ಇಮ್ಮಡಿ ಪುಲಿಕೇಶಿ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇದೇ ಹೆಸರಿನ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.

ಇಮ್ಮಡಿ ಪುಲಿಕೇಶಿ ಚಾಲುಕ್ಯ ವಂಶದ ಅತಿ ಪ್ರಸಿದ್ದ ಚಕ್ರವರ್ತಿ. ಇವನ ತಂದೆ ಕೀರ್ತಿವರ್ಮ. ತನ್ನ ಚಿಕ್ಕಪ್ಪ ಮಂಗಳೇಶನ ನಂತರ ಪಟ್ಟಕ್ಕೆ ಬಂದನು. ಕ್ರಿ.ಶ.೬೦೯ ರಿಂದ ಕ್ರಿ.ಶ.೬೪೨ ರ ತನಕ ೩೩ ವರ್ಷಗಳ ಕಾಲ ಆಳ್ವಿಕೆ ನಡೆಸಿದನು.

[ಬದಲಾಯಿಸಿ] ರಾಜ್ಯ ವಿಸ್ತಾರ

ಕ್ರಿ.ಶ. ೬೪೦ರ ಸುಮಾರಿನಲ್ಲಿ ಪುಲಕೇಶಿಯ ಸಾಮ್ರಾಜ್ಯದ ವಿಸ್ತಾರ

ಇಮ್ಮಡಿ ಪುಲಿಕೇಶಿ ತನ್ನ ಸಾಮ್ರಾಜ್ಯವನ್ನು ಸಣ್ಣ ದಂಡಯಾತ್ರೆಗಳ ಮೂಲಕ ಮೊದಲು ಬಲಗೊಳಿಸಿದನು. ಅಲೂಪ, ಗಂಗ ಮೊದಲಾದ ರಾಜವಂಶಗಳನ್ನು ಸೋಲಿಸಿದ ನಂತರ ತಮಿಳು ನಾಡಿನ ಪಲ್ಲವರನ್ನು ಸಹ ಗೆದ್ದನು. ಇದರ ನಂತರ ಚೇರ ಮತ್ತು ಪಾಂಡ್ಯ ವಂಶಗಳ ಮೇಲೆ ಯಶಸ್ವಿಯಾಗಿ ದಂಡಯಾತ್ರೆ ನಡೆಸಿದನು. ಕ್ರಿ.ಶ. ೬೦೯ ರಲ್ಲಿ ತನ್ನ ತಮ್ಮ ಕುಬ್ಜ ವಿಷ್ಣುವರ್ಧನನನ್ನು ವೆಂಗಿಯ ನಾಯಕನಾಗಿ ನೇಮಿಸಿದ - ವಿಷ್ಣುವರ್ಧನ ನಂತರದ ವರ್ಷಗಳಲ್ಲಿ ಸ್ವಾತಂತ್ರ್ಯ ಘೋಷಿಸಿ ಪೂರ್ವ ಚಾಲುಕ್ಯ ವಂಶವನ್ನು ಸ್ಥಾಪಿಸಿದ.

ಉತ್ತರ ಭಾರತದ ಪ್ರಸಿದ್ಧ ಚಕ್ರವರ್ತಿಯಾದ ಹರ್ಷವರ್ಧನನೊಂದಿಗೆ ಇಮ್ಮಡಿ ಪುಲಿಕೇಶಿಯ ಅತಿ ಪ್ರಸಿದ್ಧ ಯುದ್ಧ ಸುಮಾರು ಕ್ರಿ.ಶ. ೬೧೫ ರಲ್ಲಿ ನಡೆಯಿತು. ಪುಲಿಕೇಶಿ ಈ ಯುದ್ಧದಲ್ಲಿ ಗೆದ್ದು ನರ್ಮದಾ ನದಿಯನ್ನು ಚಾಲುಕ್ಯ ಸಾಮ್ರಾಜ್ಯದ ಗಡಿಯಾಗಿ ನಿರ್ಧರಿಸಲಾಯಿತು. ಈ ವಿಜಯದ ನಂತರ ಪುಲಿಕೇಶಿಯ ಆಡಳಿತ ಇಡಿಯ ದಕ್ಷಿಣ ಭಾರತ, ಮಹಾರಾಷ್ಟ್ರ, ಮತ್ತು ಗುಜರಾತ್-ಮಧ್ಯಪ್ರದೇಶಗಳ ಕೆಲ ಭಾಗಗಳ ವರೆಗೆ ಹಬ್ಬಿತು. ಈ ಯುದ್ಧದ ನಂತರ ಪುಲಿಕೇಶಿಗೆ "ದಕ್ಷಿಣಾಪಥೇಶ್ವರ" ಎಂಬ ಬಿರುದು ಬಂದಿತು. ಆದರೆ ಈ ಯುದ್ಧದ ಪರಿಣಾಮವಾಗಿ ಪುಲಿಕೇಶಿಯ ರಾಜಬೊಕ್ಕಸ ಸಾಕಷ್ಟು ಕಡಿಮೆಯಾಗಿ ಇಲ್ಲಿಂದ ಮುಂದೆ ಪುಲಿಕೇಶಿ ಯಾವುದೇ ದೀರ್ಘ ದಂಡಯಾತ್ರೆ ಕೈಗೊಳ್ಳಲಿಲ್ಲ.

[ಬದಲಾಯಿಸಿ] ಪರದೇಶೀಯರೊಂದಿಗೆ ಸಂಪರ್ಕ

ಪುಲಿಕೇಶಿ ಪರ್ಷಿಯಾದ ರಾಯಭಾರಿಯನ್ನು ಬರಮಾಡಿಕೊಂಡದ್ದಲ್ಲದೆ ತನ್ನ ರಾಯಭಾರಿಯನ್ನು ಪರ್ಷಿಯಾದ ಆಸ್ಥಾನಕ್ಕೆ ಕಳಿಸಿಕೊಟ್ಟ. ಚೀನಾ ದೇಶದ ಯಾತ್ರಿಕ ಹ್ಯೂ ಯೆನ್-ತ್ಸಾಂಗ್ ಭಾರತದಲ್ಲೆ ಪ್ರಯಾಣಿಸುತ್ತಿದ್ದಾಗ ಪುಲಿಕೇಶಿಯ ರಾಜ್ಯಕ್ಕೆ ಭೇಟಿ ಕೊಟ್ಟು ಅದರ ಬಗ್ಗೆ ಮೆಚ್ಚಿಗೆಯ ಮಾತುಗಳನ್ನು ಸಹ ಬರೆದಿದ್ದಾನೆ. ಪರ್ಷಿಯಾದ ರಾಯಭಾರಿಯನ್ನು ಪುಲಿಕೇಶಿ ಬರಮಾಡಿಕೊಂಡ ಪ್ರಸಂಗ ಅಜಂತಾ ಗುಹೆಗಳ ಭಿತ್ತಿಚಿತ್ರಗಳಲ್ಲಿ ಸಹ ಮೂಡಿಬಂದಿದೆ.


ಪಲ್ಲವ ರಾಜರೊಂದಿಗೆ ಪುಲಿಕೇಶಿಯ ಯುದ್ಧಗಳು ನಡುನಡುವೆ ನಡೆಯುತ್ತಲೇ ಬಂದವು. ಪಲ್ಲವ ದೊರೆ ಒಂದನೇ ಮಹೇಂದ್ರವರ್ಮನನನ್ನು ಹಲವು ಬಾರಿ ಯುದ್ದದಲ್ಲಿ ಸೋಲಿಸಿ ಶರಣಾಗತಿಯನ್ನು ನೀಡಿದ್ದನು. ಮತ್ತೆ ಮತ್ತೆ ಪ್ರತಿಭಟಿಸುತಿದ್ದ ಪಲ್ಲವರ ಸೊಲ್ಲಡಗಿಸಿದ ಚಾಲುಕ್ಯ ಸೈನ್ಯ, ಪಲ್ಲವರ ರಾಜದಾನಿ ಕಂಚೀಪುರದ ಮೇಲೆ ದಂಡೆತ್ತಿ ಹೋಯಿತು. ಮಹೇಂದ್ರವರ್ಮನು ಚಾಲುಕ್ಯ ಸಾರ್ವಭೌಮತ್ವವನ್ನು ಸಂಪೂರ್ಣವಾಗಿ ಒಪ್ಪಿ ಚಾಲುಕ್ಯ ಸಾಮಂತನಾದರೂ, ಈ ಅವಮಾನದ ಸೇಡಿಗಾಗಿ ಕಾಯುತ್ತ ಅದೇ ಕೊರಗಿನಲ್ಲಿ ಮರಣ ಹೊಂದಿದನು. ಅಂತಿಮವಾಗಿ ಪುಲಿಕೇಶಿಯು ರಾಜಕ್ಷಯದಿಂದ ಬಳಲಿ ಮರಣ ಶಯ್ಯೆಯಲ್ಲಿದ್ದಾಗ, ಇದೇ ಸುಸಮಯಕ್ಕಾಗಿ ಕಾಯುತ್ತಿದ್ದ ಮಹೇಂದ್ರವರ್ಮನ ಮಗ ಪಲ್ಲವ ನರಸಿಂಹವರ್ಮನು ಇತರ ಚಾಲುಕ್ಯ ದ್ವೇಶಿ ಸಾಮಂತರೊಂದಿಗೆ ಬಂಡಾಯವೆದ್ದನು. ಈ ಬಂಡಾಯವನ್ನು ಸದೆಬಡಿಯಲು ಪುಲಿಕೇಶಿಯ ಮೂರನೆ ಪುತ್ರ ಒಂದನೇ ವಿಕ್ರಮಾದಿತ್ಯನು ಇತರ ಪ್ರ್ರಾಂತ್ಯಗಳನ್ನಾಳುತಿದ್ದ ತನ್ನ ಆಣ್ಣಂದಿರ ಸಹಾಯವನ್ನು ಕೋರಿ ರಾಜದಾನಿಯಲ್ಲಿದ್ದ ಚಾಲುಕ್ಯ ಸೈನ್ಯದೊಂದಿಗೆ ದಂಡೆತ್ತಿ ಹೋದನು. ಸಿಂಹಾಸನದ ಉತ್ತರಾದಿಪತ್ಯದ ವಿಷಯದಲ್ಲಿ ವಿಕ್ರಮನ ಮೇಲಿದ್ದ ಪುಲಿಕೇಶಿಯ ಒಲವಿನಿಂದಾಗಿ ಮುನಿದಿದ್ದ ಅವನ ಸಹೋದರರು, ತಮ್ಮನ ಬೆಂಬಲಕ್ಕಾಗಿ ಸೈನ್ಯವನ್ನು ಕಳುಹಿಸದೇ ಹೋದರು. ಸಕಾಲದಲ್ಲಿ ತನ್ನ ಅಣ್ಣಂದಿರ ಸಹಾಯ ದೊರೆಯದೆ ವಿಕ್ರಮಾದಿತ್ಯನು ಹಿಮ್ಮೆಟ್ಟಬೇಕಾಯಿತು. ಇದರಿಂದ ಮತ್ತಷ್ಟು ಉತ್ತೇಜಿತನಾದ ನರಸಿಂಹವರ್ಮನು ಚಾಲುಕ್ಯ ರಾಜದಾನಿ ವಾತಾಪಿ(ಬಾದಾಮಿ)ಯ ಮೇಲೆ ದಂಡೆತ್ತಿ ಹೋಗಿ ತನ್ನ ತಂದೆಯ ಅವಮಾನದ ಸೇಡಿನ ಆಕ್ರೋಶಕ್ಕೆ ಸಂಪೂರ್ಣ ವಾತಾಪಿಯನ್ನು ಬಲಿಕೊಟ್ಟನು. ಈ ಗೊಂದಲಮಯ ಸನ್ನಿವೇಶಗಳಲ್ಲಿ ಇಮ್ಮಡಿ ಪುಲಿಕೇಶಿಯು ಸ್ವರ್ಗಾಧೀನನಾದನು (ಕ್ರಿ.ಶ. ೬೪೨). ಹನ್ನೆರಡು ವರುಷಗಳ ನಂತರ ವಿಕ್ರಮಾದಿತ್ಯನ ನೇತೃತ್ವದಲ್ಲಿ ಒಗ್ಗೂಡಿದ ಸಹೋದರರು ಪಲ್ಲವರನ್ನು ಸೋಲಿಸಿ ವಾತಾಪಿಯನ್ನು ವಶಪಡಿಸಿಕೊಂಡರು.

ವೈಯಕ್ತಿಕ ಉಪಕರಣಗಳು