ ರೂಪಕ್ಕೆ ಸೇರಿಸಿ ಬಹುವಚನ ರೂಪಗಳನ್ನು ಪಡೆಯಬಹುದು. ಸಂಸ್ಕೃತದ ಗುಣ, ಕುಳ ಮತ್ತು ದ್ರಾವಿಡ ಭಾಷೆಗಳ ಗಳ್ ಇವುಗಳಿಂದ ಸಿದ್ಧಿಸಿದ ಗುಡಿ, ಗುಡಿಕ ಅಥವಾ ಗುಡಕ ಶಬ್ದಗಳು ಬಹುವಚನ ಸಾಧಕಗಳು. ಉದಾ. ಲೋಕ=ಮನುಷ್ಯ; ಲೋಕಗುಡಿಕ, ಲೋಕಗುಡಕ=ಮನುಷ್ಯರು. ಹಾಗೆಯೇ ಮನೆ, ಎ ಮುಂತಾದ ಪ್ರತ್ಯಯಗಳನ್ನು ಸೇರಿಸಿಯೂ ಲೋಕಮನೆ, ಲೋಕೆ ಮುಂತಾದ ಬಹುವಚನ ರೂಪಗಳನ್ನು ಪಡೆಯಬಹುದು. ಒರಿಯ ವ್ಯಾಕರಣದಲ್ಲಿ ಲಿಂಗ ವಿವಕ್ಷೆಯಿಲ್ಲ. ನೈಸರ್ಗಿಕ ಲಿಂಗ ವ್ಯವಸ್ಥೆಯ ಆಧಾರದ ಮೇಲೆ ಪುಲ್ಲಿಂಗ ಶಬ್ದಗಳಿಂದ ಸ್ತ್ರೀಲಿಂಗ ರೂಪಗಳನ್ನು ಸುಲಭವಾಗಿ ಸಾಧಿಸಬಹುದು. ನೈಸರ್ಗಿಕ ಲಿಂಗಭೇದಕ್ಕನುಸಾರವಾಗಿ ಸಜೀವ ವಾಚಕ ಶಬ್ದಗಳು ಸ್ತ್ರೀಲಿಂಗ ಪುಲ್ಲಿಂಗಗಳೆಂದು ವಿಭಾಗಿಸಲ್ಪಟ್ಟಿವೆ. ಪುಲ್ಲಿಂಗ ಶಬ್ದದಿಂದ ಸ್ತ್ರೀಲಿಂಗ ರೂಪ ಪಡೆಯಲು ಹಲವು ವಿಧಾನಗಳಿವೆ. ಗಂಡು ಮತ್ತು ಹೆಣ್ಣು ಶಬ್ದಗಳನ್ನು ಆ ಶಬ್ದದ ಮುಂದೆ ಜೋಡಿಸುವುದು: ಒಂಡಿರಾ ಛೇಟಿ=ಹೋತ, ಮಾಯಿ ಛೇಟಿ=ಆಡು; ಅಥವಾ ಸ್ತ್ರೀಲಿಂಗ ವಾಚಕವಾದ ಪ್ರತ್ಯೇಕ ಶಬ್ದವೊಂದನ್ನು ಬಳಸುವುದುಂಟು. ಕಾಕ=ಚಿಕ್ಕಪ್ಪ, ಖುಡಿ=ಚಿಕ್ಕಮ್ಮ ಇತ್ಯಾದಿ. ಸಾಮಾನ್ಯವಾಗಿ ಬರುವ ಸ್ತ್ರೀಲಿಂಗ ಪ್ರತ್ಯಯಗಳೆಂದರೆ ಇ, ಅಣಿ ಮತ್ತು ಉಣಿ. ಬುಢಾ=ಮುದುಕ, ಬುಢೀ=ಮುದುಕಿ, ಬಾಯ=ಹುಚ್ಚ, ಬಾಯಾಣಿ=ಹುಚ್ಚಿ, ಬಾಘೊ=ಹುಲಿ, ಬಾಘುಣಿ=ಹೆಣ್ಣು ಹುಲಿ-ಇತ್ಯಾದಿ. ಒರಿಯದಲ್ಲಿ ಐದು ವಿಭಕ್ತಿಗಳಿವೆ. ಈ ವಿಭಕ್ತಿಗಳು ಪ್ರತ್ಯಯರೂಪದಲ್ಲಿರದೆ ಪರಸರ್ಗ ರೂಪದಲ್ಲಿವೆ. ದ್ವಿತೀಯ ಮತ್ತು ಚತುರ್ಥೀ ವಿಭಕ್ತಿಗಳಿಗೆ ಕು ಎನ್ನುವ ಒಂದೇ ರೂಪವಿದೆ. ಕ್ರಿಯಾಪದಗಳಲ್ಲಿ ಮೂರು ಕಾಲಭೇದಗಳಿವೆ. ವರ್ತಮಾನ, ಭೂತ, ಭವಿಷ್ಯದ್ ರೂಪಗಳು ಒಚ್ಛ್‌, ಲ ಮತ್ತು ಬ ಎನ್ನುವ ಪ್ರತ್ಯಯಗಳಿಂದ ಸಿದ್ಧಿಸುತ್ತವೆ. ಖಾವುಚ್ಛಿ=ತಿನ್ನುತ್ತಾನೆ, ಖಾಯಿಲಾ=ತಿಂದನು, ಖಾಯಿಬೊ=ತಿನ್ನುವನು-ಇತ್ಯಾದಿ. ಗ್ರಿಯರ್ಸನ್ನನ ಅಭಿಪ್ರಾಯದಂತೆ ಒರಿಯದ ಕ್ರಿಯಾಪದ ರೂಪಗಳು ತುಂಬ ಸರಳವಾಗಿಯೂ ವ್ಯವಸ್ಥಿತವಾಗಿಯೂ ಇವೆ. ಕಾಲಭೇದಗಳು ಬಹಳ ಇದ್ದರೂ ಅವು ತರ್ಕಬದ್ಧವಾಗಿದ್ದು ಅವುಗಳಲ್ಲಿ ಅಡಗಿರುವ ವ್ಯವಸ್ಥೆ ಬೇರೆ ಬೇರೆ ಕೃದಂತ ನಾಮಗಳಲ್ಲಿಯೂ ಕಂಡುಬರುತ್ತದೆ.

ಸಾಹಿತ್ಯ[ಬದಲಾಯಿಸಿ]

ಸಾಹಿತ್ಯಭಾಷೆಯಾಗಿ ಒರಿಯ ಎಷ್ಟು ಸಮೃದ್ಧವಾಗಿ ಬೆಳೆದಿದೆಯೆನ್ನುವುದನ್ನು ಸೂಕ್ಷ್ಮವಾಗಿ ತೋರಿಸುವ ಸಲುವಾಗಿ ಮಾತ್ರ ಇಲ್ಲಿ ಸಾಹಿತ್ಯ ಭಾಗವನ್ನು ಸಂಗ್ರಹವಾಗಿ ಕೊಟ್ಟಿದೆ. ವಿವರಗಳಿಗೆ (ನೋಡಿ- ಒರಿಯಾ ಸಾಹಿತ್ಯ).

ಒರಿಯ ಭಾಷೆಯ ಸಾಹಿತ್ಯ ತುಂಬ ಸಮೃದ್ಧವಾಗಿದೆ. ಅದು ಸಾಮಾನ್ಯ ಜನತೆಯ ಸಾಹಿತ್ಯ. ಈ ರಾಜ್ಯದಲ್ಲಿ ನೆಲೆನಿಂತ ಆಂಧ್ರರು, ಮರಾಠರು, ಬಂಗಾಳಿಗಳು, ಮುಸ್ಲಿಮರು, ಆದಿವಾಸಿಗಳು-ಎಲ್ಲರೂ ಇದಕ್ಕೆ ತಮ್ಮ ಕಾಣಿಕೆಗಳನ್ನರ್ಪಿಸಿದ್ದಾರೆ. ಜಗನ್ನಾಥ ದೇವರನ್ನು ವರ್ಣಿಸಿದ ಸಾಲಬೆಗ ಎನ್ನುವ ಮುಸ್ಲಿಂ ಕವಿ, ಮಧ್ಯಕಾಲೀನ ವೈಷ್ಣವ ಸಾಹಿತ್ಯವನ್ನು ಬೆಳೆಸಿದ ಚೈತನ್ಯ ಮಹರ್ಷಿಯ ಶಿಷ್ಯರಾದ ಬಂಗಾಳಿ ವೈಷ್ಣವರು ಜನತೆಯ ನಾಲಗೆಯಲ್ಲಿ ನಲಿದಾಡುವಂಥ ಸಂಗೀತ ರೂಪಕಗಳನ್ನು ರಚಿಸಿದ ಕುರುಡನಾದ ಖೊಂಡಕವಿ-ಇವರೆಲ್ಲ ಈ ಸಾಹಿತ್ಯಕ್ಕೆ ಅಪುರ್ವವಾದ ಕಾಣಿಕೆಯನ್ನು ಸಲ್ಲಿಸಿದ್ದಾರೆ. ರಾಧಾನಾಥ ರೇ, ಆನಂದಶಂಕರ ರೇ ಮುಂತಾದ ಪ್ರತಿಭಾವಂತ ಬಂಗಾಳಿ ಕವಿಗಳು ಒರಿಯದಲ್ಲಿ ಗ್ರಂಥಗಳನ್ನು ರಚಿಸಿದ್ದಾರೆ. ಶತಮಾನಗಳುರುಳಿದಂತೆ, ರಾಜವಂಶಗಳು ಬದಲಾದಾಗ ಧಾರ್ಮಿಕ ವಿಶ್ವಾಸಗಳು ಬದಲಾದಂತೆ, ಸಾಹಿತ್ಯ ಸ್ವರೂಪವೂ ಮಾರ್ಪಾಟಾದುದು ಕಂಡುಬರುತ್ತದೆ. ಮೊದಲು ಜೈನ್, ಆಮೇಲೆ ಬೌದ್ಧ, ತರುವಾಯ ಶೈವ ಮತ್ತು ಶಾಕ್ತಮತಗಳು ಪ್ರಭಾವಶಾಲಿಯಾಗಿದ್ದುವು. ಆಮೇಲೆ ಜನತೆಯ ಮೇಲೆ ತೀವ್ರ ಪರಿಣಾಮವನ್ನುಂಟುಮಾಡಿ ಅವರ ಮನಸ್ಸಿನಲ್ಲಿ ಬೇರೂರಿನಿಂತ ಧಾರ್ಮಿಕ ಸಂಪ್ರದಾಯವೆಂದರೆ ರಾಮಭಕ್ತಿ ಮತ್ತು ಕೃಷ್ಣಭಕ್ತಿ ಸಂಪ್ರದಾಯ. ಒರಿಯ ಸಾಹಿತ್ಯ ಇದರಿಂದ ತುಂಬ ಸಮೃದ್ಧವಾಗಿದೆ. ಒರಿಯದಲ್ಲಿ ಕಡಿಮೆಯೆಂದರೆ ಮೂವತ್ತು ರಾಮಾಯಣಗಳೂ ನಾಲ್ಕೈದು ಮಹಾಭಾರತಗಳೂ ಇವೆ. ಎಲ್ಲ ಪುರಾಣಗಳೂ ಇವೆ. ಮಧ್ಯಕಾಲದ ಅಲಂಕಾರಶಾಸ್ತ್ರಸಾಹಿತ್ಯವೂ ಸಾಕಷ್ಟು ಸಮೃದ್ದವಾಗಿದೆ. ಪುರಾಣಗ್ರಂಥಗಳು ತಮ್ಮ ಕಥಾಪ್ರೌಢಿಮೆಯಿಂದಲೂ ಅಲಂಕಾರಗ್ರಂಥಗಳು ತಮ್ಮ ಭಾಷೆ, ಭಾವ ಮತ್ತು ಶಬ್ದಾರ್ಥಸೌಂದರ್ಯದಿಂದಲೂ ಜನರ ಮನಸ್ಸನ್ನು ಸೂರೆಗೊಂಡಿವೆ. ಜನತೆಯ ಹೃದಯವನ್ನು ಆಕರ್ಷಿಸುವುದರಲ್ಲಿ ಪ್ರಾಚೀನ ಸಾಹಿತ್ಯದಷ್ಟು ಆಧುನಿಕ ಸಾಹಿತ್ಯ ಸಫಲವಾಗಿಲ್ಲ ಎಂದು ಹೇಳಬಹುದು. ಆದರೂ ಭಾಷೆ ಮತ್ತು ಕಲ್ಪನೆಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಒರಿಯ ಸಾಹಿತ್ಯ ತನ್ನ ಆಧುನಿಕ ಬರೆವಣಿಗೆಗಳಲ್ಲಿ ಪರಿಪಕ್ವತೆಯನ್ನು ಹೊಂದಿದೆ. ಇದರ ಕೆಲವು ಅತ್ಯುತ್ತಮ ಗ್ರಂಥಗಳು ಭಾರತದ ಇತರ ಭಾಷೆಗಳಲ್ಲಿನ ಅತ್ಯುತ್ತಮ ಗ್ರಂಥಗಳ ಸಾಲಿನಲ್ಲಿ ನಿಲ್ಲಬಲ್ಲವಾಗಿವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಒಡಿಯಾ&oldid=1174092" ಇಂದ ಪಡೆಯಲ್ಪಟ್ಟಿದೆ