ಉತ್ಸರ್ಜನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ಸರ್ಜನ ಅಧ್ಯಯನವನ್ನು ತಾತ್ಕಾಲಿಕವಾಗಿ ಬಿಡಲು ಮಾಡುವ ವಿಧಿವತ್ತಾದ ಕ್ರಿಯೆ. ಉಪನಯನದ ನಂತರದಲ್ಲಿ ಶ್ರಾವಣ ಅಥವಾ ಭಾದ್ರಪದ ಮಾಸದ ಪುರ್ಣಿಮಾತಿಥಿ, ಶ್ರವಣ, ಹಸ್ತನಕ್ಷತ್ರ-ಈ ಮೂರರೊಂದರಲ್ಲಿ ಮಾಡುವ ಉಪಾಕರ್ಮದಿಂದ ಅಧ್ಯಯನಕ್ಕೆ ಪ್ರಾರಂಭ. ಅಲ್ಲಿಂದ ಮುಂದೆ ನಾಲ್ಕೂವರೆ ತಿಂಗಳ ಕಾಲ ಅನಧ್ಯಾಯದಿವಸಗಳನ್ನು ಬಿಟ್ಟು ಉಳಿದ ದಿವಸಗಳಲ್ಲಿ ವೇದವನ್ನು ಗುರುವಿನಿಂದ ಸ್ವೀಕರಿಸಿ ಅಭ್ಯಾಸ ಮಾಡಬೇಕು. ಈ ಕಾಲ ಶಾಖಾಭೇದದಿಂದ ಐದೂವರೆ, ಆರು ,ಆರೂವರೆ ತಿಂಗಳುಗಳವರೆಗೂ ಮುಂದುವರಿಯುತ್ತದೆ. ಈ ಕಾಲಾನಂತರದಲ್ಲಿ ಅಧ್ಯಯನ ಮಾಡುವುದನ್ನು ವಿಧಿಪೂರ್ವಕ ನಿಲ್ಲಿಸಬೇಕು. ಈ ವಿಧಿಯೇ ಉತ್ಸರ್ಜನ, ಋಷಿಪೂಜೆ, ಹೋಮ-ಇವು ಇದರಲ್ಲಿ ಮುಖ್ಯಕಾರ್ಯ. ಇದನ್ನು ಊರ ಹೊರಗೆ ಮಾಡಬೇಕೆಂದು ಶಾಸ್ತ್ರದಲ್ಲಿದೆ. ಉಪಾಕರ್ಮದ ದಿವಸವೇ ಮೊದಲು ಉತ್ಸರ್ಜನ ಮಾಡಿ ಬಳಿಕ ಉಪಾಕರ್ಮವನ್ನು ಮಾಡಿಕೊಳ್ಳುವುದು ಕೆಲವರಲ್ಲಿ ರೂಢಿಯಲ್ಲಿದೆ. ಉತ್ಸರ್ಜನವಿಲ್ಲದೆ ಮತ್ತೆ ವೇದಾಧ್ಯಯನಾರಂಭವಿಲ್ಲ. ಯಜುರ್ವೇದಿಗಳಲ್ಲಿ ಉತ್ಸರ್ಜನ ಮಾಡುವ ಪ್ರಯುಕ್ತ ಉಂಟಾದ ದೋಷನಿವಾರಣೆಗಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ. ಉತ್ಸರ್ಜನ ಮಾಡಿದ ಬಳಿಕ ಉಪಾಕರ್ಮದವರೆಗೂ ಅಧ್ಯಯನ ಮಾಡಬಾರದು. ಶುಕ್ಲಪಕ್ಷದಲ್ಲಿ ಧಾರಣಾಧ್ಯಯನವನ್ನೂ ಕೃಷ್ಣಪಕ್ಷದಲ್ಲಿ ಅಂಗಾಧ್ಯಯನವನ್ನೂ ಮಾಡಬಹುದು.

ಉಲ್ಲೇಖನಗಳು[ಬದಲಾಯಿಸಿ]

[೧]

  1. https://books.google.co.in/books?id=mjFfqpq7HhkC&pg=PA191&lpg=PA191&dq=utsarjana&source=bl&ots=kjyIzi4Lt6&sig=WKQreeR_pz5KV6GMLZh5__etVnA&hl=en&sa=X&ved=0ahUKEwiE4IbnzbnRAhXHr48KHdxlCEMQ6AEIHzAB#v=onepage&q=utsarjana&f=false