ಐಸಿಸಿ ಕ್ರಿಕೆಟ್‌ ವಿಶ್ವ ಕಪ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ICC Cricket World Cup
ನಿರ್ವಾಹಣೆInternational Cricket Council (ICC)
ಫಾರ್ಮ್ಯಾಟ್One Day International
ಮೊದಲ ಪಂದ್ಯಾವಳಿ1975 (ಇಂಗ್ಲೆಂಡ್)
ಕೊನೆಯ ಪಂದ್ಯಾವಳಿ2015 (Australia, New Zealand)
ಮುಂದಿನ ಪಂದ್ಯಾವಳಿ2019 (ಇಂಗ್ಲೆಂಡ್ and Wales)
ಟೂರ್ನಮೆಂಟ್ ರೂಪ↓various
ತಂಡಗಳ ಸಂಖ್ಯೆ20 (all tournaments)
14 (most recent)
10 (next)
ಪ್ರಸ್ತುತ ಚಾಂಪಿಯನ್ ಆಸ್ಟ್ರೇಲಿಯಾ (5th title)
ಅತ್ಯಂತ ಯಶಸ್ವಿ ಆಸ್ಟ್ರೇಲಿಯಾ (5 titles)
ಹೆಚ್ಚಿನ ರನ್ಗಳುಭಾರತ Sachin Tendulkar (2,278)
ಹೆಚ್ಚಿನ ವಿಕೆಟ್‌ಗಳುಆಸ್ಟ್ರೇಲಿಯಾ Glenn McGrath (71)

ಐಸಿಸಿ ಕ್ರಿಕೆಟ್‌ ವಿಶ್ವ ಕಪ್‌ ಪುರುಷರ ಅತಿ ಪ್ರತಿಷ್ಠಿತ ಏಕದಿನ ಅಂತರರಾಷ್ಟ್ರೀಯ (ODI) ಕ್ರಿಕೆಟ್‌ ಪಂದ್ಯಾವಳಿಯಾಗಿದೆ. ಈ ಕ್ರೀಡೆಯ ನಿರ್ವಹಣಾ ಮಂಡಳಿಯಾದ ಅಂತರರಾಷ್ಟ್ರೀಯ ಕ್ರಿಕೆಟ್‌ ಪರಿಷತ್‌ (ಐಸಿಸಿ) ಈ ಕ್ರೀಡೆಯನ್ನು ಆಯೋಜಿಸುತ್ತದೆ. ಪ್ರಾಥಮಿಕ ಅರ್ಹತಾ ಸುತ್ತಿನ ಪಂದ್ಯಗಳು ನಡೆದ ನಂತರ, ಅರ್ಹತೆ ಗಳಿಸಿದ ತಂಡಗಳು, ನಾಲ್ಕು ವರ್ಷಗಳಲ್ಲೊಮ್ಮೆ ನಡೆಯುವ ಈ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತವೆ. ಅತಿಹೆಚ್ಚು ವೀಕ್ಷಿತ ಕ್ರೀಡಾ ಪಂದ್ಯಾವಳಿಗಳ ಪಟ್ಟಿಯಲ್ಲಿ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ನಾಲ್ಕನೆಯ ಸ್ಥಾನದಲ್ಲಿದೆ.[೧][೨][೨] ಐಸಿಸಿ ಮೂಲಗಳ ಪ್ರಕಾರ, ಇದು ಅತ್ಯಂತ ಮಹತ್ವವಾದ ಪಂದ್ಯಾವಳಿ ಹಾಗೂ ಕ್ರಿಕೆಟ್‌ ಆಟದಲ್ಲಿ ಅತಿಪ್ರಮುಖ ಮೈಲಿಗಲ್ಲು.[೩][೪] ಮೊಟ್ಟಮೊದಲ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯನ್ನು ೧೯೭೫ರಲ್ಲಿ ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಯಿತು. ಮಹಿಳೆಯರ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯನ್ನು ನಾಲ್ಕು ವರ್ಷಗಳಲ್ಲೊಮ್ಮೆ ೧೯೭೩ರಿಂದಲೂ ಆಯೋಜಿಸಲಾಗುತ್ತದೆ.

ಕ್ರಿಕೆಟ್‌ ವಿಶ್ವ ಕಪ್‌ ಮುಖ್ಯ ಪಂದ್ಯಾವಳಿಯಲ್ಲಿ ಎಲ್ಲಾ ಟೆಸ್ಟ್‌ ಹಾಗೂ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡುವ ರಾಷ್ಟ್ರೀಯ ತಂಡಗಳು, ಜೊತೆಗೆ, ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಾವಳಿಗಳಲ್ಲಿ ಅರ್ಹತೆ ಪಡೆದಿರುವ ರಾಷ್ಟ್ರೀಯ ತಂಡಗಳೂ ಸಹ ಸ್ಪರ್ಧಿಸುತ್ತವೆ. ಪಂದ್ಯಾವಳಿಯಲ್ಲಿ ಜಯಗಳಿಸಿದ ಐದು ರಾಷ್ಟ್ರೀಯ ತಂಡಗಳಲ್ಲಿ ಆಸ್ಟ್ರೇಲಿಯಾ ಅತಿ-ಯಶಸ್ವೀ ತಂಡವಾಗಿದೆ. ಇದು ನಾಲ್ಕು ಬಾರಿ ವಿಶ್ವಕಪ್‌ ಗೆದ್ದಿದೆ. ವೆಸ್ಟ್‌ ಇಂಡೀಸ್‌ ಹಾಗೂ ಭಾರತ ಎರಡು ಬಾರಿ, ಪಾಕಿಸ್ತಾನ ಮತ್ತು ಶ್ರೀಲಂಕಾ ತಲಾ ಒಂದು ಬಾರಿ ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಜಯಗಳಿಸಿವೆ.

ಕಳೆದ ೨೦೦೭ರ ವಿಶ್ವಕಪ್‌ ಪಂದ್ಯಾವಳಿಯು ವೆಸ್ಟ್‌ ಇಂಡೀಸ್‌ನಲ್ಲಿ, ಮಾರ್ಚ್‌ ೧೩ರಿಂದ ಏಪ್ರಿಲ್‌ ೨೮ರ ವರೆಗೆ ಆಯೋಜಿತವಾಯಿತು. ಈ ಪಂದ್ಯಾವಳಿಯಲ್ಲಿ ಹದಿನಾರು ತಂಡಗಳಿದ್ದವು. ಅರಂಭದಲ್ಲಿ ರೌಂಡ್‌-ರಾಬಿನ್‌ ಹಂತ, ನಂತರ 'ಸೂಪರ್‌ ೮'ಸೆಮಿ-ಫೈನಲ್ಸ್ ಹಾಗೂ ಫೈನಲ್‌ ಪಂದ್ಯ ನಡೆದವು. ‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ತಂಡವನ್ನು ಸೋಲಿಸಿ, ಪಂದ್ಯಾವಳಿ ಪ್ರಶಸ್ತಿ ತನ್ನಲ್ಲಿಯೇ ಉಳಿಸಿಕೊಂಡಿತು.

ವಿಶ್ವಕಪ್ ಕ್ರಿಕೆಟ್‌ ಪಂದ್ಯಾವಳಿ ೨೦೧೧ರ ‌ ಫೆಬ್ರವರಿ ೧೯ರಿಂದ ಏಪ್ರಿಲ್‌ ೨ರ ತನಕ ನಡೆಯಲಿದೆ. ಬಾಂಗ್ಲಾದೇಶ, ಭಾರತ ಹಾಗೂ ಶ್ರೀಲಂಕಾ ದೇಶಗಳಲ್ಲಿ ಈ ಪಂದ್ಯಾವಳಿ ಜಂಟಿಯಾಗಿ ಆಯೋಜಿತವಾಗಲಿದೆ. ಈ ಪಂದ್ಯಾವಳಿಯಲ್ಲಿ ೧೪ದೇಶಗಳು ಸ್ಪರ್ಧಿಸಲಿವೆ.

ಇತಿಹಾಸ[ಬದಲಾಯಿಸಿ]

ಮೊಟ್ಟಮೊದಲ ಕ್ರಿಕೆಟ್‌ ವಿಶ್ಚಕಪ್‌ ಪಂದ್ಯಾವಳಿಗೆ ಮುಂಚೆ[ಬದಲಾಯಿಸಿ]

ಮೊಟ್ಟಮೊದಲ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯವು, ೧೮೪೪ರ ಸೆಪ್ಟೆಂಬರ್‌ ೨೪ ಮತ್ತು ೨5ರಂದು ನ್ಯೂಯಾರ್ಕ್‌ನಲ್ಲಿ ಕೆನಡಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ನಡುವೆ ನಡೆಯಿತು. ಆದರೆ, ಮೊಟ್ಟಮೊದಲ ಟೆಸ್ಟ್‌ ಪಂದ್ಯವು ೧೮೭೭ರಲ್ಲಿ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳ ನಡುವೆ ನಡೆಯಿತು. ನಂತರ, ಇವೆರಡೂ ತಂಡಗಳು ಮುಂಬರುವ ವರ್ಷಗಳಲ್ಲಿ ಆಷಸ್‌ಗಾಗಿ ಸ್ಪರ್ಧೆ ನಡೆಸಿದವು. ದಕ್ಷಿಣ ಆಫ್ರಿಕಾ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಅಡುವ ರಾಷ್ಟ್ರಗಳ ಪಟ್ಟಿಗೆ ೧೮೮೯ರಲ್ಲಿ ಸೇರಿತು.[೫] ಸದಸ್ಯ,ಪ್ರತಿನಿಧಿಸಲ್ಪಡುವ ಕ್ರಿಕೆಟ್‌ ತಂಡಗಳು ಪರಸ್ಪರ ಪ್ರವಾಸ ನಡೆಸಿ, ಟೆಸ್ಟ್‌ ಕ್ರಿಕೆಟ್‌ ಫಂದ್ಯಗಳನ್ನಾಡಿದವು. ಇದರ ಪರಿಣಾಮವಾಗಿ, ಉಭಯಪಕ್ಷೀಯ ಕ್ರಿಕೆಟ್‌ ಟೆಸ್ಟ್‌ ಸರಣಿಗಳು ಆರಂಭವಾದವು. ಪ್ಯಾರಿಸ್‌ ಒಲಿಂಪಿಕ್‌ ಕ್ರೀಡಾಕೂಟ ೧೯೦೦ರ ಸಂದರ್ಭದಲ್ಲಿ ಕ್ರಿಕೆಟ್‌ನ್ನೂ ಸಹ ಒಂದು ಒಲಿಂಪಿಕ್‌ ಪಂದ್ಯವನ್ನಾಗಿ ಸೇರಿಸಿಕೊಳ್ಳಲಾಯಿತು. ಫೈನಲ್‌ ಪಂದ್ಯದಲ್ಲಿ ಗ್ರೇಟ್‌ ಬ್ರಿಟನ್‌ ಫ್ರ್ಯಾನ್ಸ್‌ ತಂಡವನ್ನು ಸೋಲಿಸಿ ಚಿನ್ನದ ಪದಕ ಗಳಿಸಿತು.[೬] ಬೇಸಿಗೆಯ ಒಲಿಂಪಿಕ್ಸ್‌ ಒಂದರಲ್ಲಿ ಕ್ರಿಕೆಟ್‌, ಒಲಿಂಪಿಕ್‌ ಪಂದ್ಯಾವಳಿಯ ಅಂಗವಾಗಿದ್ದು ಇದೇ ಏಕೈಕ ಬಾರಿ.

ತ್ರಿಕೋನಿಯ ಟೆಸ್ಟ್‌ ಕ್ರಿಕೆಟ್‌ ಪಂದ್ಯಾವಳಿ ೧೯೧೨ರ ಅವಧಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊಟ್ಟಮೊದಲ ಬಹುಪಕ್ಷೀಯ ಪಂದ್ಯಾವಳಿಯಾಗಿತ್ತು. ಆ ಸಮಯದಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡುತ್ತಿದ್ದ ಎಲ್ಲಾ ಮೂರೂ ರಾಷ್ಟ್ರೀಯ ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಭಾಗವಹಿಸಿದವು. ಈ ಪಂದ್ಯಾವಳಿಯು ಯಶಸ್ಸು ಕಾಣಲಿಲ್ಲ. ಆ ಬೇಸಿಗೆಯಲ್ಲಿ ಬಹಳಷ್ಟು ಆರ್ದ್ರತೆಯಿತ್ತು. ಬಹಳ ತೇವವಾಗಿದ್ದ, ಹೊದಿಕೆಯಿಂದ ಮುಚ್ಚಿರದ ಪಿಚ್‌ಗಳ ಮೇಲೆ ಆಡುವುದು ಕಷ್ಟಸಾಧ್ಯವಾಗಿತ್ತು. 'ವಿಪರೀತ ಕ್ರಿಕೆಟ್'‌ ಎಂಬ ಕಾರಣವೊಡ್ಡಿದ ಪ್ರೇಕ್ಷಕರು, ಈ ಪಂದ್ಯಾವಳಿ ವೀಕ್ಷಿಸಲು ಯಾವುದೇ ಆಸಕ್ತಿ ತೋರಲಿಲ್ಲ.[೭] ಅನಂತರದ ವರ್ಷಗಳಲ್ಲಿ, ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ ಪಂದ್ಯವನ್ನು ಸಾಮಾನ್ಯವಾಗಿ ದ್ವಿಪಕ್ಷೀಯ ಸರಣಿಯಾಗಿ ಆಯೋಜಿಸಲಾಗಿತ್ತು.ಹೀಗೆ ೧೯೯೦ರಲ್ಲಿ ಚತುಷ್ಕೋನೀಯ ಏಷ್ಯನ್‌ ಟೆಸ್ಟ್‌ ಚಾಂಪಿಯನ್ಷಿಪ್‌ ಪಂದ್ಯ ಆಯೋಜಿತವಾಗುವವರೆಗೂ, ಬಹುಪಕ್ಷೀಯ ಟೆಸ್ಟ್‌ ಪಂದ್ಯಾವಳಿ ಪುನಃ ಆಯೋಜಿತವಾಗಿರಲಿಲ್ಲ.

ಕಾಲಾನಂತರದಿಂದ, ಟೆಸ್ಟ್‌ ಕ್ರಿಕೆಟ್‌ ಆಡುವ ರಾಷ್ಟ್ರಗಳ ಸಂಖ್ಯೆಯು ಹಂತ-ಹಂತವಾಗಿ ಹೆಚ್ಚುತ್ತಾ ಹೋಯಿತು. ಆಗ ೧೯೨೮ರಲ್ಲಿ ವೆಸ್ಟ್‌ ಇಂಡೀಸ್‌, ನಂತರ ೧೯೩೦ರಲ್ಲಿ ನ್ಯೂಜಿಲೆಂಡ್‌,ಅದಲ್ಲದೇ ೧೯೩೨ರಲ್ಲಿ ಭಾರತ ಹಾಗೂ ೧೯೫೨ರಲ್ಲಿ ಪಾಕಿಸ್ತಾನ ಟೆಸ್ಟ್‌ ಕ್ರಿಕೆಟ್‌ ಆಡುವ ರಾಷ್ಟ್ರಗಳ ಪಟ್ಟಿಗೆ ಸೇರಿದವು. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ಮೂರು, ನಾಲ್ಕು ಅಥವಾ ಐದು ದಿನಗಳ ಕಾಲ ನಡೆಯುವ ದ್ವಿಪಕ್ಷೀಯ ಟೆಸ್ಟ್‌ ಪಂದ್ಯಗಳಾಗಿಯೇ ಮುಂದುವರೆದವು.

ಆದರೆ ೧೯೬೦ರ ದಶಕದ ಆರಂಭದಲ್ಲಿ, ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ ತಂಡಗಳು, ಕೇವಲ ಒಂದು ದಿನ ನಡೆದು ಸಂಪೂರ್ಣಗೊಳ್ಳುವಂತಹ, ಸಂಕ್ಷಿಪ್ತ ಆವೃತ್ತಿಯ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಿದವು. ಮೊಟ್ಟಮೊದಲ ಬಾರಿಗೆ ೧೯೬೨ರಲ್ಲಿ ನಾಲ್ಕು ಪಂದ್ಯಗಳು ಭಾಗವಹಿಸಿದ ನಾಕೌಟ್‌ ಪಂದ್ಯಾವಳಿ ಆಯೋಜಿಸಲಾಗಿತ್ತು. ಇದಕ್ಕೆ ಮಿಡ್ಲೆಂಡ್ಸ್‌ ನಾಕೌಟ್‌ ಕಪ್‌ [೮] ಎನ್ನಲಾಗುತ್ತಿತ್ತು. ಹೀಗೆ ೧೯೬೩ರಲ್ಲಿ ಜಿಲೆಟ್‌ ಕಪ್‌ ಪಂದ್ಯಾವಳಿಯೊಂದಿಗೆ ಆರಂಭಗೊಂಡ ಏಕದಿನ ಕ್ರಿಕೆಟ್‌ ಪಂದ್ಯಾವಳಿಯು, ಇಂಗ್ಲೆಂಡ್‌ನಲ್ಲಿ ಜನಪ್ರಿಯತೆ ಗಳಿಸಲಾರಂಭಿಸಿತು. ರಾಷ್ಟ್ರೀಯ ಮಟ್ಟದ ಸಂಡೇ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯು ೧೯೬೯ರಲ್ಲಿ ರಚನೆಯಾಯಿತು. ಮೊಟ್ಟಮೊದಲ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯವು ೧೯೭೧ರಲ್ಲಿ ನಡೆಯಿತು. ಭಾರಿ ಮಳೆಯಿಂದಾಗಿ, ಆ ವರ್ಷ ಮೆಲ್ಬೊರ್ನ್‌ನಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳ ನಡುವಣ ಟೆಸ್ಟ್‌ ಪಂದ್ಯವು ರದ್ದಾಯಿತು. ಲಭ್ಯವಿದ್ದ ಸಮಯದಲ್ಲಿ, ಅಂದರೆ ರದ್ದಾದ ಟೆಸ್ಟ್‌ ಪಂದ್ಯದ ಐದನೆಯ ದಿನ, ಟಿಕೆಟ್ ಕೊಂಡಿದ್ದ ಪ್ರೇಕ್ಷಕರಿಗೆ ನಷ್ಟವಾಗದಿರಲೆಂದು ಈ ಏಕದಿನ ಪಂದ್ಯ ಆಡಲಾಯಿತು. ಇದು ನಲವತ್ತು ಓವರ್‌ಗಳ ಪಂದ್ಯವಾಗಿದ್ದು, ಪ್ರತಿ ಓವರ್‌ಗೆ ಎಂಟು ಚೆಂಡೆಸೆತಗಳಿದ್ದವು.[೯]

ಇಂಗ್ಲೆಂಡ್‌ ಹಾಗೂ ವಿಶ್ವದ ಇತರೆ ಭಾಗಗಳಲ್ಲಿ ದೇಶೀಯ ಏಕದಿನ ಕ್ರಿಕೆಟ್‌ ಪಂದ್ಯಾವಳಿಗಳು, ಹಾಗೂ ಆರಂಭಿಕ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಯಶಸ್ಸು ಮತ್ತು ಜನಪ್ರಿಯತೆಯನ್ನು ಗಮನಿಸಿದ ಐಸಿಸಿ, ಕ್ರಿಕೆಟ್‌ ವಿಶ್ವ ಕಪ್‌ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಿತು.[೧೦]

ಪ್ರುಡೆಂಷಿಯಲ್‌ ವಿಶ್ವ ಕಪ್‌ ಪಂದ್ಯಾವಳಿಗಳು[ಬದಲಾಯಿಸಿ]

ಪ್ರುಡೆಂಷಿಯಲ್‌ ಕಪ್‌ ಟ್ರೊಫಿ

ಆರಂಭಿಕ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯನ್ನು ೧೯೭೫ರಲ್ಲಿ ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಯಿತು. ಆ ಕಾಲದಲ್ಲಿ ಈ ಭಾರಿ ಮಟ್ಟದ ಕ್ರಿಕೆಟ್‌ ಪಂದ್ಯಾವಳಿಯ ಆತಿಥ್ಯ ವಹಿಸಲು ಕೇವಲ ಇಂಗ್ಲೆಂಡ್‌ ಮಾತ್ರ ಸಮರ್ಥವಾಗಿತ್ತು. ‌ ಪಂದ್ಯಾವಳಿಯು ೧೯೭೫ರ ಜೂನ್‌ ೭ರಂದು ಆರಂಭವಾಯಿತು.[೧೧] ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯ ಮೊದಲ ಮೂರು ಆವೃತ್ತಿಗಳನ್ನು ಇಂಗ್ಲೆಂಡ್‌ನಲ್ಲಿ ನಡೆಸಲಾಯಿತು. ಇಂಗ್ಲೆಂಡ್‌ ಮೂಲದ ಪ್ರುಡೆಂಷಿಯಲ್ ಪಿಎಲ್‌ಸಿ ಉದ್ದಿಮೆಯು ಈ ಪಂದ್ಯಾವಳಿಯನ್ನು ಪ್ರಾಯೋಜಿಸಿದ ಕಾರಣ, ಈ ಪಂದ್ಯಾವಳಿಯನ್ನು ಅಧಿಕೃತವಾಗಿ ಪ್ರುಡೆಂಷಿಯಲ್‌ ಕಪ್‌ ಪಂದ್ಯಾವಳಿ ಎನ್ನಲಾಯಿತು. ಪ್ರತಿಯೊಂದು ಪಂದ್ಯದಲ್ಲಿ, ಪ್ರತಿ ತಂಡವು ೬೦ ಓವರ್‌ಗಳ ಸಮಯ ಆಡಬೇಕಿತ್ತು. ಪ್ರತಿ ಓವರ್‌ಗೆ ಆರು ಚೆಂಡೆಸೆತಗಳಿರುತ್ತಿದ್ದವು. ಹಗಲಿನ ಹೊತ್ತು, ಸಾಂಪ್ರದಾಯಿಕ ಕ್ರಿಕೆಟ್‌ ನ ಶ್ವೇತ ಸಮವಸ್ತ್ರ ಧರಿಸಿ, ಕೆಂಪು ಕ್ರಿಕೆಟ್‌ ಚೆಂಡು ಬಳಸಿ ಆಡುತ್ತಿದ್ದರು.[೧೨]

ಮೊದಲ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಸ್ಪರ್ಧಿಸಿದವು. (ಆ ಕಾಲದ ಎಲ್ಲಾ ಆರೂ ಟೆಸ್ಟ್‌ ಕ್ರಿಕೆಟ್‌ ರಾಷ್ಟ್ರಗಳಾದ) ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜೀಲೆಂಡ್‌, ಪಾಕಿಸ್ತಾನ, ಭಾರತ ಮತ್ತು ವೆಸ್ಟ್‌ ಇಂಡೀಸ್‌, ಜೊತೆಗೆ ಶ್ರೀಲಂಕಾ ಹಾಗೂ ಈಸ್ಟ್‌ ಆಫ್ರಿಕಾ ಎಂಬ ಸಂಯುಕ್ತ ತಂಡವೂ ಸ್ಪರ್ಧಿಸಿದವು.[೧೩] ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ನಡೆಯುತ್ತಿದ್ದ ಕಾರಣ, ಆ ರಾಷ್ಟ್ರವನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಕೈ ಬಿಡಲಾಗಿತ್ತು. ವೆಸ್ಟ್‌ ಇಂಡೀಸ್ ಲಂಡನ್‌ನ ಪ್ರತಿಷ್ಠಿತ ಲಾರ್ಡ್ಸ್‌ ಕ್ರಿಕೆಟ್‌ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಆಸ್ಟ್ರೇಲಿಯಾ ತಂಡವನ್ನು ೧೭ ರನ್‌ಗಳ ಅಂತರದಿಂದ ಸೋಲಿಸಿ ಪ್ರುಡೆಂಷಿಯಲ್‌ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿ ಗೆದ್ದುಕೊಂಡಿತು.[೧೩]

ಆಗ ೧೯೭೯ರ ವಿಶ್ವಕಪ್‌ ಪಂದ್ಯಾವಳಿಗೆ ಮುಂಚೆ, ಟೆಸ್ಟ್‌ ಕ್ರಿಕೆಟ್‌ ಪಂದ್ಯ ಆಡದ ರಾಷ್ಟ್ರಗಳನ್ನು ಆಯ್ಕೆ ಮಾಡಲು ಐಸಿಸಿ ಟ್ರೊಫಿ ಅರ್ಹತಾ ಪಂದ್ಯಾವಳಿ ನಡೆಸಲಾಯಿತು.[೧೪] ಈ ಪಂದ್ಯಾವಳಿಯಲ್ಲಿ ಶ್ರೀಲಂಕಾ ಮತ್ತು ಕೆನಡಾ ಮೊದಲೆರಡು ಸ್ಥಾನ ಗಳಿಸಿ ಐಸಿಸಿ ಕ್ರಿಕೆಟ್ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಅರ್ಹವಾದವು.[೧೫] ವೆಸ್ಟ್‌ ಇಂಡೀಸ್‌ ಸತತ ಎರಡನೆಯ ಬಾರಿ ವಿಶ್ವಕಪ್‌ ಗೆದ್ದಿತು. ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವನ್ನು ೯೨ ರನ್‌ಗಳ ಭಾರೀ ಅಂತರದಿಂದ ಸೋಲಿಸಿತು. ಈ ಪಂದ್ಯಾವಳಿಯನ್ನು ಚತುರ್ವಾಷಿಕವಾಗಿ ನಡೆಸುವುದೆಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಪರಿಷತ್‌ ವಿಶ್ವಕಪ್‌,ನಂತರ ನಡೆದ ಸಭೆಯೊಂದರಲ್ಲಿ ತನ್ನ ಸಹಮತ ಸೂಚಿಸಿತು.[೧೫]

ಇಂಗ್ಲೆಂಡ್‌ ೧೯೮೩ರಲ್ಲಿ ಸತತ ಮೂರನೆಯ ಬಾರಿ ವಿಶ್ಚಕಪ್‌ ಪಂದ್ಯಾವಳಿಯ ಆತಿಥ್ಯ ವಹಿಸಿತು. ಈ ವೇಳೆಗೆ, ಶ್ರೀಲಂಕಾ ಟೆಸ್ಟ್‌ ಪಂದ್ಯವಾಡುವ ಅರ್ಹತೆ ಸಂಪಾದಿಸಿತ್ತು. ಐಸಿಸಿ ಟ್ರೊಫಿ ಅರ್ಹತಾ ಪಂದ್ಯಾವಳಿಯಲ್ಲಿ ಜಯಗಳಿಸಿದ ಜಿಂಬಾಬ್ವೆ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಅರ್ಹವಾಯಿತು. ಮೊದಲ ಬಾರಿಗೆ, ಸ್ಟಂಪ್‌ಗಳಿಂದ 30 yards (27 m) ಗಜಗಳಷ್ಟು ದೂರದಲ್ಲಿ ಕ್ಷೇತ್ರರಕ್ಷಣಾ (ಫೀಲ್ಡಿಂಗ್‌) ವೃತ್ತವನ್ನು ಪರಿಚಯಿಸಲಾಯಿತು. ಎಲ್ಲಾ ಸಮಯಗಳಲ್ಲಿಯೂ, ಈ ವೃತ್ತದೊಳಗೆ ನಾಲ್ವರು ಫೀಲ್ಡರ್‌ಗಳು ನಿಂತಿರಲೇಬೇಕಾಗಿತ್ತು.[೧೬] ಪಂದ್ಯಾವಳಿ ಆರಂಭವಾಗುವ ಮುಂಚೆ, ವಿಶ್ವಕಪ್‌ ಗೆಲ್ಲಲು ಭಾರತ ತಂಡಕ್ಕೆ ೬೬-೧ರಲ್ಲಿ ಕೇವಲ ಒಂದೇ ಅವಕಾಶ ಎಂದು ಬಾಜಿ ಕಟ್ಟುವವರು ದಾವೆ ಹೂಡಿದ್ದರು. ಆದರೆ, ಭಾರತ ಫೈನಲ್‌ ಪ್ರವೇಶಿಸಿದ್ದಷ್ಟೇ ಅಲ್ಲ, ವೆಸ್ಟ್‌ ಇಂಡೀಸ್‌ ತಂಡವನ್ನು ೪೩ ರನ್‌ಗಳ ಅಂತರಲ್ಲಿ ಸೋಲಿಸಿ ಪ್ರುಡೆಂಷಿಯಲ್‌ ಕ್ರಿಕೆಟ್‌ ವಿಶ್ವಕಪ್‌ ತನ್ನದಾಗಿಸಿಕೊಂಡಿತು.[೧೦][೧೭]

೧೯೮೭–೧೯೯೬[ಬದಲಾಯಿಸಿ]

ಭಾರತದಲ್ಲಿ ಪ್ರತಿಷ್ಠಿತ ಉದ್ದಿಮೆಗಳಲ್ಲೊಂದಾದ ರಿಲಾಯನ್ಸ್‌ ಇಂಡಸ್ಟ್ರೀಸ್‌ ಪ್ರಾಯೋಜಿಸಿದ ಕಾರಣ, ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ಜಂಟಿ ಆತಿಥ್ಯದಲ್ಲಿ ನಡೆದ ೧೯೮೭ರ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯನ್ನು ರಿಲಾಯನ್ಸ್‌ ವಿಶ್ವಕಪ್‌ ಎಂದು ಮರುನಾಮಕರಣವಾಯಿತು. ಇಂಗ್ಲೆಂಡ್‌ ಗಡಿಯಾಚೆ ಕ್ರಿಕೆಟ್‌ ವಿಶ್ವಕಪ್‌ ನಡೆದದ್ದು ಇದೇ ಮೊದಲ ಬಾರಿ. ಇಂಗ್ಲೆಂಡ್‌ನ ಬೇಸಿಗೆಯ ಅವಧಿಗೆ ಹೋಲಿಸಿ, ಭಾರತೀಯ ಉಪಖಂಡದಲ್ಲಿ ಹಗಲಿನ ಸಮಯ ಕಡಿಮೆಯಿದ್ದ ಕಾರಣ, ೬೦ ಓವರ್‌ಗಳ ಪ್ರತಿ ಇನ್ನಿಂಗ್ಸ್‌ ಅವಧಿಯನ್ನು ೫೦ ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಇಂದಿಗೂ ಸಹ ಪ್ರತಿ ಇನ್ನಿಂಗ್ಸ್‌ಗೆ ೫೦ ಓವರ್‌ ನಿಗದಿಪಡಿಸಲಾಗಿದೆ.[೧೮] ಭಾರತದ ಕೋಲ್ಕತ್ತಾದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್‌ ತಂಡವನ್ನು ೭ ರನ್‌ಗಳಷ್ಟು ಕಡಿಮೆ ಅಂತರದಿಂದ ಸೋಲಿಸಿತು. ಕ್ರಿಕೆಟ್‌ ವಿಶ್ವಕಪ್ ಫೈನಲ್‌ ಇತಿಹಾಸದಲ್ಲಿ ಇದು ಅತಿ ಕಡಿಮೆಯ ಅಂತರವೆನಿಸಿದೆ. ‌[೧೯][೨೦]

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಜಂಟಿ ಆತಿಥ್ಯದಲ್ಲಿ ನಡೆದ ೧೯೯೨ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಹಲವು ಪರಿವರ್ತನೆಗಳಿದ್ದವು. ವಿವಿಧ ಬಣ್ಣಗಳ ತಂಡದ ಸಮವಸ್ತ್ರಗಳು, ಬಿಳಿಯ ಚೆಂಡುಗಳು, ಹಗಲು/ರಾತ್ರಿ (ಹೊನಲು-ಬೆಳಕಿನ) ಪಂದ್ಯಗಳು ಹಾಗೂ ಫೀಲ್ಡಿಂಗ್‌ ನಿರ್ಬಂಧನೆಗಳ ನಿಯಮಗಳಲ್ಲಿ ಬದಲಾವಣೆ ತರಲಾಯಿತು. ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸ್ಪರ್ಧಿಸಿತು. ಆ ಸಮಯ ಆ ರಾಷ್ಟ್ರದಲ್ಲಿ ವರ್ಣಭೇದ ನೀತಿಯನ್ನು ಬಹಿಷ್ಕರಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಬಹಿಷ್ಕಾರವನ್ನು ಹಿಂತೆಗೆಯಲಾಗಿತ್ತು.[೨೧]‌ ಪಂದ್ಯಾವಳಿಯ ಆರಂಭದಲ್ಲಿ ಕಳಪೆ ಆಟವಾಡುತ್ತಿದ್ದ ಪಾಕಿಸ್ತಾನ ತಂಡವು, ಆಸ್ಟ್ರೇಲಿಯಾದ ಮೆಲ್ಬೊರ್ನ್‌ ನಗರದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ೨೨ ರನ್‌ಗಳ ಅಂತರದಿಂದ ಸೋಲಿಸಿ ಬೆನ್ಸನ್‌ ಅಂಡ್‌ ಹೆಡ್ಜೆಸ್‌ ಕ್ರಿಕೆಟ್‌ ವಿಶ್ವಕಪ್‌ ಗೆದ್ದುಕೊಂಡಿತು.[೨೨]

ಆಗ ೧೯೯೬ರ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯನ್ನು ಎರಡನೆಯ ಬಾರಿಗೆ ಭಾರತೀಯ ಉಪಖಂಡದಲ್ಲಿ ನಡೆಸಲಾಯಿತು. ಈ ಬಾರಿ ಶ್ರೀಲಂಕಾ ಸಹ ಜಂಟಿ ಆತಿಥ್ಯ ವಹಿಸಿ, ಆರಂಭಿಕ ಹಂತದ ಕೆಲವು ಪಂದ್ಯಗಳನ್ನು ಆಯೋಜಿಸಿತ್ತು.[೨೩] ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ಭಾರತ ತಂಡವನ್ನು ಹಿಂದಿಕ್ಕಿ ಗೆಲುವಿನ ಹಾದಿಯತ್ತ ಧಾವಿಸುತ್ತಿತ್ತು.ಅಲ್ಲದೇ ೨೫೪ ರನ್‌ಗಳ ಗುರಿಯಟ್ಟಿದ್ದ ಅತಿಥೇಯ ಭಾರತ ತೀರಾ ಕಳಪೆ ಆಟ ಆಡಿ, ಕೇವಲ ೧೨೦ ರನ್‌ಗಳಿಗೆ ಎಂಟು ವಿಕೆಟ್‌ ಕಳೆದುಕೊಂಡಿತ್ತು. ಇಂತಹ ಅಧ್ವಾನ ಆಟ ನೋಡಿದ ಪ್ರೇಕ್ಷಕರು ಭಾರತೀಯ ತಂಡದ ವಿರುದ್ಧ ಕೋಪಗೊಂಡು ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದರು. ಐಸಿಸಿ ಪಂದ್ಯ ಮೇಲ್ವಿಚಾರಣಾಧಿಕಾರಿ ಕ್ಲೈವ್‌ ಲಾಯ್ಡ್‌ ಪಂದ್ಯ ರದ್ದುಗೊಳಿಸಿ, ಶ್ರೀಲಂಕಾ ತಂಡ ವಿಜಯಿಯೆಂದು ಘೋಷಿಸಿದರು.[೨೪] ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ, ಆಸ್ಟ್ರೇಲಿಯಾ ತಂಡವನ್ನು ಏಳು ವಿಕೆಟ್‌ಗಳ ಅಂತರದಿಂದ ಪರಾಜಯಗೊಳಿಸಿ, ಮೊಟ್ಟಮೊದಲ ಕ್ರಿಕೆಟ್‌ ವಿಶ್ವಕಪ್‌ ಪಂದ್ಯದಲ್ಲಿ ಗೆಲುವು ಸಾಧಿಸಿತು.[೨೫]

ಆಸ್ಟ್ರೇಲಿಯಾದ ತ್ರಿ-ಜಯಭೇರಿ[ಬದಲಾಯಿಸಿ]

ನಂತರದ ೧೯೯೯ರ ವಿಶ್ವಕಪ್‌ ಪಂದ್ಯಾವಳಿ ಇಂಗ್ಲೆಂಡ್‌ನಲ್ಲಿ ನಡೆಯಿತು. ಸ್ಕಾಟ್ಲೆಂಡ್‌, ಐರ್ಲೆಂಡ್‌, ವೇಲ್ಸ್‌ ಮತ್ತು ನೆದರ್ಲೆಂಡ್ಸ್‌ನಲ್ಲಿಯೂ ಸಹ ಕೆಲವು ಪಂದ್ಯಗಳನ್ನು ಆಯೋಜಿಸಲಾಯಿತು.[೨೬][೨೭] ತಮ್ಮ ಕೊನೆಯ ಸೂಪರ್(೬) ಸಿಕ್ಸ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ, ಪಂದ್ಯದ ಕೊನೆಯ ಓವರ್‌ನಲ್ಲಿ ರೋಮಾಂಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ಸೆಮಿಫೈನಲ್‌ ಪ್ರವೇಶಿಸಿತು.[೨೮] ಪುನಃ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಸೆಮಿಫೈನಲ್‌ ಪಂದ್ಯ ಟೈ ಸ್ಥಿತಿಯಲ್ಲಿ ಅಂತ್ಯಗೊಂಡಿತು. ಪಂದ್ಯದ ಕೊನೆಯಲ್ಲಿ ಗೆಲ್ಲಲು ಕೇವಲ ಒಂದು ರನ್‌ ಪಡೆಯಲು, ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್‌ಗಳಾದ ಲ್ಯಾನ್ಸ್‌ ಕ್ಲೂಸನರ್‌ ಮತ್ತು ಅಲ್ಯಾನ್‌ ಡೊನಾಲ್ಡ್‌ ಗೊಂದಲದಲ್ಲಿ ಸಿಲುಕಿದರು. ಬ್ಯಾಟ್‌ ಬೀಳಿಸಿಕೊಂಡ ಡೊನಾಲ್ಡ್‌ ಡಕ್‌ ರನ್‌ಔಟ್‌ ಆದರು. ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಇದೇ ಎದುರಾಳಿಯ ವಿರುದ್ಧ ಜಯಗಳಿಸಿದ್ದ ಕಾರಣ ಆಸ್ಟ್ರೇಲಿಯಾ ಫೈನಲ್‌ ತಲುಪಲು ಅರ್ಹವಾಯಿತು. ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನ ತಂಡವನ್ನು ಕೇವಲ ೧೩೨ ರನ್‌ಗಳಿಗೆ ಧೂಳಿಪಟ ಮಾಡಿ, ೨೦ ಓವರ್‌ಗಳು ಸಂಪೂರ್ಣಗೊಳ್ಳುವ ಮುಂಚೆಯೇ ೧೩೩ರ ಗುರಿ ತಲುಪಿ, ಎಂಟು ವಿಕೆಟ್‌ಗಳ ಅಂತರದಿಂದ ಭಾರೀ ಜಯ ಸಂಪಾದಿಸಿತು.[೨೯]

ಮೊಟ್ಟಮೊದಲ ಹ್ಯಾಟ್‌ಟ್ರಿಕ್‌ ಗಳಿಸಿದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವನ್ನು ಸ್ವಾಗತಿಸಲು, ಸಿಡ್ನಿಯ ಮಾರ್ಟಿನ್‌ ಪ್ಲೇಸ್‌ನಲ್ಲಿ 10,000ಕ್ಕೂ ಹೆಚ್ಚು ಸಂಖ್ಯೆಯಲ್ಲಿ ನೆರೆದಿರುವ ಅಭಿಮಾನಿ ಜನಸ್ತೋಮ.

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾ ಆತಿಥ್ಯದಲ್ಲಿ ೨೦೦೩ ವಿಶ್ವಕಪ್‌ ನಡೆಯಿತು. ಭಾಗವಹಿಸುತ್ತಿರುವ ಕ್ರಿಕೆಟ್‌ ತಂಡಗಳ ಸಂಖ್ಯೆಯು ಹನ್ನೆರಡರಿಂದ ಹದಿನಾಲ್ಕಕ್ಕೇರಿತು. ಕೀನ್ಯಾ ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧ ಭಾರೀ ವಿಜಯ ಸಾಧಿಸಿ, ಪಂದ್ಯಾವಳಿಯ ಲೆಕ್ಕಾಚಾರಗಳನ್ನು ಸಾಕಷ್ಟು ತಲೆಕೆಳಗಾಗಿಸಿತ್ತು. ಭದ್ರತಾ ವಿಚಾರಗಳನ್ನು ಮುಂದಿಟ್ಟ ನ್ಯೂಜೀಲೆಂಡ್‌ ಕೀನ್ಯಾದಲ್ಲಿ ಅತಿಥೇಯರ ವಿರುದ್ಧ ಆಡಲು ನಿರಾಕರಿಸಿ, ಪಂದ್ಯವನ್ನು ಬಿಟ್ಟುಕೊಟ್ಟಿತ್ತು. ಇದರಿಂದ ಭಾರಿ ಲಾಭ ಪಡೆದ ಕೀನ್ಯಾ ಸೆಮಿಫೈನಲ್‌ ಪ್ರವೇಶಿಸಿತು. ಇದು ಐಸಿಸಿಯ ಸಹ-ಸದಸ್ಯ ರಾಷ್ಟ್ರ ತಂಡವೊಂದರಿಂದ ಅತ್ಯುತ್ತಮ ಪ್ರದರ್ಶನ. ಫೈನಲ್‌ ಪಂದ್ಯದಲ್ಲಿ, ಎದುರಾಳಿ ಭಾರತ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಳ್ಳುವ ತಪ್ಪು ಲೆಕ್ಕಾಚಾರದ ಲಾಭ ಪಡೆದ ಆಸ್ಟ್ರೇಲಿಯಾ, ಕೇವಲ ಎರಡೇ ವಿಕೆಟ್‌ ಕಳೆದುಕೊಂಡು ೩೫೯ ರನ್‌ಗಳ ಬೃಹತ್‌ ಮೊತ್ತ ಸೇರಿಸಿತು. ಇದು ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅತ್ಯುನ್ನತ ಮೊತ್ತವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತ ತಂಡವು ೨೩೪ ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡು ಧೂಳೀಪಟವಾಯಿತು. ಆಸ್ಟ್ರೇಲಿಯಾ ೧೨೫ ರನ್‌ಗಳ ಭರ್ಜರಿ ಜಯ ಸಾಧಿಸಿ ವಿಶ್ವಕಪ್‌ ತನ್ನಲ್ಲಿಯೇ ಉಳಿಸಿಕೊಂಡಿತು.[೩೦][೩೧]

ವೆಸ್ಟ್‌ ಇಂಡೀಸ್,‌ ೨೦೦೭ರಲ್ಲಿ ಕ್ರಿಕೆಟ್‌ ವಿಶ್ವಕಪ್‌ ಆತಿಥ್ಯ ವಹಿಸಿತು. ಇದರೊಂದಿಗೆ, ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯು, ಎಲ್ಲಾ ಆರೂ ಜನನಿಬಿಡ ಖಂಡಗಳಲ್ಲಿ ಆಯೋಜಿತ ಅಂತಹ ಪಂದ್ಯಾವಳಿಗಳಲ್ಲಿ ಮೊಟ್ಟಮೊದಲ ಪಂದ್ಯಾವಳಿಯಾಯಿತು.[೩೨] ಪಂದ್ಯಾವಳಿಯ ಇತಿಹಾಸದಲ್ಲಿ ಬಾಂಗ್ಲಾದೇಶ ಮೊಟ್ಟಮೊದಲ ಬಾರಿಗೆ ಎರಡನೆಯ ಸುತ್ತಿಗೆ ಮುನ್ನಡೆಯಿತು. ತನ್ನ ಗುಂಪಿನಲ್ಲಿದ್ದ ಎದುರಾಳಿಗಳಾದ ಭಾರತ ಮತ್ತು ಬರ್ಮುಡಾ ತಂಡಗಳನ್ನು ಸೋಲಿಸಿತು. ಎರಡನೆಯ ಸೂಪರ್‌ ಏಯ್ಟ್‌ ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತು.[೩೩] ಪಂದ್ಯಾವಳಿಯ ಇತಿಹಾಸದಲ್ಲಿ ಮೊಟ್ಟಮೊದಲಿಗೆ ಸ್ಪರ್ಧಿಸುತ್ತಿದ್ದ ಐರ್ಲೆಂಡ್‌ಗೆ ರೋಮಾಂಚನದ ಆರಂಭವಾಗಿತ್ತು. ಜಿಂಬಾಬ್ವೆ ತಂಡದ ವಿರುದ್ಧ ಆಡಿದ ತಮ್ಮ ಮೊಟ್ಟಮೊದಲ ಪಂದ್ಯ (ಟೈ),ಸರಿಸಮದಲ್ಲಿ ಅಂತ್ಯವಾಯಿತು. ನಂತರದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಎರಡನೆಯ ಸುತ್ತಿಗೆ ಮುನ್ನಡೆಯಿತು. ಎರಡನೆಯ ಸುತ್ತಿನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ, ಏಕದಿನ ಪಂದ್ಯವಾಡುವ ರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡಿತು.[೩೪] ಐರ್ಲೆಂಡ್‌ ವಿರುದ್ಧ ಸೋಲಿನ ನಂತರ, ಪಾಕಿಸ್ತಾನ ತಂಡದ ತರಬೇತುದಾರ ಬಾಬ್‌ ವುಲ್ಮರ್‌ ತಮ್ಮ ಹೋಟೆಲ್‌ ಕೋಣೆಯಲ್ಲಿ ಮೃತಪಟ್ಟಿದ್ದು ಕಂಡುಬಂದಿತು. ಹೃದಯದ ವೈಫಲ್ಯ ಅವರ ಸಾವಿಗೆ ಕಾರಣವಾಯಿತು ಎಂದು ಆನಂತರ ತಿಳಿದುಬಂದಿತು.[೩೫] ಆದರೂ ಅವರ ಸಾವು ಐರ್ಲೆಂಡ್‌ ವಿರುದ್ಧದ ಪಂದ್ಯದ ಫಲಿತಾಂಶಕ್ಕೆ ಸಂಬಂಧಿತ ಎಂಬುದನ್ನು ಖಚಿತಪಡಿಸಲಾಗದು. ವೆಸ್ಟ್ ಇಂಡೀಸ್‌ ದೇಶಕೂಟದ ಅಂಗ ಬಾರ್ಬೆಡೋಸ್‌ನ ರಾಜಧಾನಿ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಶ್ರೀಲಂಕಾ ತಂಡವನ್ನು ೫೩ ರನ್‌ಗಳ ಅಂತರದಿಂದ ಸೋಲಿಸಿತು. ಮಳೆಯಾದ ಕಾರಣ ಡಕ್ವರ್ಥ್‌ ಲ್ಯೂಯಿಸ್‌ ನಿಯಮದನ್ವಯ ಈ ಪಂದ್ಯದ ಲಕ್ಷ್ಯವನ್ನು ಪರಿಷ್ಕರಿಸಲಾಯಿತು. ಈ ವಿಜಯದೊಂದಿಗೆ, ಆಸ್ಟ್ರೇಲಿಯಾ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸತತ ೨೯ ಪಂದ್ಯಗಳಲ್ಲಿ ಜಯ ಹಾಗೂ ಮೂರು ಬಾರಿ ವಿಶ್ವಕಪ್‌ ಜಯಗಳ ದಾಖಲೆ ಸೃಷ್ಟಿಸಿತು.[೩೬]

ಪಂದ್ಯಾವಳಿಯ ರೂಪರೇಖೆ[ಬದಲಾಯಿಸಿ]

ಅರ್ಹತೆ[ಬದಲಾಯಿಸಿ]

ಟೆಸ್ಟ್‌ ಪಂದ್ಯ ಆಡುವ ರಾಷ್ಟ್ರಗಳು ವಿಶ್ವಕಪ್‌ ಮುಖ್ಯ ಪಂದ್ಯಾವಳಿಗೆ ತಾವಾಗಿಯೇ ಅರ್ಹತೆ ಗಳಿಸುವವು; ಇತರೆ ತಂಡಗಳು (ಸಹ-ಸದಸ್ಯ ರಾಷ್ಟ್ರಗಳು) ಆರಂಭಿಕ ಅರ್ಹತಾ ಪಂದ್ಯಾವಳಿಗಳ ಸರಣಿಗಳಲ್ಲಿ ಆಡಿ ಅರ್ಹತೆ ಸಂಪಾದಿಸಬೇಕು. ಏಕದಿನ ಪಂದ್ಯ ಆಡುವ ರಾಷ್ಟ್ರಗಳು ಸ್ವಯಂಚಾಲಿತವಾಗಿ ಅಂತಿಮ ಅರ್ಹತಾ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿರುತ್ತವೆ. ಪ್ರತ್ಯೇಕ ಪಂದ್ಯಾವಳಿಗಳಲ್ಲಿ ಆಡಿ ಅರ್ಹತೆ ಸಂಪಾದಿಸಿದ ಇತರೆ ರಾಷ್ಟ್ರಗಳೊಂದಿಗೆ ಸ್ಪರ್ಧಿಸಬೇಕು.

ಎರಡನೆಯ ವಿಶ್ವಕಪ್‌ ಪಂದ್ಯಾವಳಿಗಾಗಿ ಅರ್ಹತಾ ಪಂದ್ಯಾವಳಿಗಳನ್ನು ಪರಿಚಯಿಸಲಾಯಿತು. ಮುಖ್ಯ ಪಂದ್ಯಾವಳಿಯಲ್ಲಿ ಆಡುವ ಎಂಟು ರಾಷ್ಟ್ರಗಳ ಪೈಕಿ ಎರಡು ಸ್ಥಾನಗಳು ಐಸಿಸಿ ಟ್ರೊಫಿಯಲ್ಲಿ ಮೊದಲೆರಡು ಸ್ಥಾನ ಗಳಿಸಿದ ತಂಡಗಳಿಗಾಗಿ ಮೀಸಲಾಗಿದ್ದವು.[೧೪] ಐಸಿಸಿ ಟ್ರೊಫಿ ಪಂದ್ಯಾವಳಿಯ ಮೂಲಕ ಆಯ್ಕೆಯಾದ ತಂಡಗಳ ಸಂಖ್ಯೆ ವರ್ಷಗಳಾನಂತರದಲ್ಲಿ ವ್ಯತ್ಯಾಸಗೊಂಡಿದೆ. ಸದ್ಯಕ್ಕೆ, ಕ್ರಿಕೆಟ್‌ ವಿಶ್ವಕಪ್‌ ಮುಖ್ಯ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಆರು ತಂಡಗಳಿಗೆ ಅವಕಾಶವಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಪರಿಷತ್‌ ನಡೆಸುವ ವಿಶ್ವ ಕ್ರಿಕೆಟ್‌ ಲೀಗ್‌ ಮೂಲಕ, ಐಸಿಸಿಯ ಸಹ-ಸದಸ್ಯ ಮತ್ತು ಅಂಗ ರಾಷ್ಟ್ರಗಳಿಗೆ ಅರ್ಹತೆ ಸಂಪಾದಿಸಲು ಹಲವು ಅವಕಾಶ ಕಲ್ಪಿಸುತ್ತದೆ. ಐಸಿಸಿ ಟ್ರೊಫಿ ಎಂಬ ಹೆಸರನ್ನು ಐಸಿಸಿ ವಿಶ್ವಕಪ್‌ ಅರ್ಹತಾ ಪಂದ್ಯಾವಳಿ ಎಂದು ಬದಲಿಸಲಾಗಿದೆ.[೩೭]

ವಿಶ್ವ ಕ್ರಿಕೆಟ್‌ ಲೀಗ್‌ ಎಂಬ ಸದ್ಯದ ಅರ್ಹತಾ ಪ್ರಕ್ರಿಯೆಯನ್ವಯ, ಐಸಿಸಿಯ ಎಲ್ಲಾ ೯೧ ಸಹ-ಸದಸ್ಯ ಮತ್ತು ಅಂಗ ರಾಷ್ಟ್ರಗಳಿಗೂ, ವಿಶ್ವಕಪ್‌ ಪಂದ್ಯಾವಳಿಗೆ ಅರ್ಹತೆ ಪಡೆಯಲು ಅವಕಾಶವಿದೆ. ಕ್ರಿಕೆಟ್‌ ವಿಶ್ವಕಪ್‌ ಮುಖ್ಯ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಅವಕಾಶ ಗಳಿಸಬೇಕೆಂದರೆ, ಐಸಿಸಿ ವಿಶ್ವ ಕ್ರಿಕೆಟ್‌ ಲೀಗ್‌ನಲ್ಲಿ ಸಹ-ಸದಸ್ಯ ಮತ್ತು ಅಂಗ ರಾಷ್ಟ್ರಗಳು ಎರಡರಿಂದ ಐದು ಹಂತಗಳ ತನಕ ಪಂದ್ಯಗಳಲ್ಲಿ ಆಡಬೇಕು. ತಂಡಗಳು ಅರ್ಹತಾ ಪ್ರಕ್ರಿಯೆ ಆರಂಭಿಸುವ ಶ್ರೇಣಿ (ಡಿವಿಜನ್‌)ನ್ನು ಇದು ಅವಲಂಬಿಸಿರುತ್ತದೆ.

ಕಾಲಾನುಕ್ರಮದಂತೆ ಪ್ರಕ್ರಿಯೆಯ ಸಂಕ್ಷಿಪ್ತ ವಿವರಣೆ :

  1. ಪ್ರಾದೇಶಿಕ ಪಂದ್ಯಾವಳಿಗಳು: ಪ್ರತಿಯೊಂದು ವಲಯವಾರು ಪಂದ್ಯಾವಳಿಯಲ್ಲಿ ಅಗ್ರಸ್ಥಾನ ಪಡೆದ ಕ್ರಿಕೆಟ್ ತಂಡಗಳು ಒಂದು ಡಿವಿಜನ್‌ಗೆ ಉನ್ನತ ಶ್ರೇಣಿ ಪಡೆದು ತೇರ್ಗಡೆಯಾಗುತ್ತವೆ. ಇದು ತಂಡಗಳ ಐಸಿಸಿ ಶ್ರೇಯಾಂಕಗಳು ಹಾಗೂ ಪ್ರತಿ ಡಿವಿಜನ್‌ನಲ್ಲಿನ ಲಭ್ಯ ಸ್ಥಳಗಳನ್ನು ಅವಲಂಬಿಸುತ್ತದೆ.
  2. ವಿಭಾಗ ಒಂದು,ಮೊದಲ ಡಿವಿಜನ್‌: ೬ ತಂಡಗಳು — ಎಲ್ಲಾ ತಂಡಗಳು ಸ್ವಯಂಚಾಲಿತವಾಗಿ ವಿಶ್ವಕಪ್‌ ಅರ್ಹತಾ ಪಂದ್ಯಕ್ಕೆ ಅರ್ಹವಾಗುತ್ತವೆ.
  1. ವಿಭಾಗ ಮೂರು,ಮೂರನೆಯ ಡಿವಿಜನ್: ೬ ತಂಡಗಳು — ಉನ್ನತ ಶ್ರೇಣಿಯ ಮೊದಲ ಎರಡು ತಂಡಗಳು ಎರಡನೆಯ ಡಿವಿಜನ್‌ಗೆ ತೇರ್ಗಡೆಯಾಗುತ್ತವೆ.
  1. ವಿಭಾಗ ಎರಡು, ಎರಡನೆಯ ಡಿವಿಜನ್: ೬ ತಂಡಗಳು — ಉನ್ನತ ಶ್ರೇಣಿಯ ಮೊದಲ ನಾಲ್ಕು ತಂಡಗಳು ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಅಡಲು ಅರ್ಹವಾಗುತ್ತವೆ.
  2. ಐದನೆಯ ವಿಭಾಗ,ಐದನೆಯ ಡಿವಿಜನ್: ೬ ತಂಡಗಳು — ಉನ್ನತ ಶ್ರೇಣಿಯ ಮೊದಲ ಎರಡು ತಂಡಗಳು ನಾಲ್ಕನೆಯ ಡಿವಿಜನ್‌ಗೆ ತೇರ್ಗಡೆಯಾಗುತ್ತವೆ.
  3. ವಿಭಾಗ ನಾಲ್ಕು, ನಾಲ್ಕನೆಯ ಡಿವಿಜನ್‌: ೬ ತಂಡಗಳು — ಮೊದಲ ಉನ್ನತ ಶ್ರೇಣಿಯ ಎರಡು ತಂಡಗಳು ಮೂರನೆಯ ಡಿವಿಜನ್‌ಗೆ ತೇರ್ಗಡೆಯಾಗುತ್ತವೆ.
  4. ವಿಭಾಗ ಮೂರು, ಮೂರನೆಯ ಡಿವಿಜನ್‌ (ಎರಡನೆಯ ಆವೃತ್ತಿ): ೬ ತಂಡಗಳು — ಮೊದಲ,ಉನ್ನತ ಶ್ರೇಣಿಯ ೨ ತಂಡಗಳು ವಿಶ್ವಕಪ್‌ ಅರ್ಹತಾ ಪಂದ್ಯಾವಳಿಗೆ ತೇರ್ಗಡೆಯಾಗುತ್ತವೆ.
  5. ಕ್ರಿಕೆಟ್‌ ವಿಶ್ವಕಪ್‌ ಅರ್ಹತಾ ಪಂದ್ಯಾವಳಿ: ೧೨ ತಂಡಗಳು — ಮೊದಲ ೬ ತಂಡಗಳಿಗೆ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನಾಡುವ ಉನ್ನತ ಸ್ಥಾನಮಾನ ಲಭಿಸುತ್ತದೆ. ಇವುಗಳಲ್ಲಿ ಮೊದಲ ೪ ತಂಡಗಳು ವಿಶ್ವಕಪ್‌ ಮುಖ್ಯ ಪಂದ್ಯಾವಳಿಯಲ್ಲಿ ಆಡಲು ಅರ್ಹವಾಗುತ್ತವೆ.

ಪಂದ್ಯಾವಳಿ[ಬದಲಾಯಿಸಿ]

ಕ್ರಿಕೆಟ್‌ ವಿಶ್ವಕಪ್‌ 2007 ರ ಪಂದ್ಯಾವಳಿಯ ತಂಡಗಳ ನಾಯಕರು.

ತನ್ನ ಇತಿಹಾಸದುದ್ದಕ್ಕೂ ಕ್ರಿಕೆಟ್‌ ವಿಶ್ವಕಪ್‌ನ ರೂಪರೇಖೆಯ ಮಾದರಿ ಬಹಳಷ್ಟು ಬದಲಾಗಿದೆ. ಮೊದಲ ನಾಲ್ಕು ಪಂದ್ಯಾವಳಿಗಳಲ್ಲಿ ಪ್ರತಿಯೊಂದರಲ್ಲೂ ಎಂಟು ತಂಡಗಳು ಸ್ಪರ್ಧಿಸಿದ್ದವು. ಎರಡು ಗುಂಪುಗಳಿದ್ದು, ಒಂದರಲ್ಲಿ ತಲಾ ನಾಲ್ಕು ತಂಡಗಳಿದ್ದವು.[೩೮] ಪಂದ್ಯದಲ್ಲಿ ಎರಡು ಹಂತಗಳಿದ್ದವು: ಗುಂಪಿನ ಹಂತ ಮತ್ತು ನಾಕೌಟ್‌ ಹಂತ. ರೌಂಡ್‌-ರಾಬಿನ್‌ ಗುಂಪು ಹಂತದಲ್ಲಿ, ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳು ಪರಸ್ಪರ ಸ್ಪರ್ಧಿಸುತ್ತಿದ್ದವು. ಪ್ರತಿ ಗುಂಪಿನಲ್ಲಿ ಮೊದಲೆರಡು ಸ್ಥಾನ ಗಳಿಸಿದ ತಂಡಗಳು ಸೆಮಿಫೈನಲ್ಸ್ ಹಂತಕ್ಕೆ ಮುನ್ನಡೆಯುವವು. ಸೆಮಿಫೈನಲ್ಸ್ ಗೆದ್ದ ತಂಡಗಳು ಫೈನಲ್‌ ಪಂದ್ಯವನ್ನಾಡುವವು. ವರ್ಣಭೇದ ನೀತಿ ಅಂತ್ಯಗೊಂಡು ದಕ್ಷಿಣ ಆಫ್ರಿಕಾ ತಂಡವು ೧೯೯೨ರಲ್ಲಿ ವಾಪಸಾಯಿತು. ಆ ವರ್ಷದ ಪಂದ್ಯಾವಳಿಯ ಗುಂಪು ಹಂತದಲ್ಲಿ, ಒಂಬತ್ತು ತಂಡಗಳು ಪರಸ್ಪರ ಒಮ್ಮೆ ಸ್ಪರ್ಧಿಸಿದವು. ಮೊದಲ ಶ್ರೇಣಿಯ ನಾಲ್ಕು ತಂಡಗಳು ಸೆಮಿಫೈನಲ್ಸ್ ಪ್ರವೇಶಿಸಿದವು.[೩೯] ಪಂದ್ಯಾವಳಿಯು ೧೯೯೬ರಲ್ಲಿ ಇನ್ನಷ್ಟು ವಿಸ್ತರಿಸಿತು. ಎರಡು ಗುಂಪುಗಳಿದ್ದು, ಪ್ರತಿ ಗುಂಪಿನಲ್ಲಿ ತಲಾ ಆರು ತಂಡಗಳಿದ್ದವು.[೪೦] ಪ್ರತಿ ಗುಂಪಿನಿಂದ ಮೊದಲ ನಾಲ್ಕು ತಂಡಗಳು ಕ್ವಾರ್ಟರ್‌-ಫೈನಲ್‌ ಮತ್ತು ಅಲ್ಲಿಂದ ಸೆಮಿಫೈನಲ್‌ ಹಂತಕ್ಕೆ ಮುನ್ನಡೆದವು.

ಇದಾದ ಮೇಲೆ ೧೯೯೯ ಮತ್ತು ೨೦೦೩ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಗಾಗಿ ಹೊಸ ರೂಪರೇಖೆ ರಚಿಸಲಾಯಿತು. ತಂಡಗಳನ್ನು ಎರಡು ಗುಂಫುಗಳನ್ನಾಗಿ ವಿಂಗಡಿಸಲಾಯಿತು. ಪ್ರತಿ ಗುಂಪಿನಿಂದ ಮೊದಲ ಮೂರು ತಂಡಗಳು ಸೂಪರ್‌ ೬ ‌ ಹಂತಕ್ಕೆ ಮುನ್ನಡೆದವು.[೪೧] "ಸೂಪರ್‌ ೬"ತಂಡಗಳು ಇನ್ನೊಂದು ಗುಂಪಿನಿಂದ ಮುನ್ನಡೆದ ತಂಡಗಳ ವಿರುದ್ಧ ಆಡಿದವು. ಸೂಪರ್‌ ಸಿಕ್ಸ್‌ ಹಂತಕ್ಕೆ ಮುನ್ನಡೆದ ತಂಡಗಳು, ತಮ್ಮೊಂದಿಗೆ ಮುನ್ನಡೆದ ಇತರೆ ತಂಡಗಳ ವಿರುದ್ಧ ಗೆಲುವಿನ ಅಂಕಗಳನ್ನು ಸೇರಿಸಿಕೊಳ್ಳುತ್ತಿದ್ದವು. ಗುಂಪು ಹಂತಗಳಲ್ಲಿ ಚೆನ್ನಾಗಿ ಆಡಿ ಗೆಲುವು ಸಾಧಿಸಲು ಇದು ಒಂದು ರೀತಿಯ ಪ್ರೋತ್ಸಾಹದ ಕ್ರಮವಾಗಿದೆ.[೪೧] "ಸೂಪರ್‌ ೬"ಹಂತದ ಅಂತ್ಯದಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ಸೆಮಿಫೈನಲ್ಸ್‌ ಹಂತಕ್ಕೆ ಮುನ್ನಡೆದವು. ಇದರಲ್ಲಿ ಜಯಗಳಿಸಿದ ತಂಡಗಳು ಫೈನಲ್ ಪಂದ್ಯವನ್ನಾಡಿದವು.

ಆಗ ೨೦೦೭ರ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ೧೬ ತಂಡಗಳಿದ್ದವು.ಅದರಲ್ಲಿ ಅಂತಿಮ ರಚನಾ ವಿಧಾನವನ್ನು ಬಳಸಲಾಗಿತ್ತು.ಅಲ್ಲದೇ ನಾಲ್ಕು ಗುಂಪುಗಳಿದ್ದು, ಪ್ರತಿಯೊಂದು ಗುಂಪಿನಲ್ಲಿ ತಲಾ ನಾಲ್ಕು ತಂಡಗಳಿದ್ದವು.[೪೨] ಪ್ರತಿಯೊಂದು ಗುಂಪಿನಲ್ಲೂ ತಂಡಗಳು ರೌಂಡ್‌ ರಾಬಿನ್‌ ರೂಪರೇಖೆಯಂತೆ ಪರಸ್ಪರ ಸ್ಪರ್ಧಿಸಿದವು. ಗೆಲುವಿಗಾಗಿ ಪೂರ್ಣ ಅಂಕಗಳು ಹಾಗೂ ಟೈ ಆದಲ್ಲಿ ಅರ್ಧಾಂಕಗಳು ಲಭಿಸುವವು. ಪ್ರತಿಯೊಂದು ಗುಂಪಿನಲ್ಲಿ ಮೊದಲ ಎರಡು ತಂಡಗಳು "ಸೂಪರ್‌ ೮" ‌ ಹಂತಕ್ಕೆ ಮುನ್ನಡೆದವು. "ಸೂಪರ್‌ ೮"ತಂಡಗಳು ಇತರೆ ವಿಭಿನ್ನ ಗುಂಫುಗಳಿಂದ ಮುನ್ನಡೆದ ಇತರೆ ಆರು ತಂಡಗಳ ವಿರುದ್ಧ ಸ್ಪರ್ಧಿಸುವವು. ಗುಂಪಿನ ಹಂತದಂತೆಯೇ ತಂಡಗಳು ಅಂಕ ಗಳಿಸಿದವು, ಆದರೆ, ತಮ್ಮದೇ ಗುಂಪಿನಿಂದ "ಸೂಪರ್‌ ೮"ಹಂತಕ್ಕೆ ಮುನ್ನಡೆದ ಇತರೆ ತಂಡದ ವಿರುದ್ಧ ಗೆಲುವಿನಿಂದ ಸಂಪಾದಿಸಿದ ಅಂಕವನ್ನು ಮುಂದೆ ಒಯ್ದವು.[೪೩] 'ಸೂಪರ್‌ ೮'ಹಂತದ ಅಂತ್ಯದಲ್ಲಿ ಮೊದಲ ನಾಲ್ಕು ತಂಡಗಳು ಸೆಮಿಫೈನಲ್ಸ್‌ ಪ್ರವೇಶಿಸಿದವು. ಸೆಮಿಫೈನಲ್‌ ಪಂದ್ಯದಲ್ಲಿ ಜಯಗಳಿಸಿದ ತಂಡಗಳು ಫೈನಲ್‌ ಪಂದ್ಯವನ್ನಾಡುವವು.

ಐಸಿಸಿ ಆಂಗೀಕರಿಸಿದ ಸದ್ಯದ ರೂಪರೇಖೆಯನ್ನು ೨೦೧೧ರ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಬಳಸಲಾಗಿದ್ದು, ೧೪ ತಂಡಗಳನ್ನೊಳಗೊಂಡಿದೆ. ಪ್ರತಿಯೊಂದು ಗುಂಪಿನಲ್ಲೂ, ತಂಡಗಳು ರೌಂಡ್‌-ರಾಬಿನ್‌ ರೂಪರೇಖೆಯನ್ವಯ ಸ್ಪರ್ಧಿಸುತ್ತವೆ. ಪ್ರತಿಯೊಂದು ಗುಂಪಿನಲ್ಲಿ ಮೊದಲ ನಾಲ್ಕು ಸ್ಥಾನ ಗಳಿಸಿದ ತಂಡಗಳು ನಾಕೌಟ್‌ ಹಂತಕ್ಕೆ ಮುನ್ನಡೆದು, ಕ್ವಾರ್ಟರ್‌-ಫೈನಲ್ಸ್ ಹಂತದಲ್ಲಿ ಸ್ಪರ್ಧಿಸುತ್ತವೆ. ಕ್ವಾರ್ಟರ್‌ಫೈನಲ್ಸ್ ಪಂದ್ಯಗಳಲ್ಲಿ ಜಯಗಳಿಸಿದ ತಂಡಗಳು ಸೆಮಿಫೈನಲ್ಸ್ ತಲುಪುತ್ತವೆ. ಸೆಮಿಫೈನಲ್‌ ವಿಜೇತ ತಂಡಗಳು ಫೈನಲ್‌ ಪಂದ್ಯದಲ್ಲಿ ಸ್ಪರ್ಧಿಸುತ್ತವೆ.

ಪ್ರಶಸ್ತಿ,ಪಾರಿತೋಷಕ(ಟ್ರೊಫಿ)[ಬದಲಾಯಿಸಿ]

ಕ್ರಿಕೆಟ್‌ ವಿಶ್ವಕಪ್‌ ಫೈನಲ್ಸ್ ನಲ್ಲಿ ವಿಜೇತ ತಂಡಕ್ಕೆ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಟ್ರೊಫಿ ಪ್ರದಾನ ಮಾಡಲಾಗುವುದು. ಸದ್ಯದ ಟ್ರೊಫಿಯನ್ನು ೧೯೯೯ ಪಂದ್ಯಾವಳಿಗಾಗಿ ವಿನ್ಯಾಸ ಮಾಡಲಾಗಿತ್ತು. ಪಂದ್ಯಾವಳಿಯ ಇತಿಹಾಸದಲ್ಲಿ ಇದು ಮೊದಲ ಖಾಯಂ ಪ್ರಶಸ್ತಿಯಾಯಿತು. ಇದಕ್ಕೆ ಮುಂಚೆ, ಪ್ರತಿ ವಿಶ್ವಕಪ್‌ ಪಂದ್ಯಾವಳಿಗೂ ವಿಭಿನ್ನ ಟ್ರೊಫಿಗಳನ್ನು ವಿನ್ಯಾಸಗೊಳಿಸಲಾಗಿದೆ.[೪೪] ಗರಾರ್ಡ್‌ ಅಂಡ್ ಕಂಪೆನಿಯ ಕುಶಲಕರ್ಮಿಗಳ ತಂಡವು ಲಂಡನ್‌ನಲ್ಲಿ ಎರಡು ತಿಂಗಳ ಕಾಲ ವಿಶ್ವಕಪ್‌ ಟ್ರೊಫಿಯ ವಿನ್ಯಾಸಗೊಳಿಸುವ ಕಾರ್ಯ ನಡೆಸಿತು.

ಸದ್ಯದ ಟ್ರೊಫಿಯನ್ನು ಬೆಳ್ಳಿ ಮತ್ತು ಚಿನ್ನದ ಮಿಶ್ರಣದಿಂದ ತಯಾರಿಸಲಾಗಿದ್ದು, ಇದರಲ್ಲಿ ಚಿನ್ನದ ಭೂಗೋಳವನ್ನು ಹೊತ್ತ ಮೂರು ರಜತ ಸ್ತಂಭಗಳ ನಿರೂಪಣೆಯಿದೆ. ಸ್ಟಂಪ್‌ಗಳು ಮತ್ತು ಬೇಯ್ಲ್‌ಗಳ ಆಕಾರ ಹೊಂದಿರುವ ಈ ಸ್ತಂಭಗಳು ಕ್ರಿಕೆಟ್‌ನ ಮೂರು ಮೂಲಭೂತ ಅಂಶಗಳಾದ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ಗಳನ್ನು ಪ್ರತಿನಿಧಿಸುತ್ತವೆ. ಭೂಗೋಳಾಕಾರವು ಕ್ರಿಕೆಟ್‌ ಚೆಂಡನ್ನು ಪ್ರತಿನಿಧಿಸುತ್ತದೆ.[೪೫] ಎಲ್ಲಾ ಮುಖಗಳೂ ಸರ್ವಸಮನಾಗಿರುವಂತೆ ಈ ಟ್ರೊಫಿಯನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ, ಈ ಟ್ರೊಫಿಯನ್ನು ಯಾವುದೇ ಕೋನದಿಂದಲೂ ಸಹ ಗುರುತಿಸಬಹುದಾಗಿದೆ. ಇದು ೬೦ ಸೆಂಟಿಮೀಟರ್ ಎತ್ತರವಿದ್ದು, ಸುಮಾರು ೧೧ ಕಿಲೋಗ್ರಾಮ್‌ಗಳಷ್ಟು ತೂಗುತ್ತದೆ. ಟ್ರೊಫಿಯ ಪಾದದಲ್ಲಿ ಹಿಂದಿನ ವಿಜೇತ ತಂಡದ ಸದಸ್ಯರ ಹೆಸರುಗಳನ್ನು ಕೆತ್ತಲಾಗಿದ್ದು, ಒಟ್ಟು ಇಪ್ಪತ್ತು ಹೆಸರುಗಳ ಕೆತ್ತನೆಗಳಿಗೆ ಸ್ಥಳಾವಕಾಶವಿದೆ.

ಮೂಲ ಟ್ರೊಫಿ ಐಸಿಸಿಯಲ್ಲೇ ಇರುವುದು. ಕೇವಲ ಆಟಗಾರರ ಹೆಸರುಗಳ ಕೆತ್ತನೆಗಳ ಮೂಲಕ ಭಿನ್ನವಾಗಿರುವ ತದ್ರೂಪಿ ಟ್ರೊಫಿಯನ್ನು ವಿಜೇತ ತಂಡವು ಕಾಯಂ ಆಗಿ ಇಟ್ಟುಕೊಳ್ಳುತ್ತದೆ.

ಮಾಧ್ಯಮಗಳ ಮೂಲಕ ಪ್ರಸಾರಕಾರ್ಯ[ಬದಲಾಯಿಸಿ]

ಮೆಲ್ಲೊ

ಈ ಪಂದ್ಯಾವಳಿಯು ವಿಶ್ವದ ಮೂರನೆಯ ಅತಿದೊಡ್ಡ ಪಂದ್ಯಾವಳಿಯಾಗಿದೆ. ಕೇವಲ ಫಿಫಾ ವಿಶ್ವಕಪ್‌ ಫುಟ್ಬಾಲ್‌ ಮತ್ತು ಬೇಸಿಗೆಯ ಒಲಿಂಪಿಕ್ಸ್‌ ಕ್ರೀಡಾವಳಿಗಳು ಕ್ರಿಕೆಟ್‌ ವಿಶ್ವಕಪ್‌ಗಿಂತಲೂ ಹೆಚ್ಚು ವೀಕ್ಷಿತ ಕ್ರೀಡೆಗಳಾಗಿವೆ. ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿ ಸುಮಾರು ೨೦೦ಕ್ಕೂ ಹೆಚ್ಚು ದೇಶಗಳಲ್ಲಿ ದೂರದರ್ಶನ ಪ್ರಸಾರಕಂಡಿದೆ. ಸುಮಾರೂ ೨.೨ ಶತಕೋಟಿ ದೂರದರ್ಶನ ವೀಕ್ಷಕರನ್ನೂ ಆಕರ್ಷಿಸಿದೆ.[೧][೨][೪೬][೪೭] ಆಯೋಜಿತ ೨೦೧೧ ಮತ್ತು ೨೦೧೫ರಲ್ಲಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳ ದೂರದರ್ಶನ ಪ್ರಸಾರ ಹಕ್ಕುಗಳನ್ನು ಸುಮಾರು US$೧.೧ಶತಕೋಟಿಗೂ ಹೆಚ್ಚು ಅಮೆರಿಕನ್ ಡಾಲರ್‌ಗಳಿಗೆ ಮಾರಾಟ ಮಾಡಲಾಯಿತು.ಅದರೊಂದಿಗೆ [೪೮] ಪ್ರಾಯೋಜಿಸುವ ಹಕ್ಕುಗಳನ್ನು ಇನ್ನೂ ೫೦೦ ಶತಕೋಟಿ ಅಮೆರಿಕನ್‌ ಡಾಲರ್‌ಗಳಿಗೆ ಮಾರಾಟ ಮಾಡಲಾಯಿತು.[೪೯] ಆಗ ೨೦೦೩ ಕ್ರಿಕೆಟ್ ವಿಶ್ವಕಪ್‌ ಪಂದ್ಯಗಳನ್ನು ೬೨೬,೮೪೫ ಜನರು ವೀಕ್ಷಿಸಿದರು.[೫೦] ಅಲ್ಲದೇ ೨೦೦೭ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಗಳಿಗಾಗಿ ಸುಮಾರು ೬೭೨,೦೦೦ಕ್ಕಿಂತಲೂ ಅಧಿಕ ಟಿಕೆಟ್‌ಗಳು ಮಾರಾಟವಾದವು. ಕ್ರಿಕೆಟ್‌ ವಿಶ್ವಕಪ್‌ ಇತಿಹಾಸದಲ್ಲಿ ಇದು ಅತಿಹೆಚ್ಚು ಟಿಕೆಟ್‌ ಮೂಲದಿಂದ ಬಂದ ಆದಾಯವೆನಿಸಿತು.[೫೧][೫೨]

ಆನಂತರದ ವಿಶ್ವಕಪ್‌ ಪಂದ್ಯಾವಳಿಗಳು ಮಾಧ್ಯಮದ ಬಹಳಷ್ಟು ಗಮನ ಸೆಳೆದಿವೆ. ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯವು ಬಹಳಷ್ಟು ಸ್ಥಾನಮಾನ ಗಳಿಸಿದೆ. ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿದ ೨೦೦೩ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಲಾಂಛನವನ್ನೊಳಗೊಂಡಿತ್ತು -ಅದು ಕಣ್ಣುಕೋರೈಸುವ, ಡ್ಯಾಝ್ಲರ್ ‌ ಎಂಬ ಝೀಬ್ರಾ ಆಗಿತ್ತು. ಮೆಲ್ಲೊ ಹೆಸರಿನ ಕಿತ್ತಲೆ ಬಣ್ಣದ ರಕೂನ್‌ನಂತಹ ಪ್ರಾಣಿ ೨೦೦೭ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯ ಲಾಂಛನವಾಗಿದೆ.[೫೩]

ಆತಿಥ್ಯ ವಹಿಸುವ ರಾಷ್ಟ್ರಗಳ ಆಯ್ಕೆ[ಬದಲಾಯಿಸಿ]

ದಕ್ಷಿಣ ಆಫ್ರಿಕಾದ ಸಿವಿಕ್‌ ಸೆಂಟರ್‌ನಲ್ಲಿ 2003 ಕ್ರಿಕೆಟ್‌ ವಿಶ್ವಕಪ್‌ಗೆ ಸ್ವಾಗತ

ಕ್ರಿಕೆಟ್‌ ವಿಶ್ವಕಪ್‌ ಆಯೋಜಿಸಲು ಆಸಕ್ತಿ ವಹಿಸಿದ ರಾಷ್ಟ್ರಗಳು ಸಲ್ಲಿಸಿದ ಬಿಡ್‌ಗಳನ್ನು ಪರಿಶೀಲಿಸಿದ ನಂತರ, ಅಂತರರಾಷ್ಟ್ರೀಯ ಕ್ರಿಕೆಟ್‌ ಪರಿಷತ್‌ನ ಕಾರ್ಯಕಾರಿ ಸಮಿತಿಯು ಪಂದ್ಯಾವಳಿಯ ಆತಿಥ್ಯ ವಹಿಸುವ ರಾಷ್ಟ್ರಗಳಿಗಾಗಿ ಮತದಾನ ನಡೆಸುತ್ತದೆ.[೫೪]

ಇಂಗ್ಲೆಂಡ್‌ ಪಂದ್ಯಾವಳಿಯ ಮೊದಲ ಮೂರು ಸ್ಪರ್ಧೆಗಳ ಆತಿಥ್ಯ ವಹಿಸಿತು. ಮೊಟ್ಟಮೊದಲ ಆವೃತ್ತಿಯ ಆತಿಥ್ಯ ವಹಿಸಲು ತನ್ನಲ್ಲಿನ ಸಂಪನ್ಮೂಲಗಳನ್ನು ವ್ಯವಸ್ಥೆಗೊಳಿಸಲು ಇಂಗ್ಲೆಂಡ್‌ ಸಿದ್ಧವಾಗಿದ್ದ ಕಾರಣ, ಇಂಗ್ಲೆಂಡ್‌ ಮೊದಲ ಪಂದ್ಯಾವಳಿಯ ಆತಿಥ್ಯ ವಹಿಸಬೇಕೆಂದು ಐಸಿಸಿ ನಿರ್ಣಯಿಸಿತು.[೧೧] ವಿಶ್ವಕಪ್‌ನ ಮೂರನೆಯ ಆವೃತ್ತಿಯ ಆತಿಥ್ಯ ವಹಿಸಲು ಭಾರತ ಪ್ರಸ್ತಾಪ ಸಲ್ಲಿಸಿತು. ಆದರೆ, ಇಂಗ್ಲೆಂಡ್‌ನಲ್ಲಿ ಜೂನ್‌ ತಿಂಗಳಲ್ಲಿ ಹಗಲು ಅವಧಿ ದೀರ್ಘವಾಗಿರುವುದರಿಂದ,[೫೫] ಪಂದ್ಯವು ಒಂದು ದಿನದಲ್ಲೇ ಸಂಪೂರ್ಣಗೊಳ್ಳಬಹುದು ಎಂದು ಹಲವು ಐಸಿಸಿ ಸದಸ್ಯರು ಅಭಿಪ್ರಾಯಪಟ್ಟರು.[೫೬] ಅಂದಿನ ೧೯೮೭ರ ಕ್ರಿಕೆಟ್‌ ವಿಶ್ವಕಪ್‌ ಇಂಗ್ಲೆಂಡ್‌ನಾಚೆ ಆಯೋಜಿತವಾಗಿದ್ದ ಮೊಟ್ಟಮೊದಲ ವಿಶ್ವಕಪ್‌ ಆಗಿತ್ತು. ಭಾರತ ಮತ್ತು ಪಾಕಿಸ್ತಾನ ಜಂಟಿ ಆತಿಥ್ಯ ವಹಿಸಿದ್ದವು.

ಈ ಪಂದ್ಯಾವಳಿಗಳಲ್ಲಿ ಹಲವನ್ನು ಒಂದೇ ಭೌಗೋಳಿಕ ವಲಯದ ರಾಷ್ಟ್ರಗಳಲ್ಲಿ ಜಂಟಿಯಾಗಿ ಆಯೋಜಿಸಲಾಗಿತ್ತು. ಉದಾಹರಣೆಗೆ, ೧೯೮೭ ಮತ್ತು ೧೯೯೬ರಲ್ಲಿ ದಕ್ಷಿಣ ಏಷ್ಯಾ, ಹಾಗೇಯೇ ೧೯೯೨ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜೀಲೆಂಡ್‌, ನಂತರ ೨೦೦೩ರಲ್ಲಿ ಆಫ್ರಿಕಾ ಖಂಡದ ದಕ್ಷಿಣ ಭಾಗ ಹಾಗೂ ೨೦೦೭ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ನಡೆಸಲಾಯಿತು. ಕ್ರಿಕೆಟ್‌ ವಿಶ್ವಕಪ್ ಪಂದ್ಯಾವಳಿ ೨೦೧೧, ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ರಾಷ್ಟ್ರಗಳಲ್ಲಿ ಜಂಟಿಯಾಗಿ ಅಯೋಜಿತವಾಗಲಿದೆ. ಮುಂಬರುವ ಈ ವಿಶ್ವಕಪ್‌ ಪಂದ್ಯಾವಳಿ ಪಾಕಿಸ್ತಾನದಲ್ಲಿಯೂ ಸಹ ಆಯೋಜಿತವಾಗಬೇಕಿತ್ತು. ಆದರೆ, ೨೦೦೯ರ ಮಾರ್ಚ್‌ ೩ರಂದು ಲಾಹೋರಿನಲ್ಲಿ ಶ್ರೀಲಂಕಾ ಕ್ರಿಕೆಟ್‌ ತಂಡ ಪ್ರಯಾಣಿಸುತ್ತಿದ್ದ ಬಸ್‌ ಮೇಲೆ ಆತಂಕವಾದಿಗಳು ಹಲ್ಲೆ ನಡೆಸಿದ ಪ್ರಸಂಗ ನಡೆದಿತ್ತು.ಹೀಗಾಗಿ ಪಾಕಿಸ್ತಾನದ ಭದ್ರತಾ ವ್ಯವಸ್ಥೆಯಲ್ಲಿ ವ್ಯಾಪಕ ಅವಿಶ್ವಾಸ ಮೂಡಿತು. ಇದರಿಂದಾಗಿ, ಐಸಿಸಿ ಕಾರ್ಯಕಾರಿ ಮಂಡಳಿಯು, ಪಾಕಿಸ್ತಾನದಲ್ಲಿ ನಿಗದಿಯಾಗಿದ್ದ ಒಂದು ಸೆಮಿಫೈನಲ್‌ ಪಂದ್ಯವೂ ಸೇರಿದಂತೆ, ೧೪ ಪಂದ್ಯಗಳನ್ನು ಉಳಿದ ಮೂರು ದೇಶಗಳಿಗೆ ಮರುಹಂಚಿಕೆ ಮಾಡಿತು. ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯ ೨೦೧೧ರ ಫೈನಲ್‌ ಪಂದ್ಯವು ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಇತ್ತೀಚೆಗೆ ಟೆಸ್ಟ್ ಸ್ಥಾನಮಾನ ಗಳಿಸಿದ ಬಾಂಗ್ಲಾದೇಶ ಹೊರತುಪಡಿಸಿ, ಟೆಸ್ಟ್‌ ಕ್ರಿಕೆಟ್‌ ಆಡುವ ಪ್ರತಿಯೊಂದು ರಾಷ್ಟ್ರವೂ, ಇದುವರೆಗೆ ಕನಿಷ್ಠಪಕ್ಷ ಒಮ್ಮೆಯಾದರೂ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋಜಿಸಿದೆ ಅಥವಾ ಜಂಟಿಯಾಗಿ ಆಯೋಜಿಸಿದೆ.

ಅಂಕಿ-ಅಂಶ-ಮಾಹಿತಿಯ ಸಾರಾಂಶ[ಬದಲಾಯಿಸಿ]

ಫಲಿತಾಂಶಗಳು[ಬದಲಾಯಿಸಿ]

ವರ್ಷ ಆತಿಥ್ಯ ವಹಿಸಿದ ರಾಷ್ಟ್ರ(ಗಳು) ಅಂತಿಮ ಪಂದ್ಯ ನಡೆದ ಸ್ಥಳ ಅಂತಿಮ ಪಂದ್ಯ
ವಿಜೇತ ಫಲಿತಾಂಶ ಉಪಾಂತ ವಿಜೇತ
1975
ಇಂಗ್ಲೆಂಡ್
ಇಂಗ್ಲೆಂಡ್
ಲಾರ್ಡ್ಸ್‌, ಲಂಡನ್‌  ವೆಸ್ಟ್ ಇಂಡೀಸ್
೮ ವಿಕೆಟ್‌ ನಷ್ಟಕ್ಕೆ ೨೯೧ (೬೦ ಓವರ್‌ಗಳು)
ವೆಸ್ಟ್‌ ಇಂಡೀಸ್‌ಗೆ‌ ೧೭ರನ್‌ಗಳ ಜಯ ಸ್ಕೋರ್‌ ವಿವರ  ಆಸ್ಟ್ರೇಲಿಯಾ
೨೭೪ ಆಲ್‌ ಔಟ್‌ (೫೮.೪ ಓವರ್‌ಗಳು)
1979
ಇಂಗ್ಲೆಂಡ್
ಇಂಗ್ಲೆಂಡ್
ಲಾರ್ಡ್ಸ್‌, ಲಂಡನ್  ವೆಸ್ಟ್ ಇಂಡೀಸ್
೯ ವಿಕೆಟ್‌ ನಷ್ಟಕ್ಕೆ ೨೮೬ (೬೦ ಓವರ್‌ಗಳು)
ವೆಸ್ಟ್‌ ಇಂಡೀಸ್‌ಗೆ ೯೨ ರನ್‌ಗಳ ಜಯ ಸ್ಕೋರ್‌ ವಿವರ  ಇಂಗ್ಲೆಂಡ್
೧೯೪ ಅಲ್‌ ಔಟ್‌ (೫೧ ಓವರ್‌ಗಳು)
1983
ಇಂಗ್ಲೆಂಡ್
ಇಂಗ್ಲೆಂಡ್
ಲಾರ್ಡ್ಸ್‌, ಲಂಡನ್  ಭಾರತ
೧೮೩ ಆಲ್‌ ಔಟ್‌ (೫೪.೪ ಓವರ್‌ಗಳು)
ಭಾರತಕ್ಕೆ ೪೩ ರನ್‌ಗಳ ಜಯ ಸ್ಕೋರ್‌ ವಿವರ  ವೆಸ್ಟ್ ಇಂಡೀಸ್
೧೪೦ ಆಲ್‌ ಔಟ್‌ (೫೨ ಓವರ್‌ಗಳು)
1987
ಭಾರತ ಪಾಕಿಸ್ತಾನ
ಭಾರತ, ಪಾಕಿಸ್ತಾನ
ಈಡನ್‌ ಗಾರ್ಡನ್ಸ್‌, ಕೋಲ್ಕತ್ತಾ  ಆಸ್ಟ್ರೇಲಿಯಾ
೫ ವಿಕೆಟ್‌ ನಷ್ಟಕ್ಕೆ ೨೫೩ (೫೦ ಓವರ್‌ಗಳು)
ಆಸ್ಟ್ರೇಲಿಯಾಗೆ ೭ ರನ್‌ಗಳ ಜಯ ಸ್ಕೋರ್‌ ವಿವರ  ಇಂಗ್ಲೆಂಡ್
೮ ವಿಕೆಟ್‌ ನಷ್ಟಕ್ಕೆ ೨೪೬ (೫೦ ಓವರ್‌ಗಳು)
1992
ಆಸ್ಟ್ರೇಲಿಯಾ ನ್ಯೂ ಜೀಲ್ಯಾಂಡ್
ಆಸ್ಟ್ರೇಲಿಯಾ, ನ್ಯೂಜೀಲೆಂಡ್‌
ಎಂಸಿಜಿ, ಮೆಲ್ಬೊರ್ನ್‌  ಪಾಕಿಸ್ತಾನ
೬ ವಿಕೆಟ್‌ ನಷ್ಟಕ್ಕೆ ೨೪೯ (೫೦ ಓವರ್‌ಗಳು)
ಪಾಕಿಸ್ತಾನಕ್ಕೆ ೨೨ ರನ್‌ಗಳ ಜಯ ಸ್ಕೋರ್‌ ವಿವರ  ಇಂಗ್ಲೆಂಡ್
೨೨೭ ಆಲ್‌ ಔಟ್‌ (೪೯.೨ ಓವರ್‌ಗಳು)
1996
ಭಾರತ ಪಾಕಿಸ್ತಾನ ಶ್ರೀಲಂಕಾ
ಭಾರತ, ಪಾಕಿಸ್ತಾನ, ಶ್ರೀಲಂಕಾ
ಗದ್ದಫಿ ಕ್ರೀಡಾಂಗಣ, ಲಾಹೋರ್‌  ಶ್ರೀಲಂಕಾ
೨೪೫ for ೩ (೪೬.೨ ಓವರ್‌ಗಳು)
ಶ್ರೀಲಂಕಾಗೆ ೭ ವಿಕೆಟ್‌ಗಳ ಜಯ ಸ್ಕೋರ್‌ ವಿವರ  ಆಸ್ಟ್ರೇಲಿಯಾ
೭ ವಿಕೆಟ್‌ ನಷ್ಟಕ್ಕೆ ೨೪೧ (೫೦ ಓವರ್‌ಗಳು) (ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ)
1999
ಇಂಗ್ಲೆಂಡ್ Wales ಐರ್ಲೆಂಡ್‌ ಗಣರಾಜ್ಯ ನೆದರ್ಲ್ಯಾಂಡ್ಸ್ ಸ್ಕಾಟ್ಲೆಂಡ್
ಇಂಗ್ಲೆಂಡ್‌, ವೇಲ್ಸ್‌, ಐರ್ಲೆಂಡ್‌, ನೆದರ್ಲೆಂಡ್ಸ್‌, ಸ್ಕಾಟ್ಲೆಂಡ್‌
ಲಾರ್ಡ್ಸ್‌, ಲಂಡನ್  ಆಸ್ಟ್ರೇಲಿಯಾ
೨ ವಿಕೆಟ್‌ ನಷ್ಟಕ್ಕೆ ೧೩೩ (೨೦.೧ ಓವರ್‌ಗಳು)
ಆಸ್ಟ್ರೇಲಿಯಾಗೆ ೮ ವಿಕೆಟ್‌ಗಳ ಜಯ ಸ್ಕೋರ್‌ ವಿವರ  ಪಾಕಿಸ್ತಾನ
೧೩೨ ಆಲ್‌ ಔಟ್‌ (೩೯ ಓವರ್‌ಗಳು) (ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ)
2003
ದಕ್ಷಿಣ ಆಫ್ರಿಕಾ ಕೀನ್ಯಾ ಜಿಂಬಾಬ್ವೆ
ದಕ್ಷಿಣ ಆಫ್ರಿಕಾ, ಕೀನ್ಯಾ, ಜಿಂಬಾಬ್ವೆ
ವಾಂಡರರ್ಸ್‌, ಜೊಹಾನ್ಸ್‌ಬರ್ಗ್‌  ಆಸ್ಟ್ರೇಲಿಯಾ
೨ ವಿಕೆಟ್‌ ನಷ್ಟಕ್ಕೆ ೩೫೯ (೫೦ ಓವರ್‌ಗಳು)
ಆಸ್ಟ್ರೇಲಿಯಾಗೆ ೧೨೫ ರನ್‌ಗಳ ಜಯ ಸ್ಕೋರ್‌ ವಿವರ  ಭಾರತ
೨೩೪ ಆಲ್‌ ಔಟ್‌ (೩೯.೨ ಓವರ್‌ಗಳು)
2007
ಬಾರ್ಬಡೋಸ್ Jamaica ಟ್ರಿನಿಡಾಡ್ ಮತ್ತು ಟೊಬೆಗೊ ಗಯಾನ ಆಂಟಿಗುವ ಮತ್ತು ಬಾರ್ಬುಡ ಸೇಂಟ್ ಕಿಟ್ಸ್ ಮತ್ತು ನೆವಿಸ್ ಗ್ರೆನಾಡ ಸೇಂಟ್ ಲೂಷಿಯ
ವೆಸ್ಟ್‌ ಇಂಡೀಸ್‌
ಕೆನ್ಸಿಂಗ್ಟನ್‌ ಓವಲ್‌, ಬ್ರಿಡ್ಜ್‌ಟೌನ್‌  ಆಸ್ಟ್ರೇಲಿಯಾ
೪ ವಿಕೆಟ್‌ ನಷ್ಟಕ್ಕೆ ೨೮೧ (೩೮ ಓವರ್‌ಗಳು)
ಡಕ್ವರ್ತ್‌ ಲ್ಯೂಯಿಸ್‌ ಸೂತ್ರದನ್ವಯ ಆಸ್ಟ್ರೇಲಿಯಾಗೆ ೫೩ ರನ್‌ಗಳ ಜಯ ಸ್ಕೋರ್‌ ವಿವರ  ಶ್ರೀಲಂಕಾ
೮ ವಿಕೆಟ್‌ ನಷ್ಟಕ್ಕೆ ೨೧೫ (೩೬ ಓವರ್‌ಗಳು)
2011
ಭಾರತ ಶ್ರೀಲಂಕಾ ಬಾಂಗ್ಲಾದೇಶ
ಭಾರತ, ಶ್ರೀಲಂಕಾ, ಭಾಂಗ್ಲಾದೇಶ
ವಾಂಖೆಡೆ ಕ್ರೀಡಾಂಗಣ, ಮುಂಬಯಿ  ಭಾರತ
277/4 (48.2 ಓವರ್‌ಗಳು)
ಭಾರತಕ್ಕೆ 6 wickets ಜಯ
Scorecard
 ಶ್ರೀಲಂಕಾ
274/6 (೫೦ ಓವರ್‌ಗಳು)
2015
ಆಸ್ಟ್ರೇಲಿಯಾ ನ್ಯೂ ಜೀಲ್ಯಾಂಡ್
ಆಸ್ಟ್ರೇಲಿಯಾ, ನ್ಯೂಜೀಲೆಂಡ್‌
ಮೆಲ್ಬರ್ನ್ ಕ್ರಿಕೇಟ್ ಕ್ರೀಡಾಂಗಣ, ಮೆಲ್ಬರ್ನ್  ಆಸ್ಟ್ರೇಲಿಯಾ
186/3 (33.1 ಓವರ್‌ಗಳು)
Australia won by 7 wickets
Scorecard
 ನ್ಯೂ ಜೀಲ್ಯಾಂಡ್
183 all out (45 ಓವರ್‌ಗಳು)
2019
ಇಂಗ್ಲೆಂಡ್
ಇಂಗ್ಲೆಂಡ್
ಇಂಗ್ಲೆಂಡ್

ತಂಡಗಳ ಪ್ರದರ್ಶನ[ಬದಲಾಯಿಸಿ]

ವಿಶ್ವಕಪ್‌ನಲ್ಲಿ ಸ್ಪರ್ಧಿಸಿದ ಪ್ರತಿಯೊಂದು ರಾಷ್ಟ್ರದ ಅತ್ಯುತ್ತಮ ಸಾಧನೆಯನ್ನು ದಾಖಲಿಸಿರುವ ನಕ್ಷೆ.

ಅರ್ಹತಾ ಪಂದ್ಯಾವಳಿಗಳನ್ನು ಹೊರತುಪಡಿಸಿ, ಹತ್ತೊಂಬತ್ತು ರಾಷ್ಟ್ರಗಳು ಕನಿಷ್ಠ ಪಕ್ಷ ಒಮ್ಮೆಯಾದರೂ ಕ್ರಿಕೆಟ್‌ ವಿಶ್ವಕಪ್‌ ಫೈನಲ್ಸ್ ಪಂದ್ಯಾವಳಿಗಳಲ್ಲಿ ಆಡಲು ಅರ್ಹತೆ ಗಳಿಸಿವೆ. ಪ್ರತಿಯೊಂದು ಫೈನಲ್ಸ್ ಪಂದ್ಯಾವಳಿಯಲ್ಲೂ, ಏಳು ತಂಡಗಳು ಕಾಯಂ ಆಗಿ ಸ್ಪರ್ಧಿಸಿವೆ. ಇವುಗಳಲ್ಲಿ ಐದು ತಂಡಗಳು ವಿಶ್ವಕಪ್‌ ತನ್ನದಾಗಿಸಿಕೊಂಡಿವೆ.[೧೦] ವೆಸ್ಟ್‌ ಇಂಡೀಸ್‌ ಮೊದಲ ಎರಡು ಪಂದ್ಯಾವಳಿಯಲ್ಲಿ ವಿಜಯಿಯಾಯಿತು. ಆಸ್ಟ್ರೇಲಿಯಾ ನಾಲ್ಕು ಬಾರಿ, ಹಾಗೂ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಲಾ ಒಂದು ಸಲ ವಿಶ್ವಕಪ್‌ ಗಳಿಸಿಕೊಂಡಿವೆ. ವೆಸ್ಟ್‌ ಇಂಡೀಸ್‌ (೧೯೭೫ ಮತ್ತು ೧೯೭೯) ಹಾಗೂ ಆಸ್ಟ್ರೇಲಿಯಾ (೧೯೯೯, ೨೦೦೩ ಮತ್ತು ೨೦೦೭) ಸತತವಾಗಿ ವಿಶ್ವಕಪ್‌ ಪಡೆದು ವಿಜಯಿಯಾದ ರಾಷ್ಟ್ರಗಳಾಗಿವೆ.[೧೦] ಇತ್ತೀಚಿನ ನಾಲ್ಕು ಪಂದ್ಯಾವಳಿಗಳು ಸೇರಿದಂತೆ, ಆಸ್ಟ್ರೇಲಿಯಾ ಒಂಬತ್ತು ಫೈನಲ್‌ ಪಂದ್ಯಗಳ ಪೈಕಿ ಆರರಲ್ಲಿ ಸ್ಪರ್ಧಿಸಿದೆ. (೧೯೭೫, ೧೯೮೭, ೧೯೯೬, ೧೯೯೯, ೨೦೦೩, ೨೦೦೭). ಮೂರು ಬಾರಿ ಫೈನಲ್‌ (೧೯೭೯, ೧೯೮೭, ೧೯೯೨) ತಲುಪಿದ ಇಂಗ್ಲೆಂಡ್‌ ತಂಡ ಒಮ್ಮೆಯೂ ವಿಶ್ವಕಪ್‌ ಗೆದ್ದಿಲ್ಲ. ಕ್ರಿಕೆಟ್‌ ವಿಶ್ವಕಪ್‌ನ ೨೦೦೩ರ ಪಂದ್ಯಾವಳಿಗಳಲ್ಲಿ ಕೀನ್ಯಾ ಸೆಮಿಫೈನಲ್‌ ಹಂತದ ವರೆಗೆ ಮುನ್ನಡೆದು ಟೆಸ್ಟ್‌ ಕ್ರಿಕೆಟ್‌ ಆಡದ ರಾಷ್ಟ್ರವೊಂದರ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಅಲ್ಲದೇ ೨೦೦೭ರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಐರ್ಲೆಂಡ್‌ 'ಸೂಪರ್‌ ೮' (ಎರಡನೆಯ ಸುತ್ತು) ವರೆಗೆ ಮುನ್ನಡೆದದ್ದು ಟೆಸ್ಟ್‌ ಆಡದ ರಾಷ್ಟ್ರವೊಂದು ತನ್ನ ಮೊಟ್ಟಮೊದಲ ಪಂದ್ಯಾವಳಿಯಲ್ಲಿನ ಅತ್ಯುತ್ತಮ ಪ್ರದರ್ಶನ ತೋರಿಸಿತು.[೧೦]

ಚಿತ್ರ:CWCHistoricalPerformance.png
ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಪ್ರತಿ ರಾಷ್ಟ್ರದ ಐತಿಹಾಸಿಕ ಸಾಧನೆಯನ್ನು ದಾಖಲಿಸಿರುವ ನಕ್ಷೆ.

ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯ ೧೯೯೬ರ ಫೈನಲ್‌ ಪಂದ್ಯ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದರೂ ಸಹ, ಸಹ-ಆತಿಥ್ಯ ವಹಿಸಿದ ಶ್ರೀಲಂಕಾ, ವಿಶ್ವಕಪ್‌ ವಿಜಯಿಯಾದ ಏಕೈಕ ಅತಿಥೇಯ ಎನಿಸಿಕೊಂಡಿತು.[೧೦] ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ ತಲುಪಿದ ಇಂಗ್ಲೆಂಡ್‌ ಒಂದೇ ೧೯೭೯ರಲ್ಲಿ ಏಕೈಕ ಆತಿಥೇಯವಾಗಿತ್ತು. ಕ್ರಿಕೆಟ್ ವಿಶ್ವಕಪ್‌ ಪಂದ್ಯಾವಳಿಯ ಸಹ-ಆತಿಥ್ಯ ವಹಿಸಿ, ತಮ್ಮ ಪಾಲಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ರಾಷ್ಟ್ರಗಳೆಂದರೆ ನ್ಯೂಜೀಲೆಂಡ್‌ (೧೯೯೨, ಸೆಮಿಫೈನಲ್), ಜಿಂಬಾಬ್ವೆ (೨೦೦೩, ಸೂಪರ್‌ ಸಿಕ್ಸ್‌), ಕೀನ್ಯಾ (೨೦೦೩, ಸೆಮಿಫೈನಲ್).[೧೦]‌ ಭಾರತ ಮತ್ತು ಪಾಕಿಸ್ತಾನ ಸಹ-ಆತಿಥ್ಯ ವಹಿಸಿದವಲ್ಲದೇ ಸೆಮಿಫೈನಲ್‌ವರೆಗೂ, ೧೯೮೭ರಲ್ಲಿ ಮುನ್ನಡೆದವು. ಆದರೆ, ಅನುಕ್ರಮವಾಗಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲುಂಡವು.[೧೦]

ಕೆಳಗಿನ ಪಟ್ಟಿಯು ಹಿಂದಿನ ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ತಂಡಗಳ ಪ್ರದರ್ಶನದ ಸ್ಥೂಲನೋಟ ಒದಗಿಸುತ್ತದೆ.

ತಂಡ ಸ್ಪರ್ಧಿಸಿದ್ದು ಅತ್ಯುತ್ತಮ ಫಲಿತಾಂಶ ಅಂಕಿಅಂಶಗಳು
ಒಟ್ಟು ಮೊದಲ ವಿಶ್ವಕಪ್‌ ಪಂದ್ಯಾವಳಿ ಇತ್ತೀಚಿನದ್ದು ಆಡಿದ್ದು ಗೆದ್ದದ್ದು ಸೋತದ್ದು ಟೈ (ಸಮಸಮ) ಯಾವುದೇ ಫಲಿತಾಂಶವಿಲ್ಲ(ನೊ ರಿಜಲ್ಟ್ಸ್)
 ಆಸ್ಟ್ರೇಲಿಯಾ ೧೯೭೫ ೨೦೦೭ ವಿಜೇತ (೧೯೮೭, ೧೯೯೯, ೨೦೦೩, ೨೦೦೭) ೬೯ ೫೧ ೧೭
 ವೆಸ್ಟ್ ಇಂಡೀಸ್ ೧೯೭೫ ೨೦೦೭ ವಿಜೇತ (೧೯೭೫, ೧೯೭೯) ೫೭ ೩೫ ೨೧
 ಭಾರತ ೧೯೭೫ ೨೦೦೭ ವಿಜೇತ (೧೯೮೩) ೫೮ ೩೨ ೨೫
 ಪಾಕಿಸ್ತಾನ ೧೯೭೫ ೨೦೦೭ ವಿಜೇತ (೧೯೯೨) ೫೬ ೩೦ ೨೪
 ಶ್ರೀಲಂಕಾ ೧೯೭೫ ೨೦೦೭ ವಿಜೇತ (೧೯೯೬) ೫೭ ೨೫ ೩೦
 ಇಂಗ್ಲೆಂಡ್ ೧೯೭೫ ೨೦೦೭ ರನ್ನರ್ಸ್-ಅಪ್ (೧೯೭೯, ೧೯೮೭, ೧೯೯೨) ೫೯ ೩೬ ೨೨
 ನ್ಯೂ ಜೀಲ್ಯಾಂಡ್ ೧೯೭೫ ೨೦೦೭ ಸೆಮಿಫೈನಲ್ (೧೯೭೫, ೧೯೭೯, ೧೯೯೨, ೧೯೯೯, ೨೦೦೭) ೬೨ ೩೫ ೨೬
 ದಕ್ಷಿಣ ಆಫ್ರಿಕಾ ೧೯೯೨ ೨೦೦೭ ಸೆಮಿಫೈನಲ್ (೧೯೯೨, ೧೯೯೯, ೨೦೦೭) ೪೦ ೨೬ ೧೨
 ಕೀನ್ಯಾ ೧೯೯೬ ೨೦೦೭ ಸೆಮಿಫೈನಲ್ (೨೦೦೩) ೨೩ ೧೬
 ಜಿಂಬಾಬ್ವೆ ೧೯೮೩ ೨೦೦೭ ಸೂಪರ್‌ ಸಿಕ್ಸ್‌ (೧೯೯೯, ೨೦೦೩) ೪೫ ೩೩
 ಬಾಂಗ್ಲಾದೇಶ ೧೯೯೯ ೨೦೦೭ ಸೂಪರ್‌ ೮ (೨೦೦೭) ೨೦ ೧೪
 ಐರ್ಲೆಂಡ್ ೨೦೦೭ ೨೦೦೭ ಸೂಪರ್‌ ೮ (೨೦೦೭)
 ಕೆನಡಾ ೧೯೭೯ ೨೦೦೭ ರೌಂಡ್ ೧ ೧೨ ೧೧
 ನೆದರ್ಲ್ಯಾಂಡ್ಸ್ ೧೯೯೬ ೨೦೦೭ ರೌಂಡ್ ೧ ೧೪ ೧೨
 ಸ್ಕಾಟ್ಲೆಂಡ್ ೧೯೯೯ ೨೦೦೭ ರೌಂಡ್ ೧
 Bermuda ೨೦೦೭ ೨೦೦೭ ರೌಂಡ್ ೧
 ನಮೀಬಿಯ ೨೦೦೩ ೨೦೦೩ ರೌಂಡ್ ೧
 ಸಂಯುಕ್ತ ಅರಬ್ ಸಂಸ್ಥಾನ ೧೯೯೬ ೧೯೯೬ ರೌಂಡ್ ೧
ಪೂರ್ವ ಆಫ್ರಿಕಾ ೧೯೭೫ ೧೯೭೫ Round ೧

ವ್ಯಕ್ತಿಗತ ಪ್ರಶಸ್ತಿಗಳು[ಬದಲಾಯಿಸಿ]

ವಿಶ್ವಕಪ್‌ ಫೈನಲ್ಸ್ ಪಂದ್ಯದ ನಂತರ ಒಬ್ಬ ಆಟಗಾರರಿಗೆ ಪಂದ್ಯಾವಳಿಯ ಪುರುಷೋತ್ತಮ ಪ್ರಶಸ್ತಿಯನ್ನು ೧೯೯೨ರಿಂದಲೂ ನೀಡಲಾಗುತ್ತಿದೆ:[೫೭]

ವರ್ಷ ಆಟಗಾರ ಸಾಧನೆಗಳ ವಿವರ
1992 ನ್ಯೂ ಜೀಲ್ಯಾಂಡ್ ಮಾರ್ಟಿನ್‌ ಕ್ರೋವ್‌ ೪೫೬ ರನ್‌ಗಳು
೧೯೯೬ ಶ್ರೀಲಂಕಾ ಸನತ್‌ ಜಯಸೂರ್ಯ ೨೨೧ ರನ್‌ಗಳು ಹಾಗೂ ೭ ವಿಕೆಟ್‌ಗಳು
೧೯೯೯ ದಕ್ಷಿಣ ಆಫ್ರಿಕಾ ಲ್ಯಾನ್ಸ್‌ ಕ್ಲೂಸ್ನರ್‌ ೨೮೧ ರನ್‌ಗಳು ಹಾಗೂ ೧೭ ವಿಕೆಟ್‌ಗಳು
೨೦೦೩ ಭಾರತ ಸಚಿನ್‌ ತೆಂಡೂಲ್ಕರ್‌ ೬೭೩ ರನ್‌ಗಳು ಹಾಗೂ ೨ ವಿಕೆಟ್‌ಗಳು
೨೦೦೭ ಆಸ್ಟ್ರೇಲಿಯಾ ಗ್ಲೆನ್‌ ಮೆಗ್ರಾ ೨೬ ವಿಕೆಟ್‌ಗಳು

ಮುಂಚೆ, ಪಂದ್ಯಾವಳಿಯ ಮಟ್ಟದಲ್ಲಿ ಯಾವುದೇ ಪ್ರಶಸ್ತಿಯಿರಲಿಲ್ಲ, ಆದರೂ, ಪ್ರತಿಯೊಂದು ಪಂದ್ಯದಲ್ಲಿ ಶ್ರೇಷ್ಠ ಸಾಧನೆಗಾಗಿ ಆ ಕ್ರಿಕೆಟಿಗರಿಗೆ ಪಂದ್ಯದ ಪುರುಷೋತ್ತಮ ಪ್ರಶಸ್ತಿ ನೀಡಲಾಗುತ್ತಿತ್ತು. ಫೈನಲ್‌ ಪಂದ್ಯದಲ್ಲಿ, ಪಂದ್ಯ ಪುರುಷೋತ್ತಮನೆನಿಸಿಕೊಳ್ಳುವುದು ಬಹಳಷ್ಟು ತಾರ್ಕಿಕವಾಗಿ ಗಮನಾರ್ಹ, ಏಕೆಂದರೆ, ಈ ಆಟಗಾರ ವಿಶ್ವಕಪ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಅತಿಮಹತ್ತರ ಪಾತ್ರವಹಿಸಿರುವರು. ಈವರೆಗೆ, ಈ ಪ್ರಶಸ್ತಿಯು ಯಾವಾಗಲೂ ವಿಜಯಿಯಾದ ತಂಡದ ಸದಸ್ಯನ ಪಾಲಾಗಿದೆ. ಪಂದ್ಯಾವಳಿಗಳಲ್ಲಿ ಫೈನಲ್‌ ಪಂದ್ಯ ಪುರುಷೋತ್ತಮರ ಹೆಸರುಗಳು ಕೆಳಕಂಡಂತಿವೆ:[೫೭]

ವರ್ಷ ಆಟಗಾರ ಸಾಧನೆಗಳ ವಿವರ
1975 ಕ್ಲೈವ್‌ ಲಾಯ್ಡ್‌ 102 ರನ್‌ಗಳು
1979 ವಿವಿಯನ್‌ ರಿಚರ್ಡ್ಸ್‌ ೧೩೮* ಅಜೇಯ
೧೯೮೩ ಭಾರತ ಮೊಹಿಂದರ್ ಅಮರನಾಥ್‌ ೨೬ ರನ್‌ಗಳು ಹಾಗೂ ೩/೧೨ (೧೨ ರನ್‌ ನೀಡಿ ೩ ವಿಕೆಟ್‌ ತೆಗೆದದ್ದು)
೧೯೮೭ ಆಸ್ಟ್ರೇಲಿಯಾ ಡೇವಿಡ್‌ ಬೂನ್‌ ೭೫ ರನ್‌ಗಳು
೧೯೯೨ ಪಾಕಿಸ್ತಾನ ವಸೀಮ್‌ ಅಕ್ರಂ ೩೩ ಮತ್ತು ೩/೪೯
೧೯೯೬ ಶ್ರೀಲಂಕಾ ಅರವಿಂದ ಡಿಸಿಲ್ವ ೧೦೭* ಹಾಗೂ ೩/೪೨
೧೯೯೯ ಆಸ್ಟ್ರೇಲಿಯಾ ಷೇನ್‌ ವಾರ್ನ್‌ ೪/೩೩
೨೦೦೩ ಆಸ್ಟ್ರೇಲಿಯಾ ರಿಕಿ ಪಾಂಟಿಂಗ್‌ ೧೪೦*
೨೦೦೭ ಆಸ್ಟ್ರೇಲಿಯಾ ಆಡಂ ಗಿಲ್‌ಕ್ರಿಸ್ಟ್‌ ೧೪೯

ವ್ಯಕ್ತಿಗತ ಮತ್ತು ತಂಡದ ಪ್ರಮುಖ ದಾಖಲೆಗಳು[ಬದಲಾಯಿಸಿ]

ವಿಶ್ವಕಪ್‌ ಇತಿಹಾಸದಲ್ಲಿ ರನ್‌ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್‌ ತೆಂಡೂಲ್ಕರ್‌.
ವಿಶ್ವಕಪ್‌ ದಾಖಲೆಗಳು [೫೮]
ಬ್ಯಾಟಿಂಗ್
ಅತಿ ಹೆಚ್ಚು ರನ್‌ಗಳು ಭಾರತ ಸಚಿನ್‌ ತೆಂಡೂಲ್ಕರ್‌ ೧೭೯೬ (೧೯೯೨–೨೦೦೭)
ಅತಿಹೆಚ್ಚು ಸರಾಸರಿ (ಕನಿಷ್ಠ ೨೦ ಇನ್ನಿಂಗ್ಸ್‌ಗಳು) ವಿವಿಯನ್‌ ರಿಚರ್ಡ್ಸ್‌ ೬೩.೩೧ (೧೯೭೫–೧೯೮೭)
ಅತ್ಯುನ್ನತ ಸ್ಕೋರ್‌ ದಕ್ಷಿಣ ಆಫ್ರಿಕಾ ಗ್ಯಾರಿ ಕರ್ಸ್ಟನ್‌, ಯುಎಇ ವಿರುದ್ಧ ೧೮೮* (೧೯೯೬)
ಅತ್ಯುನ್ನತ ರನ್‌ ಜೊತೆಯಾಟ ಭಾರತ ರಾಹುಲ್‌ ದ್ರಾವಿಡ್‌ ಮತ್ತು ಸೌರವ್‌ ಗಂಗೂಲಿ
ಶ್ರೀಲಂಕಾ ವಿರುದ್ಧ ಎರಡನೆಯ ವಿಕೆಟ್‌ಗಾಗಿ
೩೧೮ (೧೯೯೯)
ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್‌ಗಳು ಭಾರತ ಸಚಿನ್‌ ತೆಂಡೂಲ್ಕರ್‌ ೬೭೩ (೨೦೦೩)
ಬೌಲಿಂಗ್
ಅತಿ ಹೆಚ್ಚು ವಿಕೆಟ್‌ಗಳು ಆಸ್ಟ್ರೇಲಿಯಾ ಗ್ಲೆನ್‌ ಮೆಗ್ರಾ ೭೧ (೧೯೯೬–೨೦೦೭)
ಅತಿಕಡಿಮೆ ಸರಾಸರಿ (ಕನಿಷ್ಠಪಕ್ಷ ೧೦೦೦ ಚೆಂಡೆಸೆತಗಳನ್ನು ಬೌಲ್‌ ಮಾಡಿದ್ದು) ಆಸ್ಟ್ರೇಲಿಯಾ ಗ್ಲೆನ್‌ ಮೆಗ್ರಾ ೧೯.೨೧ (೧೯೯೬–೨೦೦೭)
ಅತ್ಯುತ್ತಮ ಬೌಲಿಂಗ್‌ ಸಾಧನೆ ಆಸ್ಟ್ರೇಲಿಯಾ ಗ್ಲೆನ್‌ ಮೆಗ್ರಾ, ನಮೀಬಿಯಾ ವಿರುದ್ಧ ೭/೧೫ (೨೦೦೩)
ಪಂದ್ಯಾವಳಿಯಲ್ಲಿ ಅತಿಹೆಚ್ಚು ವಿಕೆಟ್‌ಗಳು ಆಸ್ಟ್ರೇಲಿಯಾ ಗ್ಲೆನ್‌ ಮೆಗ್ರಾ ೨೬ (೨೦೦೭)
ಫೀಲ್ಡಿಂಗ್
ಅತಿ ಹೆಚ್ಚು ಔಟ್‌ಗಳು (ವಿಕೆಟ್‌-ಕೀಪರ್‌) ಆಸ್ಟ್ರೇಲಿಯಾ ಆಡಮ್‌ ಗಿಲ್‌ಕ್ರಿಸ್ಟ್‌ ೩೯ (೧೯೯೯–೨೦೦೭)
ಅತಿಹೆಚ್ಚು ಕ್ಯಾಚ್‌ಗಳು (ಫೀಲ್ಡರ್‌) ಆಸ್ಟ್ರೇಲಿಯಾ ರಿಕಿ ಪಾಂಟಿಂಗ್‌ ೨೪ (೧೯೯೬–೨೦೦೭)
ತಂಡ
ಅತ್ಯುನ್ನತ ಸ್ಕೋರ್‌  ಭಾರತ ಬರ್ಮುಡಾ ವಿರುದ್ಧ ೪೧೩/೫ (೨೦೦೭)
ಅತಿ ಕಡಿಮೆ ಸ್ಕೋರ್‌  ಕೆನಡಾ ಶ್ರೀಲಂಕಾ ವಿರುದ್ಧ ೩೬ (೨೦೦೩)
ಅತ್ಯುನ್ನತ ಗೆಲುವಿನ ಶೇಕಡಾವಾರು ಆಸ್ಟ್ರೇಲಿಯಾ ಆಸ್ಟ್ರೇಲಿಯಾ ೭೫% (೬೯ ಪಂದ್ಯಗಳನ್ನಾಡಿ ೫೧ ಗೆದ್ದದ್ದು)
ಅತಿ ಹೆಚ್ಚು ಸರಣಿ ಗೆಲುವುಗಳು ಆಸ್ಟ್ರೇಲಿಯಾ ಆಸ್ಟ್ರೇಲಿಯಾ ೨೩ (೧೯೯೯–೨೦೦೭)
ಅತಿ ಹೆಚ್ಚು ಸತತ ಪಂದ್ಯಾವಳಿ ಗೆಲುವು ಆಸ್ಟ್ರೇಲಿಯಾ ಆಸ್ಟ್ರೇಲಿಯಾ ೩ (೧೯೯೯–೨೦೦೭) [೫೯]

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portal

  • ೧೯ ವರ್ಷಕ್ಕಿಂತಲೂ ಕಿರಿಯರ ಕ್ರಿಕೆಟ್ ವಿಶ್ವಕಪ್‌
  • ಮಹಿಳೆಯರ ಕ್ರಿಕೆಟ್‌ ವಿಶ್ವಕಪ್‌

ಉಲ್ಲೇಖಗಳು[ಬದಲಾಯಿಸಿ]

  • Browning, Mark (೧೯೯೯). A complete history of World Cup Cricket. Simon & Schuster. ISBN ೦-೭೩೧೮-೦೮೩೩-೯. {{cite book}}: Check |isbn= value: invalid character (help)

ಟಿಪ್ಪಣಿಗಳು[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

  1. ೧.೦ ೧.೧ "World Cup Overview". cricketworldcup.com. Archived from the original on 2007-01-24. Retrieved 2007-01-29.
  2. ೨.೦ ೨.೧ ೨.೨ cbc staff (2007-03-14). "2007 Cricket World Cup". cbc. Archived from the original on March 28, 2007. Retrieved 2007-04-04.
  3. International Cricket Council. "Cricket World Cup marketing overview". Cricket World Cup ೨೦೦೭. Archived from the original on 2007-01-24. Retrieved ೨೦೦೭-೦೧-೩೦. {{cite web}}: Check date values in: |accessdate= (help)
  4. International Cricket Council. "Cricket World Cup overview" (PDF). Cricket World Cup ೨೦೦೭. Archived from the original (PDF) on 2006-12-08. Retrieved ೨೦೦೭-೦೧-೩೦. {{cite web}}: Check date values in: |accessdate= (help)
  5. "1st Test Scorecard". cricinfo.com. 1877-03-15. Retrieved 2007-01-28.
  6. "Olympic Games, 1900, Final". cricinfo.com. 1900-08-19. Archived from the original on 2006-11-08. Retrieved 2006-09-09.
  7. "The original damp squib". cricinfo.com. 2005-04-23. Archived from the original on October 16, 2007. Retrieved 2006-08-29.
  8. "The birth of the one-day game". cricinfo.com. 2005-04-30. Retrieved 2006-09-10.
  9. "What is One-Day International cricket?". newicc.cricket.org. Archived from the original on 2006-11-19. Retrieved 2006-09-10.
  10. ೧೦.೦ ೧೦.೧ ೧೦.೨ ೧೦.೩ ೧೦.೪ ೧೦.೫ ೧೦.೬ ೧೦.೭ "The World Cup - A brief history". cricinfo.com. Retrieved 2006-12-07.
  11. ೧೧.೦ ೧೧.೧ "The History of World Cup's". cricworld.com. Archived from the original on 2007-03-13. Retrieved 2006-09-19.
  12. ಬ್ರೌನಿಂಗ್‌ (೧೯೯೯), ಪಿಪಿ. ೫–೯
  13. ೧೩.೦ ೧೩.೧ ಬ್ರೌನಿಂಗ್‌ (೧೯೯೯), ಪಿಪಿ. ೨೬–೩೧
  14. ೧೪.೦ ೧೪.೧ "ICC Trophy - A brief history". cricinfo.com. Retrieved 2006-08-29.
  15. ೧೫.೦ ೧೫.೧ ಬ್ರೌನಿಂಗ್‌ (೧೯೯೯), ಪಿಪಿ. ೩೨–೩೫
  16. ಬ್ರೌನಿಂಗ್‌ (೧೯೯೯), ಪಿಪಿ. ೬೧–೬೨
  17. ಬ್ರೌನಿಂಗ್‌ (೧೯೯೯), ಪಿಪಿ. ೧೦೫–೧೧೦
  18. ಬ್ರೌನಿಂಗ್‌ (೧೯೯೯), ಪಿಪಿ. ೧೧೧–೧೧೬
  19. ಬ್ರೌನಿಂಗ್‌ (೧೯೯೯), ಪಿಪಿ. ೧೫೫–೧೫೯
  20. "Cricket World Cup 2003". A.Srinivas. Archived from the original on 2009-10-25. Retrieved 2007-01-28.
  21. ಬ್ರೌನಿಂಗ್‌ (೧೯೯೯), ಪಿಪಿ. ೧೬೦–೧೬೧
  22. ಬ್ರೌನಿಂಗ್‌ (೧೯೯೯), ಪಿಪಿ. ೨೧೧–೨೧೪
  23. ಬ್ರೌನಿಂಗ್‌ (೧೯೯೯), ಪಿಪಿ. ೨೧೫–೨೧೭
  24. "1996 Semi-final scoreboard". cricketfundas. Archived from the original on 2006-11-07. Retrieved 2007-01-28.
  25. ಬ್ರೌನಿಂಗ್‌ (೧೯೯೯), ಪಿಪಿ. ೨೬೪–೨೭೪
  26. ಬ್ರೌನಿಂಗ್‌ (೧೯೯೯), ಪಿ. ೨೭೪
  27. "1999 Cricket World Cup". nrich.maths. Archived from the original on 2007-03-10. Retrieved 2007-01-28.
  28. ಬ್ರೌನಿಂಗ್‌ (೧೯೯೯), ಪಿಪಿ. ೨೨೯–೨೩೧
  29. ಬ್ರೌನಿಂಗ್‌ (೧೯೯೯), ಪಿಪಿ. ೨೩೨–೨೩೮
  30. "Ruthless Aussies lift World Cup". London: bbc.co.uk. 2003-03-23. Retrieved 2007-01-29.
  31. "Full tournament schedule". London: BBC. ೨೦೦೩-೦೩-೨೩. Retrieved ೨೦೦೭-೦೨-೨೨. {{cite web}}: Check date values in: |accessdate= and |date= (help)
  32. "Previous Tournaments". ICC. Archived from the original on October 16, 2007. Retrieved 2007-05-06.
  33. "Bangladesh braced for rampant Australia". newindpress.com. 31 March 2007. Retrieved 2008-07-26.
  34. "Ireland ranked tenth in LG ICC ODI Championship". ICC. 2007-04-22. Archived from the original on 2007-04-28. Retrieved 2007-05-06.
  35. "Bob Woolmer investigation round-up". Cricinfo. Retrieved 2007-05-06.
  36. "Australia v Sri Lanka, World Cup final, Barbados". Cricinfo. 2007-04-28. Retrieved 2007-05-06.
  37. "World Cricket League". ICC. Archived from the original on 2007-01-19. Retrieved 2007-01-28.
  38. "೧st tournament". icc.cricket.org. Archived from the original on 2007-12-17. Retrieved ೨೦೦೭-೦೨-೧೯. {{cite web}}: Check date values in: |accessdate= (help)
  39. "೯೨ tournament". icc.cricket.org. Archived from the original on 2007-12-17. Retrieved ೨೦೦೭-೦೨-೧೯. {{cite web}}: Check date values in: |accessdate= (help)
  40. "೯೬ tournament". icc.cricket.org. Archived from the original on 2007-12-17. Retrieved ೨೦೦೭-೦೨-೧೯. {{cite web}}: Check date values in: |accessdate= (help)
  41. ೪೧.೦ ೪೧.೧ "Super ೬". Cricinfo. Retrieved ೨೦೦೭-೦೨-೧೯. {{cite web}}: Check date values in: |accessdate= (help)
  42. "World Cup groups". cricket world cup. Archived from the original on 2007-01-26. Retrieved 2007-01-28.
  43. "About the Event" (PDF). cricketworldcup.com. p. 1. Archived from the original (PDF) on 2006-09-05. Retrieved 2006-09-02.
  44. "Trophy is first permanent prize in game's history". cnnsi.com. Archived from the original on 2008-03-23. Retrieved 2007-11-09.
  45. "Cricket World Cup- Past Glimpses". webindia123.com. Retrieved 2007-10-31.
  46. "The Wisden History of the Cricket World Cup". www.barbadosbooks.com. Archived from the original on 2012-03-18. Retrieved 2007-04-04.
  47. "Papa John's CEO Introduces Cricket to Jerry Jones and Daniel Snyder". ir.papajohns.com. Archived from the original on July 11, 2007. Retrieved 2007-04-04.
  48. Cricinfo staff (೨೦೦೬-೧೨-೦೯). "ICC rights for to ESPN-star". Cricinfo. Retrieved ೨೦೦೭-೦೧-೩೦. {{cite web}}: Check date values in: |accessdate= and |date= (help)
  49. Cricinfo staff (೨೦೦೬-೦೧-೧೮). "ICC set to cash in on sponsorship rights". Cricinfo. Retrieved ೨೦೦೭-೦೧-೩೦. {{cite web}}: Check date values in: |accessdate= and |date= (help)
  50. "Cricket World Cup 2003" (PDF). ICC. p. 12. Archived from the original (PDF) on 2006-03-21. Retrieved 2007-01-29.
  51. ತೀವ್ರ ಸಾಲ ಬಾಧೆಯಲ್ಲಿದ್ದ ವಿಂಡೀಸ್‌ ಮಂಡಳಿಗೆ ವರವಾದ ವಿಶ್ವಕಪ್‌ ಲಾಭ
  52. "ICC CWC 2007 Match Attendance Soars Past 400,000". cricketworld.com. Archived from the original on September 28, 2007. Retrieved 2007-04-25.
  53. "GuideLines for Media". cricketworldcup.com. Archived from the original on 2007-01-29. Retrieved 2007-01-29.
  54. "Asia to host ೨೦೧೧ World Cup". Cricinfo. ೨೦೦೬-೦೪-೩೦. Retrieved ೨೦೦೭-೦೨-೦೯. {{cite web}}: Check date values in: |accessdate= and |date= (help)
  55. "World Cup Cricket 1979". cricket.beepthi. Retrieved 2007-01-29.
  56. "The ೧೯೭೯ World Cup in England - West Indies retain their title". Cricinfo. Retrieved ೨೦೦೬-೦೯-೧೯. {{cite web}}: Check date values in: |accessdate= (help)
  57. ೫೭.೦ ೫೭.೧ "Cricket World Cup Past Glimpses". webindia123.com. Retrieved 2007-10-31.
  58. ಎಲ್ಲಾ ದಾಖಲೆಗಳೂ, Cricinfo.com ಅಂತರಜಾಲತಾಣದಲ್ಲಿ ಪಟ್ಟಿಯಾಗಿರುವ ವಿಶ್ವಕಪ್‌ ದಾಖಲೆ ಗಳ ಅಂಕಿಅಂಶಗಳನ್ನು ಆಧರಿಸಿವೆ.
  59. cricinfo.com

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಇತರೆ ಕೊಂಡಿಗಳು[ಬದಲಾಯಿಸಿ]