ಅವಸರದ ಪಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ವಿಶಿಷ್ಟ ಉದ್ದೇಶದಿಂದ ಪರದೇಶಕ್ಕೆ ಯುದ್ಧಕ್ಕಾಗಿ ಕಳುಹಿಸಿದ ಸೇನಾಬಲ (ಎಕ್ಸ್‌ಪೆಡಿಷನರಿ ಫೋರ್ಸ್). ಒಂದನೆಯ ಮಹಾಯುದ್ಧದಲ್ಲಿ ಬೇರೊಂದು ಯುದ್ಧರಂಗಕ್ಕೆ ಬೇರೊಬ್ಬ ಸೇನಾಪತಿಯ ನೇತೃತ್ವದಲ್ಲಿ ಕಳುಹಿಸಿದ ಸೇನಾಬಲಗಳನ್ನೂ ಇದೇ ಹೆಸರಿನಿಂದ ಕರೆವ ರೂಢಿಯಾಯಿತು. ಉದಾಹರಣೆಗೆ, ಫ್ರಾನ್ಸ್‌ ಮತ್ತು ಬೆಲ್ಜಿಯಂ ದೇಶಕ್ಕೆ ಬ್ರಿಟಿಷರು ಸೈನ್ಯಗಳನ್ನು ಕಳಿಹಿಸುವಾಗ ಅವನ್ನು ಬ್ರಿಟಿಷ್ ಎಕ್ಸ್‌ಪೆಡಿಷನರಿ ಫೋರ್ಸ್ ಎಂದು ಕರೆದರು. ರೂಮೆಲ್ ಎಂಬ ಜರ್ಮನ್ ಸೇನಾನಿಯ ಪಡೆಗಳ ಉರವಣೆಯನ್ನು ತಡೆಯುವುದಕ್ಕಾಗಿ ಭಾರತದ ಸೈನ್ಯವನ್ನು ಈಜಿಪ್ಟಿನ ಪಶ್ಚಿಮ ಮರುಭೂಮಿಗೆ ಕಳುಹಿಸಿದಾಗ ಅದನ್ನು ಇಂಡಿಯನ್ ಎಕ್ಸ್‌ಪೆಡಿಷನರಿ ಫೋರ್ಸ್ ಎಂದು ಕರೆದರು. ಹೀಗಿದ್ದರೂ ವಿಶ್ವಸಂಸ್ಥೆಯ (ಯುನೈಟೆಡ್ ನೇಷನ್ಸ್‌) ನೇತೃತ್ವದಲ್ಲಿ ಕಾಂಗೋ ದೇಶಕ್ಕೆ ಕಳುಹಿಸಿದ ಭಾರತದ ಸೈನ್ಯವನ್ನು ಎಕ್ಸ್‌ಪೆಡಿಷನರಿ ಫೋರ್ಸ್ ಎಂದು ಕರೆಯಲಾಗದು. ಏಕೆಂದರೆ ಅಲ್ಲಿ ಯುದ್ಧಮಾಡಿ ನೆಲವನ್ನು ಗೆದ್ದುಕೊಳ್ಳುವುದು ಅವರ ಕರ್ತವ್ಯವಲ್ಲ. ಯುದ್ಧದಿಂದ ಕ್ಷೋಭೆಗೊಂಡ ಆ ದೇಶಕ್ಕೆ ಶಾಂತಿಯನ್ನು ತಂದು, ಐಕಮತ್ಯವನ್ನು ಸಾಧಿಸುವ ಕಾರ್ಯದಲ್ಲಿ ನೆರವಾಗಲು ಈ ಸೇನಾಬಲ ನಿಯೋಜಿತವಾಗಿತ್ತು. ಆದ್ದರಿಂದ ಶಾಂತಿ, ಸೌಹಾರ್ದ ಸ್ಥಾಪನೆ; ನೂತನ ಕ್ಷೇತ್ರಗಳ, ಮೌಲ್ಯಗಳ ಅನ್ವೇಷಣೆ, ಸಹಾಯಾರ್ಥ ಅಥವಾ ಅನುಕಂಪ ಪ್ರಕಟಣೆಗಾಗಿ ಕಳುಹಿಸುವಿಕೆ ಇವು ಅವಸರದ ಪಡೆಗಳ ವಿಶಿಷ್ಟ ಉದ್ದೇಶವೆನ್ನಬಹುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: