ಅಲೌಕಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೌಕಿಕದಿಂದ ಬೇರೆಯಾದದ್ದು. ಅಲೌಕಿಕ ಮತ್ತು ಲೌಕಿಕ ಎಂಬ ಪದಗಳು ನಮ್ಮ ಜೀವನದೃಷ್ಟಿ, ಧ್ಯೇಯಗಳಿಗೆ ಸಂಬಂಧಪಟ್ಟವು. ಸಾಮಾನ್ಯವಾಗಿ ಇಹಕ್ಕೆ ಸಂಬಂಧಪಟ್ಟ ಎಲ್ಲ ಜ್ಞಾನವನ್ನೂ ಕ್ರಿಯೆಗಳನ್ನೂ ಲೌಕಿಕವೆಂದೂ ಪರಲೋಕಕ್ಕೆ ಸಂಬಂಧಪಟ್ಟ ಜ್ಞಾನ ಮತ್ತು ಕ್ರಿಯೆಗಳನ್ನು ಅಲೌಕಿಕ ಸತ್ಯ, ಜ್ಞಾನ ಮತ್ತು ಧರ್ಮಗಳೆಂದೂ ಭಾವಿಸಿ ಲೌಕಿಕದಿಂದ ಅಲೌಕಿಕವನ್ನು ಪ್ರತ್ಯೇಕಿಸುವುದು ಒಂದು ಬಗೆ. ಅರ್ಥ, ಕಾಮಗಳನ್ನು ಬಯಸುವ ಜೀವನವನ್ನು ಲೌಕಿಕ ಜೀವನವೆಂದೂ ಧರ್ಮ ಮತ್ತು ಮೋಕ್ಷಗಳನ್ನು ಬಯಸುವ ಜೀವನವನ್ನು ಅಲೌಕಿಕ ಜೀವನವೆಂದೂ ಭಾವಿಸಿ ಲೌಕಿಕದಿಂದ ಅಲೌಕಿಕವನ್ನು ಪ್ರತ್ಯೇಕಿಸುವುದು ಇನ್ನೊಂದು ಬಗೆ. ಈ ಎರಡು ವಿಂಗಡಣೆಗಳಲ್ಲೂ ಅಲೌಕಿಕ ಲೌಕಿಕಕ್ಕೆ ವಿರುದ್ಧವೆಂಬ ಭಾವನೆಗೆ ಅವಕಾಶವುಂಟು. ಇಹದ ಸುಖವನ್ನು ಸಾಧಿಸುವುದನ್ನು ಪ್ರವೃತ್ತಿಯೆಂದೂ ಅಭ್ಯುದಯವೆಂದೂ ಪರವನ್ನು ಸಾಧಿಸುವುದನ್ನು ನಿವೃತ್ತಿಯೆಂದೂ ನಿಶ್ರೇಯಸವೆಂದೂ, ಇವು ಒಂದೊಕ್ಕೊಂದು ಪ್ರತಿಯಾದುವೆಂದೂ ಭಾವಿಸುವುದು ಒಂದು ತಾತ್ತ್ವಿಕ ದೃಷ್ಟಿ. ಭಾರತದಲ್ಲೂ ಮಧ್ಯಯುಗದ ಯುರೋಪಿನಲ್ಲೂ ಸಂನ್ಯಾಸಕ್ಕೆ ತುಂಬ ಪ್ರಾಶಸ್ತ್ಯವಿದ್ದ ಕಾಲದಲ್ಲಿ ಈ ತತ್ತ್ವದೃಷ್ಟಿ ಪ್ರಬಲವಾಗಿತ್ತು. ಸಂಸಾರ ಬಂಧನವೆಂದೂ ಅದನ್ನು ತ್ಯಜಿಸಿ ಸಂನ್ಯಾಸವನ್ನು ಅವಲಂಬಿಸುವುದೇ ಬಿಡುಗಡೆಗೆ ದಾರಿ ಎಂಬ ತಾತ್ತ್ವಿಕ ದೃಷ್ಟಿಗೆ ಪ್ರಾಶಸ್ತ್ಯವಿತ್ತು. ಇದು ಜೀವನನಿರಾಕರಣೆಯ ತತ್ತ್ವವೆಂದೂ ಅದೇ ಭಾರತದ ತತ್ತ್ವವೆಂದೂ ಆಲ್ಬರ್ಟ್ ಷ್ವೈಟ್ಸರ್ ಎಂಬ ಪಾಶ್ಚಾತ್ಯತಾತ್ತ್ವಿಕ ಹೇಳುತ್ತಾನೆ. ಆದರೆ ಭಾರತದ ತತ್ತ್ವದೃಷ್ಟಿ ಕೇವಲ ಜೀವನನಿರಾಕರಣೆಯ ತತ್ತ್ವವಲ್ಲ. ಪ್ರವೃತ್ತಿಯಲ್ಲಿ ನಿವೃತ್ತಿ, ನಿವೃತ್ತಿಯಲ್ಲಿ ಪ್ರವೃತ್ತಿಯನ್ನು ಬೋಧಿಸುವ ತತ್ತ್ವವೂ ಭಾರತದಲ್ಲುಂಟು. ಇದು ಭಗವದ್ಗೀತೆಯ ನಿಷ್ಕಾಮ ಅಥವಾ ಅನಾಸಕ್ತಿಯೋಗ ತತ್ತ್ವ. ಮಹಾತ್ಮಗಾಂಧಿ ಎತ್ತಿಹಿಡಿದ ತತ್ತ್ವವೂ ಅದೇ. ಜೀವನವ್ಯವಹಾರಗಳನ್ನು ಪಾರಮಾರ್ಥಿಕ ದೃಷ್ಟಿಯಿಂದ ನಡೆಸುವುದೇ ಶ್ರೇಷ್ಠ ಮಾರ್ಗವೆಂದು ಅವರು ಬೋಧಿಸಿದುದಲ್ಲದೆ ತಮ್ಮ ಜೀವನದಲ್ಲೇ ಅದನ್ನು ಸಾಧಿಸಿದರು. ಅಲೌಕಿಕ ದೃಷ್ಟಿ ಕೇವಲ ಮತ, ತತ್ತ್ವಗಳಿಗೆ ಮಾತ್ರ ಮೀಸಲಾದ ಭಾವನೆಯಲ್ಲ. ಕವಿಯ ದೃಷ್ಟಿಯೂ ಅಲೌಕಿಕವೆಂದು ಭಾರತೀಯ ಕಾವ್ಯಮೀಮಾಂಸಕರು ಬಗೆದಿರುತ್ತಾರೆ. ಆದರೆ ಅಲೌಕಿಕದೃಷ್ಟಿ ಎಂಬುದನ್ನು ಕಾವ್ಯಮೀಮಾಂಸೆಯಲ್ಲಿ ಒಂದು ಸಂಕುಚಿತ ಹಾಗೂ ವಿಶೇಷಾರ್ಥದಲ್ಲಿ ಉಪಯೋಗಿಸಿದ್ದಾರೆ. ಮತ ಜೀವನದಲ್ಲಿ ಅಲೌಕಿಕ ದೇಹ, ಮಾತು, ಮನಸ್ಸು ಈ ಮೂರರಲ್ಲೂ ವ್ಯಾಪಕವಾಗಿರಬೇಕಲ್ಲದೆ ನಿತ್ಯವಾಗಿರಬೇಕು. ಕವಿಜೀವನದಲ್ಲಿ ಹಾಗೆ ವ್ಯಾಪಕವಾಗಿಯೂ ನಿತ್ಯವಾಗಿಯೂ ಇರಬೇಕಾದ್ದಿಲ್ಲ. ಅದು ಕವಿಯ ತಾತ್ಕಾಲಿಕ ದರ್ಶನಕ್ಕೆ ಮತ್ತು ಅಭಿವ್ಯಕ್ತಿಗೆ ಮಾತ್ರ ಕ್ಲುಪ್ತವಾದದ್ದು. ವಾಲ್ಮೀಕಿಯಂಥ ಋಷಿ ಮತ್ತು ಕವಿಯಾದವನ ಜೀವನಸರ್ವಸ್ವವೂ ಅಲೌಕಿಕ. ಆದರೆ ಕಾಳಿದಾಸ, ಭವಭೂತಿ, ಭಾಸ, ಬಾಣ ಇಂಥ ಕವಿಗಳ ದೃಷ್ಟಿ ಕಾವ್ಯ ಸಮಾಧಿಯಲ್ಲಿರುವಷ್ಟು ಕಾಲ ಮಾತ್ರ ತಾತ್ಕಾಲಿಕವಾಗಿ ಅಲೌಕಿಕ. ಮುಮುಕ್ಷುವಿನಂತೆ, ಮೋಕ್ಷಸಾಧಕನಂತೆ ಕವಿಗಳು ಶಮದಮಾದಿ ಸಾಧನ ಚತುಷ್ಟಯಗಳನ್ನು ಅವಲಂಬಿಸುವುದಿಲ್ಲ; ಅವರು ಭಾವಿಸುವ ವಿಷಯವೂ ಲೋಕಾತೀತವಾದ ಬ್ರಹ್ಮವಸ್ತುವಲ್ಲ. ಕವಿ ಅವಲೋಕಿಸುವ ವಸ್ತು ಲೌಕಿಕಜೀವನ; ಲೌಕಿಕಜೀವನದಲ್ಲಿ ಕಾಣಬರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೇ ಆತ ಅವಲೋಕಿಸುವ ವಿಷಯಗಳು ಆದರೆ ಆತ ಅವಲೋಕಿಸುವ ರೀತಿ ಋಷಿಯಂತೆ ನಿರ್ಮತ್ಸರವಾದದ್ದು, ನಿಷ್ಕಾಮವಾದದ್ದು. ಅದು ತಾತ್ಕಾಲಿಕ ಅನಾಸಕ್ತಿಯೋಗ. ಲೌಕಿಕ ಜೀವನವನ್ನೇ ತನ್ನ ವೈಯಕ್ತಿಕ ಈರ್ಷ್ಯಾಸೂಯೆಗಳಿಗೆ ಎಡೆಕೊಡದಂತೆ ವೀಕ್ಷಿಸುವುದು ಕವಿಯ ಅಲೌಕಿಕದೃಷ್ಟಿ. ಭಟ್ಟನಾಯಕನೂ ಅಭಿನವಗುಪ್ತನೂ ಈ ಅಲೌಕಿಕ ದೃಷ್ಟಿಯನ್ನು ವರ್ಣಿಸಿರುವ ರೀತಿ ಇದು. ಸಾಮಾನ್ಯವಾಗಿ ಲೋಕದ ಪದಾರ್ಥಗಳನ್ನೂ ವ್ಯಕ್ತಿಗಳನ್ನೂ ಮೂರು ಬಗೆಯಾಗಿ ಭಾವಿಸುವುದು ಲೋಕರೂಢಿ. ಈ ಪದಾರ್ಥ ಅಥವಾ ವ್ಯಕ್ತಿ ನಮಗೆ ಅನುಕೂಲವಾದದ್ದೇ ಅಥವಾ ಪ್ರತಿಕೂಲವಾದದ್ದೇ, ನಮಗೆ ಇಷ್ಟವಾದದ್ದೇ ಅಥವಾ ಅನಿಷ್ಟವಾದದ್ದೇ ಅಥವಾ ಅನುಕೂಲವೂ ಅಲ್ಲದೆ ಪ್ರತಿಕೂಲವೂ ಅಲ್ಲದೆ ಕೇವಲ ತಟಸ್ಥವಾದದ್ದೇ ಎಂದು ಮೂರು ಬಗೆಯಾಗಿ ನಾವು ಭಾವಿಸುತ್ತೇವೆ. ಇಷ್ಟವಾದುದರ ವಿಚಾರದಲ್ಲಿ ನಾವು ಪಕ್ಷಪಾತ ತೋರಿಸುತ್ತೇವೆ. ನಮಗೆ ಒಗ್ಗದ ವಿಷಯದಲ್ಲಿ ಈರ್ಷ್ಯೆ ಮತ್ತು ಅಸೂಯೆಯನ್ನು ತೋರಿಸುತ್ತೇವೆ; ತಟಸ್ಥವಾದುದರಲ್ಲಿ ಔದಾಸೀನ್ಯ ತೋರಿಸುತ್ತೇವೆ. ಕವಿಯಾದರೋ ಈ ಮೂರು ಬಗೆಯಾದ ದೋಷಗಳಿಂದ ನಿವೃತ್ತನಾಗಿ ಲೋಕವನ್ನು ಅವಲೋಕಿಸುತ್ತಾನೆ. ಹೀಗೆ ಅವಲೋಕಿಸುವ ಕವಿದೃಷ್ಟಿಗೆ ಕಾವ್ಯಮೀಮಾಂಸಕರು ಅಲೌಕಿಕದೃಷ್ಟಿ ಎಂಬ ಪಾರಿಭಾಷಿಕ ಹೆಸರನ್ನು ಕೊಟ್ಟಿರುತ್ತಾರೆ. ಕವಿ ಈ ರೀತಿಯಾಗಿ ಲೋಕವನ್ನು ಅವಲೋಕಿಸಿದಾಗಲೇ ಅವನಿಗೆ ಆನಂದಾನುಭೂತಿ ಯುಂಟಾಗುವುದು. ಈ ಆನಂದಾನುಭೂತಿಯಲ್ಲಿದ್ದಾಗ ರಚಿಸಿದುದೇ ಕಾವ್ಯವಾಗುವುದು. ಕಾವ್ಯಾನಂದವನ್ನು ಪಡೆಯಬೇಕೆಂಬ ಸಹೃದಯನೂ ಈ ಅಲೌಕಿಕದೃಷ್ಟಿಯಿಂದ ಕಾವ್ಯದಲ್ಲಿ ವರ್ಣಿತವಾದ ವಿಷಯವನ್ನು ನೋಡಬೇಕು. ಅಲೌಕಿಕದೃಷ್ಟಿ ಇಲ್ಲದಿದ್ದರೆ ಕವಿಗೂ ಆನಂದಾನುಭೂತಿ ಇಲ್ಲ; ಸಹೃದಯನಿಗೂ ಆನಂದಾನುಭೂತಿ ಇಲ್ಲ. ಈ ಕಾವ್ಯಾನಂದ ಬ್ರಹ್ಮಾನಂದದಂತೆ ಚಿರವೂ ಸ್ಥಿರವೂ ಅಲ್ಲ. ಕಾವ್ಯವನ್ನು ಭಾವಿಸಿದಷ್ಟು ಕಾಲ ಮಾತ್ರ ಅದು ಇರುತ್ತದೆ. ಈ ಅಲೌಕಿಕವಾದ ಕವಿಯ ಅನುಭೂತಿಯನ್ನೂ ಸಹೃದಯನ ಅನುಭೂತಿಯನ್ನೂ ಬ್ರಹ್ಮಾನಂದದಿಂದ ಪ್ರತ್ಯೇಕಿಸಲು ಅದನ್ನು ಬ್ರಹ್ಮಾನಂದಸೋದರ ಎಂದು ಕರೆಯುವುದು ವಾಡಿಕೆ.

"https://kn.wikipedia.org/w/index.php?title=ಅಲೌಕಿಕ&oldid=714534" ಇಂದ ಪಡೆಯಲ್ಪಟ್ಟಿದೆ