ಆಂಗ್ ಸಾನ್ ಸೂ ಕಿ
ಆಂಗ್ ಸಾನ್ ಸೂ ಕಿ (ಹುಟ್ಟಿದ್ದು ೧೯ ಜೂನ್ ೧೯೪೫ರಂದು) ಬರ್ಮಾ ದೇಶದ ವಿರೋಧ ಪಕ್ಷದ ನಾಯಕಿ. ಈಕೆ ಹಿಂದೆ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಜನರಲ್ ಸೆಕ್ರೆಟರಿ ಆಗಿದ್ದರು. ೧೯೯೦ ರ ಸಾರ್ವತ್ರಿಕ ಚುನಾವಣೆಯಲ್ಲಿ ಇವರ ಪಕ್ಷ ಪಾರ್ಲಿಮೆಂಟಿನಲ್ಲಿ ೮೦ ಪ್ರತಿಶತ ಸ್ಥಾನಗಳನ್ನು ಗೆದ್ದಿತಾದರೂ ಅಲ್ಲಿನ ಮಿಲಿಟರಿ ಆಡಳಿತವು ೧೯೮೯ ರಿಂದಲೇ ಇವರನ್ನು ಗೃಹಬಂಧನದಲ್ಲಿಟ್ಟಿತ್ತು. ಈಕೆ ಬಂಧನದಲ್ಲಿರುವಾಗಲೇ ೧೯೯೧ರ ನೋಬೆಲ್ ಶಾಂತಿ ಪ್ರಶಸ್ತಿಯನ್ನೊಳಗೊಂಡು ಅನೇಕ ಜಾಗತಿಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಭಾರತವು ಇವರಿಗೆ ಅಂತಾರಾಷ್ಟ್ರೀಯ ತಿಳುವಳಿಕೆಗಾಗಿ ಇರುವ ಜವಾಹರಲಾಲ್ ಪ್ರಶಸ್ತಿಯನ್ನು ಕೊಟ್ಟಿದೆ. ಇವರನ್ನು ಇತ್ತೀಚೆಗೆ ೧೩ ನವಂಬರ್ ೨೦೧೦ರಂದು ಅಲ್ಲಿನ ಆಡಳಿತವು ಬಿಡುಗಡೆಮಾಡಿದೆ.
ಇವರು ೧೯೯೦ರಿಂದ ಇಪ್ಪತೊಂದು ವರ್ಷಗಳ ಅವಧಿಯಲ್ಲಿ ಸುಮಾರು ೧೫ ವರ್ಷಗಳನ್ನು ಗೃಹಬಂಧನದಲ್ಲೇ ಕಳೆದಿದ್ದಾರೆ.
ಇವರ ತಂದೆ ಆಧುನಿಕ ಬರ್ಮಾದ ತಂದೆ ಎನಿಸಿಕೊಂಡಿದ್ದಾರೆ.
ವೈಯಕ್ತಿಕ ಜೀವನ [ಬದಲಾಯಿಸಿ]
ಇವರ ತಂದೆ ಆಂಗ್ ಸಾನ್ ೧೯೪೭ರಲ್ಲಿ ಬರ್ಮಾ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿಕೊಟ್ಟರಾದರೂ ಅದೇ ವರ್ಷ ಅವರ ವಿರೋಧಿಗಳಿಂದ ಹತ್ಯೆಗೊಳಗಾದರು. ಈಕೆಯ ತಮ್ಮ ೮ ವರ್ಷದವನಿದ್ದಾಗ ತೀರಿಕೊಂಡನು . ಅಣ್ಣನು ಕ್ಯಾಲಿಫೋರ್ನಿಯಾಕ್ಕೆ ತೆರಳಿ ಅಮೇರಿಕ ದೇಶದ ನಾಗರಿಕತೆ ಪಡೆದುಕೊಂಡನು. ತಾಯಿ ಭಾರತ ಹಾಗೂ ನೇಪಾಳ ದೇಶಗಳಿಗೆ ರಾಯಭಾರಿಯಾಗಿದ್ದರು. ಆಂಗ್ ಸಾನ್ ಸೂ ಕಿ ಭಾರತದಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ೧೯೬೪ರಲ್ಲಿ ರಾಜಕೀಯವಿಷಯದಲ್ಲಿ ಪದವಿ ಪಡೆದರು. ಮುಂದೆ ಆಕ್ಸಫರ್ಡ್ ನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ನ್ಯೂಯಾರ್ಕ್ ಗೆ ತೆರಳಿದರು. ಅಲ್ಲಿ ಅವರ ಮದುವೆಯಾಗಿ ಎರಡು ಮಕ್ಕಳು ಹುಟ್ಟಿದರು. ನಂತರ ಲಂಡನ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ . ಮಾಡಿದರು. ಮುಂದೆ ಸಿಮ್ಲಾ ದಲ್ಲಿ ಎರಡು ವರ್ಷ ಇದ್ದರು. ನಂತರ ಬರ್ಮಾ ಸರಕಾರದ ಸೇವೆಯಲ್ಲಿ ಕೆಲಕಾಲ ಇದ್ದರು.
ಮುಂದೆ ೧೯೮೮ರಲ್ಲಿ ತಾಯಿಯ ಅನಾರೋಗ್ಯದ ಕಾರಣ ಬರ್ಮಾಕ್ಕೆ ಮರಳಿದರು. ನಂತರ ಪ್ರಜಾಸತ್ತೆಯ ಪರವಾದ ಚಳುವಳಿಯ ಮುಂದಾಳತ್ವ ವಹಿಸಿದರು. ಪತಿಗೆ ಅನಾರೋಗ್ಯವುಂಟಾಗಿ ಪರಿಸ್ಥಿತಿ ಗಂಭೀರವಾದಾಗ್ಯೂ ಬರ್ಮಾದ ಆಡಳಿತವು ಅವರಿಗೆ ಬರ್ಮಾದೊಳಕ್ಕೆ ಪ್ರವೇಶಿಸಲು ಬಿಡಲಿಲ್ಲ. ಆಂಗ್ ಸಾನ್ ಸೂಕಿಯವರಿಗೇ ಗಂಡನನ್ನು ಭೆಟ್ಟಿಯಾಗುವುದಕ್ಕಾಗಿ ಬರ್ಮಾ ತೊರೆಯಲು ಸೂಚಿಸಿತು. ಒಮ್ಮೆ ಬರ್ಮಾ ತೊರೆದರೆ ಮತ್ತೆ ಒಳಬರಲು ಬರ್ಮಾಆಡಳಿತವು ಬಿಡಲಿಕ್ಕಿಲ್ಲ ಎಂದು ಆಂಗ್ ಸಾನ್ ಸೂಕಿ ಬರ್ಮಾ ಬಿಡಲು ಒಪ್ಪಲಿಲ್ಲ. ಪತಿಯು ೧೯೯೯ರಲ್ಲಿ ತೀರಿಕೊಂಡರು. ೧೯೮೯ರಲ್ಲಿ ಮೊದಲ ಬಾರಿಗೆ ಗೃಹಬಂಧನದಲ್ಲಿ ಇಟ್ಟಾಗಿನಿಂದ ಅವರಿಗೆ ಐದುಬಾರಿ ಮಾತ್ರ ಭೆಟ್ಟಿಯಾಗಲು ಸಾಧ್ಯವಾಯಿತು. ಮಕ್ಕಳು ಯುನೈಟೆಡ್ ಕಿಂಗಡಂ ನಲ್ಲಿ ಇರುವ ಕಾರಣ ಆಂಗ್ ಸಾನ್ ಸೂ ಕಿ ಮಕ್ಕಳಿಂದಲೂ ದೂರವಾಗಿದ್ದರು. ಕೊನೆಗೆ ೧೩ ನವಂಬರ್ ೨೦೧೦ರಂದು ಅಲ್ಲಿನ ಆಡಳಿತವು ಬಿಡುಗಡೆ ಮಾಡಿತು.