ಅವದಾನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೌದ್ಧರ ಸಂಸ್ಕೃತ ಸಾಹಿತ್ಯದಲ್ಲಿನ ಒಂದು ಪ್ರಕಾರ. ಅವದಾನ (ಪಾಳಿಯಲ್ಲಿ ಅಪದಾನ) ಎಂದರೆ ಅದ್ಭುತ ಕಾರ್ಯವೆಂದರ್ಥ. ಯಾವುದಾದರೂ ಕೆಲಸದಿಂದ ಧರ್ಮದ ಹೆಚ್ಚಳ ಪ್ರಕಟವಾದರೆ, ನೀತಿಯ ಅಥವಾ ಸಂಯಮದ ಹಿರಿಮೆ ವ್ಯಕ್ತವಾದರೆ ಅದು ಅವದಾನವೆನಿಸಿಕೊಳ್ಳುತ್ತದೆ. ಇದು ಬೌದ್ಧ ವಾಙ್ಮಯದಲ್ಲಿ ಕಥೆಗಳ ರೂಪ ತಳೆಯುತ್ತದೆ. ಇಂಥ ವೀರ್ಯದ್ಯೋತಕ, ಧರ್ಮ ಪ್ರಸಕ್ತ ಕಥೆಗಳು ವಿನಯಪಿಟಕ ದಲ್ಲೂ ಸೂತ್ರಪಿಟಕದಲ್ಲೂ ಇವೆ. ಇಲ್ಲಿ ಕಥೆಗಳೂ ಉಪದೇಶಗಳ ಕೆಲಸ ಮಾಡುತ್ತವೆ. ಇಂಥ ಕಥೆಗಳನ್ನು ಮುಂದಿನ ಬೌದ್ಧ ಸಂಸ್ಕೃತ ಸಾಹಿತ್ಯದಲ್ಲಿ ಗುಚ್ಛಗಳಾಗಿ ಸಂಗ್ರಹಿಸಿದರು. ಇದಕ್ಕೆ ಅವದಾನ ವಾಙ್ಮಯವೆಂದು ಹೆಸರು. ಇದು ಹೀನಯಾನ ಮಹಾಯಾನಗಳಿಗೆ ಸಾಧಾರಣವಾದದ್ದು. ಸಾಮಾನ್ಯವಾಗಿ ಅವದಾನಗಳಲ್ಲಿ ಪೂರ್ವಕಥೆ ಅಥವಾ ಸಂದರ್ಭ (ಅತೀ ವಸ್ತು), ಈಗಿನ ವೃತ್ತಾಂತ (ಪ್ರತ್ಯುತ್ಪನ್ನ ವಸ್ತು) ಮತ್ತು ತಾತ್ಪರ್ಯಗಳೆಂಬ (ಸಮಾಧಾನ) ಮೂರು ವಿಭಾಗಗಳಿರುತ್ತವೆ. ಇಲ್ಲಿನ ಕಥಾನಾಯಕ ಬೋಧಿಸತ್ವನಾಗಿದ್ದರೆ ಅವದಾನ ಜಾತಕದಂತೆಯೇ ಇರುತ್ತದೆ. ಬುದ್ಧನೇ ಹೇಳಿದಂತೆ ಈ ಅವದಾನಗಳು ಉಳಿದಿವೆ. ತಾತ್ಪರ್ಯವಿಭಾಗದಲ್ಲಿ ಬುದ್ಧ ಈ ಪ್ರಸಂಗದಿಂದ ಸಿದ್ಧವಾಗುವ ನೀತಿಯನ್ನು ವಿವರಿಸುತ್ತಾನೆ. ಕೆಲವೆಡೆ ನೀತಿನಿರೂಪಣೆಗೆ ಬದಲಾಗಿ ನಡೆದ ಕರ್ಮಗಳಿಗೆ ಮುಂದೆ ಒದಗುವ ಫಲವನ್ನು ಹೇಳುವುದೂ ಉಂಟು. ಹೀಗೆ ಭವಿಷ್ಯವನ್ನು ಹೇಳುವ ಅವದಾನಗಳಿಗೆ ವ್ಯಾಕರಣವೆಂದೂ ಹೆಸರಿದೆ. ಇಲ್ಲಿ ವ್ಯಾಕರಣವೆಂದರೆ ವಿವರಣೆ. ಅವದಾನಗಳಲ್ಲಿ ಅವದಾನಶತಕವೆಂಬುದು ಅತಿ ಪ್ರಾಚೀನವಾದ ನೂರು ಕಥೆಗಳ ಸಂಗ್ರಹ. 3ನೆಯ ಶತಮಾನದ ಪೂರ್ವಾರ್ಧದಲ್ಲೇ ಚೀನಿ ಭಾಷೆಗೆ ಅನುವಾದಿಸಲ್ಪಟ್ಟ ಈ ಕಥಾಗುಚ್ಛ ಹೀನಯಾನ ಸಂಪ್ರದಾಯಕ್ಕೆ ಸೇರಿದಂತೆ ತೋರುತ್ತದೆ. ಮೊದಲ 10 ಕಥೆಗಳ ವರ್ಗ ಬುದ್ಧನಾಗುವ ಅಥವಾ ಪ್ರತ್ಯೇಕಬುದ್ಧನಾಗುವ ಬಗೆ ಹೇಗೆಂದು ಹೇಳುತ್ತದೆ. ಉಳಿದವು ಜಾತಕ ಕಥೆಗಳು. 5ನೆಯ ವರ್ಗದಲ್ಲಿ ಭೂತಪ್ರೇತಗಳಿಗೆ ಸಂಬಂಧಿಸಿದ ಕಥೆಗಳಿವೆ. ಕರ್ಮಶತಕವೆಂಬುದು ಇನ್ನೊಂದು ಪ್ರಾಚೀನ ಕಥಾಸಂಗ್ರಹ. ಇಂದು ಇದು ಟಿಬೆಟನ್ ಭಾಷೆಯಲ್ಲಿ ಮಾತ್ರ ಉಪಲಬ್ಧವಿದೆ. ದಿವ್ಯಾವದಾನ ಮತ್ತೊಂದು ಪ್ರಸಿದ್ಧವಾದ ಗ್ರಂಥ. ದ್ವಾವಿಂಶತ್ಯವದಾನ (ಇಪ್ಪತ್ತೆರಡು ಅವದಾನಗಳು) ಅವದಾನಶತಕ ದಿಂದಲೇ ಬಹುಮಟ್ಟಿಗೆ ಪ್ರಸಂಗಗಳನ್ನು ಆಯ್ದುಕೊಂಡು ಸಿದ್ಧವಾದ ಸಂಗ್ರಹ. ಇಲ್ಲಿ ಉಪಗುಪ್ತ , ಅಶೋಕರ ಸಂವಾದದಿಂದ ಆರಂಭವಾಗುವ ನಿರೂಪಣೆ ಶಾಕ್ಯಮುನಿ, ಮೈತ್ರೇಯರ ಸಂವಾದಕ್ಕೆ ತಿರುಗುತ್ತದೆ. ಪ್ರಚಲಿತವಾದ ಸಂಸ್ಕೃತದಲ್ಲಿ ರಚಿತವಾದ ಈ ಗದ್ಯಗ್ರಂಥದಲ್ಲಿ ಮಧ್ಯೆ ಮಧ್ಯೆ ಶ್ಲೋಕಗಳನ್ನೂ ಪೋಣಿಸಿದ್ದಾರೆ. ಭದ್ರಕಲ್ಪಾವದಾನದಲ್ಲಿ (ಒಳ್ಳೆಯ ಕಾಲದ ಕಥೆಗಳು) ಮೂವತ್ತನಾಲ್ಕು ಕಥೆಗಳಿವೆ; ಇಲ್ಲೂ ಅಶೋಕನಿಗೆ ಉಪಗುಪ್ತ ಹೇಳುವಂತೆ ಕಥೆಗಳನ್ನು ಪದ್ಯದಲ್ಲಿ ಬರೆದಿಟ್ಟಿದ್ದಾರೆ. ಕಾವ್ಯದಲ್ಲಿ ಬಂದಿರುವ ಅವದಾನ ಮಾಲೆಗಳು ಪ್ರಸಿದ್ಧವಾಗಿವೆ. ಕಲ್ಪದ್ರುಮಾವದಾನ ಮಾಲೆ, ರತ್ನಾವದಾನಮಾಲೆ, ಅಶೋಕಾವದಾನಮಾಲೆ-ಇವು ನಿದರ್ಶನಗಳು. ಪುರಾಣಗಳ ಸ್ವರೂಪ ತಳೆದಿರುವ ಈ ಗ್ರಂಥಗಳಲ್ಲಿ ಉಪಗುಪ್ತ ಅಶೋಕ ಚಕ್ರವರ್ತಿಗೆ ಹೇಳಿದಂತೆ ಇರುವುದು ಸ್ವಾರಸ್ಯವಾಗಿದೆ. ಇವು ಮೂರು ಮಹಾಯಾನ ಸಂಪ್ರದಾಯಕ್ಕೆ ಸೇರಿದವು. ಪುರಾಣದಲ್ಲಿರುವಂತೆ ಮಾಹಾತ್ಮ್ಯ, ವ್ರತ, ಹಬ್ಬ, ವ್ಯವಹಾರ ಧರ್ಮಗಳನ್ನು ಮಾತ್ರ ಹೇಳುವ ಅವದಾನಗಳೂ ಇವೆ. ವ್ರತಾವದಾನಮಾಲೆ, ವಿಚಿತ್ರ ಕರ್ಣಿಕಾವದಾನ-ಇವು ನಿದರ್ಶನಗಳು. 1052ರಲ್ಲಿ ಕ್ಷೇಮೇಂದ್ರ ಅವದಾನಕಲ್ಪಲತೆಯೆಂಬ ಗ್ರಂಥವನ್ನು ರಚಿಸಿದ. ಹಳೆಯ ಅವದಾನ ಸಂಗ್ರಹಗಳಿಂದ ಆಯ್ದುಕೊಂಡ 107 ಕಥೆಗಳನ್ನು ಉತ್ತಮ ಕಾವ್ಯಶೈಲಿಯಲ್ಲಿ ಮೂಡಿಸಿರುವ ಈ ಗ್ರಂಥ ಟಿಬೆಟ್ ದೇಶದಲ್ಲಿ ಪ್ರಸಿದ್ಧವಾಗಿದೆ. ಕ್ಷೇಮೇಂದ್ರ ಬೌದ್ಧಭಿಕ್ಷುವಲ್ಲ ವಾದುದರಿಂದ ಈ ಗ್ರಂಥವನ್ನು ನಿಕೃಷ್ಟವಾಗಿ ಕಾಣುವ ಲಾಮಾಗಳು ಇಲ್ಲದೆ ಇಲ್ಲ. ಟಿಬೆಟನ್ ಭಾಷೆಯಲ್ಲಿ ಸುಮಾಗಧಾವದಾನವೆಂಬ ಒಂದೇ ಕಥೆಯ ಗ್ರಂಥವಿದೆ. ಶ್ರಾವಸ್ತಿಯ ಅನಾಥಪಿಂಡಿಕಶ್ರೇಷ್ಠಿಯ ಮಗಳಾದ ಸುಮಾಗಧೆಯೆಂಬ ಹುಡುಗಿ ತನ್ನ ಗಂಡನ ಮನಸ್ಸನ್ನು ಬೌದ್ಧಧರ್ಮಕ್ಕೆ ತಿರುಗಿಸಿದ ಮನೋಹರ ಕಥೆಯಿದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: