ಅವ್ವೆಯಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಮಿಳುನಾಡಿನ ಪ್ರಸಿದ್ಧ ಕವಯಿತ್ರಿ. ಅವ್ವೆ (ತಮಿಳಿನಲ್ಲಿ ಔವೈ) ಎಂದರೆ ತಾಯಿ. ಅಮ್ಮೈ ಎಂಬ ಪದವೇ ಅವ್ವೈ ಎಂದು ಮಾರ್ಪಟ್ಟಿರಬೇಕು. ಅವ್ವೈ ಎಂಬುದನ್ನು ನಿಜನಾಮವಾಗಿರಿಸಿಕೊಂಡು ಪಾಣರಜಾತಿಯ ಹೆಂಗಸು ಎಂಬರ್ಥ ಕೊಡುವ ಪಿರಾಟ್ಟಿ ಎಂಬುದನ್ನು ಜೊತೆಮಾಡಿ, ಅವ್ವೈ ಪಿರಾಟ್ಟಿ ಎಂಬ ಪದವೇ ಅವ್ವೈಪಾಟ್ಟಿ ಎಂದಾಯಿತೆಂಬ ಊಹೆಯೂ ಇದೆ. ಮಕ್ಕಳಿಗೆ ಪಾಟ್ಟಿ (ಅಜ್ಜಿ) ಹೇಗೆ ನೀತಿಬೋಧನೆ ಮಾಡುವಳೋ ಹಾಗೆಯೇ, ಅವ್ವೆಯೂ ಜನರಿಗೆ ನೀತಿಬೋಧೆ ಮಾಡಿದುದರಿಂದ ಅವಳಿಗೆ ಅವ್ವೈಪಾಟ್ಟಿ ಎಂಬ ಹೆಸರಾಯಿತೆಂದು ಹೇಳುವವರೂ ಇದ್ದಾರೆ. ಅಂತೂ ತಮಿಳುನಾಡಿನ ಜನಜೀವನದಲ್ಲಿ ಬೆರೆತು, ತಮಿಳಿಗೆ ಸೇವೆ ಸಲ್ಲಿಸಿದವಳು ಅವ್ವೈ ಎಂಬುದು ತಿಳಿದ ವಿಷಯ. ಅವ್ವೆಯ ಹುಟ್ಟು, ಬೆಳೆವಣಿಗೆ ಮತ್ತು ಜೀವನಕ್ಕೆ ಸಂಬಂಧಿಸಿ ಅನೇಕ ಕಥೆಗಳಿವೆ. ಆದಿ ಎಂಬ ಹೊಲತಿಗೂ, ಭಗವನ್ ಎಂಬ ಬ್ರಾಹ್ಮಣನಿಗೂ ಏಳು ಜನ ಮಕ್ಕಳೆಂದೂ ಅವರಲ್ಲಿ ಅವ್ವೆಯೂ ಒಬ್ಬಳೆಂದೂ ತಿಳಿದುಬರುತ್ತದೆ. ಇವರೆಲ್ಲ ತಮಿಳಿನಲ್ಲಿ ಪ್ರಸಿದ್ಧರಾದ ಕವಿಗಳು; ಒಬ್ಬೊಬ್ಬರು ಒಂದೊಂದು ಜಾತಿಗೆ ಸೇರಿದವರು. ಇದರಿಂದ, ಈ ಕಥೆ ಕೇವಲ ಕಾಲ್ಪನಿಕವೆಂದು ಬೇರೆ ಹೇಳಬೇಕಾಗಿಲ್ಲ. ಸಂಗಂ ಕಾಲದ (2ನೆಯ ಶತಮಾನ) ಹಾಡುಗಳಿಂದ ತಿಳಿದು ಬರುವ ಅವ್ವೆಯಲ್ಲದೆ, ಅನಂತರವೂ ಆ ಹೆಸರಲ್ಲಿ, ಇತರ ಕವಯಿತ್ರಿಯರನೇಕರು ತಮಿಳಿಗೆ ಸೇವೆ ಸಲ್ಲಿಸಿದ್ದಾರೆ. ಸುಂದರಮೂರ್ತಿನಾಯನಾರ್, ಕಂಬರ್ ಹಾಗೂ ಒಟ್ಟಕೂತ್ತರ್-ಇವರ ಕಾಲದಲ್ಲಿ ಪೋರ್ಚುಗೀಸರು ತಮಿಳುನಾಡಿಗೆ ಬಂದ ಅನಂತರದ ಕಾಲದಲ್ಲಿ ಸಹ ಅವ್ವೆ ಎಂಬ ಹೆಸರಿನ ಕವಯಿತ್ರಿಯರು ಇದ್ದರೆಂಬುದು ಅವ್ವೆಯಾರ್ ಎಂಬ ಹೆಸರಿನಲ್ಲಿ ದೊರೆಯುವ ಕವಿತೆಗಳಿಂದ ತಿಳಿದುಬರುತ್ತದೆ. ಹೀಗಾಗಿ ನಿಶ್ಚಿತವಾಗಿ ಅವ್ವೆಯ ಚರಿತ್ರೆಯನ್ನು ಬರೆಯುವುದು ಕಷ್ಟವಾಗುತ್ತದೆ.

ಸಂಗಂ ಕಾಲದ ಅವ್ವೆ[ಬದಲಾಯಿಸಿ]

ಸಂಗಂ ಕಾಲದ ಪ್ರಸಿದ್ಧ ಕವಿಗಳಾದ ಕಪಿಲರ್, ಪರಣರ್ ಮುಂತಾದವರ ಸಾಲಿನಲ್ಲಿ ಅವ್ವೆಗೂ ವಿಶಿಷ್ಟ ಸ್ಥಾನವಿದೆ. ಆ ಕಾಲದ ಗ್ರಂಥಗಳಲ್ಲಿ ಪುರನಾನೂರು, ಅಗನಾನೂರು, ನಟ್ರಿಣೈ, ಕುರುಂದೊಗೈ ಎಂಬವುಗಳಲ್ಲಿ ಅವ್ವೆ ಹಾಡಿದ 59 ಪದ್ಯಗಳು ದೊರೆಯುತ್ತವೆ. ಇವುಗಳಲ್ಲೆಲ್ಲ ಕವಿಗಳ ಸ್ವಾಭಿಮಾನ, ಪ್ರಾಪಂಚಿಕ ತತ್ತ್ವ, ಮಾತಿನ ವೈಖರಿ, ಉಪಮಾ ಮುಂತಾದ ಜಾಣ್ನುಡಿ, ಅಲಂಕಾರಗಳಿಂದ ವರ್ಣಿತವಾಗಿವೆ. ರಾಜ್ಯ ನಾಡಾಗಿಯೋ, ಕಾಡಾಗಿಯೋ ಏರುತಗ್ಗುಗಳುಳ್ಳದಾಗಿಯೋ ಇರಬಹುದು. ಆದರೆ ಇದರಿಂದ ಒಂದು ರಾಜ್ಯ ಹಿರಿದೆನಿಸದು. ಉತ್ತಮಗುಣಗಳುಳ್ಳ ಪ್ರಜೆಗಳಿಂದಲೇ ಆ ರಾಜ್ಯಕ್ಕೆ ವೈಶಿಷ್ಟ್ಯ ಬರುತ್ತದೆಂದು ಅವ್ವೆ ನಿತ್ಯ ಸತ್ಯವನ್ನು ನುಡಿದಿದ್ದಾಳೆ. ಔದಾರ್ಯಕ್ಕೆ ಹೆಸರಾಂತ ಅದಿಯಮಾನ್ ಅವ್ವೆಯನ್ನು ತುಂಬ ಆದರಿಸಿದ. ಅಮೃತ ದಂತೆ ಚಿರಾಯುವಾಗಿ ಮಾಡಬಲ್ಲ ಒಂದು ನೆಲ್ಲಿಕಾಯಿ ಅದಿಯಮಾನನಿಗೆ ಸಿಕ್ಕಿತು. ತಾನದನ್ನು ತಿನ್ನದೆ, ಕವಿಯಾದ ಅವ್ವೆ ಬಹುಕಾಲ ಬಾಳಬೇಕೆಂದು ಬಗೆದು ಅವಳಿಗೆ ಅದನ್ನು ಕೊಟ್ಟು ತಿನ್ನುವಂತೆ ಮಾಡಿ ಸಾಹಿತ್ಯಲೋಕ ಉದ್ಧಾರವಾಗುವಂತೆ ಮಾಡಿದ. ಇದನ್ನು ತಿಳಿದ ಅವ್ವೆ ಅದಿಯಮಾನ್ ಶಿವನಂತೆ ಬಹುಕಾಲ ಬಾಳಲೆಂದು ಹರಸಿ ಅವನ ಪರಾಕ್ರಮವನ್ನೂ ಔದಾರ್ಯವನ್ನೂ ಹಾಡಿದಳು. ಅದಿಯಮಾನನ ವೈರಿಯಾದ ಕಾಂಚಿಯ ತೊಂಡೈಮಾನನ ಹತ್ತಿರ ಆಕೆ ದೂತ ಕಾರ್ಯಕ್ಕೆ ಹೋದಳು. ತೊಂಡೈಮಾನ್ ತನ್ನ ಆಯುಧಾಗಾರವನ್ನು ಅವ್ವೆಗೆ ತೋರಿಸಿದ. ಅವಳು ತೊಂಡೈಮಾನನ ಆಯುಧಸಂಗ್ರಹವನ್ನು ತೋರಿಕೆಗೆ ಪ್ರಶಂಸಿಸುವಂತೆ ಆದರೆ ನಿಜವಾಗಿ ತೆಗಳುವಂತೆ, ಅದಿಯಮಾನನ ಆಯುಧಸಂಗ್ರಹವನ್ನು ಕುರಿತು ಹೀಗಳೆಯುವಂತೆ ಆದರೆ ನಿಜವಾಗಿ ಹೊಗಳುವಂತೆ ಕವಿತೆಗಳನ್ನು ಹಾಡಿದಳು. ಅದಿಯಮಾನ್ ರಣರಂಗದಲ್ಲಿ ವೈರಿಯ ಈಟಿಯಿಂದ ಸತ್ತುಬಿದ್ದಾಗ ದುಃಖಭರದಿಂದ, ನಿನ್ನ ಎದೆಯಲ್ಲಿ ನಾಟಿದ ಈಟಿ ನಿನ್ನನ್ನು ಆಶ್ರಯಿಸಿದವರ ಭಿಕ್ಷಾಪಾತ್ರೆಯನ್ನೊಡೆಯಿತು; ನೀನು ಕೊಡುವ ದಾನಗಳನ್ನು ಸ್ವೀಕರಿಸುವವರ ಅಂಗೈಗಳನ್ನು ತೂತುಮಾಡಿತು; ಪರಿವಾರದವರ ಕಣ್ಣು ಬೊಂಬೆಗಳು ಇಂಗಿಹೋಗುವಂತೆಸಗಿತು; ಕವಿಗಳ ನಾಲಗೆಗಳನ್ನು ಹೊಲಿದುಬಿಟ್ಟಿತು-ಎಂದು ದುಃಖಸಂತಪ್ತಳಾಗಿ ಹಾಡಿರುವುದು ಎಂಥ ಕಲ್ಲೆದೆಯನ್ನೂ ಕರಗಿಸುವುದು.

ಅನಂತರದ ಅವ್ವೆಯರು[ಬದಲಾಯಿಸಿ]

ಸಂಗಂ ಕಾಲದಲ್ಲಿ ತಮಿಳುನಾಡಿನಲ್ಲಿ ವಿನಾಯಕನ ಪುಜೆ ಇರಲಿಲ್ಲ. ವಾತಾಪಿಯನ್ನು ಜಯಿಸಿ ಮರಳಿದ ಶಿರತ್ತೊಂಡರ್ (7ನೆಯ ಶತಮಾನ) ಕಾಲಾನಂತರವೇ ವಿನಾಯಕನ ಪುಜೆ ತಮಿಳುನಾಡಿನಲ್ಲಿ ಆರಂಭವಾಯಿತು. ಅವ್ವೆ ಹಾಡಿದುದೆಂದು ದೊರೆಯುವ ವಿನಾಯಕ ಸ್ತೋತ್ರಗಳು, ವಿನಾಯಕಸ್ತುತಿಯಿಂದ ಆರಂಭವಾಗುವ ಮೂದುರೈ (ಪಾಕ್ಕುಂಡಾಂ), ನಲ್ವಳಿ (ಸನ್ಮಾರ್ಗ) ಮುಂತಾದುವುಗಳನ್ನು ಸಂಗಂ ಕಾಲಾನಂತರದ ಅವ್ವೆ ಹಾಡಿದುದೆಂದು ತಿಳಿಯುತ್ತದೆ. ಸುಂದರಮೂರ್ತಿನಾಯನಾರ್ ಕೈಲಾಸಕ್ಕೆ ಹೋಗುವುದಕ್ಕಿಂತ ಮೊದಲೇ ಅವ್ವೆ ಕೈಲಾಸಕ್ಕೆ ಹೋಗುವಂತೆ ವಿನಾಯಕನೇ ದಯೆತೋರಿದನೆಂಬುದರಿಂದ ಅವ್ವೆ ಸುಂದರಮೂರ್ತಿನಾಯನಾರ್ಗೆ ಸಮಕಾಲೀನಳೆಂದು ಊಹಿಸಲೆಡೆಯಿದೆ. ಕಂಬರ್ ಹೊನ್ನಿಗಾಗಿ ಕವಿತಾರಚನೆ ಮಾಡುವಾಗ, ಅವ್ವೆ ಅಂಬಲಿಗಾಗಿ ಕವಿತಾ ರಚನೆ ಮಾಡುತ್ತಾಳೆಂಬ ಮಾತಿನಿಂದ ಅವ್ವೈ ಕಂಬರ್‌ ಕವಿಯ ಸಮಕಾಲೀನಳೆಂದು ಊಹಿಸಲೂ ಸಾಧ್ಯವಿದೆ. ವಾನ್ಕೋಳಿ ಎಂದರೆ ತುರ್ಕಿಜಾತಿಯ ಕೋಳಿಯ ವಿಷಯ ಮೂದುರೈಯಲ್ಲಿ ಬರುವುದರಿಂದ ತಮಿಳುನಾಡಿನಲ್ಲಿ ಪೋರ್ಚುಗೀಸರು ಬಂದಮೇಲೆಯೇ ತುರ್ಕಿಜಾತಿಯ ಕೋಳಿಯ ಪರಿಚಯ ತಮಿಳರಿಗಾಯ್ತೆಂಬ ಕಾರಣದಿಂದ ಈ ಹಾಡನ್ನು ಹಾಡಿದ ಅವ್ವೆ ಪೋರ್ಚುಗೀಸರು ತಮಿಳುನಾಡಿಗೆ ಬಂದ ಅನಂತರವಿದ್ದವಳೆಂದು ಹೇಳಬಹುದು. ಗೃಹಸ್ಥಜೀವನದ ಹಿರಿಮೆ, ವ್ಯವಸಾಯದ ಮೇಲ್ಮೆ, ವಿದ್ಯೆಯ ಮಹಿಮೆ, ಮಾನದ ಔನ್ನತ್ಯ, ಉತ್ತಮ ಜೀವನದ ಸಂಪನ್ನತೆಗಳನ್ನೆಲ್ಲ ಅವ್ವೆಯ ಹಾಡುಗಳು ಪ್ರತಿಪಾದಿಸುತ್ತವೆ. ತಮಿಳುನಾಡಿನಲ್ಲಿ ಬಂದ ಪಾರಂಪರ್ಯದ ದೈವಭಕ್ತಿ, ಕೊಲೆ ಮಾಂಸಾಹಾರಗಳಿಲ್ಲದಿರುವಿಕೆ-ಮುಂತಾದ ಗುಣಗಳನ್ನು ಈ ಹಾಡುಗಳಲ್ಲಿ-ಎತ್ತಿ ಹೇಳಿದೆ. ಭೇದವಿಲ್ಲದ ಸಮದೃಷ್ಟಿಯಿಂದಿರ ಬೇಕೆಂದು ಸದ್ಗುಣದತ್ತ ದಾರಿ ತೋರುತ್ತವೆ-ಅವ್ವೆಯ ಹಾಡುಗಳು. ಮೂದುರೈ, ಅತ್ತಿಚ್ಚೂಡಿ, ನಲ್ವಳಿ, ಕೊಸರೈವೇಂದನ್ ಎಂಬ ನೀತಿಗ್ರಂಥಗಳು ಸನ್ಮಾರ್ಗದಲ್ಲಿ ನಡೆದು ಉತ್ತಮ ಜೀವನವನ್ನು ನಡೆಸುವಂತೆ ಎಳೆಯ ಹೃದಯಗಳನ್ನು ಪ್ರೇರೇಪಿಸುತ್ತವೆ. ಅವ್ವೆ ಹಾಡಿದುದೆಂದು ಪ್ರಸಿದ್ಧವಾಗಿರುವ ಪಂದನಂದಾದಿ, ಅರುಂದಮಿಳ್ ಮಾಲೈ, ತರಿಶನಪ್ಪತ್ತ್‌, ನನ್ನೂರ್‌ ಕೋವೈ ಮೊದಲಾದ ಗ್ರಂಥಗಳು ಈಗ ದೊರೆಯುವುದಿಲ್ಲ. ಸಂಗಂ ಕಾಲದ ಅವ್ವೆಯಾಗಲಿ, ಅನಂತರದ ಅವ್ವೆಯಾಗಲಿ, ಮದುವೆಯಾಗಿ ಗೃಹಿಣಿಯಾಗಿ ಬಾಳಿದರೆಂದು ಎಲ್ಲಿಯೂ ತಿಳಿಯುವುದಿಲ್ಲ. ಇವರು ತಮ್ಮ ಜೀವನವನ್ನೆಲ್ಲ ತಮಿಳಿಗಾಗಿ ಸವೆಯಿಸಿ, ಮಂತ್ರದಂಥ ಜ್ಞಾನದೀಪ್ತಿಗಳಾದ ನೀತಿಮಾತುಗಳನ್ನಾಡಿ ಜನಜೀವನವನ್ನು ಸುಗಮಗೊಳಿಸಿದ ಹಿರಿಯ ಕವಯಿತ್ರಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.