ಪಂಚಾಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಧಿಕ ಮಾಸ ಇಂದ ಪುನರ್ನಿರ್ದೇಶಿತ)

ವಿಶ್ವದ ವಿವಿಧ ಕ್ಯಾಲೆಂಡರ್'ಗಳು[ಬದಲಾಯಿಸಿ]

ಈ ಲೇಖನ ಜಗತ್ತಿನ ಕಾಲ ಎಣಿಕೆಯ ವಿಧಾನ ತಿಳಿಸುವುದಾಗಿದೆ. ಆದರಿಂದ ಇಂಗ್ಲಿಷ್ calendarಪಟಕ್ಕೆ ಟ್ಯಾಗ್ (ಕೊಂಡಿ) ಮಾಡಲಾಗಿದೆ. ಆದರೆ ಆರಂಭದಲ್ಲಿ ಹಿಂದೂ ಪಂಚಾಂಗದ ವಿಷಯ ಹಾಕಿದೆ. ಹಿಂದೂ ಪಂಚಾಂಗHindu calendar ಇಂಗ್ಲಿಷ್ ಪುಟವು ಹಿಂದೂ ಮಾಸಗಳು ಪುಟಕ್ಕೆಕೊಂಡಿಹೊಂದಿದೆ.

೧೮೭೧-೧೮೭೨ಹಿಂದೂ ಪಂಚಾಂಗದ ಒಂದು ಪುಟ
  • ಜಗತ್ತಿನಲ್ಲಿ ಪಂಚಾಂಗ (ಆಂಗ್ಲ: ಕ್ಯಾಲೆಂಡರ್) ಕಾಲದ ವಿಭಾಗಗಳನ್ನು ಕ್ರಮಬದ್ಧವಾಗಿ ಸಂಘಟಿಸುವ ಒಂದು ಪದ್ದತಿ. ಸಾಮಾನ್ಯವಾಗಿ ಖಗೋಳವಿದ್ಯೆಯ ವೀಕ್ಷಣೆಗಳ ಆಧಾರದ ಮೇಲೆ ಇವನ್ನು ರಚಿಸಲಾಗುತ್ತದೆ.

ಹಿಂದೂ ಪಂಚಾಂಗ[ಬದಲಾಯಿಸಿ]

ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ.ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ, ವಾರ, ನಕ್ಷತ್ರ, ಯೋಗ, ಮತ್ತು ಕರಣಗಳು – ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

ಈ ಐದು ಅಂಗಗಳಿಗೆ ಪಂಚಾಂಗ ಎನ್ನುತ್ತಾರೆ. ಪಂಚಾಂಗದಲ್ಲಿ ಜ್ಯೋತಿಷ್ಯಕ್ಕೆ ಸಂಬಂಧಪಟ್ಟ ಕಾಲದ ವಿವರ, ಗ್ರಹ ಸ್ಥಿತಿ , ಸೂರ್ಯೋದಯ, ಸೂರ್ಯಾಸ್ತ , ಕಾಲಗಳು , ಮುಹೂರ್ಥಕ್ಕೆ ಸಂಬಂಧಪಟ್ಟ ವಿಷಯಗಳು ಹಬ್ಬ ಹರಿದಿನಗಳು, ಜಾತಕ ಹೊಂದಾಣಿಕೆಗೆ ಬೇಕಾದ ವಿಷಯಗಳು ಹೀಗೆ ಇನ್ನೂ ಅನೇಕ ವಿಷಯಗಳು ಇರುತ್ತವೆ. ಇರುತ್ತವೆ. ಒಟ್ಟಿನಲ್ಲಿ ನಮ್ಮ ದಿನ ದಿನನಿತ್ಯ ಕಾರ್ಯಗಳ ಆಚರಣೆಗೆ, ಪ್ರಯಾಣಕ್ಕೆ, ಶಾಸ್ತ್ರ ಸಂಬಂಧ ವಿಷಯಗಳಿಗೆ ಇದರ ಅವಶ್ಯಕತೆ ಹೆಚ್ಚು .

ನಾವು ಯಾವುದೇ ಏಕ ವಿಶಾಂತಿಕರ್ಮ ಮಾಡುವಾಗ ಈ ಐದು ಅಂಗಗಳು ಶುದ್ಧವಾಗಿರಬೇಕು , ಇದನ್ನೇ ನಾವು ಪಂಚಾಂಗ ಶುದ್ಧಿ ಎನ್ನುತ್ತೇವೆ . ಈ ಶುದ್ಧಿ ಇಲ್ಲದ ದಿನದಂದು ಶುಭ ಕಾರ್ಯಗಳನ್ನು ಆರಂಭಿಸಿದರೆ ನಿಷ್ಫಲ ದೊರೆಯುತ್ತದೆ ಎಂದು ಮುಹೂರ್ತ ಜ್ಯೋತಿಷ್ಯದಲ್ಲಿ ನಮ್ಮ ಹಿರಿಯ ಋಷಿ ಮುನಿಗಳು ವಿವರಿಸಿದ್ದಾರೆ.

ಆದ್ದರಿಂದ ಆ ದಿನದ ಶುದ್ಧಿ ಯನ್ನು ತಿಳಿಯುವುದಕ್ಕೋಸ್ಕರ ನಮ್ಮ ಹಿರಿಯರು ಆಯಾ ದಿನದಲ್ಲಿ ಬರುವ ವಾರ, ತಿಥಿ, ನಕ್ಷತ್ರ, ಯೋಗ, ಕರಣಗಳನ್ನು ಆರ್ಯಭಟ್ಟ ಸಿಂದ್ಧಾಂತ , ದೃಗ್ಗಣಿತದ ರೀತಿ ಲೆಕ್ಕಾಚಾರ ಮಾಡಿ ಒಂದು ಸಂವತ್ಸರದ ಪೂರ್ತಿ ವಿವರಗಳನ್ನು ಪುಸ್ತಕದ ರೀತಿ ಪ್ರತಿ ಸಂವತ್ಸರಕ್ಕೂ ಹೊರತರುತ್ತಾರೆ, ಇಂದನ್ನು ಪಂಚಾಂಗ ಎನ್ನುತ್ತೇವೆ.

ಇದು ಶುಭ ಕಾರ್ಯಗಳಿಗೆ ಮುಹೂರ್ತ ಕಾಲವನ್ನು ತಿಳಿಯಲು ಉಪಯುಕ್ತವಾಗಿದೆ . ಈ ಪಂಚಾಂಗ ಪದ್ಧತಿಯು ಆರ್ಯಭಟ್ಟ ಕಾಲದಿಂದ ಅನುಸರಣೆಗೆ ಬಂದಿತು . 


ತಿಥಿಗಳು[ಬದಲಾಯಿಸಿ]

ತಿಥಿಗಳು ಮೂವತ್ತು(೩೦). ೩೦ ತಿಥಿಗಳನ್ನು ಎರಡು ಪಕ್ಷಗಳಲ್ಲಿ ೧೫ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ. ಪ್ರತಿ ಮಾಸದ ಪಕ್ಷ ಮತ್ತು ತಿಥಿಗಳನ್ನು ಕೆಳಗಿನ ನೀಡಿವೆ.

ಶುಕ್ಲಪಕ್ಷ: ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); ಏಕಾದಶಿ (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಹುಣ್ಣಿಮೆ (೧೫)

ಕೃಷ್ಣಪಕ್ಷ: ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); ಏಕಾದಶಿ (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಅಮಾವಾಸ್ಯೆ (೩೦)

ವಾರಗಳು[ಬದಲಾಯಿಸಿ]

ವಾರಗಳು ಏಳು (೭). ಅವು ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ. ನವಗ್ರಹಗಳಲ್ಲಿ ರಾಹು,ಕೇತುಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಹಾಗೂ ರವಿ -ಈ ಗ್ರಹಗಳ ಹೆಸರಿನಿಂದ ವಾರಗಳಿಗೆ ಹೆಸರಿಸಿದೆ.

ನಕ್ಷತ್ರಗಳು[ಬದಲಾಯಿಸಿ]

ನಕ್ಷತ್ರಗಳು ಇಪ್ಪತ್ತೇಳು (೨೭). ಅವು:

೧. ಅಶ್ವಿನಿ ೨. ಭರಣಿ ೩. ಕೃತ್ತಿಕ ೪.ರೋಹಿಣಿ ೫.ಮೃಗಶಿರ ೬.ಆರ್ದ್ರೆ ೭.ಪುನರ್ವಸು ೮.ಪುಷ್ಯ ೯.ಆಶ್ಲೇಷ

೧೦. ಮಖೆ೧೧. ಪುಬ್ಬೆ ೧೨. ಉತ್ತರೆ ೧೩. ಹಸ್ತ ೧೪.ಚಿತ್ತೆ ೧೫.ಸ್ವಾತಿ ೧೬.ವಿಶಾಖ ೧೭.ಅನೂರಾಧ ೧೮. ಜ್ಯೇಷ್ಠ ೧೯. ಮೂಲ ೨೦.

ಪೂರ್ವಾಷಾಢ

೨೧.ಉತ್ತರಾಷಾಢ ೨೨.ಶ್ರವಣ ೨೩.ಧನಿಷ್ಥೆ ೨೪.ಶತಭಿಷೆ ೨೫.ಪೂರ್ವಾಭಾದ್ರೆ ೨೬. ಉತ್ತರಾಭಾದ್ರೆ ೨೭. ರೇವತಿ.

ಕರಣಗಳು[ಬದಲಾಯಿಸಿ]

ಕರಣಗಳು ಒಟ್ಟು ೧೧. ಅವುಗಳೆಂದರೆ: ಬವ, ಬಾಲವ, ಕೌಲವ, ತೈತಲೆ, ಗರಜೆ, ವಣಿಕ್, ಭದ್ರೆ, ಶಕುನಿ, ಚತುಷ್ಪಾತ್, ನಾಗವಾನ್ ಹಾಗೂ ಕಿಂಸ್ತುಘ್ನ

ಯೋಗಗಳು[ಬದಲಾಯಿಸಿ]

ಯೋಗಗಳು ಒಟ್ಟು ೨೭. ಅವು: ೧. ವಿಷ್ಕಂಭ ೨. ಪ್ರೀತಿ ೩. ಆಯುಷ್ಮಾನ್ ೪.ಸೌಭಾಗ್ಯ ೫.ಶೋಭನ ೬.ಅತಿಗಂಡ ೭.ಸುಕರ್ಮ ೮.ಧೃತಿ ೯.ಶೂಲ ೧೦. ಗಂಡ ೧೧. ವೃದ್ಢಿ ೧೨. ಧ್ರುವ ೧೩. ವ್ಯಾಘಾತ ೧೪. ಹರ್ಷಣ ೧೫. ವಜ್ರ ೧೬.ಸಿದ್ಧಿ ೧೭. ವ್ಯತೀಪಾತ ೧೮. ವರಿಯಾನ್ ೧೯.ಪರಿಘ ೨೦.ಶಿವ ೨೧.ಸಿದ್ಧ ೨೨. ಸಾಧ್ಯ ೨೩. ಶುಭ ೨೪. ಶುಕ್ಲ ೨೫.ಬ್ರಹ್ಮ ೨೬. ಐಂದ್ರ ೨೭. ವೈಧೃತಿ

ಮಾಸಗಳು[ಬದಲಾಯಿಸಿ]

ಚಾಂದ್ರಮಾನ ಮಾಸಗಳು[ಬದಲಾಯಿಸಿ]

ವರ್ಷದಲ್ಲಿ, ಕೆಲವು ನಕ್ಷತ್ರದ ಹೆಸರಿನೆ ಮೂಲಕ, ಚಾಂದ್ರಮಾನದ ಹನ್ನೆರಡು (೧೨) ಮಾಸಗಲನ್ನು ಕೆಳಗೆ ನೀಡಿವೆ.

೧. ಚೈತ್ರ (ಚಿತ್ರ/ಚಿತ್ತ); ೨. ವೈಶಾಖ (ವಿಶಾಖ); ೩. ಜ್ಯೇಷ್ಠ (ಜ್ಯೇಷ್ಠ); ೪. ಆಷಾಢ (ಆಷಾಢ)
೫. ಶ್ರಾವಣ (ಶ್ರವಣ); ೬. ಭಾದ್ರಪದ (ಭದ್ರ); ೭. ಆಶ್ವೀಜ (ಅಶ್ವಿನಿ); ೮. ಕಾರ್ತೀಕ (ಕೃತ್ತಿಕ/ಕೃತ್ತಿಕೆ)
೯. ಮಾರ್ಗಶಿರ (ಮೃಗಶಿರ); ೧೦. ಪುಷ್ಯ (ಪುಷ್ಯ/ಪುಬ್ಬ); ೧೧. ಮಾಘ (ಮಘ/ಮಖ); ೧೨. ಫಾಲ್ಗುಣ (ಫಾಲ್ಗುಣಿ)

ಅಧಿಕ ಮಾಸಗಳು[ಬದಲಾಯಿಸಿ]

ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ. ಸಂಕ್ರಮಣವಾಗಿರುವ ಮಾಸವನ್ನು ಶುದ್ಧ ಚೈತ್ರ ಅಥವಾ ನಿಜ ಚೈತ್ರ ಮಾಸವೆನ್ನುತ್ತಾರೆ.

ಸೌರಮಾನ ಮಾಸಗಳು[ಬದಲಾಯಿಸಿ]

ಸೂರ್ಯನು ಹನ್ನೆರಡು (೧೨) ರಾಶಿಗಳಲ್ಲಿ, ಒಂದು ರಾಶಿಯಿಂದ ಮುಂದಿನ ರಾಶಿಯಲ್ಲಿ ಪ್ರವೇಶ ಮಾಡುವತ್ತಾನೆ. ಇದನ್ನು ಸಂಕ್ರಮಣವೆನ್ನುತ್ತಾರೆ. ಓಂದು ರಾಶಿಯಲ್ಲಿರುವಾಗ ಆ ಮಾಸದ ಹೆಸರು, ರಾಶಿಯ ಹೆಸರನಿಂದ ಕರೆಯುತ್ತಾರೆ. ಹೀಗೆ ಸೌರಮಾನದ ಮಾಸಗಳು, ಹೇಗೆ ಕರೆಯಲಾಗಿದೆ.

೧. ಮೇಷ; ೨. ವೃಷಭ; ೩. ಮಿಥುನ; ೪. ಕರ್ಕ; ೫. ಸಿಂಹ; ೬. ಕನ್ಯ
೭. ತುಲ; ೮. ವೃಷ್ಚಿಕ; ೯. ಧನು; ೧೦. ಮಕರ; ೧೧. ಕುಂಭ; ೧೨, ಮೀನ

ಸೂರ್ಯನ ಧನು ಸಂಕ್ರಮಣ ದಿಂದ ಮಕರಸಂಕ್ರಮಣ ವರೆಗೆ ಬರುವ ಮಾಸವನ್ನು ಧನುರ್ಮಾಸವೆಂತ ಕರೆಯಲಾಗಿದೆ. ಈ ಮಾಸ ಧರ್ಮ ಶಾಸ್ತ್ರದಲ್ಲಿ ವಿಶೇಷವಾದದ್ದು.

ಋತುಗಳು ೬ (೨ ಮಾಸಗಳಿಗೆ ಒಂದು ಋತು)[ಬದಲಾಯಿಸಿ]

೧. ವಸಂತ ಋತು (ಚೈತ್ರ – ವೈಶಾಖ)
೨. ಗ್ರೀಷ್ಮ ಋತು (ಜ್ಯೇಷ್ಠ – ಆಷಾಢ)
೩. ವರ್ಷ ಋತು (ಶ್ರಾವಣ – ಭಾದ್ರಪದ)
೪. ಶರದೃತು (ಆಶ್ವೀಜ – ಕಾರ್ತೀಕ)
೫. ಹೇಮಂತ ಋತು (ಮಾರ್ಗಶಿರ – ಪುಷ್ಯ)
೬. ಶಿಶಿರ ಋತು (ಮಾಘ – ಪಾಲ್ಗುಣ)

ಆಯನಗಳು – ೨[ಬದಲಾಯಿಸಿ]

ಉತ್ತರಾಯಣ ಮತ್ತು ದಕ್ಷಿಣಾಯನ ಪ್ರತಿ ವರ್ಷದ ಜನವರಿ ೧೪ (ಪುಷ್ಯ, ಮಕರ ಸಂಕ್ರಮಣ) ರಿಂದ ಜುಲೈ ೧೬ (ಆಷಾಢ, ಕರ್ಕ ಸಂಕ್ರಮಣ) ರವರೆಗೆ ಸೂರ್ಯನು ಉತ್ತರಕ್ಕೆ ಸಂಚರಿಸುವುದರಿಂದ ಉತ್ತರಾಯಣವೆಂದೂ, ಜುಲೈ ೧೬ ರಿಂದ ಜನವರಿ ೧೪ ರವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಬಾಗಿ ಸಂಚರಿಸುವುದರಿಂದ ದಕ್ಷಿಣಾಯಣವೆಂದೂ ಗುರುತಿಸಲಾಗಿದೆ.

ಹಿಜರಿ ಕ್ಯಾಲೆಂಡರ್[ಬದಲಾಯಿಸಿ]

12 ಚಾಂದ್ರಮಾನ ತಿಂಗಳುಗಳನ್ನು ಮತ್ತು ವರ್ಷದಲ್ಲಿ 354 ಅಥವಾ 355 ದಿನಗಳನ್ನು ಹೊಂದಿರುವ ಕ್ಯಾಲೆಂಡರ್. ಜಗತ್ತಿನಾದ್ಯಂತ ಮುಸಲ್ಮಾನರು ರಮದಾನ್, ನಾಲ್ಕು ಪವಿತ್ರ ತಿಂಗಳುಗಳು, ಹಜ್ ಯಾತ್ರೆಯ ತಿಂಗಳುಗಳು, ಹಬ್ಬಗಳು, ಇದ್ದತ್, ಝಕಾತ್ ಕೊಡಬೇಕಾದ ಸಮಯ ಮುಂತಾದವುಗಳನ್ನು ನಿರ್ಧರಿಸಲು ಈ ಕ್ಯಾಲೆಂಡರನ್ನು ಬಳಸುತ್ತಾರೆ.[೧]

ಹಿಜರಿ ಕ್ಯಾಲೆಂಡರ್ ಚಾಂದ್ರಮಾನ ಕ್ಯಾಲೆಂಡರ್ ಆಗಿದ್ದು, ಅದರ ಸಮಯದ ಲೆಕ್ಕಾಚಾರವು ಚಂದ್ರನ ವೃದ್ಧಿ-ಕ್ಷಯಗಳಿಗೆ ಸಂಬಂಧಿಸಿದೆ. ಅದರ ಪ್ರತಿ ತಿಂಗಳು ಚಂದ್ರನ ಒಂದು ಪೂರ್ಣ ವೃದ್ಧಿಯವರೆಗೆ ಇರುತ್ತದೆ, ಅಂದರೆ ಒಂದು ಅಮಾವಾಸ್ಯೆಯಿಂದ ಇನ್ನೊಂದು ಅಮಾವಾಸ್ಯೆಯ ವರೆಗೆ. ಹಿಜರಿ ಕ್ಯಾಲೆಂಡರ್‌ನಲ್ಲಿ ತಿಂಗಳುಗಳ ಸಮಯವು ಖಗೋಳ ವೀಕ್ಷಣೆಯನ್ನು ಆಧರಿಸಿದೆ. ಸೂರ್ಯಾಸ್ತದ ಸ್ವಲ್ಪ ಸಮಯದ ನಂತರ ಚಂದ್ರದರ್ಶನವಾದರೆ ಮಾತ್ರ ಹೊಸ ತಿಂಗಳು ಪ್ರಾರಂಭವಾಗುತ್ತದೆ.[೧]

ಇತರ ಕ್ಯಾಲೆಂಡರ್‌ಗಳು ಸೌರ ವರ್ಷದೊಂದಿಗೆ ಹೊಂದಿಕೆಯಾಗಲು ಅಧಿಕ ದಿನಗಳು ಅಥವಾ ಅಧಿಕ ತಿಂಗಳುಗಳನ್ನು ಬಳಸುತ್ತವೆ. ಆದರೆ ಇದಕ್ಕೆ ಭಿನ್ನವಾಗಿ, ಹಿಜರಿ ಕ್ಯಾಲೆಂಡರ್ ಉತ್ತರಾಯಣ ಮತ್ತು ದಕ್ಷಿಣಾಯಣಗಳಿಂದ ಗುರುತಿಸಲ್ಪಡುವ ಖಗೋಳ ಋತುಗಳಿಂದ ಸಂಪೂರ್ಣವಾಗಿ ಬೇರ್ಪಟ್ಟಿದೆ. ಹಿಜರಿ ವರ್ಷವು ಸೌರ ವರ್ಷಕ್ಕಿಂತ ಸುಮಾರು 11 ಕಡಿಮೆ ದಿನಗಳನ್ನು ಹೊಂದಿದೆ. ಈ ಕಾರಣದಿಂದಲೇ, ಹಿಜರಿ ಕ್ಯಾಲೆಂಡರ್ ಅನ್ನು ಕೃಷಿ ಅಥವಾ ಇತರ ಚಟುವಟಿಕೆಗಳಿಗೆ ಬಳಸಲಾಗುವುದಿಲ್ಲ. ಹೆಚ್ಚಿನ ಮುಸ್ಲಿಂ ದೇಶಗಳು ಹಿಜರಿ ವ್ಯವಸ್ಥೆಯ ಜೊತೆಗೆ ಅಧಿಕೃತವಾಗಿ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ತಮ್ಮ ನಾಗರಿಕ ಕ್ಯಾಲೆಂಡರ್ ಆಗಿ ಬಳಸುತ್ತವೆ.[೧]

ಹಿಜರಿ ಕ್ಯಾಲೆಂಡರ್ 12 ತಿಂಗಳುಗಳನ್ನು ಹೊಂದಿದ್ದು ಪ್ರತಿ ತಿಂಗಳು 29 ಅಥವಾ 30 ದಿನಗಳನ್ನು ಹೊಂದಿದೆ.[೨] 29 ನೇ ದಿನ ಸೂರ್ಯಾಸ್ತದ ನಂತರ ಚಂದ್ರದರ್ಶನವಾದರೆ, ಹೊಸ ತಿಂಗಳು ಆರಂಭವಾಗುತ್ತದೆ. ಚಂದ್ರದರ್ಶನವಾಗದಿದ್ದರೆ ಸದ್ರಿ ತಿಂಗಳಿಗೆ 30 ನೇ ದಿನವನ್ನು ಸೇರಿಸಿ ಪೂರ್ತಿಗೊಳಿಸಲಾಗುತ್ತದೆ. 30 ನೇ ದಿನ ಸೂರ್ಯಾಸ್ತದ ಬಳಿಕ ಹೊಸ ತಿಂಗಳು ಆರಂಭವಾಗುತ್ತದೆ.[೧] ಹಿಜರಿ ಕ್ಯಾಲೆಂಡರ್ ಪ್ರಕಾರ ದಿನವು ಆರಂಭವಾಗುವುದು ಸೂರ್ಯಾಸ್ತದ ಬಳಿಕ. ಅಂದರೆ ಇಂದು ಸೂರ್ಯಾಸ್ತವಾಗುವಾಗ ನಾಳೆ ಆರಂಭವಾಗುತ್ತದೆ.

ಇತಿಹಾಸ[ಬದಲಾಯಿಸಿ]

ಇಸ್ಲಾಮೀ ಆಡಳಿತದ ಎರಡನೇ ಖಲೀಫ ಉಮರ್ ಬಿನ್ ಖತ್ತಾಬ್ ಹಿಜರಿ ಕ್ಯಾಲೆಂಡರನ್ನು ಮೊತ್ತಮೊದಲು ಸ್ಥಾಪಿಸಿದರು. ಕ್ರಿ.ಶ. 638 ರಲ್ಲಿ ಈ ಕ್ಯಾಲೆಂಡರ್ ರಚನೆಯಾಯಿತು.[೩] ಮುಹಮ್ಮದ್ ಪೈಗಂಬರ್ ಮಕ್ಕಾದಿಂದ ಮದೀನಕ್ಕೆ ಹಿಜ್ರ (ವಲಸೆ) ಮಾಡಿದ ವರ್ಷದಿಂದ (ಕ್ರಿ.ಶ. 622) ಈ ಕ್ಯಾಲೆಂಡರ್ ಆರಂಭವಾಗುತ್ತದೆ.[೧] ಇದು ಇಸ್ಲಾಮೀ ಆಡಳಿತದ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಕ್ಯಾಲೆಂಡರ್ ಆಗಿದ್ದರೂ ಸಹ ಇದರಲ್ಲಿ ಇಸ್ಲಾಮೀ ಪೂರ್ವ ಅರಬ್ಬರು ಬಳಸುತ್ತಿದ್ದ ತಿಂಗಳುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.[೧]

ತಿಂಗಳುಗಳು[ಬದಲಾಯಿಸಿ]

ಹಿಜರಿ ಕ್ಯಾಲೆಂಡರ್ 12 ತಿಂಗಳುಗಳನ್ನು ಹೊಂದಿದೆ. ಇವು ಇಸ್ಲಾಮೀ ಪೂರ್ವ ಅರಬ್ಬರು ಬಳಸುತ್ತಿದ್ದ ಅವೇ ತಿಂಗಳುಗಳಾಗಿವೆ. ಅವರು ಪವಿತ್ರವೆಂದು ಪರಿಗಣಿಸುತ್ತಿದ್ದ ನಾಲ್ಕು ತಿಂಗಳುಗಳನ್ನೂ ಕೂಡ ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಹಿಜರಿ ಕ್ಯಾಲೆಂಡರ್‌ನ ತಿಂಗಳುಗಳು[ಬದಲಾಯಿಸಿ]
  1. ಮುಹರ್‍ರಮ್
  2. ಸಫರ್
  3. ರಬೀಉಲ್ ಅವ್ವಲ್
  4. ರಬೀಉಲ್ ಆಖಿರ್
  5. ಜುಮಾದಲ್ ಊಲಾ
  6. ಜುಮಾದಲ್ ಆಖಿರ
  7. ರಜಬ್
  8. ಶಅಬಾನ್
  9. ರಮದಾನ್
  10. ಶವ್ವಾಲ್
  11. ದುಲ್-ಕಅದ
  12. ದುಲ್-ಹಿಜ್ಜ

ವಾರದ ದಿನಗಳು[ಬದಲಾಯಿಸಿ]

ಯೌಮುಲ್ ಜುಮುಅ (ಶುಕ್ರವಾರ) ಮುಸಲ್ಮಾನರು ವಿಶೇಷ ನಮಾಝ್ ನಿರ್ವಹಿಸಲು ಮಸೀದಿಯಲ್ಲಿ ಸೇರುವುದರಿಂದ ಈ ದಿನವನ್ನು ವಾರದ ರಜಾದಿನ ಎಂದು ಪರಿಗಣಿಸಲಾಗಿದೆ. ಕೆಲವು ಮುಸ್ಲಿಂ ದೇಶಗಳು ಶುಕ್ರವಾರ ಮತ್ತು ಶನಿವಾರವನ್ನು ವಾರದ ರಜಾದಿನಗಳಾಗಿ ಮಾಡಿಕೊಂಡರೆ, ಇತರ ಕೆಲವು ದೇಶಗಳು ಗುರುವಾರ ಮತ್ತು ಶುಕ್ರವಾರವನ್ನು ವಾರದ ರಜಾದಿನಗಳಾಗಿ ಮಾಡಿಕೊಂಡಿವೆ. ತುರ್ಕಿ, ಪಾಕಿಸ್ತಾನ, ನೈಜೀರಿಯ, ಮೊರೊಕ್ಕೋ, ಮಲೇಶಿಯ ಮುಂತಾದ ದೇಶಗಳು ಶನಿವಾರ ಮತ್ತು ಭಾನುವಾರವನ್ನು ವಾರದ ರಜಾದಿನಗಳಾಗಿ ಮಾಡಿಕೊಂಡಿವೆ.

ದಿನಗಳ ಹೆಸರು[ಬದಲಾಯಿಸಿ]

  1. ಯೌಮುಲ್ ಅಹದ್ (ಭಾನುವಾರ)
  2. ಯೌಮುಲ್ ಇಸ್ನೈನ್ (ಸೋಮವಾರ)
  3. ಯೌಮು ಸ್ಸುಲಾಸಾ (ಮಂಗಳವಾರ)
  4. ಯೌಮುಲ್ ಅರ್ಬಿಆ (ಬುಧವಾರ)
  5. ಯೌಮುಲ್ ಖಮೀಸ್ (ಗುರುವಾರ)
  6. ಯೌಮುಲ್ ಜುಮುಅ (ಶುಕ್ರವಾರ)
  7. ಯೌಮು ಸ್ಸಬ್ತ್ (ಶನಿವಾರ)

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ ೧.೫ Bikos, Konstantin. "The Islamic Calendar". timeanddate.com. Archived from the original on 28-02-2023. Retrieved 28-02-2023. {{cite web}}: Check date values in: |access-date= and |archive-date= (help)
  2. "Islamic calendar". britannica.com. Feb 9, 2023.
  3. Campo, Juan E. (2009). Encyclopedia of Islam. Facts On File. p. 299.