ಆನಂದಕಂದ (ಬೆಟಗೇರಿ ಕೃಷ್ಣಶರ್ಮ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಟಗೇರಿ ಕೃಷ್ಣಶರ್ಮ
ಜನನಏಪ್ರಿಲ್ ೧೬. ೧೯೦೦
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ
ಮರಣಅಕ್ಟೋಬರ್ ೩೦, ೧೯೮೨
ಕಾವ್ಯನಾಮಆನಂದಕಂದ
ವೃತ್ತಿಕವಿಗಳು
ವಿಷಯಕನ್ನಡ ಸಾಹಿತ್ಯ

ಆನಂದಕಂದ (ಏಪ್ರಿಲ್ ೧೬,೧೯೦೦ - ಅಕ್ಟೋಬರ್ ೩೦,೧೯೮೨) ಕಾವ್ಯನಾಮದಿಂದ ಪ್ರಸಿದ್ಧರಾದ, ಕವಿಭೂಷಣ ಎಂದು ಪುರಸ್ಕೃತರಾದ ಬೆಟಗೇರಿ ಕೃಷ್ಣಶರ್ಮರ ಜನನ ೧೯೦೦ ಏಪ್ರಿಲ್ ೧೬ ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಆಯಿತು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ. ಓ ನನ್ನ ಕಣ್ಣೆ ಓ ನನ್ನ ಕಣ್ಣೆ ಕೃಷ್ಣಶರ್ಮರು ೧೨ ವರ್ಷದ ಬಾಲಕನಿದ್ದಾಗಲೆ ಅವರ ತಂದೆ ತೀರಿಕೊಂಡರು; ೧೫ನೆಯ ವರ್ಷಕ್ಕೆ ಅಣ್ಣ ಹಣಮಂತರಾಯನ ಮರಣ. ೧೮ನೆಯ ವರ್ಷದಲ್ಲಿ ಇವರ ತಾಯಿ ಸಹ ನಿಧನರಾದರು. ಸ್ವತಃ ಕೃಷ್ಣಶರ್ಮರೆ ತಮ್ಮ ೧೪ನೆಯ ವಯಸ್ಸಿನಲ್ಲಿ ತೀವ್ರವಾದ ವಿಷಮಶೀತ ಜ್ವರದಿಂದ ಬಳಲಿದರು. ೧೫ನೆಯ ವಯಸ್ಸಿನಲ್ಲಿ ಪ್ಲೇಗ್ ಜ್ವರಕ್ಕೆ ತುತ್ತಾಗಿ ಜೀವನ ಪರ್ಯಂತ ಇವರ ಕೈ ಹಾಗು ಕಾಲುಗಳು ದುರ್ಬಲವಾದವು. ಕೃಷ್ಣಶರ್ಮರ ಮದುವೆ ೧೯೨೮ರಲ್ಲಿ ತುಳಸಾಬಾಯಿಯವರ ಜೊತೆಗೆ ಜರುಗಿತು. ಇವರಿಗೆ ಮೂವರು ಹೆಣ್ಣು ಮಕ್ಕಳು ಹಾಗು ಒಬ್ಬ ಮಗ. ಇವರ ೫೬ನೆಯ ವಯಸ್ಸಿನಲ್ಲಿ ಚಿಕ್ಕ ಮಗಳು ವಿಷಮಶೀತ ಜ್ವರದಿಂದ ಮರಣ ಹೊಂದಿದಳು. ಮರುವರ್ಷ ಇವರ ಹೆಂಡತಿ ನಿಧನರಾದರು.

ಶಿಕ್ಷಣ[ಬದಲಾಯಿಸಿ]

ಪ್ರಾಥಮಿಕ ಶಾಲೆಯ ೫ನೆಯ ತರಗತಿಯ ವರೆಗೆ ಕೃಷ್ಣಶರ್ಮರು ಬೆಟಗೇರಿಯಲ್ಲಿಯೆ ಶಿಕ್ಷಣ ಪಡೆದರು. ಮುಂದಿನ ತರಗತಿಗಳು ಅಲ್ಲಿರಲಿಲ್ಲ. ತಂದೆಯ ಮರಣ ಹಾಗು ಬಡತನದಿಂದಾಗಿ ಬೇರೆಡೆಗೆ ಕಲಿಯಲು ಹೋಗುವದು ದುಸ್ಸಾಧ್ಯವಾಗಿತ್ತು. ಐದು ಮೈಲು ದೂರದ ಮಮದಾಪುರಕ್ಕೆ ಕಂಪಿಸುವ ಕಾಲುಗಳ ಮೇಲೆ ನಡೆಯುತ್ತಲೆ ಹೋಗಿ ಕಲಿಕೆ ಮುಂದುವರಿಸಿದ ಕೃಷ್ಣಶರ್ಮರು ೧೯೧೭ರಲ್ಲಿ ಬೆಳಗಾವಿಗೆ ಹೋಗಿ ಪರೀಕ್ಷೆಗೆ ಕುಳಿತು ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದರು.

ಉದ್ಯೋಗ ಪರ್ವ[ಬದಲಾಯಿಸಿ]

೧೯೧೮ರಲ್ಲಿ ಕೃಷ್ಣಶರ್ಮರು ಬೆಳಗಾವಿಯಲ್ಲಿ ಮುನಸಿಪಾಲಿಟಿಯ ಆರೋಗ್ಯ ಇಲಾಖೆಯಲ್ಲಿ ನೌಕರಿ ಹಿಡಿದರು. ಮನೆಮನೆಗೆ ಹೋಗಿ ಇಲಿಬಲೆಗಳನ್ನು ಕೊಡುವದು; ಸಿಲುಕಿದ ಇಲಿಗಳ ಸಹಿತವಾಗಿ ಬಲೆಗಳನ್ನು ಮರಳಿ ತಂದು ಕೊಡುವದೇ ಇವರ ಕೆಲಸ. ನಾಲ್ಕಾರು ದಿನಗಳಲ್ಲಿ ಆ ಕೆಲಸ ಬಿಟ್ಟು ಶಿಕ್ಷಕನ ನೌಕರಿಗೆ ಪ್ರಯತ್ನಿಸಿದರು. ಆ ಕೆಲಸ ಸಿಗುವ ಸಂಭವವಿದ್ದಾಗಲೆ ಶ್ರೀಯುತ ನರಸಿಂಹಾಚಾರ್ಯ ಪುಣೇಕರ (ಕಾವ್ಯಾನಂದ) ಇವರ ಸೂಚನೆಯಂತೆಕಿತ್ತೂರಿಗೆ ಹೋಗಿ ಕೆಲ ಕಾಲ ಅವರಲ್ಲಿ ಸಂಸ್ಕೃತ ಅಧ್ಯಯನ ಮಾಡಿದರು. ಮರಳಿ ಬೆಳಗಾವಿಗೆ ಬಂದು ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕರಾದರು. ರಾಷ್ಟ್ರೀಯ ಚಳುವಳಿಗಳ ಜೊತೆಜೊತೆಗೆ ಕನ್ನಡದ ಕೆಲಸವನ್ನೂ ಸಹ ಮಾಡಿದರು. ಬೆಳಗಾವಿ ರಾಷ್ಟ್ರೀಯ ಶಾಲೆಯಿಂದ ಯಮಕನಮರಡಿ ರಾಷ್ಟ್ರೀಯ ಶಾಲೆಗೆ, ಅಲ್ಲಿಂದ ಧಾರವಾಡ ರಾಷ್ಟ್ರೀಯ ಶಾಲೆಗೆ ಕೃಷ್ಣಶರ್ಮರು ಅಲೆದಾಡಿದರು. ಆ ಶಾಲೆಯೂ ಮುಚ್ಚಿದಾಗ ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿ ಶಿಕ್ಷಕರಾದರು. ವ್ಯವಸ್ಥಾಪಕ ವರ್ಗದೊಡನೆ ಮೂಡಿದ ಭಿನ್ನಾಭಿಪ್ರಾಯದಿಂದಾಗಿ ಆ ಕೆಲಸವನ್ನು ಬಿಟ್ಟುಕೊಟ್ಟು ಧಾರವಾಡಕ್ಕೆ ಮರಳಿದ ಕೃಷ್ಣಶರ್ಮರು ೧೯೩೮ರಲ್ಲಿ ಜಯಂತಿಯ ಸಂಪಾದಕತ್ವವನ್ನು ವಹಿಸಿಕೊಂಡರು.

ಪತ್ರಿಕಾ ಸಂಪಾದನೆ[ಬದಲಾಯಿಸಿ]

೧೯೨೨ರಲ್ಲಿಯೆ ಬೆಳಗಾವಿಯಿಂದ ಹೊರಡುತ್ತಿದ್ದ ಮಾತೃಭೂಮಿ ಪತ್ರಿಕೆಗೆ ಕೃಷ್ಣಶರ್ಮರು ಸಂಪಾದಕರಾದರು. ಆ ಪತ್ರಿಕೆ ಆರ್ಥಿಕ ತೊಂದರೆಯಿಂದಾಗಿ ಒಂದು ವರ್ಷದ ಬಳಿಕ ಮುಚ್ಚಿಹೋಯಿತು.೧೯೨೫ರಲ್ಲಿ ಧಾರವಾಡಕ್ಕೆ ಬಂದ ಕೃಷ್ಣಶರ್ಮರು ೧೯೨೭ರವರೆಗೆ ಸ್ವಧರ್ಮ ಪತ್ರಿಕೆಯ ಸಂಪಾದಕರಾಗಿದ್ದರು. ಈ ಪತ್ರಿಕೆ ೨ ವರ್ಷಕಾಲ ನಡೆಯಿತು. ೧೯೩೦ರಿಂದ ೧೯೩೩ರವರೆಗೆ ಕೃಷ್ಣಶರ್ಮರು ಜಯಕರ್ನಾಟಕ ಪತ್ರಿಕೆಯ ಸಂಪಾದಾಕರಾಗಿ ಹಾಗು ೧೯೩೫ರಿಂದ ೧೯೩೬ರವರೆಗೆ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ೧೯೩೮ರಲ್ಲಿ “ ಜಯಂತಿ ”ಯ ಸ್ಥಾಪನೆ.

ಸಾಹಿತ್ಯಸಾಧನೆ[ಬದಲಾಯಿಸಿ]

‘""ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’""ಎಂದು ಹಾಡಿದವರು ನಮ್ಮ ಆನಂದಕಂದರು. ಆನಂದಕಂದರು ತಮ್ಮ ಕವನ, ಸಣ್ಣಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶುಸಾಹಿತ್ಯ, ಮೀಮಾಂಸೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ ಮತ್ತು ಪತ್ರಿಕಾ ಸಂಪಾದನೆಗಳಂತಹ ನಿರಂತರ ಕಾಯಕಗಳ ಮೂಲಕ ಇಡೀ ನಾಡನ್ನು ಬೆಳಗಿ ಕನ್ನಡ ನಾಡಿನ ಅಸಂಖ್ಯಾತ ಪ್ರತಿಭೆಗಳನ್ನೂ ಹುಟ್ಟುಹಾಕಿದರು. ಭಾರತದ ಸ್ವಾತಂತ್ರ್ಯ ಪ್ರಾಪ್ತಿ, ಕರ್ನಾಟಕತ್ವದ ಜಾಗೃತಿ ಮತ್ತು ಕರ್ನಾಟಕ ಏಕೀಕರಣಗಳಿಗೆ ತಮ್ಮ ಶಕ್ತಿ ಸರ್ವಸ್ವವನ್ನೂ ಧಾರೆಯೆರೆದು ದುಡಿದ ಕನ್ನಡ ಸಾಹಿತಿಗಳಲ್ಲಿ ಇವರದು ಸಿಂಹಪಾಲು.

ಕೃಷ್ಣಶರ್ಮರು ಬಾಲ್ಯದಿಂದಲೆ ಕವನರಚನೆ ಪ್ರಾರಂಭಿಸಿದ್ದರು. ರಾಷ್ಟ್ರೀಯ ಚಳುವಳಿಗಾಗಿ, ಕನ್ನಡ ಸ್ವಯಂಸೇವಕರಿಗಾಗಿ, ಕಾಂಗ್ರೆಸ್ ಅಧಿವೇಶನಗಳಿಗಾಗಿ ಅವರು ಕವನ ರಚಿಸಿ ಕೊಟ್ಟರು. ಅವರ ಪ್ರಥಮ ಕವನ 'ಭಕ್ತಿ ಕುಸುಮಾವಳಿ ೧೯೧೮ರಲ್ಲಿ ಪ್ರಭಾತ' ಪತ್ರಿಕೆಯಲ್ಲಿ ಪ್ರಕಟವಾಯಿತು. ಕೇವಲ ಕನ್ನಡ ಮುಲ್ಕಿ ಪರೀಕ್ಷೆಯನ್ನು ಮಾಡಿಕೊಂಡ ಕೃಷ್ಣಶರ್ಮರು ಇಂಗ್ಲಿಶ್ ಕಲಿಯಲಿಲ್ಲ. ಆದರೂ ಅವರು ವಿದ್ವತ್ತು ಅಗಾಧವಾದದ್ದು. ಸಂಶೋಧನೆ, ಜಾನಪದ ಕ್ಷೇತ್ರಗಳಲ್ಲಿ ಮೌಲಿಕವಾದ ಕಾರ್ಯ ಅವರಿಂದ ಆಗಿದೆ. ೧೯೩೫ರಲ್ಲಿ ಜಿ.ಬಿ.ಜೋಶಿ ಹಾಗು ಗೋವಿಂದರಾವ ಚುಳಕಿಯವರ ಜೊತೆಗೂಡಿ ಧಾರವಾಡದಲ್ಲಿ ಮನೋಹರ ಗ್ರಂಥಮಾಲೆಯನ್ನು ಸ್ಥಾಪಿಸಿದರು.

ಕೃತಿಗಳು[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

  • ರಾಷ್ಟ್ರೀಯ ಪದ್ಯಾವಲಿ
  • ರಾಷ್ಟ್ರೀಯ ಪದ್ಯಮಾಲೆ
  • ಗಾಂಧೀ ಗೀತ ಸಪ್ತಕ
  • ರಮೆಯುಮೆಯರ ಸಂವಾದ
  • ಮುದ್ದನ ಮಾತು
  • ಅರುಣೋದಯ
  • ವಿರಹಿಣಿ
  • ಒಡನಾಡಿ
  • ಕಾರಹುಣ್ಣಿವೆ
  • ನಲ್ವಾಡುಗಳು
  • ಉತ್ಸಾಹಗಾಥಾ
  • ಸಾಮಾಜಿಕ ಸಂವಹನಗಳು
  • ಭಾವಗೀತ (ಸಂಪಾದಿತ)
  • ಬೆಳುವಲದ ಸುಗ್ಗಿ (ಸಮಗ್ರ ಕಾವ್ಯ)
  • ಸೀಮೆಯ ಕಲ್ಲು

ಸಣ್ಣ ಕಥೆಗಳು[ಬದಲಾಯಿಸಿ]

  • ಸಂಸಾರಚಿತ್ರ
  • ಬಡತನದ ಬಾಳು
  • ನಮ್ಮ ಬದುಕು
  • ಜನಪದ ಜೀವನ
  • ಮಾತನಾಡುವ ಕಲ್ಲು
  • ಕಳ್ಳರ ಗುರು ಮತ್ತು ಇತರ ಕಥೆಗಳು
  • ದಶಮಂಜರಿ (ಆಯ್ದ ಕಥೆಗಳ ಸಂಕಲನ)

ಕಾದಂಬರಿ[ಬದಲಾಯಿಸಿ]

  • ಸುದರ್ಶನ
  • ರಾಜಯೋಗಿ
  • ಅಶಾಂತಿಪರ್ವ
  • ಮಗಳ ಮದುವೆ
  • ಮಲ್ಲಿಕಾರ್ಜುನ

ನಾಟಕ[ಬದಲಾಯಿಸಿ]

(ಆಕಾಶವಾಣಿಗಾಗಿ ತರಂಗ ರೂಪಕಗಳು)

  • ಬೆಳವಡಿ ಮಲ್ಲಮ್ಮ
  • ಬೆಂದ ಹೃದಯ
  • ಮುಂಡರಗಿಯ ಗಂಡುಗಲಿ
  • ಪಂಚಗಂಗಾ

ಚರಿತ್ರೆ[ಬದಲಾಯಿಸಿ]

  • ಕನ್ನಡರಾಜ್ಯ ರಮಾರಮಣ

ಜನಪದ ಸಾಹಿತ್ಯ[ಬದಲಾಯಿಸಿ]

  • ಬೀಸುಕಲ್ಲಿನ ಹಾಡುಗಳು
  • ಕನ್ನಡ ಜನಪದ ಸಾಹಿತ್ಯ

ಸಂಪಾದನೆ[ಬದಲಾಯಿಸಿ]

  • ಮೃಚ್ಚಕಟಿಕ
  • ಪೂಜಾತತ್ವ
  • ಆರ್ತಭಾವ
  • ಮಾಹಾತ್ಮ್ಯ ಜ್ಞಾನ
  • ಕೃಷ್ಣಲೀಲಾ
  • ಲೋಕನೀತಿ
  • ಸಂಕೀರ್ಣ-ಸಂಗ್ರಹ
  • ಕನಕದಾಸರ ಭಕ್ತಿಗೀತೆಗಳು
  • ಅಕ್ರೂರ ಚರಿತ್ರೆ
  • ಪ್ರಸನ್ನ ವೆಂಕಟದಾಸರ ಭಾಗವತ
  • ಹರಿದಾಸರ ಭಕ್ತಿ ಸಾಧನೆ

ಅನುವಾದ[ಬದಲಾಯಿಸಿ]

  • ಮಧ್ಯಮ ವ್ಯಾಯೋಗ

ಮಕ್ಕಳ ಸಾಹಿತ್ಯ[ಬದಲಾಯಿಸಿ]

  • ಬಸವಣ್ಣನವರು
  • ಚಂದ್ರಹಾಸ
  • ಭೀಷ್ಮ
  • ಲವ ಕುಶ

ಆತ್ಮಚರಿತ್ರೆ[ಬದಲಾಯಿಸಿ]

  • ನನ್ನ ನೆನಪುಗಳು

ವಿಮರ್ಶೆ-ಸಂಶೋಧನೆ[ಬದಲಾಯಿಸಿ]

  • ಕರ್ನಾಟಕ ಜನಜೀವನ
  • ಸಾಹಿತ್ಯವು ಸಾಗಿರುವ ದಾರಿ
  • ನಮ್ಮ ಸಂಸ್ಕೃತಿ ಪರಂಪರೆ
  • ಸಾಹಿತ್ಯವಿಹಾರ.

ಅಭಿನಂದನ ಗ್ರಂಥ[ಬದಲಾಯಿಸಿ]

  • ಬೆಳುವಲ.

ಪುರಸ್ಕಾರ[ಬದಲಾಯಿಸಿ]

ಆರು ದಶಕಗಳಿಗೂ ಮಿಕ್ಕಿ ಅವ್ಯಾಹತವಾಗಿ ಶ್ರೀ ಬೆಟಗೇರಿ ಕೃಷ್ಣಶರ್ಮರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಬಹುಮುಖ ಕೊಡುಗೆಗಳಿಗೆ ಸಂದ ಗೌರವಗಳು ಅನೇಕ. ೧೯೭೪ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಕೃಷ್ಣಶರ್ಮರಿಗೆ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿತು. ಇದಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಸಮ್ಮೇಳನದ ಅಧ್ಯಕ್ಷತೆ, ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳು ಅವರಿಗೆ ಸಂದವು.

ನಿಧನ[ಬದಲಾಯಿಸಿ]

ಡಾ. ಬೆಟಗೇರಿ ಕೃಷ್ಣಶರ್ಮರು ನಮ್ಮ ನಾಡಿಗೆ ಅಪರಿಮಿತವಾಗಿ ಶ್ರಮಿಸಿ ೧೯೮೨ನೆಯ ಅಕ್ಟೋಬರ್ ತಿಂಗಳ ೩೦ರಂದು ಧಾರವಾಡದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.