ಇಂಗ್ಲೆಂಡಿನ ಚರಿತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತಿಹಾಸ ಪೂರ್ವಕಾಲ[ಬದಲಾಯಿಸಿ]

  • ಪ್ಲಿಸ್ಟೊಸೀನ್ ಯುಗದ ಪ್ರಾರಂಭದಲ್ಲಿ ಮೊದಲನೆಯ ಹಿಮಾಚ್ಛಾದಿತ ಕಾಲದಲ್ಲಿ ಇಂಗ್ಲೆಂಡಿನ ಬಹುಭಾಗವನ್ನು ಹಿಮದ ಗೆಡ್ಡೆಗಳು ಮುಚ್ಚಿದ್ದವು. ಅನಂತರದ ಹಿಮಾಚ್ಛಾದಿತ ಕಾಲಗಳಲ್ಲಿ ಇನ್ನೂ ಹೆಚ್ಚಿನ ಭಾಗಗಳು ಹಿಮದ ಗೆಡ್ಡೆಗಳಿಂದ ಮುಚ್ಚಲ್ಪಟ್ಟಿದ್ದಂತೆ ತಿಳಿದುಬರುತ್ತದೆ. ಮಧ್ಯ ಪ್ಲಿಸ್ಟೊಸೀನ್ ಯುಗಕ್ಕೆ ಸೇರಿದ ಭೂಪದರಗಳಲ್ಲಿ ಕೆಂಟಿನ ಸ್ವಾನ್ಸ್ ಕೂಂಬ್ ಎಂಬಲ್ಲಿ ದೊರಕಿರುವ ಮನುಷ್ಯನ ಪಳೆಯುಳಿಕೆಗಳು ಈ ದೇಶದಲ್ಲಿ ನಮಗೆ ದೊರಕಿರುವ ಅತ್ಯಂತ ಹಳೆಯ ಮಾನವನಿಗೆ ಸೇರಿವೆ.
  • ಆದರೆ ಇದಕ್ಕೂ ಹಿಂದೆ ಇಂಗ್ಲೆಂಡಿನಲ್ಲಿ ಆದಿಮಾನವ ವಾಸಿಸುತ್ತಿದ್ದನೆಂಬುದಕ್ಕೆ ಅಲ್ಲಿ ದೊರಕಿರುವ ಕಲ್ಲಿನಾಯುಧಗಳು ಸಾಕ್ಷಿಯಾಗಿವೆ. ಈಸ್ಟ್ ಆಂಗ್ಲಿಯದ ಕ್ರೋಮರ್, ನಾರ್ವಿಜ್, ಇಪ್ಸ್ವಿಚ್ ಮುಂತಾದೆಡೆಗಳಲ್ಲಿ ದೊರಕಿರುವ ಉಪಶಿಲಾಯುಧ ಅಥವಾ ಅತ್ಯಂತ ಹಳೆಯ ಕಾಲದ ಮತ್ತು ಬಹಳ ಒರಟಾದ ಕಲ್ಲಿನಾಯುಧಗಳನ್ನು ಬಹುಶಃ ಅವು ಮಾನವ ನಿರ್ಮಿತವಲ್ಲವೆಂದು ಇತ್ತೀಚೆಗೆ ತಿರಸ್ಕರಿಸಲಾಗಿದೆ.
  • ಕ್ರೋಮರ್ ಪ್ರದೇಶದಲ್ಲಿ ಸ್ವಲ್ಪ ಮುಂದಿನ ಕಾಲಕ್ಕೆ ನಿರ್ದೇಶಿತವಾಗಿರುವ ಭೂಪದರಗಳಲ್ಲಿ ಒರಟು ಮತ್ತು ದೊಡ್ಡದೂ ಆದ ಚಕ್ಕೆ ಕಲ್ಲಿನಾಯುಧಗಳು ದೊರೆತು ಇವು ಇಂಗ್ಲೆಂಡಿನ ಅತ್ಯಂತ ಹಳೆಯ ಮಾನವ ನಿರ್ಮಿತ ಆಯುಧಗಳೆಂದು ಪರಿಗಣಿತವಾಗಿವೆ. ಅನಂತರ ಹಲವಾರು ಪ್ರದೇಶಗಳಲ್ಲಿ ಅಬೆ ವಿಲಿಯನ್ ರೀತಿಯ ಕೈಗೊಡಲಿಗಳು ದೊರೆತು ಆಫ್ರಿಕ ಯುರೋಪು ಸಂಸ್ಕೃತಿಗಳ ಪ್ರಭಾವವನ್ನು ತೋರುತ್ತವೆ.

ಮಧ್ಯ ಪ್ಲಿಸ್ಟೋಸೀನ್ ಯುಗ[ಬದಲಾಯಿಸಿ]

  • ಮಧ್ಯ ಫ್ಲಿಸ್ಟೊಸೀನ್ ಯುಗದಲ್ಲಿ ಇಂಗ್ಲೆಂಡಿನ ಅನೇಕ ಪ್ರದೇಶಗಳಲ್ಲಿ ಕೈಗೊಡಲಿ ಸಂಸ್ಕೃತಿಯ ಆಯುಧಗಳು ಬಳಕೆಯಲ್ಲಿದ್ದವು. ಸ್ವಾನ್ಸ್ಕೂಂಬಿನ ಮಾನವಪಳೆಯುಳಿಕೆಗಳ ಜೊತೆಯಲ್ಲಿ ಕೈಗೊಡಲಿಗಳು ದೊರೆತಿವೆ. ಈ ಕೈಗೊಡಲಿಗಳು ಅಷೂಲಿಯನ್ ಹಂತಕ್ಕೆ ಸೇರಿದವು. ಬಹುಶಃ ಈ ಕಾಲದಲ್ಲೇ ಥೇಮ್ಸ್ ನದಿ ದಡದಲ್ಲಿ ಕ್ಲಾಕ್ಟನ್ ಆನ್ ಸೀ ಎಂಬಲ್ಲೂ ಮತ್ತಿತರ ಪ್ರದೇಶಗಳಲ್ಲೂ ಕ್ಲಾಕ್ಟೋನಿಯನ್ ರೀತಿಯ ಚಕ್ಕೆ ಕಲ್ಲಿನಾಯುಧಗಳು ದೊರಯುತ್ತವೆ.
  • ಹಿಮಾಚ್ಛಾದಿತ ಕಾಲದಲ್ಲಿ ಶೀತ ಹವಾಗುಣ ಪ್ರಬಲವಾಗಿದ್ದಾಗ ಬೆಚ್ಚನೆಯ ಹವೆಗೆ ಹೊಂದಿಕೊಂಡಿದ್ದ ಕೈಗೊಡಲಿ ನಿರ್ಮಿಸುತ್ತಿದ್ದ ಮಾನವರು ಯುರೋಪ್ ಆಫ್ರಿಕಗಳ ದಿಕ್ಕಿನಲ್ಲಿ ಹಿಂತಿರುಗಿದಾಗ ಆ ಪ್ರದೇಶಗಳಲ್ಲಿ ಈ ಚಕ್ಕೆ ಕಲ್ಲಿನಾಯುಧಗಳ ಸಂಸ್ಕೃತಿ ಹರಡಿ ಪ್ರಬಲವಾಯಿತು. ಈ ಮೇಲಿನ ಸಂಸ್ಕೃತಿಗಳು ಸುಮಾರು ಪ್ರ.ಶ.ಪು.5 ಲಕ್ಷದಿಂದ 2 ಲಕ್ಷ ವರ್ಷಗಳವರೆಗೂ ರೂಢಿಯಲ್ಲಿದ್ದವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
  • ಮಧ್ಯ ಪ್ಲಿಸ್ಟೊಸೀನ್ ಯುಗದ ಅಂತ್ಯಭಾಗದಲ್ಲಿ ಇಂಗ್ಲೆಂಡಿನ ಸಪೋಕ್ ಪ್ರದೇಶಕ ಹೈ ಲಾಡ್್ಜ ಮುಂತಾದೆಡೆಗಳಲ್ಲಿ ಕೈಗೊಡಲಿ ಮತ್ತು ಕ್ಲಾಕ್ಟೋನಿಯನ್ ಎರಡರ ಮಿಶ್ರಸಂಸ್ಕೃತಿಗಳು ಬಳಕೆಯಲ್ಲಿದ್ದವು. ಮಾನವ ನಾಗರಿಕತೆಯ ಮುಂದಿನ ಹಂತಗಳಲ್ಲಿ ಕಂಡುಬರುವ ಮತ್ತು ಅದರ ಅಭಿವೃದ್ಧಿಗೆ ಬಹುಮಟ್ಟಿಗೆ ಕಾರಣವಾಗಿರುವ ಈ ಬೇರೆ ಬೇರೆ ಸಂಸ್ಕೃತಿಗಳ ಮಿಶ್ರಣಕಾರ್ಯ ಈ ಯುಗದಲ್ಲಿ ಪ್ರಾರಂಭವಾಗಿರುವುದು ಗಮನಾರ್ಹ. ಬಹುಶಃ ಈ ರೀತಿಯ ಮಿಶ್ರಸಂಸ್ಕೃತಿಗಳು ಸುಮಾರು ಒಂದು ಲಕ್ಷ ವರ್ಷಕಾಲ ಇಂಗ್ಲೆಂಡಿನಲ್ಲಿ ಬಳಕೆಯಲ್ಲಿದ್ದಂತೆ ತಿಳಿದುಬರುತ್ತದೆ.

ಪೂರ್ವ ಶಿಲಾಯುಗ[ಬದಲಾಯಿಸಿ]

  • ಪೂರ್ವಶಿಲಾಯುಗದ ಮಧ್ಯಕಾಲೀನ ಸಂಸ್ಕೃತಿಯೆಂದು ಯುರೋಪಿನಲ್ಲಿ ಹೆಸರಾಗಿರುವ ಮೌಸ್ಟೀರಿಯನ್ ಸಂಸ್ಕೃತಿಯನ್ನು ಹೋಲುವ ಸಮಕಾಲೀನ ಸಂಸ್ಕೃತಿಯೊಂದು ಡರ್ಬಿಷೈರಿನ ಕ್ರೆಸ್ವಿಲ್ ಕ್ರಾಗ್ಸ್ ಎಂಬಲ್ಲಿ ಕಂಡುಬಂದಿದೆ. ಡೆವಾನ್ಷೈರಿನ ಕೆಂಟ್ಸ್ ಗುಹೆಗಳಲ್ಲಿ ಅಷೂಲಿಯನ್ ಮತ್ತು ಲೆವಾಲ್ವಾ ಸಂಸ್ಕೃತಿಗಳಿಂದ ಪ್ರಭಾವಿತವಾದ ಮೌಸ್ಟೀರಿಯನ್ ಸಂಸ್ಕೃತಿಯ ಅವಶೇಷಗಳು ನಿಯಾಂಡರ್ಥಾಲ್ ಮಾನವನ ಅವಶೇಷಗಳೊಂದಿಗೆ ದೊರೆತಿವೆ.
  • ಪೂರ್ವಶಿಲಾಯುಗದ ಅಂತ್ಯಕಾಲದಲ್ಲಿ ನೈರುತ್ಯ ಯುರೋಪಿನಲ್ಲಿ ಬಹಳ ಉನ್ನತಮಟ್ಟದ ಕಲೆ, ಮೂಳೆಯ ಮತ್ತು ವಿಲಂಬಿತ ಚಕ್ಕೆ ಕಲ್ಲಿನ ಆಯುಧಗಳ ಉಪಯೋಗದಿಂದ ಕೂಡಿದ್ದ ಸಂಸ್ಕೃತಿ ಬೆಳೆಯಿತು. ಇದರ ಪ್ರತಿಧ್ವನಿ ಇಂಗ್ಲೆಂಡಿನ ಕ್ರೆಸ್ವಿಲ್ ಕ್ರಾಗ್ಸ್ನಲ್ಲಿ ಕಂಡುಬಂದು, ಕ್ರೆಸ್ ವಿಲಿಯನ್ ಸಂಸ್ಕೃತಿಯೆಂದು ಹೆಸರಾಯಿತು.

ಮಧ್ಯ ಶಿಲಾಯುಗ[ಬದಲಾಯಿಸಿ]

  • ಪ್ಲಿಸ್ಟೊಸೀನ್ ಯುಗದ ಅನಂತರ ಪ್ರಾರಂಭವಾದ ಮಧ್ಯಶಿಲಾ ಯುಗದ ಸಂಸ್ಕೃತಿಯ ಅವಶೇಷಗಳು ಇಂಗ್ಲೆಂಡಿನಲ್ಲಿ ಕಂಡುಬಂದು, ಮೂರು ಗುಂಪುಗಳಾಗಿ ವಿಂಗಡವಾಗುತ್ತದೆ. ಸ್ಕಾಂಡಿನೇವಿಯದ ಪ್ರಭಾವಕ್ಕೊಳಗಾದ ಆಗ್ನೇಯ ಭಾಗಗಳಲ್ಲಿ ಚಕಮಕಿಕಲ್ಲಿನ ಕೊಡಲಿ, ಪಕ್ಕಗಳಲ್ಲಿ ಕಲ್ಲಿನ ಹಲ್ಲುಗಳಿಂದ ಸಜ್ಜಿತವಾದ ಮೂಳೆಯ ಮೀನುಭರ್ಜಿಗಳು ಮತ್ತಿತರ ಬೇಟೆಯ ಆಯುಧಗಳನ್ನೊಳಗೊಂಡಿದ್ದ ಸಂಸ್ಕೃತಿ ನಾರ್ಥಂಬರ್ಲೆಂಡಿನಿಂದ ಈಸ್ಟ್ ಆಂಗ್ಲಿಯದವರೆಗೂ ಹಬ್ಬಿದ್ದಿತು.
  • ಫ್ರಾನ್ಸ್ ಮತ್ತು ಬೆಲ್ಜಿಯಂ ಸಂಸ್ಕೃತಿಗಳಿಂದ ಪ್ರಭಾವಿತವಾಗಿದ್ದ ಎರಡನೆಯ ಗುಂಪಿನ ಸಂಸ್ಕೃತಿಗಳು ಆಗ್ನೇಯ ಇಂಗ್ಲೆಂಡಿನಿಂದ ವೇಲ್ಸ್ವರೆಗೂ ಹಬ್ಬಿದ್ದುವು. ಇವರ ಸಂಸ್ಕೃತಿಗೆ ಟಾರ್ಡೆನಾಸಿಯನ್ ಸಂಸ್ಕೃತಿಯೆಂದು ಹೆಸರಿಸಲಾಗಿದೆ (ಟಾರ್ಡೆನಾನೀಯನ್). ಮೂರನೆಯ ಗುಂಪಿನ ಓಬಾನಿಯನ್ ಸಂಸ್ಕೃತಿ ಫ್ರಾನ್ಸಿನ ಅಜೀಲಿಯನ್ ಸಂಸ್ಕೃತಿಯ ಗುಂಪಿಗೆ ಸೇರಿದ್ದು ಸ್ಕಾಟ್ಲೆಂಡ್ ಮುಖಾಂತರ ಬ್ರಿಟನ್ನಿಗೆ ಬಂದು ಅದರ ಪ್ರಭಾವಗಳು ಉತ್ತರ ಭಾಗಗಳಲ್ಲಿ ಕಂಡುಬರುತ್ತವೆ.
  • ಈ ಮಧ್ಯಯುಗೀನ ಸಂಸ್ಕೃತಿಯ ಜನ ಬೇಟೆ ಮತ್ತು ಆಹಾರ ಸಂಗ್ರಹಣೆಯಿಂದ ಜೀವನ ನಡೆಸುತ್ತಿದ್ದರು. ಪೂರ್ವ ಶಿಲಾಯುಗಕಾಲದ ಇಲ್ಲಿನ ಜನರು ಹೊರಗಿನಿಂದ ಬಂದ ಜನ ಮತ್ತು ಸಂಸ್ಕೃತಿಗಳನ್ನು ಅಳವಡಿಸಿಕೊಂಡರು. ಮಧ್ಯ ಶಿಲಾಯುಗದ ಉತ್ತರಾರ್ಧದಲ್ಲಿ ಡೆನ್ಮಾರ್ಕ್ ಮುಂತಾದ ಕಾಡುಪ್ರದೇಶಗಳಿಂದ ಬಂದ ಜನ ನಯ ಮಾಡಿದ ಅಂಚುಗಳುಳ್ಳ ಕಲ್ಲಿನ ಕೊಡಲಿಗಳನ್ನು ಮೂಳೆ ಅಥವಾ ಕೊಂಬಿನ ಹಿಡಿಗಳಲ್ಲಿ ಸಿಕ್ಕಿಸಿ ಕಾಡುಗಳನ್ನು ಕಡಿಯಲು ಉಪಯೋಗಿಸಲಾರಂಭಿಸಿದರು. ಈ ಜನ ಸಸ್ಸಿಕ್ಸ್, ಯಾರ್ಕ್ಷೈರ್ ಪ್ರದೇಶಗಳಲ್ಲಿ ನೆಲೆಸಿದರು.

ನೂತನ ಶಿಲಾಯುಗ[ಬದಲಾಯಿಸಿ]

  • ನೂತನ ಶಿಲಾಯುಗದಲ್ಲಿ ಇಂಗ್ಲೆಂಡಿನಲ್ಲಿ ಕಂಡುಬರುವ ಸಂಸ್ಕೃತಿಗಳಲ್ಲಿ ಮೊದಲನೆಯದು ವಿಂಡ್ಮಿ ಸಂಸ್ಕೃತಿ. ಪ್ರ.ಶ.ಪು. 3500ರ ಸುಮಾರಿನಲ್ಲಿ ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಬಳಕೆಗೆ ಬಂದ ಈ ಸಂಸ್ಕೃತಿ ಕಾಲದಲ್ಲಿ ಆಹಾರೋತ್ಪಾದನೆ ಪ್ರಾರಂಭವಾಗಿ ವ್ಯವಸಾಯ ಮುಖ್ಯ ವೃತ್ತಿ ಯಾಯಿತು. ದಕ್ಷಿಣಭಾಗದಲ್ಲಿ ವಿರಳವಾಗಿದ್ದ ಕಾಡುಪ್ರದೇಶಗಳಲ್ಲಿ ಗೋದಿ ಮತ್ತು ಬಾರ್ಲಿ ಬೆಳೆಗಳನ್ನು ರೂಢಿಸುವುದಲ್ಲದೆ ಆಡು, ಕುರಿ, ಹಂದಿಗಳನ್ನು ಸಾಕುತ್ತಿದ್ದರು. ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು. ಬಿಲ್ಲುಬಾಣಗಳ ಸಹಾಯದಿಂದ ಬೇಟೆಯಾಡುತ್ತಿದ್ದರು.
  • ಬಯಲು ಪ್ರದೇಶದಲ್ಲಿ ಆಯತಾಕಾರದ ಮನೆಗಳಲ್ಲಿ ಸರೋವರ ತೀರಗಳಲ್ಲಿ ವಾಸಿಸುತ್ತಿದ್ದರು. ತಮ್ಮ ದನಗಳಿಗೆ ದೊಡ್ಡಿಗಳನ್ನು ನಿರ್ಮಿಸುತ್ತಿದ್ದರು. ಇವರ ಸಮಾಧಿ ಮತ್ತು ವಾಸಸ್ಥಳಗಲ್ಲಿ ಒರಟಾದ ಹೆಣ್ಣುದೇವತೆಗಳ ಗೊಂಬೆಗಳು ದೊರೆತಿದ್ದು, ಇವರು ಮಾತೃದೇವತೆಯನ್ನು ಪೂಜಿಸುತ್ತಿದ್ದ ರೆಂಬುದನ್ನು ಸೂಚಿಸುತ್ತದೆ. ಸ್ವಲ್ಪಕಾಲಾನಂತರ ಪಶ್ಚಿಮ ದಿಕ್ಕಿನಿಂದ ಬೃಹತ್ ಶಿಲಾಸಮಾಧಿಗಳ ಉಪಯೋಗ ಪ್ರಮುಖವಾಗಿದ್ದ ನೂತನ ಶಿಲಾಯುಗ ಸಂಸ್ಕೃತಿ ವೇಲ್ಸ್, ಸ್ಕಾಟ್ಲೆಂಡ್ ಮತ್ತು ಪಶ್ಚಿಮ ಇಂಗ್ಲೆಂಡ್ ಪ್ರದೇಶಗಳಲ್ಲಿ ಪ್ರಬಲವಾಯಿತು.
  • ಕಾಟ್ಸ್ವಲ್ಡ್, ವಿಲ್ಟ್ಷೈರ್, ಆವ್ಬರಿ, ಸಾಮರ್ಸೆಟ್ ಮೊದಲಾದ ಪ್ರದೇಶಗಳಲ್ಲಿ ಹರಡಿದ ಈ ಸಂಸ್ಕೃತಿಯಲ್ಲಿ ಸಾಮುದಾಯಿಕವಾದ ದೊಡ್ಡಕಲ್ಲುಗಳಿಂದ ನಿರ್ಮಿತವಾದ ಸಮಾಧಿಗಳು ರೂಪಾಂತರಗಳಲ್ಲಿ ಉಪಯೋಗಕ್ಕೆ ಬಂದವು. ವ್ಯವಸಾಯ, ಪಶುಪಾಲನೆ, ಕಾಡುಗಳನ್ನು ಕಡಿಯುವುದು, ಮಣ್ಣಿನ ಪಾತ್ರೆಗಳ ನಿರ್ಮಾಣ ಇವರ ಮುಖ್ಯ ವೃತ್ತಿಗಳಾಗಿದ್ದವು. ನೂತನಶಿಲಾಯುಗ ಸಂಸ್ಕೃತಿಗಳೆಂದು ಕರೆಯಲ್ಪಡುವ ಈ ಸಂಸ್ಕೃತಿಗಳು ಅಲ್ಲಲ್ಲಿ ಕಂಡುಬರುತ್ತವೆ.
  • ಪೀಟರ್ ಬರೋ ಸಂಸ್ಕೃತಿಯೆಂದು ಹೆಸರಾದ ಈ ಸಂಸ್ಕೃತಿಯಲ್ಲಿ ಬೇಟೆಗಾರಿಕೆ, ಮೀನು ಹಿಡಿಯುವಿಕೆ ಮುಂತಾದ ಆಹಾರ ಸಂಗ್ರಹಣ ಪದ್ಧತಿಗಳು ಆಹಾರೋತ್ಪಾದನಾ ಪದ್ಧತಿಯೊಂದಿಗೆ ಮುಂದುವರಿದವು. ಥೇಮ್ಸ್ ನದೀ ಕಣಿವೆ, ಈಸ್ಟ್ ಆಂಗ್ಲಿಯ, ಸಸೆಕ್ಸ್, ಬ್ರೈಟನ್ ಮತ್ತು ವೆಸಿಕ್ಸ್ ಪ್ರದೇಶಗಳಲ್ಲಿ ಈ ಸಂಸ್ಕೃತಿಯ ಕುರುಹುಗಳು ಕಂಡುಬಂದಿವೆ. ಇದೇ ಗುಂಪಿಗೆ ಸೇರಿದ ಮತ್ತೊಂದು ಸಂಸ್ಕೃತಿಯನ್ನು ಸ್ಕರಬ್ರೇ ಸಂಸ್ಕೃತಿಯೆಂದು ಕರೆಯುತ್ತಾರೆ. ಈ ಸಂಸ್ಕೃತಿಗಳ ಕಾಲ ಸು. ಪ್ರ.ಶ.ಪು. 3000 ಎಂದು ನಿರ್ದೇಶನ ಮಾಡಲಾಗಿದೆ.

ಕಂಚಿನ ಯುಗ[ಬದಲಾಯಿಸಿ]

  • ಪ್ರ.ಶ.ಪು. 2000 ವರ್ಷಗಳ ಅನಂತರ ಲೋಹಗಳು ಉಪಯೋಗಕ್ಕೆ ಬರಲಾರಂಭಿಸಿ ಕಂಚಿನ ಯುಗ ಪ್ರಾರಂಭವಾಯಿತೆನ್ನಬಹುದು. ಈ ಕಂಚಿನಯುಗದ ಪ್ರಾರಂಭ ಉತ್ತರ ಯುರೋಪಿನಿಂದ ಇಂಗ್ಲೆಂಡಿಗೆ ವಲಸೆ ಬರಲಾರಂಭಿಸಿದ ಬೆಲ್ ಬೀಕರ್ ಎಂದು ಹೆಸರಾಗಿರುವ ವಿಶಿಷ್ಟ ಸಂಸ್ಕೃತಿಯೊಂದರಿಂದ ಗುರುತಿಸಲ್ಪಡುತ್ತದೆ. ಕೆಂಟ್, ಸಸೆಕ್ಸ್, ವೆರ್ಸೆಕ್ಸ್, ಯಾರ್ಕ್ಷೈರ್, ಡಾರ್ಸೆಟ್ ಮುಂತಾದೆಡೆಗಳಲ್ಲಿ ಈ ಬೀಕರ್ ಎಂಬ ವಿಶಿಷ್ಟ ರೀತಿಯ ಜಾಡಿಗಳು ಈ ಜನರ ಸಮಾಧಿಗಳಲ್ಲಿ ಕಂಡುಬಂದಿವೆ.
  • ಈ ಜನ ಬಿಲ್ಲು, ಹಿಡಿಯಿದ್ದ ಬಾಕು, ಈಟಿ ಮುಂತಾದ ತಾಮ್ರದ ಆಯುಧಗಳಲ್ಲದೆ, ಚಿನ್ನ, ತಾಮ್ರ ಮುಂತಾದ ಲೋಹಗಳ ಆಭರಣಗಳನ್ನು ಬಳಸುತ್ತಿದ್ದರು. ಇವರು ಯುರೋಪಿನ ಹಲವಾರು ಪ್ರದೇಶಗಳಲ್ಲಿ ದೊರಕುತ್ತಿರಬಹುದಾಗಿದ್ದ ಚಿನ್ನ, ತಾಮ್ರ, ಶಿಲಾರಾಳ (ಅಂಬರ್), ಜೈಟ್ (ಒಂದು ಬಗೆಯ ಕಲ್ಲಿದ್ದಲಿನಂತಹ ಖನಿಜ) ಮುಂತಾದವುಗಳನ್ನು ಹುಡುಕುತ್ತಾ ಬಂದವರು. ಇವರು ಇಂಗ್ಲೆಂಡ್, ಯುರೋಪ್ ಮತ್ತಿತರ ಪ್ರದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಬೆಳೆಸಿಕೊಂಡರು. ಆದ್ದರಿಂದ ಇತರ ಸಂಸ್ಕೃತಿಗಳ ಸಂಪರ್ಕವೂ ಹೆಚ್ಚಿತು.
  • ಈ ಕಾರಣಗಳ ದೆಸೆಯಿಂದ ಪ್ರ.ಶ. ಪು. 1600-1400 ವರ್ಷಗಳ ಮಧ್ಯಕಾಲದಲ್ಲಿ ಸುಪ್ರಸಿದ್ಧವಾದ ಸ್ಟೋನ್ ಹೆಂಜ್, ವೆಸ್ಸಿಕ್ಸಿನಲ್ಲಿ ನಿರ್ಮಿತವಾಯಿತು (ನೋಡಿ- ಸ್ಟೋನ್-ಹೆಂಜ್). ಕಂಚಿನ ಯುಗದ ಮಧ್ಯಹಂತದಲ್ಲಿ (ಪ್ರ.ಶ.ಪು. 1400-5000) ಶಾಂತಿಯುತವಾದ ಸಂಸ್ಕೃತಿ ಕ್ರಮೇಣ ಬೆಳೆಯಿತು. ವಿಲ್ಟ್ಷೈರ್ ಪ್ರದೇಶದಲ್ಲಿ ಉದ್ದವಾದ ಮಣ್ಣಿನ ದಿಬ್ಬಗಳ ಕೆಳಗೆ ಶವಸಂಸ್ಕಾರ ಮಾಡುತ್ತಿದ್ದ ಆ ಕಾಲದ ಜನ ಕಂಚಿನ ಆಯುಧಗಳನ್ನು ಉಪಯೋಗಿಸುತ್ತ, ಪಶುಪಾಲನೆಗೆ ಹೆಚ್ಚು ಪ್ರಾಧಾನ್ಯ ಕೊಟ್ಟಿದ್ದರು.
  • ಡೆವೆರೆಲ್ ರಿಂಬುರಿಯೆಂದು ಹೆಸರಾಗಿರುವ ಈ ಸಂಸ್ಕೃತಿಯಲ್ಲಿ ಚಪ್ಪಟೆಯಾದ ಸಮಾಧಿಗಳ, ಶವಜಾಡಿಗಳ ಸ್ಮಶಾನಗಳ ಜೊತೆಗೆ ಕಲ್ಲಿನ ವರ್ತುಲಸಮಾಧಿಗಳೂ ಬಳಕೆಗೆ ಬಂದವು. ಕಂಚಿನ ಯುಗದ ಸಂಸ್ಕೃತಿಯ ಕಡೆಯ ಹಂತದಲ್ಲಿ (ಪ್ರ.ಶ.ಪು. 900-500) ಯುರೋಪಿನೊಡನೆ ವ್ಯಾಪಾರ ಪುನರಾರಂಭವಾಯಿತು ಮತ್ತು ಮುಂದಿನ ಹಂತದಲ್ಲಿ ವ್ಯವಸಾಯ ಮತ್ತು ಗ್ರಾಮೀಣ ಕೈಗಾರಿಕೆಗಳು ಬೆಳೆಯಲು ಕಾರಣವಾಯಿತು. ಈ ಹಂತದ ಕೊನೆಗಾಲದಲ್ಲಿ ವಿಲ್ಟ್ಷೈರಿನಲ್ಲಿ ಕಬ್ಬಿಣದ ಉಪಯೋಗ ಕಂಡುಬಂದಿದೆ. ಇದೇ ಸಮಯದಲ್ಲಿ ಕೆಲ್ಟಿಕ್ ಜನಾಂಗಗಳು ಇಂಗ್ಲೆಂಡಿಗೆ ಬರಲಾರಂಭಿಸಿದುವು.

ಕಬ್ಬಿಣ ಯುಗ[ಬದಲಾಯಿಸಿ]

  • ಇಂಗ್ಲೆಂಡಿನಲ್ಲಿ ಮೂರು ಸಂಸ್ಕೃತಿಯ ಅವಶೇಷಗಳನ್ನು ಕಬ್ಬಿಣ ಯುಗದಲ್ಲಿ ಗುರುತಿಸಿದ್ದರೂ ಅವು ಪರಸ್ಪರ ಸಮಕಾಲೀನವೆಂಬುದು ತಿಳಿದುಬರುತ್ತದೆ. ಫ್ರಾನ್ಸಿನ ಗಾಲ್ ಮತ್ತು ಆಗ್ನೇಯ ದಿಕ್ಕುಗಳಿಂದ ಅವು ಪ್ರವೇಶಿಸಿದವು. ಪ್ರ.ಶ.ಪು. 450ರ ವೇಳೆಗೆ ಹಾಲ್ಸ್ಪಾಟ್ ಕಬ್ಬಿಣಯುಗ ಸಂಸ್ಕೃತಿ ಯ ಅವಶೇಷಗಳು ವೆಸಕ್ಸ್, ಸಾಲಿಸ್ಬರಿ, ನಾರ್ಥಾಂಪ್ಟನ್ ಷೈರ್ ಮತ್ತು ಥೇಮ್ಸ್ ಬಯಲಿನಲ್ಲಿ ಕಂಡುಬರುತ್ತವೆ. ಚಚ್ಚೌಕ ಹೊಲಪದ್ಧತಿ, ವ್ಯವಸಾಯ ರಂಗದಲ್ಲಿ ಈ ಜನರ ಮುಖ್ಯ ಕಾಣಿಕೆ. ಗೋದಿ ಬಾರ್ಲಿಗಳನ್ನು ಬೆಳೆಯುತ್ತಿದ್ದರು. ನೇಯ್ಗೆ ಕಲೆ ಪ್ರಾರಂಭವಾಯಿತು.
  • ಕೋಟೆಗಳು ಬಳಕೆಗೆ ಬಂದವು. ಮಧ್ಯಕಾಲೀನ ಸಂಸ್ಕೃತಿಯಾದ ಲ್ಯಾಟಿನ್ಸಂಸ್ಕೃತಿ ಪುರ್ವಪ್ರದೇಶಗಳಲ್ಲಿ ಪ್ರ.ಶ.ಪು.300ರ ವೇಳೆಗೆ ಬೆಳಕಿಗೆ ಬಂತು. ಯಾರ್ಕ್ಷೈರ್, ಕೆಂಟ್, ವೆರ್ಸೆಕ್ಸ್ ಮುಂತಾದಡೆಗಳಲ್ಲಿ ಪ್ರಬಲವಾಗಿದ್ದ ಈ ಸಂಸ್ಕೃತಿಯಲ್ಲಿ ಕತ್ತಿ, ಗುರಾಣಿ, ಕುದುರೆ ಜೀನು, ಯುದ್ಧರಥ ಗಳ ಬಳಕೆ ಹೆಚ್ಚಾಯಿತು. ಈ ಜನ ಯುದ್ಧಪ್ರಿಯರಾಗಿದ್ದರು. ಪ್ರ.ಶ.ಪು.50ರ ಸುಮಾರಿಗೆ ಅಂತ್ಯಕಾಲೀನ ಕಬ್ಬಿಣಯುಗದ ಬೆಲೆ ಸಂಸ್ಕೃತಿಯ ಪ್ರವೇಶವಾಯಿತು. ಈ ಕಾಲದಲ್ಲಿ ಕೆಲ್ಟಿಕ್ ಟ್ಯುಟಾನಿಕ್ ಪಂಗಡಗಳ ಮಿಶ್ರಜನಾಂಗ ಹುಟ್ಟಿಕೊಂಡಿತು.
  • ಇವರು ಕೆಂಟ್, ವೆರ್ಸೆಕ್ಸ್ ಪ್ರಾಂತ್ಯಗಳಲ್ಲಿ ಪ್ರಬಲರಾಗಿದ್ದರು. ಕೆಂಟ್, ವೆರ್ಸೆಕ್ಸ್ ಹರ್ಟ್ಫರ್ಡ್ಷೈರ್, ಮಿಡ್ಸೆಕ್ಸ್ ಮುಂತಾದ ಪ್ರದೇಶಗಳಲ್ಲಿ ಕ್ರಮೇಣ ಹಬ್ಬಿ, ಸುವ್ಯವಸ್ಥಿತ ರಾಜ್ಯಗಳನ್ನು ಸ್ಥಾಪಿಸಿ ಇತಿಹಾಸಯುಗವನ್ನು ಪ್ರಾರಂಭಿಸಿದರು. ಪ್ರ.ಶ.43ರಲ್ಲಿ ರೋಮನ್ನರು ಇಂಗ್ಲೆಂಡಿನ ಮೇಲೆ ದಾಳಿ ಮಾಡುವವರೆಗೂ ಇವರು ಪ್ರಬಲವಾಗಿದ್ದು ಹಂತಹಂತವಾಗಿ ರೋಮನ್ ಮತ್ತು ಬೆಲ್ಜಿಕ್ ಮಿಶ್ರಸಂಸ್ಕೃತಿಗಳನ್ನು ಇಲ್ಲಿ ಹರಡಿದರು.
  • ಇಂಗ್ಲೆಂಡಿನ ಮೂಲ ನಿವಾಸಿಗಳು ಐಬೀರಿಯನ್ನರು. ಇವರು ಕಪ್ಪು ಬಣ್ಣದ ಕುಳ್ಳರು. ಕಲ್ಲು ಮತ್ತು ಲೋಹದ ಆಯುಧಗಳನ್ನು ಬಳಸುತ್ತಿದ್ದರು. ಯುದ್ಧ ಇವರ ಆಸಕ್ತಿಯ ವಿಷಯ. ಇವರು ಬಟ್ಟೆ ಮ, ಬುಟ್ಟಿ, ಲೋಹದ ಸಾಮಾನು ಮುಂತಾದವನ್ನು ತಯಾರಿಸುತ್ತಿದ್ದರು. ವ್ಯವಸಾಯವೂ ಪಶುಪಾಲನೆಯೂ ಇವರ ಕಸುಬು. ಕೆಲ್ಟ್ ಬುಡಕಟ್ಟಿನವರು ಮೇಲೆರಗಿ ಬಂದಾಗ ಇವರು ಸೋತರು. ಕೆಲ್ಟರು ಐಬೀರಿಯನ್ನರನ್ನು ಕೊಂದರು. ಗುಲಾಮರನ್ನಾಗಿ ಮಾಡಿದರು.
  • ಕೆಲ್ಟರು ಎತ್ತರದ ಬಲಶಾಲಿಗಳು. ಗುಂಪುಗುಳಿತನ ಅವರ ಸ್ವಭಾವ. ಆಗಾಗ್ಗೆ ಅವರವರಲ್ಲೇ ಕಾದಾಟ ನಡೆಯುತ್ತಿತ್ತು. ಅವರು ಪ್ರಕೃತಿಯ ಆರಾಧಕರಾಗಿದ್ದರು. ಐಬೀರಿಯನ್ನರಿಗಿಂತ ಸ್ವಲ್ಪ ಮುಂದುವರೆದಿದ್ದರು. ಕ್ರಿಸ್ತನ ಜನ್ಮಕ್ಕೆ ಒಂದು ಸಾವಿರ ವರ್ಷಗಳ ಮುನ್ನ ಬ್ರಿಟಿಷ್ ದ್ವೀಪಗಳಿಗೆ ಕೆಲ್ಟರೇ ಅಲ್ಲದೇ ಇನ್ನೂ ಅನೇಕ ಜನಾಂಗಗಳವರು ಬಂದರು. ಇಂಗ್ಲೆಂದಿನ ನಿರ್ಮಾಣಕ್ಕೆ ಕಾರಣರಾದರು. ಇವರಲ್ಲಿ ಮುಖ್ಯರೆಂದರೆ ಆಂಗ್ಲೋ ಸ್ಯಾಕ್ಸನರು, ಸ್ಕಾಂಡಿನೇವಿಯನ್ನರು, ನಾರ್ಮನ್ನರು ಹಾಗೂ ರೋಮನ್ನರು.

ರೋಮನ್ನರ ಆಕ್ರಮಣ[ಬದಲಾಯಿಸಿ]

  • ಜೂಲಿಯಸ್ ಸೀಸರ್ ಇಲ್ಲಿಗೆ ಬಂದ ಮೊದಲ ಮುಖ್ಯ ಆಕ್ರಮಣಕಾರ. ರೋಮನ್ ಆಕ್ರಮಣಕಾರಿಗಳು ತಮ್ಮ ಧರ್ಮ ಮತ್ತು ನಾಗರಿಕತೆಯನ್ನು ಇಲ್ಲಿ ಹರಡಿದರು; ಆದರೆ ಅಪೇಕ್ಷಿತ ಪ್ರಭಾವ ಉಂಟುಮಾಡಲಾಗಲಿಲ್ಲ. ಸೀಸರ್ನ ಅನಂತರದ ಚಕ್ರವರ್ತಿ ಕ್ಲಾಡಿಯಸ್ ಆರು ಸಾವಿರ ಸೈನಿಕ ರನ್ನು ಬ್ರಿಟನ್ನಿನ ಮೇಲೆ ಕಳುಹಿಸಿದ. ಕೆಲಭಾಗ ಆತನ ವಶವಾಯಿತು. ಕ್ಯಾರಕ್ಟಕಸ್ ಎಂಬುವನ ನೇತೃತ್ವದಲ್ಲಿ ಬ್ರಿಟನ್ ರೋಮನ್ನರನ್ನು ಎದುರಿಸಿತು. ಸೆರೆ ಸಿಕ್ಕಿದ ಕ್ಯಾರಕ್ಟಕಸ್ ರೋಮಿಗೆ ಹೋಗಬೇಕಾಯಿತು. 78-85ರಲ್ಲಿ ಬ್ರಿಟನ್ ರೋಮ್ ಆಡಳಿತವನ್ನೊಪ್ಪಿತು.
  • ಇಲ್ಲಿನ ಜನ ಲ್ಯಾಟಿನ್ ಭಾಷೆಗೆ ಮಾರುಹೋದರು. ಇದು ರೋಮ್ ದೇಶದ ಒಂದು ಪ್ರಾಂತ್ಯವಾಯಿತು. ಕೆಲವರು ರೋಮಿನೊಂದಿಗೆ ವ್ಯಾಪಾರ ಪ್ರಾರಂಭಿಸಿ ಎರಡು ದೇಶಗಳ ನಡುವೆ ಬೆಸುಗೆ ಹಾಕಿದರು. ಆ್ಯಂಗ್ಲೊ-ಸ್ಯಾಕ್ಸನರು: ರೋಮ್ ಸಾಮ್ರಾಜ್ಯದೊಳಗಿನ ಜನರು ದೇಶದ ಭದ್ರತೆ ಗೆ ಬಿಕ್ಕಟ್ಟನ್ನು ತರಲು ಪ್ರಯತ್ನಿಸಿದರು. ಆ್ಯಂಗಲ್ ಮತ್ತು ಸ್ಯಾಕ್ಸನ್ ಬುಡಕಟ್ಟಿನವರು ಆಗಾಗ್ಗೆ ಬ್ರಟಿಷ್ ದ್ವೀಪಗಳ ಮೇಲೆ ನುಗ್ಗಿ ಲೂಟಿಮಾಡಲು ಬರುತ್ತಿದ್ದರು; ಕೊನೆಗೆ ಅಲ್ಲಿಯೇ ನೆಲೆಸಿದರು. ಇಂದಿನ ಬ್ರಿಟನ್ ಸಂಸ್ಕೃತಿ ಮತ್ತು ಆಂಗ್ಲಭಾಷೆ ಆ್ಯಂಗ್ಲೊ-ಸ್ಯಾಕ್ಸನರ ಕೊಡುಗೆ.
  • 9ನೆಯ ಶತಮಾನದಲ್ಲಿ ಎಗ್ಬರ್ಟ್ ರಾಜನಾದ. ಆತ ಬ್ರಿಟನ್ನಿನ ಮೊದಲ ದೊರೆ. ಕೆಂಟ್, ಮರ್ಸಿಯ, ನಾರ್ಥಂಬ್ರಿಯ, ಎಸೆಕ್ಸ್ ಪ್ರಸಿದ್ಧ ನಗರಗಳು. ಡೇನರು ಅವುಗಳ ಮೇಲೆ ಸತತ ದಾಳಿ ಮಾಡುತ್ತಿದ್ದರು. ಇಂಗ್ಲೆಡನ್ನು ರಕ್ಷಿಸುವ ಕಾರ್ಯವನ್ನು ಎಗ್ಬರ್ಟ್ ಮಾಡಿದ. ಎಥೆಲ್ ಬರ್ಟ್ ರಾಜನ ಕಾಲದಲ್ಲಿ ರೋಮಿನಿಂದ ಪಾದ್ರಿಗಳ ಗುಂಪೊಂದು ಪೋಪ್ ಗ್ರೆಗರಿಯ ಆದೇಶಾನುಸಾರವಾಗಿ ಇಂಗ್ಲೆಂಡಿಗೆ ಬಂತು. (ಇಂಗ್ಲೆಂಡಿನ-ಚರ್ಚು).
  • ಆಗಸ್ಟೈನ್ ಎಂಬ ಪಾದ್ರಿ ಈ ಗುಂಪಿನ ನಾಯಕ. ಮೊದಲ ಬಾರಿಗೆ ಇಂಗ್ಲೆಂಡ್ ಜನರು ಹೆಚ್ಚು ಸಂಖ್ಯೆಯಲ್ಲಿ ಕ್ರೈಸ್ತ ಮತವನ್ನು ಅವಲಂಬಿಸಿದರು. ಆ್ಯಂಗ್ಲೊ-ಸ್ಯಾಕ್ಸನರ ಸಾಧನೆಯೆಂದರೆ ಅವರ ಗ್ರಾಮಜೀವನ. ಗ್ರಾಮಗಳ ಸ್ವಯಂ ಆಡಳಿತ ಅವರ ವೈಶಿಷ್ಟ್ಯ. ಹಂಡ್ರೆಡ್ ಮೂಟ್, ಷೈರ್ ಮೂಟ್, ವಿಲೇಜ್ ಮೂಟ್ ಮುಂತಾದ ಸಭೆಗಳು ಜಾರಿಯಲ್ಲಿದ್ದವು.

ಡೇನರು[ಬದಲಾಯಿಸಿ]

  • ಎಗ್ಬರ್ಟನ ಮರಣಾನಂತರ ಡೇನರು ಇಂಗ್ಲೆಂಡಿನ ಮೇಲೆ ದಾಳಿ ಮಾಡಿದರು. ಇವರು ಸ್ಕಾಂಡಿನೇವಿಯದವರು. ಇವರು ಇಂಗ್ಲೆಂಡನ್ನು ಕೊಳ್ಳೆಹೊಡೆದರು; ಥೇಮ್ಸ್ ನದಿಯನ್ನು ದಾಟಿದರು. ಆಲ್ಫ್ರೆಡ್ ಡೇನರನ್ನು ಸೋಲಿಸಿದ. ಈತನ ಕೀರ್ತಿ ಅಪಾರವಾಗಿತ್ತು. ಇಂಗ್ಲೆಂಡಿನ ಸಂಸ್ಕೃತಿಗೆ ಈತನ ಕಾಣಿಕೆ ಮಹತ್ತರವಾದದ್ದು. ಈತನ ಕಾಲದಲ್ಲಿ ಲ್ಯಾಟಿನ್ ಭಾಷೆಯಿಂದ ಆಂಗ್ಲ ಭಾಷೆಗೆ ಅನೇಕ ಪುಸ್ತಕಗಳು ಭಾಷಾಂತರವಾದವು. ಈತನ ಕಾಲದಲ್ಲಿದ್ದ ಬೀಡ್ ಎಂಬ ಪಾದ್ರಿ ಮೊದಲ ಬಾರಿಗೆ ಇಂಗ್ಲೆಂಡಿನ ಚರಿತ್ರೆ ರಚಿಸಿದ.
  • ಇವನ ದೂರದರ್ಶಿತ್ವಕ್ಕೆ ಒಂದು ನಿದರ್ಶನವೆಂದರೆ ಆ್ಯಂಗ್ಲೊ-ಸ್ಯಾಕ್ಸನ್ ಕ್ರಾನಿಕಲ್. ಇತಿಹಾಸ ರಚನೆಗೆ ಆಧಾರ ದೃಷ್ಟಿಯಿಂದ ಇದು ಮೊದಲ ಮೈಲಿಗಲ್ಲಾಗಿದೆ (ಆಲ್ಫ್ರೆಡ್-ಮಹಾಶಯ). ಈತನ ಮಗನಾದ ಎಡ್ವರ್ಡನ ಕಾಲದಲ್ಲಿ ಡೇನರ ರಾಜ್ಯ ಪುಡಿಪುಡಿಯಾಯಿತು. ವೆಸೆಕ್ಸ್ ರಾಜ್ಯಕ್ಕೆ ಡೇನರು ಸಾಮಂತರಾದರು. ಈತನ ಕಾಲದ ಮಹತ್ತ್ವದ ಘಟನೆಯೆಂದರೆ ಹೇಸ್ಟಿಂಗ್ಸ್ ಕದನ. ಎಡ್ವರ್ಡ್ ಬಲಹೀನನಾಗಿದ್ದ. ಅದರ ಲಾಭವನ್ನು ಶ್ರೀಮಂತರು ಪಡೆಯಲು ಯತ್ನಿಸಿದರು. ನಾರ್ಮಂಡಿಯ ವಿಲಿಯಮ್ ಸುಸಜ್ಜಿತ ಸೇನೆಯೊಂದಿಗೆ ಸ್ಯಾಕ್ಸನರ ಮೇಲೆ ದಾಳಿ ಮಾಡಿದ. ಸ್ಯಾಕ್ಸನರ ದೊರೆ ಹೆರಾಲ್ಡ್ ರಣರಂಗದಲ್ಲಿ ಸತ್ತ. 1066ರಲ್ಲಿ ವಿಲಿಯಮ್ ಎಂಬುವನು ದಿ ಕಾಂಕರರ್ ಎಂಬ ಬಿರುದು ಧರಿಸಿ ಪಟ್ಟವೇರಿದ. ಈತ ನಾರ್ಮನ್ ದೊರೆ.

ನಾರ್ಮನ್ನರು[ಬದಲಾಯಿಸಿ]

  • ಇಂಗ್ಲೆಂಡಿನಲ್ಲಿ ಊಳಿಗಮಾನ್ಯ ಪದ್ಧತಿ ಜಾರಿಗೆ ತಂದವನು ವಿಲಿಯಮನೇ. ಅಂದಿನಿಂದ ಸಮಾಜಕ್ಕೆ ಭೂಮಿಯೇ ಬುನಾದಿಯಾಗಿದೆ. ತನ್ನ ಕಾಲದ ಭೂಪದ್ಧತಿಯನ್ನು ಈತ ಒಂದು ಪುಸ್ತಕದಲ್ಲಿ ಬರೆಸಿಟ್ಟ. ದೇಶದಲ್ಲಿರುವ ಒಟ್ಟು ಜಮೀನು ತೆರಿಗೆ, ಶ್ರೀಮಂತರ ಮನೆಗಳು ಇವುಗಳೆಲ್ಲದರ ಲೆಕ್ಕಾಚಾರವನ್ನು ಅದರಲ್ಲಿ ಬರೆಸಿದ. 1085ರಲ್ಲಿ ಬರೆಸಿದ ಈ ಪುಸ್ತಕ ಡೂಮ್ಸ್ ಡೇ ಬುಕ್ ಎಂದು ಹೆಸರಾಗಿದೆ. ಸಾಲಿಸ್ಬರಿ ಎಂಬಲ್ಲಿ ಜಮೀನುದಾರರನ್ನು ವಿಲಿಯಮ್ ಬರಮಾಡಿಕೊಂಡು ಅವರಿಂದ ಸ್ವಾಮಿಭಕ್ತಿ ಪ್ರತಿಜ್ಞೆ ಪಡೆದ.
  • ಇದೇ ಸಾಲಿಸ್ಬರಿಯ ಪ್ರಮಾಣ. ಇವನ ಕಾಲದಲ್ಲಿ ಚರ್ಚ್ನಿಂದ ಹಿಡಿದು ನ್ಯಾಯಾಲಯದವರೆಗೆ ಸುಧಾರಣೆಯಾಯಿತು. ದಕ್ಷ ಆಡಳಿತ ಈತನ ಕೊಡುಗೆ. ಒಂದನೆಯ ಹೆನ್ರಿ ಎರಡನೆಯ ವಿಲಿಯಮ್ನ ಸೋದರ. ಈತನ ಕಾಲದಲ್ಲಿ ಕ್ಯೂರಿಯ ರೀಜಿಸ್ ಎಂಬ ಆಡಳಿತ ಸಭೆ ಅಭಿವೃದ್ಧಿ ಹೊಂದಿತು. ಒಬ್ಬ ಮಠಾಧಿಪತಿಯ ನೇಮಕದ ಪ್ರಶ್ನೆಯಿಂದ ಹೆನ್ರಿಗೂ ಚರ್ಚಿಗೂ ಕಾದಾಟವಾಯಿತು. ಇವನನ್ನು ನ್ಯಾಯಸಿಂಹ ಎಂದು ಕರೆಯುತ್ತಿದ್ದರು.
  • ಎರಡನೆಯ ಹೆನ್ರಿಯ ಕಾಲದಲ್ಲಿ ಸರ್ಕಾರದ ನ್ಯಾಯಾಲಯಗಳು, ಮತೀಯ ನ್ಯಾಯಾಲಯಗಳು ಎಂಬ ಎರಡು ರೀತಿಯ ನ್ಯಾಯಾಲಯಗಳಿದ್ದವು. ಇವುಗಳ ನಡುವೆ ಬಿಕ್ಕಟ್ಟು ಉಂಟಾಯಿತು. ಚರ್ಚಿನ ನ್ಯಾಯಾಲಯಗಳು ಬೇರೆ ಇದ್ದದ್ದನ್ನು ರಾಜ ಸಹಿಸಲಿಲ್ಲ. ಕ್ಯಾಂಟರ್ಬರಿಯ ಮಹಾ ಮಠಾಧಿಪತಿ ಥಾಮಸ್ ಬೆಕೆಟ್ ಈ ರಾಜನ ಆತ್ಮೀಯ ಗೆಳೆಯ. ಅಂಥವನ ಜೊತೆ ಇವನು ಕಾದಾಡಿ 1164ರಲ್ಲಿ ಕ್ಲಾರೆನ್ಡನ್ ಕಾನೂನನ್ನು ಹೊರಡಿಸಿದ.
  • ಮತೀಯ ನ್ಯಾಯಾಲಯದಲ್ಲಿ ನಡೆದ ಮೊಕದ್ದಮೆಗಳು ಅಂತಿಮವಾಗಿ ರಾಜನ ನ್ಯಾಯಾಲಯಕ್ಕೆ ಬರಬೇಕೆಂಬುದು ಈತನ ಆಜ್ಞೆಯಾಗಿತ್ತು. ಇದಕ್ಕೆ ಒಪ್ಪದ ಥಾಮಸ್ ಬೆಕೆಟ್ ತನ್ನ ಜೀವವನ್ನೇ ತೆತ್ತ (ಬೆಕೆಟ್,-ಥಾಮಸ್-ಎ). ನ್ಯಾಯದರ್ಶಿ (ಜ್ಯೂರಿ) ಪದ್ಧತಿ ಈತನ ಕಾಲದ್ದು. ಈ ಪದ್ಧತಿಯನ್ನು ಈತ ಆರ್ಥಿಕ ವ್ಯವಹಾರ ಮತ್ತು ಆಡಳಿತಕ್ಕೆ ಉಪಯೋಗಿಸಿಕೊಂಡ (ಇಂಗ್ಲಿಷ್-ನ್ಯಾಯ).
  • ಸಂಪ್ರದಾಯ ನ್ಯಾಯಕ್ಕೆ ಇಂಗ್ಲೆಂಡಿನ ಹೆನ್ರಿಯ ನ್ಯಾಯಾಲಯ ಭದ್ರ ನೆಲಗಟ್ಟಾಗಿತ್ತು. ಈತನ ಅನಂತರ ಬಂದ ಒಂದನೆಯ ರಿಚರ್ಡ್ ಮುಸಲ್ಮಾನರ ವಿರುದ್ಧ ಧರ್ಮಯುದ್ಧದಲ್ಲಿ ಭಾಗವಹಿಸಿದ್ದ. ರಿಚರ್ಡನ ಅನಂತರ ಜಾನ್ ಪಟ್ಟಕ್ಕೆ ಬಂದ. ಈತ ಕ್ರೂರಿಯೂ ಅಸಮರ್ಥನೂ ಆಗಿದ್ದ. ಧರ್ಮಗುರುಗಳು ಹಾಗೂ ಶ್ರೀಮಂತರುಗಳ ಜೊತೆ ಈತ ಸತತವಾಗಿ ಹೋರಾಡಿದ. ಪರಿಣಾಮವಾಗಿ ಈ ಜನ ತಮ್ಮ ಹಕ್ಕುಗಳಿಗಾಗಿ ಚಳವಳಿ ಹೂಡಿದರು. ಮ್ಯಾಗ್ನಕಾರ್ಟ ಆಥವಾ ಮಹಾಸನ್ನದಿಗೆ ದೊರೆ ಕೊನೆಗೂ ಸಹಿ ಹಾಕಬೇಕಾಯಿತು.
  • ಮ್ಯಾಗ್ನಕಾರ್ಟ ಪ್ರಜಾಪ್ರಭುತ್ವದ ತಳಹದಿ, ಸ್ವಾತಂತ್ರ್ಯದ ಸಾಕ್ಷಾತ್ಕಾರ ವಿಚಾರಣೆ ಇಲ್ಲದೆ ಸೆರೆ. ಅನ್ಯಾಯದ ತೆರಿಗೆ ಇವುಗಳ ವಿರುದ್ಧ ರಾಜರಿಂದ ಬರೆಸಿಕೊಂಡ ಈ ಸನ್ನದು ಇಂಗ್ಲೆಂಡಿನ ಸಂವಿಧಾನದ ಮೊದಲ ಮಹಾ ದಾಖಲೆಯೆನಿಸಿದೆ. ಮೊದಲ ಎಡ್ವರ್ಡ್ನ ಕಾಲದಲ್ಲಿ ಕಾಯಿದೆಗಳ ಸುರಿಮಳೆಯೂ ಆಯಿತು. ಪಾರ್ಲಿಮೆಂಟ್ ಇವನ ಕಾಲದಲ್ಲಿ ಪ್ರಾರಂಭವಾಯಿತು. ಪಾರ್ಲಿಮೆಂಟಿನ ಒಪ್ಪಿಗೆಯಿಲ್ಲದೆ ಯಾವುದೇ ಮಸೂದೆಯನ್ನೂ ಜಾರಿಗೆ ತರುವುದು ಕಷ್ಟವಾಗುತ್ತ ಬಂತು. ಅತ್ತ ಪಾರ್ಲಿಮೆಂಟ್ ಶಕ್ತವಾಗುತ್ತ ಬಂತು.
  • ರಾಜನ ಮಂತ್ರಿಗಳನ್ನು ಮಹಾಭಿಯೋಗಕ್ಕೆ ಗುರಿಮಾಡುವ ಅಧಿಕಾರ ಪಾರ್ಲಿಮೆಂಟಿಗೆ ಲಭಿಸಿತು. ಮೂರನೆಯ ಎಡ್ವರ್ಡನ ಕಾಲಕ್ಕೆ ಪಾರ್ಲಿಮೆಂಟಿನ ಬೆಳೆವಣಿಗೆ ಚೆನ್ನಾಗಿ ಆಯಿತು. ಹೌಸ್ ಆಫ್ ಕಾಮನ್ಸ್, ಹೌಸ್ ಆಫ್ ಲಾಡ್ರ್ಸ್ಗಳ ರಚನೆ ಈ ಕಾಲದಲ್ಲಿ ಆಯಿತು. ಮೂರನೆಯ ಎಡ್ವರ್ಡ್ನ ಕಾಲದಲ್ಲಿ ಫ್ರಾನ್ಸಿನೊಡನೆ ನೂರು ವರ್ಷಗಳ ಯುದ್ಧ ಆರಂಭವಾಯಿತು. ಇದು ಅವ್ಯಾಹತ ಹೋರಾಟವಲ್ಲ; ಆಗೊಮ್ಮೆ ಈಗೊಮ್ಮೆ ನೂರು ವರ್ಷಗಳ ತನಕ ನಡೆಯಿತು.
  • ಇಂಗ್ಲೆಂಡಿನ ರಾಜರು ಫ್ರೆಂಚ್ ರಾಜರಿಗೆ ಮರ್ಯಾದೆ ತೋರಿಸಬೇಕು ಎಂಬ ಹೇಳಿಕೆ ಈ ಯುದ್ಧಕ್ಕೆ ಪ್ರೇರಣೆಯಾಯಿತು. ಇಂಗ್ಲೆಂಡ್ ದೇಶಕ್ಕೆ ಸ್ಕಾಟ್ಲೆಂಡ್ ವಿರೋಧವಾಗಿತ್ತು. ಅದಕ್ಕೆ ಫ್ರಾನ್ಸ್ ಸಹಾಯ ನೀಡಿತು. ಇಂಗ್ಲೆಂಡ್ ಇದಕ್ಕಾಗಿ ಸಿಡಿದೆದ್ದಿತು. ಪರಿಣಾಮವಾಗಿ ನೂರು ವರ್ಷಗಳ ಯುದ್ಧ ನಡೆಯಿತು. ಮೂರನೆಯ ಎಡ್ವರ್ಡ್, ಐದನೆಯ ಹೆನ್ರಿ ಮತ್ತು ಆರನೆಯ ಹೆನ್ರಿ ಈ ಯುದ್ಧದ ಚಾಲಕರಾದರು.
  • ಆರನೆಯ ಹೆನ್ರಿಯ ಆಸ್ಥಾನದಲ್ಲಿದ್ದ ಎರಡು ಬಣಗಳ ನಡುವೆ ಯುದ್ಧದ ಬಗ್ಗೆ ನಿಶ್ಚಿತ ನಿಲುವು ಇರಲಿಲ್ಲ. ಒಂದು ಗುಂಪಿಗೆ ಯುದ್ಧ ಬೇಕಿತ್ತು. ಮತ್ತೊಂದು ಶಾಂತಿಗಾಗಿ ಹಂಬಲಿಸುತ್ತಿತ್ತು. ಹೆನ್ರಿಯ ಹೆಂಡತಿ ಮಾರ್ಗರೆಟ್ ಫ್ರಾನ್ಸಿನವಳು. ಆದ್ದರಿಂದ ಅವಳಿಗೆ ಯುದ್ಧ ಬೇಡವಾಗಿತ್ತು. ಲಂಕಾಸ್ಟ್ರಿಯನ್ ಪಂಗಡಕ್ಕೆ ಯುದ್ಧ ಬೇಕಿತ್ತು. ಒಟ್ಟಿನಲ್ಲಿ ಇಂಗ್ಲಿಷರಿಗೆ ನೂರು ವರ್ಷಗಳ ಯುದ್ಧದಲ್ಲಿ ಅಪಜಯವಾಯಿತು.
  • ಲಂಕಾಸ್ಟ್ರಿಯನ್ನರನ್ನು ರಾಜ್ಯ ಗದ್ದುಗೆಯಿಂದ ಇಳಿಸುವುದು ಯಾರ್ಕರ ಗುರಿಯಾಗಿತ್ತು. ಜೊತೆಗೆ ಫ್ರಾನ್ಸಿನೊಡನೆ ದೀರ್ಘ ಹೋರಾಟ ಮಾಡಿ ಇಂಗ್ಲಿಷರಿಗೆ ಬೇಸರ ಬಂದಿತ್ತು. ಆರನೆಯ ಹೆನ್ರಿಗೆ ಇದ್ದ ಒಬ್ಬ ಮಗ ಪಟ್ಟಕ್ಕೆ ಬರಬೇಕಾದರೆ ಲಂಕಾಸ್ಟ್ರಿಯನ್ನರೊಡನೆ ಯುದ್ಧ ಅನಿವಾರ್ಯವಾಗಿತ್ತು. ಯಾರ್ಕರು ಬಿಳಿಗುಲಾಬಿಯನ್ನೂ ಲಂಕಾಸ್ಟ್ರಿಯನ್ನರು ಕೆಂಪು ಗುಲಾಬಿಯನ್ನೂ ತಮ್ಮ ಚಿಹ್ನೆಗಳಾಗಿ ಉಪಯೋಗಿಸಿದ್ದರಿಂದ ಇವರ ನಡುವೆ ನಡೆದ ಯುದ್ಧಕ್ಕೆ ಗುಲಾಬಿ ಯುದ್ಧವೆಂದು ಹೆಸರಾಯಿತು. ಈ ಯುದ್ಧ ಇಂಗ್ಲೆಂಡಿನ ಶ್ರೀಮಂತರ ಪ್ರಾಬಲ್ಯವನ್ನು ಮುರಿಯಿತು.
  • ನಾರ್ತಾಂಪ್ಟನ್ನಿನಲ್ಲಿ ನಡೆದ ಹೋರಾಟ ಲಂಕಾಸ್ಟ್ರಿಯನ್ನರನ್ನು ಪುಡಿಪುಡಿ ಮಾಡಿತು. ಯಾರ್ಕ್ ಮತ್ತು ಅವರ ಅನುಯಾಯಿಗಳು ಸಾವಿಗೆ ಈಡಾದರು. ಈ ವೇಳೆಗೆ ಇಟಲಿಯಲ್ಲಿ ಪ್ರಾರಂಭವಾಗಿದ್ದ ಜ್ಞಾನ ಪುನರುಜ್ಜೀವನ ಚಳವಳಿ ಇಂಗ್ಲೆಂಡಿಗೂ ಹಬ್ಬಿತ್ತು. ಮಾನವರಲ್ಲಿ ಬದುಕನ್ನು ಪ್ರೀತಿಸು ವಂತೆ, ಸೌಂದರ್ಯವನ್ನು ಆರಾಧಿಸುವಂತೆ, ಮಾನವೀಯತೆಯನ್ನು ಹುಡುಕುವಂತೆ ಇದು ಪ್ರೇರಣೆ ನೀಡಿತು.
  • 4ನೆಯ ಎಡ್ವರ್ಡ್ನ ಕಾಲದಲ್ಲಿ ವಿಲಿಯಂ ಕ್ಯಾಕ್ಸ್ ಟನ್ ಒಂದು ಮುದ್ರಣಾಲಯವನ್ನು ಸ್ಥಾಪಿಸಿದ ಅನೇಕ ಗ್ರಂಥಗಳು ಹೊರಬಂದವು. ಈ ನವೋದಯದ ಕಾಲದಲ್ಲಿ ನವೀನ ಶೈಲಿಯ ಕಲೆ, ನವೀನ ಮತಧರ್ಮ, ಸಾಹಿತ್ಯ ವಿಜ್ಞಾನ ಹೊಸ ಹೊಸ ಭೂಸಂಶೋಧನೆ ಇವೆಲ್ಲ ಸಂಭವಿಸಿದವು.

ಟ್ಯೂಡರ್ ದೊರೆಗಳು[ಬದಲಾಯಿಸಿ]

  • 15ನೆಯ ಶತಮಾನದ ಕೊನೆಯ ಭಾಗದಲ್ಲಿ ಯುರೋಪಿನಲ್ಲಿ ಅನೇಕ ರಾಜಕೀಯ ಬದಲಾವಣೆಗಳಾದವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾಹ ಸಂಬಂಧಗಳು ಬೆಳೆದವು. ಇಂಗ್ಲೆಂಡಿನಲ್ಲಿ ಈ ಕಾಲದಲ್ಲಿ ಅಧಿಕಾರಕ್ಕೆ ಬಂದ ಟ್ಯೂಡರ್ ದೊರೆಗಳು ನಿರಂಕುಶ ಅಧಿಕಾರ ನಡೆಸಿದರೂ ಕ್ರಮೇಣ ರಾಷ್ಟ್ರೀಯ ಭಾವನೆ ಮೂಡುತ್ತ ಬಂತು. ಟ್ಯೂಡರ್ ದೊರೆಗಳ ಪ್ಯೆಕಿ ಏಳನೆಯ ಮತ್ತು ಎಂಟನೆಯ ಹೆನ್ರಿ ಮುಖ್ಯರು. ಏಳನೆಯ ಹೆನ್ರಿಯ ಕಾಲದಲ್ಲಿ ಯಾರ್ಕರು ನಡೆಸಿದ ಪಿತೂರಿಯನ್ನು ಆತ ಸದೆಬಡಿದ; ಶ್ರೀಮಂತರನ್ನು ಮೂಲೆಗುಂಪಾಗಿಸಿದ.
  • ಪಾರ್ಲಿಮೆಂಟಿನ ಅನುಮತಿ ಪಡೆದು ಸ್ಟಾರ್ ಚೇಂಬರ್ ಕೋರ್ಟನ್ನು ಸ್ಥಾಪಿಸಿ ಶ್ರೀಮಂತರನ್ನು ತುಳಿದ. ವೆಸ್ಟ್ ಮಿನ್ಸ್ಚರ್ನಲ್ಲಿ ಸೇರುತ್ತಿದ್ದ ಈ ಕೋರ್ಟಿನ ಪ್ರಾಂಗಣದ ಒಳ ಚಾವಣಿ ನಕ್ಷತ್ರಗಳಿಂದ ಅಲಂಕೃತವಾಗಿತ್ತು. ಆದ್ದರಿಂದ ಇದಕ್ಕೆ ಸ್ಟಾರ್ ಚೇಂಬರ್ ಕೋರ್ಟ್ ಎಂದು ಹೆಸರು ಬಂತು. ದೇಶದ ಶಿಸ್ತನ್ನು ಕಾಪಾಡುವುದರಲ್ಲಿ ಇದು ಸಹಾಯ ಮಾಡಿತು. ಗುಲಾಬಿ ಯುದ್ಧದಿಂದ ಸುಸ್ತಾಗಿದ್ದ ಇಂಗ್ಲೆಂಡಿಗೆ ಹೆನ್ರಿಯ ಆಡಳಿತ ತಂಪನ್ನೆರಚಿತು. ಇಂಗ್ಲೆಂಡ್ ಪ್ರಗತಿಪರವಾಯಿತು. ಸರ್ಕಾರ ಜನಪ್ರಿಯವಾಯಿತು. ಶಾಂತಿ ಲಭಿಸಿತು.
  • ಟ್ಯೂಡರ್ ರಾಜರು ಜನತೆಯ ಬೆಂಬಲ ಗಳಿಸಿದರು. ಎಂಟನೆಯ ಹೆನ್ರಿಯ ಕಾಲದಲ್ಲಿ ನವೀನ ಮತಧರ್ಮ ಇಂಗ್ಲೆಂಡನ್ನು ಪ್ರವೇಶಿಸಿತು. ಇವನಿಗೆ ಸಹಾಯಕನಾದವನು ಥಾಮಸ್ ವುಲ್ಸಿ. ಈತ ರಾಜಕಾರ್ಯ ಪ್ರವೀಣ. ಪೋಪನಿಂದ ಮಹಾ ಮಠಾಧಿಪತಿ ಸ್ಥಾನ ಈತನಿಗೆ ಲಭಿಸಿತು. ಇಂಗ್ಲೆಂಡಿನ ವಿದೇಶಾಂಗನೀತಿಯನ್ನು ಮೊದಲ ಬಾರಿಗೆ ರೂಪಿಸಿದವನು ಇವನು. ಶಕ್ತಿಗಳ ಸಮತೋಲ ಈತನ ಗುರಿಯಾಗಿತ್ತು.
  • ಎಂಟನೆಯ ಹೆನ್ರಿ ತನ್ನ ಮೊದಲ ಹೆಂಡತಿ ಕ್ಯಾಥರೀನ್ ಆಫ್ ಅರಗಾನಳೊಂದಿಗೆ ವಿವಾಹವಿಚ್ಛೇದ ಮಾಡಿಕೊಂಡು ಆಸ್ಥಾನದ ಆನ್ ಬೋಲಿನ್ಳನ್ನು ಮದುವೆಯಾಗಬಯಸಿದ. ಆದರೆ ಇದಕ್ಕೆ ಪೋಪ್ ಆಶೀರ್ವಾದ ನೀಡಲಿಲ್ಲ. ಆದ್ದರಿಂದ ಈತ ಪೋಪನನ್ನೇ ಧಿಕ್ಕರಿಸಿ ಚರ್ಚಿನ ಸ್ವಾತಂತ್ರ್ಯ ವನ್ನು ಸಾರಿದ. ಮೊದಲನೆಯ ವಿವಾಹವನ್ನು ಕೊನೆಗೊಳಿಸಲು ಚರ್ಚಿನಿಂದ ಅನುಮತಿಯೂ ಬಂತು. ಆಗ ಈತ ಆನ್ ಬೋಲಿನಳನ್ನು ಮದುವೆಯಾದ. ಇಂಗ್ಲೆಂಡಿನಲ್ಲಿ ಆದ ಮತಸುಧಾರಣೆ ವ್ಯೆಯಕ್ತಿಕ ಕಾರಣಕ್ಕಾಯಿತು.
  • ಎಂಟನೆಯ ಹೆನ್ರಿ ಪಾರ್ಲಿಮೆಂಟಿನ ಅನುಮತಿಯನ್ನು ಪಡೆಯದೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಟ್ಯೂಡರರ ಕಾಲದಲ್ಲಿ ಪಾರ್ಲಿಮೆಂಟಿನ ಬೆಳೆವಣಿಗೆ ವ್ಯವಸ್ಥಿತವಾಗಿ ಆಯಿತು. ಎಂಟನೆಯ ಹೆನ್ರಿಯ ಕಾಲದಲ್ಲಿ ಇಂಗ್ಲೆಂಡಿನ ಸಶಸ್ತ್ರ ನೌಕಾಪಡೆಯ ನಿರ್ಮಾಣವಾಯಿತು. ಆರನೆಯ ಎಡ್ವರ್ಡ್ ಚಿಕ್ಕವನಾಗಿದ್ದಾಗಲೇ ಪಟ್ಟಕ್ಕೆ ಬಂದ. ಈತನ ಕಾಲದಲ್ಲಿ ಪ್ರಾಟೆಸ್ಟೆಂಟ್ ಮತ ಪ್ರಾಬಲ್ಯಕ್ಕೆ ಬಂತು. ಇವನ ಅನಂತರ ಬಂದ ಮೇರಿ ಎಂಟನೆಯ ಹೆನ್ರಿಯ ಮಗಳು. ಆಕೆ ಜಾರಿಯಲ್ಲಿದ್ದ ಎಲ್ಲ ಮತೀಯ ಬದಲಾವಣೆಗಳನ್ನೂ ರದ್ದು ಮಾಡಿದಳು.
  • ಪೋಪನ ಸಾರ್ವಭೌಮತ್ವವನ್ನು ಇಂಗ್ಲೆಂಡ್ ಒಪ್ಪಿತು. ರೋಮನ್ ಕ್ಯಾಥೊಲಿಕ್ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಪ್ರತಿಸುಧಾರಣೆ ಚಳವಳಿ ಪ್ರಾರಂಭವಾಯಿತು. ಇದರ ನಾಯಕ ಲಯೋಲದ ಇಗ್ನೇಷಿಯಸ್ (ಇಗ್ನೇಷಿಯಸ್, ಲಯೋಲದ). ಮೇರಿಯ ಆಳ್ವಿಕೆಯಲ್ಲಿ ಪ್ರಾಟೆಸ್ಟೆಂಟ್ ಮತ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿತು.
  • 1558-1603ರ ವರೆಗೆ ಆಳಿದ ಎಲಿಜಬೆತ್ ರಾಣಿ ಇಂಗ್ಲೆಂಡ್ ದೇಶದ ಚರಿತ್ರೆಯಲ್ಲಿ ಅದ್ವಿತೀಯಳು. ಇಪ್ಪತ್ತೈದನೆಯ ವಯಸ್ಸಿನಲ್ಲಿ ಈಕೆ ಪಟ್ಟಕ್ಕೆ ಬಂದಾಗ ಇದ್ದ ಮತೀಯ ಅಶಾಂತಿಯನ್ನು ಕಡಿಮೆ ಮಾಡುವುದಕ್ಕಾಗಿ ಚಾಣಾಕ್ಷತನದಿಂದ ಆಳಿ ಪೋಪನ ಅಧಿಕಾರವನ್ನು ಆಳಿದಳು. ಈಕೆ ಯಾವ ಬಣಕ್ಕೂ ಸೇರಿರಲಿಲ್ಲ. ಇಂಗ್ಲಿಷ್ ಚರ್ಚಿನ ಮೇಲೆ ಇದ್ದ ಪೋಪನ ಅಧಿಕಾರವನ್ನು ಈಕೆ ಕಿತ್ತೆಸೆದಳು. ಈಕೆಯ ಮತೀಯನೀತಿ ನಿಷ್ಪಕ್ಷದ್ದಾಗಿತ್ತು. ಕ್ಯಾಥೊಲಿಕ್, ಪ್ರಾಟೆಸ್ಟೆಂಟ್ ಮತ್ತು ಪ್ಯುರಿಟನ್ ಎಂಬ ಮೂರು ಪಂಗಡಗಳು ಈಕೆಯ ಕಾಲದಲ್ಲಿದ್ದವು.
  • ಇಂಗ್ಲೆಂಡಿನ ಚರ್ಚಿಗೆ ತಾನೇ ಮುಖ್ಯ ಗೌರ್ನರಳೆಂದು ಈಕೆ ಘೋಷಿಸಿಕೊಂಡಳು. ಕ್ಯಾಥೊಲಿಕರು ಕೋಪಕೊಂಡು ಈಕೆಯ ವಿರುದ್ಧ ಪಿತೂರಿ ನಡೆಸಿದರು. ಪ್ಯೂರಿಟನ್ನರೂ ವಿರುದ್ಧವಾಗಿ ನಿಂತರು. ಪ್ರಾಟೆಸ್ಟೆಂಟರಿಗೆ ಇವಳ ಅಭಯ ಹಸ್ತವಿದ್ದಿತು. ಎಲಿಜಬೆತ್ ಮತ್ತು ಸ್ಕಾಟ್ಲೆಂಡಿನ ಸಂಬಂಧ ವಿಚಿತ್ರವಾದದ್ದು. ಸ್ನೇಹ ಸಂಪಾದನೆಗಾಗಿ ಹೆನ್ರಿಯ ಮಗಳಾದ ಮಾರ್ಗರೇಟಳನ್ನು ಸ್ಕಾಟ್ಲೆಂಡಿನ ನಾಲ್ಕನೆಯ ಜೇಮ್ಸಿಗೆ ವಿವಾಹಮಾಡಿಕೊಡಲಾಗಿತ್ತು.
  • ಎಂಟನೆಯ ಹೆನ್ರಿಯ ಕಾಲದಲ್ಲಿ ಸ್ಕಾಟ್ಲೆಂಡಿನೊಡನೆ ಯುದ್ಧವಾದಾಗ ಜೇಮ್ಸ್ ಮಡಿದಿದ್ದ. ಆತನ ಮಗ 5ನೆಯ ಜೇಮ್ಸ್ ಮತ್ತೊಂದು ಕದನದಲ್ಲಿ ಸತ್ತ. ಸ್ಕಾಟ್ಲೆಂಡಿನ ರಾಜಕುಮಾರಿ ಮೇರಿ ಚಿಕ್ಕ ವಯಸ್ಸಿನವಳು. ಆಕೆಯನ್ನು ಆರನೆಯ ಎಡ್ವರ್ಡನಿಗೆ ವಿವಾಹ ಮಾಡಬೇಕೆಂದು ಪ್ರಯತ್ನಿಸಿ ವಿಫಲರಾದರು. ಸ್ಕಾಟರು ಫ್ರೆಂಚ್ ರಾಜಕುಮಾರನಿಗೆ ಮೇರಿಯನ್ನು ಕೊಟ್ಟು ಮದುವೆ ಮಾಡಿದರು. ಸ್ಕಾಟ್ಲೆಂಡಿನಲ್ಲಿ ಫ್ರೆಂಚರಿಗೂ ಪ್ಯೂರಿಟನರಿಗೂ ಯುದ್ಧವಾಯಿತು. ಎಲಿಜಬೆತ್ ರಾಣಿ ಸ್ಕಾಟರಿಗೆ ಸಹಾಯಮಾಡಿ ಅವರ ಸ್ನೇಹ ಸಂಪಾದಿಸಿದಳು.
  • 1561ರಲ್ಲಿ ವಿಧವೆ ಮೇರಿ ಏಳನೆಯ ಹೆನ್ರಿಯ ಮರಿಮಗನಾದ ಲಾರ್ಡ್ಡಾನೆರ್ಲ್ಯನ್ನು ಮದುವೆಯಾದಳು. ಇಂಗ್ಲೆಂಡಿನ ಸಿಂಹಾಸನಕ್ಕೆ ಅವಳ ಹಕ್ಕು ಸ್ಥಾಪಿತವಾಯಿತು. ಎರಡನೆಯ ಫಿಲಿಪ್ ನಾಯಕತ್ವದಲ್ಲಿ ಸ್ಪೇನ್ ಇಂಗ್ಲೆಂಡಿನ ಮೇಲೆ ದಾಳಿ ಮಾಡಲು ಯೋಚಿಸಿತು. ಹಾಲೆಂಡ್ ದೇಶಕ್ಕೆ ಎಲಿಜಬೆತ್ ರಾಣಿ ಸಹಾಯ ಮಾಡಿದ್ದಳೆಂಬುದು ಇದಕ್ಕೆ ಕಾರಣ. ಫಿಲಿಪ್ ಒಂದು ದೊಡ್ಡ ನೌಕಾಬಲವನ್ನು ತಯಾರಿಸಿದ. 130 ಹಡಗುಗಳಿದ್ದ ಸ್ಪ್ಯಾನಿಷ್ ಆರ್ಮೆಡ ಯುದ್ಧಕ್ಕೆ ಸಜ್ಜಾಯಿತು.
  • 1588ರಲ್ಲಿ ಇದು ಇಂಗ್ಲಿಷ್ ಕಡಲ್ಗಾಲುವೆಯನ್ನು ಪ್ರವೇಶಿಸಿದಾಗ ಯಾರೊಬ್ಬರೂ ಅದನ್ನು ವಿರೋಧಿಸಲಿಲ್ಲ. ಆದರೆ ಇಂಗ್ಲಿಷರು ಹಠಾತ್ತಾಗಿ ಅದರ ಮೇಲೆ ಎರಗಿ ಪುಡಿ ಪುಡಿಮಾಡಿದರು. ಸ್ಪೇನ್ ಸೋತಿತು. ಪ್ರಾಟಸ್ಟೆಂಟ್ ಮತಕ್ಕೆ ಒದಗಿದ್ದ ಕಂಟಕ ನಿವಾರಣೆಯಾಯಿತು ಈಕೆಯ ಕಾಲ ವಾಣಿಜ್ಯ ಮತ್ತು ವಸಾಹತುಗಳ ದೃಷ್ಟಿಯಿಂದ ಬಹು ಮಹತ್ತ್ವದ್ದು.
  • 1600ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾಯಿತು. ಇಂಗ್ಲೆಂಡ್ ಮತ್ತು ರಷ್ಯಗಳ ನಡುವೆ ವ್ಯಾಪಾರ ಸಂಬಂಧ ಕುದುರಿತು. ಈಕೆಯ ಚಾಣಾಕ್ಷತನ, ಶಾಂತ ಸ್ವಭಾವ ಈಕೆಯನ್ನು ರಾಜಕೀಯದಲ್ಲಿ ಬದುಕಿಸಿದವು. ಈಕೆ ಪಾರ್ಲಿಮೆಂಟನ್ನು ಎಂದೂ ಎದುರು ಹಾಕಿಕೊಳ್ಳಲಿಲ್ಲ.

ಸ್ಟೂವರ್ಟ್ ರಾಜರು[ಬದಲಾಯಿಸಿ]

  • ಮುಂದೆ ಆಳಿದ ಸ್ಟೂವರ್ಟ್ ರಾಜರ ಕಾಲದಲ್ಲಿ ಇಂಗ್ಲೆಂಡ್ ಸ್ವತಂತ್ರವಾಗಿ ಬೆಳೆಯಿತು. ಪಾರ್ಲಿಮೆಂಟಿನ ಅಧಿಕಾರ ಹೆಚ್ಚುತ್ತ ಬಂತು. ಇವರ ಕಾಲದಲ್ಲಿ ಸ್ಕಾಟ್ಲ್ಲೆಂಡ್ ಮತ್ತು ಇಂಗ್ಲೆಂಡ್ ಒಂದಾದವು. ಸ್ಕಾಟ್ಲೆಂಡಿನ ಮೇರಿಯ ಮಗನಾದ ಆರನೆಯ ಜೇಮ್ಸ್ ಎಲಿಜಬೆತ್ ಸತ್ತ ಅನಂತರ ಒಂದನೆಯ ಜೇಮ್ಸ್ ಆಗಿ ಆಳಿದ. ಇವನು ಅವಿವೇಕಿ, ಹಠವಾದಿ. ಇವನ ಕಾಲದಲ್ಲಿ ಪಾರ್ಲಿಮೆಂಟಿನೊಡನೆ ತಿಕ್ಕಾಟ ಹೆಚ್ಚಿತು. ತಾನು ದೇವಾಂಶಸಂಭೂತನೆಂದು ಜೇಮ್ಸ್ ತಿಳಿದಿದ್ದ. ಪಾರ್ಲಿಮೆಂಟ್ ಹೆಚ್ಚು ಹೆಚ್ಚಾಗಿ ಈತನ ಆಡಳಿತವನ್ನು ವಿಮರ್ಶೆ ಮಾಡತೊಡಗಿತು.
  • ಮಧ್ಯಮವರ್ಗದ ಜನ ಪಾರ್ಲಿಮೆಂಟಿನ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು. ತನ್ನನ್ನು ಪ್ರಶ್ನಿಸುವ ಹಕ್ಕು ಪಾರ್ಲಿಮೆಂಟಿಗೆ ಇಲ್ಲವೆಂದು ಈತನ ವಾದ. ಈತ 1610ರಲ್ಲಿ ಪಾರ್ಲಿಮೆಂಟನ್ನು ರದ್ದು ಮಾಡಿದ. ಹನ್ನೊಂದು ವರ್ಷಕಾಲ ತಾನೇ ತಾನಾಗಿ ಆಳಿದ. 1614ರಲ್ಲಿ ಸೇರಿದ್ದ ಪಾರ್ಲಿಮೆಂಟ್ ಏನನ್ನೂ ಸಾಧಿಸಲಿಲ್ಲ. 1621ರಲ್ಲಿ ಜೇಮ್ಸ್ ಪಾರ್ಲಿಮೆಂಟನ್ನು ಸೇರಿಸಿದಾಗ ಅದು ಈತನನ್ನು ಬಹುವಾಗಿ ಟೀಕಿಸಿತು.
  • ಒಂದನೆಯ ಚಾಲರ್ಸ್ನ ವಿವಾಹದ ಪ್ರಶ್ನೆ ಬಂದಾಗ ಪಾರ್ಲಿಮೆಂಟ್ ತನ್ನ ವಾಕ್ಸ್ವಾತಂತ್ರ್ಯವನ್ನು ಬಿಟ್ಟುಕೊಡದೆ ಪ್ರತಿಭಟನೆಯನ್ನು ಸೂಚಿಸಿ ಅದನ್ನು ಪಾರ್ಲಿಮೆಂಟಿನ ಪುಸ್ತಕದಲ್ಲಿ ದಾಖಲೆ ಮಾಡಿಸಿತು. ಕೆರಳಿದ ರಾಜ ಆ ಹಾಳೆಯನ್ನೇ ಹರಿದ. ಒಂದನೆಯ ಜೇಮ್ಸನ ಮಗನಾದ ಮೊದಲನೆ ಯ ಚಾಲ್ರ್ಸ್ ದೈವದತ್ತ ರಾಜತ್ವದಲ್ಲಿ ನಂಬಿಕೆ ಇಟ್ಟಿದ್ದ. ಈತ ಎಂದೂ ಸ್ವತಂತ್ರ ನಿರ್ಧಾರ ಕ್ಯೆಗೂಳ್ಳಲಿಲ್ಲ. ಈತ 1625ರಲ್ಲಿ ಪಾರ್ಲಿಮೆಂಟನ್ನು ಕರೆದು ಸ್ಪೇನಿನೊಂದಿಗೆ ಯುದ್ಧಕ್ಕಾಗಿ ಹಣ ಬೇಡಿದ. ಪಾರ್ಲಿಮೆಂಟ್ ಇದನ್ನು ತಿರಸ್ಕರಿಸಿತು. ಹಣದ ಕೊರತೆ ವಿಪರೀತವಾಯಿತು.
  • ಹಣಕಾಸಿನ ಹತೋಟಿ ಪಾರ್ಲಿಮೆಂಟಿನ ಹಿಡಿತದಲ್ಲಿದ್ದರೆ ರಾಜ ಸರಿಹೋಗುತ್ತಾನೆಂದು ನಂಬಲಾಗಿತ್ತು. ಸ್ಪೇನಿನ ಜೊತೆ ಕಾದಾಟದಲ್ಲಿ ಇಂಗ್ಲೆಂಡ್ ಸೋತಿತು. ಸೋಲಿಗೆ ಕಾರಣನಾದವ ದೊರೆಯ ಗೆಳೆಯನಾದ ಬಕಿಂಗ್ಹ್ಯಾಮ್ ಎಂದು ಪಾರ್ಲಿಮೆಂಟ್ ಕೆರಳಿತು. ರಾಜ ತನ್ನ ಗೆಳೆಯನಿಗಾಗಿ ಪಾರ್ಲಿಮೆಂಟನ್ನೇ ರದ್ದುಪಡಿಸಿದ. ಮೂರನೆಯ ಬಾರಿ ಪಾರ್ಲಿಮೆಂಟ್ ಸೇರಿತು. ಪಾರ್ಲಿಮೆಂಟ್ ಪೆಟಿಷನ್ ಆಫ್ ರೈಟ್ಸ್ ಎಂಬ ಪತ್ರವೊಂದನ್ನು ತಯಾರಿಸಿ ಬಲತ್ಕಾರದ ತೆರಿಗೆ, ಸಾಲ, ಬಲತ್ಕಾರದ ಸೆರೆ ಇವನ್ನು ಮಾಡಬಾರದೆಂದು ವಿಧಿಸಿತು.
  • ರಾಜ ಇದಕ್ಕೆ ಒಪ್ಪಿಗೆ ಕೊಟ್ಟರೂ ಇದನ್ನು ಪಾಲಿಸಲಿಲ್ಲ. ವಿರೋಧ ಮಾಡಿದ ವ್ಯಕ್ತಿಗಳನ್ನು ಸೆರೆಯಲ್ಲಿಟ್ಟ. ಹಣದ ಪರಿಸ್ಥಿತಿ ಬಿಕ್ಕಟ್ಟಿಗೆ ಬಂದಾಗ 1640ರಲ್ಲಿ ಮತ್ತೆ ಪಾರ್ಲಿಮೆಂಟ್ ಕರೆದ. ಇದನ್ನು ಲಾಂಗ್ ಪಾರ್ಲಿಮೆಂಟ್ ಎಂದು ಕರೆಯುತ್ತಾರೆ. ಈ ಅಧಿವೇಶನದಲ್ಲಿ ಕೆವಿಲಿಯರ್ಸ್ ಮತ್ತು ರೌಂಡ್ ಹೆಡ್ಸ್ ಎಂಬ ಬಣಗಳು ಪಾರ್ಲಿಮೆಂಟಿನಲ್ಲಿ ತಲೆಯೆತ್ತಿದವು. ಪಾರ್ಲಿಮೆಂಟ್ ಒಂಬತ್ತು ತಿಂಗಳ ಕಾಲವಿತ್ತು. ಸದಸ್ಯರು ಇವನನ್ನು ಟೀಕಿಸಿದರು. ಚಾಲರ್ಸ್ನ ಗೆಳೆಯರಿಗೆ ಗಲ್ಲು ಶಿಕ್ಷೆಯಾಯಿತು.
  • ಚರ್ಚಿನ ಆಡಳಿತವನ್ನು ಮಠಾಧಿಪತಿಗಳ ಹಿಡಿತದಿಂದ ತಪ್ಪಿಸುವ ರೂಟ್ ಅಂಡ್ ಬ್ರಾಂಚ್ ಬಿಲ್ ಎಂಬುದನ್ನು ಜಾರಿಗೆ ತಂದರು. ಈ ಸಂದರ್ಭದಲ್ಲಿ ಪಾರ್ಲಿಮೆಂಟಿನ ಒಡಕು ಧ್ವನಿ ಆರಂಭವಾಯಿತು. ಪಾರ್ಲಿಮೆಂಟಿನ ಏಕತೆ ಒಡೆಯಿತು. 1641ರಲ್ಲಿ ಪಾರ್ಲಿಮೆಂಟ್ ಮತ್ತೆ ಸೇರಿದಾಗ ಸ್ಯೆನಿಕ ಮಸೂದೆಯನ್ನು ಜಾರಿಗೆ ತಂದು ಸ್ಯೆನ್ಯವನ್ನು ಪಾರ್ಲಿಮೆಂಟಿನ ಹತೋಟಿಗೆ ಒಳಪಡಿಸಲಾಯಿತು. ರಾಜನ ಹಕ್ಕನ್ನೆಲ್ಲ ಕಿತ್ತುಕೊಳ್ಳುವ ಗ್ರ್ಯಾಂಡ್ ರೆಮಾನ್ಸ್ಟ್ರೆನ್ಸ್ ಕಾಯಿದೆಯಾಯಿತು. ಕೋಪಗೊಂಡ ಚಾಲ್ರ್ಸ್ ಸಿಕ್ಕಿದವರನ್ನೆಲ್ಲ ಸೆರೆಯಲ್ಲಿಟ್ಟ.
  • ರಾಜನ ವಿರುದ್ಧ ಪಿತೂರಿಗಳು ನಡೆದವು. ಆಲಿವರ್ ಕ್ರಾಮ್ವೆಲ್ ಸ್ಯೆನ್ಯದಲ್ಲಿ ಸುಧಾರಣೆ ಮಾಡಿದ. ಚಾಲ್ರ್ಸ್ ದೊರೆ ಸ್ಕಾಟ್ಲೆಂಡಿನ ಯುದ್ಧದಲ್ಲಿ ಸೋತು ಕೊನೆಗೆ ಶರಣಾಗತನಾದ. ಪಾರ್ಲಿಮೆಂಟ್ ಮತ್ತು ಸ್ಯೆನ್ಯದ ನಡುವೆ ಮತೀಯ ಸಂಘರ್ಷ ಏರ್ಪಟ್ಟಿತು. ಪಾರ್ಲಿಮೆಂಟಿನ ಅಧೀನದಲ್ಲಿ ಚಾಲ್ರ್ಸ್ ಆಳ್ವಿಕೆ ನಡೆಸುವ ಹಾಗೆ ಮಾತುಕತೆಯಾಡಿ ಅವನನ್ನು ಬಿಡಿಸಲಾಯಿತು. ಚಾಲ್ರ್ಸ್ ಓಡಿಹೋದ. ಸ್ಕಾಟರ ಜೊತೆ ಸೇರಿ ಪಿತೂರಿ ಹೂಡಿದ. ಪಾರ್ಲಿಮೆಂಟ್ ಆತನನ್ನು ಹಿಡಿದು ವಿಚಾರಣೆ ನಡೆಸಿ 1649ರಲ್ಲಿ ಶಿರಚ್ಛೇದ ಮಾಡಿತು.
  • ಗಣರಾಜ್ಯ ಸ್ಥಾಪಿತವಾದರೂ ಸ್ಯೆನ್ಯಕ್ಕೆ ಹೆಚ್ಚು ಆಧಿಕಾರವಿತ್ತು. ಆ ಪಾರ್ಲಿಮೆಂಟಿಗೆ ರಂಪ್ ಪಾರ್ಲಿಮೆಂಟ್ ಎಂದು ಕರೆಯುತ್ತಾರೆ. ಕ್ರಾಮ್ವೆಲ್ಲನ ನೇತೃತ್ವದಲ್ಲಿ ಸೈನಿಕ ಸರ್ಕಾರದ ಸ್ಥಾಪನೆಯಾಯಿತು. ಆಲಿವರ್ ಕ್ರಾಮ್ವೆಲ್ ಮೇಧಾವಿ ಆದರ್ಶವಾದಿ. ದಕ್ಷ ಆಡಳಿತಗಾರ. ವ್ಯವಹಾರಜ್ಞಾನ ಹೊಂದಿದ್ದವ. ಸಮಯಕ್ಕೆ ಸರಿಯಾಗಿ ನಿರ್ಧಾರ ಕೈಗೊಳ್ಳುತ್ತಿದ್ದ. ಜವಾಬ್ದಾರಿಯನ್ನು ಹೊರುವ ಎದೆಗಾರಿಕೆ ಈತನಿಗಿತ್ತು. 1653-58ರವರೆಗೆ ಈತ ರಾಜ್ಯವಾಳಿದ. ರಾಜನೆಂದು ಕರೆದುಕೊಳ್ಳದೆ ಪಾರ್ಲಿಮೆಂಟನ್ನು ಅನುಸರಿಸಿ ನಡೆದ.
  • ಕೊನೆಗೆ ಪಾರ್ಲಿಮೆಂಟಿಗೂ ಈತನಿಗೂ ಜಗಳ ಪ್ರಾರಂಭವಾಯಿತು. ವಿಗ್ ಪಾರ್ಟಿಯವರು ಈತನನ್ನು ವಿರೋಧಿಸಿದರು. ಪಾರ್ಲಿಮೆಂಟಿನ ಸಹಕಾರ ದೊರೆಯದಿದ್ದಾಗ ಈತ ಸೈನ್ಯದ ಸಹಾಯದಿಂದ ಆಳಿದ. ಇಂಗ್ಲೆಂಡಿನ ಕೀರ್ತಿಯನ್ನು ಯುರೋಪಿನ ರಾಜ್ಯಗಳಲ್ಲಿ ಹರಡಿದ. ವಿದೇಶಾಂಗ ನೀತಿಯಲ್ಲಿ ಈತನಿಗೆ ಎಲಿಜಬೆತ್ ಆದರ್ಶಪ್ರಾಯಳಾಗಿದ್ದಳು. 1638ರಲ್ಲಿ ಕ್ರಾಮ್ವೆಲ್ ಕಾಲವಾದ.
  • ಕ್ರಾಮ್ವೆಲ್ಲನ ಅನಂತರ ಅವನ ಮಗ ರಿಚರ್ಡ್ ಪಟ್ಟಕ್ಕೆ ಬಂದ. ಸೈನ್ಯಾಧಿಕಾರಿಗಳೊಂದಿಗೆ ಜಗಳವಾಡಿ ಅಧಿಕಾರ ಕಳೆದುಕೊಂಡ. ಪಾರ್ಲಿಮೆಂಟ್ ಒಂದನೆಯ ಚಾಲ್ರ್ಸ್ನ ಮಗನಾದ ಎರಡನೆಯ ಚಾಲ್ರ್ಸ್ನನ್ನು ದೊರೆಯಾಗಿ ಮಾಡಿತು. ಆತ ಒಳ್ಳೆಯ ಆಡಳಿತ ನಡೆಸುವುದಾಗಿ ಘೋಷಣೆ ಮಾಡಿದ. ಕ್ಲಾರೆನ್ಡನ್ ಈತನ ಮಂತ್ರಿಯಾಗಿದ್ದ. ಕ್ಲಾರೆನ್ಡನ್ ಕೋಡ್ ಎಂಬ ನ್ಯಾಯಸಂಹಿತೆ ಆತನ ಕೊಡುಗೆ. ಇಂಗ್ಲೆಂಡಿನ ಚರ್ಚುಗಳು ಒಂದೇ ಪ್ರಾರ್ಥನಾ ಪುಸ್ತಕವನ್ನು ಬಳಸುವಂತೆ ಈತ ನಿಯಮ ಮಾಡಿದ.
  • ಆಗ ನಡೆದ ಡಚ್ಚರ ಜೊತೆಯ ಯುದ್ಧದಲ್ಲಿ ಇಂಗ್ಲೆಂಡಿಗೆ ಪರಾಭವವಾಯಿತು. ಪರಿಣಾಮವಾಗಿ ಕ್ಲಾರೆನ್ಡನ್ ಕೆಲಸ ಕಳೆದುಕೊಂಡ. ಆಕ್ಸ್ಫರ್ಡ್ ವಿಶ್ವವಿದ್ವಾನಿಲಯಕ್ಕೆ ಆತ ಮಾಡಿದ ಉಪಕಾರ ಸ್ಮರಣೀಯವಾದದ್ದು. ವಿಶ್ವವಿದ್ಯಾನಿಲಯದ ಮುದ್ರಣಶಾಲೆಗೆ ಇಂದಿಗೂ ಅವನ ಹೆಸರು ಇದೆ.

ಎರಡನೆಯ ಚಾಲ್ರ್ಸ್ ಕಾಲದಲ್ಲಿ ಕೆಬಾಲ್ ಪ್ರಸಿದ್ಧವಾಯಿತು. ಇದು ಐದು ಜನರ ಸಮಿತಿ. ಮಂತ್ರಿತ್ವ ಇದರ ಕೆಲಸ ದೇಶದ ಆಡಳಿತದ ನಿರ್ವಹಣೆ ಇದರ ಹೊಣೆ. ಆಧುನಿಕ ಕ್ಯಾಬಿನೆಟ್ ಇದರ ಮೇಲೆ ರೂಪಿತವಾಗಿದೆ.

  • ಈ ಕಾಲದಲ್ಲಿ ಷ್ಯಾಫ್ಟ್ಬರಿ ಎಂಬುವನು ವಿಗ್ ಪಾರ್ಟಿಯನ್ನೂ ಡಾನ್ಬೀ ಎಂಬುವನು ಟೋರಿ ಪಕ್ಷವನ್ನೂ ಕಟ್ಟಿದರು. 1679-81ರ ವರೆಗೆ ವಿಗ್ಗರು ಬಲಶಾಲಿಗಳಾಗಿದ್ದರು. ಹ್ಯಾಬ್ಸ್ಬರ್ಗ್ ವಂಶದ ಎರಡನೆಯ ಚಾಲಿರ್ಸ್ಗೆ ಮಕ್ಕಳಿರಲಿಲ್ಲ. ಯುರೋಪಿನಲ್ಲಿ ರಾಜಕೀಯ ಕಳವಳ ಉಂಟಾಯಿತು. ಆಗ ಸ್ಪೇನಿನ ಸಿಂಹಾಸನಕ್ಕೆ ಹಲವು ಮಂದಿ ಉಮೇದುವಾರರಿದ್ದರು. ಇವರಲ್ಲಿ ಹದಿನಾಲ್ಕನೆಯ ಲೂಯಿಯ ಮೊಮ್ಮಗ ಐದನೆಯ ಫಿಲಿಪ್ ಮತ್ತು ಆಸ್ಟ್ರಿಯದ ಆರ್ಚ್ ಡ್ಯೂಕ್ ಚಾಲ್ರ್ಸ್ ಮುಖ್ಯರಾಗಿದ್ದರು.
  • ಹ್ಯಾಬ್ಸಬರ್ಗ್ ದೊರೆ ತನ್ನ ಮರಣಶಾಸನದಲ್ಲಿ ಐದನೆಯ ಫಿಲಿಪ್ಗೆ ಸ್ಪೇನಿನ ಸಿಂಹಾಸನ ನೀಡಬೇಕೆಂದು ಬರೆದಿಟ್ಟಿದ್ದ. ಇದು ಯುದ್ಧಕ್ಕೆ ಕಾರಣವಾಯಿತು. ಇಂಗ್ಲೆಂಡೂ ಈ ಯುದ್ಧದಲ್ಲಿ ಸೇರಿತು. ಸ್ಪೇನ್, ನೆದರ್ಲೆಂಡ್ಸ್, ಡ್ಯಾನೂಬ್ ನದಿಯ ಮೇಲ್ದಂಡೆ ಇವುಗಳ ಯುದ್ಧ ಕ್ಷೇತ್ರಗಳು. 1704ರಲ್ಲಿ ಇಂಗ್ಲೆಂಡ್ ಮ್ಯೆನಾರ್ಕ್ ಮತ್ತು ಜಿಬ್ರಾಲ್ಟರುಗಳನ್ನು ವಶಮಾಡಿಕೊಂಡಿತು. ಫ್ರೆಂಚರಿಗೆ ಸೋಲಾಯಿತು. ಇಂಗ್ಲೆಂಡಿನಲ್ಲಿ ಟೋರಿಗಳು ಯುದ್ಧಕ್ಕೆ ವಿರುದ್ಧವಾಗಿದ್ದರು. 1713ರಲ್ಲಿ ಯುಟ್ರೆಕ್ಟ್ ಒಪ್ಪಂದದಿಂದ ಶಾಂತಿಸ್ಥಾಪನೆಯಾಯಿತು.
  • ಐದನೆಯ ಫಿಲಿಪ್ ಸ್ಪೇನಿನ ರಾಜನಾದ. ಸ್ಪೇನಿನ ವಸಾಹತುಗಳಿಗೆ ವರ್ಷಕ್ಕೊಂದು ಹಡಗನ್ನೂ ನೀಗ್ರೊ ಗುಲಾಮರುಗಳನ್ನೂ ಮಾರುವ ಹಕ್ಕು ಇಂಗ್ಲೆಂಡಿಗೆ ದೊರಕಿತು. ಆ್ಯನ್ ರಾಣಿಯ ಕಾಲದಲ್ಲಿ ಇಂಗ್ಲೆಂಡಿನೊಂದಿಗೆ ಸ್ಕಾಟ್ಲೆಂಡಿನ ಐಕ್ಯವಾಗಿತ್ತು. ಆಗಿನ ಒಂದು ಒಪ್ಪಂದದ ಪ್ರಕಾರ ಹ್ಯಾನೋವರ್ ರಾಜರು ಸ್ಕಾಟ್ಲೆಂಡಿಗೆ ರಾಜರಾದರು. ಒಂದನೆಯ ಜಾರ್ಜ್ ಇಂಗ್ಲೆಂಡಿನ ರಾಜನಾದ.

ಹ್ಯಾನೋವರ್ ರಾಜರು[ಬದಲಾಯಿಸಿ]

  • ವಿಗ್ ಪಕ್ಷವು ಒಂದನೆಯ ಜಾರ್ಜ್ನನ್ನು ಇಂಗ್ಲೆಂಡಿನ ಸಿಂಹಾಸನದ ಮೇಲೆ ಕೂರಿಸಿತು. ಆವನಿಗೆ ಇಂಗ್ಲಿಷ್ ಜ್ಞಾನವಿರಲಿಲ್ಲ. ಪಾರ್ಲಿಮೆಂಟಿಗೆ ಇದರಿಂದ ಅನುಕೂಲವಾಯಿತು ರಾಜನ ಅಧಿಕಾರ ಮೊಟುಕುಗೊಳಿಸಲು ಅವಕಾಶವಾಯಿತು. ಕ್ಯಾಬಿನೆಟ್ ಪದ್ಧತಿ ಈ ಕಾಲದಲ್ಲಿ ಜಾರಿಗೆ ಬಂತು. ಪ್ರಬಲ ಮಂತ್ರ್ರಿಮಂಡಲ ಆಡಳಿತ ನಿರ್ವಹಿಸಿತು ಪಾರ್ಲಿಮೆಂಟ್ ಬಲವಾಗುತ್ತ ಬಂತು. ವಾಲ್ಪೋಲ್ ಇಂಗ್ಲೆಂಡಿನ ಮೊದಲ ಪ್ರಧಾನಮಂತ್ರಿ. ಈತ ರಾಜನಿಂದ ಅನುಜ್ಞೆ ಪಡೆದು ನಡೆದುಕೊಳ್ಳುತ್ತಿದ್ದ. ಅವನ ಕಾಲದಲ್ಲಿ ವಿಲಿಯಂ ಪಿಟ್ ಎಂಬ ಪ್ರಸಿದ್ಧ ವಾಗ್ಮಿಯಿದ್ದ.
  • ವಾಲ್ಪೋಲ್ ಶಾಂತಿಪ್ರಿಯ. ಯುಟ್ರೆಕ್ಟ್ ಕರಾರಿನ ಪ್ರಕಾರ ಇಂಗ್ಲೆಂಡ್ ವಸಾಹತುಗಳಿಗೆ ನೀಗ್ರೊಗಳನ್ನು ಸಾಗಿಸುತ್ತಿತ್ತು. ಆ ಸಂದರ್ಭದಲ್ಲಿ ಸ್ಪೇನಿನವರು ಇಂಗ್ಲೆಂಡಿನ ಕ್ಯಾಪ್ಟನ್ ಜೆಂಕಿನ್ಸ್ನ ಕಿವಿಯನ್ನು ಕತ್ತರಿಸಿದರು. ಇದರ ಫಲವಾಗಿ 1739 ರಲ್ಲಿ ಜೆಂಕಿನ್ಸ್ ಕಿವಿಯ ಯುದ್ಧವಾಯಿತು. ವಾಲ್ಪೋಲ್ 1742ರಲ್ಲಿ ಮಂತ್ರಿಪದವಿಗೆ ರಾಜೀನಾಮೆ ನೀಡಿದ. ಇಂಗ್ಲೆಂಡ್ ಇವನ ಕಾಲದಲ್ಲಿ ಆರ್ಥಿಕವಾಗಿ ಸುಧಾರಿಸಿತು.
  • ಅಮೆರಿಕ ಮತ್ತು ಭಾರತಗಳೊಂದಿಗೆ ನಡೆಸುತ್ತಿದ್ದ ವ್ಯಾಪಾರದಲ್ಲಿ ಫ್ರಾನ್ಸ್ ಇಂಗ್ಲೆಂಡಿನೊಂದಿಗೆ ಸ್ಪರ್ಧಿಸಿತ್ತು. ಹದಿಮೂರು ವಸಾಹತುಗಳನ್ನು ನಿರ್ಮಿಸಿತ್ತು. ಇಂಗ್ಲೆಂಡಿನ ಈ ಮೇಲ್ಮೆಯಿಂದಾಗಿ ಫ್ರೆಂಚರಿಗೂ ಇಂಗ್ಲಿಷರಿಗೂ ನಡುವೆ ಕಾದಾಟ ಸಾಮಾನ್ಯವಾಯಿತು. ಇದು ಏಳು ವರ್ಷಗಳ ಯುದ್ಧವೆಂದು ಹೆಸರಾಗಿದೆ. ಭಾರತದಲ್ಲಿ ಕ್ಲೈವ್ ಮತ್ತು ಡೂಪ್ಲೆ ರಾಜಕೀಯ ಕಣಕ್ಕಿಳಿದರು. ಫ್ರೆಂಚರ ವಸಾಹತುಗಳೆಲ್ಲ ಪುಡಿಪುಡಿಯಾದವು. 1763ರಲ್ಲಿ ಪ್ಯಾರಿಸ್ ಕೌಲಿನಿಂದ, ಏಳು ವರ್ಷಗಳ ಯುದ್ಧ ಕೊನೆಗೊಂಡು ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಗೆ ಅನುವಾಯಿತು.
  • ವಿಲಿಯಂ ಪಿಟ್ ಕ್ರಮಕ್ರಮವಾಗಿ ತನ್ನ ಪ್ರಾಮಾಣಿಕತೆಯಿಂದ ಇಂಗ್ಲೆಂಡನ್ನು ರಕ್ಷಿಸಿದ. ಇಂದಿಗೂ ಉತ್ತರ ಅಮೆರಿಕದಲ್ಲಿ ಅವನ ಹೆಸರಿನಲ್ಲಿ ನಿರ್ಮಾಣವಾದ ಪಿಟ್ಸ್ಬರ್ಗ್ ಇದೆ. 1775ರಲ್ಲಿ ಅಮೆರಿಕದಲ್ಲಿದ್ದ ಹದಿಮೂರು ಬ್ರಿಟಿಷ್ ವಸಾಹತುಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಅದನ್ನು ಗಳಿಸಿದ ವು. ಅಮೆರಿಕದ ಸ್ವಾತಂತ್ರ್ಯದಿಂದ ಮೂರನೆಯ ಜಾರ್ಜ್ ತನ್ನ ಪ್ರಾಬಲ್ಯ ಕಳೆದುಕೊಂಡ. ಇವನ ಕಾಲದಲ್ಲಿ ಪ್ರಧಾನಿಯಾಗಿ ಬಂದ ಕಿರಿಯ ಪಿಟ್ ಇಂಗ್ಲೆಂಡನ್ನು 18ವರ್ಷಗಳ ಕಾಲ ರಕ್ಷಿಸಿದ. ಹಣಕಾಸಿನ ವಿಚಾರದಲ್ಲಿ ಇವನು ನಿಷ್ಣಾತ.
  • ಹದಿನೆಂಟನೆಯ ಶತಮಾನದಲ್ಲಿ ಫ್ರಾನ್ಸಿನಲ್ಲಿ ಮಹಾಕ್ರಾಂತಿ ನಡೆದು ಇಂಗ್ಲೆಂಡಿಗೆ ಒಂದು ರೀತಿಯ ಪಾಠ ಕಲಿಸಿತು. ಅಮೆರಿಕದ ಸ್ವಾತಂತ್ರ್ಯ ಯುದ್ಧದಲ್ಲಿ ಫ್ರೆಂಚರ ಪಾತ್ರ ಬಲು ಮಹತ್ತ್ವದ್ದಾಗಿತ್ತು. ಮಹಾಕ್ರಾಂತಿಯ ಕಾಲದಲ್ಲಿ ಪಿಟ್ ಯುದ್ಧಮಂತ್ರಿಯಾಗಿ ಕೆಲಸ ಮಾಡಿದ. ಇಂಗ್ಲೆಂಡನ್ನು ಫ್ರೆಂಚರ ಆಕ್ರಮಣದಿಂದ ಕಾಪಾಡುವುದೇ ಅವನ ಮುಖ್ಯ ಕೆಲಸವಾಯಿತು. ಫ್ರಾನ್ಸಿನ ಸರ್ವಾಧಿಕಾರಿಯಾಗಿದ್ದ ನೆಪೋಲಿಯನ್ನನೊಂದಿಗೆ ಇಂಗ್ಲೆಂಡ್ ಆನಿವಾರ್ಯವಾಗಿ ಯುದ್ಧ ಮಾಡಬೇಕಾಗಿ ಬಂತು.
  • ಇಂಗ್ಲಿಷ್ ನೌಕಾಪಡೆ ನೆಪೋಲಿಯನ್ ಸೇನೆಯನ್ನು ಚೂರು ಚೂರು ಮಾಡಿತು. ಪಿಟ್ ಯುರೋಪಿನಲ್ಲಿ ಮಿತ್ರರಾಷ್ಟ್ರಗಳ ಗುಂಪೊಂದನ್ನು ಕಟ್ಟಿದ. ಅವುಗಳ ಸಹಾಯದಿಂದ ಇಂಗ್ಲೆಂಡನ್ನು ರಕ್ಷಿಸಲು ಯತ್ನಿಸಿದ. ನೆಪೋಲಿಯನ್ ಕ್ಯೆಗೊಂಡ ಖಂಡಾಂತರ ಆರ್ಥಿಕ ದಿಗ್ಬಂಧನ ಇಂಗ್ಲೆಂಡಿನ ಮುಂದೆ ನಿಲ್ಲಲಾರದೆ ಹೋಯಿತು. ನೆಪೋಲಿಯನ್ ಮಿತ್ರರಾಷ್ಟ್ರಗಳ ಎದುರಿಗೆ ಸೋಲೊಪ್ಪಿಕೊಂಡ.

ಕೈಗಾರಿಕಾ ಕ್ರಾಂತಿ[ಬದಲಾಯಿಸಿ]

  • ಇಂಗ್ಲೆಂಡಿನಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಅದ್ವಿತೀಯವಾದುದು (ಇಂಗ್ಲೆಂಡಿನ ಆರ್ಥಿಕ ಬೆಳೆವಣಿಗೆ). ಯಾಂತ್ರೀಕರಣದಿಂದ ಆರ್ಥಿಕ ಸ್ಥಿತಿ ಉತ್ತಮಗೊಂಡಿತು. ಸ್ಪಿನ್ನಿಂಗ್ ಜೆನ್ನಿ, ನೀರಿನ ಶಕ್ತಿಯಿಂದ ಚಲಿಸುವ ಯಂತ್ರ ಮುಂತಾದವುಗಳಿಂದ ಜವಳಿಕೈಗಾರಿಕೆ ಬೆಳೆಯಿತು. ಜೇಮ್ಸ್ ವಾಟನ ಹಬೆಯಂತ್ರ ಉಪಕಾರ ಮಾಡಿತು. ವಿಜ್ಞಾನದಿಂದ ಕೈಗಾರಿಕೆಗಷ್ಟೇ ಅಲ್ಲದೆ ವ್ಯವಸಾಯಕ್ಕೂ ಅನುಕೂಲವಾಯಿತು. ಹೊಸ ಹೊಸ ರಸ್ತೆಯ ನಿರ್ಮಾಣದಿಂದ ಸರಕು ಸಾಗಾಣಿಕೆ ಅನುಕೂಲವಾಯಿತು. ಹಡಗು ನಿರ್ಮಾಣವಾಯಿತು.
  • ಸ್ಟೀನ್ಸನ್ ಉಗಿಬಂಡಿ ಮಾಂಚೆಸ್ಟರಿನಿಂದ ಲಿವರ್ಪುಲಿಗೆ ಓಡಿತು. ಕಬ್ಬಿಣದ ಉತ್ಪಾದನೆ ಹೆಚ್ಚಾಯಿತು. ಕಲ್ಲಿದ್ದಲು ಗಣಿಗಳು ಹೆಚ್ಚಿದವು. ಸೇಫ್ಟಿ ಲ್ಯಾಂಪನ್ನು ಹಂಫ್ರಿ ಡೇವಿ ಕಂಡುಹಿಡಿದ. ಕೈಗಾರಿಕಾಕ್ರಾಂತಿ ಇಂಗ್ಲೆಂಡಿಗೆ ಫಲದಾಯಕವಾಯಿತು. ಇನ್ನೊಂದು ದಿಕ್ಕಿನಲ್ಲಿ ಕೈಗಾರಿಕಾಕ್ರಾಂತಿ ಮನುಷ್ಯರನ್ನು ಕಡೆಗಣಿಸಿತು. ಭಾರತದಲ್ಲಿ ಕಾಲಾನುಕಾಲದಿಂದ ನಡೆದುಬಂದಿದ್ದ ಮಸ್ಲಿನ್ ಕೈಗಾರಿಕೆಯನ್ನು ಹಾಳುಮಾಡಲು ಇದೂ ಕಾರಣವಾಯಿತು. ಕಾರ್ಖಾನೆಗಳು ಹೆಚ್ಚಿ ಕಾರ್ಮಿಕರ ಸಮಸ್ಯೆ ಹೆಚ್ಚಿತು.
  • ಕಾರ್ಮಿಕರ ಹಿತರಕ್ಷಣೆಗಾಗಿ ಅನೇಕ ಕಾಯಿದೆಗಳನ್ನು ಜಾರಿಯಲ್ಲಿ ತರಬೇಕಾಯಿತು. ಕಾರ್ಮಿಕರು ತಮ್ಮ ದುಃಸ್ಥಿತಿಯನ್ನು ನೆನೆದು ಕೋಪಿಸಿಕೊಳ್ಳುವುದರಲ್ಲಿ ಉಪಯೋಗವಿಲ್ಲವೆಂದೂ ಪಾರ್ಲಿಮೆಂಟಿನಲ್ಲಿ ಅವರು ಭಾಗವಹಿಸಿ ಸುಧಾರಣೆ ತರಬೇಕೆಂದೂ ಹಲವರು ಯೋಚಿಸಿದರು. 3ನೆಯ ಜಾರ್ಜನ ಅಂತಿಮ ಕಾಲದಲ್ಲಿ ಸರ್ಕಾರ ಟೋರಿ ಗುಂಪಿನವರ ಕ್ಯೆಯಲ್ಲಿತ್ತು. ಲಾರ್ಡ್ ಕ್ಯಾಸಲ್ ರೇ ಇಂಗ್ಲೆಂಡಿನಲ್ಲಿ ರಾಜ್ಯಾಂಗಬದ್ಧ ಸರ್ಕಾರ ಸ್ಥಾಪಿಸಲು ಪ್ರಯತ್ನಿಸಿದ.
  • ಕಾರ್ಮಿಕರ ವಿರುದ್ಧ ಅನೇಕ ಕಾನೂನುಗಳನ್ನು ಜಾರಿಗೆ ತರಲಾಯಿತು. ಲಾರ್ಡ್ ಕ್ಯಾಸಲ್ ರೇಯ ಮರಣಾನಂತರ ಜಾರ್ಜ್ ಕ್ಯಾನಿಂಗ್ ಪ್ರಧಾನಮಂತ್ರಿಯಾದ. ಭಾರತದ ಗೌರ್ನರ್ ಜನರಲ್ಲೂ ಆಗಿದ್ದ. ತನ್ನ ವಿದೇಶಾಂಗ ನೀತಿಯ ವ್ಯೆಶಿಷ್ಟ್ಯದ ಮೂಲಕ ಈತ ಪ್ರಸಿದ್ಧನಾದ. ಟೋರಿ ಪಕ್ಷ ಕ್ರಮೇಣ ಕನ್ಸರ್ವೇಟಿವ್ ಪಕ್ಷವಾಯಿತು. ಪೀಲ್ ಅದರ ನಾಯಕನಾದ. ಇವನ ಕಾಲದಲ್ಲಿ ಗೋದಿಗೆ ಕಾನೂನು ರಕ್ಷಣೆ ನೀಡಿದ್ದು ಬಹು ಮುಖ್ಯವಾದ ಘಟ್ಟ. 1844ರಲ್ಲಿ ಬ್ಯಾಂಕ್ ಕಾಯಿದೆಯೊಂದು ಜಾರಿಗೆ ಬಂತು.
  • ನೋಟು ಚಲಾವಣೆಯನ್ನು ಕ್ರಮಗೊಳಿಸುವುದು ಇದರ ಒಂದು ಉದ್ದೇಶವಾಗಿತ್ತು. 1850ರವರೆಗೆ ಪೀಲ್ ಪಾರ್ಲಿಮೆಂಟಿನ ಸದಸ್ಯನಾಗಿದ್ದ. ಇವನ ಅನಂತರ ಬಂದವ ಪಾಮಸರ್ಟ್ನ್. ಇವನು ಟೋರಿ ಸಂಪ್ರದಾಯವಾದಿ. 1833ರಲ್ಲಿ ಪೋರ್ಚುಗಲ್ಲಿನ ರಾಣಿ ಇಸಬೆಲಳಿಗೂ ಮತ್ತು ಅವಳ ಚಿಕ್ಕಪ್ಪನಿಗೂ ರಾಜ್ಯಕ್ಕಾಗಿ ಜಗಳ ನಡೆದಾಗ ಪಾಮಸರ್ಟ್ನ್ನ್ ಅದನ್ನು ಬಗೆಹರಿಸಿ ಅವರು ತಮ್ಮ ತಮ್ಮ ದೇಶಗಳನ್ನೇ ಆಳುವಂತೆ ಮಾಡಿದ. ಬಾಲ್ಕನ್ ದ್ವೀಪ ತುರ್ಕಿಯ ಕ್ಯೆಯಲ್ಲಿತ್ತು. ಅಲ್ಲಿದ್ದ ಕ್ರೈಸ್ತ ಪ್ರಜೆಗಳು ಸ್ವಾತಂತ್ರ್ಯ ಬಯಸಿದರು.
  • ಇಂಗ್ಲೆಂಡ್ ಈ ವಿಷಯದಲ್ಲಿ ಏನೂ ಮಾಡಲಾರದಾಗಿತ್ತು. ತುರ್ಕಿ ಆಗ ಯುರೋಪಿನ ಕಾಯಿಲೆ ಮನುಷ್ಯನೆನಿಸಿತ್ತು. ರಷ್ಯ ತುರ್ಕಿಯನ್ನು ಹಂಚಿಕೊಳ್ಳಲು ಹವಣಿಸಿತ್ತು. ರಷ್ಯದ ಸ್ನೇಹ ಬಯಸಿದರೆ ಬಾಲ್ಕನ್ ರಾಜ್ಯಗಳಲ್ಲಿ ರಷ್ಯದ ಕೈವಾಡ ಜಾಸ್ತಿಯಾಗುತ್ತದೆಂದು ಹೆದರಿ ಇಂಗ್ಲೆಂಡ್ ತುರ್ಕಿಯ ಕಡೆ ಸೇರಿತು. ರಷ್ಯ ತುರ್ಕಿಗೆ ಸೇರಿದ್ದ ಪಿಲಾಕಿಯ, ಮಾಲೇವಿಯಗಳನ್ನು ಅತಿಕ್ರಮಿಸಿದ್ದರ ಕಾರಣ ಯುದ್ಧ ಪ್ರಾರಂಭವಾಯಿತು. ಇದಕ್ಕೆ ಕ್ರಿಮಿಯನ್ ಯುದ್ಧವೆಂದು ಹೆಸರು. ತುರ್ಕಿಯೊಂದಿಗೆ ಫ್ರಾನ್ಸ್ ಸೇರಿತು.
  • ಬಾಲಕ್ಲಾವ, ಇಂಕರ್ಮನ್ ಮುಂತಾದ ಕಡೆ ಯುದ್ಧ ನಡೆಯಿತು. ಇಂಗ್ಲಿಷರು ರಷ್ಯನ್ನರನ್ನು ಸೋಲಿಸಿದರು. ಆದರೆ ಇಂಗ್ಲಿಷರ ಸ್ಥಿತಿ ಚಿಂತಾಜನಕವಾಯಿತು. 1856ರಲ್ಲಿ ಪ್ಯಾರಿಸ್ ಕೌಲಿನಿಂದ ಯುದ್ಧ ಮುಕ್ತಾಯವಾಯಿತು. ತುರ್ಕಿ ಬದುಕಿತು. ಕ್ರಿಮಿಯನ್ ಯುದ್ಧದಿಂದ ಪಾಮಸರ್ಟ್ನ್ ತನ್ನ ಜೀವನಪರ್ಯಂತ ಪ್ರಧಾನಿಯಾಗುವ ಅವಕಾಶ ಪಡೆದುಕೊಂಡ. ಆದರೆ ಅವನು ಕಾಮನ್ಸ್ ಸಭೆಯ ಮುಂದೆ ಕಾನ್ಸ್ಪಿರೆಸಿ ಟು ಮರ್ಡರ್ ಬಿಲ್ ಎಂಬ ವಿಧೇಯಕ ತಂದಾಗ ಸೋತು ರಾಜೀನಾಮೆ ಕೊಟ್ಟ.
  • ಸ್ವಲ್ಪಕಾಲ ಪಾಮಸರ್ಟ್ನ್ ಮತ್ತು ಗ್ಲ್ಲಾಡ್ಸ್ಟನ್ ಇಂಗ್ಲೆಂಡಿಗೆ ಮಾರ್ಗದರ್ಶನ ನೀಡಿದರು. ಫ್ರಾನ್ಸಿಗೆ ಮುಕ್ತ ವ್ಯಾಪಾರದಲ್ಲಿ ಇಚ್ಛೆ ಇದ್ದುದರಿಂದ ಇಂಗ್ಲೆಂಡ್ ಅದರೊಂದಿಗೆ ಒಪ್ಪಂದ ಮಾಡಿಕೊಂಡಿತು. ಫ್ರಾನ್ಸಿಗೆ ಕಬ್ಬಿಣ, ಇಂಗ್ಲೆಂಡಿಗೆ ರೇಷ್ಮೆ ದೊರಕುವಂತಾಯಿತು. ಪಾಮಸರ್ಟ್ನ್ 60 ವರ್ಷ ಪಾರ್ಲಿಮೆಂಟ್ ಸದಸ್ಯನಾಗಿದ್ದ. 1865ರಲ್ಲಿ ಕಾಲವಾದ. 1874ರಲ್ಲಿ ಬ್ರಿಟನ್ನಿನ ಪ್ರಧಾನಿಯಾದ ಡಿಸ್ರೇಲಿಯ ಸರ್ಕಾರದಲ್ಲಿ ಜನಸಾಮಾನ್ಯಕ್ಕೆ ಉಪಯುಕ್ತವಾದ ಅನೇಕ ಕಾನೂನುಗಳು ಜಾರಿಗೆ ಬಂದವು.
  • ಡಿಸ್ರೇಲಿಯ ವಿದೇಶಾಂಗ ನೀತಿ ಅತ್ಯಂತ ಸ್ಪಷ್ಟವಾಗಿತ್ತು. ಈತ ಇಂಗ್ಲೆಂಡಿಗೆ ಹೊರದೇಶಗಳಲ್ಲಿ ಪ್ರತಿಷ್ಠೆ ದೊರಕಿಸಿಕೊಟ್ಟ. ಈ ವೇಳೆಗೆ ಭಾರತ ಬ್ರಿಟಿಷ್ ಸಾಮ್ರಾಜ್ಯದ ಮುಖ್ಯ ಅಂಗವಾಗಿತ್ತು. ಪೂರ್ವದೊಂದಿಗೆ ವ್ಯಾಪಾರಕ್ಕಾಗಿಯೂ ಸಾಮ್ರಾಜ್ಯದ ನಿರ್ವಹಣೆಗಾಗಿಯೂ ಸೂಯೆಜ್ ಕಾಲುವೆ ಯ ಮೇಲೆ ಹತೋಟಿ ಹೊಂದುವುದು ಅವಶ್ಯವಾಗಿತ್ತು. ಅದಕ್ಕಾಗಿ ಈತ 1875ರಲ್ಲಿ ಈಜಿಪ್ಟಿನ ದೊರೆಯಿಂದ ಸೂಯೆಜ್ ಕಾಲುವೆಯ ಷೇರುಗಳನ್ನು ಕೊಂಡ. ರಷ್ಯದ ಬಗ್ಗೆ ಈತನಿಗೆ ಭೀತಿಯಿತ್ತು. ರಷ್ಯ ಪ್ರಬಲವಾಗುವುದು ಈತನಿಗೆ ಇಷ್ಟವಿರಲಿಲ್ಲ.
  • ಈತನ ಕಾಲದಲ್ಲೇ (1877) ವಿಕ್ಟೋರಿಯಾ ರಾಣಿ ಭಾರತದ ಚಕ್ರವರ್ತಿನಿಯೆನಿಸಿಕೊಂಡಳು. 1876ರಲ್ಲಿ ತುರ್ಕಿಯ ವಿರುದ್ಧ ನಡೆದ ಬಾಲ್ಕನ್ ದಂಗೆಯಿಂದಾಗಿ ರಷ್ಯಕ್ಕೂ ತುರ್ಕಿಗೂ ಯುದ್ಧವಾಯಿತು. ಡಿಸ್ರೇಲಿ ಅನಂತರ ಪ್ರಧಾನಮಂತ್ರಿಯಾದ ಗ್ಲ್ಲಾಡ್ಸ್ಟನ್ ಐಶ್ಚರ್ಯವಂತ, ಸುಶಿಕ್ಷಿತ. ಟೋರಿ ರಾಬರ್ಟ್ ಪೀಲ್ ಗೋದಿಯ ಕಾನೂನನ್ನು ರದ್ದುಮಾಡಲು ಹೋರಾಡಿದಾಗ ಗ್ಲ್ಲಾಡ್ಸ್ಟನ್ ಆತನಿಗೆ ಸಹಾಯಕನಾಗಿದ್ದ. ಪೀಲ್ ಸರ್ಕಾರದಲ್ಲಿ ಈತ ವಾಣಿಜ್ಯ ಸಮಿತಿಯ ಅಧ್ಯಕ್ಷನಾಗಿದ್ದು ಪಾಮಸರ್ಟ್ನ್ನನ ಜೊತೆಯಲ್ಲಿ ಅರ್ಥಸಚಿವನಾದ.
  • ಈತ ಕಾರ್ಮಿಕರ ಪುರೋಭಿವೃದ್ಧಿಗಾಗಿ ಹೊಡೆದಾಡಿದ. ಇಂಗ್ಲೆಂಡಿನ ರಕ್ಷಣೆಯೇ ಈತನ ಆಸಕ್ತಿಯಾಗಿತ್ತು. ಈತ 1906ರಲ್ಲಿ ಬೋಯರ್ ಜನಾಂಗಕ್ಕೆ ಸ್ವಯಮಾಡಳಿತ ದೊರಕಿಸಿಕೊಟ್ಟ. 1901ರಲ್ಲಿ ವಿಕ್ಟೋರಿಯ ರಾಣಿ ಗತಿಸಿದಾಗ 7ನೆಯ ಎಡ್ವರ್ಡ್ ಚಕ್ರವರ್ತಿಯಾದ. ಸಾಮ್ಯವಾದ ಇಂಗ್ಲೆಂಡಿನಲ್ಲಿ ಇಣುಕಿತು. ಕಾರ್ಲ್ಮಾಕ್ರ್ಸ್ನ ದಾಸ್ ಕ್ಯಾಪಿಟಲ್ ಪ್ರಚಾರವಾಯಿತು. ಸುಪ್ರಸಿದ್ಧ ನಾಟಕಕಾರ ಬರ್ನಾಡ್ ಷಾ ಮುಂತಾದವರು ಅದಕ್ಕೆ ಇಂಬು ಕೊಟ್ಟರು. ಕೇಲ್ ಹಾರ್ಡಿ ಎಂಬುವನಿಂದ 1906ರಲ್ಲಿ ಲೇಬರ್ ಪಕ್ಷ ಜನ್ಮ ತಳೆಯಿತು.
  • ಈ ಪಕ್ಷ 1906ರ ವೇಳೆಗೆ ಸಾಕಷ್ಟು ಪ್ರತಿಷ್ಠೆ ಗಳಿಸಿತು. ಕಾರ್ಮಿಕ ಪರಿಹಾರದ ಕಾಯಿದೆ, ಔದ್ಯೋಗಿಕ ಸಂಘಗಳ ಕಾಯಿದೆ, ಶಾಲಾ ಮಕ್ಕಳಿಗೆ ನಡುಹಗಲ ಆಹಾರ ಒದಗಿಸುವ ಕಾಯಿದೆ, ವೃದ್ಧಾಪ್ಯ ವೇತನದ ಕಾಯಿದೆ-ಮುಂತಾದುವುಗಳು 7ನೆಯ ಎಡ್ವರ್ಡನ ಕಾಲದಲ್ಲಿ ಜಾರಿಗೆ ಬಂದುವು. ಹೀಗೆ ಸುಮಾರು ಸಾವಿರ ವರ್ಷಗಳ ದೀರ್ಘಕಾಲದಲ್ಲಿ ಇಂಗ್ಲೆಂಡಿನ ಇತಿಹಾಸ ಕ್ರಮಕ್ರಮವಾಗಿ ಬೆಳೆಯಿತು ವೇಲ್ಸ್, ಸ್ಕಾಟ್ಲೆಂಡ್, ಉತ್ತರ ಐರ್ಲೆಂಡ್ ಇವುಗಳಿಂದ ಕೂಡಿದ ಸಂಯುಕ್ತ ಪ್ರಭುತ್ವದ ಆವಿಷ್ಕಾರವಾಯಿತು (ಇಂಗ್ಲೆಂಡಿನ ಈಚಿನ ಇತಿಹಾಸಕ್ಕೆ ಗ್ರೇಟ್ ಬ್ರಿಟನ್ನಿನ ಇತಿಹಾಸ ಅನ್ನು ನೋಡಿ)