ಎಮ್ಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಮ್ಮೆ ದಕ್ಷಿಣ ಏಷ್ಯಾ, ಮತ್ತು ದಕ್ಷಿಣ ಅಮೇರಿಕಾ, ದಕ್ಷಿಣ ಯೂರೋಪ್, ಉತ್ತರ ಆಫ಼್ರಿಕಾ, ಮತ್ತು ಇತರೆಡೆ ಜಾನುವಾರಾಗಿ ವ್ಯಾಪಕವಾಗಿ ಬಳಸಲಾಗುವ ದನದ ಜಾತಿಗೆ ಸೇರಿದ ಪ್ರಾಣಿ. ಅದು ಸೀಳುಗೊರಸುಳ್ಳ, ಮೆಲಕು ಹಾಕುವ, ಸಸ್ತನಿಗಳಾದ ಆರ್ಟಿಯೊಡ್ಯಾಕ್ಟೈಲ¯ ವರ್ಗಕ್ಕೆ ಸೇರಿದೆ. ಏಷ್ಯದ ಎಮ್ಮೆಯ ವೈಜ್ಞಾನಿಕ ಹೆಸರು ಬ್ಯುಬೇಲಸ್ ಬ್ಯುಬಾಲಿಸ್. ಇದರ ವ್ಯಾಪ್ತಿ ಈಜಿಪ್ಟಿನಿಂದ ಫಿಲಿಪೈನ್ಸ್ ವರೆಗೆ. ಎಮ್ಮೆಗಳ ಮೂಲ ವಾಸಸ್ಥಾನ ಭಾರತ ಮತ್ತು ಆಫ್ರಿಕದ ಉತ್ತರ ಪ್ರಧೇಶಗಳು. ಕ್ರಿ. ಶ. ೬೦೦ ರ ಸುಮಾರಿಗೆ ಇಟಲಿ ದೇಶಕ್ಕೆ ಮೊದಲ ಬಾರಿಗೆ ಎಮ್ಮೆಗಳು ರವಾನೆಯಾದವು. ಈಗ ಫ್ರಾನ್ಸ್, ಹಂಗೆರಿ, ಸ್ಪೇನ್ ದೇಶಗಳಲ್ಲೂ ಇವು ನೆಲೆಸಿವೆ. ಭಾರತದ ಪಶ್ಚಿಮ ಘಟ್ಟಗಳು, ಕೇರಳ, ಬಂಗಾಳ, ಅಸ್ಸಾಂ, ಒರಿಸ್ಸ, ಆಂಧ್ರಪ್ರದೇಶ, ನೇಪಾಳಗಳಲ್ಲಿ ಹುಲ್ಲು ಎತ್ತರವಾಗಿ ಬೆಳೆಯುವ ಕಾಡುಪ್ರದೇಶಗಳು ಕಾಡೆಮ್ಮೆಗಳ ವಾಸಸ್ಥಳ. ಸಿಂಹಳ ದ್ವೀಪದಲ್ಲಿ ಪಳಗಿದ ಎಮ್ಮೆಗಳು ಪುನಃ ಕಾಡನ್ನು ಸೇರಿ ಕಾಡೆಮ್ಮೆಗಳಾಗಿ ಪರಿವರ್ತನೆಗೊಂಡಿವೆ. ಸಾವಿರಾರು ವರ್ಷಗಳಿಂದಲೂ ಮನುಷ್ಯನ ಜೊತೆಯಲ್ಲಿ ಎಮ್ಮೆಗಳು ಸಾಕು ಪ್ರಾಣಿಗಳಾಗಿ ಜೀವಿಸುತ್ತಿವೆ.

ಶರೀರ[ಬದಲಾಯಿಸಿ]

ಎಮ್ಮೆಯ ಶರೀರ ಸ್ಥೂಲ, ಸುಮಾರು ೨.೫ ರಿಂದ ೩ ಮೀಟರಿನಷ್ಟು ಉದ್ದ. ೧.೫ ರಿಂದ ೧.೮ ಮೀ. ಎತ್ರ. ಭಾರ ೭೦೦ ರಿಂದ ೮೦೦ ಕಿ. ಗ್ರಾಂ. ಚರ್ಮ ದಪ್ಪ, ಕೂದಲು ವಿರಳ. ಮೈ ಬಣ್ಣ ಬೂದು ಅಥವಾ ಕಪ್ಪು. ೦.೫ ರಿಂದ ೧ ಮೀ ಉದ್ದವಾದ ಬಾಲದ ತುದಿಯಲ್ಲಿ ಬಿರುಸಾದ ಕೂದಲಿನ ಗೊಂಡೆ ಇದೆ. ತಲೆಯ ಮೇಲಿನ ಕೊಂಬುಗಳು ಬುಡದಲ್ಲಿ ಅಗಲವಾಗಿದ್ದು ಹಿಮ್ಮೊಗವಾಗಿ ಒಳಗಡೆ ಬಾಗಿರುತ್ತವೆ. ಅಡ್ಡ ಸೀಳಿಕೆಯಲ್ಲಿ ಇವು ತ್ರಿಕೋನಾಕಾರವಾಗಿವೆ. ಕೋಣದ ಕೊಂಬುಗಳು ಎಮ್ಮೆಯ ಕೊಂಬುಗಳಿಗಿಂತ ಭಾರವಾಗಿವೆ. ಕೊಂಬುಗಳ ಮೇಲೆ ಅಡ್ಡವಾದ ಸುಕ್ಕುಗಳಿವೆ. ಕಾಲಿನ ಗೊರಸುಗಳು ಪಸರಿಸಿರುವುದರಿಂದ ಎಮ್ಮೆಗಳು ಕೆಸರಿನಲ್ಲಿ ಸರಾಗವಾಗಿ ಓಡಾಡಬಲ್ಲವು. ನೀರಿನಲ್ಲಿ ನೆನೆಯುವುದು ಮತ್ತು ಕೆಸರಿನಲ್ಲಿ ಹೊರಳಾಡುವುದೆಂದರೆ ಇವುಗಳಿಗೆ ತುಂಬ ಇಷ್ಟ: ಕೆಸರು ಮೈಗೆ ಅಂಟಿಕೊಳ್ಳುವುದರಿಂದ ನೊಣವೇ ಮುಂತಾದ ಕೀಟಗಳ ಬಾಧೆ ತಪ್ಪುತ್ತದೆ.

ಬದುಕು[ಬದಲಾಯಿಸಿ]

ಹುಲ್ಲು ಎಮ್ಮೆಗಳ ಮುಖ್ಯ ಆಹಾರ. ಸೊಪ್ಪು, ಎಲೆ ಮುಂತಾದವೂ ಆಗಬಹುದು. ಮೆಲಕು ಹಾಕಿ ಅಗಿದು ತಿನ್ನುವುದಕ್ಕೆ ಅನುಕೂಲವಾಗುವಂತೆ ಜಠರದಲ್ಲಿ ನಾಲ್ಕು ಭಾಗಗಳಿವೆ. ಎಮ್ಮೆಗಳು ಸಾಮಾನ್ಯವಾಗಿ ಆಹಾರವನ್ನು ಬೆಳಿಗ್ಗೆ ಸಾಯಂಕಾಲ ಅಥವಾ ರಾತ್ರಿ ಮೇದು ಹಗಲಿನ ಬಹುವೇಳೆ ಮೆಲಕು ಹಾಕುತ್ತ ಅಥವಾ ನಿದ್ರಿಸುತ್ತ ಕಾಲಕಳೆಯುತ್ತವೆ. ಋತು ಕಾಲದಲ್ಲಿ ಒಂದು ಕೋಣ ಹಲವಾರು ಎಮ್ಮೆಗಳಿಂದ ಕೂಡಿ ಒಂದು ಸಣ್ಣ ಸಂಸಾರವನ್ನು ಕಟ್ಟುತ್ತದೆ. ಸುಮಾರು ಹತ್ತು ತಿಂಗಳ ಅನಂತರ ಒಂದು ಅಥವಾ ಎರಡು ಕರುಗಳು ಹುಟ್ಟುತ್ತವೆ. ಹುಟ್ಟಿದ ಸ್ವಲ್ಪ ಸಮಯದಲ್ಲೇ ಕರು ತಾಯನ್ನು ಹಿಂಬಾಲಿಸುತ್ತದೆ. ಎಮ್ಮೆಯ ಜೀವಿತ ಕಾಲ ಸುಮಾರು ಹದಿನೆಂಟು ವರ್ಷಗಳು. ಹಾಲುಕರೆಯುವ ಎಮ್ಮೆಗಳಿಗೆ ತಮ್ಮ ಕರುಗಳ ಮೇಲೆ ತುಂಬ ಮಮತೆ; ತಮ್ಮನ್ನು ಸಾಕುವ ಯಜಮಾನರನ್ನು ಚೆನ್ನಾಗಿ ನೆನೆಪಿಟ್ಟುಕೊಳ್ಳುತ್ತವೆ ; ಹಾಲುಕರೆಯುವ ಆಳು ಬದಲಾದಾಗ, ಆಹಾರದಲ್ಲಿ ಕ್ರಮರಾಹಿತ್ಯ ತಲೆದೋರಿದರೆ, ಪಕ್ಕದಲ್ಲಿ ವಾಸಿಸುವ ಜೊತೆಯ ಪ್ರಾಣಿ ಕಾಣದಾದಾಗ ಕರೆಯುವ ಎಮ್ಮೆಯ ಹಾಲು ಇದ್ದಕ್ಕಿದ್ದ ಹಾಗೆ ಕಡಿಮೆಯಾಗುವುದುಂಟು ; ಅದಕ್ಕೆ ಮೈಸ್ವಸ್ಥವಿಲ್ಲದಾಗಲೂ ಈ ಪರಿಣಾಮವಾಗುವುದುಂಟು ; ಈ ಎಲ್ಲ ಕಾರಣಗಳಿಂದ ಎಮ್ಮೆಯ ಸಾಕಾಣಿಕೆ ತುಂಬ ಸೂಕ್ಷ್ಮ ರೀತಿಯ ಕಸಬೆಂದು ಹೇಳುವುದುಂಟು.

ಉಪಯೋಗ[ಬದಲಾಯಿಸಿ]

ಎಮ್ಮೆಗಳು ಭಾರವಾದ ಸಾಮಾನುಗಳನ್ನು ಹೊರುತ್ತವೆ. ನೇಗಿಲು ಎಳೆಯುತ್ತವೆ. ಈ ಶ್ರಮದ ಕೆಲಸಕ್ಕಾಗಿಯೂ ತೊಗಲು, ಹಾಲು, ಮಾಂಸಗಳಿಗಾಗಿಯೂ ಇವನ್ನು ಸಾಕುತ್ತಾರೆ. ತೊಗಲಿನಿಂದ ಚರ್ಮದ ಪದಾರ್ಥಗಳನ್ನೂ ಕೊಂಬಿನಿಂದ ಬಾಚಣಿಗೆ ಮೊದಲಾದುವನ್ನೂ ಮಾಡುತ್ತಾರೆ. ಚೌಗು ಪ್ರದೇಶದಲ್ಲಿ ಎತ್ತುಗಳೂ ಒಗ್ಗದ ಕಾರಣ, ಎಮ್ಮೆಗಳು ವ್ಯವಸಾಯಕ್ಕೆ ಮುಖ್ಯವಾಗಿ ಬತ್ತವನ್ನು ಬೆಳೆಯುವ ಗದ್ದೆಗಳಲ್ಲಿ ಬಳಕೆಗೆ ಬಂದಿವೆ. ಇಂಡೊನೇಷ್ಯ, ಮಲಯ, ಚೀನ ದೇಶಗಳಲ್ಲಿ ಲಕ್ಷಾಂತರ ಎಮ್ಮೆಗಳು ಗದ್ದೆ ಕೆಲಸಗಳಿಗೆ ಒದಗಿವೆ.

ಎಮ್ಮೆಗಳು - ಎಲ್ಲೆಲ್ಲಿ[ಬದಲಾಯಿಸಿ]

೨೦೦೦ರಲ್ಲಿ, ವಿಶ್ವಸಂಸ್ಥೆಆಹಾರ ಮತ್ತು ಕೃಷಿ ಸಂಘಟನೆ ವಿಶ್ವದಲ್ಲಿ ಸುಮಾರು ೧೫೮ ಮಿಲಿಯ ಎಮ್ಮೆಗಳಿದ್ದವೆಂದು, ಮತ್ತು ಇವುಗಳಲ್ಲಿ ಶೇಕಡ ೯೭ರಷ್ಟು (ಸುಮಾರು ೧೫೩ ಮಿಲಿಯ ಪ್ರಾಣಿಗಳು) ಏಷ್ಯಾದಲ್ಲಿದ್ದವೆಂದು ಅಂದಾಜಿಸಿತು. ಉತ್ತರ ಆಸ್ಟ್ರೇಲಿಯಾದಲ್ಲಿ ಪ್ರಮಾಣೀಕರಿಸಲಾದ ಪಳಗಿಲ್ಲದ ಪ್ರಾಣಿಗಳಿವೆ, ಆದರೆ ನಶಿಸುತ್ತಿರುವ ನೈಜ ಕಾಡು ಎಮ್ಮೆಗಳು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಭೂತಾನ್, ಮತ್ತು ಥೈಲೆಂಡ್‌ನಲ್ಲಿ ಉಳಿದುಕೊಂಡಿವೆಯೆಂದು ನಂಬಲಾಗಿದೆ.

ಆಫ್ರಿಕದ ಎಮ್ಮೆಗಳು ಏಷ್ಯದ ಎಮ್ಮೆಗಳಿಗಿಂತ ಗಾತ್ರದಲ್ಲಿ ದೊಡ್ಡವು. ಹುಲ್ಲು ಮತ್ತು ಜೊಂಡು ಎತ್ತರವಾಗಿ ಬೆಳೆದು, ಅಡಗಿಕೊಳ್ಳಲು ಮರೆಯನ್ನು ಕೊಡುವಂಥ ಮತ್ತು ನೀರಿನ ವಸತಿ ದೊರಕುವಂಥ ಸಹರ ಮರುಭೂಮಿಯ ದಕ್ಷಿಣದಲ್ಲಿರುವ ಕಾಡು ಪ್ರದೇಶಗಳಲ್ಲಿ ಇವು ಹಿಂಡುಹಿಂಡಾಗಿ ಸ್ವೇಚ್ಛೆಯಾಗಿ ವಾಸಿಸುತ್ತವೆ. ಆಫ್ರಿಕದ ಎಮ್ಮೆಗಳನ್ನು ಪಳಗಿಸಲು ಸಾಧ್ಯವಾಗಿಲ್ಲ. ಒಂದು ಹಿಂಡಿನಲ್ಲಿ ಹತ್ತಾರು ಪ್ರಾಣಿಗಳಿಂದ ಹತ್ತಿಪ್ಪತ್ತು. ನೂರಾರು ಪ್ರಾಣಿಗಳಿರಬಹುದು. ವಯಸ್ಸಾದ ಹೆಣ್ಣು ಎಮ್ಮೆ ಹಿಂಡಿನ ಮುಂದಾಳು. ಬೇಟೆಗೀಡಾಗಿರುವ ಅತ್ಯಂತ ಭಾರಿ ಮತ್ತು ಭಯಂಕರ ಪ್ರಾಣಿಗಳಲ್ಲಿ ಆಫ್ರಿಕದ ಕಾಡೆಮ್ಮೆ ಪ್ರಸಿದ್ಧವಾಗಿದೆ. ಇದರ ಬೇಟೆ ಬಹಳ ಪ್ರಯಾಸಕರ ಮತ್ತು ಅಪಾಯಕಾರಿ. ಗಾಯಹೊಂದಿದ ಅಥವಾ ರೇಗಿದ ಕಾಡೆಮ್ಮೆ ಯಾವ ಸೂಚನೆಯನ್ನೂ ಕೊಡದೆ ಹೊಂಚು ಹಾಕಿ ಬೇಟೆಗಾರರ ಮೈಮೇಲೆ ರಭಸದಿಂದ ನುಗ್ಗಿ ಆಕ್ರಮಿಸುತ್ತದೆ. ಆಕ್ರಮಣ ಫಲಪ್ರದವಾಗದಿದ್ದಲ್ಲಿ ಬೇಟೆಗಾರರನ್ನು ಹಿಂಬಾಲಿಸಿ ವೈರ ಸಾಧಿಸಲು ಪ್ರಯತ್ನಿಸುತ್ತದೆ. ಇದು ಗಂಟೆಗೆ ೫೭ ಕಿ. ಮೀ. ವೇಗವಾಗಿ ಓಡಬಲ್ಲದು. ಮನುಷ್ಯನನ್ನು ಬಿಟ್ಟರೆ ಸಿಂಹವೊಂದೇ ತನ್ನ ಆಹಾರಕ್ಕಾಗಿ ಇದರ ಬೇಟೆಯಾಡುತ್ತದೆ. ಸೆಲಿಬಸ್ ದ್ವೀಪಗಳಲ್ಲಿ ಕುಳ್ಳು ಜಾತಿಯ ಎಮ್ಮೆಗಳಿವೆ. ನೀರಿನ ವಸತಿಯಿರುವ ಮತ್ತು ಬಿದಿರು ಮೆಳೆಗಳಿರುವ ಕಾಡು ಪ್ರದೇಶದಲ್ಲಿ ಇವು ವಾಸಿಸುತ್ತವೆ. ಇವುಗಳ ದೇಹ ಗುಂಡು ಗುಂಡಾಗಿದ್ದು, ಕಾಲು, ಬಾಲ ಕೊಂಬುಗಳು ಮೊಟಕಾಗಿರುತ್ತವೆ. ಚರ್ಮ, ಕೊಂಬು ಮತ್ತು ಮಾಂಸಕ್ಕಾಗಿ ಇವುಗಳ ಬೇಟೆ ಅತಿಯಾಗಿ ನಡೆಯುತ್ತಿರುವುದರಿಂದ, ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ನಾಗರಿಕತೆ ಮತ್ತು ಜನರ ಒತ್ತಡ ಹೆಚ್ಚುತ್ತ ಹೋದಂತೆ ಇವುಗಳ ಸಂಖ್ಯೆ ಕಡಿಮೆಯಾಗುತ್ತ ಬಂದಂತೆ ಕಾಣುತ್ತದೆ. ಉತ್ತರ ಅಮೆರಿಕದಲ್ಲಿ ಐರೋಪ್ಯರು ವಲಸೆ ಹೋದಾಗ ಸುಮಾರು ೬ ಕೋಟಿ ಕಾಡೆಮ್ಮೆಗಳು ಇದ್ದುದಾಗಿಯೂ ವಲಸೆ ಹೋದ ಐರೋಪ್ಯರು ಈ ಎಮ್ಮೆಗಳನ್ನು ನಾಶಮಾಡಿದರೆಂದೂ ಹೇಳಲಾಗಿದೆ. ಭಾರತದಲ್ಲಿ ಎಮ್ಮೆಗಳನ್ನು ಅನೇಕ ಶತಮಾನಗಳಿಂದ ಪಳಗಿಸಿ ಸಾಕುತ್ತಿದ್ದಾರೆ. ಉತ್ಪತ್ತಿಯಾಗುವ ಹಾಲಿನ ಅರ್ಧ ಭಾಗದಷ್ಟು ಎಮ್ಮೆಗಳಿಂದ ಬರುತ್ತದೆ. ಪರದೇಶದ ಎಮ್ಮೆಗಳಿಗಿಂತ ಭಾರತ ಮತ್ತು ಪಾಕಿಸ್ತಾನದ ಎಮ್ಮೆಗಳು ಉತ್ಕೃಷ್ಟವಾದವು. ಪ್ರಪಂಚದ ಎಮ್ಮೆಗಳ ಸಂಖ್ಯೆ ಮತ್ತು ಹಂಚಿಕೆ

ದೇಶ ವರ್ಷ ಸಂಖ್ಯೆ
ಭಾರತ ೧೯೬೧ ೫,೧೧,೩೭,೦೦೦
ಸಿಲೋನ್/ಶ್ರೀಲಂಕಾ ೧೯೬೨ ೬,೬೭,೦೦೦
ಬರ್ಮ ೧೯೬೩ ೧೦,೪೯,೦೦೦
ಪಾಕಿಸ್ತಾನ ೧೯೬೨-೬೩ ೬೩,೧೯,೦೦೦
ಇಂಡೊನೇಷ್ಯ ೧೯೬೧ ೨೭,೯೨,೦೦೦
ಮಲೇಷ್ಯಾ ೧೯೬೨ ೨,೭೬,೦೦೦
ಥೈಲ್ಯಾಂಡ್ ೧೯೬೩ ೬೯,೧೫,೦೦೦
ಟರ್ಕಿ ೧೯೬೨ ೧೧,೬೦,೦೦೦
ಸಂಯುಕ್ತ ಅರಬ್ಬೀ ಗಣರಾಜ್ಯ ೧೯೬೧-೬೨ ೧೫,೮೮,೦೦೦
ವಿಯೆಟ್ನಾಂ ೧೯೬೧ ೭,೫೪,೦೦೦

ಎಮ್ಮೆಗಳು- ಭಾರತದಲ್ಲಿ[ಬದಲಾಯಿಸಿ]

  • ಭಾರತದ ಎಮ್ಮೆಗಳಲ್ಲಿ ಮುಖ್ಯವಾಗಿ ಎಂಟು ಜಾತಿಗಳಿವೆ. ಈ ಎಲ್ಲ ಜಾತಿಗಳೂ ಹಾಲಿಗೆ ಹೆಸರಾಗಿವೆ. ಇವುಗಳಲ್ಲಿ ಮುರ್ರಾ ಜಾತಿ ಎಮ್ಮೆ ಎಲ್ಲ ಜಾತಿಗಿಂತ ಉತ್ಕೃಷ್ಟವಾದದ್ದು. ಮುರ್ರಾ ಜಾತಿಯ ಎಮ್ಮೆಗಳು ಪಂಜಾಬ್ ರಾಜ್ಯದ ರೋಥಕ್, ಹಿಸ್ಸಾರ್, ಗುರ್‍ಗಾಂ ಮತ್ತು ಕಾರ್ನಾಲ್ ಜಿಲ್ಲೆಗಳಲ್ಲಿ ಹೇರಳವಾಗಿವೆ. ಈ ಎಮ್ಮೆಗೆ ದಪ್ಪನೆಯ ಶರೀರ, ಸಣ್ಣತಲೆ, ಗುಂಗುರು ಸುಳಿಯಾಗಿರುವ ಮೋಟು ಕೋಡು, ಮೋಟಾದ ಕಾಲುಗಳು ಮತ್ತು ನೀಳವಾದ ಬಾಲ ಇವೆ. ಇವು ಒಂದು ಸೂಲಿನಲ್ಲಿ ೩,೦೦೦ ರಿಂದ ೪,೫೦೦ ಪೌಂಡು ಹಾಲು ಕೊಡುತ್ತವೆ.
  • ನೀಲಿ ರವಿ ಜಾತಿ ಎಮ್ಮೆಗಳು ಆಕಾರದಲ್ಲಿ ಮುರ್ರಾ ಜಾತಿಯ ಹಾಗೇ ಇವೆ. ಆದರೆ ಹಣೆ, ಕಾಲು ಗೊರಸು, ಬಾಲಗಳ ಮೇಲೆ ಬಿಳಿ ಕೂದಲಿದೆ. ಕಣ್ಣುಗಳು ಬೆಕ್ಕಿನ ಕಣ್ಣಿನಂತೆ. 250 ದಿವಸದ ಒಂದು ಸೂಲಿನ ಅವಧಿಯಲ್ಲಿ ೩,೦೦೦ ರಿಂದ ೩,೫೦೦ ಪೌಂಡು ಹಾಲು ಕೊಡುತ್ತವೆ. ಈ ಜಾತಿಯ ಎಮ್ಮೆಯ ವಾಸಸ್ಥಾನ ಪಾಕಿಸ್ತಾನದ ಮಾಂಟಿಗೋಮಾರಿ ಜಿಲ್ಲೆ ಮತ್ತು ಪಂಜಾಬಿನ ಫಿರೋಜ್ಪುರ ಜಿಲ್ಲೆ.
  • ಸುರ್ತಿ ಜಾತಿಯ ಎಮ್ಮೆಗಳು ಗುಜರಾತಿನ ಸಾಬರಮತಿ ನದಿಯ ದಡದಲ್ಲಿವೆ. ಕೋಡುಗಳು ಉದ್ದವಾಗಿ ಕುಡುಗೋಲಿನ ಆಕಾರದಲ್ಲಿ ಬೆನ್ನಿನಮೇಲೆ ಬಾಗಿ ನಿಂತಿರುತ್ತವೆ. ಹಣೆಯ ಮೇಲೆ ಮತ್ತು ಗಂಟಲ ಕೆಳಗೆ ಬಿಳಿ ಕೂದಲಿದೆ. ಒಂದು ಸೂಲಿಗೆ ೩,೫೦೦ ರಿಂದ ೫,೦೦೦ ಪೌಂಡು ಹಾಲು ಕರೆಯುತ್ತವೆ. ಬೆಣ್ಣೆಯ ಅಂಶ ೭.೫%.
  • ಜಾಫರಬಾದಿ ಜಾತಿ ಎಮ್ಮೆಗಳು ಕಾಥೇವಾಡದ ಭಾವನಗರದಲ್ಲಿ ಹೇರಳವಾಗಿವೆ. ಹಣೆ ಮತ್ತು ಕಾಲಿನ ಮೇಲೆ ಬಿಳಿ ಮಚ್ಚೆಗಳಿವೆ. ಕೋಡು ಸುಮಾರು ಒಂದು ಮೊಳದುದ್ದವಿದೆ. ದಿನವೊಂದಕ್ಕೆ ೩೦ ರಿಂದ ೪೦ ಪೌಂಡು ಹಾಲು ಕರೆಯುತ್ತವೆ. ಮೆಹಸಾನ ಜಾತಿಯ ಎಮ್ಮೆಗಳ ವಾಸಸ್ಥಾನ ಹಿಂದಿನ ಬರೋಡ ಸಂಸ್ಥಾನ. ಈ ಎಮ್ಮೆಗಳಲ್ಲಿ ಮುರ್ರಾ ಮತ್ತು ಸುರ್ತಿ ಲಕ್ಷಣಗಳೆರಡೂ ಕಾಣುತ್ತವೆ. ದಿನವೊಂದಕ್ಕೆ ಸುಮಾರು ೨೫ ರಿಂದ ೩೦ ಪೌಂಡು ಹಾಲುಕೊಡುತ್ತವೆ. ನಾಗಪುರಿ ಜಾತಿಯ ಎಮ್ಮೆಗಳು ನಾಗಪುರ, ವರ್ಧ ಮತ್ತು ಬೀರಾರ್ ಜಿಲ್ಲೆಗಳಲ್ಲಿ ಇವೆ. ಈ ಜಾತಿಯ ಕೋಣಗಳು ಕೆಲಸಕ್ಕೆ ಹೆಸರುವಾಸಿಯಾಗಿವೆ. ಎಮ್ಮೆಗಳು ದಿವಸಕ್ಕೆ ಸುಮಾರು ೧೨ ರಿಂದ ೧೬ ಪೌಂಡು ಹಾಲು ಕರೆಯುತ್ತವೆ. ಕೋಡು ಸುಮಾರು ಒಂದು ಗಜ ಉದ್ದವಿದ್ದು ಬೆನ್ನಿನಮೇಲೆ ಬಾಗಿದೆ.
  • ಪರ್ಲಾಕಿಮಿಡಿ ಜಾತಿಯ ಎಮ್ಮೆಗಳು ಒರಿಸ್ಸ ರಾಜ್ಯದ ಪರ್ಲಾಕಿಮಿಡಿ ಸಂಸ್ಥಾನದಲ್ಲಿವೆ. ಈ ಜಾತಿಯ ಕೋಣಗಳು ಕೆಸರುಗದ್ದೆಯ ಉಳುಮೆಗೆ ಹೆಸರುವಾಸಿಯಾಗಿವೆ. ಎಮ್ಮೆಯ ಬಣ್ಣ ಕಂದು, ಕೋಡು ನೀಳವಾಗಿದೆ. ದಿನವೊಂದಕ್ಕೆ ಸರಾಸರಿ ೧೦ ಪೌಂಡು ಹಾಲು ಕೊಡುತ್ತವೆ.
  • ತೋಡ ಜಾತಿಯ ಎಮ್ಮೆಗಳನ್ನು ನೀಲಗಿರಿಯಲ್ಲಿ ವಾಸಿಸುವ ತೋಡರು ಸಾಕುತ್ತಾರೆ. ಎಮ್ಮೆಗಳು ಆಕಾರದಲ್ಲೂ ಸ್ವಭಾವದಲ್ಲೂ ಕಾಡೆಮ್ಮೆಗಳನ್ನು ಹೋಲುತ್ತವೆ. ಹೆಗಲ ಮೇಲೆ ದಪ್ಪವಾದ ಕೂದಲು ಬೆಳೆದಿದೆ. ಹಾಲಿಗೆ ಹೆಸರಾಗಿವೆ. (ನೋಡಿ- ಆರ್ಟಿಯೊಡ್ಯಾಕ್ಟೈಲ)

ಜಾಫ್ರಾಬಾದಿ[ಬದಲಾಯಿಸಿ]

  • ೨೪ ಜನವರಿ, ೨೦೧೭
  • ಒಂದು ಜಾಫ್ರಾಬಾದಿಯ ಬೆಲೆ ೮೦ ಸಾವಿರದಿಂದ ೧.೧೦ ಲಕ್ಷ ರೂಪಾಯಿವರೆಗೆ ಇದೆ. ಇವುಗಳ ವಿಶೇಷತೆ ಎಂದರೆ ಒಂದು ಹೈನಿನಲ್ಲಿ ಎರಡು ಸಾವಿರ ಲೀಟರ್ ಹಾಲು ಕೊಡುತ್ತವೆ. ದಿನಕ್ಕೆ ೧೬ ಲೀಟರ್ ಹಾಲು ನೀಡುತ್ತದೆ. ಸ್ಥಳೀಯ ಎಮ್ಮೆಗಳಿಗಿಂತ ಜಾಫ್ರಾಬಾದಿ ತಳಿ ಎಮ್ಮೆಗಳು ಕೊಡುವ ಹಾಲಿನಲ್ಲಿ ಅಧಿಕ ಕೊಬ್ಬಿನಾಂಶ ಇರುತ್ತದೆ ಎನ್ನುತ್ತಾರೆ ಪಶು ವೈದ್ಯಾಧಿಕಾರಿ ಡಾ.ಎಸ್.ಎಸ್.ಬಿರಾದಾರ.
  • ಒಂದು ದಿನಕ್ಕೆ ಹಿಂಡಿ, ಹಸಿಹುಲ್ಲು, ಒಣಮೇವು ಸೇರಿದಂತೆ ೩೦ ಕೆ.ಜಿ ಆಹಾರ ಇವುಗಳಿಗೆ ಬೇಕಾಗುತ್ತದೆ. ಎಮ್ಮೆಗಳು ೩೬ ತಿಂಗಳಿಗೇ ವಯಸ್ಸಿಗೆ ಬಂದು ಗರ್ಭಧರಿಸಲು ಶಕ್ತವಾಗುತ್ತವೆ. ವಯಸ್ಸಿಗೆ ಬಂದ ಎಮ್ಮೆಗಳ ದೇಹದ ತೂಕ ೫೦೦ ರಿಂದ ೭೦೦ ಕೆ.ಜಿಯಷ್ಟು ಇರುತ್ತದೆ. ಸ್ಥಳೀಯ ತಳಿಗಳ ಎಮ್ಮೆಗಳನ್ನು ಸುಧಾರಿಸಲು ಅವುಗಳ ಜೊತೆ ಜಾಫ್ರಾಬಾದಿ ತಳಿಗಳನ್ನು ಸಾಕಿದರೆ ರೈತರಿಗೆ ಅನುಕೂಲ.[೧]

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಅಧಿಕ ಹಾಲಿಗೆ ಜಾಫ್ರಾಬಾದಿ ಎಮ್ಮೆ;ಶಿ.ಗು. ಹಿರೇಮಠ;24 Jan, 2017". Archived from the original on 2017-06-11. Retrieved 2017-02-07.
"https://kn.wikipedia.org/w/index.php?title=ಎಮ್ಮೆ&oldid=1201874" ಇಂದ ಪಡೆಯಲ್ಪಟ್ಟಿದೆ