ಉದಾರವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದಾರವಾದ: ಸರ್ಕಾರ, ಸಮಾಜ ಹಾಗೂ ವ್ಯಕ್ತಿಗಳಿಗೆ ಅನ್ವಯಿಸುವ ಒಂದು ನಂಬಿಕೆ, ದರ್ಶನ ಹಾಗೂ ಚಳವಳಿ; ವ್ಯಕ್ತಿಸ್ವಾತಂತ್ರ್ಯವನ್ನೇ ಪ್ರಧಾನವಾಗಿ ಎತ್ತಿಹಿಡಿದು, ಇದಕ್ಕನುಗುಣವಾಗಿ ಸರ್ಕಾರದ ರೀತಿನೀತಿಗಳೂ ಸಮಾಜವ್ಯವಸ್ಥೆಯೂ ಸಮಷ್ಟಿ ದೃಷ್ಟಿಯೂ ನೇರ್ಪುಗೊಳ್ಳಬೇಕೆಂಬ ಅಭಿಪ್ರಾಯ ಸಮುದಾಯ (ಲಿಬರಲಿಸಂ). 19ನೆಯ ಶತಮಾನದಲ್ಲಿ ಸ್ಪೇನಿನಲ್ಲಿದ್ದ ಲಿಬರೇಲ್ಸ್‌ ಎಂಬ ರಾಜಕೀಯ ಪಕ್ಷ ಜನ್ಮತಳೆದಾಗಿನಿಂದ ಇಂಗ್ಲಿಷಿನ ಲಿಬರಲಿಸಂ ಎಂಬ ಪದ ಹೆಚ್ಚು ಪ್ರಚಾರದಲ್ಲಿದೆ.

ಕಲ್ಪನೆ[ಬದಲಾಯಿಸಿ]

ಆದರೆ ಇದರ ಹಿಂದಿನ ಅಭಿಪ್ರಾಯ ಇಷ್ಟೊಂದು ಈಚಿನದೇನೂ ಅಲ್ಲ. ಸ್ವಾತಂತ್ರ್ಯದ ಕಲ್ಪನೆ ಬಂದಾಗಿನಿಂದಲೇ ಉದಾರವಾದದ ಕಲ್ಪನೆಯೂ ಜನಮನದಲ್ಲಿ ಬೇರೂರಿ ಬೆಳೆದಿದೆ. ಲಿಬರ್ಟಿಗೂ (ಸ್ವಾತಂತ್ರ್ಯ) ಲಿಬರಲಿಸಂಗೂ ನೇರವಾದ ಸಂಬಂಧವುಂಟು.

ಉದಾರವಾದ ಭಾವನೆ ಎಷ್ಟು ಹಳೆಯದೋ ಇದರ ಅರ್ಥವೂ ಅಷ್ಟೇ ಗೊಂದಲಮಯ ವಾದದ್ದು. ಶತಮಾನದಿಂದ ಶತಮಾನಕ್ಕೆ ಬೇರೆಬೇರೆ ಅರ್ಥವ್ಯಾಪ್ತಿಗಳಿಗೆ ಇದು ಒಳಪಟ್ಟಿದೆ. ಉದಾರವಾದಿಯೆಂದು ಹೇಳಿಕೊಳ್ಳುವ ಅನೇಕ ರಾಜಕೀಯ ಪಕ್ಷಗಳು 20ನೆಯ ಶತಮಾನ ದಲ್ಲೂ ಉಂಟು. ಸ್ವಾತಂತ್ರ್ಯ ಪೂರ್ವಕಾಲದಲ್ಲಿ ಭಾರತದಲ್ಲೂ ಲಿಬರಲ್ ಪಕ್ಷವೊಂದಿತ್ತು. ಉದಾರವಾದಿ ಅಂತಾರಾಷ್ಟ್ರೀಯ ಸಂಸ್ಥೆಯೂ ಇಲ್ಲದಿಲ್ಲ. ಈ ಎಲ್ಲ ಪಕ್ಷಗಳ ಗುರಿ ಉದಾರದೃಷ್ಟಿ. ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರದ ಪ್ರವೇಶ ಕನಿಷ್ಠ ಮಟ್ಟದಲ್ಲಿರಬೇಕೆಂದೂ ವ್ಯಕ್ತಿಗೆ ಆರ್ಥಿಕ ಸ್ವಾತಂತ್ರ್ಯವಿರಬೇಕೆಂದೂ ಇವುಗಳ ವಾದ. ಆಧುನಿಕ ಜಗತ್ತಿನಲ್ಲಿ ಒಂದು ಕಡೆಯಿಂದ ಕಮ್ಯೂನಿಸಂ ಹಾಗೂ ಸಮಾಜವಾದಗಳೂ ಇನ್ನೊಂದು ಕಡೆಯಿಂದ ಬಲಪಕ್ಷೀಯ ಕೇಂದ್ರಾಧಿಕಾರವೂ ವ್ಯಕ್ತಿಯನ್ನೂ ಆತನ ಚಟುವಟಿಕೆಗಳನ್ನೂ ನಜ್ಜುಗುಜ್ಜು ಮಾಡುತ್ತಿವೆ. ಆತನನ್ನು ಇವೆರಡರಿಂದಲೂ ವಿಮೋಚನೆಗೊಳಿಸಿ ಆತನ ವಿಕಾಸಕ್ಕೆ ಅನುವು ಮಾಡಿಕೊಡಬೇಕೆಂಬುದು ಈ ಪಕ್ಷಗಳ ಉದ್ದೇಶ.

ಆದರೂ ಉದಾರವಾದದ ಕಲ್ಪನೆ ಯಾವ ಒಂದು ನಿಲವಿಗೂ ಸೀಮಿತವಾದದ್ದಲ್ಲ. 18-19ನೆಯ ಶತಮಾನಗಳಲ್ಲಿ ಇದು ಬಲು ಕ್ರಾಂತಿಕಾರೀ ಭಾವನೆಯೆನಿಸಿತ್ತು. ಅನೇಕ ಕ್ರಾಂತಿಪರ ಭಾವನೆಗಳು ಇದರ ಹೊಟ್ಟೆಯಲ್ಲಿ ಅಡಕವಾಗಿವೆ. ಯಾವ ಒಂದು ಆರ್ಥಿಕ ಕ್ರಮಕ್ಕಾಗಲಿ ಸಾಮಾಜಿಕ ವ್ಯವಸ್ಥೆಗಾಗಲಿ ಕಟ್ಟುಬೀಳದ ಈ ದರ್ಶನದ ವೈಶಿಷ್ಟ್ಯವೆಂದರೆ ವ್ಯಕ್ತಿಸ್ವಾತಂತ್ರ್ಯ, ವ್ಯಕ್ತಿಸ್ವಾತಂತ್ರ್ಯವೇ ಇದರ ಧರ್ಮ ಹಾಗೂ ವಿಧಾನ, ಸಾಧನ ಹಾಗೂ ಸಾಧನೀಯ.

ಇತಿಹಾಸ[ಬದಲಾಯಿಸಿ]

ಮಾನವಚೇತನದ ವಿಕಾಸ ಹಾಗೂ ಸಾರ್ಥಕತೆಗೂ ವ್ಯಕ್ತಿಸ್ವಾತಂತ್ರ್ಯಕ್ಕೂ ನೇರವಾದ ಸಂಬಂಧವಿದೆಯೆಂಬ ಭಾವನೆಯ ಉಗಮವಾದಂದಿನಿಂದಲೂ ಉದಾರವಾದ ಬೆಳೆದುಕೊಂಡು ಬಂದಿದೆಯೆನ್ನಬಹುದು. ಪ್ರಾಣವನ್ನೇ ತೆತ್ತೇನು, ಆದರೆ ನಿಜಕ್ಕೆ ಅಂಟಿಕೊಂಡೇ ಇದ್ದೇನು-ಎಂಬ ಸಾಕ್ರಟೀಸನ ದಿಟ್ಟ ನಿಲವಿನ ಹಿಂದೆ ಇದ್ದದ್ದು ಇದೇ ದೃಷ್ಟಿ; ಜನಾಂಗದ ಕಟ್ಟುಪಾಡುಗಳಿಗೂ ನಗರ ಸರ್ಕಾರಗಳ ನಿಷ್ಠುರ ನಿಯಮಗಳಿಗೂ ವಿರುದ್ಧವಾಗಿ ಸಿಡಿದೆದ್ದ ಸ್ವತಂತ್ರ್ಯ ಆತ್ಮದ ಆರ್ತಧ್ವನಿ.

ಈ ಬಿಡುಗಡೆಯ ಮಾತಿಗೆ ಅರ್ಥಪುಷ್ಟಿ ಬಂದದ್ದು ಮುಂದೆ-ಸ್ಟೋಯಿಕರ ಕಾಲದಲ್ಲಿ. ಗುಂಪಿನ ಕಟ್ಟು ಸಡಿಲವಾಗಿ ಮಾನವನ ವಿಶ್ವವ್ಯಾಪಕಗುಣಕ್ಕೆ ಸಾರ್ವತ್ರಿಕ ಮಾನ್ಯತೆ ದೊರಕಿದ್ದು ಆಗ. ಮಾನವನ ವ್ಯಕ್ತಿತ್ವಕ್ಕೆ ಧರ್ಮದಲ್ಲಿ ಪುರಸ್ಕಾರ ದೊರಕುವಂತೆ ಆದದ್ದು ಕ್ರಿಸ್ತೋದಯದ ಫಲವೆನ್ನಬಹುದು.

ಆಗಿನಿಂದ ಅವಿಚ್ಛಿನ್ನವಾಗಿ ಹರಿದು ಬಂದ ಈ ಭಾವನೆಗಳಿಗೆ ಒಂದು ಮಾರ್ಗ ನಿರ್ಮಿಸಿದವರೆಂದರೆ 17ನೆಯ ಶತಮಾನದ ಚಿಂತನಶೀಲರಾದ ಡೇಕಾರ್ಟ್, ಮಿಲ್ಟನ್, ಮತ್ತು ಸ್ಪಿನೋಝ. ಯುಕ್ತಾಯುಕ್ತ ಪರಿಜ್ಞಾನ ವಿಧಾನವನ್ನು ರಚಿಸಿದವ ಡೇಕಾರ್ಟ್. ತರ್ಕಜೀವನಕ್ಕೂ ವಿಕಸನಶೀಲ ಉದಾರದೃಷ್ಟಿಯ ಮೌಲ್ಯಗಳಿಗೂ ಸಂಬಂಧ ರಚಿಸಿದವ ಸ್ಪಿನೊಝ. ಮಾನವನನ್ನು ಬಂಧಿಸಿದ್ದ ದಾಸ್ಯ ಅಜ್ಞಾನಗಳ ವಿರುದ್ಧವಾಗಿಯೂ ಸತ್ಯದ ಕೈಕಾಲು ಕಟ್ಟುವ ನಿಷೇಧಾಜ್ಞೆಗಳ ವಿರುದ್ದವಾಗಿಯೂ ಉಗ್ರ ಹೋರಾಟ ನಡೆಸಿದ ಕೆಚ್ಚುಗಾರ ಮಿಲ್ಟನ್. ಇವರು ಮೂವರೂ ಒಟ್ಟಾಗಿ ಎಲ್ಲ ಪ್ರತಿಗಾಮೀ ಶಕ್ತಿಗಳನ್ನೂ ಎದುರಿಸಿದರು. ಇವರ ಚಿಕಿತ್ಸಕದೃಷ್ಟಿಗೆ ಆಡಳಿತ ಹಾಗೂ ಮತೀಯ ವ್ಯವಸ್ಥೆಗಳೂ ಹೊರತಾಗಲಿಲ್ಲ. ಹೆಪ್ಪುಗಟ್ಟಿದ ಎಲ್ಲ ವ್ಯವಸ್ಥೆಗಳೂ ಇವರ ವೈಚಾರಿಕ ವಿಧಾನದ ಬಿಸಿಗೆ ಕರಗಿದುವು. ಪ್ರಾಟೆಸ್ಟೆಂಟರ ಆಂದೋಲನದ ಪರವಾಗಿ ವ್ಯಕ್ತಿಯ ವಿಚಾರಮತಿಗೆ ದೊರಕಿದ್ದ ಪುರಸ್ಕಾರದ ಅಡಿಗಲ್ಲಿನ ಮೇಲೆ ಈ ಮೂವರೂ ಮಾಡಿದ ಸಾಧನೆ ಅಲ್ಪವೇನಲ್ಲ.

ಎಲ್ಲಕ್ಕಿಂತ ಪ್ರಬಲವಾದ ಪ್ರಭಾವವೆಂದರೆ ವಿಜ್ಞಾನ ಕ್ರಾಂತಿ. ಕಾಲದೇಶಗಳ ಹೊಸ ಆಯಾಮಗಳನ್ನು ಮಾನವನ ಮುಂದೆ ತೆರೆದಿಟ್ಟು, ಅವನ ದೃಷ್ಟಿಯನ್ನು ಸ್ವರ್ಗಲೋಕದಿಂದ ಇಳೆಗೆ ಇಳಿಸಿದ್ದು ವಿಜ್ಞಾನ. ಪುನರುಜ್ಜೀವನಕಾಲದಲ್ಲಿ ಇದು ವಾಮನನಂತೆ ತೊಡಗಿ, 16-17ನೆಯ ಶತಮಾನಗಳಲ್ಲಿ ತ್ರಿವಿಕ್ರಮನಂತೆ ಬೆಳೆದು, ಪರಿಸರದ ಮೇಲೆ ಮಾನವನ ಹಿಡಿತವನ್ನು ಹೆಚ್ಚಿಸಿ, ಈ ಸತ್ಫಲಗಳನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬಲ್ಲ ಹೊಸ ಆರ್ಥಿಕ ವರ್ಗವೊಂದಕ್ಕೆ ಜನ್ಮವಿತ್ತು, ಹೊಸ ವಿಚಾರವಾದಿಗಳ ಶ್ರೇಣಿಯೊಂದರ ನಿರ್ಮಾಣಕ್ಕೆ ಕಾರಣವಾಯಿತು.

ಆಗಿನ ಕಾಲದಲ್ಲಿ ಪ್ರಕಟವಾದ ನಾನಾ ವಿಚಾರಧಾರೆಗಳೆಲ್ಲ ಒಂದು ಸ್ಫೋಟಕ ಚಳವಳಿಯಲ್ಲಿ ಕೇಂದ್ರೀಕೃತವಾದವು. ವಿಚಾರಯುಗವೆಂಬ ಅಭಿಧಾನದಿಂದ ಈ ಕಾಲ ಪ್ರಸಿದ್ಧವಾಯಿತು. ಈ ಹೊಸ ಹುರುಪು ಯುರೋಪನ್ನೆಲ್ಲ ಹಾಯ್ದು, ಅಟ್ಲಾಂಟಿಕವನ್ನು ದಾಟಿ ಹೊಸ ಜಗದಲ್ಲೂ ಹಬ್ಬಿತು. ವಾಲ್ಟೇರ್, ಲಾಕ್, ಗಯಟೆ, ಥಾಮಸ್ ಜೆಫರ್ಸನ್, ರೂಸೋ, ಹ್ಯೂಂ, ಕಾಂಟ್, ಡೀಡ್ರೋ. ಲೆಪಿಂಗ್, ಆಡಂ ಸ್ಮಿತ್, ಗಯೊವನ್ನಿ ವೀಕೊ, ಕಾಂಡಾರ್ಸೇ, ಮಾಂಟೆಸ್ಕ್ಯೂ, ಬೆಂಜಮಿನ್ ಫ್ರ್ಯಾಂಕ್ಲಿನ್ ಮುಂತಾದ ಮಹಾವ್ಯಕ್ತಿಗಳ ತೂರ್ಯಧ್ವನಿಗಳು ಇದರಲ್ಲಿ ಮಿಳಿತವಾದುವು. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಅರಮನೆ-ಗುರುಮನೆಗಳ ಹಾಗೂ ಶ್ರೀಮಂತ-ಪುರೋಹಿತರ ಬಂದಿಯಾಗಿದ್ದ ತರ್ಕ-ಯುಕ್ತಿಗಳನ್ನೆಲ್ಲ ಬಿಡುಗಡೆ ಮಾಡಿ ಇವು ವಿಜ್ಞಾನದ ವಾತಾವರಣದಲ್ಲಿ ಸ್ವತಂತ್ರವಾಗಿ ಉಸಿರಾಡುವಂತೆ ಮಾಡಿದವರು ಇವರು. ಹಳೆಯ ವ್ಯವಸ್ಥೆಯ ಸ್ಥಾನದಲ್ಲಿ ಹೊಸ ಬೌದ್ಧಿಕ ಸಾಂಸ್ಕೃತಿಕ ವ್ಯವಸ್ಥೆ ಯಾವುದೂ ಆಗ ಇನ್ನೂ ಉದಯವಾಗಿರಲಿಲ್ಲ. ಏಕೆಂದರೆ ಇದಕ್ಕೆ ಅಗತ್ಯವಾದ ರಾಜಕೀಯ, ಆರ್ಥಿಕ, ಸಾಮಾಜಿಕ ವಜ್ರಗಾರೆ ಆಗ ತಾನೇ ನಿರ್ಮಾಣವಾಗುತ್ತಿತ್ತು. ಆದರೂ ಇವರು ಬರಲಿದ್ದ ಈ ವ್ಯವಸ್ಥೆಯ ಮುನ್ನೋಟ ಪಡೆದಿದ್ದರು.

ಮುಂದೆ ಈ ಹೊಸ ವ್ಯವಸ್ಥೆಯ ರಚನೆಗೆ ಅಗತ್ಯವಾಗಿದ್ದ ಮಾಧ್ಯಮವೂ ಲಭ್ಯವಾಯಿತು. 18ನೆಯ ಶತಮಾನದಲ್ಲಿ ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್‌ಗಳಲ್ಲಿ ಸಂಭವಿಸಿದ ರಾಜಕೀಯ ಕ್ರಾಂತಿಗಳು ಈ ಹೊಸ ವ್ಯವಸ್ಥೆಗೆ ತಳಹದಿ ಹಾಕಿದವು. ಹೊಸ ಮಧ್ಯಮ ವರ್ಗದ ಉದಯವಾಯಿತು. ಅದು ಈ ಕ್ರಾಂತಿಗಳ ಸದುಪಯೋಗ ಪಡೆದು ತನ್ನ ಶಕ್ತಿ ಬೆಳೆಸಿಕೊಂಡಿತು. ತನಗೆ ಅರಿವಿಲ್ಲದೆಯೇ ಅದು ಬುದ್ಧಿಜೀವಿಗಳ ಸಖ್ಯ ಬೆಳೆಸಿತು. ಈ ಸಖ್ಯ ಬಲು ಸಡಿಲವಾಗಿತ್ತೇನೋ ನಿಜ. ಆದರೆ ಅವಾಸ್ತವವಾದದ್ದಾಗಿರಲಿಲ್ಲ. ಈ ಎರಡು ಪಕ್ಷಗಳೂ ಒಂದಕ್ಕೊಂದು ನೆರವಾಗಿ ಉದಾರವಾದಿ ವಿಚಾರವ್ಯವಸ್ಥೆಗೆ ಜನ್ಮನೀಡಿದವು.

ಈ ಯುಗದಲ್ಲಿ ಎಲ್ಲೆಲ್ಲೂ ಹಕ್ಕುಗಳ ಸೊಲ್ಲೇ ಕೇಳಿಬರುತ್ತಿತ್ತು. ಶಾಸನಸಭೆಗಳಲ್ಲೂ ಇದು ಮಾರ್ಮೊಳಗಿತು. ಇದಕ್ಕೆ ನಿಸರ್ಗವೂ ಅದರ ನಿಯಮಗಳೂ ಅಡಿಗಲ್ಲು. ಅವಿನಾಶಿ ಸರ್ವವ್ಯಾಪಿ ಮಾನವೀಯ ಹಕ್ಕಿಗೆ ಧರ್ಮಕ್ಕಿಂತ ವಿಜ್ಞಾನದ್ದೇ ಸ್ಫೂರ್ತಿ. ಆ ವೇಳೆಗೆ ಅವತಾರವೆತ್ತಿದ್ದ ಐಸಾಕ್ ನ್ಯೂಟನ್ ಜನರ ವಿಚಾರ ಕ್ರಮದಲ್ಲಿ ಕ್ರಾಂತಿಯನ್ನೇ ತಂದಿದ್ದ. ಆತನ ದೃಷ್ಟಿಯಲ್ಲಿ ವಿಶ್ವವ್ಯಾಪಾರವೆಲ್ಲ ತರ್ಕಬದ್ಧ ನಿಸರ್ಗನಿಯಮಬದ್ಧ. ಇದನ್ನು ವಿವರಿಸುವುದಕ್ಕೆ ಕಾಣದ ದೈವೀಶಕ್ತಿಯ ಕೈವಾಡದ ನೆರವು ಅವಶ್ಯವಿಲ್ಲ. ನ್ಯೂಟನ್ನನ ಈ ಸೂತ್ರವನ್ನು ಅದರ ಅಂತ್ಯದವರೆಗೂ ಎಳೆದೊಯ್ದ ಉದಾರವಾದಿಗಳು ದೇವರನ್ನೂ ನಿಸರ್ಗದ ಅಗ್ರಶಕ್ತಿಯೆಂದೇ ಗ್ರಹಿಸಿದರು. ದೇವರೂ ಇವರ ದೃಷ್ಟಿಯಲ್ಲಿ ಪ್ರಕೃತಿಸಿದ್ಧ. ಈ ನೈಸರ್ಗಿಕ ದೈವವನ್ನು ಯಾರು ಹೇಗಾದರೂ ಪುಜಿಸಲಿ, ಈ ಬಗ್ಗೆ ಜಗಳ ಬೇಡ. ಇದು ಇವರ ವಾದ.

ಹೀಗೆ ಪುನರುಜ್ಜೀವನವೂ ವಿಜ್ಞಾನಕ್ರಾಂತಿಗಳೂ ತಾಂತ್ರಿಕ ಮುನ್ನಡೆಯೂ ಏರುತ್ತಿದ್ದ ಜೀವನಮಟ್ಟವೂ ಜನರಲ್ಲಿ ವೈಚಾರಿಕಪ್ರವೃತ್ತಿ ಬೆಳೆಯಲು ಕಾರಣವಾದುವು. ಆಮುಷ್ಮಿಕದ ಬದಲು ಐಹಿಕಕ್ಕೆ, ಗತಕಾಲದ ಸಂಪ್ರದಾಯದ ಬದಲು ವರ್ತಮಾನ-ಭವಿಷ್ಯಗಳ ಕಡೆಗೆ ಮಾನವನ ವಿಚಾರದ ದಿಕ್ಕನ್ನೇ ಬದಲಿಸಿದ್ದು ಈ ಚಳವಳಿಯ ಮಹತ್ಸಾಧನೆ. ಜನರು ಪಾಪದ ಮಾತಾಡುವುದು ಬಿಟ್ಟು ಪ್ರಗತಿಯ ಮಾತಾಡಲಾರಂಭಿಸಿದರು. ಅದೃಷ್ಟದಲ್ಲಿ ನಂಬಿಕೆ ತೊರೆದು ಯತ್ನಶಕ್ತಿಯಲ್ಲಿ ವಿಶ್ವಾಸ ತಳೆದರು. ಮಾನವ ಸುಖಸಾಧನೆಯೇ ಎಲ್ಲ ಸಂಸ್ಥೆಗಳ ಅಂತಿಮ ಧ್ಯೇಯವಾಯಿತು.

ಈ ಹೊಸ ವಿಚಾರದ ಬಿಸಿಯಿಂದ ಅನೇಕ ಹಳೆಯ ಆಚಾರ ವಿಚಾರಗಳೂ ವ್ಯವಸ್ಥೆಗಳೂ ಭಸ್ಮವಾದುವು. ಮಾನವನ ಸ್ವಾತಂತ್ರ್ಯ ಜನ್ಮಸಿದ್ಧ. ಆದರೆ ಅವನಿಗೆ ಎಲ್ಲೆಲ್ಲೂ ಸರಪಳಿಯ ಬಂಧನ, ಹೀಗೆಂದು ರೂಸೋ ಕಳವಳಿಸಿದ. ದೇವರು ಮಾಡಿದ್ದೆಲ್ಲ ಪರಿಶುದ್ಧ, ಆದರೆ ಮಾನವನ ಕೈತಾಕಿದಾಗ ಅದಕ್ಕೆ ದುಷ್ಟ ಗುಣ. ಮಾನವ ಜನ್ಮತಃ ವಿಚಾರವಾದಿ, ಪರಿಶುದ್ಧ. ಆದರೆ ನಾನಾ ಸಾಮಾಜಿಕ ವ್ಯವಸ್ಥೆಗಳು ಆತನ ಹುಟ್ಟಿನೊಂದಿಗೆ ಅವನನ್ನು ಆವರಿಸಿಕೊಂಡು ದುರ್ಮಾರ್ಗಕ್ಕೆಳೆಯುತ್ತವೆ. ರೂಢಿ, ಸಂಪ್ರದಾಯ, ಸಂಸ್ಥೆ, ಸಾಮಾಜಿಕ ಪದ್ಧತಿ-ಇವು ಮಾನವನ ಆಜನ್ಮಶತ್ರುಸಮೂಹ. ಇದು ರೂಸೋ ವಾದಸಾರ. ಆಗಿನ ಕಾಲದಲ್ಲಿದ್ದ ಕುಪಿತ ಯುವಜನರಾದ ಫ್ರೆಂಚ್ ತತ್ತ್ವಜ್ಞರೂ ಇಂಗ್ಲಿಷ್ ಉಪಯುಕ್ತತಾವಾದಿಗಳೂ ದಾರ್ಶನಿಕ ಕ್ರಾಂತಿವಾದಿಗಳೂ ಇಟಲಿಯ ರಾಷ್ಟ್ರಪ್ರೇಮೀ ಬುದ್ಧಿಜೀವಿಗಳೂ ತಮ್ಮ ಕಾಲದ ಪಟ್ಟಭದ್ರ ಸಂಸ್ಥೆಗಳ ವಿರುದ್ಧ ಹೋರಾಟ ನಡೆಸಿದರು; ಜನರನ್ನು ಸರ್ವದಾ ಅವುಕುತ್ತಿದ್ದ ಗತಕಾಲದ ಮೃತಹಸ್ತದಿಂದ ಅವರನ್ನು ಪಾರುಮಾಡಲು ಸತತವಾಗಿ ಶ್ರಮಿಸಿದರು.

ನೈಸರ್ಗಿಕ ನಿಯಮದಲ್ಲಿ ಮಾನವನ ಹಸ್ತಕ್ಷೇಪವೇ ಎಲ್ಲ ಅನಿಷ್ಟಕ್ಕೂ ಮೂಲ ಕಾರಣವಾದ್ದರಿಂದ ಅಲ್ಲಿಂದ ಅದನ್ನು ತೆಗೆಯಬೇಕೆಂದೂ ಎಲ್ಲವನ್ನೂ ಅವುಗಳ ಪಾಡಿಗೆ ಬಿಡಬೇಕೆಂದೂ ಇವರು ವಾದಿಸಿದರು. ಇದೇ ಕಾಲಕ್ಕೆ ಪ್ರವರ್ಧಿಸುತ್ತಿದ್ದ ವ್ಯಾಪಾರೀವರ್ಗಕ್ಕೂ ಇವರಿಗೂ ಕೊಂಡಿ ಬೆಸೆದುಕೊಂಡದ್ದು ಈ ಕಾರಣದಿಂದ. ತಮ್ಮ ಆರ್ಥಿಕ ಚಟುವಟಿಕೆಗಳನ್ನು ಕುಂಠಿತಗೊಳಿಸುತ್ತಿದ್ದ ಎಲ್ಲ ನಿರ್ಬಂಧಗಳನ್ನೂ ತೊಡೆದುಹಾಕಬೇಕೆಂಬ, ಅಬಾಧಿತವಾಗಿ ವ್ಯಾಪಾರ ನಡೆಸಲೂ ಅವಕಾಶವಿರಬೇಕೆಂಬ ಅವರ ಬಯಕೆಗೆ ಇವರ ವಾದದಿಂದ ಪುಷ್ಟಿ ದೊರಕಿತು (ನೋಡಿ-ಅನಿರ್ಬಂಧಿತ-ಆರ್ಥಿಕ-ವ್ಯವಸ್ಥೆ).

ಉದಾರವಾದಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಗಣರಾಜ್ಯ ವ್ಯವಸ್ಥೆ, ಜನಪ್ರಿಯ ರಾಜತ್ವ ಮತ್ತು ಶಿಕ್ಷಣ ಇವುಗಳ ಅಗತ್ಯವನ್ನೂ ಇವರು ಒತ್ತಿ ಹೇಳಿದರು. ಮೆಟ್ಟಿ ಆಳುವ ಸರ್ಕಾರಿ ಸಂಸ್ಥೆಗಳ ನಿವಾರಣೆಯೊಂದೇ ಸಾಲದು. ಇದು ನೇತ್ಯಾತ್ಮಕ. ಇದರ ಜೊತೆಗೆ ಇತ್ಯಾತ್ಮಕ ಪ್ರಯತ್ನವೂ ಸಾಗಬೇಕು. ಮಾನವನ ಅಂತಃಸತ್ತ್ವವನ್ನು ಬೆಳೆಯಿಸಿ ಅವನನ್ನು ಪರಿಪೂರ್ಣಗೊಳಿಸಲು ವಿದ್ಯಾಭ್ಯಾಸ ಅತ್ಯವಶ್ಯವೆಂಬುದೂ ಇವರ ದೃಷ್ಟಿ.

ಇನ್ನು ಕೆಲವರು ತಮ್ಮ ವಾದವನ್ನು ಹೀಗೆಯೇ ಮುಂದುವರಿಸಿದರು. ಮಾನವರು ಸ್ವಭಾವತಃ ಒಳ್ಳೆಯವರು, ನಿಜ. ಆದರೆ ಅವರಿಗೂ ಆಕಾಂಕ್ಷೆ, ದುರಾಸೆ, ಅಧಿಕಾರ ಪಿಪಾಸೆ ಇರುತ್ತವೆ. ಆದ್ದರಿಂದ ಪ್ರಬಲರು ದುರ್ಬಲರನ್ನು ಮೆಟ್ಟದಂತೆ ಒಂದು ಅಂಕುಶ ಇರಬೇಕು. ಶಾಸನ ಮಾಡುವ ಹಾಗೂ ಆಡಳಿತ ನಡೆಸುವ ಅಧಿಕಾರಗಳು ಒಂದೇ ಕಡೆ ಸೇರಬಾರದು. ಇವೆರಡಕ್ಕಿಂತ ಪ್ರತ್ಯೇಕವೂ ಸ್ವತಂತ್ರ್ಯವೂ ಆದ ನ್ಯಾಯವ್ಯವಸ್ಥೆ ಇರಬೇಕು. ಹೀಗೂ ಅವರು ವಾದಿಸಿದರು.

ಉದಾರವಾದಿಗಳು ಪ್ರತಿಪಾದಿಸಿದ ರಾಷ್ಟ್ರದ ಆಡಳಿತ ವ್ಯವಸ್ಥೆಯಲ್ಲಿ ಭೌತಶಾಸ್ತ್ರದ ಸಮತೋಲ ಸೂತ್ರಗಳು ಅಡಕವಾಗಿದ್ದದ್ದನ್ನು ಕಾಣಬಹುದು. ಇವು ವಿಜ್ಞಾನ ಕ್ರಾಂತಿಯ ಫಲವಾಗಿ ಆ ವೇಳೆಗೆ ಪ್ರಚಾರದಲ್ಲಿದ್ದವು. ಉದಾರವಾದಿಗಳು ಮಾನವನ ಮನೋವ್ಯಾಪಾರ ವನ್ನೂ ನಿಚ್ಚಳವಾಗಿಯೇ ಮನಗಂಡಿದ್ದರು. ಸ್ವಂತ ಹಿತವೇ ಮಾನವನ ಕ್ರತುಶಕ್ತಿ, ವಿಚಾರ ಶೀಲತೆಯೇ ಸಾಧನ; ಸ್ವಲಾಭಸಾಧನೆಯ ಗುರಿಯಿಂದ ವ್ಯಕ್ತಿಗಳು ನಡೆಸುವ ಪ್ರಯತ್ನಗಳೆಲ್ಲ ಅಂತಿಮವಾಗಿ ಪ್ರಗತಿದಾಯಕ, ಸುಖಪ್ರದ; ಅವರವರನ್ನು ಅವರವರಷ್ಟಕ್ಕೆ ಬಿಡುವುದೇ ಸಹಜ ನಿಯಮ. ಇದು ಇವರ ಆದರ್ಶದ ಕಲ್ಪನೆ.

ಆದರೆ ಇದು ಆದರ್ಶವಷ್ಟೆ. 20ನೆಯ ಶತಮಾನದ ನಡುಗಾಲದ ವೇಳೆಗೆ ಈ ಕಲ್ಪನಾಲೋಕದ ಕೊರಕಲುಗಳು ಕಣ್ಣು ಕೋರೈಸುವಂತೆ ಕಾಣಿಸುತ್ತಿದ್ದುವು. ವಾಸ್ತವವಾಗಿ ಮಾನವನಿಷ್ಟು ಸರಳವಲ್ಲ. ಬಿಡಿಬಿಡಿಯಾಗಿ ಅವನಲ್ಲಿ ಪಾರಿಶುದ್ಧ್ಯದ ಆರೋಪಮಾಡುವುದು ವಸ್ತುಸ್ಥಿತಿಗಿಂತ ಬಲು ದೂರ. ಈ ಅತ್ಯಾದರ್ಶವೆಲ್ಲ ಬರೀ ಕನಸು. ಮಾನವನ ಸ್ವಭಾವವೀಕ್ಷಣೆ ಯಾಗಲಿ, ಪ್ರಗತಿದರ್ಶನವಾಗಲಿ, ಸುಖದ ಕಲ್ಪನೆಯಾಗಲಿ ಇಷ್ಟು ಸುಲಭವಾಗಿ ಸಾಧ್ಯವಿಲ್ಲ. ಈ ನಾನಾ ಕಾರಣಗಳಿಂದ ಉದಾರವಾದವಿಂದು ತಲೆಯ ಮೇಲೆ ತಾರಸಿಯಂತೆ ಹತ್ತಿರವಿದ್ದೂ ನಿಲುಕದಂತಾಗಿದೆ, ಧ್ರುವ ನಕ್ಷತ್ರದಂತೆ ದೂರ ನಿಂತಿದೆ.

ಆದರೆ ಇಷ್ಟು ಮಾತ್ರ ನಿಜ: ಈ ವಾದದ ಉಚ್ಛ್ರಾಯ ಕಾಲದಲ್ಲಿ ಇದು ಮಾನವನ ಆತ್ಮವಿಮೋಚನೆಯನ್ನು ಸಾಧಿಸಿತು. ಮಹಾಸಾಹಸಿಗಳ ಅಂತಃಶಕ್ತಿಗೆ ಪ್ರಚೋದನೆ ನೀಡಿತು. ಅಧೋಲೋಕದಿಂದೆದ್ದು ಅಂತರಿಕ್ಷದೆತ್ತರಕ್ಕೆ ಬೆಳೆದಿದ್ದ ಪ್ರತಿಗಾಮೀ ವ್ಯವಸ್ಥೆಯ ಕೋಟೆಯನ್ನು ಪುಡಿಪುಡಿ ಮಾಡಿ ಅದರ ಸ್ಥಾನದಲ್ಲಿ ಹೊಸ ವ್ಯವಸ್ಥೆಯ ಅಸ್ತಿಭಾರ ಹಾಕಲು ಇದು ನೆರವು ನೀಡಿತು. ಮಾನವನ ಅದಮ್ಯ ಚೇತನ ಏನನ್ನು ಸಾಧಿಸಬಲ್ಲದೆಂಬುದನ್ನು ಆಗಿನ ಐತಿಹಾಸಿಕ ರಸನಿಮಿಷದಲ್ಲಿ ಮಿಂಚಿ ಪ್ರತಿಬಿಂಬಿಸಿದ ಈ ವಾದ ನಿರರ್ಥಕವಲ್ಲ.

ಲಕ್ಷಣಗಳು[ಬದಲಾಯಿಸಿ]

ಉದಾರವಾದದ ಮುಖ್ಯ ಲಕ್ಷಣಗಳನ್ನೆಲ್ಲ ಪಟ್ಟಿ ಮಾಡುವುದು ಕಷ್ಟ. ಏಕೆಂದರೆ ಇವು ಅನೇಕ ಆದರ್ಶಭಾವನೆಗಳೊಂದಿಗೆ ಅವಿನಾಭಾವದಿಂದ ಹೆಣೆದುಕೊಂಡಿವೆ. ಆದರೂ ಆಗಿನ ವಿಚಾರಸಂಪತ್ತಿಗೆ ಉದಾಹರಣೆಯಾಗಿ ಕೆಲವು ಮುಖ್ಯ ಲಕ್ಷಣಗಳನ್ನಾದರೂ ಎತ್ತಿಕೊಡುವುದು ಲಾಭದಾಯಕವೆನ್ನಿಸಬಹುದು.

ಉದಾರವಾದದ ಆತ್ಮಸ್ವರೂಪಿಯಾದದ್ದು ಸ್ವಾತಂತ್ರ್ಯ-ಲಿಬರ್ಟಿ. ಇದು ನಿರುಪಾಧಿಕ ಅಥವಾ ನಿರಪೇಕ್ಷ ಸ್ವಾತಂತ್ರ್ಯವಲ್ಲ. ಏಕೆಂದರೆ ವ್ಯಕ್ತಿಗೆ ಈ ಬಗೆಯ ಸ್ವಾತಂತ್ರ್ಯ ನೀಡಲು ಯಾವ ಸರ್ಕಾರವೂ ಒಪ್ಪಲಾರದು. ಆದರೆ ವ್ಯಕ್ತಿಗೆ ವಿಚಾರಸ್ವಾತಂತ್ರ್ಯ, ಅಭಿಪ್ರಾಯ ಸ್ವಾತಂತ್ರ್ಯ, ಅಭಿವ್ಯಕ್ತಿಯಸ್ವಾತಂತ್ರ್ಯ, ಚರ್ಚಾಸ್ವಾತಂತ್ರ್ಯ, ಸಂಘಟನಾಸ್ವಾತಂತ್ರ್ಯ, ಉದ್ಯೋಗ ಸ್ವಾತಂತ್ರ್ಯ ಪದಾರ್ಥ ಕ್ರಯವಿಕ್ರಯ ಸ್ವಾತಂತ್ರ್ಯ ಇವೆಲ್ಲ ದೊರಕಬೇಕು. ತನ್ನನ್ನು ಆಳುವವರು ಯಾರು, ಅವರು ಯಾವ ಬಗೆಯಲ್ಲಿ ಆಳಬೇಕು ಎಂಬುದನ್ನು ನಿರ್ಣಯಿಸುವ, ಕ್ರಾಂತಿಯಿಂದಲೇ ಆದರೂ ಈ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಸ್ವಾತಂತ್ರ್ಯ ಈತನಿಗಿರಬೇಕು. ಇದು ಉದಾರವಾದದ ಮೂಲಮಂತ್ರ. ಸಾಮಾಜಿಕ ಸ್ವಾತಂತ್ರ್ಯ ಸಂಘಟನೆ-ಅನುಸರಣೆ ಗಳಿಗಾಗಿ ನಡೆಸುವ ಪ್ರಯತ್ನವೇ ಉದಾರವಾದ.

ಈ ಸ್ವಾತಂತ್ರ್ಯಕ್ಕೆ ಸ್ಫೂರ್ತಿ ಬಂದದ್ದಾದರೂ ಎಲ್ಲಿಂದ ?-ಎಂಬ ಪ್ರಶ್ನೆಗೆ ಉತ್ತರವಾಗಿ ಉದಾರವಾದಿಗಳು ನಿಸರ್ಗದತ್ತ ಬೆಟ್ಟು ಮಾಡುತ್ತಾರೆ. ಥಾಮಸ್ ಜೆಫರ್ಸನ್ನನ ಮಾತಿನಲ್ಲಿ ಹೇಳುವುದಾದರೆ, ನಿಸರ್ಗ ನಿಯಮವೂ ನಿಸರ್ಗದ ಸೃಷ್ಟಿಕರ್ತನೂ ಈ ಸ್ಫೂರ್ತಿಯ ಉಗಮ. ಇದು ಉದಾರವಾದದ ನಿಜವಾದ ಧರ್ಮವ್ಯವಸ್ಥೆ. ಈ ಅಸ್ತಿಭಾರದ ಮೇಲೆಯೇ ಉದಾರವಾದಿಗಳು 18ನೆಯ ಶತಮಾನದ ದಾರ್ಶನಿಕರ ಸ್ವರ್ಗೀಯ ನಗರವನ್ನು ಸೃಷ್ಟಿಸಿದರು. 18ನೆಯ ಶತಮಾನದ ಮಹಾದ್ಭುತವೆಂದರೆ ಧರ್ಮ, ನ್ಯಾಯ, ರಾಜನೀತಿ, ದರ್ಶನಶಾಸ್ತ್ರ, ಭೂದೃಶ್ಯ ಚಿತ್ರಣ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ನಿಸರ್ಗದೊಂದಿಗೆ ನಡೆಸಿದ ಕೇಳೀವಿನೋದ. ಮಾನವರ ಹಕ್ಕುಗಳಿಗೆ ನಿಸರ್ಗವೇ ಮೂಲ. ನಿಸರ್ಗದತ್ತವಾದ ಈ ಹಕ್ಕುಗಳನ್ನು ಪೋಷಿಸಿ ರಕ್ಷಿಸುವುದು ಸರ್ಕಾರಗಳ ಕರ್ತವ್ಯ. ಇದು ರೂಸೋ-ಲಾಕ್ ಸಿದ್ಧಾಂತ.

"https://kn.wikipedia.org/w/index.php?title=ಉದಾರವಾದ&oldid=813951" ಇಂದ ಪಡೆಯಲ್ಪಟ್ಟಿದೆ