ಅಮರ್ ಜಿ. ಬೋಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮರ್ ಜಿ. ಬೋಸ್
ಚಿತ್ರ:Amar gopal bose.jpg
ಜನನ
ಅಮರ್ ಗೋಪಾಲ್ ಬೋಸ್

ನವೆಂಬರ್ ೨, ೧೯೨೯
ಫಿಲೆಡೆಲ್ಫಿಯಾ, ಪೆನ್ಸಿಲ್ವೇನಿಲಯಾ, ಅಮೆರಿಕಾ ಸಂಯುಕ್ತ ಸಂಸ್ಥಾನ
ಮರಣಜುಲೈ ೧೨, ೨೦೧೩
ವೇಲ್ಯಾಂಡ್, ಮಸ್ಸಚುಸೆಟ್ಸ್ , ಅಮೆರಿಕಾ ಸಂಯುಕ್ತ ಸಂಸ್ಥಾನ
ಹಳೆ ವಿದ್ಯಾರ್ಥಿಮಸ್ಸಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಉದ್ಯೋಗಬೋಸ್ ಕಾರ್ಪೋರೇಷನ್ ಸಂಸ್ಥಾಪಕ ಅಧ್ಯಕ್ಷರು
Net worth೧ ಬಿಲಿಯನ್ ಅಮೆರಿಕಾ ಡಾಲರ್
ಜೀವನ ಸಂಗಾತಿಮಾಜಿ ಪತ್ನಿ ಪ್ರೇಮಾ ಬೋಸ್, ನಂತರದಲ್ಲಿ ಉರ್ಸುಲಾ ಬೋಲ್ಟ್ ಜಹುಸರ್
ಮಕ್ಕಳುವನು ಬೋಸ್
ಮಾಯಾ ಬೋಸ್

ಅಮರ್ ಗೋಪಾಲ್ ಬೋಸ್ (ನವೆಂಬರ್ ೨, ೧೯೨೯ - ಜುಲೈ ೧೨, ೨೦೧೩) ಧ್ವನಿವರ್ಧಕ ತಂತ್ರಜ್ಞಾನದಲ್ಲಿ ವಿಶ್ವಮಾನ್ಯ ಹೆಸರು. ಭಾರತೀಯ ಮೂಲ ಸಂಜಾತರಾದ ಅವರು ವಿಶ್ವಶ್ರೇಷ್ಠ ಬೋಸ್ ಸ್ಪೀಕರುಗಳ ತಂತ್ರಜ್ಞಾನದ ಹಿಂದಿದ್ದ ದೊಡ್ಡ ಚೇತನ. ಹೋಟೆಲುಗಳ ಮಾಣಿಯಾಗಿ, ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಮಾಡಿ ಬಾಲ್ಯವನ್ನು ಸಾಗಿಸಿ ಅಂತರರಾಷ್ಟ್ರೀಯ ಮಟ್ಟದ ಬೋಸ್ ಕಾರ್ಪೋರೇಷನ್ ಸಂಸ್ಥೆಯನ್ನು ಹುಟ್ಟುಹಾಕಿ, ವಿಶ್ವದ ಒಬ್ಬ ಶ್ರೇಷ್ಠ ಸಂಶೋಧಕರಾಗಿ ಅವರು ಗಳಿಸಿದ ಮಾನ್ಯತೆ ಮತ್ತು ಸಾಧನೆ.[೧][೨]

ಜೀವನ[ಬದಲಾಯಿಸಿ]

ವಿಶ್ವದ ಶ್ರೇಷ್ಠ ಧ್ವನಿ ಹೊರಡಿಸುವ ಸ್ಪೀಕರುಗಳನ್ನು ತಯಾರಿಸುವ ಕಂಪೆನಿಯ ಹೆಸರು ಬೋಸ್. ಅದರ ಹಿಂದಿದ್ದ ಚೇತನ ಭಾರತೀಯ ಮೂಲ ಸಂಜಾತ ಸ್ವಾತಂತ್ರ್ಯ ಹೋರಾಟಗಾರ ನೊನಿ ಗೋಪಾಲ್ ಬೋಸ್ ಅವರ ಪುತ್ರ ಅಮರ್ ಗೋಪಾಲ್ ಬೋಸ್. ಉತ್ತಮ ಧ್ವನಿ ಹೊರಡಿಸಲು ಸ್ಪೀಕರುಗಳು ದೊಡ್ಡದಾಗಿರಬೇಕೆಂಬ ತಪ್ಪುಕಲ್ಪನೆಯನ್ನು ಸುಳ್ಳಾಗಿಸಿ ಸಣ್ಣ ಸ್ಪೀಕರುಗಳಿಂದಲೇ ಶ್ರೇಷ್ಠ ಗುಣಮಟ್ಟದ ಧ್ವನಿಯನ್ನು ಆಲಿಸಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟವರು ಅಮರ್ ಬೋಸ್ ಎಂದು ಪ್ರಖ್ಯಾತರಾದ ಅಮರ್ ಗೋಪಾಲ್ ಬೋಸ್. ಅಮರ್‌ ಬೋಸ್‌ ಅಮೆರಿಕಫಿಲಡೆಲ್ಫಿಯಾದಲ್ಲಿ ೧೯೨೯ರ ನವೆಂಬರ್‌ ೨ರಂದು ಜನಿಸಿದರು. ಅಮರ್ ಬೋಸ್‌ರವರ ತಂದೆ ಬಂಗಾಳ ಮೂಲದ ನೊನಿ ಗೋಪಾಲ್ ಬೋಸ್ ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಅಮೆರಿಕದ ಫಿಲಡೆಲ್‌ಫಿಯಾಗೆ ಹೋದವರು ಅಲ್ಲಿಯೇ ನೆಲೆಸಿದರು. ೧೯೨೦ರ ವರ್ಷದಲ್ಲಿ ಭಾರತದಲ್ಲಿದ್ದ ಬ್ರಿಟಿಷ್ ಆಡಳಿತ, ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ನೊನಿ ಗೋಪಾಲ್ ಬೋಸರನ್ನು ಶಿಕ್ಷೆಗೊಳಪಡಿಸಿತು. ಹೇಗೋ ತಪ್ಪಿಸಿಕೊಂಡು ಕಲ್ಕತ್ತಾದಿ೦ದ ಹಡಗಿನಲ್ಲಿ ಹೊರಟು ಅಲೆದಲೆದು ಕೊನೆಗೆ ಅವರು ತಲುಪಿದ್ದು ಅಮೆರಿಕ. ಕೈಯಲ್ಲಿ ಹಣವಿಲ್ಲ, ಯಾರ ಪರಿಚಯವೂ ಇಲ್ಲ, ಎಲ್ಲವೂ ಹೊಸದು. ಆದರೆ ಜೀವನ ಸಂಗಾತಿಯಾಗಿ ಸಿಕ್ಕಿದವರು ವೇದಾಂತವನ್ನು ಒಪ್ಪಿಕೊಂಡು ಕೃಷ್ಣನನ್ನು ಪೂಜಿಸುವ ಶಾಲಾ ಶಿಕ್ಷಕಿಯಾಗಿದ್ದ ಜರ್ಮನ್ ಮೂಲಸಂಜಾತ ಅಮೇರಿಕನ್ ಮಹಿಳೆ ಶಾರ್ರ್ಲೊಟ್. ಈಕೆಯನ್ನು ಮದುವೆಯಾದ ಗೋಪಾಲ್ ಬೋಸ್ ಫಿಲಡೆಲ್ಫಿಯಾದಲ್ಲಿ ಜೀವನ ಪ್ರಾರ೦ಭಿಸಿದರು. ಇವರಿಗೆ ಜನ್ಮತಾಳಿದ ಮಗುವೇ ಅಮರ್ ಗೋಪಾಲ್ ಬೋಸ್.[೩][೪][೫][೬][೭]

ಸ್ವಾವಲಂಬಿ ಬಾಲಕ[ಬದಲಾಯಿಸಿ]

ಅಮರ್ ಎಷ್ಟು ಚುರುಕಿನ ಹುಡುಗ ಆಗಿದ್ದ ಅಂದರೆ, ಸುಮಾರು ಹತ್ತು ವರ್ಷ ಆಗಿದ್ದಾಗಲೇ ಬೇರೆ ಮಕ್ಕಳ ವಿವಿಧ ರೀತಿಯ ಗೊಂಬೆಗಳನ್ನ, ಆಟೋಮ್ಯಾಟಿಕ್ ರೈಲು ಮುಂತಾದ ಹಾಳಾಗಿದ್ದ ಗೊಂಬೆಗಳನ್ನ ಸರಿ ಮಾಡಿಕೊಡುತ್ತಿದ್ದ. ಕ್ರಮೇಣ ಈ ಪ್ರವೃತ್ತಿಯಿಂದಾಗಿ ಆಕರ್ಷಿತರಾದ ಜನರು ಬೇರೆ ಬೇರೆ ಅಟಿಕೆ, ರೇಡಿಯೋದಂಥ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇವನ ಹತ್ತಿರ ರಿಪೇರಿಗಾಗಿ ಕೊಡಲು ಪ್ರಾರಂಭಮಾಡಿದರು. ಇದರೊಂದಿಗೆ ವಿದ್ಯಾರ್ಥಿದೆಸೆಯಲ್ಲೇ ಸ್ವಾವಲಂಬಿಯಾಗುವತ್ತ ಹೆಜ್ಜೆ ಹಾಕಿದ ಅಮರ್. ಮೊದಮೊದಲು ಬೇರೆ ಅಂಗಡಿಯ ಮೂಲಕ ತೆಗೆದುಕೊಂಡು ಸಣ್ಣಪ್ರಮಾಣದ ಹಣ ದೊರೆಯುತ್ತಿತ್ತು. ನಂತರ ಜನ ನೇರವಾಗಿ ಇವನ ಹತ್ತಿರ ಬರಲಾರಂಭಿಸಿದಾಗ ಸ್ವತಂತ್ರವಾಗಿ ಒಂದು ರಿಪೇರಿ ಅಂಗಡಿಯನ್ನೇ ಪ್ರಾರಂಭಿಸಿದ. ಅದು ಎರಡನೇ ಮಹಾಯುದ್ಧದ ಕಾಲವಾದ್ದರಿ೦ದ ತಂದೆಯ ಆಮದು-ರಫ್ತು ವ್ಯಾಪಾರ ಸರಿಯಾಗಿ ನಡೆಯಲಿಲ್ಲ. ಹಾಗಾಗಿ ಮಗನ ರಿಪೇರಿ ಅಂಗಡಿಯೇ ಸಂಸಾರಕ್ಕೆ ಜೀವನಾಧಾರವಾಯಿತು. ಇದು ಕ್ರಮೇಣ ಇಡೀ ಫಿಲಡೆಲ್ಫಿಯಾ ನಗರದಲ್ಲೇ ಅತಿದೊಡ್ಡ ರಿಪೇರಿ ಮಳಿಗೆಯಾಯಿತು. ಇದಲ್ಲದೆ ಅಮರ್ ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೊಟೇಲುಗಳಲ್ಲೂ ಕೆಲಸವನ್ನು ಮಾಡಿದ್ದರು. ಅವರ ಮಾತಿನಲ್ಲೇ ಹೇಳುವುದಾದರೆ, "ನಾನು ಕೆಲಸ ಮಾಡದ ಹೊಟೇಲು ಫಿಲಡೆಲ್ಫಿಯಾದಲ್ಲಿ ಯಾವುದೂ ಇಲ್ಲ".[೮]

ಅತೃಪ್ತಿಯಿಂದ ಹೊರಹೊಮ್ಮಿದ ಸಂಶೋಧನೆ[ಬದಲಾಯಿಸಿ]

ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅಮರ್ ಬೋಸ್, ಒಂದುದಿನ ಸಂಗೀತ ಶ್ರವಣ ಸಾಧನವನ್ನು ಕೊಂಡು ತಂದ. ಅದನ್ನು ಎಷ್ಟು ಸರಿದೂಗಿಸಲು ಕಷ್ಟಪಟ್ಟರೂ ಈತನಿಗೆ ತೃಪ್ತಿಕಾರವಾದ ಗುಣಮಟ್ಟ ಮಾತ್ರ ಹೊರಹೊಮ್ಮಲಿಲ್ಲ. ಈತನಿಗೆ ಆಗ ಎಷ್ಟು ಕೆಚ್ಚು ಬಂತೆಂದರೆ "ನಾನು ಜಗತ್ತಿನಲ್ಲಿಯೇ ಅತ್ಯುತ್ತಮ ಧ್ವನಿವರ್ಧಕವನ್ನು ತಯಾರು ಮಾಡುತ್ತೇನೆ" ಅಂದುಕೊಂಡ, ಮಾತ್ರವಲ್ಲದೆ ಅದನ್ನೇ ತನ್ನ ಮುಂದಿನ ಸಂಶೋಧನಾ ವಸ್ತುವನ್ನಾಗಿಸಿಕೊಂಡ. ಗಣಿತಶಾಸ್ತ್ರದಲ್ಲಿ ಅಸಾಧ್ಯ ಬುದ್ದಿವಂತನಾಗಿದ್ದ ಅಮರ್ ಗೋಪಾಲ್ ಬೋಸ್, ಪ್ರಸಿದ್ಧ ಎಂ ಐ ಟಿ ಎಂದು ವಿಶ್ವಪ್ರಸಿದ್ಧವಾದ ಮಸಚುಸೆಟ್ಸ್ ತಾಂತ್ರಿಕ ವಿದ್ಯಾಲಯದಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿ೦ಗ್ ಓದಿದರು, ಹಾಗೆಯೇ ಸ್ನಾತಕೋತ್ತರ ಪದವಿಯನ್ನು ಪೂರೈಸಿ ಅಲ್ಲಿಯೇ ಪ್ರಾಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರು. ಹೆಚ್ಚಿನ ಮಾಹಿತಿಗಾಗಿ ವಿವಿಧ ದೇಶಗಳಲ್ಲಿ ಅಧ್ಯಯನ ನೆಡೆಸಿದರು, ನವದೆಹಲಿಯಲ್ಲಿ ಕೂಡ ಒಂದು ವರ್ಷ ವ್ಯಾಸಂಗ ಮಾಡಿದರು. ನಂತರ ಎಂಐಟಿಯಲ್ಲಿ ಪಾಠ ಮಾಡುತ್ತಾ, ಜೊತೆಜೊತೆಗೇ ಗಣಿತ ಸೂತ್ರಗಳನ್ನು ಉಪಯೋಗಿಸುತ್ತಾ ಸಂಶೋಧನೆಯನ್ನು ತೀವ್ರಗೊಳಿಸಿದಾಗ ಉತ್ತಮ ಫಲಿತಾಂಶ ಬಂದಿತು. ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಇವರ ಸಂಶೋಧನೆಗಾಗಿ ಎಂ ಐ ಟಿ ವಿಶ್ವವಿದ್ಯಾಲಯ ಇವರಿಗೆ ಇಲೆಕ್ಟ್ರಿಕಲ್ ಎ೦ಜಿನಿಯರಿ೦ಗ್ ವಿಷಯದಲ್ಲಿ ಡಾಕ್ಟರೇಟ್ ಪ್ರಧಾನ ಮಾಡಿತು. ಮುಂದೆ 1964ರಲ್ಲಿ ಅಮರ್ ಗೋಪಾಲ್ ಬೋಸ್ ತಮ್ಮ ಸಹೋದ್ಯೋಗಿಯೊಬ್ಬರ ಸಹಯೋಗದಲ್ಲಿ ತಮ್ಮದೇ ಆದ ಸಂಸ್ಥೆಯನ್ನು ಪ್ರಾರಂಭಿಸಿದರು. ಅದೇ ಇಂದು ವಿಶ್ವಪ್ರಸಿದ್ಧವಾಗಿ ಬೆಳೆದಿರುವ ‘ಬೋಸ್ ಕಾರ್ಪೋರೇಷನ್’.[೯][೧೦]

ಶ್ರೇಷ್ಠ ಪರಿಕರಗಳು[ಬದಲಾಯಿಸಿ]

೧೯೬೮ರಲ್ಲಿ ಬೋಸರು ಅಭಿವೃದ್ದಿಪಡಿಸಿದ ೯೦೧ ಮಾಲಿಕೆಯ ಧ್ವನಿವರ್ಧಕಗಳು ಇಡೀ ಉದ್ಯಮಕ್ಕೇ ಮಾದರಿಯಾಯಿತು. ಮುಂದೆ ವೇವ್, ಆಡಿಷನರ್, ಲೈಫ್ ಸ್ಟೈಲ್, ನಾಯ್ಸ್ ಕಿಲ್ಲರ್ ಮುಂತಾದ ಹೆಸರಿನಲ್ಲಿ ಹೊಸ ಹೊಸ ರೀತಿಯ ಶ್ರೇಷ್ಠ ದರ್ಜೆಯ ಧ್ವನಿವರ್ಧಕ, ಸ್ಪೀಕರ್, ಹೆಡ್ ಫೋನ್, ಹೋಂ ಥಿಯೇಟರ್, ಕಾರ್ ಸ್ಟೀರಿಯೋ, ಹೀಗೆ ಧ್ವನಿ ಮಾದ್ಯಮದಲ್ಲಿ ಏನೇನಿದೆಯೋ ಎಲ್ಲ ರೀತಿಯ ಉಪಕರಣಗಳನ್ನೂ ಅತ್ಯುತ್ಕೃಷ್ಟ ಗುಣಮಟ್ಟದಲ್ಲಿ ಉತ್ಪಾದಿಸಿ ಉದ್ಯಮದಲ್ಲಿ ಅತೀ ಎತ್ತರಕ್ಕೆ ಏರಿದರು. ಸ್ವಲ್ಪ ದುಬಾರಿ ಎನಿಸಿದರೂ ಗುಣಮಟ್ಟದಲ್ಲಿ ಅತ್ಯಂತ ಶ್ರೇಷ್ಠ, ಇದನ್ನು ಪಡೆದುಕೊಳ್ಳುವುದೇ ಹೆಮ್ಮೆ ಎಂದು ವಿಶ್ವದೆಲ್ಲೆಡೆಯಲ್ಲಿ ಗ್ರಾಹಕರ ಅಭಿಮಾನವನ್ನು ಸಂಪಾದಿಸಿದವು. ಮನೆಯ ಸಣ್ಣ ಸಿಡಿ ಪ್ಲೇಯರಿನಿ೦ದ ಹಿಡಿದು, ರಂಗಮಂದಿರಗಳು, ಚಿತ್ರಮಂದಿರಗಳು, ಸಾರ್ವಜನಿಕ ಸಭೆಗಳು, ವಾಹನಗಳು ಮಾತ್ರವಲ್ಲದೆ ಒಲಿಂಪಿಕ್ ಸ್ಟೇಡಿಯಮ್ ಗಳಲ್ಲಿ, ಬ್ರಾಡ್ವೆ ಥಿಯೇಟರ್ಸ್ ಗಳಲ್ಲಿ, ಸಿಸ್ಟನ್ ಚಾಪೆಲ್ ಗಳಲ್ಲಿ ಸ್ಪೇಸ್ ಶಟಲ್ ನಲ್ಲಿ ಸಹಿತ ಬಳಕೆಯಲ್ಲಿವೆ. ನಾಸಾ ಉಪಗ್ರಹ ಕೇಂದ್ರದವರೆಗೂ ಎಲ್ಲ ಕ್ಷೇತ್ರಗಳಲ್ಲಿಯೂ "ಬೋಸ್" ಸಂಸ್ಥೆಯ ಪರಿಕರಗಳು ತಮ್ಮ ಪ್ರಾಬಲ್ಯವನ್ನು ಮೆರೆದವು. ಶಬ್ದ ತಡೆಹಿಡಿಯುವ ಪದ್ಧತಿಯಿಂದ ಗಗನ ಯಾತ್ರಿಗಳ ಕಿವಿ ಹಾಳಾಗದಂತೆ ಕಾಯುತ್ತದೆ. ಅವರ ಹೊಸಹೊಸ ಆವಿಶ್ಕಾರಗಳಿಗಾಗಿ ಕಾಯುವ ಯುವ ಜನರಿದ್ದರು. ಅವರ ವೇವ್ ರೇಡಿಯೊ ನಿರ್ಮಿಸಲು ಅವರು ೧೪ ವರ್ಷ ಕಠಿನಣ ಪರಿಶ್ರಮ ಪಡಬೇಕಾಯಿತು.[೧೧]

ಅಸಾಮಾನ್ಯ ಬೆಳವಣಿಗೆ[ಬದಲಾಯಿಸಿ]

೧೯೮೭ರಲ್ಲಿ ವೈಜ್ಞಾನಿಕ ಸಮುದಾಯ ಅಮರ್ ಗೋಪಾಲ್ ಬೋಸರನ್ನು 'ಇನ್ವೆಂಟರ್ ಆಫ್ ದಿ ಇಯರ್' ಎಂದು ಸನ್ಮಾನಿಸಿತು. ಸಣ್ಣ ವಯಸ್ಸಿನಲ್ಲಿ ಹೋಟೆಲ್ಲಿನ ಮಾಣಿಯಾಗಿ, ರೇಡಿಯೋ ರಿಪೇರಿ ಮಾಡಿ, ಮನೆಯ ಬಾಡಿಗೆ ಕಟ್ಟಲು ಹೆಣಗಾಡುತ್ತಿದ್ದ ಹುಡುಗ, ೨೦೦೭ರ ವರ್ಷದಲ್ಲಿ ೧.೮ ಬಿಲಿಯನ್ ಡಾಲರ್ ಶ್ರೀಮಂತಿಕೆಯಿಂದ ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ೨೭೧ನೆಯವರು ಎಂದು ಫೋರ್ಬ್ಸ್ ಸಂಸ್ಥೆಯ ವರದಿಯಲ್ಲಿ ನಮೂದಿತರಾದರು. ವಿಶ್ವದಾದ್ಯಂತ ೮ ಸಾವಿರ ಪರಿಶ್ರಮಿ ಉದ್ಯೋಗಿಗಳನ್ನು ಹೊಂದಿರುವ ಕಂಪೆನಿ ವಿಶ್ವದಾದ್ಯಂತ, ೧೮ ಸಬ್ಸಿಡಿಯರಿಗಳಿವೆ ೮ ಉತ್ಪಾದನಾ ಘಟಕಗಳಿವೆ. ೧೦೦ ಪ್ರತಿಶತ ಹಣವನ್ನು ಸಂಶೋಧನೆಯಲ್ಲಿ ತೊಡಗಿಸುವ ನಿರ್ಧಾರ, ಸಂಶೋಧನೆ ಹಾಗೂ ಹೊಸ ಹೊಸ ಆವಿಶ್ಕಾರಗಳ ಬಗ್ಗೆ ಬೋಸ್ ರವರಿಗಿದ್ದ ಆಸ್ತೆ, ಮತ್ತು ಪ್ರೀತಿಗೆ ನಿದರ್ಶನವಾಗಿದೆ. ಬೋಸ್ ರವರು, ಎರಡು ಡಜನ್ ಗಿಂತ ಹೆಚ್ಚು ಪೇಟೆಂಟ್ ಗಳಿಸಿದ್ದಾರೆ. ಇದುವರೆಗೂ ಅಕೌಸ್ಟಿಸ್ ನ ಹೊಸವಲಯದಲ್ಲಿ ಕಂಡುಹಿಡಿಯಲು ತಮ್ಮ ಪೂರ್ಣ ಶ್ರಮವನ್ನು ನೀಡಲು ದಿನವಿದಡೀ ಶ್ರಮಿಸುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ಅವರ ಶ್ರೀಮಂತಿಕೆಯಲ್ಲಿ ಕೊಂಚ ಇಳಿಮುಖತೆ ಕಂಡರೂ ೨೦೦೯ರಿಂದ ಪ್ರಸಕ್ತದವರೆವಿಗೂ ಬಿಲಿಯನೇರ್ ಪಟ್ಟದಲ್ಲಿ ನಿರಂತರವಾಗಿ ಸ್ಥಾಪಿತರಾಗಿದ್ದರು.

ಶ್ರೇಷ್ಠ ಸಂಶೋಧಕರ ಸಾಲಿನಲ್ಲಿ[ಬದಲಾಯಿಸಿ]

೨೦೦೮ರಲ್ಲಿ ಸುಮಾರು ೨೫ ಪೇಟೆಂಟುಗಳನ್ನು ಹೊಂದಿದ್ದ ಅಮರ್ ಬೋಸರನ್ನು ‘ಇನ್ವೆಂಟರ್ಸ್ ಹಾಲ್ ಆಫ್ ಫೇಮ್'ನಲ್ಲಿ ಇತರ ಶ್ರೇಷ್ಠ ಸಂಶೋಧಕರ ಸಾಲಿನಲ್ಲಿ ಪ್ರತಿಷ್ಠಾಪಿಸಲಾಯಿತು. ಅಮೆರಿಕದಲ್ಲಿ ಇದೊಂದು ದೊಡ್ಡಗೌರವ. ಇದರೊಂದಿಗೆ ಇವರ ಇನ್ನೊಂದು ಪ್ರಮುಖ ಶೋಧನೆ ಎಂದರೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಆಟೋ ಸಸ್ಪೆನ್ಷನ್ ವ್ಯವಸ್ಥೆ. ೧೯೮೦ರಿಂದ ಗಣಿತ ಸೂತ್ರಗಳ ಮೂಲಕ ಆರಂಭವಾದ ಈ ಹೊಸ ರೀತಿಯ ‘ಶಾಕ್ ಅಬ್ಸಾರ್ಬರ್’ ಸಂಶೋಧನೆ, ಈಗಾಗಲೇ ಪ್ರಾಥಮಿಕ ಪ್ರಯೋಗಗಳಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ಇದು ವಾಹನ ಉದ್ಯಮದಲ್ಲೇ ಒಂದು ಹೊಸ ಕ್ರಾಂತಿಯುಂಟುಮಾಡುತ್ತದೆ ಎಂಬುದು ತಂತ್ರಜ್ಞಾನ ಪಂಡಿತರ ನಿರೀಕ್ಷೆಯಾಗಿದೆ.

ಅಧ್ಯಾಪನದಲ್ಲಿ ಪ್ರೀತಿ[ಬದಲಾಯಿಸಿ]

ಅಮರ್‌ ಬೋಸ್‌ ಅಧ್ಯಾಪನ ವೃತ್ತಿಯನ್ನು ತುಂಬಾ ಇಷ್ಟಪಟ್ಟಿದ್ದರು, ಬೋಸ್ ಕಂಪೆನಿಯ ಅಧ್ಯಕ್ಷರಾಗಿದ್ದಾಗಲೂ ಎಂ ಐ ಟಿ ವಿದ್ಯಾರ್ಥಿ‌ಗಳಿಗೆ ಅವರು ಪಾಠ ಮಾಡುತ್ತಿದ್ದರು, 2001ರಲ್ಲಿ ಪಾಠ ಮಾಡುವುದನ್ನು ನಿಲ್ಲಿಸಿದ ಬೋಸ್‌, ೨೦೧೧ರಲ್ಲಿ ತಮ್ಮ ಸಂಸ್ಥೆಯ ಬಹುಪಾಲು ಮತ ಚಲಾವಣೆಯ ಹಕ್ಕನ್ನು ಹೊಂದಿಲ್ಲದಂತಹ ಶೇರುಗಳನ್ನು ಪುನರ್ ಮಾರಾಟ ಮಾಡುವುದಿಲ್ಲ ಎಂಬ ಷರತ್ತಿನ ಮೇಲೆ ಎಂಐಟಿಗೆ ಕೊಡುಗೆಯಾಗಿ ನೀಡಿದ್ದಾರೆ.

ವನು ಬೋಸ್[ಬದಲಾಯಿಸಿ]

ಅಮರ್ ಬೋಸ್ ಅವರ ಪುತ್ರ 'ವನು ಬೋಸ್' ಈಗ ಬೋಸ್ ಕಾರ್ಪೋರೇಷನ್ನಿನ ಮುಖ್ಯಸ್ಥರಾಗಿದ್ದಾರೆ.

ನಿಧನ[ಬದಲಾಯಿಸಿ]

ಅಮರ್ ಗೋಪಾಲ್ ಬೋಸರು ಜುಲೈ ೧೨, ೨೦೧೩ರಂದು ನಿಧನರಾಗಿದ್ದಾರೆ. ಅವರು ತಾವು ಮಾಡಿದ ಕಾಯಕದಿಂದ ಆಮರರಾಗಿದ್ದಾರೆ.

External links[ಬದಲಾಯಿಸಿ]

ಮಾಹಿತಿ ಕೃಪೆ[ಬದಲಾಯಿಸಿ]

ಒನ್ ಇಂಡಿಯಾ ತಾಣದಲ್ಲಿ ಮೂಡಿ ಬಂದಿದ್ದ ಅಮೆರಿಕ ನಿವಾಸಿ ದೊಡ್ಡಮನೆ ವೆಂಕಟೇಶ್ ಅವರ ಲೇಖನ ಮತ್ತು ಇಂಗ್ಲಿಷ್ ವಿಕಿಪೀಡಿಯ ತಾಣದಲ್ಲಿ ಅಮರ್ ಬೋಸ್ ಕುರಿತ ಲೇಖನ.

ಉಲ್ಲೇಖಗಳು[ಬದಲಾಯಿಸಿ]

  1. Rifkin, Glenn (July 12, 2013). "Amar G. Bose, Acoustic Engineer and Inventor, Dies at 83". New York Times.
  2. "Amar Bose '51 makes stock donation to MIT". MIT. 2011-04-29. Retrieved February 05,2012. {{cite news}}: Check date values in: |accessdate= (help)
  3. "Rich & Famous In The US | Padma Rao Sundarji". Outlookindia.com. 1996-05-22. Retrieved 2012-07-21.
  4. Lemley, Brad (2004-10-01). "Discover Dialogue: Amar G. Bose". Discover Magazine. Retrieved February 01,2012. {{cite news}}: Check date values in: |accessdate= (help)
  5. Distinguished Asian Americans: A Biographical Dictionary – Google Boeken. Books.google.com.
  6. Shivanand Kanavi (2007-07-26). "reflections: Amar Bose-A Portrait". Reflections-shivanand.blogspot.com. Retrieved 2013-07-16.
  7. Shenoy, M. J. A. (1999-07-26). "Bose And Bose Vs MIT". Rediff. Retrieved February 01,2012. {{cite news}}: Check date values in: |accessdate= (help)
  8. Clynes, Tom (July 15, 2013). "The Curious Genius Of Amar Bose". Popular Science. Popular Science. Retrieved April 21, 2014.
  9. Popular Science Dec 2004
  10. "Four Indian Americans make it to Forbes list". www.expressindia. Archived from the original on February 16, 2008. Retrieved February 18, 2008. {{cite web}}: Unknown parameter |deadurl= ignored (help)
  11. "Amar Bose's profile". www.forbes.com. Retrieved April 2, 2011.