ಅಮೃತಬಳ್ಳಿ
ಅಮೃತಬಳ್ಳಿಯು ಭಾರತ, ಮಯನ್ಮಾರ್ ಮತ್ತು ಶ್ರೀಲಂಕಾದ ಉಷ್ಣವಲಯದ ಪ್ರದೇಶಗಳಿಗೆ ಸ್ಥಳೀಯವಾದ ಮೆನಿಸ್ಪರ್ಮೇಸೀ ಕುಟುಂಬದ ಒಂದು ಹಸುರು ಬಳ್ಳಿ. ಸಸ್ಯವು ಭಾರತದಾದ್ಯಂತ ಕಂಡುಬರುವ ಒಂದು ನುಣುಪಾದ ಪೊದೆ, ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ.
ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸ ಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿದೆ. ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುತ್ತದೆ. ಇದು ಬಾಡಿ ಒಣಗುವುದಿಲ್ಲ; ಸುಲಭದಲ್ಲಿ ಸಾಯುವುದಿಲ್ಲ. ಆದ್ದರಿಂದಲೇ ಇದಕ್ಕೆ ’ಅ- ಮೃತ’ ಎಂಬ ಹೆಸರು.
ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ ಹಬ್ಬಿಸಬಹುದು.ಇದರ ತೊಗಟೆಯ ಬಣ್ಣ ಬೂದಿಮಿಶ್ರಿತ ಕಂದು ಬಣ್ಣ. ಹೂಗಳ ಬಣ್ಣ ಹಸಿರು ಮಿಶ್ರಿತ ಹಳದಿ. ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣದ ದುಂಡಗಿನ ಹಣ್ಣಾಗುತ್ತದೆ
ಇದು ತ್ರಿದೋಷ ಗಳಿಂದ (ಅಂದರೆ ವಾತ, ಪಿತ್ತ, ಕಫ) ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ.
ಎಲ್ಲ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿ ಔಷಧಿ.
ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ (ಆಹಾರ ಸೇವನೆಗೆ ಮುಂಚೆ) ಸೇವಿಸಬೇಕು. ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು.(ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ,ಲವಂಗ ತುಳಸಿ, ಅರಸಿನ ಪುಡಿ ,ಕಾಳುಮೆಣಸು,ಜೀರಿಗೆ,ಶುಂಠಿ).
ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು. ಎಲೆಯು ಸ್ವಲ್ಪ ಕಹಿ ಮತ್ತು ಒಗರಿನಿಂದ ಕೂಡಿದೆ.ಎಲೆ ಮತ್ತು ಕಾಂಡದಿಂದ ತಂಬುಳಿ ತಯಾರಿಸಬಹುದು.ಎಲೆ ಮತ್ತು ಕಾಂಡವನ್ನು ಜೀರಿಗೆಯೊಂದಿಗೆ ನುಣ್ಣಗೆ ಅರಿಯಬೇಕು. ಅದಕ್ಕೆ ಮಜ್ಜಿಗೆ ಸೇರಿಸಿ ಸಾಸಿವೆ ಒಗ್ಗರಣೆ ಕೊಟ್ಟರೆ ತಂಬುಳಿ ತಯಾರು.ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿಯು ಆರೋಗ್ಯಕ್ಕೆ ಹಿತಕಾರಿ ಮತ್ತು ಮನೆಗೆ ತಂಪು
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |