ಅನ್ನಮಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದ್ವಾರಕಾ ತಿರುಪತಿಯಲ್ಲಿರುವ ಅನ್ನಮಾಚಾರ್ಯರ ವಿಗ್ರಹ

ಅನ್ನಮಾಚಾರ್ಯ (ಮೇ ೯, ೧೪೦೮ – ಫೆಬ್ರುವರಿ ೨೩, ೧೫೦೩) ೧೫ನೇ ಶತಮಾನದ ಒಬ್ಬ ಹಿಂದೂ ಸಂತ ಮತ್ತು ವೆಂಕಟೇಶ್ವರನನ್ನು ಸ್ತುತಿಸುವ ಕೀರ್ತನೆಗಳನ್ನು ರಚಿಸಿದ ಮಧ್ಯಕಾಲೀನ ಭಾರತೀಯ ಸಂಗೀತಕಾರ. ಕರ್ನಾಟಕ ಸಂಗೀತದ ಕಲಾವಿದರಲ್ಲಿ ಈಗಲೂ ಜನಪ್ರಿಯವಾಗಿರುವ ಅವನು ರಚಿಸಿದ ಕೀರ್ತನ ಹಾಡುಗಳ ಸಂಗೀತ ರೂಪವು ಕರ್ನಾಟಕ ಸಂಗೀತ ರಚನೆಗಳ ವಿನ್ಯಾಸದ ಮೇಲೆ ಬಲವಾಗಿ ಪ್ರಭಾವ ಬೀರಿದೆ. ಅನ್ನಮಾಚಾರ್ಯನನ್ನು ಅವನ ಸಂತಜೀವನಕ್ಕಾಗಿ ಸ್ಮರಿಸಲಾಗುತ್ತದೆ. ಭಕ್ತರು ಹಾಗೂ ಸಂತ ಗಾಯಕರು ಅವನನ್ನು ಗೋವಿಂದನ ಮಹಾನ್ ಭಕ್ತನೆಂದು ಗೌರವಿಸುತ್ತಾರೆ.

ಜನನ ಮತ್ತು ಬಾಲ್ಯ[ಬದಲಾಯಿಸಿ]

ತೆಳ್ಳಪಾಕದವರಾದ ನಾರಾಯಣಸೂರಿ ತಂದೆ. ಅಕ್ಕಮಾಂಬ ತಾಯಿ. ಜನನ 1424ರಲ್ಲಿ. ಚಿಕ್ಕಂದಿನಿಂದಲೇ ಇವರಿಗೆ ಅಸೀಮವಾದ ಭಗವದ್ಭಕ್ತಿ, ಆಶುಕವಿತೆಯ ಪ್ರತಿಭೆಗಳಿದ್ದುವು. ಇವರೊಮ್ಮೆ ತಿರುಪತಿಗೆ ಯಾತ್ರೆಗಾಗಿ ಬಂದಿದ್ದಾಗ ಗುರೂಪದೇಶವೂ ಮದುವೆಯೂ ಆದುವು. ಅನಂತರ ಅಹೋಬಲಕ್ಕೆ ತೆರಳಿ ಅಲ್ಲಿ ಆದಿವನ್ ಶಠಕೋಪಯತಿಗಳಲ್ಲಿ ವೇದಾಂತವನ್ನು ಅಧ್ಯಯನಮಾಡಿದರು. ಅದೇ ಕಾಲದಲ್ಲಿ ವಾಲ್ಮೀಕಿ ರಾಮಾಯಣವನ್ನು ಸಂಕೀರ್ತನರೂಪವಾಗಿ ರಚಿಸಿದರು.

ಜೀವನ[ಬದಲಾಯಿಸಿ]

ಇವರ ಪ್ರತಿಭೆಗೆ ಮಾರುಹೋದ ಸಾಳುವ ಗುಂಡ ನರಸಿಂಹರಾಯ ಇವರನ್ನು ಟಂಗಟೂರಿಗೆ ಕರೆದೊಯ್ದು ಅಲ್ಲಿ ತನ್ನ ಆಸ್ಥಾನ ಕವಿಯಾಗಿ ನಿಯಮಿಸಿಕೊಂಡ. ಆಡಿದ ಮಾತೆಲ್ಲ ಅಮೃತಕಾವ್ಯ, ಹಾಡಿದ ಹಾಡೆಲ್ಲ ಅಮರಗಾನವೆಂದು ಜನರು ಕವಿಯನ್ನು ಹೊಗಳಿದರು. ವಿಜಯನಗರದ ಪ್ರಭುವಾಗಿದ್ದ ನರಸಿಂಗರಾಯನು ತನ್ನ ಮೇಲೆ ಶೃಂಗಾರ ಕೀರ್ತನೆಗಳನ್ನು ರಚಿಸಿ ಹಾಡೆಂದು ಅಪ್ಪಣೆಮಾಡಲು ಅಣ್ಣಮಾಚಾರ್ಯರು "ಹರಿಮುಕುಂದನನ್ನು ಹೊಗಳಿ ಹಾಡುವ ನನ್ನ ಜಿಹ್ವೆ ನಿನ್ನನ್ನು ಹೊಗಳಿ ಹಾಡದು" ಎಂದು ನಿರಾಕರಿಸಿದರು. ರಾಜಾಗ್ರಹಕ್ಕೆ ತುತ್ತಾಗಿ ತಿರುಪತಿಗೆ ಬಂದು ನೆಲೆಸಿ ವೆಂಕಟೇಶ್ವರ ಸ್ವಾಮಿಯ ಅಂಕಿತದಲ್ಲಿ ಸಾವಿರಾರು ಸುಂದರ ಶೃಂಗಾರ ಸಂಕೀರ್ತನಗಳನ್ನು ರಚಿಸಿದರು. ಅವೆಲ್ಲವನ್ನೂ ವೆಂಕಟೇಶ್ವರನೇ ಅನುಗ್ರಹಿಸಿ ಸ್ವೀಕರಿಸಿದನೆಂದೂ ಆದ್ದರಿಂದ ಅವರ ಕೀರ್ತನೆಗಳನ್ನು ದೇವರೆದುರು ದಿನವೂ ಸುಪ್ರಭಾತದ ವೇಳೆ ಹಾಡುವ ಪದ್ಧತಿ ಬೆಳೆದು ಬಂದಿತೆಂದೂ ಕೀರ್ತನೆಗಳ ತಾಮ್ರಫಲಕಗಳನ್ನು ದೇವಾಲಯದ ಭಂಡಾರದಲ್ಲೇ ಇಟ್ಟರೆಂದೂ ದೇವಾಲಯದ ಇತಿಹಾಸದಿಂದ ತಿಳಿಯುತ್ತದೆ. ಅನ್ನಮಾಚಾರ್ಯ, ಅವರ ಮಗ ಪೆದ್ದ ತಿರುಮಲಾಚಾರ್ಯ ಹಾಗೂ ಮೊಮ್ಮಗ ತಾಳ್ಲಪಾಕಂ ಚಿನ್ನಯ್ಯ, ಈ ಮೂವರೂ ಸೇರಿದಂತೆ ರಚಿಸಿದ ಕೀರ್ತನೆಗಳು ಇಪ್ಪತ್ತು ಸಹಸ್ರದಷ್ಟಿದ್ದು ಇವುಗಳಲ್ಲಿ ಉತ್ಸವ ಸಂಪ್ರದಾಯದ ಕೀರ್ತನೆಗಳೂ ಇವೆ. ಹೆಚ್ಚು ಕೀರ್ತನೆಗಳು ಭಜನ ಪದ್ಧತಿಗೆ ಸೇರಿವೆಯಾಗಿ ಇವರನ್ನು ಭಜನಪದ್ಧತಿಯ ಮೂಲಪುರುಷರೆಂದು ಪರಿಗಣಿಸುವುದಿದೆ. ಈ ಗೇಯರಚನೆಗಳನ್ನು ಅಧ್ಯಾತ್ಮ ಹಾಗೂ ಶೃಂಗಾರಪದವೆಂದು ತಾಳ್ಲಪಾಕ ಸಂಕೀರ್ತನಕಾರರು ವಿಂಗಡಿಸಿದ್ದಾರೆ.

ದೇಹಾಂತ್ಯ[ಬದಲಾಯಿಸಿ]

ತಿರುಪತಿಯಲ್ಲೆ ನೆಲೆಸಿದ್ದ ಇವರು 1503ಕ್ಕೆ ಸರಿಯಾದ ದುಂದುಭಿನಾಮಸಂವತ್ಸರದ ಫಾಲ್ಗುಣ ಬಹುಳ ದ್ವಾದಶಿಯಂದು ದಿವ್ಯನಾಮಸಂಕೀರ್ತನ ಮಾಡುತ್ತಲೇ ವೆಂಕಟೇಶ್ವರನಲ್ಲಿ ಸೇರಿ ಮರೆಯಾದರೆಂದು ಐತಿಹ್ಯವಿದೆ.

ಸಾಧನೆ[ಬದಲಾಯಿಸಿ]

ಇವರು ಸಂಸ್ಕತದಲ್ಲಿಯೂ ತೆಲುಗಿನಲ್ಲಿಯೂ ಕೃತಿಗಳನ್ನು ರಚಿಸಿದ್ದಾರೆ. ಸಂಸ್ಕೃತದ ವೆಂಕಟಾಚಲಮಾಹಾತ್ಮೆಯನ್ನು ಅವರ ಮಗ ಪೆದ್ದತಿರುಮಲಾಚಾರ್ಯ ಸ್ವಾಮಿಯ ಸನ್ನಿಧಿಯಲ್ಲಿ ಪಠಿಸುತ್ತಿದ್ದ. ಸಂಸ್ಕೃತದಲ್ಲಿ ಸಂಕೀರ್ತನ ಲಕ್ಷಣವೆಂಬ ಗ್ರಂಥವನ್ನೂ ರಚಿಸಿದ್ದರೆಂದು ಮೊಮ್ಮಗ ಚಿನ್ನತಿರುಮಲಾಚಾರ್ಯ ತನ್ನ ಅನ್ನಮಯ್ಯಚರಿತ್ರವೆಂಬ ದ್ವಿಪದಕಾವ್ಯದಲ್ಲಿ ತಿಳಿಸಿದ್ದಾನೆ. ಗ್ರಂಥ ಉಪಲಬ್ದವಿಲ್ಲ. ತೆಲುಗು ಭಾಷೆಯಲ್ಲಿ ದ್ವಿಪದರಾಮಾಯಣ, ಶೃಂಗಾರಮಂಜರಿ, ವೆಂಕಟೇಶ್ವರಶತಕ-ಈ ಗ್ರಂಥಗಳನ್ನು ರಚಿಸಿದ್ದರು. ಛಂದೋಮಯವಾದ ಶೃಂಗಾರಮಂಜರಿ ತಿರುಪತಿಯ ಭಕ್ತಿಪಾರವಶ್ಯದಿಂದ, ಆವೇಶದ ಭರದಲ್ಲಿ ತಿರುಪತಿ ಬೆಟ್ಟವನ್ನು ಹತ್ತುತ್ತ ಹತ್ತುತ್ತ ರಚಿಸಿದ ಆಶುಕವಿತೆ. ವೆಂಕಟೇಶ್ವರ ಎಂಬ ಅಂಕಿತ ಪ್ರತಿಪದ್ಯದ ಕೊನೆಯಲ್ಲೂ ಕಾಣಿಸುತ್ತದೆ. ಇದರಂತೆಯೇ ಇನ್ನೂ ಕೆಲವು ಶತಕಗಳನ್ನು ಅವರು ರಚಿಸಿದ್ದರಂತೆ ; ಅವು ಯಾವುವೂ ಇಂದು ದೊರೆತಿಲ್ಲ.

ಪುರಂದರದಾಸರು ತಿರುಪತಿಗೆ ಬಂದಿದ್ದಾಗ ವೃದ್ಧಾಪ್ಯದಲ್ಲಿ ಇವರನ್ನು ಸಂಧಿಸಿದರೆಂದೂ ದಾಸರು ಆಚಾರ್ಯರಲ್ಲಿ ವೆಂಕಟೇಶ್ವರನನ್ನೂ ಆಚಾರ್ಯರು ದಾಸರಲ್ಲಿ ಪಾಂಡುರಂಗ ವಿಟ್ಠಲನನ್ನೂ ಕಂಡರೆಂದೂ ಕಥೆಯಿದೆ. ಕಥೆಗೆ ಆಧಾರ ಸಾಲದು. ಆದರೆ ದಾಸರಿಗೆ ಇವರಿಂದ ಸ್ಫೂರ್ತಿ ದೊರೆತಿರಬಹುದು. ಇವರ ಕೀರ್ತನಾಪದ್ಧತಿಗೆ ಮುಂಚೆ ಕರ್ಣಾಟಕ ಸಂಗೀತದಲ್ಲಿ ಲಕ್ಷ್ಯಗೀತವನ್ನು ಸಂಸ್ಕೃತದಲ್ಲಿಯೇ ರಚಿಸುವ ಪದ್ಧತಿಯಿದ್ದಿತು; ಆಚಾರ್ಯರು ದೇಶಭಾಷೆಯಾದ ತೆಲುಗನ್ನು ಈ ಕೆಲಸಕ್ಕೆ ಉಪಯೋಗಿಸಿಕೊಂಡು ಹೊಸದಾರಿಯನ್ನು ತೋರಿಸಿದರು. ಇದನ್ನು ದಾಸರೂ ಅನುಸರಿಸಿ ಕನ್ನಡದಲ್ಲಿ ಲಕ್ಷ್ಯಸಂಗೀತವನ್ನು ಸಿದ್ಧಪಡಿಸಿದರು. ಆಚಾರ್ಯರ ಕೀರ್ತನೆಗಳಿಗೆ ರಾಗಗಳನ್ನು ನಿರ್ದೇಶಿಸಿದ್ದಾರೆ, ತಾಳಗಳು ಹೆಸರಿಸಲ್ಪಟ್ಟಿಲ್ಲ.

ವೆಂಕಟೇಶ್ವರ ವಿಶ್ವವಿದ್ಯಾನಿಲಯ ಸ್ಥಾಪಿತವಾದ ನಂತರ ರಾಳ್ಲಪಲ್ಲಿ ಅನಂತಕೃಷ್ಣಶರ್ಮರು ವೇಟೂರಿ ಪ್ರಭಾಕರಶಾಸ್ತ್ರಿಗಳು, ನೇದನೂರಿ ಕೃಷ್ಣಮೂರ್ತಿ ಮುಂತಾದವರಿಂದ ಸಂಪಾದಿತವಾಗಿ ಅನೇಕ ಕೀರ್ತನೆಗಳು ಸ್ವರ ಸಂಯೋಜನೆಯೊಂದಿಗೆ ಪ್ರಕಟವಾಗುತ್ತಿವೆ. ರಾಳ್ಲಪಲ್ಲಿ ಅನಂತಕೃಷ್ಣಶರ್ಮರೂ ವೇಟೂರಿ ಪ್ರಭಾಕರ ಶಾಸ್ತ್ರಿಗಳೂ ಇವುಗಳಿಗೆ ಸ್ವರಸಂಯೋಜನೆ ಮಾಡಿ ಸಂಪಾದಿಸಿದ್ದಾರೆ.