ಒಡಿಕತ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಡಿಕತ್ತಿಯು ಕೊಡವ ಪುರುಷರು ತಮ್ಮ ಸಾಂಪ್ರದಾಯಕ ಉಡುಗೆಯಲ್ಲಿ ತೊಡುವ ಒಂದು ಆಯುಧ. ಉಡಿಯಲ್ಲಿ ಧರಿಸುವ ಕತ್ತಿಯಾದ್ದರಿಂದ ಉಡಿಕತ್ತಿಯೆಂಬುದು ಒಡಿಕತ್ತಿಯಾಗಿರಬಹುದು. ಹೊಡೆಯಲು ಬಳಸುವ ಹೊಡಿಕತ್ತಿಯೆನ್ನುವದು ಒಡಿಕತ್ತಿಯಾಗಿರಬಹುದು.


ಒಡಿಕತ್ತಿಯು ಸುಮಾರು ಅರುವತ್ತು ಸೆಂಟಿಮೀಟರಿನಷ್ಟು ಉದ್ದವಿರುವ ಬಲವಾದ ಕತ್ತಿ. ಇದರ ಅಲಗು ಹಿಡಿಕೆಯ ಬಳಿ ಸುಮಾರು ಮೂರು ಸೆಂಟಿಮೀಟರಿನಷ್ಟು ಅಗಲವಾಗಿದ್ದು, ತುದಿಯ ಬಳಿ ಸುಮಾರು ಹತ್ತು ಸೆಂಟಿಮೀಟರಿನಷ್ಟು ಅಗಲವಾಗಿದೆ. ತುದಿ ಚೂಪಾಗಿದೆ. ಅಲಗಿನ ಬದಿ ನೇರವಾಗಿದ್ದು ಚೂಪಾಗಿದೆ; ಮತ್ತು ಹಿಂಬದಿ ಬಾಗಿದೆ. ನೇಪಾಳೀ ಗೂರ್ಕರ ಕತ್ತಿಯೂ ಹೆಚ್ಚುಕಡಿಮೆ ಇದೇ ರೀತಿಯಲ್ಲಿದೆ.


ಒಡಿಕತ್ತಿಯನ್ನು ಧರಿಸಲು ಒಂದು ವಿಶೇಷವಾದ ಒರೆ ಇದೆ. ಉಕ್ಕಿನಿಂದ ಮಾಡಲಾಗಿರುವ ಇದಕ್ಕೆ ತೊಡಂಗ್ ಎನ್ನುತ್ತಾರೆ. ಚೇಲೆಯ ಮೇಲಿನಿಂದ ಸೊಂಟದ ಸುತ್ತಲೂ ಸರಪಳಿಯಿಂದ ಕಟ್ಟಿ, ಹಿಂಭಾಗದಲ್ಲಿ ಒಡಿಕತ್ತಿಯನ್ನು ಸಿಕ್ಕಿಸುವಂತಿದೆ. ಖಡ್ಗ, ಪೀಚೆಕತ್ತಿ, ಮುಂತಾದವುಗಳಂತೆ ತೊಡಂಗಿನಲ್ಲಿ ಇರಿಸಿದ ಕತ್ತಿಯು ಒರೆಯೊಳಗೆ ಆವೃತವಾಗಿರುವದಿಲ್ಲ; ಬದಲಿಗೆ ಸಂಪೂರ್ಣವಾಗಿ ತೆರೆದುಕೊಂಡಿರುತ್ತದೆ.


ಕ್ಷತ್ರಿಯರಾದ ಕೊಡವರು ಹಿಂದೆ ಯುದ್ಧಗಳಲ್ಲಿ ಭಾಗವಹಿಸುವಾಗ ಒಡಿಕತ್ತಿಯನ್ನು ಹಿಂದಿನಿಂದ ಸೆಳೆದು ಬೀಸಿ ಹೊಡೆಯುತ್ತಿದ್ದರು. ಈಗ ಇದು ಆಯುಧಕ್ಕಿಂತ ಹೆಚ್ಚಾಗಿ ಆಭರಣವಾಗಿದೆ. ಹಾಗಿದ್ದರೂ, ಪೀಚೆಕತ್ತಿಯಂತೆ ಸಾಂಪ್ರದಾಯಕ ಉಡುಪಿನಲ್ಲಿರುವ ಎಲ್ಲ ಕೊಡವರೂ ಒಡಿಕತ್ತಿಯನ್ನು ತೊಡುವದಿಲ್ಲ. ಮದುವಣಿಗನು ಮಾತ್ರ ತೊಟ್ಟಿರುತ್ತಾನೆ. ಇದನ್ನು ಹೊರತುಪಡಿಸಿದರೆ, ಮದುವೆಯಲ್ಲಿ ‘ಬಾಳೆ ಬಿರುದ’ನ್ನು ಒಪ್ಪಿಸುವ ಸಂದರ್ಭದಲ್ಲಿ ನಿಲ್ಲಿಸಿರುವ ಬಾಳೆಯ ದಿಂಡುಗಳನ್ನು ಕಡಿಯುವದಕ್ಕೆ ಈ ಕತ್ತಿಯನ್ನು ಉಪಯೋಗಿಸುತ್ತಾರೆ. ಇದಲ್ಲದೆ ಕೊಡವರ ಆಯುಧ ಪೂಜೆಯಾದ ಕೈಲ್‌ಪೊಳ್ದ್ ಹಬ್ಬದಲ್ಲಿ ಇದು ಪ್ರಮುಖ ಸ್ಥಾನವನ್ನು ಅಲಂಕರಿಸಿ ಪೂಜಿಸಲ್ಪಡುತ್ತದೆ.